ಅಂಗವಿಕಲರಿಗೆ ಸಂಜೀವಿನಿ ಈ "ಎ.ಪಿ.ಡಿ"

ಉಷಾ ಹರೀಶ್​​

0

ಅವರು ಎಲ್ಲರಂತೆ ಓಡಾಡಲು ಆಗುವುದಿಲ್ಲ ಎಂಬ ಕಾರಣಕ್ಕೆ ಅವರನ್ನು ಮುಖ್ಯ ವಾಹಿನಿಯಯಿಂದ ದೂರು ಇಟ್ಟಿರುತ್ತಾರೆ. ಆದ್ರಲ್ಲೂ ಗ್ರಾಮೀಣ ಭಾಗದಲ್ಲಂತೂ ಅಂಗವಿಕಲರಂತೂ ಮನೆಯ ನಾಲ್ಕು ಗೋಡೆ ಬಿಟ್ಟು ಹೊರಗಡೆ ಬರುವುದಿಲ್ಲ. ಆದರೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಸ್ವಯಂ ಸೇವಾ ಸಂಸ್ಥೆಯಾದ ಎಪಿಡಿ ಸಂಸ್ಥೆ ಇಂತವರ ಆತ್ಮ ವಿಶ್ವಾಸವನ್ನು ಹೆಚ್ಚಿಸಿ ಅವರಲ್ಲಿರುವ ಪ್ರತಿಭೆಯನ್ನು ಹೊರಜಗತ್ತಿಗೆ ಪರಿಚಯಿಸುತ್ತಿದೆ.

ಎಪಿಡಿ ಎಂದರೆ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಲಿಟಿ, ಬೆಂಗಳೂರಿನ ಲಿಂಗರಾಜಪುರಂನಲ್ಲಿರುವ ಒಂದು ಸ್ವಯಂ ಸೇವಾ ಸಂಸ್ಥೆ. ಕೆಲ ವಿಕಲಾಂಗ ಸ್ನೇಹಿತರು ಸೇರಿ 1959ರಲ್ಲಿ ಈ ಸಂಸ್ಥೆಯನ್ನು ಪ್ರಾರಂಭ ಮಾಡಿದರು. ವಿಕಲಚೇತನರು ಕೂಡ ಸಮಾಜದ ಮುಖ್ಯ ವಾಹಿನಿಗೆ ಬಂದು ಎಲ್ಲರಂತೆ ಸ್ವಾವಲಂಬನೆಯ ಬದುಕು ಸಾಗಿಸಬೇಕು ಎಂಬ ಉದ್ದೇಶದಿಂದ ಈ ಸಂಸ್ಥೆಯನ್ನು ಪ್ರಾರಂಭ ಮಾಡಲಾಯಿತು. ಮೊದಲಿಗೆ ಚಿಕ್ಕ ತರಬೇತಿ ಕೇಂದ್ರ ಆರಂಭವಾದ ಎಪಿಡಿ ಇಂದು ಬಹು ದೊಡ್ಡದಾಗಿ ಬೆಳದಿದೆ.

ಎಪಿಡಿಯಲ್ಲಿ ಪ್ರಮುಖವಾಗಿ ಬಡ ಅಂಗವಿಕಲ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ಅವರನ್ನು ಕರೆತಂದು ಅವರಲ್ಲಿನ ಕೀಳರಿಮೆಯನ್ನು ಕಡಿಮೆ ಮಾಡು ಕೆಲಸವನ್ನು ಈ ಸಂಸ್ಥೆಯವರು ಮಾಡುತ್ತಾರೆ.

ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲಾ ಅಂಗವಿಕಲರನ್ನು ಒಂದೆಡೆ ಸೇರಿಸಿ ಅವರಿಗೆ ತರಬೇತಿ ನೀಡಿ ಅವರನ್ನು ಸಮಾಜದ ಸಮರ್ಥರ ಸಾಲಿಗೆ ಸೇರಿಸಿ ಸಬಲೀಕರಣಗೊಳಿಸುವುದು ಸೇರಿದಂತೆ ಉದ್ಯೋಗಾವಕಾಶಗಳನ್ನು ದೊರಕಿಸಿಕೊಡುವುದು ಈ ಸಂಸ್ಥೆಯ ಉದ್ದೇಶ.

ಮಾಹಿತಿ ತಂತ್ರಜ್ಞಾನ ತರಬೇತಿ

ಇಲ್ಲಿ ಕೈಗಾರಿಕಾ ತರಬೇತಿಗಳ ಜತೆಗೆ ಕಂಪ್ಯೂಟರ್ ತರಬೇತಿ, ಮಾಹಿತಿ ತಂತ್ರಜ್ಞಾನ ತರಬೇತಿ, ಫಿಸಿಯೋ ಥೆರಪಿ ಏಜುಕೇಶನಲ್​​​ ಕೊರ್ಸ್, ತೋಟಗಾರಿಕಾ ತರಬೇತಿ ಆಟೋ ಕ್ಯಾಡ್ ತರಬೇತಿಗಳನ್ನು ಈ ಸಂಸ್ಥೆಯ ವತಿಯಿಂದ ನೀಡಲಾಗುತ್ತದೆ.

ವಿಕಲಚೇತನರಿಂದ ಶೂ ಚಪ್ಪಲಿ ತಯಾರಿ

ಎಪಿಡಿ ಸಂಸ್ಥೆಯ ಮುಖ್ಯ ಉದ್ದೇಶ ಅಂಗವಿಕಲರಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಿ ಉದ್ಯೋಗಾವಕಾಶಗಳನ್ನು ಗಳಿಸಲು ದಾರಿ ಮಾಡುವುದು. ಅದರಂತೆ ಇಲ್ಲಿ ಕೈಗಾರಿಕಾ ತರಬೇತಿ ಜತೆಗೆ ಅಂಗವಿಕಲರು ಬಳಸುವ ಶೂ ಗಳು ಚಪ್ಪಲಿಗಳು ಟ್ರೈಸಿಕಲ್​​ಗಳು ವಾಕಿಂಗ್ ಸ್ಟಿಕ್ ಮತ್ತಿತರ ಉತ್ಪನ್ನಗಳನ್ನು ತಯಾರಿಸಲು ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆದ ನಂತರ ಅವರಿಂದಲೇ ಅವುಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಅದರಿಂದ ಬಂದ ಹಣದಲ್ಲಿ ಸ್ವಲ್ಪ ಭಾಗವನ್ನು ಅವರಿಗೂ ನೀಡಲಾಗುತ್ತದೆ.

ಇಲ್ಲಿ ದೈಹಿಕ ಅಂಗವಿಕಲರಲ್ಲದೇ ಮೂಗ ಮೂಗ ಮತ್ತು ಕಿವುಡರಿಗೂ ಕೂಡಾ ಇಲ್ಲಿ ತರಬೇತಿ ನೀಡಲಾಗುತ್ತದೆ.

ಫಿಸಿಯೋ ಥೆರಪಿಯೂ ಲಭ್ಯ

ಎಪಿಡಿಯಲ್ಲಿ ಸ್ಪೈನಲ್ ಕಾರ್ಡ್ ಫೆಲ್ಯೂರ್ ಆಗಿರುವವರಿಗೆ ಫಿಸಿಯೋಥೆರಪಿಯು ಲಭ್ಯ. ಬೆನ್ನು ಮೂಳೆ ಮುರಿದು ಹೋದರೆ ಜೀವನ ಮುಗಿದು ಹೋಯ್ತು ಎನ್ನುವವರಿಗೆ ಇಲ್ಲಿನ ಫಿಸಿಯೋಥೆರಪಿ ಚಿಕಿತ್ಸೆ ಪಡೆದರೆ ಸ್ವಲ್ಪ ಮಟ್ಟಿಗೆ ಓಡಾಡುವಂತೆ ಆಗುತ್ತಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇಲ್ಲಿ ನಡೆಯುವ ಫಿಸಿಯೋಥೆರಪಿಗಳು ಉಚಿತವಲ್ಲ. ಆದರೆ ಅತೀ ಕಡಿಮೆ ಮೊತ್ತದಲ್ಲಿ ಈ ಸೌಲಭ್ಯವನ್ನು ನೀಡುತ್ತಾರೆ. 10 ಸಾವಿರ ರೂಪಾಯಿ ವೆಚ್ಚವಾಗುವ ಒಂದು ತರಬೇತಿಗೆ 1 ರಿಂದ 2 ಸಾವಿರ ರೂಪಾಯಿ ತೆಗೆದುಕೊಳ್ಳುತ್ತಾರೆ. ಒಟ್ಟಿನಲ್ಲಿ ನಮ್ಮ ಕೈಯಲ್ಲಿ ಇನ್ನು ಏನು ಆಗುವುದಿಲ್ಲ ಎಂದುಕೊಳ್ಳುವ ವಿಕಲ ಚೇತನರು ಇಲ್ಲಿಗೆ ಬಂದರೆ ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳವಂತೆ ಈ ಸಂಸ್ಥೆಯವರು ತರಬೇತಿ ನೀಡುತ್ತಾರೆ.

" ಚಿಕ್ಕ ವಯಸ್ಸಿನಲ್ಲಿ ನನಗೆ ಪೋಲಿಯೋ ಆಟ್ಯಾಕ್ ಆಗಿ ಶಾಲೆಗೆ ಹೋಗುವುದನ್ನು ಬಿಟ್ಟು ಮನೆಯಲ್ಲಿಯೇ ಇರುತ್ತಿದೆ. ಎಪಿಡಿಯ ಬಗ್ಗೆ ತಿಳಿಸಿದರು.ಇಲ್ಲಿಗೆ ಬಂದು ಕಲಿಯಲಿಕ್ಕೆ ಪ್ರಾರಂಭ ಮಾಡಿ 5 ವರ್ಷಗಳೇ ಕಳೆದಿವೆ. ಇಲ್ಲಿ ನಾನು ಕಂಪ್ಯೂಟರ್ ಮತ್ತಿತರ ತರಬೇತಿಗಳನ್ನು ಕಲಿತಿದ್ದೇನೆ ನನ್ನ ಜೀವನಕ್ಕೆ ಆಗುವಷ್ಟನ್ನು ದುಡಿದುಕೊಳ್ಳುವ ಸಾಮರ್ಥ್ಯವನ್ನು ಕಂಡುಕೊಂಡಿದ್ದೇನೆ. ಅದಕ್ಕಾಗಿ ಎಪಿಡಿಗೆ ಧನ್ಯವಾಧ.

-ರಮೇಶ್​​ ಮಂಡ್ಯ, ಎಪಿಡಿ ವಿದ್ಯಾರ್ಥಿ