ಹೊಸ ಸಾಹಸಕ್ಕೆ ಪ್ರೇರಣೆ ‘ಗ್ರ್ಯಾಬ್​ಯುವರ್​ಫುಡ್​ ’

ಟೀಮ್​ ವೈ.ಎಸ್​. ಕನ್ನಡ

0

ಆಹಾರಕ್ಕೆ ಸಂಬಂಧಿಸಿದಂತೆ ನಮ್ಮೆಲ್ಲರ ಸಾಮಾನ್ಯ ಕೂಗು ಏನೆಂದರೆ ಈ ಕ್ಷೇತ್ರದಲ್ಲಿ ಬೇಕಾದಷ್ಟು ವಿನೂತನ ಯೋಜನೆಗಳು ಚಾಲ್ತಿಯಲ್ಲಿವೆ. ಆದರೂ ದೂರು ಹೇಳುತ್ತಲೇ ನಮ್ಮ ಮನಸ್ಸು ವಿನೂತನ, ಶುಚಿ ರುಚಿಯಾದ ತಿಂಡಿಗೆ ಮನಸೋಲುತ್ತದೆ. ಯಾಕೆಂದರೆ ಆಹಾರ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ...? ಇಂತಹ ಕನಸು ಕಂಡು ಬೆಳೆದವರೇ ಶಾಲೆಯಲ್ಲಿ ಸಹಪಾಠಿಗಳಾಗಿದ್ದ ರೋಷನ್ ಕೆ. ಪಿ. ಅಶ್ವಿನ್ ರಾಜ್, ರಿಜಿತ್ ರಾಮ್ ದಾಸ್ ಮತ್ತು ಆನಂದ್ ರಾಜ್. ಮಸಾಲಾ ಬೋಕ್ಸ್, ಫ್ರೆಶ್ ಮೆನು ಹೀಗೆ ಹಲವು ವಿನೂತನ ಯೋಜನೆಗಳು ಇದ್ದರೂ ನಮ್ಮ ಪ್ರಯತ್ನ ವಿಫಲವಾಗದು ಎಂಬ ಆತ್ಮ ವಿಶ್ವಾಸ ಈ ತಂಡದಲ್ಲಿತ್ತು. ಇದರ ಫಲವಾಗಿ ಹೊರಹೊಮ್ಮಿದ್ದೇ ಗ್ರ್ಯಾಬ್ ಯುವರ್ ಫುಡ್, (Graburfood) 2014ರಲ್ಲಿ ಕೊಚ್ಚಿಯಲ್ಲಿ ಇದು ಜನ್ಮ ತಳೆಯಿತು.

ರೋಷನ್​ ಏನು​ ಹೇಳ್ತಾರೆ..?

ಈಗಾಗಲೇ ಹಲವು ವಿನೂತನ ಯೋಜನೆಗಳೂ ಆಹಾರ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅದು ಸವಾಲಿನ ಕೆಲಸವಾಗಿತ್ತು. ಇದನ್ನು ಮನಗಂಡೇ ಯಾವುದೇ ಅಡೆ ತಡೆಗಳಿಲ್ಲದೇ ಶೀಘ್ರ ಪೂರೈಕೆಗೆ ಒತ್ತು ನೀಡಲಾಯಿತು ಎನ್ನುತ್ತಾರೆ ರೋಷನ್.

ತಮ್ಮ ಚಟುವಟಿಕೆ ಕುರಿತಂತೆ ರೋಷನ್ ಹೇಳುವುದು ಹೀಗೆ.. ಆರ್ಡರ್ ಲಭಿಸಿದ 45 ನಿಮಿಷಗಳ ಒಳಗೆ ನಾವು ಅದನ್ನು ಪೂರೈಸುತ್ತೇವೆ. ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಆರ್ಡರ್​​ಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಆರ್ಡರ್​​ ಮಾಡಿದರೆ ಮಧ್ಯರಾತ್ರಿ ಕೂಡ ಕೇಕ್ ಪೂರೈಸುತ್ತೇವೆ. ಇದರಲ್ಲಿ ಅತಿಶಯೋಕ್ತಿ ಇಲ್ಲ.

ಹೋಟೆಲ್​​​ಗಳಿಗೆ ಆರ್ಡರ್ ನೀಡುವುದಲ್ಲದೆ ಪೂರೈಕೆಗೆ ಸಂಬಂಧಿಸಿದಂತೆ ಹೋಟೆಲ್​​​ಗಳು ಅವಲಂಬಿಸಿರುವ ಪೂರೈಕೆ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದ್ದೇವೆ. ಆದರೆ ಆರ್ಡರ್ ವ್ಯವಸ್ಥೆ ಸಂಪೂರ್ಣವಾಗಿ ಗ್ರ್ಯಾಬ್ ಯುವರ್ ಫುಡ್ ತಂಡವೇ ನಿರ್ವಹಿಸುತ್ತದೆ ಎನ್ನುತ್ತಾರೆ ರೋಷನ್.

ಆಯ್ಕೆಯ ಮಾನದಂಡ ಏನು?

ಬೆಂಗಳೂರಿನಲ್ಲಿ ಕಾರ್ಯ ಚಟುವಟಿಕೆ ಆರಂಭಿಸಬೇಕೆಂಬ ಬಯಕೆ ಇದ್ದರೂ ಕೆಲವು ಕಾರಣಗಳಿಂದಾಗಿ ಇದು ಸಾಧ್ಯವಾಗಲಿಲ್ಲ. ಯಾಕೆಂದರೆ ಬೆಂಗಳೂರಿನಲ್ಲಿ ಈಗಾಗಲೇ ಸಾಕಷ್ಟು ಸಂಖ್ಯೆಯ ವಿನೂತನ ಯೋಜನೆಗಳು ಜಾರಿಯಲ್ಲಿವೆ. ಇದನ್ನು ಮನಗಂಡು ಅಂತಿಮವಾಗಿ ಕೊಚ್ಚಿಯನ್ನು ಆಯ್ಕೆ ಮಾಡಲಾಯಿತು.

ಇನ್ನಿತರ ಯೋಜನೆಗಳಂತೆ ಆರಂಭದಲ್ಲಿ ಸೂಕ್ತ ಪ್ರತಿಕ್ರಿಯೆ ದೊರೆಯಲಿಲ್ಲ. ಕೆಲವೇ ಕೆಲವು ಆರ್ಡರ್ ಮಾತ್ರ ದೊರೆಯಿತು. ಶೇಕಡಾ 12ರಷ್ಟು ಕಮಿಷನ್ ಹಂಚಲು ಕೂಡ ಹೋಟೆಲ್​​​ಗಳು ಹಿಂದೇಟು ಹಾಕಿದ್ದವು. ಹೀಗೆ ತಮ್ಮ ಆರಂಭದ ದಿನಗಳನ್ನು ನೆನೆಯುತ್ತಾರೆ ರೋಷನ್.

ಮೊದಲ ಯಶಸ್ಸಿನ ಕಥೆ

ಆರಂಭದ ದಿನದಲ್ಲಿ ಕೆಲಸಕ್ಕೆ ಯಾವುದೇ ಹೆಚ್ಚುವರಿ ಸಿಬ್ಬಂದಿ ಇರಲಿಲ್ಲ. ಸಂಸ್ಥಾಪಕ ಸದಸ್ಯರೇ ಎಲ್ಲ ಕೆಲಸವನ್ನು ಹಂಚಿ ಮಾಡುತ್ತಿದ್ದರು. ಫೋನ್ ರಿಸೀವ್ ಮಾಡುವುದರಿಂದ ಹಿಡಿದು ಎಲ್ಲವನ್ನೂ ನಾವೇ ಮಾಡುತ್ತಿದ್ದೆವು. ಹೀಗೆ ಆರಂಭದ ದಿನಗಳನ್ನು ನೆನಪಿಸಿದರು ರೋಷನ್.

ಆರಂಭದ ದಿನಗಳಲ್ಲಿ ದಿನಕ್ಕೆ ಐದರಿಂದ ಹತ್ತು ಆರ್ಡರ್ ಮಾತ್ರ ಬರುತ್ತಿತ್ತು. ಮೂರು ತಿಂಗಳು ಹೀಗೆಯೇ ಸಾಗಿತ್ತು. ಬಳಿಕ ಮೊದಲ ಸಿಬ್ಬಂದಿಯನ್ನು ನೇಮಕ ಮಾಡಲಾಯಿತು. 2015ರ ಮಾರ್ಚ್ ತಿಂಗಳಲ್ಲಿ ಪರಿಸ್ಥಿತಿ ಸುಧಾರಿಸಿತು. ಆರ್ಡರ್​​​ಗಳ ಸಂಖ್ಯೆ ಹೆಚ್ಚಾಯಿತು. ಬಳಿಕ ಗ್ರ್ಯಾಬ್ ಯುವರ್ ಫುಡ್ ಕೊಚ್ಚಿಯಲ್ಲಿರುವ 20 ಹೋಟೆಲ್​​ಗಳ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಇದೀಗ ದಿನಕ್ಕೆ ನೂರರಿಂದ 130 ಆರ್ಡರ್ ಲಭಿಸುತ್ತಿದೆ. ಇದು ಕೊಚ್ಚಿಯಲ್ಲಿ ಸಾಧನೆ. ಪ್ರತಿ ತಿಂಗಳು ಶೇಕಡಾ 25ರ ಬೆಳವಣಿಗೆ ಕೂಡ ದಾಖಲಿಸಿದ್ದೇವೆ ಎನ್ನುತ್ತಾರೆ ರೋಷನ್.

ಗ್ರ್ಯಾಬ್ ಯುವರ್ ಫುಡ್ ಇದೀಗ 15 ಡೆಲಿವರಿ ಬಾಯ್​​ಗಳನ್ನು ಹೊಂದಿದೆ. ಇದಲ್ಲದೆ ರೆಸ್ಟೋರೆಂಟ್​​ಗಳ ಡೆಲಿವರಿ ಬಾಯ್​ಗಳ ನೆರವನ್ನು ಪಡೆದುಕೊಳ್ಳುತ್ತೇವೆ. ಹೀಗೆ ಕಾರ್ಯಕ್ಷೇತ್ರ ವಿಸ್ತರಿಸಿರುವ ಸಂಸ್ಥೆ ಬಂಡವಾಳದ ನಿರೀಕ್ಷೆಯಲ್ಲಿದೆ. ಮುಂದಿನ ದಿನಗಳಲ್ಲಿ ಮಂಗಳೂರು ಮತ್ತು ಕೊಯಂಬತ್ತೂರಿನಲ್ಲಿ ಕೂಡ ಪದಾರ್ಪಣೆ ಮಾಡುವ ಗುರಿಯನ್ನು ಹೊಂದಿದೆ. ಮೊಬೈಲ್ ಅಪ್ಲಿಕೇಷನ್​​​ನಲ್ಲಿ ಕೂಡಾ ಇದು ಲಭ್ಯವಾಗಿದ್ದು, ಆಂಡ್ರಾಯ್ಡ್​​ ಮತ್ತು ಐಒಎಸ್ ಪ್ಲಾಟ್​​ ಫಾರ್ಮ್​​​ಗಳಲ್ಲಿ ದೊರೆಯುತ್ತಿದೆ.

ಕಳೆದ ಕೆಲವು ತಿಂಗಳ ಬೆಳವಣಿಗೆ ಅವಲೋಕಿಸಿದರೆ ಆಹಾರದ ವಿನೂತನ ಕಲ್ಪನೆ ನಿರಾಶೆ ಮೂಡಿಸಿದ್ದರೂ, ಈ ಗ್ರ್ಯಾಬ್ ಯುವರ್ ಫುಡ್ ಹೊಸ ಭರವಸೆಯ ಬೆಳಕು ಮೂಡಿಸಿದೆ. ದಿನಕ್ಕೆ 300 ಆರ್ಡರ್ ಲಭಿಸುವುದು ದೊಡ್ಡ ವಿಷಯವೇನಲ್ಲ. ಆದರೆ ನಿಜವಾದ ಸವಾಲು ಎದುರಾಗುವುದು ಇದು ಮುನ್ನೂರರ ಗಡಿ ಮೀರಿದಾಗ ಎನ್ನುತಾರೆ ಖ್ಯಾತ ಹೂಡಿಕೆದಾರ ಸಂಜಯ್ ಆನಂದರಾಮ್.

ಒಂದು ಅತ್ಯಲ್ಪ ಸಂಖ್ಯೆಯ ಜನರನ್ನು ಗುರಿಯಾಗಿರಿಸಿಕೊಂಡು ಆಹಾರ ವಿನೂತನ ಯೋಜನೆ ಕಾರ್ಯಾರಂಭ ಮಾಡುತ್ತೇವೆ. ಇದೇ ವೇಳೆ ಒಂದು ವಿಷಯವನ್ನು ನೆನಪಿನಲ್ಲಿಡಬೇಕು. ಇದಕ್ಕಿದ್ದ ಹಾಗೇ ಜನರ ಆಹಾರ ಅಭಿರುಚಿ ಬದಲಾಯಿಸಲು ಸಾಧ್ಯವಿಲ್ಲ. ಇದಕ್ಕೆ ಸಾಕಷ್ಟು ಸಮಯಾವಕಾಶ ತಗಲುತ್ತದೆ. ಕನಿಷ್ಠ ಒಂದು ತಲೆಮಾರು ಅಥವಾ 10 ವರ್ಷ ಬೇಕೆ ಬೇಕು ಎನ್ನುತ್ತಾರೆ ಸಂಜಯ್.

ಬೇಡಿಕೆ ಖಂಡಿತವಾಗಿಯೂ ಇದೆ. ಆದರೆ ಇದೇ ವೇಳೆ ಒಂದು ನಿಖರತೆಯ ಅಗತ್ಯ ಕೂಡ ಇದೆ. ಎಷ್ಟರ ಮಟ್ಟಿಗೆ ಅವಕಾಶ ದೊರೆಯಲಿದೆ ಎಂಬ ಬಗ್ಗೆ ಸ್ಪಷ್ಟ ಕಲ್ಪನೆ ಇರಬೇಕಾಗಿದೆ. ನಾನೂ ಕೂಡ ಪ್ರಯತ್ನಿಸುತ್ತೇನೆ ಎಂದು ಈ ಕ್ಷೇತ್ರಕ್ಕೆ ಧುಮುಕಿದವರೇ ಹೆಚ್ಚು. ಅವರಲ್ಲಿ ಹೆಚ್ಚಿನವರಿಗೆ ಆಹಾರ ಉದ್ಯಮದ ಮೇಲೆ ಅತಿಯಾದ ಆಸಕ್ತಿ, ಅಭಿರುಚಿ ಇರಲಿಲ್ಲ. ಒಂದು ಅತೀವವಾದ ಉತ್ಸಾಹ, ಪ್ಯಾಶನ್ ಅತ್ಯಗತ್ಯ. ಆಹಾರ ಕ್ಷೇತ್ರ ಮೊದಲು ಸ್ವಾವಲಂಬನೆಯಾಗಬೇಕು. ಆ ಬಳಿಕವಷ್ಟೇ ದೂರಗಾಮಿ ಬದಲಾವಣೆಗೆ ತನ್ನನ್ನು ತಾನು ಒಡ್ಡಿಕೊಳ್ಳಲು ಸಾಧ್ಯ ಎನ್ನುತ್ತಾರೆ ಇಂಡಿಯಾ ಕ್ವಾಂಟಿಟ್ ಸ್ಥಾಪಕ ಆನಂದ್ ಲುನಿಯಾ.

ಕೇರಳದಲ್ಲಿ ಜನ್ಮತಾಳಿ ಇದೀಗ ಬೆಂಗಳೂರಿಗೂ ನೆಲೆ ವಿಸ್ತರಿಸಿರುವ ಆಹಾರದ ವಿನೂತನ ಯೋಜನೆಗಳಲ್ಲಿ ಮಸಾಲಾ ಬಾಕ್ಸ್ ಕೂಡಾ ಒಂದು. ಮುಂದಿನ ದಿನಗಳಲ್ಲಿ ಗ್ರ್ಯಾಬ್ ಯುವರ್ ಫುಡ್ ಯಾವ ಹಾದಿ ತುಳಿಯಲಿದೆ ಎಂಬುದನ್ನು ಈಗಾಗಲೇ ಹೇಳುವುದು ಕಷ್ಟ. ತನ್ನದೇ ಆದ ಅನನ್ಯತೆಯನ್ನು ಗ್ರ್ಯಾಬ್ ಯುವರ್ ಫುಡ್ ಉಳಿಸಿಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕು. ಈ ಕ್ಷೇತ್ರಕ್ಕೆ ಧುಮುಕಲು ಹೆಚ್ಚಿನ ಅಡೆತಡೆ ಇಲ್ಲದಿರುವುದು ಹಲವರನ್ನು ಇತ್ತ ಕೈ ಬೀಸಿ ಕರೆಯುತ್ತಿದೆ. ಹೊಸ ಸಾಹಸಕ್ಕೆ ಪ್ರೇರಣೆ ನೀಡುತ್ತಿದೆ.

ಲೇಖಕರು: ಸಿಂಧೂ ಕಶ್ಯಪ್​
ಅನುವಾದಕರು: ಎಸ್​ಡಿ

Related Stories