ಭಾರತದ ನಾಲ್ವರು ಫ್ಯಾಷನ್ ತಾರೆಗಳು...ಲೈಫ್‍ಸ್ಟೈಲ್ ಬ್ರಾಂಡ್ ಮಾರುಕಟ್ಟೆಯಲ್ಲಿ ತೀರದ ಹಸಿವು

ಟೀಮ್​​ ವೈ.ಎಸ್​. ಕನ್ನಡ

0

ಅದು 1994ರ ಮಿಸ್ ಯೂನಿವರ್ಸ್ ಸ್ಪರ್ಧೆ, ಸುಷ್ಮಿತಾ ಸೇನ್ ಸ್ಪರ್ಧೆಯ ಅಂತಿಮ ಸುತ್ತು ತಲುಪಿದ್ರು. 16ರ ಹರೆಯದ ಪ್ರೀತಾ ಸುಖಂತನ್‍ಕರ್ ಬಿಟ್ಟ ಕಣ್ಣು ಬಿಟ್ಟಂತೆ ಅದನ್ನೇ ವೀಕ್ಷಿಸುತ್ತಿದ್ರು. ಪ್ರತಿ ಶಬ್ಧವನ್ನೂ ಅಳೆದು ಸುರಿದು ನೋಡ್ತಾ ಇದ್ರು. ``ನಿಮ್ಮ ಬಗ್ಗೆ ನಿಮಗೇನು ಅನಿಸುತ್ತೆ? ಒಬ್ಬ ಮಹಿಳೆ ಎಂಬುದರ ಸಾರವೇನು?'' ಅನ್ನೋ ಪ್ರಶ್ನೆ ತೂರಿಬಂದಿತ್ತು. ಅದಕ್ಕೆ ಸುಷ್ಮಿತಾ ಕೊಟ್ಟ ಉತ್ತರವೇನು ಗೊತ್ತಾ? ``ಮಹಿಳೆ ಅನ್ನೋದು ದೇವರು ಕೊಟ್ಟ ವರ, ಇದನ್ನು ಎಲ್ಲರೂ ಗೌರವಿಸಬೇಕು. ಪ್ರೀತಿ ಅಂದ್ರೆ ಏನು ಅನ್ನೋದನ್ನು ತೋರಿಸಿಕೊಡುವವಳು, ಸುಖ-ದುಃಖ ಹಂಚಿಕೊಳ್ಳುವವಳು, ಕಾಳಜಿ ವಹಿಸುವವಳೇ ಮಹಿಳೆ'' ಎಂದ್ರು. ಸುಷ್ಮಿತಾರ ಆತ್ಮವಿಶ್ವಾಸದ ಪ್ರತಿಕ್ರಿಯೆಗೆ ತೀರ್ಪುಗಾರರು ಮತ್ತು ಸಾವಿರಾರು ಪ್ರೇಕ್ಷಕರು ತಲೆದೂಗಿದ್ರು. ಮಿಸ್ ಯೂನಿವರ್ಸ್ ಸುಷ್ಮಿತಾ ಸೇನ್ ಬಗ್ಗೆ ಪ್ರೀತಾ `ಸಂಡೇ ಆಬ್ಸರ್ವರ್​​​​​'ನಲ್ಲಿ ಬರೆದಿದ್ರು. ಪ್ರೀತಾ ಪತ್ರಿಕೋದ್ಯಮವನ್ನು ಬಿಟ್ಟು ಫ್ಯಾಷನ್ ದುನಿಯಾಕ್ಕೆ ಎಂಟ್ರಿ ಕೊಡಲು ಪ್ರೇರಣೆಯಾಗಿದ್ದು ಕೂಡ ಇದೇ ಘಟನೆ. 38 ವರ್ಷ ವಯಸ್ಸಿನ ಪ್ರೀತಾ ಈಗ ಮುಂಬೈನ ಸಂಪಾದಕೀಯ ಇ-ಕಾಮರ್ಸ್ ಲೈಫ್‍ಸ್ಟೈಲ್ ಬ್ರಾಂಡ್ `ದಿ ಲೇಬಲ್ ಲೈಫ್'ನ ಸಂಸ್ಥಾಪಕಿ.

1966ರಲ್ಲಿ ರೀಟಾ ಫೆರಿಯಾ ಮಿಸ್ ವರ್ಲ್ಡ್​ ಕಿರೀಟ ಮುಡಿಗೇರಿಸಿಕೊಂಡಿದ್ರು. ಅದಾದ್ಮೇಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸುಂದರಿಯರು ನೂರಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಇದು ದೇಶದ ಸೌಂದರ್ಯ ಮತ್ತು ಫ್ಯಾಷನ್ ಇಂಡಸ್ಟ್ರಿ ಬಗ್ಗೆ ಅರಿವು ಮೂಡಿಸುವ ಸಾಂಪ್ರದಾಯಿಕ ಮೈಲುಗಲ್ಲು ಅನ್ನೋದು ಪ್ರೀತಾ ಅವರ ಅಭಿಪ್ರಾಯ. ತಮ್ಮ ಉದ್ಯಮ ಪಯಣದಲ್ಲಿ ಸುಷ್ಮಿತಾ ಸೇನ್ ಸೇರಿದಂತೆ ಹಲವು ಸೆಲೆಬ್ರಿಟಿಗಳು, ಪ್ರೀತಾ ಅವರ ಗ್ರಾಹಕರಾಗಿರೋದು ವಿಶೇಷ. ಪ್ರೀತಾ ಎಂಟಿವಿಯಲ್ಲಿ ನಿರ್ಮಾಪಕಿಯಾಗಿದ್ರು. ಬಳಿಕ `Seventeen Magazine & L’Officiel'ನಲ್ಲಿ ಪ್ರಕಾಶಕಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಈವೆಂಟ್‍ಗಳನ್ನು ಆಯೋಜಿಸುತ್ತ, ಸೆಲೆಬ್ರಿಟಿಗಳನ್ನು ಮ್ಯಾನೇಜ್ ಮಾಡುತ್ತ, ಜಾಹೀರಾತುಗಳಿಗೆ ಕೂಡ ವಿನ್ಯಾಸ ಮಾಡುತ್ತ ಅಪಾರ ಅನುಭವ ಗಳಿಸಿರುವ ಪ್ರೀತಾ, ಭಾರತೀಯ ಮಹಿಳಾ ಗ್ರಾಹಕರನ್ನು ಅರ್ಥಮಾಡಿಕೊಳ್ಳಲು ಭಾರೀ ಕಸರತ್ತು ಮಾಡಿದ್ದಾರೆ. ಒಂದೇ ಬಗೆಯ ಹಿನ್ನೆಲೆ ಹೊಂದಿರುವ ತಮ್ಮ ಅದ್ಭುತ ತಂಡದ ಸದಸ್ಯರ ಮೇಲೆ ಕೂಡ ಪ್ರೀತಾ ಅಪಾರ ನಂಬಿಕೆ ಇಟ್ಟಿದ್ದಾರೆ.

2012ರಲ್ಲಿ `ಲೇಬಲ್ ಕೊರ್ಪ್' ಆರಂಭವಾಗಿತ್ತು, 2013ರಲ್ಲಿ ಈ ಸಂಸ್ಥೆಗೆ `ಕಳಾರಿ ಕ್ಯಾಪಿಟಲ್'ನಿಂದ 1 ಮಿಲಿಯನ್ ಡಾಲರ್ ಹಣಕಾಸಿನ ನೆರವು ಸಿಕ್ಕಿತ್ತು. ನಂತರ `ಲೇಬಲ್ ಕೊರ್ಪ್' ಅನ್ನು `ದಿ ಲೇಬಲ್ ಲೈಫ್' ಅಂತಾ ಮರು ನಾಮಕರಣ ಮಾಡಲಾಯ್ತು. ಭಾರತದ ಹೊರಕ್ಕೆ ಒಂದು ಅಂತರಾಷ್ಟ್ರೀಯ ಬ್ರಾಂಡ್ ಅನ್ನು ಪರಿಚಯಿಸಬೇಕೆಂಬುದು ಪ್ರೀತಾರ ಕನಸು. `ಒನ್ ಕಿಂಗ್ಸ್ ಲೇನ್', `ದಿ ಹಾನೆಸ್ಟ್ ಕಂಪನಿ'ಯಂತಹ ಅಂತರಾಷ್ಟ್ರೀಯ ಬ್ರಾಂಡ್‍ಗಳು ಪ್ರೀತಾಗೆ ಪ್ರೇರಣೆಯಾಗಿವೆ.

ಸೆಲೆಬ್ರಿಟಿಗಳ ಪವರ್ ಮತ್ತು ಉಚಿತ ಕಂಟೆಂಟ್...

ಪ್ರಸಿದ್ಧ ಸಂಪಾದಕರು ಹಾಗೂ ಟಾಸ್ಕ್ ಮೇಕರ್‍ಗಳನ್ನು ಪ್ರೀತಾ ಕರೆತರುತ್ತಾರೆ. ಸಮರ್ಥ ಗ್ರಾಹಕರಿಗೆ ಅವರು ತಮ್ಮ ಆಯ್ಕೆಯ, ಇಷ್ಟದ ಉತ್ಪನ್ನಗಳನ್ನು ಸೂಚಿಸುತ್ತಾರೆ. ಸುಸೇನ್ ಖಾನ್, ಮಲೈಕಾ ಅರೋರಾ ಹಾಗೂ ಬಿಪಾಷಾ ಬಸು ಪ್ರೀತಾ ಅವರ ಬ್ರಾಂಡನ್ನು ಪ್ರಚಾರ ಮಾಡ್ತಿದ್ದಾರೆ. ಅವರೇ ಖುದ್ದಾಗಿ ಗೃಹಾಲಂಕಾರದ ಸಿಗ್ನೆಚರ್ ಪೀಸ್‍ಗಳನ್ನು, ಉಡುಪುಗಳನ್ನು ಹಾಗೂ ಅಲಂಕಾರಿಕ ಸಾಮಾಗ್ರಿಗಳನ್ನು ಡಿಸೈನ್ ಮಾಡ್ತಾರೆ, ಹಾಗೂ ಅದರ ಮೇಲ್ವಿಚಾರಣೆಯನ್ನೂ ನೋಡಿಕೊಳ್ತಾರೆ. ಬಾಲಿವುಡ್ ಸೆಲೆಬ್ರಿಟಿಗಳಾದ ಸುಸೇನ್, ಮಲೈಕಾ ಹಾಗೂ ಬಿಪಾಷಾ ಉದ್ಯಮಿಗಳೂ ಹೌದು. ಅವರು `ದಿ ಲೇಬಲ್ ಲೈಫ್'ನ ಈಕ್ವಿಟಿ ಹೋಲ್ಡರ್‍ಗಳಾಗಿದ್ದು, ಆದಾಯ ಹಂಚಿಕೆ ಆಧಾರದ ಮೇಲೆ ಪರಿಹಾರ ಪಡೆಯುತ್ತಾರೆ.

ಮೂರು ಪ್ರಮುಖ ಲೇಬಲ್‍ಗಳನ್ನು ವಿಲೀನಗೊಳಿಸಿರೋದ್ರಿಂದ ಮಾರಾಟ ಹೆಚ್ಚಳವಾಗುವ ಅಥವಾ ಕಡಿಮೆಯಾಗುವ ಎರಡೂ ಸಾಧ್ಯತೆಗಳಿತ್ತು. ಆದ್ರೆ ಗ್ರಾಹಕರ ಸಂಖ್ಯೆ ಕಳೆದ ವರ್ಷಕ್ಕಿಂತ ಶೇ.40ರಷ್ಟು ಹೆಚ್ಚಾಗಿದೆ. ಶೇ.45ರಷ್ಟು ಪುನರಾವರ್ತಿತ ಗ್ರಾಹಕರು ಇರೋದ್ರಿಂದ, ಜನರಿಗೆ ನಮ್ಮ ಬ್ರಾಂಡ್ ಮೇಲೆ ಪ್ರೀತಿ ಇದೆ ಅನ್ನೋದು ಸಾಬೀತಾಗಿದೆ ಎನ್ನುತ್ತಾರೆ ಪ್ರೀತಾ. ಮರುಬ್ರಾಂಡ್ ಜೊತೆಗೆ `ದಿ ಲೇಬಲ್ ಲೈಫ್', `ಮಿಂತ್ರಾ', `ವೂನಿಕ್', `ರೊಪೊಸೊ'ನಂತಹ ಮಾರುಕಟ್ಟೆಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೆ. ಇತ್ತೀಚೆಗಷ್ಟೇ `ಕ್ರಾಫ್ಟ್ಸ್ ವಿಲ್ಲಾ ಡಾಟ್ ಕಾಮ್' ಜೊತೆಗೂ ಸಹಯೋಗ ಮಾಡಿಕೊಂಡಿದ್ದು, ರಜಾ ತಿಂಗಳಾದ ಡಿಸೆಂಬರ್‍ನಲ್ಲಿ `ದಿ ಲೇಬಲ್ ಲೈಫ್' ತನ್ನ ವಿಶಿಷ್ಟ ಪ್ರಾಡಕ್ಟ್‍ಗಳನ್ನು ಗ್ರಾಹಕರಿಗೆ ಒದಗಿಸ್ತಾ ಇದೆ. ಈ ವರ್ಷ ಏಕಾಂಗಿಯಾಗಿಯೇ ಶೇ.50ರಷ್ಟು ಆರ್ಡರ್‍ಗಳನ್ನು ಪೂರೈಸುವುದಾಗಿ ಪ್ರೀತಾ ವಿಶ್ವಾಸವಿಟ್ಟಿದ್ದಾರೆ.

`ಜೈಪೊರ್', `ಫ್ಯಾಬ್ ಇಂಡಿಯಾ'ದಂತೆ ಅಂತರಾಷ್ಟ್ರೀಯ ಗುಣಮಟ್ಟದ, ಗ್ರಾಹಕರ ಕೈಗೆಟುಕುವಂತಹ ಐಷಾರಾಮಿ ಉತ್ಪನ್ನಗಳನ್ನು ಒದಗಿಸುವುದು `ದಿ ಲೇಬಲ್ ಲೈಫ್' ಮುಂದಿರುವ ಗುರಿ ಎನ್ನುತ್ತಾರೆ ಪ್ರೀತಾ. ತಮ್ಮ ಬ್ರಾಂಡ್ ವಿಭಿನ್ನವಾಗಿ ಗುರುತಿಸಿಕೊಳ್ಳಲು ಅದಕ್ಕೆ ವೈಯಕ್ತಿಕ ಸ್ಪರ್ಷ ನೀಡುವತ್ತ ಪ್ರೀತಾ ಗಮನಹರಿಸಿದ್ದಾರೆ. `ಡಿಸೈನರ್ ಆಫ್ ದಿ ಮಂತ್' ಅನ್ನೋ ಹೆಗ್ಗಳಿಕೆಗೂ ಪ್ರೀತಾ ಪಾತ್ರರಾಗಿದ್ದಾರೆ. ಖ್ಯಾತ ವಿನ್ಯಾಸಗಾರರು `ದಿ ಲೇಬಲ್ ಲೈಫ್'ಗಾಗಿ ಅತ್ಯದ್ಭುತ ಉತ್ಪನ್ನಗಳನ್ನು ಡಿಸೈನ್ ಮಾಡಿದ್ದಾರೆ. ಮಾಲಿನಿ ರಮಾಣಿ ಹಾಗೂ ರಾಕಿ ಎಸ್. `ದಿ ಲೇಬಲ್ ಲೈಫ್'ನತ್ತ ಗ್ರಾಹಕರನ್ನು ಆಕರ್ಷಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಸುಸೇನ್ ಅವರ ಫೋಟೋ ಶೂಟ್‍ಗಳಿಗಾಗಿ ಮಲೈಕಾ ಅರೋರಾ ಖಾನ್ ಖುದ್ದಾಗಿ ಉಡುಪುಗಳನ್ನು ಡಿಸೈನ್ ಮಾಡಿದ್ರು. ಸುಸೇನ್‍ರ ಫೋಟೋಶೂಟ್‍ನ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲೂ ಸುದ್ದಿ ಮಾಡಿವೆ.

ರಾಕಿ ಎಸ್. ಡಿಸೆಂಬರ್ ತಿಂಗಳಿನ ಸಂಪಾದಕರಾಗಿದ್ರು. ಅವರ ಸಲಹೆಯಂತೆ ಬಿಪಾಷಾ ಬಸು ದಿಂಬುಗಳನ್ನು ಆಯ್ಕೆ ಮಾಡಿ ವಿನ್ಯಾಸಗೊಳಿಸಿದ್ದಾರೆ. ಅವುಗಳ ಪೈಕಿ ಎರಡು ದಿಂಬುಗಳು `ಪಾರ್ಟಿ ಋತುವಿನ ಅತ್ಯದ್ಭುತ ಜೋಡಿ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಇಂತಹ ನಿರ್ಧಿಷ್ಟ ಸ್ಟೈಲ್‍ಗಳ ಬಗ್ಗೆ ಗ್ರಾಹಕರು ಕೂಡ ಟ್ವೀಟ್ ಮಾಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು. `ದಿ ಲೇಬಲ್ ಲೈಫ್'ನ ಬ್ಲಾಗ್‍ನ್ನು ಕೂಡ ಪರಿಷ್ಕರಿಸಲಾಗುತ್ತಿದ್ದು, ಅತ್ಯಂತ ಶಕ್ತಿಯುತವಾದ ಸಂಪಾದಕೀಯ ಧ್ವನಿಯೊಂದಿಗೆ ಬರುವುದಾಗಿ ಪ್ರೀತಾ ಭರವಸೆ ವ್ಯಕ್ತಪಡಿಸಿದ್ದಾರೆ. ವಿಷಯ ಹಾಗೂ ವಾಣಿಜ್ಯದ ಮಿಲನ ಇನ್ನೂ ಹೊಸದು, ಆದ್ರೆ ಭಾರತದಲ್ಲಿ ಹೆಚ್ಹೆಚ್ಚು ಪ್ರಚಲಿತಕ್ಕೆ ಬರ್ತಾ ಇದೆ. ಇದನ್ನೇ ಕೊಂಡುಕೊಳ್ಳಿ ಅಂತ ಗ್ರಾಹಕರಿಗೆ ನೇರವಾಗಿ ಹೇಳಲು ಯಾರೂ ಇಚ್ಛಿಸುವುದಿಲ್ಲ, ಆದ್ರೆ ಪ್ರಸಕ್ತ ಋತುವಿನ ಫ್ಯಾಷನ್ ಟ್ರೆಂಡ್‍ಗೆ ತಕ್ಕಂತಹ ಟಾಪ್ ಉತ್ಪನ್ನಗಳನ್ನು ನಿಮ್ಮ ಮುಂದಿಡುವ ಮೂಲಕ ಆಕರ್ಷಿಸುತ್ತಾರೆ. ಕ್ರಿಸ್‍ಮಸ್ ತಿನಿಸುಗಳಿಗೆ ಬೇಕಾದ ಅಡುಗೆ ಉಪಕರಣಗಳು ಮತ್ತು ರೆಸಿಪಿ ಹಾಟ್ ಕೇಕ್‍ನಂತೆ ಮಾರಾಟವಾಗ್ತಿದೆ.

ಐಷಾರಾಮಿ ಬ್ರಾಂಡ್‍ಗಳನ್ನು ಇಷ್ಟಪಡುವ ಭಾರತೀಯರು ಅದನ್ನು ವಿದೇಶಗಳಲ್ಲೇ ಕೊಂಡುಕೊಳ್ಳಲು ಬಯಸುತ್ತಾರೆ. `ಯುರೋಮಾನಿಟರ್' ಸಮೀಕ್ಷೆಯ ಪ್ರಕಾರ ಸದ್ಯ 132 ಬಿಲಿಯನ್ ಡಾಲರ್ ಮೌಲ್ಯದ ಭಾರತೀಯ ಐಷಾರಾಮಿ ಮಾರುಕಟ್ಟೆ ಇನ್ನು 5 ವರ್ಷಗಳಲ್ಲಿ 236 ಬಿಲಿಯನ್ ಡಾಲರ್‍ಗೆ ತಲುಪಲಿದೆ. ಇದು `ದಿ ಲೇಬಲ್ ಲೈಫ್'ನಂತಹ ಬ್ರಾಂಡ್‍ಗಳಿಗೆ ನಿಜಕ್ಕೂ ಶುಭ ಸುದ್ದಿ. `ವಾಲ್ ಸ್ಟ್ರೀಟ್ ಜರ್ನಲ್'ನ ಒಂದು ವರದಿಯ ಪ್ರಕಾರ ಭಾರತದ ಐಷಾರಾಮಿ ಗ್ರಾಹಕರು ಆನ್‍ಲೈನ್‍ಗಿಂತ ಹೆಚ್ಚಾಗಿ ಮಳಿಗೆಗಳಲ್ಲೇ ಖರೀದಿಗೆ ಹೆಚ್ಚು ಆದ್ಯತೆ ಕೊಡುತ್ತಿದ್ದಾರೆ. 2014ರಲ್ಲಿ 98.80 ಗ್ರಾಹಕರು ಮಳಿಗೆಗಳಲ್ಲಿ ಖರೀದಿ ಮಾಡಿದ್ರೆ ಕೇವಲ ಶೇ. 1.20ರಷ್ಟು ಮಂದಿ ಆನ್‍ಲೈನ್‍ನಲ್ಲಿ ಶಾಪಿಂಗ್ ಮಾಡಿದ್ದಾರೆ. ಇದೇ ಹವ್ಯಾಸ ಇನ್ನು ಐದು ವರ್ಷಗಳವರೆಗೆ ಮುಂದುವರಿಯಲಿದೆ. ಕಳೆದ ವರ್ಷಕ್ಕಿಂತ ಡಬಲ್ ಆದಾಯ ಗಳಿಸುವುದು ಪ್ರೀತಾ ಅವರ ಮುಖ್ಯ ಗುರಿ. ಇತ್ತೀಚೆಗಷ್ಟೇ ಮಿಂತ್ರಾ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಈಗಲೇ ಅದನ್ನು ಊಹಿಸುವುದು ಅಸಾಧ್ಯ ಎನ್ನುತ್ತಾರೆ ಅವರು. ಈಗಾಗ್ಲೇ ದಿನಕ್ಕೆ 100 ಆರ್ಡರ್‍ಗಳು ಬರ್ತಾ ಇದ್ದು, `ದಿ ಲೇಬಲ್ ಲೈಫ್'ನ ಯಶಸ್ಸಿನ ಬಗ್ಗೆ ಪ್ರಿತಾ ಅವರಿಗೆ ಆತ್ಮವಿಶ್ವಾಸವಿದೆ.

ಲೇಖಕರು: ದೀಪ್ತಿ ನಾಯರ್​​
ಅನುವಾದಕರು: ಭಾರತಿ

Related Stories