"ಚಪಾತಿ ಮನೆ"ಯ ಆದರ್ಶ ದಂಪತಿ

ಟೀಮ್​​ ವೈ.ಎಸ್​. ಕನ್ನಡ

0

‘ರೆಟ್ಟೆ ಮುರೀಬೇಕು, ರೊಟ್ಟಿ ತಿನ್ನಬೇಕು’ ಎಂಬ ಗಾದೆ ಮಾತೊಂದಿದೆ. ತಂತ್ರಜ್ಞಾನದ ಅಬ್ಬರದಲ್ಲಿ ಜನರು ರೆಟ್ಟೆ ಮುರಿಯುವಷ್ಟು ಕೆಲಸ ಮಾಡದಿದ್ದರು ರೊಟ್ಟಿ ತಯಾರಿಸಿ ತಿನ್ನುವಷ್ಟು ಸಂಯಮವಿಲ್ಲದವರ ಸಂಖ್ಯೆ ಹೆಚ್ಚಾಗಿರುವ ಕಾಲಮಾನದಲ್ಲಿ ಯಂತ್ರಗಳಿಗೆ ಮಾರು ಹೋಗದೆ ‘ಮನಸ್ಸಿದ್ದರೆ ಮಾರ್ಗ, ಛಲವಿದ್ದರೆ ಸಾಧನೆ’ ಎಂದು ನಂಬಿರುವ ದಂಪತಿ ‘ಚಪಾತಿ ಮನೆ’ ಮೂಲಕ ನಗರದ ಹಲವು ಮನೆಗಳಲ್ಲಿ ಜನಪ್ರಿಯರಾಗಿದ್ದಾರೆ. 

ನಗರದ ಮಹಾಲಕ್ಷ್ಮಿಪುರ ಬಡಾವಣೆಯ ಸರಸ್ವತಿಪುರ, 3ನೇ ಅಡ್ಡರಸ್ತೆಯಲ್ಲಿರುವ ‘ಚಪಾತಿ ಮನೆ’ಯ ಮಾಲೀಕರರಾದ ಎಚ್.ವಿ. ಲಕ್ಷ್ಮಣರಾವ್ ಹಾಗೂ ಲಕ್ಷ್ಮೀದೇವಿ ದಂಪತಿ ಹಲವು ಕುಟುಂಬಳಿಗೆ ಆಸರೆಯಾಗಿದ್ದಾರೆ. ಕೆಲಸದ ಒತ್ತಡದಿಂದ ಗಂಟೆಗಟ್ಟಲೆ ಟ್ರಾಫಿಕ್ ನಲ್ಲಿ ಸಮಯ ಕಳೆದು ಮನೆಗೆ ಬಂದು ಹೊಟ್ಟೆಗೆ ಬೇಕಾದ ರುಚಿಕರವಾದ ಆಹಾರ ತಯಾರಿಸುವಲ್ಲಿ ಸೋತು ಸುಣ್ಣವಾಗುವ ಡಯಟ್ ಕಾನ್ಶಿಯಸ್ ಆಹಾರ ಪ್ರಿಯ ಬೆಂಗಳೂರಿಗರ ಹಸಿವು ತಣಿಸುವಲ್ಲಿ ಈ ಮನೆಯ ಪಾತ್ರ ಮಹತ್ತರವಾದದ್ದಾಗಿದೆ. ಈ ಮನೆಯಲ್ಲಿ ಉದ್ದುವ ಚಪಾತಿ ಮಣೆಯ ಸದ್ದು, ಚಪಾತಿಗೆ ಸಿಕ್ಕ ಬೆಂಕಿಯ ಕಾವಿನ ಘಮ, ಮನೆಯ ಆವರಣದಲ್ಲಿ ಕಟ್ಟಿಟ್ಟ ಒಬ್ಬಟ್ಟು, ನಿಪ್ಪಟ್ಟು ರಾಶಿ ರಾಶಿ ಆಹಾ…! ಭೋಜನ ಪ್ರಿಯರಿಗಂತು ಹಬ್ಬವೆ ಸರಿ.

13 ವರ್ಷಗಳ ಹಿಂದೆ ಪ್ರವಾಸಿಗರ ತವರೂರಾದ ಶಿವಮೊಗ್ಗದ ಮಾಸ್ತಿಕಟ್ಟೆಯಿಂದ ಬೆಂಗಳೂರಿಗೆ ಬಂದ ಎಚ್.ವಿ. ಲಕ್ಷ್ಮಣರಾವ್ ಹಾಗೂ ಲಕ್ಷ್ಮೀದೇವಿ ದಂಪತಿ ಎಸ್.ಎಲ್.ವಿ. ಫುಡ್ಸ್ ಚಪಾತಿ ಮನೆ ರೂವಾರಿಗಳು. ಬೆಂಗಳೂರಿಗೆ ಬಂದ ಹೊಸತರಲ್ಲಿ ದುಡಿಮೆಯ ಅನಿವಾರ್ಯವಿದ್ದ ಅವರು ಸ್ನೇಹಿತರ ಸಲಹೆಯಂತೆ ಚಪಾತಿ ಮಾಡಿ ಮಾರುವ ಕೆಲಸ ಪ್ರಾರಂಭಿಸಿದರು.

‘15 ಚಪಾತಿ ಲಟ್ಟಿಸಿಕೊಂಡು ಹತ್ತಾರು ಹೋಟೆಲ್ ಸುತ್ತಿದೆವು. ಅಂದು ಯಾರೂ ಚಪಾತಿ ಖರೀದಿಸುವ ಮನಸ್ಸು ಮಾಡುತ್ತಿರಲಿಲ್ಲ. ಆದರೂ ಅನಿವಾರ್ಯತೆ ಇದ್ದಿದ್ದರಿಂದ ನಿತ್ಯವೂ ಚಪಾತಿ ಮಾಡಿಕೊಂಡು ಹೋಟೆಲ್ ಸುತ್ತುತ್ತಿದ್ದೆ. ಈಗ 500ಕ್ಕೂ ಹೆಚ್ಚು ಹೋಟೆಲ್​ಗಳಲ್ಲಿ ನಮ್ಮ ಚಪಾತಿಗೆ ಬೇಡಿಕೆ ಹೆಚ್ಚಾಗಿದೆ. ನಿತ್ಯ ಸುಮಾರು 35 ಹೋಟೆಲ್​ಗಳಿಗೆ ನಾವು ಚಪಾತಿ, ಪರೋಠಾ ಸರಬರಾಜು ಮಾಡುತ್ತಿದ್ದೇವೆ’ ಇದು ಅಂದು ನಾವು ಪಟ್ಟ ಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದು ಸಂತಸದಿಂದ ಲಕ್ಷ್ಮಣರಾವ್ ಹೇಳುತ್ತಾರೆ.

ಇದನ್ನು ಓದಿ: ಮೆಡಿಕಲ್​ಗೆ ಹೋಗೋ ಚಿಂತೆ ಬಿಟ್ಟುಬಿಡಿ- ಆನ್​ಲೈನ್​ನಲ್ಲೇ ಆರ್ಡರ್​ ಮಾಡಿ

ಚಪಾತಿ ವ್ಯಾಪಾರವನ್ನೇ ಜೀವನ ನಿರ್ವಹಣೆಯ ದಾರಿಯಾಗಿಸಿಕೊಂಡ ಈ ದಂಪತಿ ದಿನವೊಂದಕ್ಕೆ 40 ಸಾವಿರ ಚಪಾತಿ ಮಾಡಿ ಮಾರಾಟ ಮಾಡಿದ್ದೂ ಇದೆ. ಆರಂಭದಲ್ಲಿ ಎದುರಾದ ಜಾಗದ ಸಮಸ್ಯೆ, ಹಣಕಾಸು ತೊಂದರೆ ಎಲ್ಲವನ್ನೂ ದಾಟಿ ಬೆಳೆದ ನಮ್ಮ ‘ಚಪಾತಿ ಮನೆ’ ಇಂದು ಕೇಟರಿಂಗ್, ಕಾಂಡಿಮೆಂಟ್ಸ್ ಮಾರಾಟದಲ್ಲೂ ತೊಡಗಿಕೊಂಡಿದೆ. ಅಲ್ಲದೆ ಪ್ರತಿ ಬಾರಿಯೂ ಹೊಸ ಹೊಸ ತಿಂಡಿಗಳು ಚಪಾತಿ ಮನೆ ಪಟ್ಟಿಗೆ ಸೇರಿ ಸದ್ಯ 100ಕ್ಕೂ ಹೆಚ್ಚು ಬಗೆಯ ತಿಂಡಿಗಳು ಲಭ್ಯವಿದೆ ಎನ್ನುತ್ತಾರೆ.

ಇಲ್ಲಿ 20ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ದಾವಣಗೆರೆ ಬಳ್ಳಾರಿಯಿಂದಲೂ ಬಂದಿರುವ ಕೆಲಸಗಾರರು ಇಲ್ಲಿದ್ದು ಅವರಿಗೆ ವಸತಿ ಸೌಲಭ್ಯವನ್ನೂ ಈ ದಂಪತಿಗಳೇ ಕಲ್ಪಿಸಿಕೊಟ್ಟಿದ್ದಾರೆ. ಪ್ರತಿನಿತ್ಯ 10 ರಿಂದ 12 ಸಾವಿರ ಚಪಾತಿಯನ್ನು ತಯಾರಿಸಲಾಗುತ್ತದೆ. ನಿತ್ಯವೂ ಒಂದಿಲ್ಲಾ ಒಂದು ತಿಂಡಿಗೆ ಆರ್ಡರ್ ಬರುತ್ತಲೇ ಇರುತ್ತದೆ.

" ನಾನು ಶಾಲೆಗೆ ಹೋಗಿಲ್ಲ. ನನ್ನ ಹೆಂಡತಿ ಲಕ್ಷ್ಮೀ  10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದಾಳೆ. ಈಗ ಮಗಳು ವ್ಯವಹಾರಕ್ಕೆ ಬೇಕಾದ ಇಂಗ್ಲೀಷ್ ಕಲಿಸಿಕೊಡುತ್ತಿದ್ದಾಳೆ. ಚಪಾತಿ ಮನೆ ಅಭಿವೃದ್ಧಿಗೆ ಲಕ್ಷ್ಮೀ ತುಂಬಾ ಕಷ್ಟಪಟ್ಟಿದ್ದಾಳೆ. ಗ್ರಾಹಕರ ಪ್ರೋತ್ಸಾಹವೇ ನಮಗೆ ದೊಡ್ಡ ಶಕ್ತಿ."
–ಎಚ್.ವಿ. ಲಕ್ಷ್ಮಣರಾವ್, ಮಾಲೀಕರು

ಕಳಪೆಮಟ್ಟದ ತಯಾರಿ ಸಲ್ಲ…

ಚಪಾತಿ ಮನೆಯ ಮೊದಲ ಆಕರ್ಷಣೆ ಸ್ವಚ್ಛತೆ. ಮಹಿಳಾ ಕೆಲಸಗಾರರೇ ಹೆಚ್ಚಿದ್ದು ಎಲ್ಲ ಬಗೆಯ ಅಡುಗೆ ಪರಿಕರಗಳನ್ನು ಶುದ್ಧವಾಗಿ ಇರಿಸಿಕೊಂಡಿದ್ದಾರೆ. ತರಕಾರಿಯನ್ನೂ ಚೆನ್ನಾಗಿ ತೊಳೆದು ಅಡುಗೆಗೆ ಬಳಸುತ್ತೇವೆ. ಪರಿಶುದ್ಧ ಅಡುಗೆ ಎಣ್ಣೆಯನ್ನೇ ಬಳಕೆ ಮಾಡುತ್ತೇವೆ. ತುಪ್ಪದ ಬಳಕೆ ವಿಚಾರದಲ್ಲೂ ಎಚ್ಚರ ತಪ್ಪುವುದಿಲ್ಲ. ಅಡುಗೆ ಮಾಡುವ ಸ್ಥಳ ಸ್ವಚ್ಛವಾಗಿಟ್ಟುಕೊಳ್ಳುವುದು ಆದ್ಯ ಕರ್ತವ್ಯ.

ಮೂರು ಶಾಖೆ

ಕಾರ್ಮೋಡ ಸರಿದು ಬೆಳಕು ಮೂಡಿದಂತೆ ಕಷ್ಟಗಳನ್ನು ದಾಟಿಕೊಂಡು ಬಂದ ಚಪಾತಿ ಮನೆ ದಿನದಿಂದ ದಿನಕ್ಕೆ ಜನಪ್ರಿಯಗೊಳ್ಳುತ್ತಿದೆ. ಉತ್ತಮ ಗುಣಮಟ್ಟ ಹಾಗೂ ರುಚಿಯೇ ನಮ್ಮ ಸಾಧನೆಗೆ ದಾರಿ ಎಂದು ನಂಬಿರುವ ರಾವ್ ದಂಪತಿ ಕಳೆದ 8 ವರ್ಷದಿಂದ ಸರಸ್ವತಿಪುರದಲ್ಲಿ ಕೌಂಟರ್ ಒಂದನ್ನು ಆರಂಭಿಸಿದರು. ಬೇಡಿಕೆ ಹೆಚ್ಚುತ್ತಿದ್ದಂತೆ ಐದು ವರ್ಷದ ಹಿಂದೆ ವೆಂಕಟೇಶ್ವರ ದೇವಸ್ಥಾನದ ಹಿಂಭಾಗ ಹಾಗೂ ನಾಲ್ಕು ವರ್ಷದ ಹಿಂದೆ ಮಲ್ಲೇಶ್ವರದಲ್ಲಿಯೂ ನೂತನ ಶಾಖೆ ಪ್ರಾರಂಭಿಸಿದ್ದಾರೆ.

ಕಲಿವ ಖುಷಿ

ಲಕ್ಷ್ಮಣರಾವ್ ಹಾಗೂ ಲಕ್ಷ್ಮೀದೇವಿ ದಂಪತಿಗೆ ಈ ಕ್ಷೇತ್ರ ಹೊಸದು. ಮಾನಸಿಕ ಸ್ಥೈರ್ಯಕ್ಕೆ ಕೊರತೆ ಇಲ್ಲದಿದ್ದರು ಸಾಧನೆಯ ಜವಾಬ್ದಾರಿ ಇವರ ಮೇಲೆಯೇ ಇತ್ತು. ಹೀಗಾಗಿ ಲಕ್ಷ್ಮೀದೇವಿ ಸ್ವತಃ ಹೊಸ ಹೊಸ ತಿನಿಸುಗಳ ಹದವನ್ನು ಕಲಿತುಕೊಂಡರು. ಮೊದಲು ಅಮ್ಮನಿಂದ ಅಡುಗೆ ತಂತ್ರ ತಿಳಿದುಕೊಂಡಿದ್ದ ಅವರು ಇತ್ತೀಚೆಗೆ ಅಂತರ್ಜಾಲ, ಅಡುಗೆ ಪುಸ್ತಕಗಳನ್ನು ನೋಡಿಕೊಂಡು ತಿಂಡಿಯ ಹದ ಸಿಗುವವರೆಗೂ ಪ್ರಯತ್ನಿಸುತ್ತಾರೆ. ನಂತರ ಕೆಲಸಗಾರರಿಗೆ ಅದನ್ನು ಹೇಳಿಕೊಟ್ಟು ಮಾಡಿಸುತ್ತಾರೆ.

" ಕೆಲಸಗಾರರ ವಿಷಯದಲ್ಲಿ ನಾವು ಪುಣ್ಯವಂತರು. ಮನೆಯ ಮಕ್ಕಳಂತೆಯೇ ಅವರು ಇದ್ದಾರೆ. ಹೆಂಗಸರೇ ಹೆಚ್ಚಿರುವುದರಿಂದ ಸ್ವಚ್ಛತೆಯ ಸಮಸ್ಯೆ ಎಂದೂ ಆಗಿಲ್ಲ. ಗೌರಿ ಹಬ್ಬದಲ್ಲಿ ಹೆಂಗಸರಿಗೆ ಸೀರೆ, ಗಂಡಸರಿಗೆ ಶರ್ಟ್ ನೀಡುವ ಸಂಪ್ರದಾಯವನ್ನೂ ಇರಿಸಿಕೊಂಡಿದ್ದೇವೆ."
- ಲಕ್ಷ್ಮೀ ದೇವಿ, ಮಾಲೀಕರು

ಸಿಸಿ ಕ್ಯಾಮೆರಾದ ಕಣ್ಣಾಗಾವಲು

ಮೂರು ಕಟ್ಟಡಗಳಲ್ಲಿ ಚಪಾತಿ ಮನೆ ಕೆಲಸಗಳು ನಡೆಯುತ್ತಿರುತ್ತವೆ. ಅಲ್ಲೆಲ್ಲಾ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮನೆಯಲ್ಲಿಯೇ ಕುಳಿತು ಎಲ್ಲ ಕೆಲಸವನ್ನೂ ವೀಕ್ಷಿಸಲಾಗುತ್ತದೆ. ಹಿಟ್ಟು ನಾದುವುದರಲ್ಲಿ, ಅಳತೆ ಹಾಕುವುದರಲ್ಲಿ ತುಸು ವ್ಯತ್ಯಾಸವಾದರೂ ಥಟ್ಟನೆ ಫೋನಾಯಿಸಿ ಅದನ್ನು ಸರಿಪಡಿಸಲಾಗುತ್ತದೆ.

ಅಧಿಕ ಬೇಡಿಕೆ

ನಮ್ಮಲ್ಲಿ ತಯಾರಾಗುವ ತಿಂಡಿಗಳಿಗೆ ವಿಪರೀತ ಬೇಡಿಕೆ ದಿನೇ ದಿನೆ ಹೆಚ್ಚುತ್ತಿದೆ. ಅನ್ನ, ರಸಂ, ಸಾಂಬಾರ್, ಪಲ್ಯದ ಪಾರ್ಸೆಲ್ ಸಹ ಲಭ್ಯವಿದೆ. ದಿನಕ್ಕೆ ಕನಿಷ್ಠ 30 ಊಟ ಹೊರಗೆ ಹೋಗುತ್ತೆ. ಇನ್ನು ಬಿಸಿಬೇಳೆ ಬಾತ್, ವಾಂಗಿಬಾತ್, ಪುಳಿಯೋಗರೆ, ಅಕ್ಕಿರೊಟ್ಟಿ, ಒತ್ತು ಶಾವಿಗೆ, ಕಾಯಿ ಕಡುಬು, ನೀರು ದೋಸೆಗಳನ್ನು ಮೆಲ್ಲುವವರ ಸಂಖ್ಯೆ ಕಡಿಮೆಯೇನಿಲ್ಲ. ವಿವಿಧ ಬಗೆಯ ಹೋಳಿಗೆ ಲಭ್ಯವಿದ್ದು ಒಂದೇ ದಿನದಲ್ಲಿ 5000 ಹೋಳಿಗೆ ಮಾಡಿದ್ದೂ ಇದೆ. ಹಬ್ಬದ ಸಂದರ್ಭದಲ್ಲಿ ಬೇಡಿಕೆ ಹೆಚ್ಚುವುದರಿಂದ ಕೇಟರಿಂಗ್ ಆರ್ಡರ್​ಗಳನ್ನು ಇವರು ಅಷ್ಟಾಗಿ ಪಡೆಯುವುದಿಲ್ಲ. ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲಂತೂ ಆರ್ಡರ್ ಸುರಿಮಳೆ ಎದುರಿಸುವ ಚಪಾತಿ ಮನೆಯಲ್ಲಿ ಪ್ರತಿನಿತ್ಯ ಬೆಳಿಗ್ಗೆ 6.45ರಿಂದ ರಾತ್ರಿ 9.30ರವರೆಗೂ ಕೆಲಸ ನಡೆಯುತ್ತಿರುತ್ತದೆ.

ಇವೆಲ್ಲವೂ ಲಭ್ಯ

ಬಗೆಬಗೆಯ ಚಪಾತಿ, ಜೋಳದ ರೊಟ್ಟಿ, ಪರೋಟಾ, ಒತ್ತು ಶಾವಿಗೆ, ನೀರು ದೋಸೆ, ರೈಸ್​ಬಾತ್, ಅಕ್ಕಿ/ರಾಗಿ ರೊಟ್ಟಿ, ಇಡ್ಲಿ, ತಟ್ಟೆ ಇಡ್ಲಿ, ಪಲ್ಯಗಳು, ಹೋಳಿಗೆ, ಕಜ್ಜಾಯ, ಸಮೋಸ, ಬಗೆಬಗೆ ಹೋಳಿಗೆ, ಹಾಲ್ಬಾಯಿ, ಕರ್ಜಿಕಾಯಿ, ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ, ಮದ್ದೂರುವಡೆ, ಬೆಣ್ಣೆ ಮುರುಕು, ಈರುಳ್ಳಿ ಪರೋಟ, ಸಮೋಸ, ಹಪ್ಪಳ, ಸಂಡಿಗೆ, ಚಟ್ನಿಪುಡಿ, ಬಾತ್ ಪುಡಿಗಳು, ಉಪ್ಪಿನಕಾಯಿ ಇತ್ಯಾದಿ.

ಭಾನುವಾರದಂದು ಒತ್ತು ಶಾವಿಗೆ, ನೀರುದೋಸೆ, ಅಕ್ಕಿರೊಟ್ಟಿ, ಇಡ್ಲಿವಡಾ, ರೈಸ್ಬಾತ್, ಉಪ್ಪಿಟ್ಟು ಕೇಸರಿ ಬಾತ್ ವಿಶೇಷ. ಚಪಾತಿ ಮನೆಯಲ್ಲಿ ಆಹಾರ ಸೇವನೆಗೆ ಅವಕಾಶವಿಲ್ಲ. ಇಲ್ಲಿ ಕೇವಲ ಪಾರ್ಸೆಲ್ ಸೇವೆ ಮಾತ್ರ ಲಭ್ಯ. ಹೀಗಾಗಿ ಶುಚಿತ್ವದ ಬಗ್ಗೆ ಟೆನ್ಷನ್​ ಕೊಂಚ ಕಡಿಮೆ.

ಇದನ್ನು ಓದಿ:

1. ಪ್ರಾಣಿಗಳ ಬಗ್ಗೆ ಅರಿವು ಮೂಡಿಸುವ ಗೆರ್ರಿ ಮಾರ್ಟಿನ್

2. ಪ್ರಾಧ್ಯಾಪಕ ವೃತ್ತಿ ಬಿಟ್ಟು ಬ್ರೆಡ್ ಉದ್ಯಮದಲ್ಲಿ ಸೈ ಎನಿಸಿಕೊಂಡ ಎಂ.ಮಹಾದೇವನ್..

3. ಪೂಜಾ ಐಟಂಗಳ ಬಗ್ಗೆ ಟೆನ್ಷನ್​ ಬಿಟ್ಟುಬಿಡಿ- ರೆಡಿಪೂಜಾ.ಕಾಂನಲ್ಲಿ ಆರ್ಡರ್​ ಮಾಡಿ..!

Related Stories