ಬ್ಲಾಗ್‍ನಿಂದಲೂ ದುಡ್ಡು ಮಾಡಬಹುದು ಗೊತ್ತಾ..?

ಟೀಮ್ ವೈ.ಎಸ್.

ಬ್ಲಾಗ್‍ನಿಂದಲೂ ದುಡ್ಡು ಮಾಡಬಹುದು ಗೊತ್ತಾ..?

Monday October 05, 2015,

7 min Read

ಬ್ಲಾಗ್ ಬರೆಯುವುದು ಬಹುತೇಕರಿಗೆ ಹವ್ಯಾಸ. ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಉತ್ತಮ ಮಾರ್ಗ ಬ್ಲಾಗ್. ಹಾಗೆಯೇ, ಆನ್‍ಲೈನ್ ಮೂಲಕ ದುಡ್ಡು ಮಾಡುವ ಹಾದಿ ಕೂಡಾ. ಭಾರತದಲ್ಲಿನ ಬ್ಲಾಗರ್‍ಗಳು ಹಣ ಮಾಡುವುದು ಸಾಧ್ಯವಿಲ್ಲ ಎನ್ನುವುದು ಸಾಮಾನ್ಯ ಅಭಿಪ್ರಾಯ. ಆದರೆ, ಅದೇ ನಿಜವಲ್ಲ. ಭಾರತದ ಪ್ರಮುಖ ಬ್ಲಾಗರ್‍ಗಳು ಕೂಡಾ ಬ್ಲಾಗಿಂಗ್‍ನಿಂದ ಲಕ್ಷಾಂತರ ರೂಪಾಯಿ ದುಡಿಯುತ್ತಿದ್ದಾರೆ. ನಿಮ್ಮಲ್ಲೂ ಬ್ಲಾಗ್ ಇದ್ದರೆ, ಅದರಿಂದ ದುಡಿಮೆ ಮಾಡಿಕೊಳ್ಳದೇ ಇದ್ದರೆ, ಇದೇ ಸರಿಯಾದ ಸಮಯ. ದುಡ್ಡು ಮಾಡಲು ಶುರು ಮಾಡಿ.

ಬ್ಲಾಗ್‍ನಿಂದ ದುಡ್ಡು ಮಾಡಲು ಇರುವ 5 ಮುಖ್ಯ ಹಾದಿಗಳು ಇಲ್ಲಿವೆ…

image


1. ಜಾಹೀರಾತು ಜಾಲ

ಇದು ಹಣ ಮಾಡುವ ಸರಳ ವಿಧಾನ. ತಮ್ಮ ಬ್ಲಾಗ್ ಮೂಲಕ ಮೊದಲ ಬಾರಿಗೆ ವ್ಯವಹಾರ ಮಾಡಲು ಉದ್ದೇಶಿಸುವವರಿಗೆ ಇದು ಸರಿಯಾದ ವಿಧಾನವೂ ಹೌದು. ಈ ವಿಧಾನವನ್ನು ಜಗತ್ತಿನೆಲ್ಲೆಡೆ ವ್ಯಾಪಕವಾಗಿ ಬಳಸಲಾಗುತ್ತಿದೆ.

ಇದು ಹೇಗೆ ಕೆಲಸ ಮಾಡುತ್ತದೆ? : ನಿಮ್ಮ ಬ್ಲಾಗ್‍ನಲ್ಲಿ ನೀವು ಜಾಹೀರಾತು ಹಾಕಬಹುದು. ನಿಮ್ಮ ಓದುಗ ಆ ಜಾಹೀರಾತನ್ನು ಕ್ಲಿಕ್ ಮಾಡಿದರೆ, ಜಾಹೀರಾತುದಾರರಿಂದ ನೀವು ಕಮಿಷನ್ ಪಡೆಯಬಹುದು.

ಬ್ಲಾಗ್‍ನಲ್ಲಿ ಇದನ್ನು ಅಳವಡಿಸುವುದು ಹೇಗೆ? :

1. ಜಾಹೀರಾತು ಜಾಲವೊಂದನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಗೂಗಲ್‍ನ ಆಡ್‍ಸೆನ್ಸ್ ಬಹುತೇಕ ಬ್ಲಾಗರ್‍ಗಳು ಮತ್ತು ಜಾಹೀರಾತುದಾರರ ಮೊದಲ ಆಯ್ಕೆಯಾಗಿದೆ. ಬಿಡ್‍ವೆರ್ಟೈಸರ್ ಮತ್ತು ಇನ್‍ಫೋಲಿಂಕ್ಸ್ ಜಾಲಗಳನ್ನೂ ಸಂಪರ್ಕಿಸಬಹುದು.

2. ಜಾಹೀರಾತು ಜಾಲದಲ್ಲಿ ಪಬ್ಲಿಷರ್ ಆಗಲು ನೋಂದಣಿ ಮಾಡಿಕೊಳ್ಳಿರಿ. ಈ ಅರ್ಜಿಯಲ್ಲಿ ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿಗಳನ್ನು ನೀಡಬೇಕಾಗುತ್ತದೆ. ಆ ಖಾತೆಗೆ ಜಾಹೀರಾತು ಕಮೀಷನ್ ಜಮೆಯಾಗುತ್ತದೆ.

3. ನಿಮ್ಮ ಅರ್ಜಿ ಆಯ್ಕೆಯಾದರೆ, ಜಾಹೀರಾತು ಜಾಲವು ನಿಮಗೆ ಕನ್‍ಫರ್ಮೇಷನ್ ಕಳುಹಿಸುತ್ತದೆ

4. ಕನ್‍ಫರ್ಮ್ ಆದ ಮೇಲೆ ಜಾಹೀರಾತು ಜಾಲವು ಜಾಹೀರಾತುಗಳ ಕೋಡ್ ಕಳುಹಿಸುತ್ತದೆ. ಆ ಕೋಡನ್ನು ನಿಮ್ಮ ಬ್ಲಾಗ್‍ನಲ್ಲಿ ಹಾಕಿದರೆ, ಜಾಹೀರಾತು ಪ್ರಕಟವಾಗುತ್ತದೆ.

5. ನಿಮ್ಮ ಜಾಹೀರಾತಿನ ಕೋಡನ್ನು ಸರಿಯಾಗಿ ಪ್ರಕಟಿಸಿದರೆ ಸಾಕು, ನಿಮ್ಮ ಜಾಹೀರಾತು ಜಾಲವು ಆ ಸ್ಥಳದಲ್ಲಿ ಕೆಲವೇ ಗಂಟೆಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸುತ್ತದೆ.

6. ಅಲ್ಲಿಗೆ ನಿಮ್ಮ ಕೆಲಸ ಮುಗಿಯಿತು. ಇನ್ನೇನಿದ್ದರೂ ನಿಮ್ಮ ಓದುಗರು ಅದನ್ನು ಕ್ಲಿಕ್ ಮಾಡುವ ಮೂಲಕ ನಿಮಗೆ ಹಣ ತಂದುಕೊಡಬೇಕು ಅಷ್ಟೇ.

ನೀವೆಷ್ಟು ಸಂಪಾದಿಸಬಹುದು?

ಪ್ರತಿ ಕ್ಲಿಕ್‍ಗೂ 0.01 ಡಾಲರ್‍ನಿಂದ 50 ಡಾಲರ್ ವರೆಗೆ ಸಂಪಾದಿಸಬಹುದು. ನಿಮ್ಮ ಬ್ಲಾಗ್‍ನ ವಿಷಯ ಆಧರಿಸಿ, ಜಾಹೀರಾತುದಾರರು ನಿಮಗೆ ಹಣ ಪಾವತಿಸುತ್ತಾರೆ. ನಿಮ್ಮ ಬ್ಲಾಗ್‍ನ ಜಾಹೀರಾತುಗಳನ್ನು ಎಷ್ಟು ಜನ ವೀಕ್ಷಿಸುತ್ತಾರೆ ಎನ್ನುವುದರ ಮೇಲೆ ನಿಮ್ಮ ಆದಾಯ ನಿಂತಿದೆ.

ಹೆಚ್ಚು ಸಂಪಾದಿಸಲು ಸಲಹೆ: 

ನಿಮ್ಮ ಜಾಹೀರಾತು ಸ್ಥಳವನ್ನು ಸರಿಯಾಗಿ ಗಮನಿಸುತ್ತಿರಿ. ಯಾವ ಸ್ಥಳದಲ್ಲಿ ಹೆಚ್ಚು ಕ್ಲಿಕ್‍ಗಳು ಸಿಗುತ್ತವೆ, ಯಾವ ರೀತಿಯ ಜಾಹೀರಾತುಗಳಿಗೆ ಹೆಚ್ಚು ಕ್ಲಿಕ್‍ಗಳು ಸಿಗುತ್ತಿವೆ ಎನ್ನುವುದನ್ನು ಗಮನಿಸಿ. ನಿಮಗೆ ಹೆಚ್ಚು ಲಾಭ ಬರುವವರೆಗೆ ಎಲ್ಲವನ್ನೂ ಪ್ರಯೋಗ ಮಾಡುತ್ತಿರಿ.

2. ಸಂಬಂಧಿತ ಮಾರುಕಟ್ಟೆ : 

ಈ ವಿಧಾನದಿಂದ ನೀವು ಹೆಚ್ಚು ಹಣ ಸಂಪಾದಿಸಬಹುದು. ನಿಮ್ಮ ಓದುಗರಿಗೆ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ನೀವು ಗಳಿಕೆಯ ಹಾದಿ ಹಿಡಿಯಬಹುದು. ನಿಮ್ಮ ಓದುಗ ಏನನ್ನು ಖರೀದಿಸಲು ಬಯಸುತ್ತಾನೆ ಎಂಬುದರ ಬಗ್ಗೆ ನಿಮಗೆ ಮಾಹಿತಿ ಇರಬೇಕು. ಆದರೆ, ಈ ವಿಧಾನ ಆರಿಸಿಕೊಂಡಾಗ, ನಿಮ್ಮ ಓದುಗರಿಗೆ ಉತ್ಪನ್ನಗಳ ಪ್ರಚಾರವೇ ಜಾಸ್ತಿಯಾಗ್ತಿದೆ ಎನ್ನುವ ಅನಿಸಿಕೆ ಬರಬಾರದು. ಪ್ರತಿಬಾರಿಯೂ ಪ್ರಚಾರ ಮಾಡುವ ಮೂಲಕ ಅವರ ನಿಜವಾದ ಅಭಿರುಚಿಗೆ ವಂಚನೆ ಮಾಡಬೇಡಿ.

ಇದು ಹೇಗೆ ಕೆಲಸ ಮಾಡುತ್ತದೆ?

ನೀವು ಬಯಸುವ ಉತ್ಪನ್ನಗಳ ಜಾಹೀರಾತು ಅಥವಾ ಅದರ ಲಿಂಕ್ ಅನ್ನು ನಿಮ್ಮ ಬ್ಲಾಗ್‍ನಲ್ಲಿ ಪ್ರದರ್ಶಿಸಬೇಕು. ನಿಮ್ಮ ಓದುಗ, ಈ ಜಾಹೀರಾತನ್ನು ಕ್ಲಿಕ್ ಮಾಡಿ ಖರೀದಿ ಮಾಡಿದರೆ, ಉತ್ಪಾದಕರು ನಿಮಗೆ ದೊಡ್ಡ ಪ್ರಮಾಣದಲ್ಲಿ ಕಮೀಷನ್ ನೀಡುತ್ತಾರೆ.

ನಿಮ್ಮ ಬ್ಲಾಗ್‍ನಲ್ಲಿ ಇದನ್ನು ಅಳವಡಿಸುವುದು ಹೇಗೆ?:

1. ನೀವು ಜೊತೆಗೂಡಲು ಬಯಸುವ ಉತ್ಪನ್ನ ಅಥವಾ ಸೇವೆಯನ್ನು ಆರಿಸಿಕೊಳ್ಳಿರಿ. ಕ್ಲಿಕ್‍ಬ್ಯಾಂಕ್, ಒಎಮ್‍ಜಿ ಇಂಡಿಯಾ, ಟ್ರೂಟ್ರಾಕ್ ಮೀಡಿಯಾ ಮೊದಲಾದವುಗಳು ಪ್ರಮುಖ ಜಾಲಗಳಾಗಿವೆ. ಫ್ಲಿಪ್‍ಕಾರ್ಟ್, ಅಮೇಜಾನ್ ಮೊದಲಾದ ಸಂಸ್ಥೆಗಳು ನೀಡುವ ಜಾಹೀರಾತುಗಳನ್ನು ನೀವು ನೇರವಾಗಿ ಪಡೆದುಕೊಳ್ಳಬಹುದು.

2. ನೀವು ಬಯಸುವ ವೆಬ್‍ಸೈಟ್‍ನ ಜೊತೆಗಾರನಾಗಲೂ ಅವಕಾಶವಿದೆ. ಇಲ್ಲಿ ನೀವು ನಿಮ್ಮ ಬ್ಲಾಗ್‍ನ ಪ್ರಚಾರಕ್ಕೆ ಬಳಸುವ ವಿಧಾನಗಳ ಕುರಿತು ಮಾಹಿತಿ ನೀಡಬೇಕಾಗುತ್ತದೆ.

3. ಬಹುತೇಕ ವೆಬ್‍ಸೈಟ್‍ಗಳು ನಿಮ್ಮ ಅರ್ಜಿಯನ್ನು ಸ್ವೀಕರಿಸಲು ಅಥವಾ ತಿರಸ್ಕರಿಸಲು 24-72 ಗಂಟೆಗಳ ಸಮಯ ತೆಗೆದುಕೊಳ್ಳುತ್ತವೆ.

4. ಒಮ್ಮೆ ಸ್ವೀಕೃತವಾಗಿಬಿಟ್ಟರೆ, ನೀವು ಆ ವೆಬ್‍ಸೈಟ್‍ನ ಖಾತೆಗೆ ಲಾಗಿನ್ ಮಾಡಬಹುದು. ಅಲ್ಲಿಂದ ನೀವು ಬಯಸುವ ಉತ್ಪನ್ನಗಳ ಜಾಹೀರಾತನ್ನು ನಿಮ್ಮ ಬ್ಲಾಗ್‍ನಲ್ಲಿ ಪ್ರದರ್ಶಿಸಬಹುದು.

5. ನೀವು ಬಯಸುವ ಜಾಹೀರಾತು ಲಿಂಕನ್ನು ನಿಮ್ಮ ಬ್ಲಾಗ್‍ನಲ್ಲಿ ಪ್ರದರ್ಶಿಸಿ, ಬಳಿಕ ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಗಮನಿಸಿ.

6. ನೀವೀಗ ಹಣ ಪಡೆಯಲು ಸಿದ್ಧರಾಗಿದ್ದೀರಿ. ನಿಮ್ಮ ಓದುಗರು ಲಿಂಕನ್ನು ಕ್ಲಿಕ್ ಮಾಡಿ ಖರೀದಿ ಮಾಡಿದರೆ ನಿಮಗೆ ಉತ್ಪಾದಕರಿಂದ ಕಮೀಷನ್ ದೊರೆಯುತ್ತದೆ.

ನೀವು ಎಷ್ಟು ಸಂಪಾದಿಸಬಹುದು?:

ನಿಮಗೆ ಮಾರಾಟವಾಗುವ ವಸ್ತುವಿನ ಮೇಲೆ ಸಿಗುವ ಕಮೀಷನ್ ಬೇರೆ ಬೇರೆ ರೀತಿಯಲ್ಲಿರುತ್ತದೆ. ವೆಬ್‍ಸೈಟ್ ಮತ್ತು ಉತ್ಪನ್ನವನ್ನು ಆಧರಿಸಿ ಇದು ನಿರ್ಧರಿಸಲ್ಪಡುತ್ತದೆ. 2.5% ನಿಂದ 50%ವರೆಗೂ ನಿಮಗೆ ಆದಾಯ ಸಿಗಬಹುದು. ಅಲ್ಲದೆ, ನಿಮ್ಮ ಆದಾಯವು ಓದುಗ ಖರೀದಿಸುವ ವಸ್ತುವನ್ನಾಧರಿಸುತ್ತದೆ. ಉದಾಹರಣೆ, ಫ್ಲಿಪ್‍ಕಾರ್ಟ್‍ನಲ್ಲಿ ಓದುಗ ಬಟ್ಟೆ ಖರೀದಿ ಮಾಡಿದರೆ ನಿಮ್ಮ ಕಮೀಷನ್ ಹೆಚ್ಚಾಗಿರುತ್ತದೆ. ಅದೇ ಮೊಬೈಲ್ ಫೋನ್ ಖರೀದಿಸಿದರೆ, ಕಮೀಷನ್ ಪ್ರಮಾಣ ಕಡಿಮೆ ಇರುತ್ತದೆ.

3. ಹೆಚ್ಚು ಸಂಪಾದಿಸಲು ಸಲಹೆ: 

ನಿಮ್ಮ ಓದುಗರು ಮತ್ತು ನಿಮ್ಮ ಬ್ಲಾಗ್ ವಿಷಯಕ್ಕೆ ಸಂಬಂಧಿಸಿದ ಉತ್ಪನ್ನಗಳನ್ನು ಹೆಚ್ಚು ಪ್ರದರ್ಶಿಸಿ, ಇದರಿಂದಾಗಿ ನಿಮಗೆ ಹೆಚ್ಚಿನ ಕನ್‍ವರ್ಷನ್ ಆಗುತ್ತದೆ. ಹಾಗೂ ಮಾರಾಟವೂ ಹೆಚ್ಚುತ್ತದೆ. ಜನಪ್ರಿಯ ಉತ್ಪನ್ನಗಳ ಮಾರಾಟ ಹೆಚ್ಚಾಗಿರುವುದರಿಂದ ನಿಮಗೆ ಸಿಗುವ ಕಮೀಷನ್ ಪ್ರಮಾಣ ಕಡಿಮೆಯಾಗಿರುತ್ತದೆ. ಹೀಗಾಗಿ, ಖರೀದಿಯಾಗಬಲ್ಲ ಆದರೆ ಕಡಿಮೆ ಜನಪ್ರಿಯತೆಯ ಉತ್ಪನ್ನಗಳನ್ನು ಪ್ರದರ್ಶಿಸಿ. ಇದರಿಂದ ನಿಮಗೆ ಹೆಚ್ಚಿನ ಕಮೀಷನ್ ಕೂಡಾ ದೊರೆಯುತ್ತದೆ.

4. ನಿಮ್ಮ ಸ್ವಂತ ಉತ್ಪನ್ನ ಮಾರಾಟ:

ನಿಮ್ಮ ಸ್ವಂತ ಉತ್ಪನ್ನಗಳನ್ನು ಮಾರಾಟ ಮಾಡುವುದು ಹೆಚ್ಚು ಲಾಭದಾಯಕ ಕೆಲಸವಾಗಿದೆ. ಇದು ಅತ್ಯಂತ ಸ್ಥಿರ ಆದಾಯ ತರುವ ವಿಧಾನವಾಗಿದೆ. ಹಾಗೂ ಈ ವಿಧಾನದ ಮೇಲೆ ನಿಮಗೆ ಸಂಪೂರ್ಣ ಹಿಡಿತವಿರುತ್ತದೆ. ಉತ್ಪನ್ನದ ತಯಾರಿಕೆ, ದರನಿಗದಿ, ಪ್ರಚಾರ ಎಲ್ಲದಕ್ಕೂ ನೀವೇ ಮಾಲೀಕರಾಗಿರುತ್ತೀರಿ. ನೀವು ಎಷ್ಟು ಶ್ರಮ ಹಾಕುತ್ತೀರೋ ಅಷ್ಟು ಹೆಚ್ಚು ಹಣ ನಿಮ್ಮದಾಗುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ?

ನೀವು ನಿಮ್ಮ ಅನುಭವ ಆಧರಿಸಿ, ವಸ್ತು/ಸೇವೆಯನ್ನು ತಯಾರಿಸಿ ಅದನ್ನು ನಿಮ್ಮ ಓದುಗರಿಗೆ ಬ್ಲಾಗ್ ಮೂಲಕ ಮಾರಾಟ ಮಾಡಿ.

ಬ್ಲಾಗ್‍ನಲ್ಲಿ ಅಳವಡಿಸುವುದು ಹೇಗೆ?

1. ನಿಮ್ಮ ಕೈಯ್ಯಾರೆ ಉತ್ಪನ್ನ/ಸೇವೆಯನ್ನು ತಯಾರಿಸಿ ಅಥವಾ ಬೇರೊಬ್ಬರ ಮೂಲಕ ತಯಾರಿಸಿಕೊಳ್ಳಿ. ಪುಸ್ತಕಗಳು, ಕುಕ್ಕೀಸ್, ಡಿಐವೈ ಕಿಟ್ಸ್ ಅಥವಾ ಇ-ಪುಸ್ತಕಗಳು, ವಿಡಿಯೋ ಕೋರ್ಸ್‍ಗಳು ಹೀಗೆ ನಿಮ್ಮಿಂದ ಸಾಧ್ಯವಾಗುವ ಉತ್ಪನ್ನಗಳನ್ನು ಮಾರಾಟ ಮಾಡಬಹುದು.

2. ನಿಮ್ಮ ಉತ್ಪನ್ನಕ್ಕೆ ಸರಿಯಾದ ಬೆಲೆ ನಿಗದಿಪಡಿಸಿ. ಗ್ರಾಹಕರಿಗೆ ಅದನ್ನು ತಲುಪಿಸುವ ವ್ಯವಸ್ಥೆಯನ್ನು ಮಾಡಿಕೊಳ್ಳಿರಿ. ಕೊರಿಯರ್/ಮೇಲ್ ಮೂಲಕ ಕಳುಹಿಸುತ್ತೀರೋ ಅಥವಾ ಖುದ್ದಾಗಿ ಬಂದು ತೆಗೆದುಕೊಳ್ಳುವಂತೆ ಸೂಚಿಸುತ್ತೀರೋ? ಗ್ರಾಹಕ ಹೇಗೆ ಹಣ ಪಾವತಿ ಮಾಡಬೇಕು? ಪೇಪಾಲ್ ಅಥವಾ ಬ್ಯಾಂಕ್ ಟ್ರಾನ್ಸ್ ಫರ್, ನಗದು, ಚೆಕ್ ಹೀಗೆ ಗ್ರಾಹಕರ ಮತ್ತು ನಿಮಗೆ ಇಬ್ಬರಿಗೂ ಸಹಕಾರಿಯಾಗುವಂತಹ ಮಾಧ್ಯಮವನ್ನು ನೀವೇ ಆರಿಸಿಕೊಳ್ಳಬೇಕು.

3. ನಿಮ್ಮ ಉತ್ಪನ್ನಗಳ ಬಗ್ಗೆ ನಿಮ್ಮ ಬ್ಲಾಗ್‍ನಲ್ಲಿ ಹೇಳಲು ಪ್ರತ್ಯೇಕ ಪೇಜ್ ಒಂದನ್ನು ಮಾಡಿರಿ. ನಿಮ್ಮ ಉತ್ಪನ್ನಗಳ ಆಕರ್ಷಣೆಗಳು, ಉಪಯೋಗಗಳು, ಬಳಕೆ ಮೊದಲಾದ ವಿಚಾರಗಳನ್ನು ಹೇಳಿರಿ. ಜೊತೆಗೆ ಖರೀದಿಸಿ ಎಂಬ ಬಟನ್ ಅಳವಡಿಸಿರಿ.

4. ನಿಮ್ಮ ಉತ್ಪನ್ನಗಳನ್ನು ನಿಮ್ಮ ಓದುಗರಾಚೆಗೂ ತಲುಪಿಸಿ. ಮೇಲ್-ಮಾರ್ಕೆಟಿಂಗ್, ಸಾಮಾಜಿಕ ಜಾಲತಾಣಗಳ ಮೂಲಕ, ಆ್ಯಡ್ವರ್ಡ್ಸ್  ಮೊದಲಾದ ತಾಣಗಳ ಮೂಲಕ ಪ್ರಚಾರ ಮಾಡಿರಿ.

5. ನಿಮ್ಮ ಉತ್ಪನ್ನವನ್ನು ಮಾರಾಟ ಮಾಡಿ, ಹಣ ಗಳಿಸಿರಿ.

ನೀವು ಎಷ್ಟು ಸಂಪಾದಿಸಬಹುದು?: 

ಗಗನವೇ ಮಿತಿ ಎನ್ನುತ್ತಾರಲ್ಲ. ಹಾಗೆಯೇ, ದರನಿಗದಿಯಿಂದ ಆರಂಭಿಸಿ ಖರ್ಚು ಎಲ್ಲವೂ ನಿಮ್ಮ ಕೈಯಲ್ಲೇ ಇರುತ್ತದೆ. ಆದ್ದರಿಂದ ನಿಮ್ಮ ಆದಾಯ ನಿಮ್ಮ ಕೈಯಲ್ಲೇ ಇದೆ. ನಿಮ್ಮ ಉತ್ಪನ್ನವು ಚೆನ್ನಾಗಿದ್ದಷ್ಟು ಮಾರಾಟ ಜಾಸ್ತಿ. ಮಾರಾಟ ಜಾಸ್ತಿಯಾದಷ್ಟು ಆದಾಯವೂ ಜಾಸ್ತಿ ಎನ್ನುವುದು ನೆನಪಿರಲಿ.

ಹೆಚ್ಚು ಸಂಪಾದಿಸಲು ಸಲಹೆ: ನಿಮ್ಮ ಓದುಗರು ಯಾವ ರೀತಿಯ ಉತ್ಪನ್ನ ಖರೀದಿಸಲು ಬಯಸುತ್ತಾರೆ ಎನ್ನುವುದರ ಬಗ್ಗೆ ಮಾರುಕಟ್ಟೆ ಸಮೀಕ್ಷೆ ನಡೆಸಿ. ಅದರ ಫಲಿತಾಂಶದ ಆಧಾರದ ಮೇಲೆ ನೀವು ಉತ್ಪನ್ನಗಳನ್ನು ತಯಾರಿಸಿ. ಓದುಗರಿಗೆ ಇಷ್ಟವಾಗಿದ್ದನ್ನು ಕೊಟ್ಟರೆ, ಬಿಸಿ ಕೇಕ್‍ನಂತೆ ಖರ್ಚಾಗುವುದು ನಿಶ್ಚಿತ.

ಬ್ಲಾಗ್ ಮೂಲಕ ಫ್ರೀಲ್ಯಾನ್ಸ್

ನೀವು ಸುದೀರ್ಘ ಕಾಲದಿಂದ ಬ್ಲಾಗಿಂಗ್ ಮಾಡುತ್ತಿದ್ದರೆ, ನಿಮಗೆ ಖಂಡಿತವಾಗಿಯೂ ಬ್ಲಾಗ್ ಬಗ್ಗೆ ಜ್ಞಾನ, ಕೌಶಲ್ಯ ಮತ್ತು ಪರಣತಿ ಇದ್ದೇ ಇರುತ್ತದೆ. ನಿಮಗೆ ಡಿಸೈನಿಂಗ್ ಮತ್ತಿತರ ವಿಚಾರಗಳ ಬಗ್ಗೆ ಕೌಶಲ್ಯವಿದ್ದರೆ, ನಿಮ್ಮ ಬ್ಲಾಗ್ ಮೂಲಕ ಅದನ್ನೂ ಪ್ರಚಾರ ಮಾಡಬಹುದು. ನಿಮ್ಮ ಸೇವೆ ಪಡೆದುಕೊಳ್ಳಲು ಇಚ್ಚಿಸುವವರು ನಿಮ್ಮನ್ನು ಸಂಪರ್ಕಿಸಿ, ವ್ಯವಹಾರ ಕುದುರಿಸಿಕೊಳ್ಳಬಹುದು. ನಿಮಗೆ ಅಂತಹ ಜ್ಞಾನವಿಲ್ಲದೇ ಇದ್ದರೂ, ಹೊಸಬ್ಲಾಗಿಗರಿಗೆ ನಿಮಗೆ ಗೊತ್ತಿರುವಷ್ಟು ಮಾಹಿತಿ ನೀಡಿ ಅಲ್ಪಸ್ವಲ್ಪ ಸಂಪಾದಿಸಬಹುದು. ನಿಮ್ಮ ಸಲಹೆಗಾಗಿ ಹಣ ನೀಡಲು ತಯಾರಿರುವ ಜನರ ಸಂಖ್ಯೆ ನೋಡಿದರೆ ನಿಮಗೇ ಅಚ್ಚರಿಯಾದೀತು. ಇಲ್ಲಿಯವರೆಗೆ ನೀವು ಉಚಿತವಾಗಿ ಕೊಡುತ್ತಿದ್ದ ಸಲಹೆಗೆ ಈಗ ಹಣ ಪಡೆಯಬಹುದು.

ನಿಮ್ಮ ಬ್ಲಾಗ್‍ನಲ್ಲಿ ಅಳವಡಿಸುವುದು ಹೇಗೆ?:

1. ಫ್ರೀಲ್ಯಾನ್ಸರ್ (ಹವ್ಯಾಸಿ) ಯಾಗಿ ನೀವು ಯಾವ ಸೇವೆ ನೀಡಲು ಬಯಸುತ್ತೀರಿ ಎನ್ನುವುದನ್ನು ಬ್ಲಾಗ್‍ನಲ್ಲಿ ಬರೆಯಿರಿ.

2. ನಿಮ್ಮ ಸೇವೆಗಳನ್ನು ಪಟ್ಟಿ ಮಾಡಿ ಬ್ಲಾಗ್‍ನಲ್ಲಿ ಪ್ರತ್ಯೇಕ ಪುಟ ತೆರೆಯಿರಿ. ನಿಮ್ಮ ಸೇವೆಯನ್ನು ಯಾಕೆ ಬಳಸಿಕೊಳ್ಳಬೇಕು, ಅವರಿಗೆ ನೀವು ಯಾವ ಸಹಕಾರವನ್ನು ನೀಡುತ್ತೀರಿ?, ನಿಮ್ಮ ದರವೇನು? ಈ ಎಲ್ಲವನ್ನೂ ಅದರಲ್ಲಿ ನಮೂದಿಸಿ. ನಿಮ್ಮನ್ನು ಹೇಗೆ ಸಂಪರ್ಕಿಸಬೇಕು ಎನ್ನುವುದನ್ನೂ ಬರೆಯಿರಿ.

3. ನೀವು ನೀಡುವ ಸೇವೆಗಳ ಬಗ್ಗೆ ಓದುಗರಿಗೆ ತಿಳಿಸಿ ಮತ್ತು ಅವರು ನಿಮ್ಮ ಸೇವೆಯನ್ನು ಪಡೆದುಕೊಳ್ಳುವಂತೆ ಉತ್ತೇಜಿಸಿ. ಅವರ ಕುಟುಂಬ ಸದಸ್ಯರಿಗೂ ನಿಮ್ಮ ಸೇವೆಗಳ ಬಗ್ಗೆ ತಿಳಿಸುವಂತೆ ಹೇಳಿರಿ. ಪ್ರತಿನಿತ್ಯ ನಿಮ್ಮ ಬ್ಲಾಗ್‍ಗಳನ್ನು ಓದುವುದರಿಂದ ಅವರಿಗೂ ನಿಮ್ಮ ಪರಿಣತಿಯ ಬಗ್ಗೆ ಮಾಹಿತಿ ಇರುತ್ತದೆ.

4. ಜಾಹೀರಾತು, ಸಾಮಾಜಿಕ ಜಾಲತಾಣಗಳ ಮೂಲಕ ನಿಮ್ಮ ಸೇವೆಗಳ ಬಗ್ಗೆ ಪ್ರಚಾರ ಮಾಡಿ. ನಿಮ್ಮ ಸೇವೆಗಳ ಬಗ್ಗೆ ಬೇರೆ ಜನರು ತಿಳಿದುಕೊಳ್ಳುವುದರಿಂದ, ನಿಮಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಬಹುದು.

5. ನಿಮಗೆ ಯಾವುದಾದರು ಪ್ರಾಜೆಕ್ಟ್ ದೊರೆತಲ್ಲಿ, ಅದನ್ನು ಹೆಚ್ಚಿನ ವೃತ್ತಿಪರತೆಯಿಂದ ಮಾಡಿರಿ. ನಿಮ್ಮ ಬ್ಲಾಗ್ ಮೂಲಕ ಹಣ ಸಂಪಾದಿಸಲು ಆರಂಭಿಸಿ.

ನೀವು ಎಷ್ಟು ಸಂಪಾದಿಸಬಹುದು?

ನಿಮ್ಮ ಆದಾಯವು ನಿಮ್ಮ ಜ್ಞಾನವನ್ನು ಹಾಗೂ ನಿಮ್ಮ ಸೇವೆಗಳ ಜನಪ್ರಿಯತೆಯನ್ನು ಅವಲಂಬಿಸಿದೆ. ನೀವು ದರವನ್ನು ನಿಗದಿಪಡಿಸಿ. ನಿಮ್ಮ ವಲಯದಲ್ಲಿ ನೀವು ಪರಿಣತಿ ಪಡೆದಿದ್ದರೆ, ನಿಮ್ಮ ಆದಾಯವು ಗಗನಕ್ಕೇರಲಿದೆ.

ಹೆಚ್ಚು ಸಂಪಾದಿಸಲು ಸಲಹೆ: ನೀವು ಖರ್ಚಿಗಿಂತ ಕಡಿಮೆ ದರಕ್ಕೆ ಮಾರಬೇಡಿ. ನಿಮಗೆ ದರ ನಿಗದಿಪಡಿಸುವು ಕಷ್ಟ ಎನ್ನಿಸಿದರೆ, ನಿಮ್ಮ ಓದುಗರು ನಿಮ್ಮ ಸೇವೆಯನ್ನು ಎಷ್ಟು ಹಣಕ್ಕೆ ಖರೀದಿಸಬಹುದು ಎನ್ನುವುದರ ಬಗ್ಗೆ ಸಮೀಕ್ಷೆ ನಡೆಸಿ. ಬಹುತೇಕ ಬ್ಲಾಗರ್‍ಗಳು ಕಡಿಮೆ ಬೆಲೆಗೆ ಸೇವೆ ನೀಡಿ, ಆದಾಯಕ್ಕಿಂತ ನಷ್ಟವನ್ನೇ ಮಾಡಿಕೊಳ್ಳುತ್ತಿದ್ದಾರೆ.

5. ನಿಮ್ಮ ಬ್ಲಾಗ್‍ನಲ್ಲಿ ನೇರವಾಗಿ ಜಾಹೀರಾತು ಪ್ರಕಟಿಸುವುದು

ಇದು ಬ್ಲಾಗ್‍ನಿಂದ ಹಣ ಸಂಪಾದಿಸುವ ಮತ್ತೊಂದು ಅತ್ಯುತ್ತಮ ವಿಧಾನವಾಗಿದೆ. ಬಹುತೇಕ ಬ್ಲಾಗರ್‍ಗಳು ಈ ವಿಧಾನ ಬಳಸುತ್ತಾರೆ. ಇದು ಬಹುತೇಕ ಲಾಭದಾಯಕವೂ ಹೌದು. ಆಡ್ ನೆಟ್‍ವರ್ಕ್‍ಗಳಂತೆಯೇ ಇದೂ ಕೆಲಸ ಮಾಡುತ್ತದೆ. ಆದರೆ, ಇವುಗಳ ಅಳವಡಿಕೆಯಲ್ಲಿ ಭಾರೀ ವ್ಯತ್ಯಾಸವಿದೆ. ಆಡ್ ನೆಟವರ್ಕ್‍ಗಳಲ್ಲಾದರೆ, ನಿಮಗೆ ಪ್ರದರ್ಶಿಸಲ್ಪಡುವ ಜಾಹೀರಾತುಗಳ ಮೇಲೆ ಯಾವುದೇ ನಿಯಂತ್ರಣವಿರುವುದಿಲ್ಲ ಆದಾಯದ ಮೇಲೂ ನಿಯಂತ್ರಣವಿರುವುದಿಲ್ಲ. ಆದರೆ, ಇಲ್ಲಿ ನಿಮಗೆ ಸಂಪೂರ್ಣ ನಿಯಂತ್ರಣವಿರುತ್ತದೆ. ಇಲ್ಲಿ, ಯಾವ ಜಾಹೀರಾತನ್ನು ಪ್ರದರ್ಶಿಸಬೇಕು ಎನ್ನುವುದನ್ನು ನೀವೇ ನಿರ್ಧರಿಸುತ್ತೀರಿ. ಮತ್ತು ದರವನ್ನೂ ನೀವೇ ನಿಗದಿಪಡಿಸುತ್ತೀರಿ. ಜಾಹೀರಾತುದಾರರು ನೇರವಾಗಿ ನಿಮ್ಮನ್ನು ಸಂಪರ್ಕಿಸುವುದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ನಿಮ್ಮ ಆದಾಯ ಹೆಚ್ಚಿಸುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ?:

ನೀವು ನಿಮ್ಮ ಬ್ಲಾಗ್‍ನಲ್ಲಿ ಜಾಹೀರಾತು ಪ್ರದರ್ಶಿಸುತ್ತೀರಿ ಕ್ಲಿಕ್ ಆಧರಿಸಿ, ಜಾಹೀರಾತುದಾರರು ನಿಮಗೆ ಕಮಿಷನ್ ಕೊಡುತ್ತಾರೆ. ಇಲ್ಲವೇ ವಾರ/ತಿಂಗಳ ಆಧಾರದಲ್ಲಿ ನೀವು ದರ ನಿಗದಿ ಮಾಡಬಹುದು.

ಇದನ್ನು ಅಳವಡಿಸುವುದು ಹೇಗೆ?:

1. ನಿಮ್ಮ ಬ್ಲಾಗ್‍ನ ಯಾವ ಸ್ಥಳದಲ್ಲಿ ಜಾಹೀರಾತು ಪ್ರದರ್ಶಿಸಬೇಕು ಎನ್ನುವುದನ್ನು ನಿರ್ಧರಿಸಿ. ಹೆಡರ್, ಫೂಟರ್, ಸೈಡ್‍ಬಾರ್, ವಿಷಯದ ಮಧ್ಯೆ ಹೀಗೆ ಎಲ್ಲಿ ಬೇಕಾದರೂ ಪ್ರಕಟಿಸಬಹುದು.

2. ಇಲ್ಲಿ ಜಾಹೀರಾತು ನೀಡಿ ಎಂಬ ಪ್ರತ್ಯೇಕ ಪುಟವನ್ನು ನಿಮ್ಮ ಬ್ಲಾಗ್‍ನಲ್ಲಿ ತೆರೆಯಿರಿ. ಜಾಹೀರಾತುದಾರರಿಗೆ ನೆರವಾಗುವಂತೆ ಮತ್ತು ಮನವೊಲಿಸುವಂತೆ ನಿಮ್ಮ ಬ್ಲಾಗ್‍ನ ವಿಶೇಷತೆಗಳ ಬಗ್ಗೆ ಅದರಲ್ಲಿ ಬರೆಯಿರಿ. ನಿಮ್ಮ ಓದುಗರ ವ್ಯಾಪ್ತಿ, ಸಂಖ್ಯೆ ಮತ್ತು ಬರಹಗಳ ವಿಚಾರಗಳ ಬಗ್ಗೆ ಬರೆಯಿರಿ. ಮುಖ್ಯವಾಗಿ, ಜಾಹೀರಾತುಗಳ ದರಪಟ್ಟಿಯನ್ನು ಹಾಕಿರಿ. ಇದು ನಿಮ್ಮದೇ ಬ್ಲಾಗ್. ನೀವೇ ದರ ನಿಗದಿ ಮಾಡಿ. ಜಾಹೀರಾತುಗಳ ಪ್ರದರ್ಶನ ಸ್ಥಳಕ್ಕೆ ತಕ್ಕಂತೆ ದರ ನಿಗದಿಪಡಿಸಬಹುದು. ನಿಮ್ಮ ಸಂಪರ್ಕದ ಮಾಹಿತಿಯೂ ಇರಲಿ

3. ಮೊನಟೈಸೇಷನ್ ಜಾಲವೊಂದನ್ನು ಸಂಪರ್ಕಿಸಿ, ಅಲ್ಲಿ ನಿಮ್ಮ ಬ್ಲಾಗ್, ಜಾಹೀರಾತು ಸ್ಥಳ ಮತ್ತು ದರಪಟ್ಟಿಯನ್ನು ಪ್ರದರ್ಶಿಸಿ. ಇದು ಜಾಹೀರಾತುದಾರರಿಗೆ ನಿಮ್ಮನ್ನು ಪರಿಚಯಿಸುತ್ತದೆ. ಬಯ್‍/ಸೆಲ್ ಒಂದು ಜನಪ್ರಿಯ ಮೊನಟೈಸೇಷನ್ ಜಾಲವಾಗಿದೆ.

4. ನಿಮ್ಮ ಬ್ಲಾಗ್‍ನ ಪ್ರಮುಖ ಸ್ಥಳಗಳಲ್ಲಿ ‘ಇಲ್ಲಿ ಜಾಹೀರಾತು ನೀಡಿ’ ಎನ್ನುವ ಬಾಕ್ಸ್ ಗಳನ್ನು ಹಾಕಿರಿ. ಇದು ಜಾಹೀರಾತುದಾರರನ್ನು ಹೆಚ್ಚಾಗಿ ಆಕರ್ಷಿಸುತ್ತದೆ.

5. ಕೆಲವು ಜಾಹೀರಾತುದಾರರು ದರದ ಬಗ್ಗೆ ನಿಮ್ಮ ಜೊತೆ ಚೌಕಾಶಿ ಮಾಡಬಹುದು. ನೀವು ಅದಕ್ಕೆ ಸಿದ್ಧರಿರಿ. ಒಮ್ಮೆ ದರ ನಿಗದಿಯಾಗಿ, ನೀವು ಜಾಹೀರಾತು ಪ್ರದರ್ಶಿಸಿದ ಮೇಲೆ ಹಣದ ಹರಿವು ಹೇಗಿರುತ್ತೆ ನೋಡಿ.

ನೀವು ಎಷ್ಟು ಸಂಪಾದಿಸಬಹುದು?:

ನಿಮ್ಮ ಜಾಹೀರಾತು ಪಟ್ಟಿಯ ದರವನ್ನು ನೀವೇ ನಿಗದಿಪಡಿಸುವುದರಿಂದ, ನಿಮ್ಮ ಆದಾಯವು ನಿಮ್ಮ ಕೈಯಲ್ಲೇ ಇರುತ್ತದೆ. ಸಾಮಾನ್ಯವಾಗಿ ನಿಮ್ಮ ಓದುಗರ ಸಂಖ್ಯೆ ದೊಡ್ಡದಿದ್ದಷ್ಟೂ, ಆದಾಯದ ಪ್ರಮಾಣ ಹೆಚ್ಚಿರುತ್ತದೆ. ಜಾಹೀರಾತುದಾರರು ಹೆಚ್ಚು ಹಣ ಪಾವತಿಸಲೂ ಸಿದ್ಧರಿರುತ್ತಾರೆ.

ಹೆಚ್ಚು ಸಂಪಾದಿಸಲು ಸಲಹೆ : ಇಲ್ಲಿ ಜಾಹೀರಾತು ನೀಡಿ ಎನ್ನುವ ಬಾಕ್ಸ್ ಅನ್ನು ಎಲ್ಲಾ ಕಡೆ ಹಾಕಬೇಡಿ. ಅದರ ಬದಲಾಗಿ, ಕೆಲವು ಡಮ್ಮಿ ಜಾಹೀರಾತುಗಳನ್ನು ಪ್ರದರ್ಶಿಸಿ. ಇದು ಜಾಹೀರಾತುದಾರರ ಮೇಲೆ ಮಾನಸಿಕ ಪರಿಣಾಮ ಬೀರುತ್ತದೆ. ನಿಮಗೆ ಈಗಾಗಲೇ ಗ್ರಾಹಕರು ಇದ್ದಾರೆ, ಇಲ್ಲಿ ಹೂಡಿಕೆ ಮಾಡುವುದು ಸಫಲವಾಗುತ್ತದೆ ಎಂಬ ನಂಬಿಕೆ ಅವರಲ್ಲಿ ಬರಬಹುದು. ಅಲ್ಲದೆ, ನಿಮ್ಮಲ್ಲಿ ಖಾಲಿ ಇರುವ ಜಾಗವನ್ನು ಬೇಗನೇ ಸಂಪರ್ಕಿಸದಿದ್ದಲ್ಲಿ, ಅದೂ ಮಾರಾಟವಾಗಬಹುದು ಎಂಬ ಭಯ ಅವರನ್ನು ಕಾಡಬಹುದು. ಇವೆರಡೂ ನಿಮ್ಮ ವ್ಯವಹಾರ ವೃದ್ಧಿಗೆ ಕಾರಣವಾಗುತ್ತದೆ.

ಇದು ನೀವು ಬ್ಲಾಗ್‍ನಿಂದ ಹಣ ಸಂಪಾದಿಸಲು ಇರುವ 5 ದಾರಿಗಳು. ಬ್ಲಾಗ್‍ನಿಂದ ಹಣಸಂಪಾದಿಸುವುದು ರಾಕೆಟ್ ವಿಜ್ಞಾನವೂ ಅಲ್ಲ, ಮಕ್ಕಳಾಟವೂ ಅಲ್ಲ. ನೀವು ನಿಮ್ಮ ಉತ್ಪನ್ನ ತಯಾರಿಕೆ ಮತ್ತು ಡಿಸೈನ್‍ನಲ್ಲಿ ತುಂಬಾ ಸ್ಮಾರ್ಟ್ ಆಗಿರಬೇಕು. ನೀವು ನಿಮ್ಮ ನಂಬಿಕಸ್ಥ ಓದುಗ ವಲಯವನ್ನು ಸೃಷ್ಟಿಸಿಕೊಳ್ಳಬೇಕು. ಅವರೇ ಮುಂದೆ ಹಣ ಸಂಪಾದನೆಗೆ ದಾರಿಯಾಗುತ್ತಾರೆ. ಅಲ್ಲದೆ, ನಿಮ್ಮ ಬ್ಲಾಗ್ ಹೆಚ್ಚು ಜನಪ್ರಿಯಗೊಳ್ಳುವಂತೆ ಮಾಡಲು ಶ್ರಮಿಸಲೇಬೇಕು.

ಬಹಳಷ್ಟು ಬ್ಲಾಗರ್‍ಗಳು ಅತ್ಯುತ್ತಮ ಲೇಖನಗಳನ್ನು ಬರೆಯುತ್ತಾರೆ. ಆದರೆ, ಅದಕ್ಕೆ ಪ್ರಚಾರ ನೀಡಲು ಮರೆಯುತ್ತಾರೆ. ಪ್ರಚಾರವಿಲ್ಲದ ಬ್ಲಾಗ್ ಕೇವಲ ರಹಸ್ಯ ಡೈರಿಯಂತಾಗಿರುತ್ತದೆ. ಪ್ರಚಾರವು ನಿಮ್ಮ ಬ್ಲಾಗ್‍ಅನ್ನು ಓದುಗರಿಗೆ ತಲುಪಿಸುತ್ತದೆ ಮತ್ತು ಜನಪ್ರಿಯಗೊಳಿಸುತ್ತದೆ. ನಿಮ್ಮ ಬ್ಲಾಗ್‍ಗೆ ಪ್ರಚಾರ ನೀಡಿ, ಹಣ ಸಂಪಾದಿಸುವ ಯಾವುದಾದರೂ ದಾರಿ ಅಳವಡಿಸಿಕೊಳ್ಳಿ, ನಿಮ್ಮ ಬ್ಲಾಗ್ ಉದ್ಯಮವಾಗುತ್ತದೆ.