ವಿದ್ಯುತ್ ಕಂಪನಿಗೇ ವಿದ್ಯುತ್ ಮಾರಾಟ..! ಅನ್ನದಾತನ ಅಪೂರ್ವ ಸಾಧನೆ..!

ಕೃತಿಕಾ

ವಿದ್ಯುತ್ ಕಂಪನಿಗೇ ವಿದ್ಯುತ್ ಮಾರಾಟ..! ಅನ್ನದಾತನ ಅಪೂರ್ವ ಸಾಧನೆ..!

Tuesday December 08, 2015,

3 min Read

ರಾಜ್ಯದಲ್ಲಿ ಈಗ ಬರೀ ಲೋಡ್ ಶೆಡ್ಡಿಂಗ್​​ನದ್ದೇ ಸುದ್ದಿ. ಯಾವಾಗ ಕರೆಂಟ್ ಬರುತ್ತದೆ, ಯಾವಾಗ ಕರೆಂಟ್ ಹೋಗುತ್ತದೆ ಅಂತ ಸಾಕ್ಷಾತ್ ಆ ಭಗವಂತನೂ ಕೂಡ ಹೇಳಲು ಆಗದ ಪರಿಸ್ಥಿತಿಯಿದೆ. ಗ್ರಾಮೀಣ ಭಾಗದಲ್ಲಂತೂ ರೈತರು ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಪರಿತಪಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಾವೇರಿಯ ರೈತನೊಬ್ಬ ಸೌರ ಶಕ್ತಿಯಿಂದ ವಿದ್ಯುತ್​​ ಉತ್ಪಾದಿಸಿ ಹೆಚ್ಚುವರಿ ವಿದ್ಯುತ್ ಅನ್ನು ಹೆಸ್ಕಾಂಗೆ (ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿ) ಮಾರಾಟ ಮಾಡುತ್ತಿದ್ದಾನೆ. ಈ ರೈತನ ಸಾಧನೆ ರಾಜ್ಯದ ಹಲವು ರೈತರಿಗೆ ಸ್ಫೂರ್ತಿಯುತವಾಗಿದೆ. ಹಾವೇರಿ ಜಿಲ್ಲೆಯ ಮಾಸಣಗಿ ಗ್ರಾಮದ ಶ್ರೀನಿವಾಸ ಕುಲಕರ್ಣಿ ಎಂಬ ರೈತ ಈ ಅಪೂರ್ವ ಸಾಧನೆ ಮಾಡಿದ್ದಾರೆ. ಇವರ ಸಾಧನೆಯನ್ನು ನೋಡಿ ಸುತ್ತಮುತ್ತಲ ಹಳ್ಳಿಗಳ ರೈತರು ಬಿಟ್ಟ ಕಣ್ಣು ಬಿಟ್ಟು ಬೆರಗಿನಿಂದ ನೋಡುತ್ತಿದ್ದಾರೆ.

image


ಶ್ರೀನಿವಾಸ ಕುಲಕರ್ಣಿ ಎಲ್ಲರಂತೆ ಸಾಮಾನ್ಯ ರೈತ. ಆದ್ದೆ ಅವರ ಯೋಚನಾ ಲಹರಿ ಮಾತ್ರ ಸಾಮಾನ್ಯವಾದ್ದಲ್ಲ. ವಿವಿಧ ರೀತಿಯ ಕೃಷಿ ಚಟುವಟಿಕೆಗಳನ್ನು ಮಾಡುವುದು, ಹೈನುಗಾರಿಕೆ ಮಾಡುವುದು, ಮಿಶ್ರ ತಳಿ ಬೆಳೆದು ಪ್ರಯೋಗ ಮಾಡುವುದು ಹೀಗೆ ಏನಾದರೊಂದು ಹೊಸ ಪ್ರಯತ್ನ ಮಾಡುವ ಮನೋಭಾವ ಶ್ರೀನಿವಾಸ ಕುಲಕರ್ಣಿ ಅವರದ್ದು. ಈಗ ಅವರು ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸಿ ಯಶಸ್ವಿಯಾಗಿದ್ದಾರೆ. ಸೋಲಾರ್​​​ನಿಂದ ಉತ್ಪಾದನೆಯಾದ ವಿದ್ಯುತ್ ಅನ್ನು ಬಳಸುವುದು ಮತ್ತು ಹೆಚ್ಚುವರಿ ಉತ್ಪಾದನೆಯಾದ ವಿದ್ಯುತ್ ಅನ್ನು ವಿದ್ಯುತ್ ಕಂಪನಿಗೆ ಮಾರಾಟ ಮಾಡುವ ಮೂಲಕ ಹೊಸದೊಂದು ಸಾಧನೆಗೆ ಮುನ್ನುಡಿ ಹಾಡಿದ್ದಾರೆ.

ಇಂತದ್ದೊಂದು ಸಾಧನೆ ಮಾಡಲು ಶ್ರೀನಿವಾಸ ಕುಲಕರ್ಣಿ ಅವರಿಗೆ ಸ್ಫೂರ್ತಿಯಾಗಿದ್ದು ಚೀನಾ. ಹೌದು ಆರು ವರ್ಷಗಳ ಹಿಂದೆ ರಾಜ್ಯ ಸರ್ಕಾರ ರೈತರ ತಂಡವನ್ನು ಚೀನಾಗೆ ಕಳಿಸಿಕೊಟ್ಟಿತ್ತು. ಅಲ್ಲಿನ ರೈತರು ಮಾಡುವ ವ್ಯವಸಾಯ ಪದ್ದತಿ, ಬಳಸಿಕೊಂಡಿರುವ ತಂತ್ರಜ್ಞಾನ, ಹೆಚ್ಚಿನ ಲಾಭ ತರುವ ಬೆಳೆಗಳನ್ನು ಬೆಳೆಯುವ ರೀತಿಯ ಬಗ್ಗೆ ರಾಜ್ಯದ ರೈತರಿಗೆ ಮಾಡುವ ಉದ್ದೇಶದಿಂದ ಪ್ರವಾಸ ಕೈಗೊಳ್ಳಲಾಗಿತ್ತು. ಎಲ್ಲ ರೈತರೂ ಚೀನಾ ದೇಶ ನೋಡಿಕೊಂಡು ಬಂದು ಅಲ್ಲಿ ಹಾಗಿದೆ, ಹೀಗಿದೆ ಅಂತ ಬಡಾಯಿ ಕೊಚ್ಚಿಕೊಂಡವರೆ. ಆದ್ರೆ ಅದೇ ತಂಡದಲ್ಲಿದ್ದ ಶ್ರೀನಿವಾಸ ಕುಲಕರ್ಣಿ ಅಲ್ಲಿನ ಕೆಲವು ಹಳ್ಳಿಗಳಲ್ಲಿ ಸೌರಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸುವುದು ಅವರ ಗಮನಿಸಿದ್ದರು. ಆ ಕ್ಷಣದಲ್ಲೇ ತಮ್ಮ ಊರಿನಲ್ಲೂ ಈ ಪ್ರಯತ್ನ ಮಾಡಬೇಕು ಎಂದು ನಿರ್ಧರಿಸಿದ್ದರು. ಭಾರತಕ್ಕೆ ಮರಳಿ ಬಂದ ನಂತರ ಸೌರ ಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸುವ ಬಗ್ಗೆ ಮಾಹಿತಿ ಕಲೆ ಹಾಕಿದರು. ಈ ಪ್ರಯತ್ನಕ್ಕೆ ಶ್ರೀನಿವಾಸ ಕುಲಕರ್ಣಿ ಅವರ ಅಳಿಯ ರಾಘವೇಂದ್ರ ಕೂಡ ಬೆನ್ನಿಗೆ ನಿಂತರು.

ರಾಘವೇಂದ್ರ ಕುಲಕರ್ಣಿ ಸ್ಮಾರ್ಟ್ ಸೋಲಾರ್ ಸೊಲ್ಯೂಷನ್ಸ್ ಅನ್ನೋ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಸೌರ ಶಕ್ತಿಯಿಂದ ವಿದ್ಯುತ್ ಉತ್ಪಾದಿಸಿ ಬಳಸುವುದು ಮತ್ತು ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡುವುದರ ಬಗ್ಗೆ ಶ್ರೀನಿವಾಸ ಕುಲಕರ್ಣಿ ಅವರಿಗೆ ತಿಳಿಸಿಕೊಟ್ಟರು. ಇಷ್ಟು ಸಾಕಿತ್ತಲ್ಲ.. ಶ್ರೀನಿವಾಸ ಕುಲಕರ್ಣಿ ಐದು ಲಕ್ಷ ರೂ ಬಂಡವಾಳ ಹೊಂದಿಸಿ ಇಪ್ಪತ್ತೈದು ಯೂನಿಟ್ ವಿದ್ಯುತ್ ಉತ್ಪಾದನೆ ಮಾಡುವಂತಹ ಒಂದು ಸೌರವಿದ್ಯುತ್ ಘಟಕ ಸ್ಥಾಪಿಸಿದರು. ಐದು ಕಿಲೋ ವ್ಯಾಟ್ ಸಾಮರ್ಥ್ಯದ ಇಪ್ಪತ್ತು ಸೋಲಾರ್ ಪ್ಯಾನಲ್ ಗಳನ್ನು ಅಳವಡಿಸಲಾಯಿತು. ಈ ಸೋಲಾರ್ ವಿದ್ಯುತ್ ಶಕ್ತಿ ಘಟಕ ಇವತ್ತು ದಿನಕ್ಕೆ 25 ಯೂನಿಟ್ ವಿದ್ಯುತ್ ಉತ್ಪಾದಿಸುತ್ತಿದೆ. ಕಳೆದ ಎಂಟು ತಿಂಗಳಿಂದ ಈ ಘಟಕ ಕಾರ್ಯ ನಿರ್ವಹಿಸುತ್ತಿದ್ದು ಉಳಿತಾಯದ ಜೊತೆಗೆ ಆದಾಯವನ್ನೂ ಕೊಡುತ್ತಿದೆ.

ನಿತ್ಯ ಉತ್ಪಾದನೆಯಾಗುವ 25 ಯೂನಿಟ್ ನಲ್ಲಿ ಮನೆ ಬಳಕೆಗಾಗಿ ಐದು ಯೂನಿಟ್ ಬಳಕೆಯಾಗುತ್ತದೆ. ಉಳಿದ 20 ಯೂನಿಟ್ ಗಳನ್ನು ಪ್ರತೀ ಯುನಿಟ್ ಗೆ 9.56 ರೂ ನಂತೆ ವಿದ್ಯುತ್ ಅನ್ನು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಗೆ ಮಾರಾಟ ಮಾಡುತ್ತಾರೆ. ವಿದ್ಯುತ್ ಕಂಪನಿ ಸರಿಯಾಗಿ ವಿದ್ಯುತ್ ನೀಡುವುದಿಲ್ಲ ಅಂತ ಸೌರವಿದ್ಯುತ್ ಉತ್ಪಾದಿಸಲು ಮುಂದಾದರೋ, ಇವತ್ತು ಅದೇ ಕಂಪನಿ ಶ್ರೀನಿವಾಸ ಕುಲಕರ್ಣಿ ಅವರಿಂದ ವಿದ್ಯುತ್ ಖರೀದಿಸುತ್ತಿದೆ. ಪ್ರತೀ ತಿಂಗಳು ಕಟ್ಟ ಬೇಕಿದ್ದ ಕರೆಂಟ್ ಬಿಲ್ ನ ಉಳಿತಾಯದ ಜೊತೆಗೆ ತಿಂಗಳಿಗೆ ಆರು ಸಾವಿರ ಹಣವನ್ನೂ ಈ ಪ್ರಗತಿಪರ ರೈತ ಗಳಿಸುತ್ತಿದ್ದಾನೆ. ಆ ಮೂಲಕ ಇತರ ರೈತರಿಗೆ ಶ್ರೀನಿವಾಸ ಕುಲಕರ್ಣಿ ಮಾದರಿಯಾಗಿದ್ದಾರೆ.

image


ಕರೆಂಟ್ ಗಾಗಿ ಕಾದೂ ಕಾದೂ ಸುಸ್ತಾಗಿದ್ದ ನನಗೆ ಚೀನಾ ಪ್ರವಾಸದ ವೇಳೆ ನಾನು ಕೂಡ ನನ್ನ ಊರಿನಲ್ಲಿ ಸೌರವಿದ್ಯುತ್ ಉತ್ಪಾದಿಸಬಹುದು ಅಂತ ಅನ್ನಿಸಿತು. ಆ ನಂತರ ಅದಕ್ಕೆ ಬೇಕಾಗಿದ್ದ ಹಣವನ್ನೆಲ್ಲ ಒಟ್ಟು ಮಾಡಿ ಐದು ಲಕ್ಷ ಬಂಡವಾಳ ಹೂಡಿದ್ದೇನೆ. ಈಗ ನನಗೆ ಪ್ರತೀ ತಿಂಗಳು ಆರು ಸಾವಿರ ಆದಾಯವನ್ನು ಈ ಘಟಕ ತಂದುಕೊಡುತ್ತಿದೆ ಅಂತಾರೆ ರೈತ ಶ್ರೀನಿವಾಸ ಕುಲಕರ್ಣಿ.

ಶ್ರೀನಿವಾಸ ಕುಲಕರ್ಣಿ ಮಾಡಿರುವ ಸಾಧನೆ ಮತ್ತು ಗಳಿಸುತ್ತಿರುವ ಆದಾಯ ನೋಡಿದ ಆ ಊರಿನ ಮತ್ತು ಅಕ್ಕ ಪಕ್ಕದ ಊರಿಬ ರೈತರು ತಾವೂ ಸೌರಶಕ್ತಿ ವಿದ್ಯುತ್ ಘಟಕ ಸ್ಥಾಪಿಸಲು ಮುಂದಾಗಿದ್ದಾರೆ. ಒಬ್ಬ ರೈತನ ಸಾಧನೆಗೆ ಇದಕ್ಕಿಂತಲೂ ಇನ್ನೊಂದು ಮೆಚ್ಚುಗೆ ಬೇಕಿಲ್ಲ. ಇವರನ್ನೇ ಮಾದರಿಯಾಗಿ ಹಲವು ರೈತರು ಅನುಸರಿಸಿದರೆ ಸರ್ಕಾರ ನೀಡುವ ವಿದ್ಯುತ್ ಗಾಗಿ ಕಾಯಬೇಕಿಲ್ಲ. ಬದಲಾಗಿ ಸರ್ಕಾರಕ್ಕೇ ವಿದ್ಯುತ್ ಮಾರಾಟ ಮಾಡಿ ಹಣ ಗಳಿಸಬಹುದು. ಇಂತದ್ದೊಂದು ಸಾಧನೆ ಮಾಡಿ ರೈತರಿಗೆ ಮಾದರಿಯಾಗಿರೋ ಶ್ರೀನಿವಾಸ ಕುಲಕರ್ಣಿ ಸಾಧನೆ ಮೆಚ್ಚುವಂತದ್ದು.