ಉಡುಪಿ ಬಂಡವಾಳ ಹೂಡಿಕೆದಾರರ ಸ್ವರ್ಗ

ಟೀಮ್​ ವೈ.ಎಸ್​. ಕನ್ನಡ

0

ದೇವಸ್ಥಾನಗಳ ನಗರ ಎಂದು ಉಡುಪಿ ರಾಜ್ಯದಲ್ಲಿ ಹೆಸರುವಾಸಿ. ಇದು ಬಂಡವಾಳ ಹೂಡಿಕೆದಾರರಿಗೆ ಸ್ವರ್ಗ ಅಂದರೆ ತಪ್ಪಾಗಲಾರದು. ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಮಣಿಪಾಲ ಸಮೂಹ ಸಂಸ್ಥೆಗಳು ಉಡುಪಿ ಜಿಲ್ಲೆಯ ಹೆಗ್ಗಳಿಕೆ. ಜಾಗತಿಕ ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮಣಿಪಾಲ ಹಲವು ಪ್ರಥಮ ಸಾಧನೆಗಳ ತವರೂರು. ದೇಶ ವಿದೇಶದಲ್ಲೂ ಉಡುಪಿ ರುಚಿಕರ ಅಡುಗೆಗೂ ಹೆಸರುವಾಸಿ. "ಉಡುಪಿ ಹೊಟೇಲ್" ಉಡುಪಿ ಜಿಲ್ಲೆಯ ಕೊಡುಗೆ. ಅತಿಥಿ ಸತ್ಕಾರದಲ್ಲಿ ಉಡುಪಿಯನ್ನು ಮೀರಿಸುವ ಜಿಲ್ಲೆ ಬೇರೊಂದಿಲ್ಲ. ಬ್ಯಾಂಕಿಂಗ್ ಕ್ಷೇತ್ರದ ತವರು ಜಿಲ್ಲೆ ಎಂಬ ಅನ್ವರ್ಥ ನಾಮವೂ ಉಡುಪಿ ಜಿಲ್ಲೆಗೆ ಇದೆ. ಸಿಂಡಿಕೇಟ್ ಬ್ಯಾಂಕ್ ಸೇರಿದಂತೆ

ದೇಶದ ಅನೇಕ ರಾಷ್ಟ್ರೀಕೃತ ಬ್ಯಾಂಕ್‍ಗಳು ಉಡುಪಿಯಲ್ಲಿ ಜನ್ಮ ತಳೆದಿವೆ. ರಾಷ್ಟ್ರವ್ಯಾಪಿ ಚಟುವಟಿಕೆ ಆರಂಭಿಸಿವೆ.

ಉಡುಪಿ ಬಂಡವಾಳ ಹೂಡಿಕೆಗೆ ಸೂಕ್ತ ಸ್ಥಳ

ಮೂರು ಕಂದಾಯ ತಾಲೂಕುಗಳನ್ನು ಉಡುಪಿ ಜಿಲ್ಲೆ ಹೊಂದಿದೆ. ಸಾಕ್ಷರತಾ ಪ್ರಮಾಣದಲ್ಲೂ ಉಡುಪಿ ಅದ್ವಿತೀಯ ಸಾಧನೆ ಮೆರೆದಿದೆ. ಅಡಿಕೆ, ಭತ್ತ ಕಬ್ಬು ಸೇರಿದಂತೆ ಹಲವು ಬೆಳೆಗಳನ್ನು ಇಲ್ಲಿ ಬೆಳೆಯಲಾಗುತ್ತದೆ. ರಾಜ್ಯದಲ್ಲಿ ಅತ್ಯಧಿಕ ಬ್ಯಾಂಕ್ ಶಾಖೆಗಳನ್ನು ಹೊಂದಿದ ಹೆಗ್ಗಳಿಕೆ ಕೂಡಾ ಉಡುಪಿ ಜಿಲ್ಲೆಯದ್ದಾಗಿದೆ. ಶಂಕರಪುರ

ಮಲ್ಲಿಗೆ ಉಡುಪಿಯ ಹೆಸರನ್ನು ವಿಶ್ವಕ್ಕೇ ಪರಿಚಯಿಸಿದೆ. ದೇಶ ವಿದೇಶಗಳಿಗೆ ಶಂಕರಪುರ ಮಲ್ಲಿಗೆ ರಫ್ತಾಗುತ್ತದೆ. ಇದು ಉಡುಪಿಯ ಖ್ಯಾತಿಯನ್ನು ಮತ್ತಷ್ಟು ಪಸರಿಸಿದೆ.

ಧಾರ್ಮಿಕ ಮತ್ತು ವೈದ್ಯಕೀಯ ಪ್ರವಾಸೋದ್ಯಮ

ಉಡುಪಿ ದೇವಾಲಯಗಳ ನಗರ ಎಂದೇ ಚಿರಪರಿಚಿತ. ಪ್ರತಿ 2 ವರ್ಷಕ್ಕೊಮ್ಮೆ ನಡೆಯವ ಪರ್ಯಾಯ ಜಗದ್ವಿಖ್ಯಾತ. ಶಕ್ತಿ ದೇವತೆ ತಾಯಿ ಮೂಕಾಂಬಿಕೆ ಕೊಲ್ಲೂರಿನಲ್ಲಿ ನೆಲೆಸಿದ್ದಾಳೆ. ಹೀಗೆ ಪ್ರತಿಯೊಂದು ಮಣ್ಣಿನ ಕಣವು ಧಾರ್ಮಿಕತೆಯೊಂದಿಗೆ ಬೆಸೆದುಹೋಗಿದೆ. ಉಡುಪಿಯಲ್ಲಿ ಪರಿಸರ ಸ್ನೇಹಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿವೆ. ಇದು ಉತ್ತಮ ಆದಾಯದ ಮೂಲವಾಗಿದ್ದು ಇದರ ಜೊತೆ ಜೊತೆಗೆ ಇನ್ನಿತರ ಸೇವಾವಲಯಗಳ ಬೆಳವಣಿಗೆಗೆ ಅವಕಾಶ ಉಜ್ವಲವಾಗಿದೆ. ಮಣಿಪಾಲ ಈಗಾಗಲೇ ಮುದ್ರಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ವಿಶ್ವ ಖ್ಯಾತಿ ಪಡೆದಿದೆ. ಮೂಲ ಸೌಲಭ್ಯ ಒದಗಿಸುವ ಕ್ಷೇತ್ರದಲ್ಲಿಯೂ ಉಡುಪಿ ಮುಂಚೂಣಿಯಲ್ಲಿದೆ.

ಪ್ರವಾಸೋದ್ಯಮದ ಹರಿಕಾರ

ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿಯಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶಗಳು ಹೆಚ್ಚು. ಸುಂದರ ಬೀಚ್‍ಗಳು ಉಡುಪಿ ಜಿಲ್ಲೆಯ ಹೆಗ್ಗಳಿಕೆ. ಸೈಂಟ್ ಮೆರೀಸ್ ದ್ವೀಪ ಉಡುಪಿಯ ಅನನ್ಯ ಸಂಪತ್ತು. ಮಲ್ಪೆ ಬಂದರು ಮೀನುಗಾರರ ನೆಚ್ಚಿನ ತಾಣ. ಬೋಟ್ ನಿರ್ಮಾಣ ಕ್ಷೇತ್ರದಲ್ಲೂ ಉಡುಪಿ ಹೆಸರುವಾಸಿ.

ಮಾನವ ಸಂಪನ್ಮೂಲದ ಹೆಗ್ಗುರುತು

ರಾಜ್ಯದ ಕರಾವಳಿ ಜಿಲ್ಲೆಗಳು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಯಿಂದಾಗಿ ಗುಣಮಟ್ಟದ ಮಾನವ ಸಂಪನ್ಮೂಲ ರಾಜ್ಯಕ್ಕೆ ಲಭಿಸುತ್ತಿದೆ. ಉಡುಪಿ ಜಿಲ್ಲೆಯಲ್ಲೂ ಇದೇ ವಾತಾವರಣ ನಿರ್ಮಾಣ ಆಗಿದೆ. ಮಾಹಿತಿ ತಂತ್ರಜ್ಞಾನ ಬೆಳವಣಿಗೆಯಿಂದಾಗಿ ಸೀಮಿತ ಅವಧಿಯಲ್ಲಿ ಪರಿಣಿತಿ ಪಡೆದಿರುವ ಯುವ ಸಮೂಹವೇ ಉಡುಪಿ ಜಿಲ್ಲೆಯಲ್ಲಿದೆ. ರಾಜ್ಯದ ಹೂಡಿಕೆದಾರರ ಅಚ್ಚುಮೆಚ್ಚಿನ ತಾಣವಾಗಿ ಉಡುಪಿ ಜಿಲ್ಲೆ ಹೊರಹೊಮ್ಮಲಿದೆ.

ಉಡುಪಿಯ ಅಭಿವೃದ್ಧಿಗೆ ಯೋಜನೆಗಳೇನು..?

1. ಉಡುಪಿಯಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣ (ಯೋಜನೆಯ ವಿಸ್ತೃ ತ ರಿಪೋರ್ಟ್​ ಸಿದ್ಧವಾಗುತ್ತಿದೆ)
2. ವಿಮಾನ ನಿಲ್ದಾಣ (ಮಿನಿ) ಸ್ಥಾಪನೆ (ಇನ್ನೂ ಯೋಜನಾ ಹಂತದಲ್ಲಿದೆ)
3. ಪಡೂರಿನಲ್ಲಿ ಕಚ್ಚಾತೈಲದ ಬೃಹತ್ ಸಂಗ್ರಹಾಗಾರಗಳ ನಿರ್ಮಾಣ ( ಸಾಮರ್ಥ್ಯ : 5 ಮಿಲಿಯನ್ ಮೆಟ್ರಿಕ್ ಟನ್)

ಕೊನೆಯ ಮಾತೇನು..?

ಬೀಚ್ ಪ್ರವಾಸೋದ್ಯಮ ಮೂಲ ಸೌಕರ್ಯ ಅಭಿವೃದ್ಧಿಯನ್ನು ನಿರೀಕ್ಷಿಸುತ್ತಿದ್ದು ಕಾಲಬದ್ಧವಾದ ಹೂಡಿಕೆ ವಾತಾವರಣದ ಮೂಲಕ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ಅವಕಾಶ ದಟ್ಟವಾಗಿದೆ. ಹೀಗಾಗಿ ಸ್ಥಳೀಯರಿಗೆ ಉದ್ಯೋಗ ಅವಕಾಶ ದೊರೆಯಲಿದೆ. ವಿದೇಶಿ ವಿನಿಮಯ ಕೂಡಾ ಬೊಕ್ಕಸಕ್ಕೆ ಹರಿದು ಬರಲಿದೆ.

Related Stories