ಅಮೂಲ್ಯ ಔಷಧ ಸಸ್ಯ ಸಂಪತ್ತಿನ ಆಗರ ಈ ಚನ್ನಗಿರಿ ಬೆಟ್ಟ

ಉಷಾ ಹರೀಶ್​

ಅಮೂಲ್ಯ ಔಷಧ ಸಸ್ಯ ಸಂಪತ್ತಿನ ಆಗರ ಈ ಚನ್ನಗಿರಿ ಬೆಟ್ಟ

Wednesday November 04, 2015,

2 min Read

ಸಾಹಸ ಪ್ರಿಯರಿಗೆ ಟ್ರೆಕ್ಕಿಂಗ್ ಹೋಗುವುದೆಂದರೆ ಎಲ್ಲಿಲ್ಲದ ಖುಷಿ. ಟ್ರೆಕ್ಕಿಂಗ್​​ಗಾಗಿಯೇ ಕರ್ನಾಟಕದಲ್ಲಿ ಸಾಕಷ್ಟು ತಾಣಗಳಿವೆ. ಚಿಕ್ಕಮಗಳೂರು ಸೇರಿದಂತೆ ಮತ್ತಿತರ ಕಡೆ ಚಾರಣಕ್ಕೆ ಹೆಚ್ಚಾಗಿ ಹೋಗುತ್ತಾರೆ. ಆದರೆ ಬೆಂಗಳೂರಿಗೆ ಅನತಿ ದೂರದಲ್ಲೇ ಟ್ರೆಕ್ಕಿಂಗ್ ಒಂದು ಬೆಟ್ಟವಿದ್ದು, ಚಾರಣ ಮಾಡುವವರಿಗೆ ಇದು ಸೂಕ್ತ ಸ್ಥಳವಾಗಿದೆ.

image


ನಂದಿಬೆಟ್ಟ ಗಿರಿಧಾಮ ಪ್ರವಾಸಿಗರ ಹಾಟ್ ಫೇವರೇಟ್. ಅದರ ಸಾಲಿನಲ್ಲಿ ಬರುವ ಚನ್ನಗಿರಿ ಬೆಟ್ಟ ಟ್ರೆಕ್ಕಿಂಗ್​​ಗೆ ಸೂಪರ್ ಜಾಗ ಎನ್ನಬಹುದು. ಜನ ಸಂಚಾರ ಕಡಿಮೆ ಇರುವ ಚನ್ನಗಿರಿ ಅಥವಾ ಚನ್ನರಾಯಸ್ವಾಮಿ ಬೆಟ್ಟ, ನಂದಿಬೆಟ್ಟಕ್ಕಿಂತಲೂ ಸ್ವಲ್ಪ ಎತ್ತರವಿದೆ. ವರ್ಷದ ಎಲ್ಲ ದಿನಗಳಲ್ಲೂ ಜನರು ನಂದಿಬೆಟ್ಟಕ್ಕೆ ಭೇಟಿ ನೀಡಿದರೆ. ಚನ್ನಗಿರಿ ಬೆಟ್ಟಕ್ಕೆ ಹಬ್ಬಗಳಲ್ಲಿ ಮಾತ್ರ ಭಕ್ತರು ಭೇಟಿ ನೀಡುತ್ತಾರೆ. ಭಕ್ತರನ್ನು ಬಿಟ್ಟರೆ ಮಳೆಗಾಲದಲ್ಲಿ ಮತ್ತು ಬೆಟ್ಟ ಹಸಿರು ಹೊದ್ದಿರುವಾಗ ಚಾರಣಪ್ರಿಯರು ಟ್ರೆಕ್ಕಿಂಗ್ ಮಾಡುತ್ತಾರೆ. ನಂದಿಬೆಟ್ಟದ ಸಾಲಿನಲ್ಲಿರುವ ಪಂಚಗಿರಿಗಳಲ್ಲಿ ನಂದಿಗಿರಿ, ಸ್ಕಂದಗಿರಿ, ದಿಬ್ಬಗಿರಿ, ಬ್ರಹ್ಮಗಿರಿ ಮತ್ತು ಚನ್ನಗಿರಿ ಬೆಟ್ಟಗಳಿವೆ. ಇವು ಮಳೆಗಾಲದಲ್ಲಿ ಮತ್ತು ಚಳಿಗಾಲದಲ್ಲಿ ಸಾಕಷ್ಟು ಆಕರ್ಷಣೀಯವಾಗಿರುತ್ತದೆ.

ಕಿರು ದಾರಿಗಳೇ ಮಾರ್ಗ

ಚನ್ನಾಪುರ ಮತ್ತು ಚಿಕ್ಕರಾಯಪ್ಪನಹಳ್ಳಿ ಕಡೆಯಿಂದ ಹೊರಡುವ ಚಾರಣಿಗರಿಗೆ ಕಿರುದಾರಿಗಳೇ ಮಾರ್ಗ ತೋರಿಸುತ್ತವೆ. ಮಳೆಗಾಲದಲ್ಲಿ ಬೆಟ್ಟದ ಮೇಲಿಂದ ಕೆಳಗೆ ಹರಿದು ಬರುವ ನೀರು ಬಂಡೆ ಕಲ್ಲುಗಳ ಮಧ್ಯೆ ಸಾಗುತ್ತಾ ಕಿರು ಜಲಪಾತಗಳ ದರ್ಶನ ಮಾಡಿಸುತ್ತವೆ. ಚನ್ನಗಿರಿ ಬೆಟ್ಟದಲ್ಲಿ ಅಮೂಲ್ಯ ಔಷಧ ಸಸ್ಯ ಸಂಪತ್ತು ಹೊಂದಿದೆ. ಇದರಿಂದಾಗಿ ಬೆಟ್ಟದ ಮೇಲಿಂದ ಹರಿದು ಬರುವ ನೀರು, ಸಸ್ಯಗಳ ಸತ್ವದೊಂದಿಗೆ ಸೇರಿ ಕುಡಿಯುವ ನೀರು ಚಾರಣಿಗರ ದಣಿವನ್ನು ನಿವಾರಿಸುತ್ತದೆ. ದಾರಿ ಮಧ್ಯೆದಲ್ಲಿರುವ ಸಾಕಷ್ಟು ಮರಗಳಿದ್ದು ನೆರಳನ್ನು ನೀಡುತ್ತಾ ಆಯಾಸವನ್ನು ಪರಿಹರಿಸುತ್ತವೆ. ಬೆಟ್ಟದ ಹತ್ತಿ ಹೋದರೆ ಅಲ್ಲಿ ಪುರಾತನವಾದ ಚನ್ನರಾಯಸ್ವಾಮಿ, ಆಂಜನೇಯಸ್ವಾಮಿ ದೇವಾಲಯಗಳು ಕಾಣುತ್ತವೆ. ಅಲ್ಲಿಯೇ ಉತ್ತರ ಪಿನಾಕಿನಿ ನದಿ ಹುಟ್ಟುತ್ತದೆ. ಬೆಟ್ಟದ ಮೇಲಿರುವ ಏಳಮ್ಮೆದೊಣೆಯಲ್ಲಿರುವ ನೀರು, ಬೆಟ್ಟದ ತುದಿಯಿಂದ ಕೆಳಕ್ಕೆ ನೋಡಿದರೆ ಕಾಣುವ ಕೆರೆಗಳು ಗಮನಸೆಳೆಯುತ್ತದೆ. ರಾತ್ರಿ ಬೆಟ್ಟದ ಮೇಲೆ ಉಳಿದುಕೊಳ್ಳುವುದ್ದಿದರೆ ಕಲ್ಯಾಣಿಗೆ ಅಂಟಿಕೊಂಡಂತೆ ಪುಟ್ಟದೊಂದು ಮಂಟಪ ಇದೆ. ಈ ಮಂಟಪದಲ್ಲೇ ಅಡುಗೆ ಮಾಡಿಕೊಳ್ಳಬಹುದು.

image


ದೇವರಾಯನದುರ್ಗ, ಸಾವನದುರ್ಗ ಬೆಟ್ಟಗಳಲ್ಲಿ ಮಾತ್ರ ಕಂಡು ಬರುವ ಜಾಲಾರಿ ಮರಗಳು ಚನ್ನಗಿರಿ ಬೆಟ್ಟದಲ್ಲಿ ಕಾಣ ಸಿಗುತ್ತವೆ.ಅಷ್ಟೇ ಅಲ್ಲದೆ ವಿವಿಧ ಬಗೆಯ ಔಷಧಿ ಸಸ್ಯಗಳು ಇವೆ. ಆಷಾಢ ಮಾಸದಲ್ಲಿ ಬೆಟ್ಟದ ಮೇಲೆ ಮೋಡಗಳನ್ನು ತೇಲಿಬರುವುದನ್ನು ನೋಡವುದೇ ಒಂದು ಚೆಂದ.

ಬೆಂಗಳೂರಿನಿಂದ ಮಾರ್ಗ 

image


ಚನ್ನಗಿರಿ ಬೆಂಗಳೂರಿನಿಂದ 60 ಕಿ.ಮೀ ದೂರವಿದೆ. ಚನ್ನಗಿರಿ ಅಥವಾ ಚನ್ನರಾಯಸ್ವಾಮಿ ಬೆಟ್ಟದ ತಪ್ಪಲಿಗೆ ಹೋಗಲು ರಸ್ತೆ ಮಾರ್ಗವಿದೆ. ಏಕೆಂದರೆ ಇದುವರೆಗೂ ಚನ್ನಗಿರಿ ಬೆಟ್ಟಕ್ಕೆ ಹತ್ತಲು ಮೆಟ್ಟಲುಗಳಿಲ್ಲದ ಕಾರಣ ಕಾಲ್ನಡಿಗೆಯಲ್ಲೇ ಹತ್ತಬೇಕು. ಚಾರಣಪ್ರಿಯರಷ್ಟೇ ಅಲ್ಲ, ಬೆಟ್ಟದ ಮೇಲಿರುವ ಚನ್ನರಾಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಹೋಗುವ ಭಕ್ತರು ಸಹ ಕಾಲ್ನಡಿಗೆಯಲ್ಲೇ ಬೆಟ್ಟ ಹತ್ತಬೇಕು. ಬೆಂಗಳೂರಿನಿಂದ ಯಲಹಂಕ, ರಾಜಾನುಕುಂಟೆ ದೊಡ್ಡಬಳ್ಳಾಪುರ, ಮೆಳೆಕೋಟೆ ನಂತರ ಸಿಗುವ ಚಿಕ್ಕರಾಯಪ್ಪನಹಳ್ಳಿ ಸಮೀಪದಿಂದ ಚನ್ನಗಿರಿ ಬೆಟ್ಟಕ್ಕೆ ಚಾರಣ ಪ್ರಾರಂಭಿಸಬೇಕು. ಚನ್ನಾಪುರ ಗ್ರಾಮದ ಮೂಲಕ ಮತ್ತು ಚಿಕ್ಕರಾಯಪ್ಪನಹಳ್ಳಿ ಮೂಲಕ ಬೆಟ್ಟವನ್ನು ಹತ್ತಲು ಇರುವ ಎರಡು ಮಾರ್ಗಗಳು. ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಮತ್ತು ರಾಮನಗರ ಜಿಲ್ಲೆಯ ಚಾರಣಪ್ರಿಯರಿಗೆ ದೊಡ್ಡಬಳ್ಳಾಪುರ ಸಮೀಪವಿರುವ ಚನ್ನಗಿರಿ ಬೆಟ್ಟ ಸಮೀಪವಾಗಿದೆ. ಚಾರಣಕ್ಕಾಗಿ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮುಂತಾದ ದೂರದ ಜಿಲ್ಲೆಗಳಿಗೆ ಹೋಗುವ ಚಾರಣಪ್ರಿಯರು ದೊಡ್ಡಬಳ್ಳಾಪುರ ತಾಲೂಕಿನಲ್ಲಿರುವ ಕೆಲವು ಬೆಟ್ಟಗಳನ್ನು ಚಾರಣಕ್ಕೆ ಬಳಸಿಕೊಳ್ಳಬಹುದಾಗಿದೆ.

ಕೆರೆಯಿಂದ ಬರುವ ನೀರು ಜಲಪಾತ

ಮೈಸೂರು ಹುಲಿ ಟಿಪ್ಪುಸುಲ್ತಾನ್ ಆಡಳಿತ ಕಾಲದಲ್ಲಿ ಚನ್ನರಾಯಸ್ವಾಮಿ ದೇವಾಲಯಕ್ಕೆ ಬರುವ ಭಕ್ತಾಧಿಗಳ ಮತ್ತು ಬೆಟ್ಟದ ಮೇಲಿನ ಪ್ರಾಣಿಗಳ ಅನುಕೂಲಕ್ಕಾಗಿ ದೊಡ್ಡಗೌಡ ಎಂಬಾತನಿಗೆ ಒಂದು ಕೆರೆ ನಿರ್ಮಾಣ ಮಾಡಲು ಜವಾಬ್ದಾರಿ ವಹಿಸಲಾಗಿತ್ತು. ಇಂದಿಗೂ ಈ ಕೆರೆಯನ್ನು ದೊಡ್ಡಗೌಡನ ಕೆರೆ ಎಂದೇ ಕರೆಯಲಾಗುತ್ತಿದೆ. ಈ ಕೆರೆಯಿಂದ ಹೊರಬರುವ ನೀರೆ ಏಳೆಮ್ಮೆದೊಣೆ ಮೂಲಕ ಹಾಲಿನ ಜಲಪಾತವಾಗಿ ಮಳೆಗಾಲದಲ್ಲಿ ಧುಮ್ಮಿಕ್ಕಿ ಹರಿಯುತ್ತ ಚಿಕ್ಕರಾಯಪ್ಪನಹಳ್ಳಿ ಕೆರೆಗೆ ಬಂದು ಸೇರುತ್ತದೆ.