ಕನ್ನಡವನ್ನು ಬೆಳೆಸುವತ್ತ ಕನ್ನಡ ಗೊತ್ತಿಲ್ಲ ಡಾಟ್​​ಕಾಮ್

ಉಷಾ ಹರೀಶ್​​

ಕನ್ನಡವನ್ನು ಬೆಳೆಸುವತ್ತ ಕನ್ನಡ ಗೊತ್ತಿಲ್ಲ ಡಾಟ್​​ಕಾಮ್

Wednesday November 18, 2015,

3 min Read

ಕರ್ನಾಟಕದಲ್ಲಿ ಕನ್ನಡ ಮಾಯಾವಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿರುವುಗಾಲೇ ಕನ್ನಡಿಗರೊಬ್ಬರು ಆರಂಭಿಸಿರುವ ಒಂದು ವೆಬ್​​ಸೈಟ್ ವಾಟ್ಸ್ಆಪ್ ಮೂಲಕ ಸಾವಿರಕ್ಕೂ ಹೆಚ್ಚು ಅನ್ಯ ಭಾಷಿಕರಿಗೆ ಕನ್ನಡ ಕಲಿಸುವಲ್ಲಿ ಯಶಸ್ವಿಯಾಗಿದೆ.

image


ಕನ್ನಡ ಗೊತ್ತಿಲ್ಲದ ಅನ್ಯ ಭಾಷಿಕರಿಗೆ ವಿದೇಶಿಗರಿಗೆ ಕನ್ನಡ ಕಲಿಸುವ ಸಲುವಾಗಿಯೇ ಹುಟ್ಟಿಕೊಂಡಿರುವ ಈ ವೆಬ್​​ಸೈಟ್​​ನ ಹೆಸರು ಕನ್ನಡ ಗೊತ್ತಿಲ್ಲ ಡಾಟ್​​​.ಕಾಂ . (http://kannadagottilla.com)

ಡಿಪ್ಲೋಮಾ ಪದವಿ ಪಡೆದು ಪುತ್ತೂರಿನಲ್ಲಿ ಎಲೆಕ್ಟ್ರಿಕಲ್ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುತ್ತಿರುವ ಅನೂಪ್ ಮಯ್ಯ ತನ್ನ ಸಹೋದರ ರಾಕೇಶ್ ಮಯ್ಯ ಅವರ ಸಹಾಯದೊಂದಿಗೆ ಈ ವೆಬ್ಸೈಟ್ ಪ್ರಾರಂಭಿಸಿದ್ದಾರೆ. ಕಳೆದ ವರ್ಷದ ನವೆಂಬರ್ 14ಕ್ಕೆ ಆರಂಭವಾದ ಈ ವೆಬ್​ಸೈಟ್ ಪ್ರಾರಂಭವಾಗಿ ಒಂದು ವರ್ಷವಾಗಿದೆ. ಅಷ್ಟರಲ್ಲೆ ಸಾಕಷ್ಟು ಮಂದಿಗೆ ಕನ್ನಡ ಕಲಿಸಿದ ಕೀರ್ತಿ ಮಯ್ಯ ಅವರದ್ದಾಗಿದೆ.

ಅನೂಪ್ ಅವರೊಂದಿಗೆ ಸುಮಾರು 20 ಮಂದಿ ಐಟಿ ಬಿಟಿ ಉದ್ಯೋಗಿಗಳ ತಂಡವಿದ್ದು ಇವರೆಲ್ಲಾ ಕನ್ನಡ ಕಲಿಸುವ ಕೆಲಸದಲ್ಲಿ ಮಯ್ಯ ಅವರಿಗೆ ಬೆನ್ನುಲುಬಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

image


ಕನ್ನಡ ಬರದವರು ಮತ್ತು ಅದನ್ನು ಕಲಿಯುವ ಆಸಕ್ತಿಯುಳ್ಳವರು ಈ ವೆಬ್​ಸೈಟ್​​ಗೆ ಹೋಗಿ ಒಮ್ಮೆ ನೊಂದಣಿಯಾಗಿ ತಮ್ಮ ಮೊಬೈಲ್ ನಂಬರ್​​ನ್ನು ಅಲ್ಲಿ ಎಂಟ್ರಿ ಮಾಡಿದರೆ ಸಾಕು. ಕನ್ನಡ ಗೊತ್ತಿಲ್ಲ ಡಾಟ್​​ಕಾಂ ಸದಸ್ಯರು ಅವರ ನಂಬರ್​​ನ್ನು ತಮ್ಮ ವಾಟ್ಸ್ಆ್ಯಪ್ ಗ್ರೂಪ್​ಗೆ ಸೇರಿಸಿಕೊಂಡು ಅವರು ಕನ್ನಡ ಕಲಿಸುತ್ತಾರೆ.

ಈಗಿನ ಬ್ಯುಸಿ ಜೀವನದಲ್ಲಿ ತರಗತಿಗೆ ಹೋಗಿ ಕನ್ನಡ ಕಲಿಯಲು ಕಷ್ಟ. ಅಷ್ಟೇ ಅಲ್ಲದೇ ಮಯ್ಯ ಅವರ ತಂಡಕ್ಕೂ ತರಗತಿಗಳನ್ನು ಪ್ರಾರಂಭಿಸಿ ಕನ್ನಡ ಕಲಿಸಲು ಯಾರಿಗೂ ಸಮಯವಿಲ್ಲ. ಇದೆನ್ನೆಲ್ಲಾ ಅರಿತ ಅನೂಪ್ ಮಯ್ಯ ವಾಟ್ಸ್ ಆ್ಯಪ್ ಮೂಲಕವೆ ಕನ್ನಡ ಕಲಿಸುವ ಕೆಲಸ ಮಾಡುತ್ತಿದ್ದಾರೆ. ಇವರು ಸೃಷ್ಟಿಸಿರುವ ಗ್ರೂಪ್​​ನಲ್ಲಿ 25 ಮಂದಿಯಿದ್ದು ಈ ಪೈಕಿ ಕನ್ನಡ ಭಾಷೆ ಕಲಿಯುವವರು 22 ಮಂದಿಯಿದ್ದರೆ ಕನ್ನಡ ಗೊತ್ತಿರುವವರು ಮೂವರು ಮಂದಿ ಇರುತ್ತಾರೆ.

image


ಪ್ರತಿ ಗ್ರೂಪಿನಲ್ಲಿರುವ ಮಯ್ಯ ತಂಡದ ಸದಸ್ಯರು ಇಂಗ್ಲೀಷ್ ವಾಕ್ಯಗಳ ಕನ್ನಡ ಅನುವಾದವನ್ನು ಇಂಗ್ಲೀಷ್ ಅಕ್ಷರಗಳಲ್ಲೇ ಟೈಪ್ ಮಾಡಿ ಗ್ರೂಪ್​​ನಲ್ಲಿ ಹಾಕುತ್ತಾರೆ. ಇಷ್ಟೇ ಅಲ್ಲದೇ ಸ್ವಚ್ಛ ಉಚ್ಛಾರಕ್ಕಾಗಿ ವಾಯ್ಸ್​ ರೆಕಾರ್ಡ್ ಕೂಡಾ ಮಾಡಲಾಗುತ್ತದೆ. ಪ್ರತಿ ದಿನ ವಾಟ್ಸ್ ಆ್ಯಪ್ ಗ್ರೂಪ್​​ಗೆ ಐದಾರು ವಾಕ್ಯಗಳನ್ನು ಕಳಿಸಲಾಗುತ್ತದೆ. ಅನ್ಯ ಭಾಷಿಕರಿಗೆ ಅರ್ಥವಾಗದಿದ್ದರೆ, ಪ್ರಶ್ನೆ ಕೇಳುತ್ತಾರೆ, ಅದಕ್ಕೆ ಉತ್ತರವನ್ನು ಅದೇ ಗ್ರೂಪ್​​ನಲ್ಲಿ ನೀಡಲಾಗುತ್ತದೆ. ಪ್ರತಿ ಎರಡು ವಾರಕ್ಕೊಮ್ಮೆ ಇಂಗ್ಲೀಷ್​​ನಿಂದ ಕನ್ನಡ ಅನುವಾದ ಮತ್ತು ಅದನ್ನು ವಾಯ್ಸ್​​ ರೆಕಾರ್ಡ್ ಮಾಡಿ ಕಳುಹಿಸುವ ಪರೀಕ್ಷೆ ಇರುತ್ತದೆ. ಅದನ್ನು ಪರಿಶೀಲಿಸಿ ಉಚ್ಛಾರಣೆ ಮತ್ತು ಪದ ಬಳಕೆಯ ತಪ್ಪುಗಳನ್ನು ಸರಿಪಡಿಸಲಾಗುತ್ತದೆ.

ಪ್ರತಿ ದಿನ ಐದಾರು ವಾಕ್ಯಗಳನ್ನು ಕಲಿಸಲಾಗುತ್ತದೆ. ಆದರೆ ವಾರಾಂತ್ಯದಲ್ಲಿ ಮಾತ್ರ ಸ್ವಲ್ಪ ಹೆಚ್ಚು ಅಂದರೆ ಕರ್ನಾಟಕದ ವಿವಿಧ ಜಾಗಗಳ ಬಗ್ಗೆ ಮಾಹಿತಿ, ನೃತ್ಯ ಪ್ರಕಾರಗಳ ಬಗ್ಗೆ ಮಾಹಿತಿ, ಅಷ್ಟೇ ಅಲ್ಲದೆ ಭಾಷೆಯ ಮಹತ್ವ, ಕನ್ನಡ ಸಿನಿಮಾಗಳ ಲಿಂಕ್​​ಗಳನ್ನು ಈ ಗ್ರೂಪ್​​ಗಳಲ್ಲಿ ಹಾಕಲಾಗುತ್ತದೆ. ಇದರಿಂದ ಅನ್ಯ ಭಾಷಿಕರಿಗೆ ಕನ್ನಡ ಕಲಿಯುದರ ಜತೆಗೆ ನಮ್ಮ ಸಂಸ್ಕೃತಿಯನ್ನು ತಿಳಿಯಪಡಿಸುವ ಪ್ರಯತ್ನ ಇದಾಗಿದೆ.

ಇಲ್ಲಿಯವರೆಗೂ 500ಕ್ಕೂ ಹೆಚ್ಚು ಮಂದಿಗೆ ಕನ್ನಡ ಕಲಿಸಿರುವ ಮಯ್ಯ ಅವರ ತಂಡ ಆ 500 ಮಂದಿಯೂ ಕನ್ನಡವನ್ನು ಅತ್ಯಂತ ಯಶಸ್ವಿಯಾಗಿ ಕನ್ನಡ ಬಳಸುವುದನ್ನು ಕಂಡಿದ್ದಾರೆ. ಇನ್ನು 500 ಮಂದಿ ಕನ್ನಡ ಕಲಿಕೆಯಲ್ಲಿ ನಿರತರಾಗಿದ್ದಾರೆ. ಅಮೇರಿಕಾ, ಜಪಾನ್, ಜರ್ಮನಿ, ಸ್ವಿಟ್ಜರ್ಲ್ಯಾಂಡ್, ನ್ಯೂಜಿಲೆಂಡ್,ಕುವೈತ್, ದುಬೈ, ಸೇರಿದಂತೆ ಹಲವು ಮಂದಿ ವಿದೇಶಿಗರಿಗೆ ಕನ್ನಡ ಕಲಿಸುವ ಕಾಯಕದಲ್ಲಿ ನಿರತರಾಗಿದ್ದಾರೆ ಮಯ್ಯ.

ಈಗ ಸಧ್ಯಕ್ಕೆ ವರ್ಷಕ್ಕೆ ಎರಡು ಬ್ಯಾಚ್ ಮಾಡಿಕೊಂಡು ಸುಮಾರು 1000ಕ್ಕೂ ಹೆಚ್ಚು ಜನರಿಗೆ ಕನ್ನಡ ಕಲಿಸಿರುವ ಅನೂಪ್ ಮುಂದಿನ ದಿನಗಳಲ್ಲಿ ಮೂರು ತಿಂಗಳಿಗೊಂದು ಬ್ಯಾಚ್ ಮಾಡಿಕೊಂಡು ಕನ್ನಡ ಕಲಿಕೆಯನ್ನು ಇನ್ನು ದ್ವಿಗುಣಗೊಳಿಸುವ ಉದ್ದೇಶ ಇಟ್ಟುಕೊಂಡಿದ್ದಾರೆ.

image


ವಿದೇಶಗಳು ಮಾತ್ರವಲ್ಲದೆ, ರಾಜ್ಯದ ವಿವಿದ ಜಿಲ್ಲೆಗಳಲ್ಲಿ ವಾಸ ಮಾಡುತ್ತಿರುವ ದೆಹಲಿ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಮತ್ತಿತರ ರಾಜ್ಯಗಳ ಭಾಷಿಕರಿಗರೂ ತಮ್ಮ ದೈನಂದಿನ ಚಟುವಟಿಕೆಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಅವರೆಲ್ಲಾ ಕನ್ನಡ ಕಲಿತು ಮಾತನಾಡುತ್ತಿದ್ದಾರಂತೆ. ಇದು ಕನ್ನಡ ಗೊತ್ತಿಲ್ಲ ಡಾಟ್ ಕಾಮ್ನ ಸಾಧನೆಯ ಸರಿ ಎನ್ನಬಹುದು.

ಕನ್ನಡವನ್ನು ಮರೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಅನೂಪ್ಮಯ್ಯ ಅವರ ತಂಡದ ಕೆಲಸ ಮಾತ್ರ ಅಭಿನಾಂದರ್ಹವಾದುದು.

" ಜಪಾನಿ ಯುವಕನೊಬ್ಬನಟ ಸುದೀಪ್ ಅವರ ಅಭಿಮಾನಿಯಾಗಿದ್ದು, ಅವರ ಸಿನಿಮಾಗಳ ಡೈಲಾಗ್​​ಗಳನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ಈ ಗ್ರೂಪ್​ಗೆ ಸೇರಿಕೊಂಡು ಕನ್ನಡ ಕಲಿಯುತ್ತಿದ್ದಾನೆ. ಜರ್ಮನಿಯ ಯುವಕನೊಬ್ಬ ಇಲ್ಲಿಯ ಭಾಷೆ ಸಂಸ್ಕೃತಿಯನ್ನು ಅರಿಯಲು ಕನ್ನಡ ಕಲಿಯುತ್ತಿದ್ದಾನೆ. ಹೀಗೆ ನಮ್ಮ ಕನ್ನಡ ಭಾಷೆಯನ್ನು ದೇಶ ವಿದೇಶಗಳಿಗೂ ವಿಸ್ತರಿಸುವ ಒಂದು ಸಣ್ಣ ಪ್ರಯತ್ನ ಇದಾಗಿದೆ".

-ಅನೂಪ್ ಮಯ್ಯ, ಕನ್ನಡ ಗೊತ್ತಿಲ್ಲ ಡಾಟ್ ಕಾಮ್​​​ ಸಂಸ್ಥಾಪಕ