ಅಂದು ಬಾರ್ ಡ್ಯಾನ್ಸರ್, ಇಂದು ಬಾಲಿವುಡ್ ಡೈರೆಕ್ಟರ್

ಟೀಮ್​ ವೈ.ಎಸ್​​.

ಅಂದು ಬಾರ್ ಡ್ಯಾನ್ಸರ್, ಇಂದು ಬಾಲಿವುಡ್ ಡೈರೆಕ್ಟರ್

Saturday November 07, 2015,

3 min Read

ಪ್ರತಿಯೊಬ್ಬರ ಜೀವನದಲ್ಲೂ ಹೋರಾಟ ಅನ್ನೋದು ಇದ್ದೇ ಇರುತ್ತೆ. ಕೆಲವರು ಒಂದು ಹೊತ್ತಿನ ತುತ್ತು ಅನ್ನಕ್ಕೆ, ಮೈ ಮುಚ್ಚಲು ಬಟ್ಟೆ, ತಲೆ ಮೇಲೊಂದು ಸೂರಿಗೆ ಹೋರಾಟ ನಡೆಸಿದರೆ ಕೆಲವರು ಐಶಾರಾಮಿ ಬಂಗಲೆ, ಕಾರು, ಒಡವೆ, ಆಸ್ತಿ- ಪಾಸ್ತಿಗಾಗಿ ಸ್ಟ್ರಗಲ್ ಮಾಡ್ತಾರೆ. ಆದ್ರೆ ಬಾಲಿವುಡ್ ಸ್ಕ್ರಿಪ್ಟ್ ರೈಟರ್ ಶಗುಫ್ತಾ ರಫೀಕ್ ಅವರ ಹೋರಾಟ ಇದೆಲ್ಲಕ್ಕಿಂತಲೂ ಭಿನ್ನ.

image


ಶಗುಫ್ತಾ ರಫೀಕ್. ಇವತ್ತು ಬಾಲಿವುಡ್​​ನಲ್ಲಿ ದೊಡ್ಡ ಹೆಸರುಗಳಲ್ಲೊಂದು. ಅವರಿಗೇನು, ಕಲರ್​​ಫುಲ್ ಹಿಂದಿ ಚಿತ್ರಗಳಿಗೆ ಬಣ್ಣ ಬಣ್ಣದ ಕಥೆಗಳನ್ನು ಬರೆದುಕೊಂಡು, ಫಿಲ್ಮ್ ಪಾರ್ಟಿಗಳಲ್ಲಿ ಓಡಾಡ್ಕೊಂಡು ಆರಾಮಾಗಿದ್ದಾರೆ ಅಂದುಕೊಳ್ಳೋರೆ ಹೆಚ್ಚು. ಆದ್ರೆ ಶಗುಫ್ತಾ ಇತಿಹಾಸವನ್ನೊಮ್ಮೆ ಕೆದಕಿ ನೋಡಿದ್ರೆ, ಎಂಥವರಿಗೂ ಶಾಕ್ ಆಗುತ್ತೆ. ಹೀಗೂ ಒಬ್ಬರ ಜೀವನದಲ್ಲಿ ನಡೆಯುತ್ತಾ ಅಂತ ಆತಂಕ, ಆಕ್ರೋಶ ಹಾಗೂ ಅಸಹನೆಗಳು ಹುಟ್ಟಿಕೊಳ್ಳುತ್ತವೆ.

image


ಹೌದು, ಶಗುಫ್ತಾಗೆ ತನ್ನ ತಂದೆ- ತಾಯಿ ಯಾರು ಅನ್ನೋದೇ ಗೊತ್ತಿಲ್ಲ. ಅವರೇ ಹೇಳಿಕೊಂಡಿರುವ ಪ್ರಕಾರ ಅವರ ಹುಟ್ಟಿನ ಕುರಿತು ಮೂರು ಸ್ಟೋರಿಗಳಿವೆಯಂತೆ. ಅದರಲ್ಲೊಂದು ಶಗುಫ್ತಾಡಿ ಅಕ್ಕ ಮದುವೆಯಾಗೋಕೆ ಮುಂಚೆ ಹುಟ್ಟಿದ ಮಗು ಆಕೆ ಅನ್ನೋದು. ಮತ್ತೊಂದು ಒಬ್ಬ ಮಹಿಳೆ ಹಾಗೂ ಬ್ಯಾರಿಸ್ಟರ್ ನಡುವಿನ ಅನೈತಿಕ ಸಂಬಂಧದಿಂದಾಗಿ ಹುಟ್ಟಿದ ಮಗು ಶಗುಫ್ತಾ ಅಂತ. ಇನ್ನೊಂದು ಸ್ಲಮ್​​ನಲ್ಲಿ ಹುಟ್ಟಿದ ಶಗುಫ್ತಾಡಿನ್ನು ಸಾಕಲಾಗದೇ ಅವರ ತಂದೆ- ತಾಯಿಯೇ ಎಲ್ಲೋ ಎಸೆದು ಹೋಗಿದ್ದರು ಅನ್ನೋದು. ಹೀಗೆ ಈಗ 50ರ ಹರೆಯದ ಶಗುಫ್ತಾ ತಮ್ಮ ಕುರಿತು ಬಗ್ಗೆ ಹೇಳಿಕೊಳ್ಳುತ್ತಾರೆ.

image


ಇಂತಹ ಶಗುಫ್ತಾ ಬಾಲ್ಯವೂ ನೋವು, ವೇದನೆಗಳಿಂದಲೇ ಕೂಡಿತ್ತು. ಕಾರಣ ಅವರ ಹುಟ್ಟು ಅನ್ನೋದನ್ನ ಮತ್ತೆ ಹೇಳಬೇಕಿಲ್ಲ. ಅನೈತಿಕ ಸಂಬಂಧದಿಂದ ಹುಟ್ಟಿದವಳು ಅಂತ ಶಗುಫ್ತಾರನ್ನು ಜರಿದವರೇ ಹೆಚ್ಚು. ಹೀಗಾಗಿಯೇ ಅವರ ತಾಯಿಯಂತಿದ್ದ ಅಕ್ಕ ಮಾತ್ರ ಶಗುಫ್ತಾರಿಗೆ ಆಸರೆ. ಆರ್ಥಿಕವಾಗಿ ಚೆನ್ನಾಗಿದ್ದ ಕುಟುಂಬ ಕಾರಣಾಂತರಗಳಿಂದ ಬಡತನದತ್ತ ಸಾಗಿತ್ತು. ಹೀಗಾಗಿ ಶಗುಫ್ತಾ ಚಿಕ್ಕ ವಯಸ್ಸಿನಲ್ಲೇ ಬಾರ್​​ಗಳಿಗೆ ಹೋಗಿ ಡ್ಯಾನ್ಸ್ ಮಾಡತೊಡಗಿದರು. ಈ ಮೂಲಕ ಕುಟುಂಬದ ಜವಾಬ್ದಾರಿಯನ್ನು ತನ್ನ ಪುಟ್ಟ ಹೆಗಲ ಮೇಲೆ ಹೊತ್ತಿದ್ದರು. ಅದು ಅಲ್ಲಿಗೇ ಮುಗಿಯದೇ ತನ್ನ 17ರ ವಯಸ್ಸಿನಲ್ಲಿ ಶಗುಫ್ತಾ ವೇಶ್ಯಾವೃತ್ತಿಗೂ ತೊಡಗಬೇಕಾಯ್ತು. ಆದ್ರೂ ಹೇಗೋ ತನ್ನ ಕುಟುಂಬದ ಹೊಟ್ಟೆ ಹೊರೆಯುತ್ತಿದ್ದೀನಲ್ಲಾ ಅನ್ನೋ ತೃಪ್ತಿಯೊಂದಿಗೆ ಅವರು ದಿನದೂಡತೊಡಗಿದರು. ಈ ವಿಷಯ ಮನೆಯವರಿಗೆ ಗೊತ್ತಿದ್ದರೂ, ಬೇರೆ ದಾರಿಯಿಲ್ಲದೆ ಅವರೂ ಸುಮ್ಮನಿದ್ದರು ಎನ್ನುವಾಗ ಕಣ್ಣೀರಾಗ್ತಾರೆ ಶಗುಫ್ತಾ.

image


ಹೀಗೆ, ಅದಾಗಲೇ ಸಂಕಷ್ಟದಲ್ಲಿ ಸಿಲುಕಿದ್ದ ಶಗುಫ್ತಾ ಮೇಲೆ ಇನ್ಯಾರ ಕಣ್ಣು ಬಿತ್ತೋ, ಅದೊಂದು ದಿನ ಅವರ ತಂದೆ ಕುಡಿದ ಅಮಲಿನಲ್ಲಿ ಬಂದೂಕು ಹಿಡಿದು, ಶಗುಫ್ತಾ ಇಲ್ಲದಿದ್ದಾಗ ಇಡೀ ಕುಟುಂಬವನ್ನೇ ಶೂಟ್ ಮಾಡಿ ಕೊಂದುಬಿಟ್ಟ. ಅಲ್ಲಿಗೆ ಎಲ್ಲರೂ ಇದ್ದೂ ಅನಾಥೆಯಾಗಿದ್ದ ಶಗುಫ್ತಾ ಮತ್ತೊಮ್ಮೆ ಅನಾಥೆಯಾಗಿಬಿಟ್ಟರು. ಆದ್ರೆ ಅಷ್ಟರಲ್ಲಾಗಲೇ ಅವರು ವೇಶ್ಯಾವೃತ್ತಿಗೆ ತೊಡಗಿ 10 ವರ್ಷಗಳೇ ಆಗಿತ್ತು. ಆಗ ಪರಿಚಯದವರೊಬ್ಬರು ಅವರಿಗೆ ದುಬೈಗೆ ಹೋಗುವಂತೆ ಹೇಳಿದರು. ಅದರಂತೆ ಶಗುಫ್ತಾ ದುಬೈಗೆ ಹೋದರು. ಅಲ್ಲಿ ಡ್ಯಾನ್ಸ್ ಬಾರ್​​ಗಳಲ್ಲಿ ಕೆಲಸ ಮಾಡತೊಡಗಿದರು.

image


ಕೆಲ ವರ್ಷಗಳ ಬಳಿಕ ಭಾರತಕ್ಕೆ ಬಂದ ಶಗುಫ್ತಾ ಖಾಸಗಿ ಕಾರ್ಯಕ್ರಮಗಳಲ್ಲಿ ಹಾಡೋದನ್ನ ಪ್ರಾರಂಭಿಸಿದರು. 2002ರ ಹೊತ್ತಿಗೆ ಅವರಿಗೆ ಬಾಲಿವುಡ್ ನಿರ್ದೇಶಕ ಕಮ್ ನಿರ್ಮಾಪಕ ಮಹೇಶ್ ಭಟ್ ಪರಿಚಯವಾಯ್ತು. ಅವರ ಬಳಿ ಸಿನಿಮಾಗಳಿಗೆ ಚಿತ್ರಕಥೆ, ಸಂಭಾಷಣೆ ಬರೆಯುವುದಾಗಿ ಕೇಳಿಕೊಂಡರು ಶಗುಫ್ತಾ. ಆದ್ರೆ ಮೊದಲ ಅವಕಾಶಕ್ಕಾಗಿ ಅವರು 4 ವರ್ಷಗಳೇ ಕಾಯಬೇಕಾಯ್ತು. 2006ರ ‘ವೋ ಲಮ್ಹೇ’ ಚಿತ್ರದ ಮೂಲಕ ಶುಗುಫ್ತಾರ ಬದುಕುವಾಸೆ ಮತ್ತೆ ಚಿಗುರೊಡೆಯಿತು. ಬಾಲಿವುಡ್ ಕೆರಿಯರ್ ಪ್ರಾರಂಭವಾಯ್ತು.

ಕ್ರಮೇಣ ಭಟ್ ಕ್ಯಾಂಪ್​​ನ ಎಲ್ಲ ಚಿತ್ರಗಳಿಗೂ ಶಗುಫ್ತಾರೇ ಚಿತ್ರಕಥೆ, ಸಂಭಾಷಣೆ ಬರೆಯತೊಡಗಿದರು. ‘ಆವಾರಾಪನ್’, ‘ಧೋಖಾ’, ‘ಶೋಬಿಜ್’, ‘ರಾಜ್ 2’, ‘ಜಿಸ್ಮ್ 2’, ‘ಮರ್ಡರ್ 2’, ‘ಜನ್ನತ್ 2’, ‘ರಾಜ್ 3’ ಸೇರಿದಂತೆ 2014ರ ಸೂಪರ್​​ಹಿಟ್ ‘ಆಶಿಕಿ 2’ ಚಿತ್ರಕ್ಕೂ ಶಗುಫ್ತಾ ಚಿತ್ರಕಥೆ, ಸಂಭಾಷಣೆಗಳನ್ನು ಬರೆದಿದ್ದಾರೆ. ಈ ಮೂಲಕ ಬಾಲಿವುಡ್​​ನ ಸದ್ಯದ ಸಕ್ಸಸ್​​ಫುಲ್ ಸ್ಟೋರಿ ರೈಟರ್ ಸಾಲಿಗೆ ಅವರು ಸೇರಿದ್ದಾರೆ.

ಇಂತಹ ಶಗುಫ್ತಾ ಈಗ ಡೈರೆಕ್ಟರ್ ಆಗ ಹೊರಟಿದ್ದಾರೆ. ಸುಮಾರು 15 ಚಿತ್ರಗಳಲ್ಲಿ ಕೆಲಸ ಮಾಡಿ ಅನುಭವ ಪಡೆದಿರುವ ಅವರು ‘ರೋಸ್’ ಎಂಬ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ‘ರೋಸ್’, ಅತ್ಯಾಚಾರಕ್ಕೊಳಗಾದ ಮಹಿಳೆಯೊಬ್ಬಳು ಸೇಡು ತೀರಿಸಿಕೊಳ್ಳುವ ಕಥೆಯಂತೆ. ಅದೇನೇ ಇರಲಿ, ಸಾಕಷ್ಟು ನೋವುಗಳನ್ನುಂಡಿರುವ ಶಗುಫ್ತಾರಿಗೆ ಯಶಸ್ಸು ಲಭಿಸಲಿ.

ಒಟ್ಟಾರೆ ಸಿನಿಮಾ ಸ್ಟೋರಿಗಳನ್ನೂ ಮೀರಿಸುವಂತಿರುವ ಶಗುಫ್ತಾ ಜೀವನದ ಕಥೆ ಎಲ್ಲರಿಗೂ ಮಾದರಿಯೇ ಸರಿ. 50ರ ಹೊಸ್ತಿಲಲ್ಲಿರುವ ಅವರಿಗೆ ಈಗಲೂ ಮದುವೆಯಾಗಬೇಕು, ತನ್ನದೂ ಒಂದು ಕುಟುಂಬ ಇರಬೇಕು ಅನ್ನೋ ಆಸೆಯಿದೆ. ಆ ಆಸೆಗಳು ಆದಷ್ಟು ಬೇಗ ಈಡೇರಲಿ ಅಂತ ಹಾರೈಸೋಣ.

ಸೈನ್ ಅಪ್ ನಮ್ಮ ದೈನಂದಿನ ಸುದ್ದಿಪತ್ರಕ್ಕಾಗಿ