ಪ್ರಧಾನಿ ಮೋದಿಯ ಭವಿಷ್ಯ ನಿರ್ಧರಿಸುವ ಉತ್ತರ ಪ್ರದೇಶ ಚುನಾವಣೆ

ಟೀಮ್​ ವೈ.ಎಸ್​. ಕನ್ನಡ

ಪ್ರಧಾನಿ ಮೋದಿಯ ಭವಿಷ್ಯ ನಿರ್ಧರಿಸುವ ಉತ್ತರ ಪ್ರದೇಶ ಚುನಾವಣೆ

Thursday February 09, 2017,

4 min Read

ಪ್ರಧಾನಿ ನರೇಂದ್ರ ಮೋದಿ 2019ರ ಬಳಿಕ ಅಧಿಕಾರದಲ್ಲಿರುತ್ತಾರಾ..? ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಅಧಿಕಾರದ ಗದ್ದುಗೆ ಹಿಡಿಯುತ್ತವಾ..? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ, ಉತ್ತರ ಪ್ರದೇಶದ ಚುನಾವಣೆಯಲ್ಲಿ ಸಿಗಲಿದೆ. ಚುನಾವಣೆ ಉತ್ತರ ಪ್ರದೇಶದಲ್ಲಿ ಅಧಿಕಾರ ಹಿಡಿಯುವ ಪಕ್ಷಗಳಿಗೆ ಅಗ್ನಿ ಪರೀಕ್ಷೆ ಆಗಿದ್ದರೂ ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ ಇದಾಗಿದೆ ಅನ್ನುವ ಬಗ್ಗೆ ಸಂಶಯವೇ ಇಲ್ಲ. ಪಂಜಾಬ್, ಗೋವಾ ಮತ್ತು ಉತ್ತರಾಖಂಡದಲ್ಲಿ ಚುನಾವಣೆಗಳು ನಡೆಯುತ್ತಿದ್ದರೂ ಅಲ್ಲೆಲ್ಲಾ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಚಾರ್ಮ್ ಕಳೆದುಕೊಂಡಿವೆ. ಅಷ್ಟೇ ಅಲ್ಲ ಲೋಕಸಭಾ ಚುನಾವಣೆಯಲ್ಲಿ ಆ ರಾಜ್ಯಗಳ ಪಾತ್ರ ಉತ್ತರ ಪ್ರದೇಶದ ಪಾತ್ರಕ್ಕಿಂತ ಚಿಕ್ಕದು. ಅಷ್ಟೇ ಅಲ್ಲ ಉತ್ತರ ಪ್ರದೇಶದಲ್ಲಿ ಮೇಲುಗೈ ಸಾಧಿಸಿದ ಪಕ್ಷಗಳೇ ಬಹುಮತ ಪಡೆದಿರುವುದು ಇತಿಹಾಸದಲ್ಲಿದೆ. ಉತ್ತರ ಪ್ರದೇಶದ 80 ಲೋಕಸಭಾ ಸೀಟ್​​ಗಳ ಪೈಕಿ 73 ಸ್ಥಾನಗಳನ್ನು ಮೋದಿ ನೇತೃತ್ವದ ಬಿಜೆಪಿ ಪಡೆದುಕೊಂಡಿದೆ. ಬಿಜೆಪಿ ಉತ್ತರ ಪ್ರದೇಶದಲ್ಲಿ ಪ್ರಭಾವಿ ಆಗಿದ್ದರಿಂದ ಮೋದಿಗೆ ಅಧಿಕಾರ ಸುಲಭವಿದೆ. ಆದ್ರೆ ಯು.ಪಿ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡರೆ, ಮುಂದಿನ ಅವಧಿಯಲ್ಲಿ ನರೇಂದ್ರ ಮೋದಿ ಪ್ರಧಾನಿ ಆಗುವುದು ಸಂಶಯವಾಗಿದೆ.

image


2014ರ ಚುನಾವಣೆ ವೇಳೆ ಮೋದಿ ಅಲೆ ಹೆಚ್ಚಾಗಿತ್ತು. ಬಿಜೆಪಿ 272 ಸ್ಥಾನಗಳಿಗಿಂತ ಅಧಿಕ ಸ್ಥಾನ ಪಡೆದು ಬಹುಮತ ಸಾಧಿಸಿದ ಬೆನ್ನಲ್ಲೇ ಕೆಲವು ಮಿತ್ರಪಕ್ಷಗಳು ಬಿಜೆಪಿಯ ಜೊತೆ ಕೈ ಜೋಡಿಸಿದ್ದವು. ಆದ್ರೆ ಮೋದಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯಂತೆ ಸಮ್ಮಿಶ್ರ ಸರ್ಕಾರ ನಡೆಸುವುದು ಕಷ್ಟ. ಅವರ ವ್ಯಕ್ತಿತ್ವ ಅದಕ್ಕೆ ಸರಿ ಹೊಂದುವುದು ಕೂಡ ಇಲ್ಲ. ವಾಪಪೇಯಿ ಒಬ್ಬ ಅದ್ಭುತ ರಾಜಕಾರಣಿ. ಅವರೊಬ್ಬ ಅಜಾರ ಶತ್ರು. ಭಾರತದ ಮೊದಲ ಪ್ರಧಾನಿ ಜವಹಾರ್ ಲಾಲ್ ನೆಹರೂ ಕೂಡ ವಾಜಪೇಯಿಯವರ ರಾಜಕೀಯ ತಂತ್ರಕ್ಕೆ ಮೆಚ್ಚುಗೆ ಸೂಚಿಸಿದ್ದರು. ಆದ್ರೆ ಮೋದಿ ಹಾಗಲ್ಲ. ಎರಡೂವರೆ ವರ್ಷಗಳ ಅವಧಿಯಲ್ಲೇ ಮೋದಿ ಏನು ಅನ್ನುವುದು ಗೊತ್ತಾಗಿದೆ. ಅವರ ನಿರ್ಧಾರಗಳು ಅವರ ಯೋಚನೆಯಂತೆ ನಡೆಯುತ್ತದೆ. ಮತ್ತೊಬ್ಬರು ಅವರಿಗೆ ನೆಪಮಾತ್ರವಾಗಿರುತ್ತಾರೆ.

ಇದನ್ನು ಓದಿ: ಭಾರತಕ್ಕೆ ವಿಶ್ವಕಪ್​ ಗೆದ್ದು ಕೊಟ್ಟ ಸಾಧಕ- ದೃಷ್ಠಿ ವಿಕಲಚೇತನರ ಕ್ರಿಕೆಟ್​ನಲ್ಲಿ ಶೇಖರ್​ "ನಾಯಕ"

ಹೀಗಾಗಿ ಲೆಕ್ಕಾಚಾರ ತುಂಬಾ ಸುಲಭ. ಮೋದಿ ಜನಪ್ರಿಯತೆ ಕಳೆದುಕೊಳ್ಳುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಕಳೆದ ಬಾರಿ ಗೆದ್ದಷ್ಟೇ ಸ್ಥಾನವನ್ನು 2019ರಲ್ಲಿ ಗೆಲ್ಲಲು ಸಾಧ್ಯವಿಲ್ಲ. ಹೀಗಾಗಿ ಯು.ಪಿ.ಯ ವಿಧಾನಸಭಾ ಚುನಾವಣೆ ಭಾರೀ ಕುತೂಹಲ ಕೆರಳಿಸಿದೆ. ಉತ್ತರ ಪ್ರದೇಶ ಆರ್ಥಿಕವಾಗಿ ಹಿಂದುಳಿದಿರಬಹುದು. ಆದ್ರೆ ರಾಜಕೀಯವಾಗಿ ಭವಿಷ್ಯ ನಿರ್ಧರಿಸುವ ರಾಜ್ಯ. ಇದು ಮೋದಿಗೆ ಗೊತ್ತಿದೆ. ಹೀಗಾಗಿ ಮೋದಿ ವಾರಾಣಾಸಿ ಲೋಕಸಭಾ ಸ್ಥಾನವನ್ನು ಆಯ್ಕೆ ಮಾಡಿಕೊಂಡಿದ್ದರು. ಇದು ಕಳೆಬಾರಿ ಉತ್ತರ ಪ್ರದೇಶದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲ ಉತ್ತರ ಪ್ರದೇಶದ ಪವರ್ ಏನು ಅನ್ನುವುದು ಮೋದಿಗೆ ಗೊತ್ತಾಗಿತ್ತು. ಹೀಗಾಗಿ ಮೋದಿ ಈಗ ಉತ್ತರ ಪ್ರದೇಶದಲ್ಲಿ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಆದ್ರೆ ಗೆಲ್ಲುತ್ತಾರಾ ಅನ್ನುವುದು ಮೊದಲ ಪ್ರಶ್ನೆ.

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉತ್ತಮ ಆರಂಭವನ್ನು ಪಡೆದಿತ್ತು. ಸರ್ಜಿಕಲ್ ಸ್ಟ್ರೈಕ್ ದೇಶದಲ್ಲಿ ಬಿಸಿ ಹೆಚ್ಷಿಸಿತ್ತು. ಪಾಕ್ ವಿರುದ್ಧ ದಾಳಿ ಮೋಡಿ ಎಮೋಷನಲ್ ಆಗಿ ಜನರ ಮನಸ್ಸು ಪ್ರವೇಶಿಸುವ ಮನಸ್ಸು ಮಾಡಿತ್ತು. ಆದ್ರೆ ನೋಟ್ ಬ್ಯಾನ್ ಮಾಡಿದ್ದು ಮೋದಿಗೆ ದೊಡ್ಡ ಹಿನ್ನಡೆಯಾಗಿ ಕಾಣಿಸಿಕೊಂಡಿತ್ತು. ಭಯೋತ್ಪಾದನೆ ಮತ್ತು ಕಾಳಧನವನ್ನು ತಡೆಹಿಡಿಯಲು ಇದು ಕ್ರಮವಾದ್ರೂ, ಅದು ಜನ ಸಾಮಾನ್ಯರ ದೃಷ್ಟಿಯಲ್ಲಿ ಕಷ್ಟದ ದಿನವಾಗಿ ಬೆಳದಿತ್ತು. ನೋಟ್ ಬ್ಯಾನ್ ವಿಷಯದಲ್ಲಿ ಎಡವಿದ್ದು ಮೋದಿಗೆ ಉತ್ತರ ಪ್ರದೇಶದಲ್ಲಿ ಹಿನ್ನಡೆ ಕಾಣಲು ದೊಡ್ಡ ಕಾರಣವಾದ್ರೂ ಅಚ್ಚರಿ ಇಲ್ಲ.

ನೋಟ್ ಬ್ಯಾನ್ ಆದಮೇಲೆ ಎಟಿಎಂ ಬಳಿಯ ನೂಕುನುಗ್ಗಲಿಗೆ ಸುಮಾರು 100ಕ್ಕೂ ಅಧಿಕ ಬಡ ಜನರು ಪ್ರಾಣ ಕಳೆದುಕೊಂಡಿದ್ದರು. ರೈತರು ಕಂಗೆಟ್ಟಿದ್ದಾರೆ. ಕೂಲಿ ಕಾರ್ಮಿಕರು ಕಷ್ಟ ಅನುಭವಿಸಿದ್ದಾರೆ. ಚಿಕ್ಕ ಚಿಕ್ಕ ವ್ಯಾಪಾರಿಗಳು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಭಾರತದ ಅಭಿವೃದ್ದಿ ನಿಂತು ಹೋಗಿದೆ. ದೇಶ ಹಿನ್ನಡೆ ಕಂಡಿದೆ. ಇದಕ್ಕೆಲ್ಲಾ ಮೋದಿ ಜನರ ಬಳಿ ಕ್ಷಮೆ ಕೇಳುವ ಬದಲು ಲೋಕಸಭೆಯಲ್ಲಿ ತನ್ನ ಸಾಧನೆಯಂತೆ ಬಿಂಬಿಸಿಕೊಂಡಿದ್ದಾರೆ. ನೋಟ್ ಬ್ಯಾನ್ ಮೋದಿಗೆ ಉತ್ತರ ಪ್ರದೇಶ ಚುನಾವಣೆಯಲ್ಲಿ ಉರುಳಾಗುವ ಸಾಧ್ಯತೆಯನ್ನು ಕೂಡ ತಳ್ಳಿ ಹಾಕುವಂತಿಲ್ಲ. ಜನರು ಮೋದಿಯ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಉತ್ತರ ಪ್ರದೇಶ ಚುನಾವಣೆಯಲ್ಲಿ ಅಖಿಲೇಶ್ ಯಾದವ್​ರ ಸಮಾಜವಾದಿ ಪಾರ್ಟಿ ಮತ್ತು ರಾಹುಲ್ ಗಾಂಧಿಯ ಕಾಂಗ್ರೆಸ್ ಒಟ್ಟಾಗಿದ್ದು ಮತ್ತೊಂದು ದೊಡ್ಡ ಹಿನ್ನಡೆ. ಸಮಾಜವಾದಿ ಪಾರ್ಟಿ ತನ್ನೊಳಗಿನ ಜಗಳದಿಂದ ಕಂಗಾಲಾಗಿತ್ತು. ಆದ್ರೆ ಈಗ ಅಖಿಲೇಶ್ ಮತ್ತು ರಾಹುಲ್ ಗಾಂಧಿ ಒಂದಾಗಿದ್ದಾರೆ. ಯಾದವ್ ಕುಟುಂಬದಲ್ಲಿ ಜಗಳ ಇನ್ನೂ ಇದ್ರೂ ಮೋದಿಯನ್ನು ಬಡಿದಟ್ಟಬಲ್ಲ ಮೈತ್ರಿ ಎಂದೇ ಹೇಳಲಾಗುತ್ತಿದೆ. ಅಖಿಲೇಶ್ ಮೋದಿ ವಿರುದ್ಧ ನೇರ ನೇರ ನಿಂತು ಹೋರಾಟಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ ಅಖಿಲೇಶ್ ಬೆನ್ನಿಗಿದೆ. ಮುಲಾಯಂ ಸಿಂಗ್ ಯಾದವ್ ಮತ್ತು ಶಿವಪಾಲ್ ಸಿಂಗ್ ಯಾದವ್ ಗೂಂಡಾಗಿರಿಯಿಂದ ಅಖಿಲೇಶ್ ದಂಗೆ ಎದ್ದು ಹೊರ ಬಂದಿದ್ದೇ ಈಗ ಆ ಪಕ್ಷಕ್ಕೆ ಪಾಸಿಟಿವ್ ಆಗಿ ತಿರುಗಿದೆ. ಅಖಿಲೇಶ್ ತನ್ನ ತಂದೆಯಂತಹ ನಾಯಕ ಅಲ್ಲ ಅನ್ನುವುದನ್ನು ಸಾಭೀತು ಮಾಡಿದ್ದಾರೆ. ಜಾತಿಗಿಂತ ಅಭಿವೃದ್ಧಿಯೇ ಮುಖ್ಯ ಅನ್ನುವುದನ್ನು ಅಖಿಲೇಶ್ ಪಠಿಸುತ್ತಿದ್ದಾರೆ. ಉತ್ತರ ಪ್ರದೇಶದ ಜನರಿಗೆ ಅಖಿಲೇಶ್ ನಡೆಗಳಲ್ಲಿ ಮತ್ತು ಆಡಳಿತದಲ್ಲಿ ಭವಿಷ್ಯ ಕಾಣುತ್ತಿದೆ. ಹೀಗಾಗಿ ಉತ್ತರ ಪ್ರದೇಶದಲ್ಲಿ ಅಧಿಕಾರ ಹಿಡಿಯಬೇಕು ಅನ್ನುವ ಮೋದಿ ಆಸೆಗೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಾರ್ಟಿಯ ಮಹಾಮೈತ್ರಿ ಅಡ್ಡಿಯಾಗುವುದು ಖಚಿತ.

ಬಿಜೆಪಿಯಲ್ಲಿ ಇನ್ನೂ ಒಂದು ಸಮಸ್ಯೆ ಇದೆ. ಉತ್ತರ ಪ್ರದೇಶದಲ್ಲಿ ಮೋದಿಯನ್ನು ಬಿಟ್ಟರೆ ಬಿಜೆಪಿಗೆ ಬೇರೆ ನಾಯಕರೇ ಕಾಣಿಸುತ್ತಿಲ್ಲ. ಇದು ಬಿಜೆಪಿಯ ಒಳಗೆಯೇ ಒಡಕು ಮೂಡುವಂತೆ ಮಾಡಿದೆ. ಅಷ್ಟೇ ಅಲ್ಲ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಾರೂ ಅನ್ನುವುದು ಇನ್ನೂ ನಿರ್ಧಾರವಾಗಿಲ್ಲ. ರಾಜನಾಥ್ ಸಿಂಗ್​ರಂತಹ ಉತ್ತಮ ನಾಯಕರೂ ಅಮಿತ್ ಷಾ ಮುಂದೆ ಮಂಕಾಗಿದ್ದಾರೆ. ಜನರಿಗೆ ಸಮಾಜವಾದಿ ಪಕ್ಷ ಗೆದ್ದರೆ ಮುಖ್ಯಮಂತ್ರಿಯಾರು ಅನ್ನುವುದು ಗೊತ್ತು. ಆದ್ರೆ ಬಿಜೆಪಿ ಗೆದ್ದರೆ ಯಾರು ಮುಖ್ಯಮಂತ್ರಿ ಆಗ್ತಾರೆ ಅನ್ನುವ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಬಿಹಾರ ಮತ್ತು ದೆಹಲಿ ಚುನಾವಣೆಗಳಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೆ ಸೋಲು ಕಂಡಿತ್ತು. ಆದ್ರೆ ಆ ತಪ್ಪಿನಿಂದ ಇನ್ನೂ ಬಿಜೆಪಿ ಪಾಠ ಕಲಿತಿಲ್ಲ. ಅಸ್ಸಾಂನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಮುಖ ನೋಡಿಕೊಂಡೇ ಜನ ಮತಹಾಕಿದ್ದರು ಅನ್ನುವುದನ್ನು ಮರೆಯುವ ಹಾಗಿಲ್ಲ.

2014ರಲ್ಲಿ ಮೋದಿ ದಲಿತರು ಮತ್ತು ಹಿಂದುಳಿದವರ ಮನಸ್ಸು ಗೆದ್ದು ಅಧಿಕಾರ ಹಿಡಿದಿದ್ದರು. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ಕೇವಲ ಐದೇ ಐದು ಸ್ಥಾನಗಳನ್ನು ಗೆದ್ದಿತ್ತು. ಮಾಯಾವತಿಯ ಬಹುಜನ ಸಮಾಜವಾದಿ ಪಾರ್ಟಿ ಖಾತೆಯನ್ನೇ ತೆರೆದಿರಲಿಲ್ಲ. ಆದ್ರೆ ಹೈದ್ರಾಬಾದ್​ನಲ್ಲಿ ರೋಹಿತ್ ವೇಮುಲ ಕೇಸ್ ಮತ್ತು ಗುಜರಾತ್​ನಲ್ಲಿ ದಲಿತದ ಬಗ್ಗೆ ಬಿಜೆಪಿ ನಡೆದುಕೊಂಡ ರೀತಿ ಈ ಬಾರಿ ಅದಕ್ಕೆ ಕಂಠಕವಾಗಬಹುದು. ಹರ್ಯಾಣದಲ್ಲಿ ಜಾಟ್ ಜನಾಂಗವನ್ನು ಹಿಂದಕ್ಕೆ ತಳ್ಳಿದ್ದು ಕೂಡ ನೆಗೆಟಿವ್ ಆಗಬಹುದು. ಯೋಗಿ ಆದಿತ್ಯನಾಥ್ ರಂತಹ ಫೈರ್ ಬ್ರಾಂಡ್ ನಾಯಕರನ್ನು ಕಡೆಗಣಿಸಿರುವುದು ಕೂಡ ಏಟು ನೀಡುವುದು ಖಚಿತ.

ಅಂತಿಮವಾಗಿ ಉತ್ತರ ಪ್ರದೇಶದ ಚುನಾವಣೆ ಬಿಜೆಪಿ ಪಾಲಿಗೆ ಕಬ್ಬಿಣದ ಕಡಲೆ. ಮೋದಿಗೂ ಅಗ್ನಿಪರೀಕ್ಷೆ. ಜನರ ನಿರೀಕ್ಷೆಯನ್ನು ಮುಟ್ಟುವಲ್ಲಿ ಮೋದಿ ಎಡವಿದ್ದಾರೆ. 2014ರಲ್ಲಿ ಅಭಿವೃದ್ಧಿಯ ಮಂತ್ರ ಮೋದಿಯ ಕೈ ಹಿಡಿದಿತ್ತು. ಆದ್ರೆ ಈಗ ನಿರೀಕ್ಷೆಗಳೆಲ್ಲವೂ ಹುಸಿಯಾಗಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸೋತ್ರೆ ಮೋದಿ ಸರ್ಕಾರಕ್ಕೆ ಹಿನ್ನಡೆ ಖಚಿತ.

ಇದನ್ನು ಓದಿ:

1. ಕೆಲಸದ ಟೆನ್ಷನ್​ ಬಿಟ್ಟು ಬಿಡಿ- ಒಂದು ದಿನ ಕೃಷಿಕರಾಗಿ ಎಂಜಾಯ್​ ಮಾಡಿ..! 

2. 10,000 ಸಾಲದಿಂದ ಕೋಟ್ಯಾಧಿಪತಿಯಾದ ದಿಲೀಪ್​ ಶಾಂಘ್ವಿ ಕಥೆ..!

3. “ರಯೀಸ್” ವಿವಾದ ಮತ್ತು “ಕಾಬಿಲ್” ಮೇಲೆ ಪ್ರೀತಿ ಅಷ್ಟಕ್ಕೇ ಎಲ್ಲಾ ನಿಂತಿಲ್ಲ- ಅಶುತೋಷ್