ಕೆಎಸ್​ಆರ್​ಟಿಸಿಯಲ್ಲಿ"ಮಿಡಿಬಸ್​" ಮ್ಯಾಜಿಕ್​- ಸಾರಿಗೆ ಸಂಸ್ಥೆಗೆ ಹೊಸ ಕಿಕ್​

ಟೀಮ್​ ವೈ.ಎಸ್​.ಕನ್ನಡ

ಕೆಎಸ್​ಆರ್​ಟಿಸಿಯಲ್ಲಿ"ಮಿಡಿಬಸ್​" ಮ್ಯಾಜಿಕ್​- ಸಾರಿಗೆ ಸಂಸ್ಥೆಗೆ ಹೊಸ ಕಿಕ್​

Thursday July 28, 2016,

2 min Read

ದೇಶದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಇರುವ ಹೆಸರೇ ಬೇರೆ. ಐಷಾರಾಮಿ ಬಸ್​ಗಳಿಂದ ಹಿಡಿದು ಸಾಮಾನ್ಯ ಬಸ್​ಗಳ ತನಕ ಎಲ್ಲಾ ವ್ಯವಸ್ಥೆಗಳು ಕೂಡ ಇದ್ದವು. ಆದ್ರೆ ಜನಕ್ಕೆ ಕೆಎಸ್​ಆರ್​ಟಿಸಿ ಸೇವೆ ಅಷ್ಟಾಗಿ ಇಷ್ಟವಾಗಿರಲಿಲ್ಲ. ಆದ್ರೆ ಈಗ ಕಾಲ ಬದಲಾಗ್ತಿದೆ. ಕೆಎಸ್​ಆರ್​ಟಿಸಿ ಕೂಡ ಬದಲಾಗ್ತಿದೆ.

ಕೆಎಸ್ಆರ್​ಟಿಸಿ ಬಸ್ ಅಂದ್ರೆ ಮೂಗು ಮುರಿಯುತ್ತಿದ್ದ ಜನ ಈಗ ಮೂಗಿನ ಮೇಲೆ ಕೈ ಇಟ್ಟು ನೋಡಬೇಕಿದೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಹೈಟೆಕ್ ಬಸ್​ಗಳನ್ನು ಕೆಎಸ್ಆರ್​ಟಿಸಿ ರೋಡಿಗಿಳಿಸಿದೆ. ನೀವು ಇದುವರೆಗೂ ಕಂಡು ಕೇಳರಿಯದ ಕೆಎಸ್ಆರ್​ಟಿಸಿ ಬಸ್ ಹಳ್ಳಿ ಹಳ್ಳಿಗೂ ಸಂಚರಿಸಲು ಸಿದ್ದವಾಗಿವೆ. ಈ ಮೂಲಕ ಕೆಎಸ್ಆರ್​ಟಿಸಿ ಜನರಿಗೆ ಉತ್ತಮ ಸೇವೆ ನೀಡುವ ಮೂಲಕ ಅವರನ್ನು ಇನ್ನಷ್ಟೂ ಹತ್ತಿರ ಸೆಳೆಯಲು ಮುಂದಾಗಿದೆ.

image


ಕೆಎಸ್ಆರ್​ಟಿಸಿಯ ಹೊಸ ಬಸ್ ಈಗ ಎಲ್ಲರ ಗಮನಸೆಳೆಯುವಲ್ಲಿ ಸಫಲವಾಗಿದೆ. ಅಂಗವಿಕಲರೂ ಸಹ ವ್ಹೀಲ್​ಚೇರ್​ನೊಂದಿಗೆ ಬಸ್ ಏರುವಂತಹ ರ್ಯಾಂಪ್ ಇರೋ ಮಿಡಿ ಹೆಸರಿನ ಬಸ್ ಬಳಸಲು ಕೆಎಸ್ಆರ್​ಟಿಸಿ ಮುಂದಾಗಿದೆ. ಇದರಿಂದ ಅಂಗವಿಕಲರು ಸಹ ಸುಲಭವಾಗಿ ಬಸ್ ಏರುವಂತ ವ್ಯವಸ್ಥೆ ಮಾಡಲಾಗಿದೆ. ಇಷ್ಟೇ ಅಲ್ಲ ಇದುವರೆಗೂ ನಮ್ಮ ರಾಜ್ಯದ ಜನ ಕಂಡು ಕೇಳರಿಯದ ವ್ಯವಸ್ಥೆಗಳು ಈ ಬಸ್​ನಲ್ಲಿದೆ. ಹಾಗಾಗಿ ಬೇರೆ ಎಲ್ಲಾ ರಾಜ್ಯಗಳಿಗಿಂತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಒಂದು ಹೆಜ್ಜೆ ಮುಂದೆ ಸಾಗಿದ್ದು ಉತ್ತಮ ಸೇವೆ ನೀಡುತ್ತಿದೆ.

" ನರ್ಮ್ ಮತ್ತು ಭೂ ಸಾರಿಗೆ ನಿರ್ದೇಶನಾಲಯ ಸಹಯೋಗದೊಂದಿಗೆ ಖರೀದಿಸಲಾದ ಮಿಡಿ ಬಸ್​ನ ಬೆಲೆ 27.5 ಲಕ್ಷ ರೂಪಾಯಿ. ಒಟ್ಟು 737 ಬಸ್​ಗಳು ಮುಂದಿನ ತಿಂಗಳ ಆರಂಭದಲ್ಲಿ ಕಾರ್ಯಾಚರಣೆಗಿಳಿಯಲಿವೆ."
 - ರಾಜೇಂದರ್ ಕುಮಾರ್​ ಕಠಾರಿಯಾ, ಕೆಎಸ್​ಆರ್​ಟಿಸಿ ಎಂ.ಡಿ.

ಈ ಬಸ್‌ಗಳಲ್ಲಿ ಇಂಟಲಿಜೆನ್ಸ್ ಟ್ರಾನ್ಸ್‌ಪೋರ್ಟ್ ಸಿಸ್ಟಂ ಅಳವಡಿಸಲಾಗಿದೆ. ಮಹಿಳೆಯರ ಸುರಕ್ಷತೆಗಾಗಿ ಹಾಗೂ ತುರ್ತು ಸಂದರ್ಭಕ್ಕೆಂದೆ ಪ್ಯಾನಿಕ್ ಬಟನ್ ಇದೆ. ಈ ಬಟನ್ ಅದುಮಿದ್ರೆ ಹತ್ತಿರದ ಕಂಟ್ರೋಲ್ ರೂಂಗೆ ಕೂಡಲೇ ಮಾಹಿತಿ ತಲುಪುತ್ತದೆ. ಪ್ರಯಾಣಿಕ ಬಸ್​ನಿಂದ ಇಳಿಯ ಬೇಕೆಂದಾದದಲ್ಲಿ ಅದಕ್ಕೂ ಬಸ್​ನ ಕಂಬಗಳಲ್ಲಿ ಸ್ಟಾಪರ್ ಬಟನ್ ಇದೆ. ಇನ್ನು ಬಸ್​ನ ಒಳಗೆ, ಹೊರಗೆ ಸಿಸಿಟಿವಿ, ಜಿಪಿಎಸ್ ಹಾಗೂ ಮುಂದಿನ ಸ್ಟಾಪ್ ಯಾವುದು ಅನ್ನೋದು ಅನೌನ್ಸ್ ಆಗುತ್ತದೆ. ಸ್ವಯಂ ಚಾಲಿತ ಬಾಗಿಲುಗಳು, ಅಗ್ನಿ ಆಕಸ್ಮಿಕ ಉಪಕರಣಗಳು, ರೂಫ್ ವೆಂಟಿಲೇಟರ್​ಗಳು ಹಾಗೂ ಅಂಗವಿಕಲಿಗಾಗಿ ರ್ಯಾಂಪ್​ ಇದೆ.

ಇದನ್ನು ಓದಿ: ಪರಿಸರ ಉಳಿಸಲು ಹೊಸ ಪ್ಲಾನ್​- ಎಲೆಕ್ಟ್ರಿಕ್​ ಕಾರುಗಳನ್ನು ಬಳಸುವ ಚಿಂತನೆ

ಮಿಡಿ ಬಸ್‌ಗಳು ಸಾಮಾನ್ಯ ಬಸ್‌ಗಳಿಂತ ಚಿಕ್ಕ ಆಕಾರದಲ್ಲಿದೆ. ಆದರೆ ಮಿನಿ ಬಸ್‌ಗಳಿಗಿಂತ ಇವು ದೊಡ್ಡವು. ಒಂದು ಮಾದರಿ 30 ಆಸನಗಳನ್ನೊಳಗೊಂಡಿದ್ರೆ ಇನ್ನೊಂದು 40 ಆಸನ ಹೊಂದಿದೆ. ಕಿರಿದಾದ ರಸ್ತೆಯಲ್ಲೂ ಈ ಬಸ್​ಗಳು ಸುಲಭವಾಗಿ ಸಂಚರಿಸ ಬಲ್ಲವು. ಹಾಗಾಗಿ ಗ್ರಾಮೀಣ ಪ್ರದೇಶಗಳಿಗೆ ಈ ಬಸ್​ಗಳು ಓಡಾಡಾಬಹುದಾಗಿದೆ.

image


ಸದ್ಯ ಕೆಂಗೇರಿಯ ಕೆಎಸ್ಆರ್​ಟಿಸಿಯಲ್ಲಿ ನಿಂತಿರುವ ಈ ಬಸ್ ಮುಂದಿನ ತಿಂಗಳಿಂದ ಪ್ರಯಾಣಿಕರಿಗೆ ಲಭ್ಯವಾಗಲಿದೆ. ಬೆಂಗಳೂರಿನ ಹೊರ ವಲಯದಲ್ಲಿ ಸಂಚರಿಸುವ ಈ ಬಸ್ ದರ ಪ್ರತಿ ಹಂತಕ್ಕೆ ಕೇವಲ 5 ರೂಪಾಯಿಯಂತೆ ನಿಗಧಿಗೊಳಿಸಲಾಗಿದೆ. ಒಟ್ಟಾರೆ ಇಂತಹ ಸುವ್ಯವಸ್ಥಿತ ಅತ್ಯಾಧುನಿಕ ಬಸ್ ಉತ್ತಮ ಸೇವೆಯ ಮೂಲಕ ಜನರನ್ನು ಕೆಎಸ್ಆರ್​ಟಿಸಿ ಸ್ನೇಹಿಯಾಗುವಂತೆ ಮಾಡಲು ಮುಂದಾಗಿದೆ.

ಇದನ್ನು ಓದಿ

1. 24x7 ಆರೋಗ್ಯಕ್ಕಾಗಿ 24x7 ಸೇವೆ ನೀಡುವ ಆ್ಯಪ್..!

2. ವಾಟ್ಸ್​ಆ್ಯಪ್​ ಮೂಲಕ 1.62 ಕೋಟಿ ಮೌಲ್ಯದ ಆಭರಣ ಸೇಲ್ : ಗ್ರಾಹಕರ ಮನಗೆದ್ದ ವೆಲ್ವೆಟ್ ಕೇಸ್.ಕಾಮ್

3. ಅಂದು ಕೂಲಿ, ಇಂದು 5 ಕಂಪನಿಗಳ ಒಡೆಯ!