ಟೇಬಲ್ ಟೆನಿಸ್ ಟೂರ್ನಿಗಾಗಿ 10ನೇ ಕ್ಲಾಸ್ ಪರೀಕ್ಷೆಗೆ ಗೈರು... ಅರ್ಧದಲ್ಲೇ ಕಾಲೇಜು ಬಿಟ್ಟು ಉದ್ಯಮ ಆರಂಭಿಸಿದ ದಿಟ್ಟ ಯುವತಿ

ಟೀಮ್​ ವೈ.ಎಸ್​. ಕನ್ನಡ

ಟೇಬಲ್ ಟೆನಿಸ್ ಟೂರ್ನಿಗಾಗಿ 10ನೇ ಕ್ಲಾಸ್ ಪರೀಕ್ಷೆಗೆ ಗೈರು... 
			ಅರ್ಧದಲ್ಲೇ ಕಾಲೇಜು ಬಿಟ್ಟು ಉದ್ಯಮ ಆರಂಭಿಸಿದ ದಿಟ್ಟ ಯುವತಿ

Wednesday March 30, 2016,

4 min Read

ವೃಷಾಲಿ ಪ್ರಸಾದೆ, ಸಮಾಜದ ಆದ್ಯತೆಗಳಿಗೆಂದೂ ಚಂದಾದಾರರಾದವರಲ್ಲ. ನಮಗೆ ಯಾವುದು ಬೆಸ್ಟ್ ಅನ್ನೋದನ್ನು ಹೊರಗಿನವರು ನಿರ್ಧರಿಸಲು ಸಾಧ್ಯವಿಲ್ಲ ಅನ್ನೋ ಅರಿವು ಅವರಿಗಿತ್ತು. 10ನೇ ತರಗತಿಯ ವಾರ್ಷಿಕ ಪರೀಕ್ಷೆ ಬಿಟ್ಟು ವೃಷಾಲಿ, ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಟೂರ್ನಿಯ ಫೈನಲ್ ಪಂದ್ಯವನ್ನಾಡಿದ್ರು. ಯಾಕಂದ್ರೆ ಆ ಅವಕಾಶ ಮತ್ತೊಮ್ಮೆ ಸಿಗುವುದಿಲ್ಲ ಅನ್ನೋದು ಅವರಿಗೆ ಗೊತ್ತಿತ್ತು. 6 ತಿಂಗಳ ಹಿಂದಷ್ಟೆ ಅವರು ಮತ್ತೊಮ್ಮೆ ದಿಟ್ಟತನ ತೋರಿದ್ದಾರೆ, ಸ್ಟಾರ್ಟಪ್ ಆರಂಭಿಸಲು ಕಾಲೇಜು ಬಿಟ್ಟಿದ್ದಾರೆ. ಉದ್ಯಮದ ಯಶಸ್ಸಿಗೆ ಶೇ.200ರಷ್ಟು ಶ್ರಮ ಹಾಕಬೇಕು ಅನ್ನೋದು ಅವರ ದಿಟ್ಟ ನಿರ್ಧಾರ. ಮಧ್ಯದಲ್ಲೇ ಕಾಲೇಜು ವ್ಯಾಸಂಗ ಬಿಟ್ಟಿದ್ದಕ್ಕೆ ವೃಷಾಲಿ ಅವರಿಗೆ ಪಶ್ಚಾತ್ತಾಪವೇನಿಲ್ಲ. ಈ ವರ್ಷ ಏಪ್ರಿಲ್ ವೇಳೆಗೆ 2 ಕೋಟಿ ರೂಪಾಯಿ ಆದಾಯ ಗಳಿಸುವುದೇ ಅವರ ಗುರಿ.

ಹಳೆ ಹವ್ಯಾಸಗಳು ಸಾಯುವುದು ಕಷ್ಟ..!

ಅಪಾಯಕಾರಿ ಸಾಹಸಕ್ಕೆ ಕೈಹಾಕುವುದು ವೃಷಾಲಿ ಅವರಿಗೆ ಬಾಲ್ಯದಿಂದಲೂ ಇಷ್ಟ. 10 ವರ್ಷದವರಿದ್ದಾಗಿನಿಂದ್ಲೇ ಟೆನಿಸ್ ಆಡುವ ಹುಚ್ಚಿತ್ತು. ತಮ್ಮ ಜಿಲ್ಲೆ ಮತ್ತು ರಾಜ್ಯವನ್ನು ಪ್ರತಿನಿಧಿಸಿದ್ದ ವೃಷಾಲಿ, 2005ರಲ್ಲಿ 17 ವರ್ಷದೊಳಗಿನವರ ಜೂನಿಯರ್ ಇಂಡಿಯಾ ಟೀಮ್‍ಗೆ ಆಯ್ಕೆಯಾದ್ರು. ತಮ್ಮ ಟೇಬಲ್ ಟೆನಿಸ್ ತರಬೇತಿ ಪ್ರಯಾಣದಲ್ಲಿ ವೃಷಾಲಿ, ತರಬೇತುದಾರರಾಗಿದ್ದ ಶೈಲಜಾ ಗೋಹದ್ ಅವರನ್ನು ಭೇಟಿಯಾದ್ರು. ಅವರೇ ವೃಷಾಲಿಗೆ ಪ್ರೇರಣೆ. 

image


"ಅವರಲ್ಲಿದ್ದ ಪರಿಶ್ರಮ, ಗಮನ ಮತ್ತು ಬಹುಕಾರ್ಯಗಳನ್ನು ಮಾಡುವ ಸಾಮರ್ಥ್ಯ ಮುಂತಾದ ಗುಣಗಳು ನನ್ನನ್ನು ಆಕರ್ಷಿಸಿವೆ. ನನ್ನ ಟೇಬಲ್ ಟೆನಿಸ್ ಅನುಭವದ ನೆರವಿನಿಂದ ಅರ್ಧಕ್ಕೆ ಕಾಲೇಜು ಬಿಟ್ಟು ಉದ್ಯಮಕ್ಕೆ ಕೈಹಾಕುವ ದೃಢ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಯ್ತು. ಚಿಕ್ಕವಳಿದ್ದಾಗಿನಿಂದ್ಲೂ ನನಗೆ ಬಹುಕಾರ್ಯಗಳನ್ನು ಮಾಡಿ ಅಭ್ಯಾಸ, ಅದು ಈಗಲೂ ಮುಂದುವರಿದಿದೆ'' 
            - ವೃಷಾಲಿ

ಬಿಐಟಿಎಸ್ ಸೇರಲು ಗೋವಾಕ್ಕೆ ತೆರಳಿದ ವೃಷಾಲಿಗೆ ಅಲ್ಲಿ ಶುಭಂ ಮಿಶ್ರಾ ಹಾಗೂ ಹರಿ ವಾಲಿಯತ್ ಅವರ ಪರಿಚಯವಾಯ್ತು. ಕಳೆದ ಮೂರು ವರ್ಷಗಳಿಂದ ಸಹಪಾಠಿಗಳಾಗಿರುವ ಇವರು ಅಕಾಡೆಮಿಕ್ ಪ್ರಾಜೆಕ್ಟ್​​ಗಳಿಗಾಗಿ ಜೊತೆಯಾಗಿ ಕೆಲಸ ಮಾಡಿದ್ದಾರೆ. ಮೂವರು ಸಮಾನ ಮನಸ್ಕರು ಅನ್ನೋದೇ ವಿಶೇಷ.

ಇದನ್ನು ಓದಿ: ಸಾವಾಧಾನವಾಗಿ ಊಟ ಮಾಡಿ...ಹೊಟ್ಟೆ ತುಂಬಿಸಿಕೊಂಡ ಸಂತೋಷವಾಗಿರಿ...!

ಈಗ ಅಥವಾ ಇನ್ನೆಂದಿಗೂ ಇಲ್ಲ..!

ಶೇ.90ರಷ್ಟು ಮಕ್ಕಳಿಗೆ ವಿಡಿಯೋ ಗೇಮ್ ಅಂದ್ರೆ ಪಂಚಪ್ರಾಣ. `` Nintendo Virtual Boyand 'ನಂತಹ ಗೇಮಿಂಗ್ ಡಿವೈಸ್‍ಗಳು ಮಕ್ಕಳನ್ನು ಆಕರ್ಷಿಸುತ್ತವೆ. ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದ ವೃಷಾಲಿ ಅವರಿಗೂ ಹಿಂದೆ ತನ್ನನ್ನು ಆಕರ್ಷಿಸಿದ್ದ ಆ ವಿಸ್ಮಯಗಳನ್ನು ಸೃಷ್ಟಿ ಮಾಡಬೇಕೆಂದೆನಿಸಿತ್ತು.

" ನಾವು ಡಿಜಿಟಲ್ ಮೀಡಿಯಾದ ಜೊತೆಗಿನ ಸಂವಹನದಲ್ಲಿ ಹೊಸ ಹೊಸ ರೀತಿಯ ಕ್ರಾಂತಿಕಾರಿ ಬದಲಾವಣೆ ತರುವ ಯುಗದಲ್ಲಿದ್ದೇವೆ. ಎಂಎನ್‍ಸಿ ಹಾಗೂ ಬ್ರಾಂಡ್‍ಗಳ ಅಗತ್ಯಕ್ಕೆ ತಕ್ಕಷ್ಟು ಹಣ ವೆಚ್ಚ ಮಾಡಲು ಸಾಧ್ಯವಾಗದಂತಹ ಶ್ರೀಸಾಮಾನ್ಯರಿಗೆ ಉತ್ತಮ ಅನುಭವ ನೀಡಬಲ್ಲ ಕಂಪನಿಯನ್ನು ಆರಂಭಿಸುವುದು ನಮ್ಮ ಉದ್ದೇಶವಾಗಿತ್ತು. ನಮ್ಮ ಆತ್ಮ ಸಮರ್ಥನೀಯ ಪರಿಸರಕ್ಕೆ ಈ ಟ್ರೆಂಡ್‍ಗಳು ಅಡ್ಡಿ ಮಾಡುತ್ತವೆ. ದೊಡ್ಡ ನಿಗಮಗಳು ಬಳಸುವ ಅಗ್ಗದ ಮಾರುಕಟ್ಟೆ ತಂತ್ರಗಳನ್ನು ಮೀರಿ ಅರ್ಹತೆ ಆಧಾರದ ವ್ಯವಸ್ಥೆಗೆ ಅಗಾಧ ಪ್ರಯೋಜನಗಳನ್ನು ನೀಡುತ್ತವೆ. ಜಾಗತಿಕ ಮಟ್ಟದಲ್ಲಿ Oculus ಗೆ ಪೈಪೋಟಿ ನೀಡುವುದು ನಮ್ಮ ಗುರಿ. Oculus Riftಗೆ ಭಾರತದ ಉತ್ತರವಾಗಿ ನಾವು ಡೆವಲಪರ್‍ಗಳ ವೇದಿಕೆಯೊಂದನ್ನು ನಿರ್ಮಾಣ ಮಾಡಿದ್ದೇವೆ'' 
                       -ವೃಷಾಲಿ. 

ವೃಷಾಲಿ, ಶುಭಂ ಹಾಗೂ ಹರಿ ಜೊತೆಯಾಗಿ ಬೆಂಗಳೂರಲ್ಲಿ `ಅಬ್ಸೆಂಟಿಯಾ'ವನ್ನು ಆರಂಭಿಸಿದ್ದಾರೆ. ವರ್ಚುವಲ್ ರಿಯಾಲಿಟಿ ಹೆಡ್‍ಗೇರ್ ` Tesseract' ಎಂಬ ಉತ್ಪನ್ನವನ್ನು ತಯಾರಿಸಿದ್ದಾರೆ. ಯಾವುದೇ ಮೀಡಿಯಾ ಅಥವಾ ಗೇಮ್ ಅನ್ನು ಇರದು ವರ್ಚುವಲ್ ರಿಯಾಲಿಟಿಯಾಗಿ ಪರಿವರ್ತಿಸಬಹುದು. Oculus ಜೊತೆಗೆ ಸದ್ಯ ಇರುವ ಕಂಪ್ಯೂಟರ್ ಗೇಮ್‍ಗಳು ಹಾಗೂ ಸಿನಿಮಾಗಳಿಂದ್ಲೂ ಇದಕ್ಕೆ ಪೈಪೋಟಿ ಎದುರಾಗಿದೆ. ` Chromecast'ನಂತಹ ಡಿವೈಸ್‍ಗಳ ಮೂಲಕ ಇದನ್ನು ಮೊಬೈಲ್ ಫೋನ್‍ಗಳಲ್ಲೂ ಬಳಸಬಹುದು.

ಕನಸಿನಿಂದ ವಾಸ್ತವತೆಗೆ..!

ವರ್ಚುವಲ್ ರಿಯಾಲಿಟಿ ನಿಜಕ್ಕೂ ದೊಡ್ಡ ವಸ್ತು ಅನ್ನೋದನ್ನು ಹೂಡಿಕೆದಾರರಿಗೆ ಮನವರಿಕೆ ಮಾಡುವುದು ಆರಂಭದಲ್ಲಿ ಕಷ್ಟವಾಗಿತ್ತು. ಶೀಘ್ರದಲ್ಲೇ ಆ ಪ್ರಯತ್ನದಲ್ಲಿ ಸಫಲರಾದ ಅವರು ಆಸ್ಟ್ರಾಕ್ ವೆಂಚರ್ಸ್, 50ಕೆ ವೆಂಚರ್ಸ್, ಏಂಜೆಲ್ ಹೂಡಿಕೆದಾರರಾದ ವಿಶ್ ಸತ್ಥಪನ್, ಸಮೀರ್ ಸೇನಾನಿ, ರಾಜೀವ್ ಕೃಷ್ಣನ್, ಅಭಿಷೇಕ್ ಜೈನ್, ನಾಗರಾಜ್ ಮಗದಮ್ ಅವರಿಂದ 1.2 ಕೋಟಿ ಬಂಡವಾಳ ಸಂಗ್ರಹಿಸಿದ್ದಾರೆ.

image


ಸಂಸ್ಥೆ ಅಥವಾ ಶಿಕ್ಷಣ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ವೃಷಾಲಿ ಅವರಿಗೆ ಎದುರಾಗಿತ್ತು. ಇವೆರಡರಲ್ಲಿ ಅವರ ಆಯ್ಕೆ ಉದ್ಯಮ. ``ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವ ನನ್ನ ನಿರ್ಧಾರ ಕಠಿಣವಾಗಿತ್ತು, ಮನೆಯವರಿಗೆ ಮನವರಿಕೆ ಮಾಡಿಕೊಡುವುದು ಕೂಡ ಕಷ್ಟವಾಯ್ತು. ಆದ್ರೆ ನನಗಿರುವ ಅವಕಾಶ, ಸದ್ಯದ ಪರಿಸ್ಥಿತಿ ಇವನ್ನೆಲ್ಲ ಗಮನಿಸಿದಾಗ ನಾನು ಸೂಕ್ತ ನಿರ್ಧಾರವನ್ನೇ ತೆಗೆದುಕೊಂಡಿದ್ದೇನೆಂದು ಅವರಿಗನಿಸಿದೆ. ನಮ್ಮ ತಂತ್ರಜ್ಞಾನದೊಂದಿಗೆ ಕೆಲಸ ಮಾಡಲು ನಿಜಕ್ಕೂ ಇದು ಸರಿಯಾದ ಸಮಯ. ಸದ್ಯ ವರ್ಚುವಲ್ ರಿಯಾಲಿಟಿ ಒಂದು ಹೊಸ ಕ್ಷೇತ್ರ ಮತ್ತು ಈ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವ ಭರವಸೆ ನಮಗಿದೆ. ಇದಕ್ಕೆ ಬೇಕಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತಿದ್ದೇವೆ, ಅದನ್ನು ವಾಸ್ತವವಾಗಿ ಪರಿವರ್ತಿಸಲು ಸಂಪೂರ್ಣ ಸಮಯ ವಿನಿಯೋಗಿಸುತ್ತಿದ್ದೇವೆ. ನಾನು ಯಾವಾಗಲೂ ನನ್ನ ಬಗ್ಗೆ ಕಾಳಜಿ ಹೊಂದಿರುವವರು ಮತ್ತು ಆಪ್ತರ ಸಲಹೆಗಳನ್ನು ಪರಿಗಣಿಸುತ್ತೇನೆ'' ಅನ್ನೋದು ವೃಷಾಲಿ ಅವರ ನೇರ ನುಡಿ.

ಚಿಕ್ಕ ವಯಸ್ಸಿನಲ್ಲೇ ಉದ್ಯಮ ಲೋಕಕ್ಕೆ ಕಾಲಿಡೋದು ಸಾಮಾನ್ಯ ಆದ್ರೆ ಎಲ್ಲರೂ ಕಾಲೇಜು ಶಿಕ್ಷಣ ಮುಗಿದ ಮೇಲೆ ಆ ಕ್ಷೇತ್ರವನ್ನು ಆಯ್ದುಕೊಳ್ತಾರೆ. ವೃಷಾಲಿ ಮಾತ್ರ 21ರ ಹರೆಯದಲ್ಲಿ, ಕಾಲೇಜಿಗೆ ಗುಡ್‍ಬೈ ಹೇಳಿ ಸ್ಟಾರ್ಟಪ್ ಆರಂಭಿಸಿದ್ದಾರೆ. ``ಕಾನೂನು, ಬೌದ್ಧಿಕ ಆಸ್ತಿ, ಅಕೌಂಟ್ಸ್, ಪದ್ಧತಿಗಳು ಹೀಗೆ ಸಂಘಟನೆಯ ವಿವಿಧ ಅಂಗಗಳ ನಿರ್ವಹಣೆಯ ಜವಾಬ್ಧಾರಿ ನಮ್ಮ ಮೇಲಿದೆ. ನಮ್ಮ ಸಲಹೆಗಾರರ ಮಂಡಳಿ ಹಾಗೂ ಹೂಡಿಕೆದಾರರಿಂದ್ಲೂ ಅಪಾರ ಬೆಂಬಲ ವ್ಯಕ್ತವಾಗಿದೆ. ವ್ಯಾಪಾರದಲ್ಲಿ ಮೊನಚು, ಬ್ರಾಂಡಿಂಗ್, ಕಾರ್ಪೊರೇಟ್ ಜಾಣತನ ಎಲ್ಲವೂ ಅನುಭವದಿಂದ ಬಂದಿದೆ. ಅವರು ನಮ್ಮೊಂದಿಗೆ ಜ್ಞಾನದ ಸಂಪತ್ತನ್ನು ಹಂಚಿಕೊಳ್ಳಲು ಉತ್ಸುಕರಾಗಿದ್ದಾರೆ. ನಾವು ಕೂಡ ಕ್ಷಿಪ್ರಗತಿಯಲ್ಲಿ ಮುನ್ನಡೆದಿದ್ದೇವೆ'' ಎನ್ನುತ್ತಾರೆ ವೃಷಾಲಿ.

ಈ ಹಂತದಲ್ಲಿ ಅವರಿಗೆ ಪೂರ್ವ ಪ್ರಿ-ಆರ್ಡರ್‍ಗಳು ಸಿಕ್ಕಿವೆ, ಹಲವಾರು ಡೆವಲಪರ್‍ಗಳು ಬದ್ಧರಾಗಿದ್ದಾರೆ, ಬಿ2ಬಿ ಪಾಲುದಾರರ ಸಹಯೋಗ ಎಲ್ಲವೂ ಇದೆ. 2016ರ ಏಪ್ರಿಲ್ ವೇಳೆಗೆ ವಹಿವಾಟು 2 ಕೋಟಿ ರೂಪಾಯಿಗೆ ತಲುಪಲಿದೆ.

ಪ್ರತಿ ಯಶಸ್ವಿ ಮಹಿಳೆಯ ಹಿಂದೆ..

ವೃಷಾಲಿ ತಮ್ಮ ಯಶಸ್ಸನ್ನು ಇಬ್ಬರು ಮಹಿಳೆಯರಿಗೆ ಅರ್ಪಿಸಿದ್ದಾರೆ - ಒಬ್ಬರು ವೃಷಾಲಿಗೆ ಆಟದ ನಿಯಮಗಳನ್ನು ಕಲಿಸಿದವರು, ಇನ್ನೊಬ್ಬರು ಎಲ್ಲ ತಿರುವುಗಳಲ್ಲೂ ಯಶಸ್ವಿಯಾಗಿ ಮುನ್ನಡೆಸಿದವರು. ``ಎಲ್ಲ ಶ್ರೇಯಸ್ಸು ನನ್ನ ತಾಯಿಗೆ ಸಲ್ಲಬೇಕು. ಅಪಾಯಕಾರಿ ನಿರ್ಧಾರ ತೆಗೆದುಕೊಳ್ಳಬೇಕಾದ ಸಂದರ್ಭದಲ್ಲೆಲ್ಲ ಅವರು ನನ್ನ ಬೆನ್ನಿಗೆ ನಿಂತಿದ್ದಾರೆ, ಅಂತರಾಷ್ಟ್ರೀಯ ಟೇಬಲ್ ಟೆನಿಸ್ ಟೂರ್ನಿಗಾಗಿ 10ನೇ ತರಗತಿ ಪರೀಕ್ಷೆ ಬಿಡುವುದಿರಬಹುದು ಅಥವಾ ಅರ್ಧಕ್ಕೆ ಕಾಲೇಜು ಶಿಕ್ಷಣ ನಿಲ್ಲಿಸುವ ತೀರ್ಮಾನವಿರಬಹುದು. ಸದಾ ನನ್ನ ಜೊತೆಗಿದ್ದು ಕಠಿಣ ನಿರ್ಧಾರ ತೆಗೆದುಕೊಂಡು ಅದರಲ್ಲಿ ಯಶಸ್ವಿಯಾಗುವಂತೆ ಪ್ರೋತ್ಸಾಹಿಸಿದ್ದಾರೆ. ಅವರಿಗಲ್ಲದೇ ಇದ್ರೆ ಇಂತಹ ದಿಟ್ಟ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ'' ಎನ್ನುವ ಮೂಲಕ ವೃಷಾಲಿ ತಮ್ಮ ಯಶಸ್ಸಿನ ಹಿಂದಿರುವ ತಾಯಿಗೆ ಧನ್ಯವಾದ ಅರ್ಪಿಸಿದ್ದಾರೆ.

``ನಿಮ್ಮ ಹೃದಯ ಏನು ಹೇಳುತ್ತದೆಯೋ ಅದನ್ನು ಕೇಳಿ, ನಿಮಗೇನನಿಸುತ್ತದೋ ಅದೇ ಸರಿ. ಪಶ್ಚಾತ್ತಾಪಗಳಿಂದ ಬದುಕನ್ನು ತುಂಬುವ ಬದಲು ತಪ್ಪು ಹಾಗೂ ವೈಫಲ್ಯವನ್ನು ಅನುಭವಿಸಿ. ನಿಮ್ಮ ನಿರ್ಧಾರಗಳಲ್ಲಿ ನಂಬಿಕೆ ಇಟ್ಟು ಧೈರ್ಯದಿಂದ ಮುನ್ನಡೆದರೆ ಯಾವುದೂ ಅಸಾಧ್ಯವಲ್ಲ'' ಅನ್ನೋದು ವೃಷಾಲಿ ಅವರ ಯಶಸ್ಸಿನ ಮಂತ್ರ.

ಲೇಖಕರು: ಬಿಂಜಲ್ ಶಾ

ಅನುವಾದಕರು: ಭಾರತಿ ಭಟ್

ಇದನ್ನು ಓದಿ:

1. ಕೈ ತುಂಬಾ ಸಂಬಳ, ಅತ್ಯುನ್ನತ ವ್ಯಕ್ತಿಗಳೊಡನೆ ನೆಟ್‍ವರ್ಕ್, ಬೆಂಗಳೂರಿನ ಹೈ-ಫೈ ಲೈಫ್​​ ಬಿಟ್ಟು ವಿದ್ಯೆ ಕಲಿಸಲು ಹೊರಟ "ಯುವಸಂತ"

2. ಹಚ್ಚಿದ್ದು ಬಣ್ಣ ..ಮಾಡುತ್ತಿರೋದು ಸೇವೆ-ಬಣ್ಣಕ್ಕೂ ಬಂತು ಸೇವೆಯ ನಂಟು ..

3. ರೈತರ ಬಂಧು 'ಅಗ್ರಿ ಮಾರ್ಕೆಟ್' ಆ್ಯಪ್