ಪುರುಷ ಪ್ರಾಬಲ್ಯ ಕ್ಷೇತ್ರದಲ್ಲಿ ಯುವತಿಯ ಹೆಜ್ಜೆ ಗುರುತು

ಟೀಮ್​ ವೈ.ಎಸ್​. ಕನ್ನಡ

0


22ನೇ ವಯಸ್ಸಿನಲ್ಲಿಯೇ ಯುವತಿಯ ಕ್ರಾಂತಿ

WEDONTSAYCHEESE ಫೋಟೋ ಸ್ಟುಡಿಯೋಕ್ಕೆ ಅಡಿಪಾಯ

ಯುವಜನತೆ ದೇಶದ ಶಕ್ತಿ. ಯಾವ ದೇಶದ ಯುವ ಜನತೆ ಜಾಗೃತರಾಗಿರುತ್ತಾರೋ, ಕ್ರೀಯಾಶೀಲರಾಗಿರುತ್ತಾರೋ ಆ ದೇಶದ ಭವಿಷ್ಯ ಪ್ರಕಾಶಮಾನವಾಗಿರುತ್ತದೆ. ಆ ದೇಶ ಅಭಿವೃದ್ಧಿ ಹೊಂದುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಕೆಲ ವರ್ಷಗಳಿಂದ ಭಾರತದ ಯುವ ಜನತೆ ಕೇವಲ ಭಾರತದಲ್ಲೊಂದೇ ಅಲ್ಲ ಇಡೀ ವಿಶ್ವದಾದ್ಯಂತ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಈ ಬದಲಾವಣೆ ಸ್ಪಷ್ಟವಾಗಿ ಕಾಣ್ತಾ ಇದೆ. ಈ ಮೊದಲು ಯುವಕರು ಅಪ್ಪ ನೆಟ್ಟ ಆಲದ ಮರಕ್ಕೆ ಜೋತು ಬೀಳ್ತಾ ಇದ್ದರು. ತಮ್ಮ ಕ್ಷೇತ್ರ ಬಿಟ್ಟು ಬೇರೆ ಕಡೆ ತಿರುಗಿಯೂ ನೋಡ್ತಾ ಇರಲಿಲ್ಲ. ಹುಡುಗರಿಗೇ ಬೇರೆ ಕ್ಷೇತ್ರ, ಹುಡುಗಿಯರಿಗೇ ಬೇರೆ ಕೆಲಸವಿತ್ತು. ಅವರು ಈ ಗಡಿ ದಾಟುತ್ತಿರಲಿಲ್ಲ. ಮಹಿಳೆಯರು ತಮಗೆ ಸೀಮಿತವಾಗಿದ್ದ ಕ್ಷೇತ್ರಗಳಲ್ಲಿ ಮಾತ್ರ ಕೆಲಸ ಮಾಡ್ತಾ ಇದ್ದರು. ಆದರೆ ಈಗಿನ ಯುಜನತೆ ಎಲ್ಲ ಕಟ್ಟುಪಾಡುಗಳನ್ನು ಬದಿಗಿಟ್ಟಿದ್ದಾರೆ. ಕ್ಷೇತ್ರ ಯಾವುದಾದರೇನು ಗುರಿ ಮುಖ್ಯ ಎನ್ನುತ್ತಿದ್ದಾರೆ. ಪುರುಷರ ಪ್ರಾಬಲ್ಯವಿದ್ದ ಕ್ಷೇತ್ರವನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಯುವ ಉದ್ಯಮಿ ಹೇರಾ ರಸೂಲ್ ಉತ್ತಮ ಉದಾಹರಣೆ. ಈಗಷ್ಟೇ 22ನೇ ವಸಂತಕ್ಕೆ ಕಾಲಿಟ್ಟಿರುವ ಹೇರಾ ಲಜಪತ್ ನಗರದಲ್ಲಿ ಫೋಟೋ ಸ್ಟುಡಿಯೋ ನಡೆಸ್ತಾ ಇದ್ದಾರೆ. ದೆಹಲಿ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಚಂಡೀಘಢ ಹಾಗೂ ಹಿಮಾಚಲ ಪ್ರದೇಶದಲ್ಲಿ ಇಂದು ಅವರ ಗ್ರಾಹಕರಿದ್ದಾರೆ.

ಲಕ್ನೋ ಹಾಗೂ ಬರೇಲಿಯಲ್ಲಿ ಹೇರಾ ತಮ್ಮ ಆರಂಭಿಕ ಶಿಕ್ಷಣ ಮುಗಿಸಿದ್ರು. ನಂತರ ದೆಹಲಿಗೆ ಬಂದ ಅವರು ಸಮೂಹ ಸಂವಹನ ಅಧ್ಯಯನ ಮಾಡಿದ್ರು. ನಂತರ ಫ್ರೀಲಾನ್ಸರ್ ಆಗಿ ಆ್ಯಂಕರಿಂಗ್ ಶುರು ಮಾಡಿದ್ರು. ಆದರೆ ಅವರ ಇಂಟರೆಸ್ಟ್ ಫೋಟೋಗ್ರಫಿ ಮೇಲಿತ್ತು. ಸಮೂಹ ಸಂವಹನ ಅಧ್ಯಯನದ ವೇಳೆ ಛಾಯಾಗ್ರಹಣ ಒಂದು ವಿಷಯವಾಗಿತ್ತು. ಆಗಲೇ ಈ ವಿಷಯದ ಬಗ್ಗೆ ಆಸಕ್ತಿ ಹೊಂದಿದ್ದ ಅವರ ಇಂಟರೆಸ್ಟ್ ದಿನಕಳೆದಂತೆ ಜಾಸ್ತಿಯಾಯ್ತು. ಈ ಕುರಿತು ಕುಟುಂಬದ ಸದಸ್ಯರು ಹಾಗೂ ಸ್ನೇಹಿತರ ಜೊತೆ ಅವರು ಮಾತನಾಡಿದ್ದರು. ಆದ್ರೆ ಯಾರೊಬ್ಬರೂ ಇದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.

ಛಾಯಾಗ್ರಹಣ ಹವ್ಯಾಸವಾಗಿ ಬೆಳೆಯುತ್ತಿದ್ದಂತೆ ಅವರು ಕಾರ್ಯಾಗಾರಗಳಿಗೆ ಹೋಗಲು ಶುರುಮಾಡಿದರು. ವಿಚಾರಗೋಷ್ಠಿಗಳಿಗೂ ಹೋಗುತ್ತಿದ್ದ ಅವರು ಫೋಟೋಗ್ರಫಿಯ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸುತ್ತಿದ್ದರು.

ಏತನ್ಮಧ್ಯೆ ಹೇರಾ ತಮ್ಮ ಸ್ನೇಹಿತೆಯ ಮದುವೆಗಾಗಿ ಜೈಪುರಕ್ಕೆ ಹೋಗಿದ್ದರು. ತಮ್ಮ ಜೊತೆ ಕ್ಯಾಮರಾ ಕೂಡ ತೆಗೆದುಕೊಂಡು ಹೋಗಿದ್ದರು. ಅಲ್ಲಿ ಸ್ನೇಹಿತೆಯ ಕೆಲವೊಂದು ಫೋಟೋ ತೆಗೆದು ಆಕೆಗೆ ಕೊಟ್ಟರು. ಹೇರಾ ತೆಗೆದ ಫೋಟೋ ಎಷ್ಟು ಅದ್ಬುತವಾಗಿತ್ತೆಂದರೆ ಅವರ ಸ್ನೇಹಿತೆ, ಮದುವೆ ಫೋಟೋ ಅಲ್ಬಂನಲ್ಲಿ ಹೇರಾ ತೆಗೆದ ಫೋಟೋಕ್ಕೆ ಆದ್ಯತೆ ನೀಡಿದ್ರು. ಎಲ್ಲರೂ ಹೇರಾ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಇದೇ ಹೊಗಳಿಕೆ ಹೇರಾ ಅವರನ್ನು ಯೋಚಿಸುವಂತೆ ಮಾಡ್ತು. ಯಾಕೆ ಫೋಟೋಗ್ರಫಿಯನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳಬಾರದೆಂದು ಹೇರಾ ಚಿಂತಿಸಿದ್ರು. ಆದ್ರೆ ಉದ್ಯಮ ಶುರು ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಇದು ಪುರುಷ ಪ್ರಧಾನ ಕ್ಷೇತ್ರವಾಗಿತ್ತು. ಹಾಗೇ ಹೇರಾ ಛಾಯಾಗ್ರಹಣದ ಬಗ್ಗೆ ಯಾವುದೇ ತರಬೇತಿ ಪಡೆದಿರಲಿಲ್ಲ. ಇಷ್ಟಾದ್ರೂ ಹೇರಾ ಛಲ ಬಿಡಲಿಲ್ಲ. ಮನಸ್ಸಿನ ಮಾತು ಕೇಳಿ ನವೆಂಬರ್ 2014ರಂದು ಫೋಟೋಗ್ರಾಫಿಯನ್ನು ವೃತ್ತಿಯನ್ನಾಗಿ ಆರಂಭಿಸಿದ್ರು.

ಒಂದೇ ವರ್ಷದಲ್ಲಿ ಹೇರಾ 10 ಪರಿಣಿತರ ಟೀಂ ಹೊಂದಿದ್ದಾರೆ.ದೆಹಲಿಯ ಲಜಪತ್ ನಗರದಲ್ಲಿ ಅವರದೇ ಆದ WEDONTSAYCHEESE ಫೋಟೋ ಸ್ಟುಡಿಯೋ ಇದೆ. ಅವರು ಎಲ್ಲ ಕರೆಯೋಲೆಯನ್ನೂ ಸ್ವೀಕರಿಸುತ್ತಾರೆ. ಹೇರಾ ಹೇಳುವಂತೆ ಅವರ ತಂಡದ ಎಲ್ಲ ಸದಸ್ಯರು ಪರಿಣಿತರು. ಅವರ ಬಳಿ ಫೋಟೋ ಎಡಿಟರ್, ಕ್ಯಾಮರಾಮೆನ್, ಸಿನಿಮಾಟೋಗ್ರಾಫರ್ ಇದ್ದಾರೆ. ಅವರು ಫೋಟೋ, ವಿಡಿಯೋ ಸೇರಿದಂತೆ ಎಲ್ಲ ಕೆಲಸ ಮಾಡ್ತಾರೆ. ತಂಡದಲ್ಲಿರುವ ಎಲ್ಲರು ಯಂಗ್ ಹಾಗೂ ಕ್ರೀಯಾಶೀಲರು. ಹೇರಾ ಎಲ್ಲವನ್ನು ಹೊಸ ರೀತಿಯಲ್ಲಿ ನೋಡ್ತಾರೆ. ಎಂಗೇಜ್ ಮೆಂಟ್, ಮದುವೆ, ವಿವಿಧ ಕಾರ್ಯಕ್ರಮಕ್ಕೆ ಹೋಗುವುದಲ್ಲದೇ, ಫೋಟೋ ಸಿದ್ಧಪಡಿಸಿಕೊಡುವ ಎಲ್ಲ ಕೆಲಸವನ್ನು ಮಾಡ್ತಾರೆ.

ಗ್ರಾಹಕರ ಸಂಖ್ಯೆ ನಿರಂತರವಾಗಿ ಹೆಚ್ಚಾಗ್ತಾ ಇದೆ. ಸಾಮಾಜಿಕ ಜಾಲತಾಣಗಳ ಮೂಲಕ ಮಾತ್ರ ಹೇರಾ ಮಾರ್ಕೆಟಿಂಗ್ ಮಾಡ್ತಿದ್ದಾರೆ. ಗುಣಮಟ್ಟ ಉತ್ತಮವಾಗಿದ್ದರೆ ಮಾರ್ಕೆಟಿಂಗ್ ತಾನಾಗಿಯೇ ಆಗುತ್ತೆ ಎಂದು ನಂಬುವ ಹೇರಾ, ಮಾರ್ಕೆಟಿಂಗ್ ಗೆ ಹೆಚ್ಚಿನ ಗಮನ ನೀಡುವುದಿಲ್ಲ.

ಶೂಟ್ ಗಿಂತ ಮೊದಲು ಹೇರಾ ಪೂರ್ವ ಸಿದ್ಧತೆ ಮಾಡಿಕೊಳ್ತಾರೆ. ಮೊದಲು ಸ್ಥಳ ಪರಿಶೀಲನೆ ಮಾಡ್ತಾರೆ. ಅಲ್ಲಿನ ಜನರಿಂದ ಮಾಹಿತಿ ಪಡೆಯುತ್ತಾರೆ. ನಂತರ ತಮ್ಮ ಕೆಲಸ ಶುರು ಮಾಡ್ತಾರೆ. ಪ್ರತಿಯೊಬ್ಬ ಫೋಟೋಗ್ರಾಫರ್ ಪೂರ್ವ ಸಿದ್ಧತೆ ಮಾಡಿಕೊಳ್ಳುವುದು ಅವಶ್ಯ ಎನ್ನುತ್ತಾರೆ ಹೇರಾ. ಹಾಗೆ ಮಾಡಿದಾಗ ಗ್ರಾಹಕನ ಪದ್ಧತಿಗಳು, ಅಭಿಲಾಷೆ ಛಾಯಾಗ್ರಾಹಕನಿಗೆ ತಿಳಿಯುತ್ತದೆ. ಆಗ ಆತ ಯಾವುದಕ್ಕೆ ಮಹತ್ವ ನೀಡಬೇಕೋ ಅದಕ್ಕೆ ಮಹತ್ವ ನೀಡಬಹುದು ಎನ್ನುತ್ತಾರೆ ಹೇರಾ.

ದೇಶದ ವಿವಿಧ ರಾಜ್ಯಗಳಲ್ಲಿ ಅವರ ಗ್ರಾಹಕರಿದ್ದಾರೆ. ಒಮ್ಮೆ ಹೇರಾ ಸಂಪರ್ಕಿಸುವ ಗ್ರಾಹಕರು ಮತ್ತೆ ಬೇರೆ ಯಾರ ಬಳಿಯೂ ಹೋಗುವುದಿಲ್ಲ. ತಂಡದಲ್ಲಿ ಹೇರಾ ಮಾತ್ರ ಮಹಿಳೆ. ಈ ಕ್ಷೇತ್ರಕ್ಕೆ ಕಡಿಮೆ ಪ್ರಮಾಣದಲ್ಲಿ ಹುಡುಗಿಯರು ಬರ್ತಾರೆ. ಇದು ತಪ್ಪು. ಹುಡುಗಿ ಕೂಡ ಪುರುಷರು ಮಾಡುವ ಕೆಲಸವನ್ನು ಮಾಡಬಲ್ಲಳು. ಹಾಗಾಗಿ ಹಳೇ ನಂಬಿಕೆಯಿಂದ ಹೊರಬರಬೇಕೆಂಬುದು ಹೇರಾ ಅಭಿಪ್ರಾಯ.


ಲೇಖಕರು : ಅಶುತೋಷ್ ಕಾಂತ್ವಾಲ್

ಅನುವಾದಕರು: ರೂಪಾ ಹೆಗಡೆ

Related Stories

Stories by YourStory Kannada