ಉತ್ತಮ ಬಂಡವಾಳ ಹೂಡಿಕೆಗೆ 8 ಸೂತ್ರಗಳು.

ಟೀಮ್​​ ವೈ.ಎಸ್​​.

ಉತ್ತಮ ಬಂಡವಾಳ ಹೂಡಿಕೆಗೆ 8 ಸೂತ್ರಗಳು.

Friday November 06, 2015,

5 min Read

“ಹಾಯ್, ಆಫರ್ ಇನ್ನೂ ಇದ್ಯಾ..? ದಯವಿಟ್ಟು ತಿಳಿಸಿ” ನಡುಗುತ್ತಿರುವ ಕೈಗಳಿಂದ ನಾನು ಎಸ್ಎಂಎಸ್ ಕಳಿಸಿ, ಮೊಬೈಲನ್ನು ಕೆಳಗಿಟ್ಟು, ಲ್ಯಾಪ್​​ಟಾಪ್ ನತ್ತ ಹೊರಳಿದೆ.

ಬಂಡವಾಳ ಹೂಡಿಕೆದಾರನ ಆಲೋಚನೆಯಲ್ಲಿ ನಾನು ಬದಲಾವಣೆ ಗಮನಿಸಿದ್ದರೂ, ಆತ ಇಷ್ಟು ಬೇಗ ಪ್ರತಿಕ್ರಿಯಿಸುವುದಿಲ್ಲ ಎಂಬುದು ನನ್ನ ಅನಿಸಿಕೆಯಾಗಿತ್ತು. ಯಾಕೆಂದರೆ ಶೀಘ್ರವಾಗಿ ಪ್ರತಿಕ್ರಿಯಿಸುವುದು ತುಂಬಾ ನೋವನ್ನು ಕೊಡುವ ವಿಚಾರವಾಗಿತ್ತು. ಆದರೆ ಮನಸ್ಸಿನ ಆಳದಲ್ಲೆಲ್ಲೋ ನನಗೆ ಯಾವುದಾದರೂ ಜಾದೂ ನಡೆಯಬಹುದು ಅಂತ ಎನಿಸುತ್ತಿತ್ತು. ನನ್ನ ಕಣ್ಣುಗಳು ಫೇಸ್ ಬುಕ್ ಫೀಡ್ ನಲ್ಲಿ ಹೊಕ್ಕಿದ್ದವಾದೂ, ಗಮನವೆಲ್ಲ ನನ್ನ ಮೊಬೈಲ್ ಕಡೆಗೇ ಇತ್ತು. ಉಹುಂ, ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ನನ್ನ ನ್ಯೂಸ್ ಫೀಡ್ ತುಂಬಾ ಯುವರ್ ಸ್ಟೋರಿ ಮತ್ತು ಇಂಕ್42 ನಿಂದ ಬಂದಿದ್ದ ಸುದ್ದಿ ಹೀಗಿದ್ದವು – ಇಬ್ಬರು ಮುಂಬೈ ಐಐಟಿ ಅಲುಮ್ನಿ ಪದವೀಧರರು ‘ಇಂತಿಷ್ಟು’ ಮಿಲಿಯನ್ ಯುಎಸ್ ಡಾಲರ್ ಅನ್ನು ಇಂತಿಂಥವರಿಂದ ಬಂಡವಳ ಹೂಡಿಕೆಯನ್ನಾಗಿ ಪಡೆದರು’, ‘ಮೂವರು ದೆಹಲಿ ಐಐಟಿ ವಿದ್ಯಾರ್ಥಿಗಳು ಇಂತಿಂಥವರಿಂದ ಎರಡನೇ ಹಂತದ ಬಂಡವಾಳ ಹೂಡೆಕಯನ್ನು ಪಡೆಯುವಲ್ಲಿ ಯಶಸ್ವಿಯಾದರು’, ಇದೆಲ್ಲವನ್ನು ಓದುತ್ತಿದ್ದ ನಾನು, ಯಾಕೆ ಯಾರೂ ನನ್ನನ್ನು ಐಐಟಿಯಲ್ಲಿ ಕಲಿಯವಂತೆ ಸಲಹೆ ನೀಡಲಿಲ್ಲ ಎಂದು ಯೋಚಿಸುತ್ತಿದ್ದೆ.

image


‘ಟಿಂಗ್,’ ಅದ್ಹೇಗೋ ನಾನು ನನಗೆ ಬಂದಿದ್ದ ಆ ಎಸ್ಎಂಎಸ್ಸನ್ನು ಓದುತ್ತಿದ್ದ ಹಾಗೆ ನನ್ನ ಸುತ್ತಲೂ ಒಂದು ಸ್ಮಶಾನ ಮೌನ ಆವರಿಸುತ್ತಿರುವಂತೆ ಭಾಸವಾಯಿತು. ಎಸ್ಎಂಎಸ್ ಹೀಗಿತ್ತು ‘ನಮಗೇಕೊ ರಿಸ್ಕ್ ಹೆಚ್ಚಾಗಿದೆ ಎನಿಸುತ್ತಿದೆ. ಹೀಗಾಗಿ ಇದನ್ನು ಮುಂದುವರೆಸಲು ನಾವು ಇಚ್ಛಿಸುವುದಿಲ್ಲ’

ನಾವಾಗ ಸಾಕಷ್ಟು ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡೆವು. ಎರಡು ತಿಂಗಳಿನಿಂದಲೂ ಮಾತುಕತೆ ನಡೆಯುತ್ತಿತ್ತು. ಎಲ್ಲವನ್ನೂ ನಿರ್ಧರಿಸಿಯಾಗಿತ್ತು. ಹೂಡಿಕೆದಾರ ಮಾತು ಕೊಟ್ಟಾಗಿತ್ತು, ಮಾರ್ಕೆಟಿಂಗ್ ಪ್ಲಾನ್ ತಯಾರಾಗಿತ್ತು, ಹೊಸ ಉದ್ಯೋಗಿಗಳನ್ನು ಸೇರಿಸಿಕೊಂಡಾಗಿತ್ತು ಅಷ್ಟೇ ಅಲ್ಲ, ಭಾರೀ ಪ್ರಮಾಣದಲ್ಲಿ ಟೀ ಶರ್ಟ್ ಗಳನ್ನು ಆರ್ಡರ್ ಮಾಡಿಯಾಗಿತ್ತು. ಬೇಕಾಗಿದ್ದು ಕೇವಲ ಹೂಡಿಕೆಯ ಹಣವಾಗಿತ್ತು. ಅದೊಂದು ಸಿಕ್ಕಿದ್ದರೆ ನಾವು ಮುಂದುವರೆದುಬಿಡುತ್ತಿದ್ದೆವು. ಆದರೆ ಕೊನೆ ಕ್ಷಣದಲ್ಲಿ ಹೂಡಿಕೆದಾರರು ಹಿಂದೆ ಸರಿದದ್ದರಿಂದ ನಮ್ಮ ಕೈಮುರಿದ ಹಾಗಾಗಿತ್ತು.

ನಾವು ಮುಂದಿನ ಅರ್ಧಗಂಟೆ ಮೆಸೆಜ್ ಗಳನ್ನು ವಿನಿಮಯಮಾಡಿಕೊಂಡು, ಆದ ತೊಂದರೆ ಏನೆಂದು ತಿಳಿಯಲು ಪ್ರಯತ್ನ ಮಾಡಿದೆವು. ಆದರೆ ಅದರಿಂದ ಯಾವ ಲಾಭವೂ ಆಗಲಿಲ್ಲ. ಕೊನೆಗೆ ಕಣ್ಣಲ್ಲಿ ನೀರು ತಂದುಕೊಂಡು ನಾನು ಕೊನೆಯ ಮೆಸೆಜ್ ಕಳಿಸಿದೆ, “ನನಗೆ ತಮ್ಮ ದಿಢೀರ್ ನಿರ್ಧಾರ ಅರ್ಥವಾಗುತ್ತಿಲ್ಲ. ಆದರೆ ತಮ್ಮ ಭರವಸೆಯ ಆಧಾರದ ಮೇಲೆಯೇ ನಾವು ಎಲ್ಲ ಯೋಜನೆಗಳನ್ನು ಹಾಕಿಕೊಂಡಿದ್ದೆವು. ನಾನು ತಾವು ತಮ್ಮ ನಿರ್ಧಾರವನ್ನು ಬದಲಿಸಿ ಎಂದು ತಮ್ಮ ಮೇಲೆ ಒತ್ತಡ ಹೇರುವುದಿಲ್ಲ. ಆದರೆ, ನನ್ನ ಯೋಗ್ಯತೆ ಹಾಗೂ ಸಾಮರ್ಥ್ಯ ನನಗೆ ಗೊತ್ತಿದೆ. ಭಾರತದಲ್ಲಿ ನಾನು ಜನಪ್ರಿಯ ಟಿ-ಶರ್ಟ್ ಬ್ರಾಂಡ್ ಅನ್ನು ತಯಾರಿಸುವ ಶಕ್ತಿಯಿದೆ. ತಮ್ಮ ಬಂಡವಾಳ ಹೂಡಿಕೆಯಿಂದ ನಾನು ಇದನ್ನು ಶೀಘ್ರವಾಗಿ ಮಾಡುವುದು ಸಾಧ್ಯವಿತ್ತಷ್ಟೆ. ಬಂಡವಾಳವಿಲ್ಲದಿದ್ದರೆ ನಾನು ಮಾಡುವುದು ಕೊಂಚ ತಡವಾಗುತ್ತದೆ ಅಷ್ಟೇ. ಆದರೆ ಆಗುವುದು ಮಾತ್ರ ನಿಶ್ಚಿತ. ನಿಮ್ಮ ಮುಂದಿನ ದಾರಿ ಶುಭಕರವಾಗಿರಲಿ ಎಂದು ಹಾರೈಸುತ್ತೇನೆ”

ನಮಗೆ ಕೋಪ ಬಂದಿತ್ತು, ಬೇಜಾರಾಗಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಾದ ಅಗತ್ಯವಿಲ್ಲ ತಾನೆ? ನಮಗೆ ಬರಲಿದ್ದ ಹೂಡಿಕೆಯ ಆಧಾರದ ಮೇಲೆ ನಾವು ಸಾಕಷ್ಟು ಯೋಜನೆಗಳನ್ನು ಹಾಕೊಂಡಿದ್ದೆವು. ಪ್ಯಾರಾಡೈಸ್ ರೆಸ್ಟರಾನ್​​ನಲ್ಲಿ ಕುಳಿತು, ಚಿಕನ್ ಬಿರಿಯಾನಿ ಮೆಲ್ಲುತ್ತ ನಾನು ಹಾಗೂ ನನ್ನ ಪಾರ್ಟನರ್, ಎಲ್ಲಿ ತಪ್ಪಾಯಿತು..? ಏನು ತಪ್ಪಾಯಿತು..? ಅದನ್ನು ಹೇಗೆ ತಡೆಯಬಹುದಿತ್ತು..? ಹಾಗೂ ನಮ್ಮ ಮುಂದಿನ ಯೋಜನೆಗಳನ್ನು ಸುದೀರ್ಘವಾಗಿ ಗಂಟೆಗಟ್ಟಲೆ ಚರ್ಚಿಸಿದೆವು.

ಬಂಡವಾಳ ಹೂಡಿಕೆಯನ್ನು ಪಡೆಯುವ ಸಂದರ್ಭದಲ್ಲಿ ಮೊದಲ ಬಾರಿಗೆ ನಾನು ಕಲಿತ ಪಾಠಗಳನ್ನು ಕೆಳಗೆ ನೀಡಿದ್ದೇನೆ.

1. ನಿಮಗೆ ನಿಜವಾಗಲೂ ಓರ್ವ ಬಂಡವಾಳ ಹೂಡಿಕೆದಾರನ ಅವಶ್ಯಕತೆಯ ಇದೆಯೆ?

ನಿಮ್ಮ ಅಂತಿಮ ಗುರಿಯ ಬಗ್ಗೆ ಸ್ಪಷ್ಟವಾಗಿ ಆಲೋಚಿಸಿ. ನಿಮ್ಮ ಬಳಿ ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕಂಪನಿ ಇದ್ದು, ಅದರ ಮೇಲೆ ನಿಮಗೆ ಸಂಪೂರ್ಣ ಹಿಡಿತ ಇದೆಯೆ? ಹಾಗಿದ್ದರೆ, ನಿಮಗೆ ಯಾವುದೇ ಹೂಡಿಕೆದಾರರ ಅವಶ್ಯಕತೆ ಇಲ್ಲವೇ ಇಲ್ಲ. ಯಾರೋ ಒಬ್ಬರು ಬಂಡವಾಳ ಹೂಡಿಕೆ ತೆಗೆದುಕೊಳ್ಳುತ್ತಿದ್ದಾರೆ ಎಂಬ ಕಾರಣಕ್ಕೆ ನೀವೂ ಕೂಡ ಅವರನ್ನು ಅನುಕರಿಸಬೇಡಿ. ನೀವು ನಿಮ್ಮ ಅಂತಿಮ ಗುರಿಯನ್ನು ಸಾಧಿಸಲು ಬಂಡವಾಳ ಬೇಕೆ ಬೇಕು ಹಾಗೂ ಆ ಬಂಡವಾಳವನ್ನು ನಿಮಗೆ ಹೊಂದಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ ಮಾತ್ರ ಬಂಡವಾಳ ಹೂಡಿಕೆದಾರರನ್ನು ಹುಡುಕಿ.

2. ಬಂಡವಾಳ ಸಂಗ್ರಹ ಒಂದು ಪ್ರತ್ಯೇಕ ಚಟುವಟಿಕೆ ಅಲ್ಲ.

ವ್ಯವಹಾರ ಚೆನ್ನಾಗಿ ನಡೆಯುತ್ತಿರುವ ಹಂತದಲ್ಲಿ, ಕೇವಲ ಬಂಡವಾಳ ಸಂಗ್ರಹದತ್ತ ಗಮನ ಹರಿಸಿದರೆ, ಪ್ರಸ್ತುತ ಇರುವ ವ್ಯವಹಾರವೂ ಕುಸಿಯುವ ಸಾಧ್ಯತೆ ಇದೆ. ಬಂಡವಾಳ ಸಂಗ್ರಹ ತುಂಬಾ ಸಮಯ ಹಾಗೂ ಶಕ್ತಿಯನ್ನು ಬಯುಸುತ್ತದೆ. ಅದೇ ಸಮಯ ಮತ್ತು ಶಕ್ತಿಯನ್ನು ವ್ಯವಹಾರದ ಅಭಿವೃದ್ಧಿಗೆ ಬಳಸಬಹುದು. ನಿಮ್ಮ ಸಂಸ್ಥೆಯಲ್ಲಿ ಮತ್ತೋರ್ವ ಸಹ-ಸಂಸ್ಥಾಪಕರಿದ್ದರೆ, ಒಬ್ಬರು ಪ್ರಸ್ತುತ ಇರುವ ವ್ಯವಹಾರದ ಅಭಿವೃದ್ಧಿಯತ್ತ ಗಮನಹರಿಸಿ ಮತ್ತೊಬ್ಬರು ಬಂಡವಾಳ ಸಂಗ್ರಹದತ್ತ ಗಮನ ಹರಿಸಬಹುದು. ಹೀಗಾದಾಗ, ಸತತ ಪ್ರಯತ್ನದ ನಂತರವೂ ಬಂಡವಾಳ ಸಂಗ್ರಹ ಆಗಬಹುದು ಅಥವಾ ಆಗದಿರಬಹುದು, ಆದರೆ ಪ್ರಸ್ತುತ ನಡೆಯುವತ್ತಿರುವ ವ್ಯವಹಾರ ಮಾತ್ರ ನಿಂತಿರುವುದಿಲ್ಲ.

3. ಆಕೆ/ಆತ ಹೌದು ಎಂದಿದ್ದಾರೆಯೆ? ಮದುವೆಗೆ ಯೋಜನೆ ಹಾಕಿಕೊಳ್ಳಬೇಡಿ.

ನಮಗೆ ಬಂಡವಾಳ ಹೂಡಿಕೆ ಮಾಡಲು ನಮ್ಮ ಹೂಡಿಕೆದಾರರು ಬದ್ಧತೆಯನ್ನು ಪ್ರದರ್ಶಿಸಿದ್ದರು. ಹಾಗಾಗಿ, ನಾವು ಇತರ ಕಡೆಗಳಲ್ಲಿ ಬಂಡವಾಳ ಹೂಡಿಕೆದಾರರನ್ನು ಹುಡುಕುವುದನ್ನು ಬಿಟ್ಟುಬಿಟ್ಟಿದ್ದೆವು. ನಮ್ಮ ಎಲ್ಲ ಸಮಯವನ್ನು ಕೇವಲ ನಮಗೆ ಬರಲಿದ್ದ ಬಂಡವಾಳದ ವಿನಿಯೋಜನೆಯ ಬಗ್ಗೆಯೇ ಮೀಸಲಿಟ್ಟಿದ್ದೆವು. ನಮಗೆ ಬರುತ್ತಿದ್ದ ಆರ್ಡರ್ ಗಳ ಸಂಖ್ಯೆಯಲ್ಲಿ ಸಣ್ಣ ಕುಸಿತವನ್ನು ನಾವು ಗಮನಿಸಿದ್ದರೂ, ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಯಾಕೆಂದರೆ ನಮಗೆ ಬರಲಿದ್ದ ಹಣದಿಂದ ನಮ್ಮ ಮಾರ್ಕೆಟಿಂಗ್ ವಿಭಾಗವನ್ನು ಸಶಕ್ತಗೊಳಿಸಿ ಕುಸಿದಿರುವ ಆರ್ಡರನ್ನು ಮೇಲೆತ್ತಬಹುದು ಎಂದುಕೊಂಡಿದ್ದೆವು. ಕೊನೆಗೆ, ಬಂಡವಾಳ ಹೂಡಿಕೆದಾರ ಹಿಂದೆ ಸರಿದದ್ದರಿಂದ ನಮ್ಮ ಆರ್ಡರ್ ಗಳ ಕುಸಿತ ಮುಂದುವರೆದು, ನಾವು ಸಾಲದ ಮೊರೆ ಹೋಗುವಂತಾಯಿತು.

4. ನಂದೇನು ಅದು ನಿಂದಲ್ಲ...!

ನಿಮ್ಮ ಹೂಡಿಕೆದಾರರು ನಿಮ್ಮ ಕಂಪನಿಯ ಬೋರ್ಡ್ ನಲ್ಲಿ ಬರದ ಹೊರತು ಅವರ ಜೊತೆ ಸಂಪೂರ್ಣವಾಗಿ ನಿಮ್ಮ ಯೋಜನೆಗಳು, ಬೆಳವಣಿಗೆಯ ಮಾರ್ಗಗಳು, ನಿಮ್ಮ ಸ್ಪರ್ಧಿಗಳ ಬಗ್ಗೆ ಮಾಹಿತಿಯನ್ನು ನೀಡಬೇಡಿ. ಹೂಡಿಕೆದಾರರ ಬದ್ಧತೆಯ ಮಾತುಗಳಿಂದಾಗ ನಾವು ನಮ್ಮ ಎಲೆಗಳನ್ನು ಬಳಸಿಕೊಂಡುಬಿಟ್ಟಿದ್ದೆವು. ನಮ್ಮ ಸ್ಪರ್ಧಿಗಳು ಯಾರು, ನಮಗಿಂತ ಅವರು ಎಷ್ಟು ಹೆಚ್ಚು ಹಣ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ನಾವು ನಮ್ಮ ಹೂಡಿಕೆದಾರರೊಂದಿಗೆ ಹಂಚಿಕೊಂಡಿದ್ದೆವು. ಇದು ಬಹುಶಃ ನಮ್ಮ ವಿರುದ್ಧ ಕೆಲಸ ಮಾಡಿತು.

5. ಮಕ್ಕಳನ್ನು ಒಟ್ಟಿಗೆ ಪಡೆಯಲು ಇಚ್ಛಿಸುತ್ತೀರಾ?

ಉಂಗುರ ವಿನಿಮಯ ಮಾಡಿ, ಜೀವನ ಪೂರ್ತಿ ಒಟ್ಟಿಗೆ ಇರುತ್ತೇವೆ ಎಂಬ ವಚನವನ್ನು ತೆಗೆದುಕೊಳ್ಳುವ ಮೊದಲು, ಮಕ್ಕಳನ್ನು ಬೆಳೆಸಲು ಇಬ್ಬರಿಗೂ ಆಸಕ್ತಿ ಇದೆಯೆ ಎಂಬ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳಿಕೊಳ್ಳಿ. ಅಂದರೆ, ನೀವು ಹಾಗೂ ನಿಮ್ಮ ಹೂಡಿಕೆದಾರರು, ಇಬ್ಬರೂ ಬೇರ್ಪಡುವ ವಿಧಾನಗಳು ಒಂದೇ ಆಗಿವೆಯೆ ಎಂದು ಖಚಿತಪಡಿಸಿಕೊಳ್ಳಿ. ಭವಿಷ್ಯದಲ್ಲಿ, ಕಂಪನಿ ಮಾರಾಟಕ್ಕೆ ಒಳ್ಳೆಯ ಆಫರ್ ಬಂದು, ನಿಮ್ಮ ಹೂಡಿಕೆದಾರರು ಅದಕ್ಕೆ ಸಿದ್ಧರಿದ್ದು, ನೀವು ಕಂಪನಿಯನ್ನು ಉಳಿಸಿಕೊಳ್ಳಲು ಬಯಸುವಿರಾದರೆ, ಪರಿಸ್ಥಿತಿ ಕೈ ಮೀರಿ ಹೋಗಬಹುದು. ಬೇರ್ಪಡುವ ವಿಧಾನದ ಬಗ್ಗೆ ನೇರವಾಗಿಯೇ ನಿಮ್ಮ ಹೂಡಿಕೆದಾರರನ್ನು ಕೇಳಿ.

6. ಎಲ್ಲವೂ ಝಣಝಣ ಕಾಂಚಣ ಹಾಗೂ ಜೇನುತುಪ್ಪಕ್ಕಾಗಿ.

ಬಂಡವಾಳ ಸಂಗ್ರಹ ಮತ್ತು ಹೂಡಿಕೆದಾರರನ್ನು ಕಂಪನಿಯ ಬೋರ್ಡ್ ಗೆ ಬರಮಾಡಿಕೊಳ್ಳುವುದು ಆಹ್ಲಾದಕರ ವಿಷಯ ಆಗಿರಬಹುದು. ಆದರೆ ಅಂತಿಮವಾಗಿ ಇದೊಂದು ವ್ಯವಹಾರ. ಹೂಡಿಕೆದಾರ ತಮ್ಮ ಲಾಭಕ್ಕಾಗಿ ತವಕಿಸುತ್ತಿದ್ದರೆ, ನೀವು ಬೆಳೆಯಲು ಬಯಸುತ್ತಿದ್ದೀರಿ. ಹೀಗಿದ್ದರೂ, ನಿಮ್ಮ ಮದುವೆ ಒಂದು ಚೆಕ್ ಬುಕ್ ನೊಂದಿಗೆ ಆಗುತ್ತಿದ್ದೆಯೆ ಅಥವಾ ಓರ್ವ ಉತ್ತಮ ಸಂಗಾತಿ ದೊರಕುತ್ತಿದ್ದಾರೆಯೆ ಎಂದು ಪರಿಕ್ಷಿಸಿಕೊಳ್ಳಿ. ನಮ್ಮ ಹೂಡಿಕಾದರ ಹಿಂದೆ ಸರಿದಾಗ, ನನಗೆ ನಿಜವಾಗಿ ಕೋಪ ಬಂದಿತ್ತು. ಆದರೆ ಇದೊಂದು ವ್ಯವಹಾರ ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡೆ. ಅವರಿಗೆ ಇದು ರಿಸ್ಕ್​​ ಎನಿಸಿರಬಹುದು, ಅಥವಾ ನಮಗಿಂತ ಉತ್ತಮರು ಯಾರೋ ಸಿಕ್ಕಿರಬಹುದು ಅಥವಾ ಅವರ ಅಭಿಪ್ರಾಯ ಬದಲಾಗಿರಬಹುದು. ಅವರನ್ನು ಯಾರೂ ದೂಷಿಸುವಂತಿಲ್ಲ. ಹೀಗಾಗಿ, ನಿಮ್ಮ ಪ್ರಸ್ತುತ ವ್ಯವಹಾರದ ಮೇಲೆ ಸದಾ ಕಣ್ಣಿಟ್ಟಿರುವುದು ಅವಶ್ಯಕವಾಗಿದೆ.

7. ಅದು ಆಗುವವರೆಗೂ ಆಗಿಲ್ಲವೆಂದೇ ಅರ್ಥ...

ಇತರ ಆಫರ್ ಗಳನ್ನು ಗಮನಿಸದೇ ಹೋದದ್ದು ನಮ್ಮ ತಪ್ಪಾಗಿತ್ತು. ನಮಗೆ ಹೂಡಿಕೆದಾರರಿಂದ ಬದ್ಧತೆಯ ಮಾತುಗಳು ಸಿಕ್ಕಮೇಲೆ, ಬೇರೆ ಯಾವುದೇ ಹೂಡಿಕೆದಾರರನ್ನು ಸಂಪರ್ಕಿಸದಂತೆ ನಮ್ಮ ಹೂಡಿಕೆದಾರರೇ ಹೇಳಿದ್ದರು. ನಮಗೆ ಉಳಿದ ಹೂಡಿಕೆದಾರರಿಂದ ಆಫರ್ ಗಳು ಸಿಕ್ಕಿದ್ದರೂ, ಅವನ್ನು ನಾವು ನಯವಾಗಿ ತಳ್ಳಿಹಾಕಿದ್ದೇವು.

8. ಇದೇ ಕೊನೆಯಲ್ಲ..

ಈ ಘಟನೆ ನಡೆದಾಗ ನಾವು ಪಾತಾಳಕ್ಕೆ ಇಳಿದುಹೋಗಿದ್ದೆವು. ಕಂಪನಿ ಮಾರಿಬಿಡುವ ವಿಚಾರ ನಮ್ಮ ಆಲೋಚನೆಗಳಲ್ಲಿ ಸುಳಿದು ಹೋಯಿತು. ಆದರೆ ನಾವು ಹಾಗೆ ಮಾಡಲಿಲ್ಲ. ಬಂಡವಾಳ ಸಂಗ್ರಹ ಆಗಲಿಲ್ಲವ?, ತೊಂದರೆಯಿಲ್ಲ. ನೆನಪಿಡಿ, ಕೇವಲ ಬಂಡವಾಳ ಸಂಗ್ರಹ ಮಾಡಲು ನೀವು ಕಂಪನಿಯನ್ನು ಆರಂಭಿಸಿಲ್ಲ. ಬಂಡವಾಳ ಸಂಗ್ರಹ ಎಂಬುದು ನಿಮ್ಮ ಪ್ರಸ್ತುತ ವ್ಯವಾಹರವನ್ನು ವಿಸ್ತರಿಸುವ ಒಂದು ಚಟುವಟಿಕೆಯಷ್ಟೇ. ಸಣ್ಣ ಪ್ರಮಾಣದ್ದೇ ಆದರೂ, ನಿರಂತರವಾಗಿ ಲಾಭ ಮಾಡುವ ವ್ಯವಹಾರದ ಕುರಿತು ಸದಾ ಯೋಚಿಸಿ.

ಕೊನೆಯದಾಗಿ ನಾನು ಕಲಿತ ಪಾಠವೆಂದರೆ, ಬಂಡವಾಳ ಸಂಗ್ರಹ ಎಂಬುದು ವ್ಯವಹಾರದ ಸರ್ವಸ್ವವಲ್ಲ, ಅದು ಕೇವಲ ಒಂದು ಭಾಗವಷ್ಟೇ.