ತಿರಸ್ಕಾರಕ್ಕೆ ತಲೆಬಾಗದ ಸಾಹಸಿಗಳು...ದೇಶಕ್ಕೆ ಮಾದರಿ ಸಲಿಂಗಿಗಳ ಸಾಧನೆ

ಟೀಮ್​​ ವೈ.ಎಸ್​​.

0

ಸಲಿಂಗಕಾಮಿಗಳು ಎಂದಾಕ್ಷಣ ಮೂಗು ಮುರಿಯುವವರೇ ಹೆಚ್ಚು. ಇಡೀ ಸಮಾಜವೇ ಅವರನ್ನು ಕೀಳಾಗಿ ನೋಡುತ್ತೆ. ಆದ್ರೆ ಅವರಿಗೂ ಬದುಕುವ ಹಕ್ಕಿದೆ, ಅಂದುಕೊಂಡಿದ್ದನ್ನು ಸಾಧಿಸುವ ಛಲವಿದೆ. ಸಲಿಂಗಕಾಮಿಗಳ ಎಲ್‍ಜಿಬಿಟಿ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಿದ ನಾಲ್ವರು ಸಾಧಕರ ಜೀವನ ಯಾನವನ್ನು ಒಂದೊಂದಾಗಿ ನೋಡೋಣ.

1. ನಿತಿನ್ ರಾವ್ ಹೋರಾಟದ ಉತ್ಸಾಹಕ್ಕೆ ಸಲಾಂ

ನಿತಿನ್ ರಾವ್ ಹುಟ್ಟಿ ಬೆಳೆದಿದ್ದು ಬೆಂಗಳೂರು ಮತ್ತು ಪುಣೆಯಲ್ಲಿ. ಗಣಿತದಲ್ಲಿ ಅಪಾರ ಆಸಕ್ತಿ ಹೊಂದಿದ್ದ ನಿತಿನ್‍ಗೆ ಹೊಸದನ್ನು ಕಲಿಯುವ ಹಂಬಲವಿತ್ತು. ಎನ್‍ಐಟಿ ಸುರತ್ಕಲ್‍ನಲ್ಲಿ ಪದವಿ ಪಡೆದ ಅವರು ಮಾನವ ಹಕ್ಕು ಹಾಗೂ ಶಿಕ್ಷಣದತ್ತ ಗಮನಹರಿಸಿದ್ರು. ಎಂಬಿಎ ಮುಗಿಸಿ ಬೆಂಗಳೂರಲ್ಲೇ ನೆಲೆ ನಿಂತಿದ್ದಾರೆ. ಮೊದಲಿನಿಂದ್ಲೂ ಅವರಿಗೆ ಹುಡುಗರ ಬಗ್ಗೆಯೇ ಸೆಳೆತವಿತ್ತು. ಆದ್ರೆ ಅದನ್ನು ಸುತ್ತ ಮುತ್ತಲಿನವರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಾಗ್ತಿರ್ಲಿಲ್ಲ. ತಾವೊಬ್ಬ ಸಲಿಂಗಿ ಅನ್ನೋದನ್ನು ಸ್ನೇಹಿತರು ಹಾಗೂ ಪೋಷಕರಿಗೂ ಅರ್ಥಮಾಡಿಸಲು ಸಾಧ್ಯವಾಗಿರ್ಲಿಲ್ಲ. ಇದ್ಯಾವುದೋ ಆರೋಗ್ಯ ತೊಂದರೆ ಇರಬೇಕು ಅಂತಾ ಪೋಷಕರು ಅಲವತ್ತುಕೊಂಡ್ರು. ಸಲಿಂಗಕಾಮಿಗಳ ಸಂಖ್ಯೆ ಕಡಿಮೆಯಿರೋದ್ರಿಂದ ಅವರಿಗೆ ಸರಿಯಾದ ಅಸ್ಥಿತ್ವ ಸಿಗುತ್ತಿಲ್ಲ ಅನ್ನೋದು ನಿತಿನ್ ಅಳಲು. ಅವರ ಕಾಲೇಜಿನಲ್ಲಿ ಇಂಥ ವಿದ್ಯಾರ್ಥಿಗಳನ್ನು ಹೀಯಾಳಿಸುತ್ತಿದ್ರು. ಆದ್ರೆ ಮಣಿಪಾಲ್ ಹಾಗೂ ಹೈದ್ರಾಬಾದ್‍ನಲ್ಲಿ ಲೆಸ್ಬಿಯನ್‍ಗಳಿಗೂ ಕಲಿಯುವ ಅವಕಾಶವಿತ್ತು. ಹೊಸ ತಲೆಮಾರಿನ ಜನತೆ ಸ್ವಲ್ಪ ಮಟ್ಟಿಗಾದ್ರೂ ಗೇಗಳ ಸಂಕಷ್ಟವನ್ನು ಅರ್ಥಮಾಡಿಕೊಂಡಿದ್ದಾರೆ ಎನ್ನುತ್ತಾರೆ ನಿತಿನ್. 2010ರಲ್ಲಿ ನಿತಿನ್, ತುಷಾರ್ ಮಲಿಕ್ ಅವರೊಂದಿಗೆ ಸೇರಿ ಈಕ್ವಲ್ ಇಂಡಿಯಾ ಅಲಾಯನ್ಸ್ ಎಂಬ ಸಂಸ್ಥೆಯನ್ನು ಆರಂಭಿಸಿದ್ದಾರೆ. ಎಲ್‍ಜಿಬಿಟಿ ಸಮುದಾಯದ ಹಕ್ಕುಗಳನ್ನು ಬೆಂಬಲಿಸುವ 300 ವಿಡೋಗಳನ್ನು ಸಂಸ್ಥೆ ದಾಖಲಿಸಿದೆ.

ನಿತಿನ್​ ರಾವ್​​​
ನಿತಿನ್​ ರಾವ್​​​

2. ಎಲ್‍ಜಿಬಿಟಿ ಕಾರ್ಯಕರ್ತೆ ವಿದ್ಯಾ ಪೈ

ಪ್ರೌಢಾವಸ್ಥೆಗೆ ಬರುತ್ತಿದ್ದಂತೆ ತಾವೊಬ್ಬ ಸಲಿಂಗ ಕಾಮಿ ಅನ್ನೋದು ಅರ್ಥವಾಗಿರುತ್ತೆ. ಆದ್ರೆ ವಿದ್ಯಾ ಪೈ ಬದುಕಲ್ಲಿ ಆಗಿದ್ದೇ ಬೇರೆ. 20 ವರ್ಷಗಳಾಗುವವರೆಗೂ ವಿದ್ಯಾಗೆ ತಾವು ಉಭಯಲಿಂಗರತಿ ಅನ್ನೋದು ಗೊತ್ತೇ ಇರಲಿಲ್ಲ. ಜನರು ಲೈಂಗಿಕತೆಯನ್ನು ನಡವಳಿಕೆ ಜೊತೆ ಹೋಲಿಸುವುದು ದುರದೃಷ್ಟಕರ ಅನ್ನೋದು ವಿದ್ಯಾರ ಬೇಸರದ ನುಡಿ. ಎಲ್‍ಜಿಬಿಟಿ ಸಮುದಾಯದ ಹಕ್ಕುಗಳು, ಮಹಿಳಾ ಸ್ವಾತಂತ್ರ್ಯ, ಪ್ರಾಣಿಗಳ ಕಲ್ಯಾಣಕ್ಕಾಗಿ ವಿದ್ಯಾ ಹೋರಾಡುತ್ತಿದ್ದಾರೆ. ಈ ವಿಚಾರ ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಆಗ ವಿದ್ಯಾ ಸಲಿಂಗಕಾಮಿ ಇರಬಹುದು ಎಂಬ ಅನುಮಾನ ಸ್ನೇಹಿತರು ಹಾಗೂ ಕುಟುಂಬದವರಿಗೆ ಬಂದಿತ್ತು. ಆಗಲೇ ವಿದ್ಯಾಗೂ ಅದರ ಬಗ್ಗೆ ಅರಿವಾಗಿದ್ದು. ಆ ಸಮಯದಲ್ಲಿ ವಿದ್ಯಾ ಸಿಟಿ ಬ್ಯಾಂಕ್‍ನಲ್ಲಿ ಇನ್‍ವೆಸ್ಟ್​​​ಮೆಂಟ್ ಬ್ಯಾಂಕರ್ ಕೂಡ ಆಗಿದ್ರು. ಸಲಿಂಗಿಗಳಿಗೆ ಸಮಾಜದಲ್ಲಿ ಮಾನ್ಯತೆ ಸಿಗುತ್ತಿಲ್ಲ ಅನ್ನೋದು ವಿದ್ಯಾ ಅವರ ಅಳಲು. ಮಾಧ್ಯಮ ಮತ್ತು ಸಮುದಾಯದಲ್ಲಿ ಗುರುತಿಸಿಕೊಳ್ತಿರೋದು ಕೊಂಚ ಸಮಾಧಾನಕರ ಸಂಗತಿ ಎನ್ನುತ್ತಾರೆ ಅವರು. ಸುಪ್ರೀಂ ಕೋರ್ಟ್ ತೀರ್ಪು ಕೂಡ ಸಲಿಂಗಿ ಸಮುದಾಯವನ್ನು ಆಘಾತ ಹಾಗೂ ಅಭದ್ರತೆಯಲ್ಲಿ ಮುಳುಗಿಸಿದೆ. ಕಂಪ್ಯೂಟರ್ ಎಂಜಿನಿಯರಿಂಗ್ ಪದವಿ ಪಡೆದಿದ್ರೂ ವಿದ್ಯಾ ಎಲ್‍ಜಿಬಿಟಿ ಸಮುದಾಯದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ವಿದ್ಯಾ ಪೈ
ವಿದ್ಯಾ ಪೈ

3. ಭರತ್ ಜಯರಾಮನ್ : ಮಾನವ ಸಂಪನ್ಮೂಲದಿಂದ ಮಾನವ ಹಕ್ಕುಗಳವರೆಗೆ..

ಕೊರ್ನೆಲ್ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಭರತ್ ಜಯರಾಮನ್, ಅಮೇಝಾನ್‍ನಲ್ಲಿ ಕೆಲಸ ಮಾಡ್ತಿದ್ದಾರೆ. ಗೂಗಲ್ ಹಾಗೂ ವಿಪ್ರೋನಂತಹ ಐಟಿ ದಿಗ್ಗಜ ಕಂಪನಿಗಳಲ್ಲೂ ಕೆಲಸ ಮಾಡಿದ ಅನುಭವ ಇವರಿಗಿದೆ. ಸಮಾಧಾನಕರ ಸಂಗತಿ ಅಂದ್ರೆ ಭರತ್ ಸಲಿಂಗಿ ಅನ್ನೋದು ಗೊತ್ತಾದಾಗ ಕುಟುಂಬದವರು ಅವರನ್ನು ಜರಿಯಲಿಲ್ಲ. ಸ್ನೇಹಿತರು ದೂರ ಮಾಡಲಿಲ್ಲ. ಉದ್ಯೋಗಕ್ಕೂ ಯಾವುದೇ ತೊಂದರೆಯಾಗಲಿಲ್ಲ. ತಿರಸ್ಕಾರದ ಭಯದಿಂದಾಗಿ ತಾನೊಬ್ಬ ಎಲ್‍ಜಿಬಿಟಿ ಅನ್ನೋದನ್ನು ಹೇಳಿಕೊಳ್ಳುವುದು ಸುಲಭವಲ್ಲ ಎನ್ನುತ್ತಾರೆ ಭರತ್. ಸಲಿಂಗಕಾಮಿಗಳು ಕೀಳರಿಮೆಯಿಂದ ಹೊರಬಂದು ತಮ್ಮ ಅಸ್ಥಿತ್ವವನ್ನು ಹುಡುಕಿಕೊಳ್ಳಬೇಕು ಅನ್ನೋದು ಭರತ್ ಅವರ ಅಭಿಪ್ರಾಯ.

ಭರತ್​​ ಜಯರಾಮ್​​​​
ಭರತ್​​ ಜಯರಾಮ್​​​​

4. ಶಂಕರ್ ಗಣೇಶ್ : ಎಲ್‍ಜಿಬಿಟಿ ಅಭ್ಯುದಯಕ್ಕಾಗಿ ಇಂಟರ್ನೆಟ್ ಬಳಕೆ

ಶಂಕರ್ ಮೂಲತಃ ತಮಿಳುನಾಡಿನ ಟ್ಯೂಟಿಕೊರಿನ್‍ನವರು. ಬಾಲ್ಯದಿಂದ್ಲೂ ಟೆಕ್ಕಿ ಆಗ್ಬೇಕು ಅನ್ನೋ ಕನಸು ಅವರಿಗಿತ್ತು. ತಾವೊಬ್ಬ ಗೇ ಅನ್ನೋದು ಶಂಕರ್‍ಗೆ ಮೊದಲೇ ಅರ್ಥವಾಗಿತ್ತು. ಹಾಗಾಗಿ ಈ ಬಗ್ಗೆ ಅವರು ಹೆಚ್ಚಿನ ಮಾಹಿತಿಗಳನ್ನು ಕಲೆಹಾಕುತ್ತಿದ್ರು. ಸಾಮಾಜಿಕ ಜಾಲತಾಣ ಓರ್ಕುಟ್ ಮೂಲಕ ಶಂಕರ್‍ಗೆ ಸಲಿಂಗಕಾಮಿಗಳ ಪರಿಚಯವಾಯ್ತು. ಅವರಲ್ಲಿ ಕೆಲವರನ್ನು ಶಂಕರ್ ಚೆನ್ನೈನಲ್ಲಿ ಭೇಟಿಯಾದ್ರು. ಆದ್ರೆ ಅವರೆಲ್ಲ ಉಭಯಸಲಿಂಗರತಿಗಳಾಗಿದ್ರು. ತಮಗೊಬ್ಬ ಸಲಿಂಗಕಾಮಿ ಜೊತೆಗಾರ ಸಿಗುತ್ತಿಲ್ಲ ಅನ್ನೋದು ಶಂಕರ್ ಅವ್ರನ್ನು ಕಂಗೆಡಿಸಿತ್ತು. ತಾವೊಬ್ಬ ಗೇ ಅನ್ನೋದು ಗೊತ್ತಾದ್ರೆ ಸಮಾಜದಲ್ಲಿ ತಮಗೆಂಥ ಸ್ಥಾನಮಾನ ಸಿಗಬಹುದು? ಪೋಷಕರ ಪ್ರತಿಕ್ರಿಯೆ ಹೇಗಿರಬಹುದು ಅನ್ನೋದನ್ನು ಯೋಚಿಸಿ ಶಂಕರ್ ಹೈರಾಣಾಗಿದ್ರು. ಈ ಸಮಸ್ಯೆಗೆ ಚಿಕಿತ್ಸೆಯಿಂದ ಪರಿಹಾರ ಸಿಗುತ್ತೆ ಅಂತಾ ತಂದೆ ಸಮಾಧಾನ ಹೇಳಿದ್ರು. ಆದ್ರೆ ಅದು ಅಸಾಧ್ಯ ಅನ್ನೋದರ ಅರಿವು ಶಂಕರ್ ಅವರಿಗಿತ್ತು. ಖಿನ್ನತೆಗೂ ಒಳಗಾಗಿದ್ದ ಶಂಕರ್, ಉದ್ಯೋಗದಲ್ಲೂ ಹಿನ್ನಡೆ ಅನುಭವಿಸಬೇಕಾಯ್ತು. ಆದ್ರೆ ಅದೆಲ್ಲದರಿಂದ್ಲೂ ಚೇತರಿಸಿಕೊಂಡ ಶಂಕರ್, ಸದ್ಯ ಫ್ರೆಶ್ ಡೆಸ್ಕ್​​ನಲ್ಲಿ ಕರ್ತವ್ಯ ನಿರ್ವಹಿಸ್ತಿದ್ದಾರೆ. ಸಹೋದ್ಯೋಗಿಗಳು ಗೇ ಎಂಬ ಕಾರಣಕ್ಕೆ ಅವರನ್ನು ತಿರಸ್ಕರಿಸದೆ, ಉತ್ಸಾಹ ತುಂಬುತ್ತಾರೆ. ಇಟ್‍ಗೆಟ್ಸ್​​ ಬೆಟರ್ ಡಾಟ್ ಆರ್ಗ್ ವೆಬ್‍ಸೈಟ್ ಆರಂಭಿಸಿರುವ ಶಂಕರ್, ಎಲ್‍ಜಿಬಿಟಿ ಸಮುದಾಯವನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.

ಶಂಕರ್​ ಗಣೇಶ್​​​​​
ಶಂಕರ್​ ಗಣೇಶ್​​​​​

ಒಟ್ನಲ್ಲಿ ನಾಲ್ವರು ಸಲಿಂಗಕಾಮಿಗಳು ತಮ್ಮ ಜೀವನದ ಏರಿಳಿತಗಳನ್ನು ಹಂಚಿಕೊಂಡಿದ್ದಾರೆ. ಅವರು ಪಟ್ಟ ಕಷ್ಟ, ಅನುಭವಿಸಿದ ಸಂಕಟವನ್ನು ಬಿಚ್ಚಿಟ್ಟಿದ್ದಾರೆ. ಇವರ ಬದುಕು ನಿಜಕ್ಕೂ ಇತರರಿಗೆ ಮಾದರಿ.

Related Stories

Stories by YourStory Kannada