ಅನಿಮೇಶನ್ ಸಾಮ್ರಾಜ್ಯದ ಅನಭಿಷಿಕ್ತ ದೊರೆ ಸುರೇಶ್ ಎರಿಯಟ್..

ಟೀಮ್​​ ವೈ.ಎಸ್​. ಕನ್ನಡ

0

ಕೇರಳದ ಕೊಚ್ಚಿಯ ಹೊರವಲಯದಲ್ಲಿರುವ ಪುಟ್ಟ ಊರು ತ್ರಿಪುನಿತುರ. ಈ ಊರಿನಲ್ಲಿ ಹುಟ್ಟಿ ಬೆಳೆದ ಸುರೇಶ್ ಎರಿಯಟ್ ಇದೀಗ ಗ್ರಾಫಿಕ್ಸ್ ಅನಿಮೇಶನ್ ಕ್ಷೇತ್ರದ ಅಪ್ರತಿಮ ತಾರೆ. ಕಲೆ ಹಾಗೂ ಪರಿಕಲ್ಪನೆಗಳಲ್ಲಿ ಅದ್ಭುತ ಕ್ರಿಯಾಶೀಲತೆ ಹೊಂದಿರುವ ಸುರೇಶ್ ಈಗಲೂ ಇಲ್ಲಿನ ಚಿನ್ಮಯ ವಿದ್ಯಾಲಯದ ವಿಧೇಯ ವಿದ್ಯಾರ್ಥಿ. ಅಲ್ಲದೆ ಅನಿಮೇಶನ್ ಸ್ಟುಡಿಯೋ ‘ಸ್ಟುಡಿಯೋ ಈಕ್ಸುರಾಸ್ ’ ನ ಸಂಸ್ಥಾಪಕ. ಜಾಹೀರಾತು ಹಾಗೂ ಅನಿಮೇಶನ್ ನಲ್ಲಿ ಇವತ್ತು ಮಾದರಿಯಾಗಿ ಬೆಳೆದಿರುವ ಸುರೇಶ್, ತಮ್ಮ ಸಾಧನೆಗೆ ಹೆತ್ತವರ ಪ್ರೋತ್ಸಾಹವೇ ಕಾರಣ ಅಂತ ತುಂಬು ಮನಸ್ಸಿನಿಂದ ಹೇಳುತ್ತಾರೆ. ಅಲ್ಲದೆ ಬಾಲ್ಯದಲ್ಲಿ ಹಲವು ಸ್ಥಳೀಯ ಹಾಗೂ ರಾಜ್ಯಮಟ್ಟದ ಪೇಂಟಿಂಗ್, ಮ್ಯೂಸಿಕ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು ಇವರ ವೃತ್ತಿ ಬದುಕಿನ ಯಶಸ್ಸಿಗೆ ಸಹಕಾರಿಯಾಗಿದೆ.

ಚಿತ್ರಕಲೆ ಒಂದು ಅದ್ಭುತ ಹವ್ಯಾಸವೇ ಹೊರತು ಅದೇ ಯಾವತ್ತೂ ವೃತ್ತಿಬದುಕಾಗಿ ಬೆಳೆಯೋದಕ್ಕೆ ಸಾಧ್ಯವಿಲ್ಲ ಅಂತ ಸುರೇಶ್ ಎರಿಯಟ್ ನಂಬಿದ್ರು. ಹೀಗಾಗಿ ಅವರ ಗಮನವೆಲ್ಲಾ ಐಐಟಿ – ಜೆಇಇ ( ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮಿನೇಷನ್ ) ತಯಾರಿ ಕಡೆಗಿತ್ತು. ಹೀಗಿದ್ರೂ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಸುರೇಶ್ ಯಾವತ್ತೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಹೀಗಿರುವಾಗ ಅದೃಷ್ಟವೆನ್ನುವ ಹಾಗೆ ಕಾಂಪಿಟೀಶನ್ ಒಂದರಲ್ಲಿ ಅಹಮದಾಬಾದ್ ನಲ್ಲಿರುವ ಪ್ರತಿಷ್ಠಿತ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಡಿಸೈನ್ ನ ವ್ಯಕ್ತಿಯೊಬ್ಬರನ್ನ ಭೇಟಿಯಾದ್ರು. ಈ ವೇಳೆ ಅಲ್ಲಿನ ತರಬೇತಿ ಹಾಗೂ ಅಲ್ಲಿನ ಕೋರ್ಸ್ ಗಿರುವ ಪ್ರಾಮುಖ್ಯತೆ ತಿಳಿದು ತಾವೂ ಅಲ್ಲಿಗೆ ಸೇರಿಕೊಳ್ಳಲು ಬಯಸಿದ್ರು. ಹಾಗೂ ಹೀಗೂ ಮಾಡಿ ತಮ್ಮ ಹೆತ್ತವರನ್ನೂ ಒಪ್ಪಿಸಿಬಿಟ್ರು. ಹೀಗಾಗಿ ಎನ್ ಐಡಿ ಹಾಗೂ ಐಐಟಿ ಎರಡೂ ಪರೀಕ್ಷೆಗಳಿಗೂ ಸುರೇಶ್ ತಯಾರಿ ನಡೆಸಿದ್ರು. ಹೀಗಿರುವಾಗ ಐಐಟಿಯ ಮೊದಲ ಪರೀಕ್ಷೆಯನ್ನ ಮುಗಿಸಿ ಬಂದಾಗ ಅವತ್ತು ಸಂಜೆ ಎನ್ ಐಡಿಗೆ ಪ್ರವೇಶ ಸಿಕ್ಕಿರುವ ಬಗ್ಗೆ ಪತ್ರ ಬಂದಿತ್ತು. ಅಲ್ಲಿಗೆ ಐಐಟಿ ಎಕ್ಸಾಮ್ ಗೆ ಎಳ್ಳುನೀರು ಬಿಟ್ಟ ಸುರೇಶ್ ಅಹಮದಾಬಾದ್ ಗೆ ತೆರಳಿದ್ರು.

ಅನಿಮೇಟರ್ ಆಗುವ ಮೊದಲ ಯತ್ನ..

1998ರ ವೇಳೆ ದೇಶದಲ್ಲಿ ಆಗಿನ್ನೂ ಅನಿಮೇಶನ್ ತಂತ್ರಜ್ಞಾನ ಬೆಳವಣಿಗೆಯ ಹಾದಿಯಲ್ಲಿತ್ತು. ಹೀಗಿರುವಾಗ ಸುರೇಶ್ ಮುಂಬೈನ ಖ್ಯಾತ ಅನಿಮೇಶನ್ ಸ್ಟುಡಿಯೋವೊಂದಕ್ಕೆ ಸೇರಿಕೊಂಡ್ರು. ಅಲ್ಲಿ ಭಾರತೀಯ ಇತಿಹಾಸ ಮತ್ತು ಪುರಾಣದ ಕಥೆಗಳನ್ನ ರೂಪಿಸುತ್ತಿದ್ರು. ಇಲ್ಲಿ ಕೆಲಸ ಮಾಡುವಾಗ ಜಾಹೀರಾತು ಹಾಗೂ ಅನಿಮೇಶನ್ ಬ್ಯುಸಿನೆಸ್ ಟೆಕ್ನಿಕ್ ಗಳನ್ನ ಕಲಿತುಕೊಂಡ್ರು. ಇವರ ವೃತ್ತಿ ಬದುಕಿನ ಮೊದಲ ಅನಿಮೇಶನ್ ಚಿತ್ರ ‘ ಲೆಜೆಂಡ್ ಆಫ್ ಶಿವಾಜಿ ’. ಛತ್ರಪತಿ ಶಿವಾಜಿ ಮಹಾರಾಜನ ಜೀವನಾಧಾರಿತ ಕಥೆ ಇದಾಗಿತ್ತು.

ಆರಂಭದಲ್ಲೇ ಸಿಕ್ಕ ಆಘಾತ..!

ಮೂವತ್ತು ನಿಮಿಷಗಳ ಲೆಜೆಂಡ್ ಶಿವಾಜಿ ಕಥೆ ಮುಂಬಾ ಚೆನ್ನಾಗಿ ಮೂಡಿಬಂದಿದ್ರೂ ಅದಕ್ಕೆ ಬ್ರಾಡ್ ಕಾಸ್ಟರ್ಸ್ ನಿಂದ ಸಿಕ್ಕಿದ್ದು ಕೇವಲ 70 ಸಾವಿರ ರೂಪಾಯಿ ಮಾತ್ರ. ಇದ್ರಿಂದ ನಿರಾಸೆಗೊಂಡ ಮುಂಬೈನ ಆ ಖ್ಯಾತ ಸ್ಟುಡಿಯೋ ತನ್ನ ಅನಿಮೇಶನ್ ವಿಭಾಗವನ್ನ ನಿಲ್ಲಿಸುವ ನಿರ್ಧಾರಕ್ಕೆ ಬಂದಿತು. ಆದ್ರೆ ಸುರೇಶ್ ಈ ಸೋಲನ್ನ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲು ತಯಾರಿರಲಿಲ್ಲ. ಸ್ಟುಡಿಯೋದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮತ್ತೊಂದು ಅವಕಾಶ ನೀಡುವಂತೆ ವಿನಂತಿಸಿಕೊಂಡ್ರು. ಅಲ್ಲದೆ ಸ್ಟುಡಿಯೋದ ಪರವಾಗಿ ಜಾಹೀರಾತು ಏಜೆನ್ಸಿಗಳನ್ನ ಭೇಟಿಯಾಗಿ ಹೊಸ ಕಾನ್ಸೆಪ್ಟ್ ಗಳ ಬಗ್ಗೆ ಚರ್ಚಿಸಿದ್ರು. ಹೀಗಾಗಿ ಸಣ್ಣ ಸಣ್ಣ ಪ್ರಾಜೆಕ್ಟ್ ಗಳು ಒಲಿದು ಬಂದವು. ಮುಂದಿನ ಹೆಜ್ಜೆ ಇಡೋದಿಕ್ಕೆ ಸುರೇಶ್ ಎರಿಯಾಟ್ ಗೆ ಇಷ್ಟು ಸಾಕಾಗಿತ್ತು. ಕೆಲವೇ ದಿನಗಳಲ್ಲಿ ಚಾನೆಲ್ ವಿ ಹಾಗೂ ಎಂಟಿವಿ ವಾಹಿನಿಗಳನ್ನ ಸಂಪರ್ಕಿಸಿದ್ರು. ಅಲ್ಲಿ ಅತ್ಯುತ್ತಮ ಕಟೆಂಟ್ ಗಳನ್ನ ನೀಡಿ ಗಮನ ಸೆಳೆದ್ರು . ಆ ವಾಹಿನಿಗಳೊಂದಿಗೆ ಒಂದಿಷ್ಟು ಕಾಲ ಸಂಪರ್ಕ ಹೊಂದಿದ್ದ ಸುರೇಶ್ ಮತ್ತು ಟೀಂ ಚಾನೆಲ್ ವಿ ನಲ್ಲಿ ಸಿಂಪು ಸಿರೀಸ್ ಹಾಗೂ ಎಂಟಿವಿಗೆ ಪೋಗಾ ಸಿರೀಸ್ ಗಳನ್ನ ನೀಡಿತು. ಇದು ಅವರ ಹಾದಿಯನ್ನೇ ಬದಲಾಯಿಸಿ ಬಿಟ್ಟಿತು. ಬಳಿಕ ಎಕ್ಸಪರಿಮೆಂಟ್ ಗಳನ್ನ ಮುಂದುವರಿಸಿದ ಸುರೇಶ್, ಅಮೆರಾನ್ ಬ್ಯಾಟರಿಯ ಕ್ಲೇ ಅನಿಮೇಶನ್ ಹಾಗೂ ಐಸಿಐಸಿಐನ ಚಿಂತಾಮಣಿ ಕ್ಯಾಂಪೆನ್ ಬಗ್ಗೆ ಅದ್ಭುತ ಕಾನ್ಸೆಪ್ಟ್ ಗಳನ್ನ ನೀಡಿದ್ರು.

‘ಸ್ಟುಡಿಯೋ ಈಕ್ಸುರಾಸ್ ’ ನ ಪರಿಕಲ್ಪನೆ

ಸುಮಾರು ಹತ್ತು ವರ್ಷಗಳ ಇತರೆ ಸ್ಟುಡಿಯೋಗಳಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಎರಿಯಾಟ್ ಗೆ ತಮ್ಮದೇ ಸ್ಟಂತ ಸ್ಟುಡಿಯೋ ಆರಂಭಿಸುವ ಲೆಕ್ಕಾಚಾರವಿತ್ತು . ಅವರ ಈ ಕನಸಿನ ಯೋಜನೆಗೆ ಸಾಥ್ 50ಕ್ಕೂ ಹೆಚ್ಚು ಕ್ಲೈಂಟ್ ಗಳನ್ನ ನಿಭಾಯಿಸುತ್ತಿರುವ ಸುರೇಶ್ ಅನಿಮೇಶನ್ ನಲ್ಲಿ ಇನ್ನಷ್ಟು ಸಾಧಿಸುವ ಗುರಿ ಹೊಂದಿದ್ದಾರೆ.

ನೀಡಿದ್ದು ಅವರ ಪತ್ನಿ ನೀಲಿಮಾ ಎರಿಯಾಟ್. ಜೊತೆಗೆ ಹಳೇ ಸ್ಟುಡಿಯೋದ ಮಾಲಿಕ ಅರುಣ್ ರೋಗ್ಟಾ ಅವರ ನೆರವೂ ಸಿಕ್ಕಿದ್ರಿಂದಾಗಿ 2009ರಲ್ಲಿ ‘ಸ್ಟುಡಿಯೋ ಈಕ್ಸುರಾಸ್ ’ ಎಂಬ ಅನಿಮೇಶನ್ ಸ್ಟುಡಿಯೋವನ್ನ ಸುರೇಶ್ ಶುರುಮಾಡಿದ್ರು. ಸುರೇಶ್ ಅವ್ರ ಪತ್ನಿ ನೀಲಿಮಾ ಕೂಡ ಡೆಲ್ಲಿ ಯೂವರ್ಸಿಯಿಂದ ಬ್ಯಾಚುಲರ್ ಆಫ್ ಫೈನ್ ಆರ್ಟ್ ಪದವಿ ಪಡೆದವರು. ಹೀಗಾಗಿ ಪ್ರೊಫೇಷನ್ ಆಗಿಯೂ ಅವರ ಪತ್ನಿಯ ಸಹಕಾರ ಸಿಕ್ಕಿದ್ರಿಂದ ಸುರೇಶ್ ದಾರಿ ಸುಲಭವಾಯ್ತು. ಇದೀಗ 30 ಮಂದಿ ಸದಸ್ಯರನ್ನ ಹೊಂದಿರುವ ‘ಸ್ಟುಡಿಯೋ ಈಕ್ಸುರಾಸ್ ’ ಡಿಜಿಟಲ್ ಕವರಿಂಗ್, ಸಿನಿಮಾ, ವೆಬ್ , ಟಿವಿ ಹಾಗೂ ಮೊಬೈಲ್ ಗೆ ಸಂಬಂಧಿಸಿದ ಅನಿಮೇಶನ್ ಗಳಲ್ಲಿ ಸಕ್ಸಸ್ ಕಂಡಿದೆ. ಕೇವಲ 10 ಲಕ್ಷ ರೂಪಾಯಿ ಬಂಡವಾಳದಲ್ಲಿ ಶುರುವಾದ ‘ಸ್ಟುಡಿಯೋ ಈಕ್ಸುರಾಸ್ ’ ಇದೀಗ ಸಂಪೂರ್ಣ ವ್ಯವಸ್ಥಿತವಾಗಿದೆ. ಅಲ್ಲದೆ ಕಂಪನಿಯಲ್ಲಿ ದುಡಿಯುತ್ತಿರುವ ನೌಕರರಿಗೆ ಭರ್ಜರಿ ಸಂಬಳದ ಜೊತೆ ಲಾಭಾಂಶವನ್ನೂ ಹಂಚಲಾಗುತ್ತಿದೆ.

“ ಕ್ರಿಯೆಟಿವಿಟಿಯನ್ನ ಅಚ್ಚುಕಟ್ಟಾಗಿ ಬಳಸುವುದೇ ನಮ್ಮ ತಂಡಕ್ಕಿರುವ ಸಾಮರ್ಥ್ಯ. ಭವಿಷ್ಯದಲ್ಲಿ ವಿಶಿಷ್ಟವಾದ ಅನಿಮೇಶನ್ ಫಿಲ್ಮ್ ಗಳನ್ನ ತಯಾರಿಸುವ ಗುರಿ ಇದೆ. ಲೈವ್ ಆಕ್ಷನ್ ಫಿಲ್ಮ್ ಗಳಲ್ಲೂ ನಾವು ತೊಡಗಿಸಿಕೊಂಡಿದ್ದೇವೆ ” – ಸುರೇಶ್ ಎರಿಯಾಟ್ , ಸ್ಟುಡಿಯೋ ಈಕ್ಸುರಾಸ್ ಮಾಲಿಕ

50ಕ್ಕೂ ಹೆಚ್ಚು ಕ್ಲೈಂಟ್ ಗಳನ್ನ ನಿಭಾಯಿಸುತ್ತಿರುವ ಸುರೇಶ್, ಹೋಂಡಾ, ಕಾರ್ಟೂನ್ ನೆಟ್ ವರ್ಕ್, ಸ್ಯಾಮಸಂಗ್, ಐಸಿಐಸಿಐ, ಬ್ರಿಟಾನಿಯಾ, ನೆಸ್ಟ್ಲೆ, ಡೋಮಿನೋಸ್, ಹಾರ್ಲಿಕ್ಸ್ , ಗೂಗಲ್, ಕ್ಯಾಡ್ ಬರಿ ಜೆಮ್ಸ್ ಸೇರಿದಂತೆ ಹಲವು ಪ್ರತಿಷ್ಠಿತ ಕಂಪೆನಿಗಳಿಗೆ ಜಾಹೀರಾತು ಮಾಡಿಕೊಟ್ಟಿದ್ದಾರೆ.

ಪ್ರಶಸ್ತಿ – ಗೌರವಗಳು

350ಕ್ಕೂ ಹೆಚ್ಚು ಜಾಹೀರಾತು ಫಿಲ್ಮ್ ಗಳನ್ನ ಮಾಡಿರುವ ಸುರೇಶ್ ಎರಿಯಾಟ್ ಗೆ 100ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಗೌರವಗಳು ಸಿಕ್ಕಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಇವರು ಜ್ಯೂರಿ ಆಫ್ ಕ್ಲಿಯೋ ಅವಾರ್ಡ್, 2007ರ ಆಸ್ಕರ್ ಅಡ್ವರ್ಟೈಸಿಂಗ್ ಅವಾರ್ಡ್, ಫ್ರಾನ್ಸ್ ನ ಅನಿಮೇಶನ್ ಅವಾರ್ಡ್ ಸೇರಿದಂತೆ ಹಲವು ಜ್ಯೂರಿ ಅವಾರ್ಡ್ ಗಳನ್ನ ಪಡೆದಿದ್ದಾರೆ. ಹೀಗೆ ಅನಿಮೇಶನ್ ನಲ್ಲಿ ಅಪ್ರತಿಮ ಸಾಧನೆ ಮಾಡಿರುವ ಸುರೇಶ್, ಕನಸುಗಳನ್ನ ಬೆನ್ನತ್ತಿ, ವೈಫಲ್ಯಗಳಿಂದ ಎದೆಗುಂದಬೇಡಿ. ಯಶಸ್ಸು ನಿಮಗಾಗಿ ಕಾದಿದೆ ಅಂತ ಯುವಕರಿಗೆ ಸ್ಫೂರ್ತಿದಾಯಕ ಮಾತುಗಳನ್ನ ಹೇಳಿದ್ದಾರೆ.

ಲೇಖಕರು - ಅಪರಾಜಿತ ಚೌಧರಿ
ಅನುವಾದ – ಬಿ ಆರ್ ಪಿ, ಉಜಿರೆ

Related Stories