ಬೆಂಗಳೂರನ್ನು ವಾಸಕ್ಕೆ ಯೋಗ್ಯ ಮಾಡಿ - ಸರ್ಕಾರಕ್ಕೆ ದಿಗ್ಗಜ ಉದ್ಯಮಿಗಳ ಮನವಿ

ಟೀಮ್ ವೈ.ಎಸ್.ಕನ್ನಡ

ಬೆಂಗಳೂರನ್ನು ವಾಸಕ್ಕೆ ಯೋಗ್ಯ ಮಾಡಿ - ಸರ್ಕಾರಕ್ಕೆ ದಿಗ್ಗಜ ಉದ್ಯಮಿಗಳ ಮನವಿ

Wednesday February 03, 2016,

2 min Read

ಬೆಂಗಳೂರಿನಲ್ಲಿ ಸಂಚರಿಸಿದವರಿಗೆಲ್ಲ ಇಲ್ಲಿನ ಸಂಚಾರ ದಟ್ಟಣೆಯ ಬಿಸಿ ತಟ್ಟಿದೆ. ಪೀಕ್​ ಅವರ್​ನಲ್ಲಿ ಕೇವಲ 8 ಕಿಲೋ ಮೀಟರ್​ ಕ್ರಮಿಸಲು ಬರೋಬ್ಬರಿ 90 ನಿಮಿಷಗಳೇ ಬೇಕು ಅನ್ನೋ ಅರಿವು ಎಲ್ಲರಿಗೂ ಇದೆ. ಟ್ರಾಫಿಕ್​ ಸಮಸ್ಯೆ ಬೆಂಗಳೂರಿನ ಪ್ರಗತಿಗೆ ಅಡ್ಡಿಯಾಗಿದೆ ಅಂದ್ರೆ ತಪ್ಪಾಗಲಾರದು, ಜೊತೆಗೆ ಬೆಂಗಳೂರು ಉದ್ಯಮಕ್ಕೆ ಹೇಳಿ ಮಾಡಿಸಿದಂತಹ ಸ್ಥಳ ಎಂಬ ಅಭಿಪ್ರಾಯಕ್ಕೂ ಇದು ಅಡ್ಡಗಾಲು ಹಾಕುತ್ತಿದೆ. ಈ ಬಗ್ಗೆ ವಿಪ್ರೋ ಗ್ರೂಪ್​ನ ಮುಖ್ಯಸ್ಥ ಅಜೀಂ ಪ್ರೇಮ್​ಜಿ ಹಾಗೂ ಇನ್ಫೋಸಿಸ್​ನ ಎನ್​.ಆರ್​.ನಾರಾಯಣಮೂರ್ತಿ ಸರ್ಕಾರಕ್ಕೆ ಚುರುಕು ಮುಟ್ಟಿಸಿದ್ದಾರೆ. ''ಬೆಂಗಳೂರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವ ಅಗತ್ಯವಿದೆ, ನಗರವನ್ನು ವಾಸಕ್ಕೆ ಯೋಗ್ಯವನ್ನಾಗಿಸುವಂತೆ ನಾನು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇನೆ'' ಅಂತಾ ನಾರಾಯಣಮೂರ್ತಿ ಹೇಳಿದ್ದಾರೆ.

image


ಇದೇ ಸಂದರ್ಭದಲ್ಲಿ ಉದ್ಯಮಗಳನ್ನು ಗುರುತಿಸುವ ಸರ್ಕಾರದ ಸಾಮರ್ಥ್ಯದ ಬಗ್ಗೆ ಪ್ರೇಮ್​ಜಿ ಹಾಗೂ ನಾರಾಯಣಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಹುತೇಕರಿಗಿದು ತಿಳಿದಿಲ್ಲ, 1983ರಲ್ಲಿ ಡೆವಲಪ್​ಮೆಂಟ್​ ಕಾರ್ಪೊರೇಷನ್​ ಆಫ್​ ಕರ್ನಾಟಕ ನೀಡಿದ ಸಣ್ಣ ಸಾಲದ ನೆರವಿನಿಂದ ಇನ್ಫೋಸಿಸ್​ , ಐಟಿ ವಲಯದ ದಿಗ್ಗಜನಾಗಿ ಬೆಳೆದು ನಿಂತಿದೆ. ಇದನ್ನು ಸ್ಮರಿಸಿಕೊಂಡ ನಾರಾಯಣಮೂರ್ತಿ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ರು. ''ಹಲವಾರು ಎಂಎನ್​ಸಿ ಬ್ಯಾಂಕ್​ಗಳು ಸಾಲ ಕೊಡಲು ನಿರಾಕರಿಸಿದ್ದವು, ಆಗ ರಾಜ್ಯ ಸರ್ಕಾರವೇ ನಮ್ಮ ಕಲ್ಪನೆಯನ್ನು ಪ್ರೋತ್ಸಾಹಿಸಿ ಸಹಾಯ ಮಾಡಿತ್ತು'' ಅಂತಾ ನಾರಾಯಣಮೂರ್ತಿ ಹೇಳಿದ್ದಾರೆ. ಕೇವಲ ಒಂದು ವಾರದೊಳಗೆ ತಮ್ಮ ಕಂಪನಿಗೆ ಸಾಲ ದೊರೆತಿದ್ದು ವಿಶೇಷ ಎನ್ನುತ್ತಾರೆ ಅವರು. ಅಷ್ಟೇ ಅಲ್ಲ ಎಲ್ಲ ರಾಜಕಾರಣಿಗಳು ಕೂಡ ಹಲವು ವರ್ಷಗಳಿಂದ ತಮ್ಮ ಸಂಸ್ಥೆಗೆ ಬೆಂಬಲ ನೀಡುತ್ತ ಬಂದಿದ್ದಾರೆ ಅಂತಾ ನಾರಾಯಣಮೂರ್ತಿ ತಿಳಿಸಿದ್ರು.

ಮೂಲ ಸೌಕರ್ಯಗಳ ಅಭಿವೃದ್ಧಿಯೇ ಸಮೃದ್ಧಿಯ ಮೂಲ ಅನ್ನೋದನ್ನು ಅಜೀಂ ಪ್ರೇಮ್​ಜಿ ಒಪ್ಪಿಕೊಳ್ತಾರೆ. '' ಈ ವರ್ಷ ವಿಪ್ರೋ 25,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಇತರ ಐಟಿ ಕಂಪನಿಗಳು ಕೂಡ ಇಂತಹ ಯೋಜನೆಗಳನ್ನು ಹಾಕಿಕೊಂಡಿವೆ. ಹಾಗಾಗಿ ಬೆಂಗಳೂರು ಎಲ್ಲ ಪ್ರತಿಬಂಧಕಗಳಿಂದ ಮುಕ್ತವಾಗಲಿ ಅನ್ನೋದೇ ಎಲ್ಲರ ಆಶಯ. ಬೆಂಗಳೂರು ಅತ್ಯಂತ ಬಲವಾದ ವಿಜ್ಞಾನ ಹಿನ್ನೆಲೆ ಹೊಂದಿದೆ, ಮೂಲ ಸೌಕರ್ಯಗಳ ಸಹಾಯದೊಂದಿಗೆ ಅದನ್ನು ಅಭಿವೃದ್ಧಿಪಡಿಸಲು ಹೂಡಿಕೆಯ ಅಗತ್ಯವಿದೆ'' ಅಂತಾ ಅಜೀಂ ಪ್ರೇಮ್​ಜಿ ಸಮಾವೇಶದಲ್ಲಿ ಅಭಿಪ್ರಾಯಪಟ್ರು.

''ಕರ್ನಾಟಕ ಎಂದಾಕ್ಷಣ ಕೇವಲ ಬೆಂಗಳೂರು ಮಾತ್ರವಲ್ಲ, ಯುವ ಜನತೆಯೆಲ್ಲ ಬೆಂಗಳೂರಿನಲ್ಲೇ ಕೆಲಸ ಮಾಡಲು ಏಕೆ ಆಸಕ್ತಿ ತೋರಿಸುತ್ತಾರೆ? ಕರ್ನಾಟಕದಲ್ಲಿ ಒಳ್ಳೊಳ್ಳೆ ನಗರಗಳಿವೆ. ಹೊಸ ಹೊಸ ನಗರಗಳಲ್ಲಿ ಕೆಲಸ ಮಾಡಲು ವಿದ್ಯಾರ್ಥಿಗಳನ್ನು ಸರ್ಕಾರ ಪ್ರೋತ್ಸಾಹಿಸಬೇಕು'' ಅನ್ನೋದು ನಾರಾಯಣನಮೂರ್ತಿ ಅವರ ನೇರನುಡಿ. ಇನ್ಫೋಸಿಸ್​ ತನ್ನ ಕಾರ್ಯಕ್ಷೇತ್ರವನ್ನು ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಗೂ ವಿಸ್ತರಿಸಿದೆ. ನ್ಯಾಸ್ಕಾಮ್​ ಪ್ರಕಾರ ಐಟಿ ವಲಯದ ಒಟ್ಟು ಆದಾಯದಲ್ಲಿ ಬೆಂಗಳೂರಿನ ಕೊಡುಗೆ ಶೇ.38ರಷ್ಟು. ಕರ್ನಾಟಕದ ಐಟಿ ವಲಯದ ಮೌಲ್ಯ 35 ಬಿಲಿಯನ್​ ಡಾಲರ್​. ಅದರಲ್ಲಿ 27 ಬಿಲಿಯನ್​ ಡಾಲರ್​ ರಫ್ತಿನಿಂದ ಬರುತ್ತಿದೆ. ಶೇ.7ರಷ್ಟು ಜಿಡಿಪಿ ಬೆಳವಣಿಗೆಯೊಂದಿಗೆ ಕರ್ನಾಟಕ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯ ಎನಿಸಿಕೊಂಡಿದೆ. ಇಂತಹ ಪ್ರಭಾವಶಾಲಿ ಬೆಳವಣಿಗೆಯ ಹೊರತಾಗಿಯೂ ಕೇವಲ ಐಟಿ ದಿಗ್ಗಜರು ಮಾತ್ರ ಸರ್ಕಾರದ ಬೆಂಬಲ ಪಡೆಯುತ್ತಿಲ್ಲ. ಆದಿತ್ಯ ಬಿರ್ಲಾ ಗ್ರೂಪ್​ ಬೆಳದು ಬಂದ ಪರಿಯನ್ನು ವಿವರಿಸಿದ ಕುಮಾರಮಂಗಲಂ ಬಿರ್ಲಾ, ಕರ್ನಾಟಕದಲ್ಲಿ ತಮ್ಮ ಸಂಸ್ಥೆ ಪ್ರಬಲ ಹಿಡಿತವನ್ನು ಹೊಂದಿದೆ ಎಂದ್ರು.

ಕರ್ನಾಟಕಕ್ಕೆ ಏರೋಸ್ಪೇಸ್​ ರಿಸರ್ಚ್​ ಕೇಂದ್ರ ಕೊಡುಗೆ

ಬೆಂಗಳೂರಿನ ಏರೋಸ್ಪೇಸ್​ ಕೈಗಾರಿಕೆಯನ್ನು ಅನಿಲ್​ ಅಂಬಾನಿ ಕೊಂಡಾಡಿದ್ರು. '' ರಕ್ಷಣಾ ಚಟುವಟಿಕೆಗಳಿಗೂ ಬೆಂಗಳೂರು ಕೇಂದ್ರ ಸ್ಥಾನ. ಈಗ ಇತರ ಕೈಗಾರಿಕೆಗಳು ಕೂಡ ಪ್ರಗತಿ ಸಾಧಿಸುತ್ತಿವೆ. ನಾವು ವಿಶ್ವದರ್ಜೆಯ ಏರೋಸ್ಪೇಸ್​ ಸಂಶೋಧನಾ ಕೇಂದ್ರವನ್ನು ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿ ಸ್ಥಾಪಿಸುತ್ತೇವೆ. ಭಾರತದಲ್ಲಿ ರಕ್ಷಣೆಗೆ ಸಂಬಂಧಿಸಿದ ಸಂಶೋಧನೆಗಳು, ಉತ್ಪಾದನೆಗೆ ಈ ಕೇಂದ್ರ ನೆರವಾಗಲಿದೆ'' ಅಂತಾ ಅನಿಲ್​ ಅಂಬಾನಿ ಪ್ರಕಟಿಸಿದ್ರು.

ಅನಿಲ್​ ಅಂಬಾನಿ ಅವರ ಘೋಷಣೆಯ ಬೆನ್ನಲ್ಲೇ ಗೌತಮ್​ ಅದಾನಿ ಕೂಡ ರಾಜ್ಯದಲ್ಲಿ ಅದಾನಿ ಗ್ರೂಪ್​ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ರು. ''ರಾಜ್ಯದ ಬೆಳವಣಿಗೆಗೆ ಇಂಧನ ಒದಗಿಸುವ ನಿಟ್ಟಿನಲ್ಲಿ ಅದಾನಿ ಗ್ರೂಪ್​, ಉಡುಪಿ ಪವರ್​ ಪ್ಲಾಂಟ್​ ಅನ್ನು ವಿಸ್ತರಿಸುತ್ತಿದೆ. ಕರ್ನಾಟಕದ ಮಾಲೂರಿನಲ್ಲಿರುವ ತೈಲ ಶುದ್ಧೀಕರಣ ಘಟಕದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದು, ರಾಜ್ಯದಲ್ಲಿ 1000 ಮೆಗಾವ್ಯಾಟ್​ ವಿದ್ಯುತ್​ ಉತ್ಪಾದನಾ ಕೇಂದ್ರವನ್ನು ಆರಂಭಿಸಲಿದ್ದೇವೆ'' ಅಂತಾ ಗೌತಮ್​ ಅದಾನಿ ತಿಳಿಸಿದ್ರು. ಅಷ್ಟೇ ಅಲ್ಲ ಅದಾನಿ ಗ್ರೂಪ್​ ಉತ್ತರ ಕರ್ನಾಟಕದಲ್ಲಿ ಬಂದರು ಅಭಿವೃದ್ಧಿಗಾಗಿ 2000 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ.