ಆಟೋ ಸವಾರಿ ಮಾಡುತ್ತಲೇ ಬಿಲ್ ಪಾವತಿಸಿ... ಪ್ರಯಾಣಿಕರ ಸಮಯ ಸದ್ಬಳಕೆಗಾಗಿ `ಯಾತ್ರಾ ಸ್ಮಾರ್ಟ್'

ಟೀಮ್​ ವೈ.ಎಸ್​. ಕನ್ನಡ

ಆಟೋ ಸವಾರಿ ಮಾಡುತ್ತಲೇ ಬಿಲ್ ಪಾವತಿಸಿ...
ಪ್ರಯಾಣಿಕರ ಸಮಯ ಸದ್ಬಳಕೆಗಾಗಿ `ಯಾತ್ರಾ ಸ್ಮಾರ್ಟ್'

Thursday December 17, 2015,

4 min Read

ಆಟೋ ಪ್ರಯಾಣದ ಸಂದರ್ಭದಲ್ಲೆಲ್ಲಾ ಈ ಸಮಯವನ್ನು ಪರಿಣಾಮಕಾರಿಯಾಗಿ ಕೆಲಸಕ್ಕೆ ಬಳಸಿಕೊಳ್ಳಬಹುದಿತ್ತು ಅನ್ನೋ ಭಾವನೆ ನಿಮಗೆ ಬಂದಿದ್ಯಾ? ಇದಕ್ಕಾಗಿಯೇ `ಯಾತ್ರಾ ಸ್ಮಾರ್ಟ್' ಹುಟ್ಟಿಕೊಂಡಿದೆ. ಅಪರ್ಣಾ ಟಿ.ಎಸ್., ನಜೀಬ್ ನಾರಾಯಣನ್ ಮತ್ತು ಸೌರಭ್ ಕುಲಶ್ರೇಷ್ಠ ಅವರಿಗೂ ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯ ಅರಿವಾಗಿತ್ತು. ಜನರು ಜೀವನದ ಬಹುತೇಕ ವೇಳೆಯನ್ನು ರಸ್ತೆ ಮೇಲೆ ಕಳೆಯುವಂತಾದ್ರೆ, ಆ ಸಮಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲೇಬೇಕೆಂದು ಅವರಿಗೆ ಅನಿಸಿತ್ತು. ಸಂಶೋಧನೆಯ ಪ್ರಕಾರ ಪ್ರಯಾಣಿಕರ ಪ್ರತಿದಿನದ ಸರಾಸರಿ ಆಟೋ ಪ್ರಯಾಣ 20-25 ನಿಮಿಷ. ಎಲ್ಲರೂ ಸ್ಮಾರ್ಟ್ ಫೋನ್ ಬಳಸುವಷ್ಟು ಸುಶಿಕ್ಷಿತರು. ಪ್ರಯಾಣದ ಸಂದರ್ಭದಲ್ಲೆಲ್ಲ ಫೋನ್‍ನಲ್ಲಿ ಬ್ಯುಸಿಯಾಗಿದ್ರೆ ಯಾವುದೇ ಕೆಲಸ ಮಾಡುವುದು ಅಸಾಧ್ಯ. ತಂತ್ರಜ್ಞಾನದ ಬಗ್ಗೆ ಅಷ್ಟಾಗಿ ಗೊತ್ತಿಲ್ಲದ, ಮಧ್ಯಮ ವರ್ಗದ ಜನರು ಇ-ಕಾಮರ್ಸ್ ಸೈಟ್‍ಗಳ ಬಳಕೆ ಬಗ್ಗೆ ಜಾಗರೂಕರಾಗಿರುತ್ತಾರೆ, ಜೊತೆಗೆ ಹಣ ಪಾವತಿ ಪ್ರಕ್ರಿಯೆಯನ್ನು ಕೂಡ ಮಾಡುವುದಿಲ್ಲ. ಆದ್ರೂ ಇ-ಕಾಮರ್ಸ್ ಉದ್ಯಮಿಗಳಿಗೆ ಅವಕಾಶದ ಕೊರತೆಯೇನಿಲ್ಲ. `ಯಾತ್ರಾ ಸ್ಮಾರ್ಟ್' ಇದೀಗ `ಅಸಿಸ್ಟೆಡ್ ಕಾಮರ್ಸ್' ಪರಿಕಲ್ಪನೆಯನ್ನು ಹೊರತಂದಿದೆ.

image


`ಯಾತ್ರಾ ಸ್ಮಾರ್ಟ್' ಕಂಪನಿಯ ಸಂಸ್ಥಾಪಕ ಹಾಗೂ ನಿರ್ದೇಶಕರಾದ ನಜೀಬ್ ನಾರಾಯಣನ್ ಅವರ ಪ್ರಕಾರ, ``ಪ್ರಯಾಣಿಕರು ಬಿಡುವಿನ ಸಮಯದಲ್ಲಿ ಉದ್ದೇಶಿತ ಪ್ರಚಾರ ಪಡೆಯಲು ಸಿದ್ಧರಾಗಿರುತ್ತಾರೆ''. ಸ್ಮಾರ್ಟ್ ಫೋನ್ ಅಥವಾ ಇಂಟರ್ನೆಟ್ ಸಂಪರ್ಕವಿಲ್ಲದೆ, ಬಿಲ್ ಪಾವತಿ ಮಾಡಲು ಮತ್ತು ಸಮೀಪದ ಅಂಗಡಿಗಳ ಕೂಪನ್ ಹಾಗೂ ಆಫರ್‍ಗಳನ್ನು ಪಡೆಯಲು ಮಧ್ಯಮ ವರ್ಗದ ಜನರಿಗೆ `ಯಾತ್ರಾ ಸ್ಮಾರ್ಟ್' ನೆರವಾಗುತ್ತಿದೆ. ``ನಾವು ಟ್ರಾಫಿಕ್ ಜಾಮ್‍ನಿಂದ ಹಣ ಮಾಡುತ್ತೇವೆ, ಅಥವಾ ಸಂಚಾರ ದಟ್ಟಣೆಯಲ್ಲಿ ಸಿಕ್ಕು ವ್ಯರ್ಥವಾಗುವ ಸಮಯದ ಸದುಪಯೋಗ ಪಡೆಯಲು ಪ್ರಯಾಣಿಕರಿಗೆ ಸಹಾಯ ಮಾಡುತ್ತೇವೆ ಎನ್ನುತ್ತಾರೆ ಅವರು. ಸದ್ಯ ಅಸ್ಥಿತ್ವದಲ್ಲಿರುವ ವ್ಯಾಪಾರವನ್ನು ಬದಲಾಯಿಸದೆ ಚಾಲಕರಿಗೆ ಆದಾಯ ಸಂಗ್ರಹಿಸಲು ಹೊಸ ಮಾರ್ಗವನ್ನು `ಯಾತ್ರಾ ಸ್ಮಾರ್ಟ್' ಕಲ್ಪಿಸಿಕೊಟ್ಟಿದೆ.

ಮೊಬೈಲ್ ಫೋನ್ ಹಾಗೂ ಸ್ವಲ್ಪ ಹಣವಿದ್ರೆ ಸಾಕು...

2015ರಲ್ಲಿ ಕಾರ್ಯಾರಂಭ ಮಾಡಿರುವ `ಯಾತ್ರಾ ಸ್ಮಾರ್ಟ್' ಆಟೋ ಚಾಲಕರ ಜೊತೆ ಟೈ ಅಪ್ ಮಾಡಿಕೊಂಡಿದೆ. ಅವರ ಆಟೋಗಳಲ್ಲಿ `ಯಾತ್ರಾ ಸ್ಮಾರ್ಟ್' ಆ್ಯಪ್‍ನ್ನು ಒಳಗೊಂಡ ಟ್ಯಾಬ್ಲೆಟ್ ಕಂಪ್ಯೂಟರ್‍ಗಳನ್ನು ಅಳವಡಿಸಿದೆ. ಈ ಟ್ಯಾಬ್ಲೆಟ್‍ಗಳು ಕಂಪನಿಯ ನಿಯಂತ್ರಣ ಕೇಂದ್ರದಿಂದ ವೈರ್‍ಲೆಸ್ ಸಂಪರ್ಕ ಹೊಂದಿವೆ. ಪ್ರಯಾಣಿಕರಿಗೆ ತಮ್ಮ ವಿದ್ಯುತ್ ಬಿಲ್ ಪಾವತಿಸಲು, ಮೊಬೈಲ್ ಕರೆನ್ಸಿ ರೀಚಾರ್ಜ್ ಮಾಡಲು ಮತ್ತು ಹತ್ತಿರದ ಅಂಗಡಿಗಳಲ್ಲಿರುವ ಒಳ್ಳೆಯ ಆಫರ್‍ಗಳ ಬಗ್ಗೆ ಸರ್ಚ್ ಮಾಡಲು ನೆರವಾಗುತ್ತಿವೆ. ಯಾವುದಾದ್ರೂ ಆಫರ್ ಗ್ರಾಹಕರಿಗೆ ಇಷ್ಟವಾದಲ್ಲಿ ಅವರು ಟ್ಯಾಬ್ಲೆಟ್ ಮೂಲಕ ತಮ್ಮ ಮೊಬೈಲ್ ನಂಬರ್ ಅನ್ನು ನಮೂದಿಸಬೇಕು. ಎಸ್‍ಎಂಎಸ್ ಮೂಲಕ ಕೂಪನ್ ಅವರ ಮೊಬೈಲ್‍ಗೆ ಸ್ಥಳಾಂತರವಾಗುತ್ತದೆ.

ಈ ಟ್ಯಾಬ್ಲೆಟ್‍ಗಳನ್ನು ಬಳಸುವುದು ಹೇಗೆ ಎಂಬ ಬಗ್ಗೆ ಆಟೋ ಚಾಲಕರಿಗೆ ತರಬೇತಿ ನೀಡಲಾಗುತ್ತದೆ. ಬಳಿಕ ಈ ಸಾಧನ ಪ್ರಯಾಣಿಕರಿಗೆ ಹೇಗೆ ಅನುಕೂಲಕರ ಎಂಬುದನ್ನು ಅವರೇ ವಿವರಿಸುತ್ತಾರೆ. ಯಾವುದಾದರೂ ಒಂದು ಹಂತದಲ್ಲಿ ಪ್ರಯಾಣಿಕರಿಗೆ ಅಡಚಣೆ ಕಾಣಿಸಿಕೊಂಡಲ್ಲಿ ಆಟೋ ಚಾಲಕರೇ ಅದನ್ನು ಪರಿಹರಿಸುತ್ತಾರೆ. ವಹಿವಾಟನ್ನು ಸರಳಗೊಳಿಸಲು ಬಣ್ಣಬಣ್ಣದ ಬಟನ್‍ಗಳನ್ನು ಅಳವಡಿಸಲಾಗಿದೆ. ಗ್ರಾಹಕ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿದ ಬಳಿಕ ಆಟೋ ಚಾಲಕ ಅದನ್ನು ಪರಿಶೀಲಿಸಿ ವಹಿವಾಟನ್ನು ಖಾಯಂಗೊಳಿಸುತ್ತಾನೆ. ವಹಿವಾಟು ಪೂರ್ಣಗೊಂಡ ಬಳಿಕ ಪ್ರಯಾಣಿಕರು ಹಣವನ್ನು ಆಟೋ ಚಾಲಕರಿಗೆ ಕೊಡುತ್ತಾರೆ. ಇದರಿಂದ ಜನರು ರಿಚಾರ್ಜ್ ಮಾಡಿಸಬೇಕೆಂದ್ರೆ ಗಂಟೆಗಟ್ಟಲೆ ಮಳೆಯಲ್ಲಿ, ಬಿಸಿಲಲ್ಲಿ ನಿಂತು ಕಾಯಬೇಕಾದ ಅನಿವಾರ್ಯತೆಯಿಲ್ಲ, ಜೊತೆಗೆ ಆಟೋ ಚಾಲಕರಿಗೂ ಕಮಿಷನ್ ದೊರೆಯುತ್ತದೆ. `ಯಾತ್ರಾ ಸ್ಮಾರ್ಟ್'ಗೂ ಇದರಲ್ಲಿ ಪಾಲು ದೊರೆಯುತ್ತದೆ. `ಯಾತ್ರಾ ಸ್ಮಾರ್ಟ್' ಮೂಲಕ ಜಾಹೀರಾತು ನೀಡಲು ಯಾರಾದ್ರೂ ಬಯಸಿದಲ್ಲಿ, ಅವರ ಕೊಡುಗೆಗಳನ್ನು ಆ್ಯಂಡ್ರಾಯ್ಡ್ ಆ್ಯಪ್ ಮೂಲಕ ಅಪ್‍ಲೋಡ್ ಮಾಡಬೇಕು.

ಎಲ್ಲರಿಗೂ ಹೇಗೆ ಪ್ರಯೋಜನಕಾರಿ?

`ಯಾತ್ರಾ ಸ್ಮಾರ್ಟ್' ಪ್ರತಿ ಪ್ರಯಾಣವನ್ನು ಎಲ್ಲರಿಗೂ ಪ್ರಯೋಜನಕಾರಿಯಾಗಿ ಪರಿವರ್ತಿಸುತ್ತದೆ. ಪ್ರಯಾಣಿಕರು, ಆಟೋ ಚಾಲಕರು ಮತ್ತು ಸ್ಥಳೀಯ ವ್ಯಾಪಾರಿಗಳಿಗೆ ಇದರಿಂದ ಲಾಭವಿದೆ. ಮಧ್ಯಮ ವರ್ಗದವರಿಗೆ ಕೂಡ ಆರಾಮದಾಯಕ ವಲಯದಲ್ಲಿ ಹೊಸ ತಂತ್ರಜ್ಞಾನದ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಎನ್ನುತ್ತಾರೆ ನಜೀಬ್. ಕಮಿಷನ್ ಸಿಗುವುದರಿಂದ ಆಟೋ ಚಾಲಕರು ಕೂಡ ಸಂತೋಷದಿಂದ ಪ್ರಯಾಣಿಕರನ್ನು ಕರೆದೊಯ್ಯುತ್ತಾರೆ. ಆಟೋ ಚಾಲಕರು ಪ್ರತಿನಿತ್ಯ ಪ್ರಯಾಣಿಕರ ಹುಡುಕಾಟದಲ್ಲಿ ಸುಮಾರು 35 ಕಿಲೋ ಮೀಟರ್ ಚಲಿಸ್ತಾ ಇದ್ರು, ಇಂಧನ ವ್ಯರ್ಥ ಮಾಡ್ತಿದ್ರು. ಆದ್ರೀಗ ಯಾತ್ರಾ ಸ್ಮಾರ್ಟ್‍ನಿಂದ ಆಟೋ ಚಾಲಕರ ಜೀವನ ಶೈಲಿಯೇ ಬದಲಾಗಿದೆ, ಅವರು ಪ್ರಯಾಣಿಕರ ಜೊತೆ ಮೃದುವಾಗಿ ವರ್ತಿಸುತ್ತಿದ್ದಾರೆ. ಪ್ರತಿಯೊಬ್ಬ ಆಟೋ ಚಾಲಕರು ಕೂಡ ಸ್ವಂತ ಉದ್ಯಮವನ್ನು ಮುನ್ನಡೆಸುತ್ತಿದ್ದಾರೆ.

ಸೂಕ್ತ ಆಟೋ ಚಾಲಕರನ್ನು ಗುರುತಿಸಿ ಅವರಿಗೆ ಕಾಲಕಾಲಕ್ಕೆ ತರಬೇತಿ ನೀಡುವುದು ಬಹುದೊಡ್ಡ ಸವಾಲು. ಶಿಕ್ಷಕಿಯಾಗಿದ್ದ ಅಪರ್ಣಾ, `ಯಾತ್ರಾ ಸ್ಮಾರ್ಟ್' ಅನ್ನು ಸಂಘಟಿಸುವ ಮೂಲಕ ಮಹಿಳಾ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಕೇವಲ 6 ವಾರಗಳಲ್ಲಿ 450ಕ್ಕೂ ಹೆಚ್ಚು ಚಾಲಕರಿಗೆ ಯೋಜನೆ ಬಗ್ಗೆ ಮನವರಿಕೆ ಮಾಡಿಕೊಳ್ಳಲು ಸಫಲರಾಗಿದ್ದು ಅವರ ಹೆಗ್ಗಳಿಕೆ. ಸಹ ಸಂಸ್ಥಾಪಕರಾದ ನಜೀಬ್ ಮತ್ತು ಸೌರಭ್, ಮೊದಲು `ಇನ್‍ಟ್ಯೂಟ್'ನಲ್ಲಿ ಕೆಲಸ ನಿರ್ವಹಿಸುತ್ತಿದ್ರು. ಮೈಕ್ರೋಸಾಫ್ಟ್ ಸಂಸ್ಥೆಯಲ್ಲೂ ಕರ್ತವ್ಯ ನಿರ್ವಹಿಸಿದ ಸೌರಭ್ ಅವರಿಗೆ ` Azure ' ಸೇವೆಯ ಬಗ್ಗೆ ತಿಳಿದಿತ್ತು. `ಇನ್‍ಟ್ಯೂಟ್'ನ ಮಾಜಿ ಉದ್ಯೋಗಿಯಾಗಿದ್ದ ಸುಮಿತ್ ಬನ್ಸಲ್ ಕೂಡ ಕಂಪನಿಯ ತಂತ್ರಜ್ಞಾನ ಅಭಿವೃದ್ಧಿಪಡಿಸುವಲ್ಲಿ ನೆರವಾಗಿದ್ದಾರೆ. ಉದ್ಯಮ ಬೆಳವಣಿಗೆ ಮತ್ತು ಮಾರ್ಕೆಟಿಂಗ್ ವಿಭಾಗದ ಉಸ್ತುವಾರಿ ನೋಡಿಕೊಳ್ಳಲು ತಂಡವೊಂದನ್ನು ಕಟ್ಟುವ ಯೋಜನೆಯನ್ನು ನಜೀಬ್, ಅಪರ್ಣಾ ಹಾಗೂ ಸೌರಭ್ ಅವರು ಹಾಕಿಕೊಂಡಿದ್ದಾರೆ.

ಕೆಲಸದಲ್ಲೇನಿದೆ..?

`ಯಾತ್ರಾ ಸ್ಮಾರ್ಟ್' ಸೇವೆಯನ್ನು ಬೆಂಗಳೂರಿನ 1000 ಆಟೋ ರಿಕ್ಷಾ ಚಾಲಕರು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಈಗಾಗ್ಲೇ 90 ಆಟೋಗಳಲ್ಲಿ ಈ ಪ್ರಯೋಗ ಯಶಸ್ವಿಯಾಗಿದೆ. ಪೀಸ್ ಆಟೋ, ಮೊಬೈಲ್ ಪಾವತಿ ಕೇಂದ್ರಗಳೊಂದಿಗೆ `ಯಾತ್ರಾ ಸ್ಮಾರ್ಟ್' ಹೊಂದಾಣಿಕೆ ಮಾಡಿಕೊಂಡಿದೆ. ಸಮೀಕ್ಷೆ ನಡೆಸಿ ಪ್ರಯಾಣಿಕರಿಂದ ಸೇಲ್ಸ್ ಲೀಡ್‍ಗಳನ್ನು ಕೊಡುವ ಉದ್ದೇಶದಿಂದ ರಿಯಲ್ ಎಸ್ಟೇಟ್ ಕಂಪನಿಗಳೊಂದಿಗೂ ಟೈ ಅಪ್ ಮಾಡಿಕೊಂಡಿದೆ. ಸಮೀಕ್ಷೆಗೆ ಪ್ರತಿಯಾಗಿ ಆ ಕಂಪನಿಗಳು ಉಚಿತ ಮೊಬೈಲ್ ರೀಚಾರ್ಜ್ ಆಫರ್ ಹಾಗೂ ಗಿಫ್ಟ್ ಕೂಪನ್‍ಗಳನ್ನು ನೀಡುತ್ತಿವೆ. ಆದ್ರೆ ಡೇಟಾ ಗೌಪ್ಯತೆಯನ್ನು ಕಾಪಾಡಲಾಗುತ್ತದೆ.

image


ಸಾಮಾನ್ಯವಾಗಿ ಮನೆ ನಿರ್ಮಾಣಕಾರರು ಆಟೋದಲ್ಲಿ ಸಂಚರಿಸುತ್ತಲೇ, ಮಾಹಿತಿಗಳನ್ನು ಸಂಗ್ರಹಿಸ್ತಾರೆ. ಯಾವ ಫ್ಲ್ಯಾಟ್ ಕೊಳ್ಳಬಹುದು, ಬಜೆಟ್ ಎಷ್ಟು ಅನ್ನೋದನ್ನೆಲ್ಲ ಲೆಕ್ಕಾಚಾರ ಹಾಕ್ತಾರೆ. ಈ ಸಂದರ್ಭದಲ್ಲಿ `ಯಾತ್ರಾ ಸ್ಮಾರ್ಟ್' ಅವರ ಪ್ರೊಫೈಲ್‍ಗಳನ್ನು ಸಂಗ್ರಹಿಸಿಕೊಳ್ಳುತ್ತದೆ. ಎಂಪ್ಲಾಯೀ ರೆಫರಲ್ ಕಂಪನಿಗಳೊಂದಿಗೆ ಕೆಲಸ ಮಾಡುವ ಮೂಲಕ `ಯಾತ್ರಾ ಸ್ಮಾರ್ಟ್' ಕೆಲಸದ ಪಟ್ಟಿ ಮತ್ತು ನೇಮಕಾತಿ ಪರಿಹಾರವನ್ನೂ ಒದಗಿಸುತ್ತಿದೆ. ಅವರು ಚಿರಪರಿಚಿತರಾಗಿರುವ 5 ಉದ್ಯಮಗಳೊಂದಿಗೆ ಪ್ರತಿ ಚಾಲಕನೂ ಸಂಪರ್ಕದಲ್ಲಿರುತ್ತಾನೆ, ಈ ಮೂಲಕ ಜಾಹೀರಾತುಗಳನ್ನು ಸಂಗ್ರಹಿಸುತ್ತಾನೆ.

`ಯಾತ್ರಾ ಸ್ಮಾರ್ಟ್' ಹಿಂದಿನ ತಂತ್ರಜ್ಞಾನ...

`ಯಾತ್ರಾ ಸ್ಮಾರ್ಟ್' ಇಂಟರ್ನೆಟ್ ಸಂಪರ್ಕವಿರುವ ಹಾರ್ಡ್‍ವೇರ್ ಮತ್ತು ಮೊಬೈಲ್ ಫೋನ್‍ಗಳಿಗೆ ಕ್ಲೌಡ್ ಆಧಾರಿತ ಸೇವೆ. ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಮೈಕ್ರೋಸಾಫ್ಟ್​​ನ ಂzuಡಿe ಅನ್ನು ಬಳಸಲು ನಜೀಬ್ ಮುಂದಾಗಿದ್ರು. ಇದು ಬಳಕೆಗೆ ಅನುಕೂಲಕರ ಮತ್ತು ಸರಳ ಎನ್ನುತ್ತಾರೆ ಅವರು. ಮೂಲಸೌಕರ್ಯ ಹಾಗೂ ತಂತ್ರಜ್ಞಾನದ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ಉದ್ಯಮದ ಬಗ್ಗೆ ಗಮನಹರಿಸಲು ಕೂಡ ಇದು ನೆರವಾಗಿದೆ. Azure ಕಲಿಕೆಯಿಂದ ಇನ್ನೂ ಕೆಲವು ಪ್ರಯೋಜನಗಳಾಗಿವೆ. Azure ಜೊತೆಗೆ ಚಿರಪರಿಚಿತರಾದ `ಯಾತ್ರಾ ಸ್ಮಾರ್ಟ್' ತಂಡ ಅಝುರೈಡರ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಹಾರ್ಲಿ ಡೇವಿಡ್ಸನ್ ಬೈಕನ್ನು ತನ್ನದಾಗಿಸಿಕೊಂಡಿದೆ. ಜಾಹೀರಾತು ಮತ್ತು ಹೆಚ್ಚಿನ ವಹಿವಾಟಿನ ಮೂಲಕ ಆದಾಯ ಸಂಗ್ರಹಕ್ಕೆ `ಯಾತ್ರಾ ಸ್ಮಾರ್ಟ್' ತಂಡ ಶ್ರಮಿಸುತ್ತಿದೆ. ಅವರು ಇನ್ನಷ್ಟು ಬಂಡವಾಳ ಹೂಡಿಕೆ ಮಾಡುವ ಸಿದ್ಧತೆಯಲ್ಲಿದ್ದಾರೆ. ಸರಕು ಸಾಗಣೆ ಕಂಪನಿಗಳು ಕೂಡ ತಮ್ಮ ಸೇವೆಯನ್ನು ಬಳಸಿಕೊಳ್ಳಬೇಕೆಂಬುದು ಅವರ ಉದ್ದೇಶ. ಬೆಂಗಳೂರು ಮಾತ್ರವಲ್ಲದೆ ಇತರ ನಗರಗಳಿಗೂ `ಯಾತ್ರಾ ಸ್ಮಾರ್ಟ್' ತನ್ನ ಸೇವೆಯನ್ನು ವಿಸ್ತರಿಸಲಿದೆ.


ಲೇಖಕರು: ಸ್ನೇಹಾ ಮಸೆಲ್ಕರ್​

ಅನುವಾದಕರು: ಭಾರತಿ ಭಟ್​​​