ಭೂಮಿ,ನೀರು ಮತ್ತು ಆಕಾಶ- ಸ್ನೇಹ ಶರ್ಮ ಅಲ್ಲೆಲ್ಲಾ ಹೋಗಿ ಸಾಧಿಸಿದ್ದಾಳೆ

ಆರ್​​.ಪಿ.

ಭೂಮಿ,ನೀರು ಮತ್ತು ಆಕಾಶ- ಸ್ನೇಹ ಶರ್ಮ ಅಲ್ಲೆಲ್ಲಾ ಹೋಗಿ ಸಾಧಿಸಿದ್ದಾಳೆ

Monday November 09, 2015,

5 min Read

ಟೈರುಗಳ ಆರ್ಭಟಕ್ಕೆ ರೇಸ್ ಟ್ರ್ಯಾಕ್ ಇನ್ನೂ ಜೀವಂತವಾಗಿತ್ತು. ಕಾರೊಂದು ಬಂತು ನಿಂತಿತು. ರೈಡರ್ ತನ್ನ ಹೆಲ್ಮೆಟ್ ತೆಗೆದರು. ನೀಳವಾದ ಕೇಶರಾಶಿಯಿಂದ ಅವರು ಮಹಿಳೆ ಎಂದು ಗೊತ್ತಾಯಿತು. ಮಹಿಳೆಯರು ಡ್ರೈವ್ ಮಾಡಲಾಗುವುದಿಲ್ಲ ಎಂದು ನಾಟಕೀಯವಾಗಿ ಹೇಳೋದನ್ನು ನಾವು ಅನೇಕ ಬಾರಿ ಕೇಳಿದ್ದೇವೆ. ಆದ್ರೆ ಸ್ನೇಹ ಶರ್ಮಾ ಅದನ್ನು ನಿರ್ಲಕ್ಷಿಸಿದರು.

image


ಆಕೆ ರೇಸ್ ಟ್ರ್ಯಾಕ್ ನಲ್ಲಿದ್ದರೆ ಮನೆಯಲ್ಲಿದ್ದಂತೆ. ಆಕೆ ರೇಸ್ ಟ್ರ್ಯಾಕ್‍ನಲ್ಲಿ ಇಲ್ಲವೆಂದ್ರೆ ಏರ್‍ಬಸ್ 320 ಅನ್ನು ಹಾರಿಸುತ್ತಾ ಆಕಾಶದಲ್ಲಿ ಇರುತ್ತಾಳೆ.

ವೃತ್ತಿಪರವಾಗಿ ಪೈಲಟ್ ಆಗಿರೋ ಸ್ನೇಹ ಒಂದಲ್ಲ ಒಂದು ದಿನ ತಾನು ಫಾರ್ಮುಲಾ ಒನ್ ಸರ್ಕ್ಯೂಟ್‍ಗೆ ಕಾಲಿಡುತ್ತೀನಿ ಎಂದು ಕಣ್ಣಿಟ್ಟಿದ್ದಾಳೆ. ರೇಸ್ ಟ್ರ್ಯಾಕ್ ನಲ್ಲಿ ಎಲ್ಲ ಪುರುಷರ ಮಧ್ಯೆ ನಾನೊಬ್ಬಳೇ ಹುಡುಗಿ ಎಂದು ಜನರು ಮಾತನಾಡಿಕೊಳ್ಳಬೇಕು ಎಂದು ಸ್ನೇಹ ಹೇಳ್ತಾಳೆ.

ಮೊದಮೊದಲು ನಾನು ರೇಸ್ ಒಂದಕ್ಕೆ ಅರ್ಹತೆ ಗಿಟ್ಟಿಸಿಕೊಂಡಾಗ ಹಾಗನ್ನಿಸುತ್ತಿತ್ತು. ಆದ್ರೆ ಅದು ಆ ಕ್ಷಣಕ್ಕಷ್ಟೆ. ಆ ನಂತ್ರ ಎಂದೂ ನನಗೆ ಹಾಗನ್ನಿಸಿಲ್ಲ. ಯಾಕಂದ್ರೆ ಒಮ್ಮೆ ಹೆಲ್ಮೆಟ್ ಹಾಕಿಕೊಂಡ್ರೆ ನಾನು ಒಬ್ಬ ರೇಸ್ ಕಾರ್ ಡ್ರೈವರ್ ಮಾತ್ರ.

ಕೇವಲ ರಸ್ತೆ ಮತ್ತು ಆಕಾಶ ಮಾತ್ರವಲ್ಲ, ಸಾಗರಕ್ಕೂ ಸ್ನೇಹ ಹೋಗಿದ್ದಾಳೆ. ಅಕೆಯ ತಂದೆ ಮರ್ಚೆಂಟ್ ನೇವಿಯಲಿದ್ದರು. ಹಾಗಾಗಿ ಅನೇಕ ಬಾರಿ ತಂದೆಯೊಂದಿಗೆ ಸಾಗರದಲ್ಲಿ ಸ್ನೇಹ ತೇಲಿದ್ದಾಳೆ. ಆಕೆ ಮಗುವಾಗಿದ್ದಾಗಲೇ ಯಂತ್ರಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳೋಕೆ ಇದು ಕಾರಣವಾಗಿತ್ತು.

ನಂಬಿಕೆ ಇರೋ ಹುಡುಗಿಯರಿಗಾಗಿ

ನಿಮ್ಮಲ್ಲಿಲ್ಲದ ಯಾವುದಾದರೂ ವಸ್ತುವನ್ನು ನೀವು ಪಡೆಯಬೇಕೆಂದುಕೊಂಡಿದ್ರೆ, ಈ ಮೊದಲು ಮಾಡದಿದ್ದ ಏನಾದರೊಂದನ್ನು ನೀವು ಮಾಡಬೇಕು. ಆಕೆ ಖಂಡಿತವಾಗಿ ಯಶಸ್ಸಿನ ಶಿಖರವನ್ನು ಏರುತ್ತಿದ್ದಾಳೆ. ಸ್ನೇಹ ಬಳಿ ಆರು ರೇಸ್ ವಿಜಯಗಳಿವೆ ಮತ್ತು 9 ರನ್ನರ್ ಅಪ್ ಜಯಗಳಿವೆ. 2009ರ ಜೆಕೆ ಟೈರ್ ನ್ಯಾಷನಲ್ ಕಾರ್ಟಿಂಗ್ ಚಾಂಪಿಯನ್‍ಶಿಪ್‍ನ 4 ಸ್ಟ್ರೋಕ್ ವಿಭಾಗದಲ್ಲಿ ಆಕೆ ತನ್ನ ಮೊದಲ ಫಾರ್ಮುಲಾ ರೇಸ್ ಅಂಕಗಳನ್ನು ಪಡೆದಿದ್ದಳು. ಈಕೆ ಎಂಐಎ ನ್ಯಾಷನಲ್ ಕಾರ್ಟಿಂಗ್ ಚಾಂಪಿಯನ್‍ಶಿಪ್ ಕೆಸಿಟಿ ಫೈನಲ್ ರೌಂಡ್‍ಗೆ ಅರ್ಹತೆ ಪಡೆದ ಮೊದಲ ಒಬ್ಬಳೇ ಯುವತಿ. 11ನೇ ಜೆಕೆ ಟೈರ್ ಎಫ್‍ಎಂಎಸ್‍ಸಿ ನ್ಯಾಷನಲ್ ಕಾರ್ಟಿಂಗ್ ಚಾಂಪಿಯನ್‍ಶಿಪ್-2014 ರಲ್ಲಿ ಈಕೆ ದಿನದ ವೇಗದ 40 ಸೆಕೆಂಡ್‍ಗಳ ಲ್ಯಾಪ್ ಸಮಯವನ್ನು ತನ್ನದಾಗಿಸಿಕೊಂಡಳು. 2015ರ ಫೋಕ್ಸ್ ವಾಗನ್ ವೆಂಟೋ ಕಪ್ ಮತ್ತು ದಿ ಟೊಯೋಟಾ ಇಟಿಯೋಸ್ ಕಪ್ ನಲ್ಲಿ ಈಕೆ ಭಾರತವನ್ನು ಪ್ರತಿನಿಧಿಸಿದ್ದಳು.

image


ವೇಗ ರೋಚಕವಾಗಿರುತ್ತೆ

ಹುಟ್ಟಿದ್ದು ಕೊಲ್ಕತ್ತಾದಲ್ಲಾದ್ರೂ, ಆಕೆ ಬೆಳೆದಿದ್ದು ಮತ್ತು ವಾಸಿಸುತ್ತಿರೋದು ಮುಂಬೈನಲ್ಲಿ. 16 ವರ್ಷವಾಗಿದ್ದಾಗ ಸ್ಥಳೀಯ ಕಾರ್ಟಿಂಗ್ ಟ್ರ್ಯಾಕ್‍ಗೆ ಕೊಟ್ಟ ಭೇಟಿ ಆಕೆಗೆ ತಾನೇನಾಗಬೇಕೆಂದು ಅರಿವಾಗುವಂತೆ ಮಾಡಿತು. ಒಂದು ಭೇಟಿಯಲ್ಲಿ ಆಕೆ ಇಬ್ಬರು ರೇಸ್ ಡ್ರೈವರ್ ಗಳನ್ನು ನೋಡಿದಳು ಮತ್ತು ಅವರು ನ್ಯಾಷನಲ್ ಚಾಂಪಿಯನ್‍ಶಿಪ್‍ನಲ್ಲಿದ್ದರು ಎಂದು ತಿಳಿದಾಗ ಆಕೆಯ ಕುತೂಹಲ ಹೆಚ್ಚಾಯಿತು.

ಸ್ನೇಹ ತನ್ನ ಹತ್ತನೇ ತರಗತಿಯನ್ನು ಮುಗಿಸಿದಳು ಮತ್ತು ರೇಸರ್ ಆಗಿ ತಯಾರಾಗಬೇಕೆಂದು ತೀರ್ಮಾನಿಸಿಕೊಂಡಳು. ಆದ್ರೆ ಆಕೆಗೆ ಕಲಿಸಲು ಯಾರೂ ಸಿಗದಿದ್ದಾಗ ಸ್ನೇಹ ಕಾರ್ ಮೆಕಾನಿಕ್‍ಗಳ ಬಳಿ ತನಗೆ ರೇಸ್ ಡ್ರೈವಿಂಗ್ ಕಲಿಸುವಂತೆ ಕೇಳಿ ಅವರಲ್ಲಿದ್ದ ಜ್ಞಾನವನ್ನು ಹಂಚಿಕೊಂಡಳು. ಟರ್ನಿಂಗ್‍ನಲ್ಲಿ ಬ್ರೇಕ್ ಹಾಕುವುದು, ಮೂಲೆಗಳಲ್ಲಿ ಕಾರ್ನೆರಿಂಗ್ ತಂತ್ರ ಮತ್ತು ರೇಸಿಂಗ್ ಲೈನ್ಸ್​​ ಬಗ್ಗೆ ಮಾಹಿತಿ ಪಡೆದುಕೊಂಡಳು. ಈ ಎಲ್ಲ ಜ್ಞಾನ ಮತ್ತು ಅಭ್ಯಾಸದಿಂದ ಸ್ಥಳೀಯವಾಗಿ ನಡೆಯುವ ಕಾರ್‍ರೇಸ್‍ಗಳಲ್ಲಿ ಭಾಗವಹಿಸೋಕೆ ಪ್ರಾರಂಭಿಸಿದಳು. ಜಯದ ವೇದಿಕೆಯನ್ನೂ ಹತ್ತುತ್ತಿದ್ದಳು.

ನ್ಯಾಷನಲ್ ಕಾರ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ರಾಯೋ ರೇಸಿಂಗ್ ಪರವಾಗಿ ಪ್ರತಿನಿಧಿಸುವಂತೆ ಕರೆ ಬಂದಾಗ ಆಕೆಗೆ ಮೊದಲ ಜಯ ಸಿಕ್ಕಿತ್ತು. ಅಲ್ಲಿಂದ ಆಕೆಯ ರೇಸಿಂಗ್ ಜೀವನ ಪ್ರಾರಂಭವಾಯಿತು. ದಿನದ ವೇಗದ ಲ್ಯಾಪ್ ಸಹ ಆಕೆ ತನ್ನದಾಗಿಸಿಕೊಂಡಿದ್ದಳು. 2009ರ ರೊಟಾಕ್ಸ್ ರೂಕಿ ರೇಸ್‍ನಲ್ಲಿ ಗೆಲುವನ್ನು ಕಂಡಾಗ, ಆ ಜಯ ಆಕೆಯ ಹೃದಯಕ್ಕೆ ಹತ್ತಿರವಾಗಿತ್ತು. ಆ ಸಮಯವನ್ನು ನೆನಪು ಮಾಡಿಕೊಳ್ತಾ, “ನನ್ನ ಕಾರ್ಟ್ ನಲ್ಲಿ ತಾಂತ್ರಿಕ ಸಮಸ್ಯೆ ಮಾತ್ರವಲ್ಲ, ಕೆಲ ಬಿಡಿಭಾಗಗಳನ್ನು ಹಾಕಿಸಲು ನನ್ನ ಬಳಿ ಹಣವೂ ಇರಲಿಲ್ಲ. ರೇಸ್‍ನ ಪ್ರಾರಂಭದಲ್ಲೇ ನನ್ನ ಕಾರ್ಟ್ ಸ್ಟಾರ್ಟ್ ಆಗುತ್ತಿರಲಿಲ್ಲ. ರೇಸ್‍ನಲ್ಲಿ ಭಾಗವಹಿಸೋದು ಬೇಡವೆಂದುಕೊಂಡಿದ್ದೆ. ಆದ್ರೆ ಅದೇ ಸಮಯಕ್ಕೆ ಸಂಭಾವಿತ ತಜ್ಞನೊಬ್ಬರು ಬಂದು ನನ್ನ ಕಾರ್ಟ್ ದುರಸ್ತಿ ಮಾಡಿ ಸ್ಟಾರ್ಟ್ ಮಾಡಿದರು. ಕಮಿಷನ್ ಲ್ಯಾಪ್ ನ ಕೊನೆಯಲ್ಲಿ ನಾನು ರೇಸ್‍ಗೆ ಸೇರಿಕೊಂಡೆ. ಆಗ ಎಲ್ಲಾ ಡ್ರೈವರ್ ಗಳು ತಮ್ಮ ಕಾರ್ಟ್ ಅನ್ನು ನಿಧಾನವಾಗಿ ಚಲಾಯಿಸುತ್ತಿದ್ದರು ನಂತ್ರ ಫ್ಲಾಗ್ ಕೆಳಗಿಳಿಯಿತು. ನಾನು ಕಡೆಯಲ್ಲಿ ರೇಸ್‍ಗೆ ಸೇರಿಕೊಂಡು, ಕೊನೆಯದಾಗಿ ಶುರುಮಾಡಿ ರೇಸ್ ನಲ್ಲಿ ಎರಡನೇ ಸ್ಥಾನ ಪಡೆದೆ. ರೇಸ್ ನಲ್ಲಿ ನಾನು ಗಮನ ಕೇಂದ್ರೀಕರಿಸಿ, ಗಟ್ಟಿ ಮನಸ್ಸು ಮಾಡಿ ಡ್ರೈವಿಂಗ್ ಮಾಡ್ತಿದ್ದೆ”. ಆಗ ಆಕೆ ಕೇವಲ 17 ವರ್ಷದ ಬಾಲೆ.

ತೆರೆಹಿಂದಿನ ದೃಶ್ಯ

ರೇಸಿಂಗ್ ಅನ್ನೋ ಪದ ಚಿತ್ತಾಕರ್ಷಕವಾಗಿ ಕೇಳಿಸಬಹುದು, ಆದ್ರೆ ಅದು ಸುಲಭದ ಕ್ರೀಡೆಯಲ್ಲ. ಸ್ನೇಹ ವಿಜ್ಞಾನ ವಿಭಾಗದಲ್ಲಿ 11ನೇ ತರಗತಿ ಓದುತ್ತಿದ್ದುದರಿಂದ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಡೋಕೆ ಆಗಲಿಲ್ಲ. ರೇಸ್ ಟ್ರ್ಯಾಕ್ ಆಕೆಯ ಶಾಲೆಯಾಯಿತು. ರೇಸಿಂಗ್ ಬಗ್ಗೆ ಕಲಿಯೋದರ ಜತೆಜತೆಗೇ ಪಠ್ಯಾಭ್ಯಾಸವನ್ನು ಮಾಡಿದಳು. ಸ್ನೇಹ ಎಲ್ಲಿ ಹೋಗ್ತಿದ್ದಳೋ ಪುಸ್ತಕಗಳು ಅಲ್ಲೆಲ್ಲಾ ಹೋಗ್ತಿದ್ದವು ಮತ್ತು ಟ್ರ್ಯಾಕ್‍ನಲ್ಲೂ ಅಭ್ಯಾಸ ಮಾಡ್ತಿದ್ದಳು.

image


ದೇಹವನ್ನು ಉತ್ತಮವಾಗಿಟ್ಟುಕೊಳ್ಳಬೇಕಿದ್ದದ್ದು ಆಕೆಗಿದ್ದ ಸವಾಲುಗಳಲ್ಲಿ ಒಂದು. ಇದಕ್ಕಾಗಿ 90 ಕಿಲೊಗ್ರಾಂ ತೂಗುತ್ತಿದ್ದ ಸ್ನೇಹ, 30 ಕೆಜಿಯನ್ನು ಕಳೆದುಕೊಂಡಳು. ವಯಸ್ಸಾಗುತ್ತಿದ್ದಂತೆ ಆರೋಗ್ಯದ ಮತ್ತು ದೇಹದ ಬಗ್ಗೆ ಆಕೆಗೆ ಅರಿವು ಮೂಡತೊಡಗಿತು. “ನಾನು ರೇಸ್‍ಗೆ ಹೋಗುತ್ತಿದ್ದಂತೆ ಜೀವನದಲ್ಲಿ ಫಿಟ್ನೆಸ್ ಬಹಳ ಮಹತ್ವ ಪಡೆಯಿತು. ಯಾಕಂದ್ರೆ ನಾನು ಫಿಟ್ ಆಗಿರೋದು ರೇಸಿಂಗ್ ಅಪೇಕ್ಷೆ ಪಡುತ್ತದೆ”.

ರೇಸಿಂಗ್ ಅತಿ ಹೆಚ್ಚು ಖರ್ಚುಳ್ಳ ಕ್ರೀಡೆ. ಪ್ರಾಯೋಜಕರು ಇಲ್ಲದೇ ಇದ್ದರೇ ಅದು ಇನ್ನೂ ಕಷ್ಟವಾಗುತ್ತದೆ. ಯಾವುದೇ ಪ್ರಾಯೋಜಕರ ಸಹಾಯವಿಲ್ಲದೇ ಸ್ನೇಹ ತನ್ನ ತಂಡಕ್ಕೆ ಪಾರ್ಟ್ ಟೈಂ ಮ್ಯಾನೇಜರ್ ಆಗಿ ಕೆಲಸ ಮಾಡಿದಳು. ಜತೆಗೆ ಹೊಸ ಸವಾರರಿಗೆ ತರಬೇತಿ ನೀಡೋದು, ವಸ್ತುಗಳ ಸಾಗಣೆ, ಕಾರ್ಟ್‍ಗಳನ್ನು ತೊಳೆದು ಸುಸ್ಥಿತಿಯಲ್ಲಿಡೋ ಕೆಲಸದ ಜತೆ ರೇಸಿಂಗ್‍ನಲ್ಲೂ ಭಾಗವಹಿಸುತ್ತಿದ್ದಳು.

ಆಕಾಶಕ್ಕೂ ವಿಜಯ ಲಗ್ಗೆ

ರೇಸಿಂಗ್ ಮೇಲಿನ ತನ್ನ ಪ್ರೀತಿಗೆ ಬೆಂಬಲ ನೀಡಲು ಸ್ನೇಹ ಕೆಲಸ ಮಾಡಲು ನಿರ್ಧರಿಸಿದಳು. 17 ವರ್ಷದವಳಾಗಿದ್ದಾಗ ಪೈಟಲ್​​ ಆಗಬಯಸಿದಳು. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ತರಬೇತಿ ಮುಗಿಸಿ ಭಾರತಕ್ಕೆ ಮರಳಿದಳು. ಸ್ನೇಹಾಳ ಯುಸ್ ಲೈಸನ್ಸ್​​ ಅನ್ನು ಭಾರತದ ಲೈಸನ್ಸ್​​ಗೆ ಪರಿವರ್ತಿಸಲು 2 ವರ್ಷ ಸಮಯ ಬೇಕಾಗುವುದರಿಂದ ಆ ಅಂತರವನ್ನು ತುಂಬಲು ತನ್ನ ವಿದ್ಯಾಭ್ಯಾಸ ಮತ್ತು ರೇಸಿಂಗ್ ಮುಂದವರಿಸಿದಳು. “ಭಾರತದಲ್ಲಿ ಪೈಲಟ್ ಆಗಲು ಬಹಳ ಶ್ರಮಪಡಬೇಕು. ಯಾಕಂದ್ರೆ ಭಾರತದಲ್ಲಿ ಅನೇಕರು ನಿರುದ್ಯೋಗಿ ಪೈಲಟ್‍ಗಳಿದ್ದಾರೆ. ಆದ್ದರಿಂದ ಕೆಲಸ ಗಿಟ್ಟಿಸಲು ತೀವ್ರವಾಗಿ ಓದಬೇಕು”.

ಸಧ್ಯ ಸ್ನೇಹ ಇಂಡಿಗೋ ಏರ್‍ಲೈನ್ಸ್​​ನಲ್ಲಿ ಕೆಲಸ ಮಾಡ್ತಿದ್ದಾಳೆ. 2012ರಲ್ಲಿ ಆಕೆಗೆ 20 ವರ್ಷವಾಗಿದ್ದಾಗ ಸ್ನೇಹ ಇಂಡಿಗೋ ತಂಡವನ್ನು ಸೇರುತ್ತಾಳೆ. ಇದು ಅವಳ ಮೊದಲ ಕೆಲಸ. ಈ ಬಗ್ಗೆ ಸ್ನೇಹ ಹೇಳೋದು ಹೀಗೆ, “ಹಾರಾಟಕ್ಕೆ ಇದೊಂದು ಉತ್ತಮ ಏರ್‍ಲೈನ್ಸ್. ಇವರು ನನ್ನ ರೇಸಿಂಗ್‍ಗೆ ಸಹ ಬೆಂಬಲ ನೀಡ್ತಿದ್ದಾರೆ. ಅಲ್ಲದೇ ಇಲ್ಲಿ ಸಾಕಷ್ಟು ಮಹಿಳಾ ಸ್ನೇಹಿ ನಿಯಮಗಳಿವೆ”.

ಮಾಡು ಇಲ್ಲವೇ ಮಡಿ

ಸ್ನೇಹಾಳ ಪಾಲಿಗೆ ಜೀವನ ಅಂದ್ರೆ ಹಾರಾಟ ಮತ್ತು ರೇಸಿಂಗ್. ಆಕೆಯದ್ದು ಕಠಿಣ ವೇಳಾಪಟ್ಟಿ. ಕಂಪನಿಯ ಸಹಕಾರದಿಂದ ಸ್ನೇಹ ರೇಸಿಂಗ್ ಮುಂದುವರೆಸಿದ್ದಾಳೆ. ತನ್ನೆಲ್ಲಾ ರಜೆ ಸಮಯವನ್ನು ರೇಸಿಂಗ್‍ಗೆ ಮೀಸಲಿಟ್ಟಿದ್ದಾಳೆ. ರೇಸ್‍ಗಾಗಿ ಆಕೆ ವ್ಯಾಪಕವಾಗಿ ಯೋಜನೆಯನ್ನು ಮಾಡಿಕೊಳ್ಳಬೇಕು, ರಜೆಗಾಗಿ ಅರ್ಜಿ ಹಾಕಬೇಕು, ನಂತ್ರ ಬಾಸ್ ರಜೆಯನ್ನು ಮಂಜೂರು ಮಾಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಬೇಕು.

“ನನಗೆ ಸಾಮಾಜಿಕ ಜೀವನವೇ ಇಲ್ಲ”. ದಿನಕ್ಕೆ 2 ಗಂಟೆಗಳ ಕಾಲ ಫಿಟ್ನೆಸ್‍ಗಾಗಿ ಮೀಸಲಿಡಬೇಕು. ವಿಮಾನ ವೇಳಾಪಟ್ಟಿಗೆ ಅನುಗುಣವಾಗಿ ಬೇರೆ ಬೇರೆ ಸಮಯಕ್ಕೆ ಎದ್ದು ಕೆಲಸಕ್ಕೆ ಹೋಗಬೇಕು. ರಜೆ ಸೇರಿದಂತೆ ಇನ್ನುಳಿದ ಸಮಯ ಸಂಪೂರ್ಣವಾಗಿ ರೇಸಿಂಗ್‍ಗೆ ಮೀಸಲು.

ಇಷ್ಟೆಲ್ಲಾ ಸವಾಲುಗಳಿಗೆ ಮುಖ ಮಾಡಿರುವ ಸ್ನೇಹಾಗೆ ಅತಿ ದೊಡ್ಡ ಸವಾಲೆಂದರೆ, ನಾನಿಲ್ಲಿಗೆ ಸೇರಿದವಳು ಎಂದು ನನಗೆ ನಾನೇ ಹೇಳಿಕೊಳ್ಳುವುದು. ನಾನೊಬ್ಬಳು ಪೈಲಟ್, ನನ್ನ ಕನಸಿನ ಜೀವನಕ್ಕಾಗಿ ನಾನು ಕಠಿಣ ಪರಿಶ್ರಮ ಹಾಕುತ್ತಿದ್ದೇನೆ ಎಂದು ರೇಸಿಂಗ್‍ಗೆ ಹೋದಾಗೆಲ್ಲಾ ನನಗೆ ನಾನೇ ಹೇಳಿಕೊಳ್ತೀನಿ. ಕೆಲಸಕ್ಕೆ ಅಥವಾ ರೇಸ್‍ಗೆ ಹೋದಾಗ ನಾನಿದನ್ನು ಮಾಡಲೆಂದೇ ಇರೋದು ಎಂದು ನನಗೆ ನಾನೇ ಹೇಳಿಕೊಳ್ತೀನಿ.

ಟ್ರ್ಯಾಕ್ ಮೇಲೆ ಹುಡುಗಿ

“ಮೊದಮೊದಲು ತನ್ನ ಸಹ ಸ್ಪರ್ಧಿಗಳು ನನ್ನ ಭಾವನೆಗಳನ್ನು ಅರ್ಥ ಮಾಡಿಕೊಂಡು ನನ್ನನ್ನು ಬೆಂಬಲಿಸಿಲ್ಲ. ನನ್ನ ಕುಟುಂಬ ಕೂಡ ನಾನು ಅಪಾಯಕಾರಿ ಕ್ರೀಡೆ ರೇಸಿಂಗ್‍ಅನ್ನು ಮುಂದುವರೆಸಿ ಪೈಲಟ್ ಆಗಿ ಕೆಲಸ ಮಾಡುವ ಬಗ್ಗೆ ಬೇಸರ ಮಾಡಿಕೊಂಡಿದ್ದರು. ನಾನು ಬಹಳ ಅವಿಶ್ರಾಂತವಾಗಿ ಕೆಲಸ ಮಾಡುತ್ತಿದ್ದೆ ಮತ್ತು ಅಪಾಯವನ್ನು ಮೈಮೇಲೆ ಎಳೆದುಕೊಂಡಿದ್ದೆ”.

ಆಕೆಯ ಆಸಕ್ತಿಗೆ ಕುಟುಂಬದವರು ಅವಳ ಆಯ್ಕೆಯ ಬಗ್ಗೆ ಸಮಾಧಾನ ತಾಳಿದರು. ಆದರೂ ರೇಸ್ ಟ್ರ್ಯಾಕ್ ಮೇಲೆ ಹುಡುಗಿ ಇರುತ್ತಿದ್ದುದರಿಂದ ಆಗಿಂದಾಗ್ಗೆ ಟೀಕೆಗಳನ್ನು ಕೇಳಬೇಕಿತ್ತು. “ಡ್ರೈವಿಂಗ್ ಕಲಿತು ಬಾ ಹೋಗು” ಎಂದು ಸ್ನೇಹ ಟೀಕೆಗಳನ್ನು ಸ್ವೀಕರಿಸಿದ್ದಾಳೆ. ಆಕೆ ಡ್ರೈವಿಂಗ್ ಮಾಡಬೇಕಾದ್ರೆ ಜನರು ಹುಬ್ಬೇರಿಸಿ ಟೀಕೆಗಳನ್ನು ಮಾಡ್ತಿದ್ದರು. “ಅಲ್ಲೇನಾದ್ರೂ ಅಪಘಾತವಾಗಿ ಇಬ್ಬರು ಅಥವಾ ಮೂವರು ಡ್ರೈವರ್‍ಗಳು ಅದಕ್ಕೆ ಹೊಣೆಯಾಗಿದ್ದಲ್ಲಿ, ನನ್ನ ಕಡೆ ಮೊದಲು ಬೆರಳು ತೋರಿಸಿ ಮಾತನಾಡುತ್ತಿದ್ದರು” ಎಂದು ಸ್ನೇಹ ಹೇಳ್ತಾಳೆ.

ಪ್ರಾಯೋಜಕತ್ವ

ಮುಂದುವರಿದ ಹಂತದ ಫಾರ್ಮುಲಾ4 ರೇಸಿಂಗ್‍ಗೆ ಸ್ನೇಹ ತಯಾರಿ ನಡೆಸಿದ್ದಾಳೆ. ಹೆಚ್ಚಿನ ಸ್ಪರ್ಧಿಗಳು ಮಲೇಷ್ಯಾ, ಕೊಯಮತ್ತೂರು ಅಥವಾ ಬೇರೆ ರೇಸಿಂಗ್ ಟ್ರ್ಯಾಕ್‍ಗಳಲ್ಲಿ ಅಭ್ಯಾಸ ನಡೆಸುತ್ತಿದ್ರೆ ಸ್ನೇಹಳ ಸ್ಥಿತಿಯೇ ಬೇರೆ. ಹಣಕಾಸಿನ ತೊಂದರೆಯಿಂದ ಆಕೆ ರೇಸ್‍ಗೆ ಕೇವಲ ಎರಡು ದಿನ ಮುನ್ನ ಅಭ್ಯಾಸ ಮಾಡಿ ರೇಸ್ ಟ್ರ್ಯಾಕ್‍ಗೆ ಇಳೀತಾಳೆ. “ನನಗಷ್ಟೇ ಸಮಯ ಸಿಗೋದು” ಅಂತಾಳೆ ಸ್ನೇಹ.

ಮಹಿಳೆಯಾಗಿರೋ ಕಾರಣದಿಂದ ಪ್ರಾಯೋಜಕತ್ವದ ಕೊರತೆ ಇರಬಹುದಾ ಎಂದು ಕೇಳಿದ್ರೆ ಆಕೆ ಕೂಡಲೇ ಉತ್ತರಿಸುತ್ತಾಳೆ, “ಮಹಿಳೆಯಾಗಿರೋದ್ರಿಂದ ಎಂದು ನನಗೆ ಅನ್ನಿಸೋಲ್ಲ, ಅದು ಸತ್ಯ ಅಲ್ಲ. ಹಾಗೇನಾದ್ರೂ ಇದ್ರೆ ಅದನ್ನು ನಾನೇ ಬದಲಾಯಿಸ್ತೀನಿ”.

ಸ್ನೇಹಳ ಫಾರ್ಮುಲಾ4 ರೇಸಿಂಗ್‍ಗೆ ಸದ್ಯಕ್ಕೆ ಜೆಕೆ ಟೈರ್ಸ್ ಒಬ್ಬರೇ ಪ್ರಾಯೋಜಕರು. “ಜನರು ಅಥವಾ ಮೋಟಾರ್ ಕಂಪನಿಯವರು ಪ್ರಾಯೋಜಕತ್ವಕ್ಕೆ ಮುಂದೆ ಬರಬೇಕು. ರೇಸಿಂಗ್‍ನಲ್ಲಿ ನಾನು ಒಳ್ಳೇ ಸ್ಥಾನದಲ್ಲಿದ್ದೇನೆ. ನನಗೆ ಪ್ರಾಯೋಜಕರು ಸಿಕ್ಕಿದ್ರೆ ನಾನು ಇದೇ ದಾರಿಯಲ್ಲಿ ಇನ್ನೂ ಬಹುದೂರ ಸಾಗಬಹುದು. ಅಂತರಾಷ್ಟ್ರೀಯ ಫಾರ್ಮುಲಾ ಕಾರ್ ರೇಸಿಂಗ್‍ನಲ್ಲಿ ಭಾಗವಹಿಸಬೇಕೆಂಬ ನನ್ನ ಗುರಿಯನ್ನು ಸಾಧಿಸಬಹುದು. ದೇಶವನ್ನು ಪ್ರತಿನಿಧಿಸಲು ನನಗೆ ಪ್ರಾಯೋಜಕತ್ವ ಅವಶ್ಯವಾಗಿದೆ” ಅಂತಾಳೆ ಸ್ನೇಹ.

ದಿವಂಗತ ಆಯರ್ಟನ್ ಸೆನ್ನಾರಿಂದ ಸ್ನೇಹ ಸ್ಫೂರ್ತಿಗೊಂಡು ರೇಸಿಂಗ್‍ಗೆ ಕಾಲಿಟ್ಟಿದ್ದಾಳೆ. ಸದ್ಯ ಆಕೆಯ ಅಚ್ಚುಮೆಚ್ಚಿನ ರೇಸರ್ ಲೂಯಿಸ್ ಹ್ಯಾಮಿಲ್ಟನ್. ರಸ್ತೆ ಮೇಲಿನ ಹಾಗೂ ಆಕಾಶದಲ್ಲಿ ಹಾರುವ ಯಂತ್ರಗಳ ಬಗ್ಗೆ ಮಾತನಾಡಿದಾಗ ಆಕೆ “ನಾನು ಚಲಾಯಿಸುವ ಏರ್‍ಬಸ್ 320 ಅನ್ನು ನಾನು ಪ್ರೀತಿಸುತ್ತೀನಿ. ಅದು ಬಹಳ ಬುದ್ಧಿವಂತ ಏರ್‍ಕ್ರಾಫ್ಟ್. ಜತೆಗೆ ನಾನು ಫಾರ್ಮುಲಾ4 ಕಾರ್ ಇಷ್ಟಪಡುತ್ತೀನಿ. ನನ್ನ ಮೆಚ್ಚಿನ ಯಂತ್ರ ಬಿಎಂಡಬ್ಲ್ಯೂ ಫಾರ್ಮುಲಾ ಕಾರನ್ನು ಓಡಿಸೋದು ನನ್ನ ಆಸೆ” ಅಂತಾಳೆ ಸ್ನೇಹ.