ಯೋಚಿಸೋ ಶಕ್ತಿ ಇದ್ದರೆ ಕಂಡಲ್ಲೆಲ್ಲಾ ಸಿಗುತ್ತೆ ಬ್ಯುಸಿನೆಸ್ ದಾರಿ

ಟೀಮ್​​ ವೈ.ಎಸ್​​.

ಯೋಚಿಸೋ ಶಕ್ತಿ ಇದ್ದರೆ ಕಂಡಲ್ಲೆಲ್ಲಾ ಸಿಗುತ್ತೆ ಬ್ಯುಸಿನೆಸ್ ದಾರಿ

Monday September 28, 2015,

3 min Read

ಐಐಟಿ-ಜೆಇಇ ಮತ್ತು ಎಐಇಇಇ ಕಲಿಯೋ ಭಾರತೀಯ ವಿದ್ಯಾರ್ಥಿಗಳಿಗೆ ರಾಜಸ್ಥಾನದ ಕೋಟಾ ನಗರ ಮೆಕ್ಕಾ ಇದ್ದಂತೆ. ಕೋಟಾದಲ್ಲಿನ ಕೋಚಿಂಗ್ ಕ್ಷೇತ್ರ ವಾರ್ಷಿಕ 300 ಕೋಟಿ ರೂಪಾಯಿಗಳ ವಹಿವಾಟು ನಡೆಸುತ್ತಿದೆ. ಪ್ರತಿವರ್ಷವೂ ಇಲ್ಲಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ವಾರ್ಷಿಕವಾಗಿ ಏನಿಲ್ಲವೆಂದರೂ 2 ಲಕ್ಷ ವಿದ್ಯಾರ್ಥಿಗಳು ಇಲ್ಲಿನ ಕೋಚಿಂಗ್ ಸೆಂಟರ್‍ಗಳಲ್ಲಿ ತರಬೇತಿ ಪಡೆಯುತ್ತಾರೆ.

ಇಷ್ಟು ದೊಡ್ಡ ಜನಸಂಖ್ಯೆ ಇದೆ ಅಂದ್ಮೇಲೆ ಯಾರೇ ಆದರೂ ಅಲ್ಲಿ ಹೊಟೇಲ್‍ಗಳನ್ನು, ಪಿ.ಜಿ.ಗಳನ್ನು ನಡೆಸೋದು ಕಾಮನ್. ಆದರೆ, ನಿತಿನ್ ಮತ್ತು ಧೀರಜ್ ಬಿಹಾನಿ ಸೋದರರು ಹಾಗೂ ಅಭೀಷೇಕ್ ಮಹೇಶ್ವರಿ ಎಲ್ಲರಂತೆ ಯೋಚಿಸಲಿಲ್ಲ. ಇಲ್ಲಿ ದೊಡ್ಡದೊಂದು ಉದ್ಯಮಕ್ಕೆ ಅವಕಾಶ ಇದೆ ಅನ್ನೋದು ಅವರ ಹುಡುಕಾಡೋ ಕಣ್ಣುಗಳಿಗೆ ಗೊತ್ತಾಗಿಬಿಟ್ಟಿತ್ತು. ಹಾಗೆ ಹುಟ್ಟಿಕೊಂಡಿದ್ದೇ ಹಂಟರ್‍ಫ್ಲಾಟ್.ಕಾಮ್ (hunturflat.com). ಕೋಟಾದಲ್ಲಿ ಲಭ್ಯವಿರುವ ಪೇಯಿಂಗ್ ಗೆಸ್ಟ್​​ಗಳು, ಹಾಸ್ಟೆಲ್‍ಗಳು, ಫ್ಲಾಟ್‍ಗಳ ಮಾಹಿತಿ ಹಂಟರ್‍ಫ್ಲಾಟ್.ಕಾಮ್‍ (hunturflat.com)ನಲ್ಲಿ ಮಾತ್ರ ಸಿಗುತ್ತದೆ.

ಸಂಸ್ಥಾಪಕರಾದ ನಿತಿನ್ ಬಿಹಾನಿ, ಅಭಿಷೇಕ್​ ಮಹೇಶ್ವರಿ, ಧೀರಜ್​ ಬಿಹಾನಿ

ಸಂಸ್ಥಾಪಕರಾದ ನಿತಿನ್ ಬಿಹಾನಿ, ಅಭಿಷೇಕ್​ ಮಹೇಶ್ವರಿ, ಧೀರಜ್​ ಬಿಹಾನಿ


ಜೋಧ್‍ಪುರದಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಕೊಂಡಿದ್ದ ಈ ಚಾರ್ಟರ್ಡ್ ಅಕೌಂಟಂಟ್‍ಗಳ ತಂಡ, ಕೋಟಾದಲ್ಲಿ ವಸತಿ ಹುಡುಕುವ ಸಮಸ್ಯೆಗಳಿಗೆ ತಂತ್ರಜ್ಞಾನದ ಮೂಲಕ ಇತಿಶ್ರೀ ಹಾಡಿತು. ಕೋಟಾದಲ್ಲಿ ಇರುವ ನಾಲ್ಕು ಸಾವಿರಕ್ಕೂ ಹೆಚ್ಚು ಹಾಸ್ಟೆಲ್‍ಗಳು ಮತ್ತು ಸಮರ್ಪಕವಾದ ವೆಬ್‍ಸೈಟ್ ಒಂದರ ಕೊರತೆಯೇ ಇವರ ಉದ್ಯಮಕ್ಕೆ ಮೂಲ ಒದಗಿಸಿತ್ತು.

ಯಶಸ್ವಿ ಉದ್ಯಮಿಗಳಾದ ರೆಡ್‍ಬಸ್ ಸಂಸ್ಥಾಪಕ ಫಣೀಂದ್ರ ಸಾಮ ಮತ್ತು ಓಲಾ ಕ್ಯಾಬ್ಸ್ ಸಂಸ್ಥಾಪಕ ಭವಿಷ್ ಅಗರ್ವಾಲ್ ಅವರೇ ಈ ಮೂವರು ನವ್ಯೋದ್ಯಮಿಗಳಿಗೆ ಸ್ಫೂರ್ತಿಯಾಗಿದ್ದರು. ಅವರಂತೆಯೇ ಪರಿಸರದಲ್ಲಿ ಹೆಜ್ಜೆಗುರುತು ಮೂಡಿಸಬೇಕು ಎಂದು ಕನಸು ಕಂಡರು.

ಸವಾಲುಗಳು:

ಹಾಗೆಂದು ಇವರ ಪ್ರಯಾಣವೇನು ಸುಲಭದ್ದಾಗಿರಲಿಲ್ಲ. ಆರ್ಥಿಕವಾಗಿ ಅಷ್ಟೊಂದು ಬಲಶಾಲಿಯಾಗಿರದಿದ್ದ ಈ ತಂಡಕ್ಕೆ ತಂತ್ರಜ್ಞಾನವನ್ನು ಬಳಸುವುದೇ ದೊಡ್ಡ ಸವಾಲಾಗಿತ್ತು. ಹಾಗಂತ ಅವರು ಸುಮ್ಮನಾಗಲಿಲ್ಲ. ಬೇರೆಯವರಿಗೆ ಯಾಕೆ ಸಲಾಂ ಹೊಡೆಯಬೇಕು? ತಾವೇ ಕಲಿಯೋಣ ಅಂತ ಅಂತರ್ಜಾಲ ತಾಣ ಅಭಿವೃದ್ಧಿ ಮಾಡೋ ಕೋರ್ಸ್ ಕಲಿತರು. ವೆಬ್‍ಸೈಟ್ ತಂತ್ರಜ್ಞಾನದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡರು.

image


ನಮಗೆ ತಂತ್ರಜ್ಞಾನ ಎನ್ನುವುದೇ ಬಲಹೀನತೆಯಾಗಿತ್ತು. ನಮಗೆ ಅಲಿಬಾಬಾ.ಕಾಮ್‍ನ ಸಂಸ್ಥಾಪಕ ಜ್ಯಾಕ್‍ಮಾ ಅವರೇ ಸ್ಫೂರ್ತಿಯಾಗಿದ್ದರು. ಕಂಪ್ಯೂಟರ್ ಇಂಜಿನಿಯರ್ ಆಗಿರದೆ, ಇಂಗ್ಲಿಷ್ ಶಿಕ್ಷಕರಾಗಿದ್ದ ಅವರು, ಈಗ ಇ ಕಾಮರ್ಸ್ ಜಗತ್ತಿನ ಅನಭಿಷಿಕ್ತ ದೊರೆಯಾಗಿದ್ದಾರೆ. ಜ್ಯಾಕ್‍ಮಾ ಅದನ್ನೆಲ್ಲಾ ಸಾಧ್ಯವಾಗಿಸಬಹುದಾದರೆ? ನಾವ್ಯಾಕೆ ಮಾಡಬಾರದು? ಈ ಒಂದೇ ಪ್ರಶ್ನೆ ನಮ್ಮನ್ನು ಇಲ್ಲಿಯತನಕ ಕರೆದುಕೊಂಡು ಬಂದಿದೆ. ಇದು ಹಂಟರ್‍ಫ್ಲಾಟ್.ಕಾಂ (hunturflat.com)ಸಂಸ್ಥಾಪಕರ ಮಾತು.

ವೆಬ್‍ಸೈಟ್ ತಂತ್ರಜ್ಞಾನ ಸಂಪೂರ್ಣ ಹೊಸತಾಗಿತ್ತು. ಹೀಗಾಗಿ ಅವರು ಲಿಂಕ್ಡ್​​ಇನ್ ನೆಟ್‍ವರ್ಕ್ ಮೂಲಕ ಸಾಧ್ಯವಿರುವಷ್ಟು ಸಾಫ್ಟ್‍ವೇರ್ ತಂತ್ರಜ್ಞರೊಂದಿಗೆ ಸಂಪರ್ಕ ಬೆಳೆಸಿದರು. ತಮ್ಮ ಗೆಳೆಯರು, ಸಂಬಂಧಿಕರ ಜೊತೆ ಚರ್ಚಿಸಿ ಸಲಹೆಗಳನ್ನು ಪಡೆದುಕೊಂಡರು.

ಹಲವು ಸಂದರ್ಭಗಳಲ್ಲಿ ಅವರಿಗೆ ಸಲಹೆಗಳು, ಮಾರ್ಗದರ್ಶನ ಬೇಕಾಗಿತ್ತು. ಎಲ್. ಎನ್. ಮಿತ್ತಲ್ ಮಾತು ಆಧರಿಸಿ, ಅವರು ನಾಲ್ವರು ತಂತ್ರಜ್ಞರ ಸಲಹೆ ಪಡೆದು ತಮ್ಮ ಸಮಸ್ಯೆಗಳನ್ನು ನಿವಾರಿಸಿಕೊಂಡರು.

ಬಹುಕೋಟಿ ಮೌಲ್ಯದ ಆನ್‍ಲೈನ್ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಮತ್ತು ಮಾರಾಟ ಕೇವಲ 100 ಮಿಲಿಯನ್ ಡಾಲರ್ ಮೌಲ್ಯದ್ದಾಗಿದೆ. ಈಗಾಗಲೇ ಮ್ಯಾಜಿಕ್‍ಬ್ರಿಕ್ಸ್, 99 ಏಕರ್ಸ್, ಇಂಡಿಯಾ ಪ್ರಾಪರ್ಟಿ ಮತ್ತು ಮಕಾನ್ ತಾಣಗಳು ಮಾರುಕಟ್ಟೆಯನ್ನು ಆಳುತ್ತಿವೆ. ಜೊತೆಗೆ ಹೊಸಬರಾದ ಕಾಮನ್‍ಫ್ಲೋರ್, ಹೌಸಿಂಗ್.ಕಾಮ್ ಮೊದಲಾದ ಸಂಸ್ಥೆಗಳು ಜಿದ್ದಿನ ಸ್ಪರ್ಧೆಗೆ ಬಿದ್ದಿವೆ. ಸಾಲದ್ದಕ್ಕೆ ಕ್ವಿಕರ್‍ನಂತಹ ಉಚಿತ ಕ್ಲಾಸಿಫೈಡ್ ತಾಣಗಳಿಂದಾಗಿ ಸ್ಪರ್ಧೆ ತೀವ್ರವಾಗಿದೆ.

ಕಳೆದ ವರ್ಷ ಹೌಸಿಂಗ್.ಕಾಮ್ ಸಾಫ್ಟ್​​ಬ್ಯಾಂಕ್ಸ್ ಇನ್‍ವೆಸ್ಟ್​​ಮೆಂಟ್‍ನಿಂದ 90 ಮಿಲಿಯನ್ ಅಮೆರಿಕನ್ ಡಾಲರ್ ಮತ್ತು ಕಾಮನ್ ಫ್ಲೋರ್ ಸಿರೀಸ್ ಇ ಫಂಡಿಂಗ್‍ನಿಂದ 30 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಿಸಿಕೊಂಡಿವೆ. ಇದು ಈ ಕ್ಷೇತ್ರದಲ್ಲಿರುವ ವಹಿವಾಟಿನ ವ್ಯಾಪ್ತಿಗೆ ಸಾಕ್ಷಿ.

ಹಂಟರ್‍ಫ್ಲಾಟ್‍(hunturflat.com)ನಂತಹ ಸಣ್ಣ ಸಂಸ್ಥೆಗಳಿಗೂ ಟೈರ್-2 ನಗರಗಳಲ್ಲಿ ಸ್ಥಳೀಯ ಮಾರುಕಟ್ಟೆಯನ್ನು ಬಳಸಿಕೊಳ್ಳುವಂತಹ ಅವಕಾಶವಿದೆ. ಉದ್ಯಮದಲ್ಲಿ ಇನ್ನೂ ಅಂಬೆಗಾಲಿಡುತ್ತಿರುವ ಹಂಟರ್‍ಫ್ಲಾಟ್.ಕಾಂ(hunturflat.com) ಶುರುವಾಗಿದ್ದು ವೈಯಕ್ತಿಕ ಉಳಿತಾಯದ 3 ಲಕ್ಷ ರೂಪಾಯಿಗಳಲ್ಲಿ. ಬೇರೆ ಬಂಡವಾಳವಿಲ್ಲದ ಕಾರಣ, ಇವತ್ತಿಗೂ ಸಂಸ್ಥೆಯಲ್ಲಿ ಸಂಸ್ಥಾಪಕ ಮೂವರೇ ನೌಕರರು. ತೀರಾ ಅಗತ್ಯಬಿದ್ದಲ್ಲಿ, ಹೊರಗಿನವರ ಸಹಾಯ ಪಡೆಯುತ್ತಾರೆ.

ಮುಂದಿನ ತಿಂಗಳುಗಳಲ್ಲಿ, ಸಂಸ್ಥೆಯು ಗ್ರಾಹಕರಿಗೆ ಇನ್ನೂ ಹೆಚ್ಚಿನ ಸೌಕರ್ಯ ಕಲ್ಪಿಸಲು ಮುಂದಾಗಿದೆ. ಅಷ್ಟೇ ಅಲ್ಲ, ಹೆಚ್ಚುವರಿ ರಕ್ಷಣಾ ವ್ಯವಸ್ಥೆಗಳುಳ್ಳ ಮಹಿಳಾ ಹಾಸ್ಟೆಲ್‍ಗಳ ಪ್ರತ್ಯೇಕ ಪಟ್ಟಿ ಮಾಡಲು ತೀರ್ಮಾನಿಸಿದೆ. 6 ತಿಂಗಳ ಹಿಂದಷ್ಟೇ ಶುರುವಾದ ವೆಬ್‍ಸೈಟ್‍ಗೆ ಆಫ್-ಸೀಸನ್ ಆಗಿದ್ದರೂ ಪ್ರತಿದಿನ 200 ಗ್ರಾಹಕರು ಭೇಟಿ ನೀಡುತ್ತಿದ್ದಾರೆ. ಬೋರ್ಡ್ ಫಲಿತಾಂಶ ಪ್ರಕಟವಾದ ಬಳಿಕ ಹೆಚ್ಚಿನ ವಿದ್ಯಾರ್ಥಿಗಳು ಕೋಟಾಗೆ ಬರುವ ಸೀಸನ್ ಮಾರ್ಚ್-ಏಪ್ರಿಲ್ ತಿಂಗಳಾಗಿದ್ದು, ಆ ವೇಳೆ ಹೆಚ್ಚಿನ ವ್ಯವಹಾರ ನಡೆಯುವ ನಿರೀಕ್ಷೆಯಲ್ಲಿದೆ ಹಂಟರ್‍ಫ್ಲಾಟ್(hunturflat.com).

ಆದಾಯದ ಬಗ್ಗೆಯೂ ಸಂಸ್ಥಾಪಕರು ವಿವರಣೆ ನೀಡುತ್ತಾರೆ. ಆಸ್ತಿಗಳ ಮಾಲೀಕರಿಗೆ ತಮ್ಮ ಜಾಹೀರಾತನ್ನು ನೀಡಲು ಶೀಘ್ರದಲ್ಲಿಯೇ ಪ್ರೀಮಿಯಂ ಅಕೌಂಟ್‍ಗಳನ್ನು ತೆರೆಯಲು ವೆಬ್‍ಸೈಟ್ ನಿರ್ಧರಿಸಿದೆ. ಈ ಪ್ರೀಮಿಯಂ ಅಕೌಂಟ್‍ಗಳು ಪಾವತಿ ಸೇವೆಯಾಗಿರುತ್ತವೆ. ಈ ಮೂಲಕ ಮಾಲೀಕರು ತಮ್ಮ ಹಾಸ್ಟೆಲ್‍ಗಳ ಬಗ್ಗೆ, ವ್ಯವಸ್ಥೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಬಹುದಾಗಿದೆ. ಇದರಿಂದಾಗಿ ಗ್ರಾಹಕರಿಗೆ ತಮಗೆ ಬೇಕಾದ ಸೌಲಭ್ಯಗಳ ಬಗ್ಗೆ ಆಳವಾದ ಮಾಹಿತಿ ಕೂಡಾ ದೊರೆಯಲಿದೆ.


ಮುಂದಿನ ದಿನಗಳಲ್ಲಿ ಹಂಟರ್‍ಫ್ಲಾಟ್ (hunturflat.com)ನವ್ಯೋದ್ಯಮಿಗಳು ಮೊಬೈಲ್ ಅಪ್ಲಿಕೇಶನ್ ತಯಾರಿಸುವ ಚಿಂತನೆಯಲ್ಲಿದ್ದಾರೆ. ಸಧ್ಯಕ್ಕೆ ತಮ್ಮ ಮೂಲಬಂಡವಾಳದಲ್ಲಿ 1/3 ಭಾಗವನ್ನು ಪ್ರಚಾರಕ್ಕಾಗಿ ಮತ್ತು ಸ್ಥಳೀಯರ ಜೊತೆಗೆ ಹೆಚ್ಚಿನ ಸಹಭಾಗಿತ್ವಕ್ಕಾಗಿ ಖರ್ಚು ಮಾಡುತ್ತಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳು ಮತ್ತು ಗೂಗಲ್ ಆ್ಯಡ್ಸ್​​ಗಳನ್ನೇ ಪ್ರಚಾರಕ್ಕೆ ನೆಚ್ಚಿಕೊಂಡಿದ್ದಾರೆ.

ಬಹುತೇಕ ರಿಯಲ್ ಎಸ್ಟೇಟ್ ವೆಬ್‍ಸೈಟ್‍ಗಳು ವಿಶ್ವಾಸಾರ್ಹತೆ ಕಳೆದುಕೊಂಡಿವೆ. ಬ್ರೋಕರ್‍ಗಳೇ ಹೆಚ್ಚು ಹೆಚ್ಚು ಮಾಹಿತಿಗಳನ್ನು ಅಪ್‍ಲೋಡ್ ಮಾಡುತ್ತಿರುವುದೇ ಇದಕ್ಕೆ ಕಾರಣ. ನಿಜವಾದ ಗ್ರಾಹಕರು ಕಿರಿಕಿರಿ ಅನುಭವಿಸುತ್ತಿರುವುದರಿಂದ ವೆಬ್‍ಸೈಟ್‍ಗಳ ಮೇಲೆ ನಂಬಿಕೆ ಕಡಿಮೆಯಾಗುತ್ತಿದೆ. ಈ ಸಮಸ್ಯೆ ನಿವಾರಿಸಲು ಹಂಟರ್‍ಫ್ಲಾಟ್ (hunturflat.com) ತನ್ನದೇ ದಾರಿ ಕಂಡುಕೊಂಡಿದೆ. ಈ ತಾಣದಲ್ಲಿ ಸಂಸ್ಥಾಪಕರೇ ಖುದ್ದಾಗಿ ಫೋಟೋಗಳನ್ನು ಮತ್ತು ಮಾಹಿತಿಗಳನ್ನು ಅಪ್‍ಲೋಡ್ ಮಾಡುತ್ತಾರೆ. ಹೀಗಾಗಿ ಯಾರು ಬೇಕೆಂದರೂ ಅಪ್‍ಲೋಡ್ ಮಾಡಲು ಸಾಧ್ಯವಿಲ್ಲ. ಈ ಕಾರಣದಿಂದಾಗಿ ಇಲ್ಲಿರುವ ಮಾಹಿತಿಗಳು 100% ಸತ್ಯವಾಗಿರುತ್ತವೆ. ಪ್ರತಿಯೊಂದು ಹಾಸ್ಟೆಲ್, ವಸತಿಗಳನ್ನು ಖುದ್ದಾಗಿ ಪರಿಶೀಲಿಸಿದ ಬಳಿಕವಷ್ಟೇ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಲಾಗುತ್ತದೆ. ಅಲ್ಲದೆ, ಪ್ರತಿ ಮಾಹಿತಿಗೂ ರಿವ್ಯೂವ್ ಬಟನ್ ಇದ್ದು ಪ್ರತಿಕ್ರಿಯೆಗಳೆಲ್ಲವನ್ನೂ ವೀಕ್ಷಿಸಲಾಗುತ್ತದೆ.

ನಾವು ಈ ಉದ್ಯಮಕ್ಕೆ ಹೊಸಬರಾಗಿರುವ ಕಾರಣ, ವಿಶ್ವಾಸಾರ್ಹತೆ ವಿಚಾರದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳುತ್ತಿಲ್ಲ. ಎಲ್ಲವನ್ನೂ ಖುದ್ದಾಗಿ ಗಮನಿಸುತ್ತೇವೆ ಎನ್ನುತ್ತಾರೆ ನವ್ಯೋದ್ಯಮಿಗಳು. (hunturflat.com)ಕೋಟಾದಲ್ಲಿ ಹಾಟ್​ ಹಾಟ್​​ ಆಗಿ ಸುದ್ದಿ ಮಾಡ್ತಿದೆ ಅನ್ನೋದು ಸತ್ಯ.