145 ಪದವಿ ಸಂಪಾದಿಸಿದ್ದಾರೆ ಚೆನ್ನೈ ಪ್ರೊಫೆಸರ್..

0

ಪದವಿ ಪೂರೈಸಬೇಕು ಅನ್ನೋ ಆಸೆ ಎಲ್ರಿಗೂ ಸಹಜ. ಹೆಚ್ಚು ಅಂದ್ರೆ ನಾವು ನೀವೆಲ್ಲ ಡಬಲ್ ಡಿಗ್ರಿ ಮಾಡಿರಬಹುದು. ಆದ್ರೆ ಚೆನ್ನೈನ ಪ್ರಾಧ್ಯಾಪಕರೊಬ್ಬರು ಬರೋಬ್ಬರಿ 145 ಪದವಿಗಳನ್ನು ಸಂಪಾದಿಸಿದ್ದಾರೆ. ಹೆಸರಿಗೆ ತಕ್ಕಂತೆ ಚೆನ್ನೈನ ವಿ.ಎನ್.ಪರ್ಥಿಬನ್ ನಿಜಕ್ಕೂ ಪ್ರತಿಭಾವಂತರು. ಪರ್ಥಿಬನ್ ಅವರ ವಿಸಿಟಿಂಗ್ ಕಾರ್ಡ್ ನೋಡಿದ್ರೆ ನೀವು ದಂಗಾಗಿ ಹೋಗ್ತಿರಾ. ಯಾಕಂದ್ರೆ ಅವರ ಹೆಸರಿನ ಮುಂದೆ 145 ಡಿಗ್ರಿಗಳಿವೆ.

145 ಪದವಿಗಳನ್ನು ಸಂಪಾದಿಸುವುದು ಸುಲಭದ ಮಾತಲ್ಲ. ಪರ್ಥಿಬನ್ ಅವರಿಗೆ ಈಗ 55 ವರ್ಷ. ಸತತ ಮೂರೂವರೆ ದಶಕಗಳ ಕಾಲ ಕಷ್ಟಪಟ್ಟು ಓದಿ ಅವರು 145 ಪದವಿಗಳನ್ನು ಗಳಿಸಿದ್ದಾರೆ. ಅವರ ಬಳಿ ಈಗ 12 ಎಂಫಿಲ್ ಪದವಿಗಳು, 9 ಎಂಬಿಎ ಪದವಿಗಳು, 8 ಎಂಎಲ್ ಪದವಿಗಳು, 10 ಎಂಎ ಪದವಿಗಳು, 8 ಎಂಕಾಮ್ ಪದವಿಗಳು, 3 ಎಂಎಸ್ಸಿ ಸೇರಿದಂತೆ 145ಕ್ಕೂ ಹೆಚ್ಚು ಪದವಿಗಳಿವೆ. ಪರ್ಥಿಬನ್ ಅವರ ಶೈಕ್ಷಣಿಕ ಸಾಧನೆ ಒಂದು ಚಮತ್ಕಾರದಂತಿದೆ.

''ನಾನು ಉತ್ತರ ಮದ್ರಾಸ್​ನ ಸಾಮಾನ್ಯ ಕುಟುಂಬದಿಂದ ಬಂದವನು. ಕಾಲೇಜಿನಲ್ಲಿದ್ದಾಗ ಮೊದಲ ಬಾರಿ ಪದವಿ ಮುಗಿಸಲು ಬಹಳ ಕಷ್ಟಪಟ್ಟೆ. ನನಗೆ ನ್ಯಾಯಾಂಗ ಇಲಾಖೆಯಲ್ಲಿ ಉದ್ಯೋಗ ಸಿಕ್ಕಿತ್ತು. ರಜಿಸ್ಟ್ರೇಶನ್​ಗೆ ಎಲ್ಲೆಲ್ಲಿ ಟ್ರಾನ್ಸ್​ಫರ್ ಸರ್ಟಿಫಿಕೇಟ್ ಬೇಡ್ವೋ ಅಲ್ಲೆಲ್ಲಾ ನಾನು ಅರ್ಜಿ ಸಲ್ಲಿಸಲು ಆರಂಭಿಸಿದೆ. ಒಂದೇ ಬಾರಿಗೆ ವಿವಿಧ ಕೋರ್ಸ್​ಗಳನ್ನು ಓದಬಹುದು ಅನ್ನೋದು ನನ್ನ ಲೆಕ್ಕಾಚಾರವಾಗಿತ್ತು. ಕಳೆದ 30 ವರ್ಷಗಳಿಂದ ಬೇರೆ ಬೇರೆ ಪದವಿ ಮತ್ತು ಡಿಪ್ಲೊಮಾ ಕೋರ್ಸ್​ಗಳಿಗೆ ಅರ್ಜಿ ಹಾಕೋದು, ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳೋದು ಇವಿಷ್ಟೇ ನನ್ನ ಕಾಯಕವಾಗಿತ್ತು. ಭಾನುವಾರದ ರಜಾ ದಿನಗಳಲ್ಲೆಲ್ಲ ಒಂದೋ ನನಗೆ ಎಕ್ಸಾಮ್ ಇರುತ್ತಿತ್ತು, ಇಲ್ಲದೇ ಇದ್ರೆ ಸಂಶೋಧನಾ ಲೇಖನ ಬರೆಯಬೇಕಾಗುತ್ತಿತ್ತು'' ಎನ್ನುವ ಪರ್ಥಿಬನ್ ತಮ್ಮ ಪರಿಶ್ರಮದ ವಿವರವನ್ನೆಲ್ಲ ಬಿಚ್ಚಿಟ್ಟಿದ್ದಾರೆ.

ವಿಶೇಷ ಅಂದ್ರೆ ಚೆನ್ನೈನ ವಿವಿಧ ಕಾಲೇಜುಗಳಲ್ಲಿ 100ಕ್ಕೂ ಹೆಚ್ಚು ಬೇರೆ ಬೇರೆ ವಿಷಯಗಳ ಬಗ್ಗೆ ಪರ್ಥಿಬನ್ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡ್ತಾರೆ. ಓದುವುದು ಅವರ ನೆಚ್ಚಿನ ಹವ್ಯಾಸ. ಅದನ್ನವರು ಎಂಜಾಯ್ ಮಾಡ್ತಾರಂತೆ. ಬೇರೆಲ್ಲಾ ವಿಷಯಗಳಲ್ಲಿ ಅದ್ಭುತ ಜ್ಞಾನ ಹೊಂದಿರುವ ಇವರಿಗೆ ಗಣಿತ ಅಂದ್ರೆ ಅಷ್ಟಕ್ಕಷ್ಟೆ. ಅದು ಕಷ್ಟದ ವಿಷಯ ಎನ್ನುತ್ತಾರೆ ಪರ್ಥಿಬನ್. ವಿಮಾ ಗಣಿತ ವಿಜ್ಞಾನ ವಿಷಯದಲ್ಲಿ ಪ್ರೊಫೆಸರ್ ಪರ್ಥಿಬನ್ ಅನುತ್ತೀರ್ಣರಾಗಿದ್ದರಂತೆ. ಕಾರಣ ಆ ವಿಷಯಕ್ಕೆ ಹೆಚ್ಚು ಲೆಕ್ಕ ಜ್ಞಾನ ಬೇಕು. ಆದ್ರೆ ಪರ್ಥಿಬನ್ ಅಷ್ಟು ಶ್ರಮಪಟ್ಟು ಓದಿರಲಿಲ್ಲವಂತೆ.

ಅತ್ಯಂತ ಸಂತೋಷದಿಂದ 145 ಡಿಗ್ರಿಗಳನ್ನು ಸಂಪಾದಿಸಿರುವ ಪರ್ಥಿಬನ್ ತಮ್ಮೆಲ್ಲಾ ಯಶಸ್ಸಿನ ಹಿಂದಿರುವವಳು ತಮ್ಮ ಪತ್ನಿ ಎನ್ನುತ್ತಾರೆ. ತಮ್ಮ ಸಾಧನೆಯ ಶ್ರೇಯ ಆಕೆಗೆ ಸಲ್ಲಬೇಕು ಎನ್ನುತ್ತಾರೆ. ಯಾಕಂದ್ರೆ ಪರ್ಥಿಬನ್ ಓದಿನಲ್ಲಿ ಬ್ಯುಸಿಯಾಗಿದ್ರಿಂದ ಇಡೀ ಕುಟುಂಬವನ್ನು ಸಂಭಾಳಿಸಿಕೊಂಡು, ಇಬ್ಬರು ಮಕ್ಕಳನ್ನು ಬೆಳೆಸಿದ್ದು ಅವರ ಪತ್ನಿ. ಆಕೆ ಕೂಡ ಬ್ಯಾಂಕ್ ಉದ್ಯೋಗಿ. ವಿಶೇಷ ಅಂದ್ರೆ ಅವರೂ 9 ಪದವಿಗಳನ್ನು ಗಳಿಸಿದ್ದಾರೆ. ಪ್ರೊಫೆಸರ್ ಪರ್ಥಿಬನ್ ಅವರ ಓದಿನ ಹಂಬಲ ಇನ್ನೂ ತೀರಿಲ್ಲ. ಇನ್ನಷ್ಟು ಮತ್ತಷ್ಟು ಕೋರ್ಸ್​ಗಳನ್ನು ಮಾಡುವ ಆಸೆ ಅವರಿಗೆ. ಅವರ ಶಿಕ್ಷಣದ ಹಸಿವನ್ನು ಎಲ್ಲರೂ ಮೆಚ್ಚಲೇಬೇಕು.

ಇದನ್ನೂ ಓದಿ..

ಬೆಂಗಳೂರಿಗೆ ಅಂದದ ಟಚ್​- ಗಪ್​ಚುಪ್​ ಆಗಿ ಮಾಡ್ತಿದ್ದಾರೆ ವರ್ಕ್​..!

ಸ್ಕೂಲ್ ಬ್ಯಾಗ್ ಭಾರ ಇಳಿಸಲು ಸರಳ ಉಪಾಯ..

Related Stories

Stories by YourStory Kannada