ವ್ಹೀಲ್ ಚೇರ್‍ನಲ್ಲಿ ಕುಳಿತಿರುವ ಒಬ್ಬ ಸೇನಾನಿ ತಮ್ಮ ಹೆಗಲ ಮೇಲೆ 500 ಜನರ ಭವಿಷ್ಯ ಹೊತ್ತು ಕುಳಿತ್ತಿದ್ದಾನೆ..!

ಟೀಮ್ ವೈ ಎಸ್

0

ಹತ್ತು ವರ್ಷಗಳ ಮುಂಚೆ ತನ್ನ ಮನೆಯೇ ತನ್ನ ಪ್ರಪಂಚ...

ಬಡ, ಅನಾಥ ಮತ್ತು ವಿಕಲಾಂಗ ಮಕ್ಕಳ ಸೇವೆಯೇ ಈತನ ಕಾಯಕ...

ಊಟ, ವಸತಿಯಿಂದ ಹಿಡಿದು ಬಟ್ಟೆ-ಬರೆಗಳವರೆಗೆ ಎಲ್ಲವೂ ಈತನದೇ ಜವಾಬ್ದಾರಿ...

ಕೆಲವರು ಚಟಗಳ ದಾಸರು, ಮತ್ತೆ ಕೆಲವರು ಹವ್ಯಾಸಗಳ ದಾಸರು, ಇನ್ನೂ ಕೆಲವರು ಗುರಿ, ಒಳ್ಳೆಯ ದಾರಿಗಳೆಣಿಸದ ಮರುಳರು. ಆದರೆ ಎಷ್ಟೋ ಜನರು ಹವ್ಯಾಸಗಳೇ ತನ್ನ ಜೀವನ ಎಂದು ಕೊಂಡವರು. ಹೀಗೆ ಇಲ್ಲೊಬ್ಬ ಕ್ಯಾಪ್ಟನ್ ನವೀನ್ ಗುಲಿಯಾ ಎಂಬುವವರು ಇಂತದೊಂದು ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಅದೇನಪ್ಪಾ ಅನ್ನುತ್ತೀರಾ..? ಇವರು ತಮ್ಮ ಬಣ್ಣ ಬಣ್ಣದ ಲೋಕದಲ್ಲಿ ಮತ್ತೊಬ್ಬರ ಅಂದರೆ ಅನಾಥರು, ಕಡು ಬಡವರು, ವಿಕಲಾಂಗರಿಗೆ ಬಣ್ಣದ ಬದುಕನ್ನು ಕಲ್ಪಿಸಿಕೊಟ್ಟಿದ್ದಾರೆ, ಅವರ ಆಶಯಗಳಿಗೆ ನೀರೆರೆದು ಪೋಷಿಸುತ್ತಾರೆ, ತಮ್ಮ ಕಾಲ ಮೇಲೆ ತಾವು ನಿಲ್ಲಲು ಇವರು ಶ್ರಮಿಸುತ್ತಾರೆ. ಆದರೆ ದುರಾದೃಷ್ಟವಶಾತ್ ಇವರಿಗೆ ತಮ್ಮ ಕಾಲ ಮೇಲೆ ತಾವು ನಿಲ್ಲಲು ಆಗದೇ ವ್ಹೀಲ್ ಚೇರನ್ನ ಅವಲಂಬಿಸಿದ್ದಾರೆ. ಆದರೂ ನೊಂದವರ ಜನರ ಬಾಳು ಹಸನಾಗಲು ತಮ್ಮ ಹೆಗಲು ಜೋಡಿಸಿ ದೀಪ ಬೆಳಗುತ್ತಿದ್ದಾರೆ ನವೀನ್ ಗುಲಿಯಾ.

ಕ್ಯಾಪ್ಟನ್ ನವೀನ್ ಗುಲಿಯಾ ತಮ್ಮ ಸಂಸ್ಥೆ(“ಅಪನಾ ದುನಿಯಾ ಅಪನಾ ಆಶಿಯಾನ”)ಯ ಮುಖಾಂತರ ನೂರಾರು ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ಹೊತ್ತು ಅವರ ಸೇವೆಯನ್ನು ತಂದೆ ತಾಯಿಗಳಿಗಿಂತಲೂ ಮಿಗಿಲಾಗಿ ಮಾಡುತ್ತಿದ್ದಾರೆ. ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ನನ್ನ ದೇಶಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಹಂಬಲದಿಂದ ಪ್ಯಾರಾ ಕಮಾಂಡೋದ ಸೇನೆಯಲ್ಲಿ 4 ವರ್ಷಗಳ ತರಬೇತಿಯನ್ನು ಪೂರೈಸಿದರು. ನಂತರ ಒಂದು ಸ್ಪರ್ಧೆಯಲ್ಲಿ 2ಸಾವಿರ ಅಡಿಗಳಿಂದ ಕೆಳಗೆ ಬಿದ್ದ ಅವರ ಮೂಳೆಗಳಿಗೆ ಗಂಭೀರವಾದ ಗಾಯಗಳಾದವು. 2ವರ್ಷಗಳ ಕಾಲ ಆಸ್ಪತ್ರೆಯಲ್ಲೇ ಉಳಿಯಬೇಕಾಯಿತು. ಆ ನಂತರ ಸೈನ್ಯವನ್ನು ತ್ಯಜಿಸಲೇಬೇಕಾದ ಅನಿವಾರ್ಯತೆ ಬಂದೊದಗಿತು.

ಕ್ಯಾಪ್ಟನ್‍ರವರು ಹೇಳುವ ಪ್ರಕಾರ ಇಂದು ಅವರು ಅನಾಥ, ಬಡ ಮತ್ತು ವಿಕಲಾಂಗ ಮಕ್ಕಳಿಗೆ ಮಾಡುತ್ತಿರುವ ಸೇವೆ ಸಮಾಜಕ್ಕೆ ತಾವು ಮಾಡುತ್ತಿರುವ ಋಣಸಂದಾಯ ಎನ್ನುತ್ತಾರೆ. ದೇಶಕ್ಕಾಗಿ ಸೈನ್ಯದಲ್ಲಿ ದುಡಿಯಬೇಕೆಂಬ ತಮ್ಮ ಹಂಬಲ ಕೈಗೂಡಲಿಲ್ಲ ಆದರೂ ಧೃತಿಗೆಡದೆ ತಮ್ಮ ದೇಶಕ್ಕೆ ಮತ್ತೇನನ್ನಾದರೂ ಮಾಡಬೇಕೆಂಬ ಆಸೆ ಮಾತ್ರ ಕಡಿಮೆಯಾಗಲಿಲ್ಲ. ಬಡಮಕ್ಕಳು, ಭಿಕ್ಷೆ ಬೇಡುವ ಮಕ್ಕಳು, ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುತ್ತಿದ್ದ ಮಕ್ಕಳನ್ನು ಒಟ್ಟುಗೂಡಿಸಿ “ಅಪನಾ ದುನಿಯಾ ಅಪನಾ ಆಶಿಯಾನ” ಸಂಸ್ಥೆಯ ಮೂಲಕ ಈ ಮಕ್ಕಳಿಗೆ ಆಸರೆಯಾಗಿ ನಿಂತರು.

ಚಳಿಗಾಲದ ಒಂದು ರಾತ್ರಿಯಲ್ಲಿ ಭಾರೀ ಹಿಮ ಬೀಳುತ್ತಿತ್ತು. ಇಂತಹ ಒಂದು ಸಂದರ್ಭದಲ್ಲಿ 2 ವರ್ಷದ ಹೆಣ್ಣುಮಗುವೊಂದು ಚಳಿಗೆ ನಡುಗುತ್ತಾ ಚೀರುತ್ತಿವ ಶಬ್ದ ಕೇಳಿಸುತ್ತಿತ್ತು. ಆ ಮಗುವಿನ ದೇಹದ ಮೇಲೆ ತೆಳುವಾದ ಕೆಲವೇ ಬಟ್ಟೆಗಳಿದ್ದವು. ಮತ್ತೆ ಕೆಲವು ಅನಾಥ ಮಕ್ಕಳು ಆ ಮಗುವನ್ನು ಎತ್ತಿಕೊಂಡು ಆಟ ಆಡಿಸಲು ಅನುವಾದುದನ್ನು ನೋಡಿದ ಕ್ಯಾಪ್ಟನ್ ಆ ಮಕ್ಕಳನ್ನು ಬೈದು ಆ ಮಗುವಿನ ಆರೈಕೆ ಮಾಡಲು ತಿಳಿಸಿದರು. ಸ್ವಲ್ಪ ಸಮಯ ಯೋಚಿಸಿದಾಗ ಅವರಿಗೆ ಹೊಳೆದುದೇನೆಂದರೆ ಇವರೆಲ್ಲಾ ಅನಾಥರು, ಭಿಕ್ಷುಕರು, ಬಡವರು. ಬದುಕಲು ಸರಿಯಾದ ಸೂರಿಲ್ಲ, ತಿನ್ನಲು ಹೊಟ್ಟೆಗೆ ಊಟವಿಲ್ಲ. “ದಿಕ್ಕಿಲ್ಲದವರಿಗೆ ದೇವರೇ ದಿಕ್ಕು” ಎಂಬಂತೆ ಯೋಚಿಸಿ ಈ ಮಕ್ಕಳಿಗಾಗಿ ಏನಾದರೂ ಮಾಡಬೇಕಲ್ಲ ಎಂಬ ಯೋಚನೆ ಮನದಾಳದಲ್ಲಿ ನೆಲೆಸಿತು.

ಪ್ರಾರಂಭದಲ್ಲಿ ಹಸಿದಿದ್ದ ಮಕ್ಕಳ ಬಗ್ಗೆ ಗಮನ ಹರಿಸಿದರು ಮತ್ತು ಅವರಿಗೆ ಊಟದ ವ್ಯವಸ್ಥೆ ಮಾಡಿದರು. ಹಂತ ಹಂತವಾಗಿ ಆ ಮಕ್ಕಳೊಂದಿಗೆ ಒಡನಾಟವನ್ನು ಬೆಳೆಸಿಕೊಳ್ಳುತ್ತಾ ಓದಲು ಆಸಕ್ತಿಯಿರುವ ಮಕ್ಕಳಿಗೆ ಶಾಲೆಗೆ ಸೇರಿಸಿ, ಅವರಿಗೆ ಬೇಕಾಗಿರುವ ಫೀಜು, ಸಮವಸ್ತ್ರ, ಇತರೆ ಎಲ್ಲಾ ವ್ಯವಸ್ಥೆಗಳನ್ನ ಮಾಡಿದರು. ಹೀಗೆ “ಅಪನಾ ದುನಿಯಾ ಅಪನಾ ಆಶಿಯಾನ”ಸಂಸ್ಥೆಯ ಮೂಲಕ ಗುರ್‍ಗಾಂವ್ ಮತ್ತು ಸುತ್ತಮುತ್ತಲ ಪ್ರದೇಶದ ಸುಮಾರು 500 ಮಕ್ಕಳನ್ನು ಸೇರಿಸಿಕೊಂಡು, ಅವರ ಲಾಲನೆ, ಪಾಲನೆ, ಇತರೆ ಮೇಲ್ವಿಚಾರಣೆಯನ್ನು ಹೊತ್ತುಕೊಂಡರು.

ಕ್ಯಾಪ್ಟನ್ ಗುಲಿಯಾರವರ ಪ್ರಯತ್ನದಿಂದ ಹಳ್ಳಿಗಳಲ್ಲಿ ಜಾಗೃತಿ ಅಭಿಯಾನ ಪ್ರಾರಂಭವಾಗಿದೆ. ಎಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಇದೆಯೋ ಅಲ್ಲಿ ಬಾಕ್ಸಿಂಗ್‍ನಂತಹ ಆತ್ಮರಕ್ಷಣೆ ಕಲೆಯ ಕಾರ್ಯಾಗಾರವನ್ನು ಪ್ರಾರಂಭಿಸಿದ್ದಾರೆ. ಇದರಿಂದ ಆತ್ಮರಕ್ಷಣೆಯಷ್ಟೇ ಅಲ್ಲದೆ ಈ ಪ್ರತಿನಿಧಿಗಳನ್ನು ದೇಶೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಪ್ರೋತ್ಸಾಹಿಸುವುದೇ ಇವರ ಉದ್ದೇಶವಾಗಿದೆ. ಹೀಗೆ ಇವರ ಪರಿಶ್ರಮ ಮತ್ತು ಪ್ರಯತ್ನದ ಫಲವಾಗಿ ಹಲವರು ಇಂದು ರಾಜ್ಯ ಮಟ್ಟವನ್ನು ಪ್ರತಿನಿಧಿಸುತ್ತಿದ್ದಾರೆ.

“ಅಪನಾ ದುನಿಯಾ ಅಪನಾ ಆಶಿಯಾನ” ಸಂಘಟನೆಯು ಇಂದು ಕಡು ಬಡವರು ಮತ್ತು ಅಶಕ್ತ ಮಕ್ಕಳಿಗಾಗಿ ಆಗಾಗ ಮೆಡಿಕಲ್ ಕ್ಯಾಂಪ್‍ಗಳ ವ್ಯವಸ್ಥೆ, ಹಸಿವಿನಿಂದ ನರಳುತ್ತಿರುವವರಿಗಾಗಿ, ಊಟದ ವ್ಯವಸ್ಥೆ, ಬಡಮಕ್ಕಳಿಗಾಗಿ ಬಟ್ಟೆ ಹೀಗೆ ವಿವಿಧ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದೆ. ಹರಿಯಾಣದ ಮಾನೇಸರ ಎಂಬ ಹಳ್ಳಿಯ ಸನಿ ಎಂಬ ಹುಡುಗನನ್ನು ಹತ್ತು ವರ್ಷಗಳ ಕಾಲ ಆಶ್ರಯ ನೀಡಿ ವಿದ್ಯಾಭ್ಯಾಸ ಮತ್ತಿತರ ಅಗತ್ಯಗಳನ್ನು ಪೂರೈಸಿತು ಈ ಸಂಸ್ಥೆ. ಆ ಹುಡುಗನು ಪ್ರತಿ ವರ್ಷ ತನ್ನ ತರಗತಿಯಲ್ಲಿ ಪ್ರಥಮ ಸ್ಥಾನ ಗಳಿಸುತ್ತಿದ್ದುದಲ್ಲದೆ, 10ನೇ ತರಗತಿಯಲ್ಲಿ ಶೇ. 95ಕ್ಕೂ ಅಧಿಕ ಅಂಕಗಳನ್ನು ಪಡೆದನು. ಹಾಗೂ ಪೋಲಿಯೋಗೆ ತುತ್ತಾಗಿದ್ದ ಗೀತಾ ಎಂಬ ಹೆಣ್ಣು ಮಗಳು ತನ್ನ ವಿದ್ಯಾಭ್ಯಾಸವನ್ನು ಕುಂಠಿತಗೊಳಿಸಿದ್ದಳು. ಈ ಸಂಸ್ಥೆಯ ವತಿಯಿಂದ ಮತ್ತೊಮ್ಮೆ ತನ್ನ ವಿದ್ಯಾಭ್ಯಾಸವನ್ನು ಮುಂದವರೆಸಿದ ಈಕೆ ಇಂದು ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ ಹಾಗೂ ಮತ್ತಷ್ಟು ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡುತ್ತಿದ್ದಾಳೆ. ಹೀಗೆ ಇಲ್ಲಿ ಸುಮಾರು 4 ವರ್ಷದಿಂದ 14ವರ್ಷದ ಮಕ್ಕಳವರೆಗೂ ಆಶ್ರಯ ಪಡೆದು ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ.

ಕ್ಯಾಪ್ಟನ್ ನವೀನ್ ಗುಲಿಯಾರವರು ಎಷ್ಟೋ ಬಡ ಮಕ್ಕಳ ಜವಾಬ್ದಾರಿಯನ್ನು ಹೊತ್ತಿದ್ದಾರಲ್ಲದೇ ಅವರೊಬ್ಬ ಗೌರವಾನ್ವಿತ ಲೇಖಕರು ಹೌದು. ಅವರ “ವೀರ್ ಉಸ್‍ಕಾ ಜಾನಿಯೇ” ಹಾಗೂ ಇನಕ್ವಿಸ್ಟ್ ಆಫ್ ದಿ ಲಾಸ್ಟ್ ವಿಕ್ಟರೀ” ಎಂಬ ಪುಸ್ತಕಗಳು ಇಂದೂ ಸಹ ಹೆಚ್ಚು ಬೇಡಿಕೆಯಲ್ಲಿದೆ. ಇಷ್ಟೆಲ್ಲಾ ಸಾಧನೆಗಳನ್ನು ಮಾಡಿರುವ ಕ್ಯಾಪ್ಟನ್ ಗುಲಿಯಾ ಇಂದೂ ವ್ಹೀಲ್ ಚೇರ್‍ನಲ್ಲಿ ಕುಳಿತು ಯಾವುದೇ ಬಲಹೀನತೆಗಳನ್ನು ಮೆಟ್ಟಿ ನಿಲ್ಲಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಏನೇ ಅಡ್ಡಿ-ಆತಂಕಗಳು ಬಂದರೂ ಅದನ್ನು ತಡೆದು ನಿಂತು ಬಡ ಮಕ್ಕಳ ಸೇವೆಯನ್ನು ಮೆರೆದಿದ್ದಾರೆ.

ಭವಿಷ್ಯದ ಯೋಜನೆಗಳ ಬಗ್ಗೆ ಕ್ಯಾಪ್ಟನ್ ಗುಲಿಯಾರನ್ನು ಪ್ರಶ್ನಿಸಿದಾಗ “ಗಾಂಧೀಜಿಯವರ ಪ್ರಕಾರ ಒಂದು ದೇಶದ ಅಶಕ್ತ ಜನರ ಆರ್ಥಿಕ ಪರಿಸ್ಥಿತಿಯನ್ನವಲಂಬಿಸಿ ತನ್ನ ದೇಶದ ಭವಿಷ್ಯ ಒಳಗೊಂಡಿರುತ್ತದೆ”. ಹಾಗೆಯೇ ಸಮಾಜದಲ್ಲಿ ಎಷ್ಟೋ ಜನ ಅಶಕ್ತ ಮಕ್ಕಳನ್ನೊಳಗೊಂಡಿದ್ದರೂ ಯಾರೂ ನೋಡುವವರಿಲ್ಲ. ಆದ್ದರಿಂದ ಇಂತಹ ಮಕ್ಕಳ ಪೋಷಣೆಯ ಜವಾಬ್ದಾರಿಯನ್ನು ಇನ್ನೂ ಅಧಿಕವಾಗಿ ಮಾಡಬಯಸುತ್ತೇನೆ ಎನ್ನುತ್ತಾರೆ.

ಲೇಖಕರು - ಹರೀಶ್ ಬಿಸ್ಟ್

ಅನುವಾದಕರು - ಬಾಲು

Related Stories

Stories by YourStory Kannada