ನಾಯಿಗಳಿಗೂ ಬದುಕಲು ಬಿಡಿ..!

ಟೀಮ್ ವೈ.ಎಸ್.ಕನ್ನಡ 

ನಾಯಿಗಳಿಗೂ ಬದುಕಲು ಬಿಡಿ..!

Sunday July 10, 2016,

4 min Read

ಭದ್ರಾ ಐದು ತಿಂಗಳ ಪ್ರಾಯದ ಪುಟ್ಟ ನಾಯಿಮರಿ. ದೇಶಾದ್ಯಂತ ಜನರಲ್ಲಿ ಭಾವನಾತ್ಮಕತೆ ಹೊರಸೂಸಲು ಕಾರಣವಾಗಿದ್ದಾಳೆ. ಈಕೆ ಥೇಟ್ ನನ್ನ ಶೇರುವಿನಂತೆ. ಅನಾರೋಗ್ಯದಿಂದ ಶೇರು ಎಸ್ಪಿಸಿಎ ಆಸ್ಪತ್ರೆಯಲ್ಲಿದ್ದಾಗ ನಾನವನನ್ನು ನೋಡಲು ಹೋಗಿದ್ದೆ. ಚಿಕ್ಕ ಕೋಣೆಯೊಂದರಲ್ಲಿ ಅವನ ಸುತ್ತ ನಾಯಿಗಳಿದ್ವು. ನನ್ನನ್ನು ಕಂಡೊಡನೆ ಓಡೋಡಿ ಬಂದ. ತನ್ನನ್ನು ಇಲ್ಲಿಂದ ಕರೆದೊಯ್ಯುವಂತೆ ಅವನ ಕಣ್ಣಲ್ಲಿ ಮನವಿಯಿತ್ತು. ಆದ್ರೆ ವೈದ್ಯರು ಅದಕ್ಕೆ ಒಪ್ಪಲಿಲ್ಲ. ಯಾಕಂದ್ರೆ ಅವನ ಹೊಟ್ಟೆಯಲ್ಲಿ ಗಡ್ಡೆ ಬೆಳೆದಿತ್ತು. ನಾನು ವಾಪಸ್ ಬರುವಾಗ ಅವನ ಕರುಣಾಪೂರಿತ ದೃಷ್ಟಿ ನನ್ನೆಡೆಗಿತ್ತು. ಶೇರುವಿನ ಆ ನೋಟವನ್ನು ಭದ್ರಾ ನೆನಪಿಸಿದ್ದಾಳೆ.

image


ಶೇರುವಿನದ್ದು ಕೂಡ ಇದೇ ಬಣ್ಣ, ಆದ್ರೆ ಇವಳಿಗಿಂತ ಕೊಂಚ ಎತ್ತರ ಜಾಸ್ತಿ. ಅವನಿಗೆಷ್ಟು ವಯಸ್ಸು ಅನ್ನೋದು ನನಗೆ ಗೊತ್ತಿಲ್ಲ, ಆದ್ರೆ ನಮ್ಮ ಅಪಾರ್ಟ್ಮೆಂಟ್ ಕಾಂಪ್ಲೆ ಕ್ಸ್​ನ ಭಾಗವೇ ಆಗಿದ್ದ. ನಾನವನನ್ನು ಮೊದಲು ನೋಡಿದಾಗ ಆರೋಗ್ಯವಾಗಿದ್ದ, ನಮ್ಮ ಮನೆಯ ಎರಡು ನಾಯಿಗಳ ಜೊತೆಗೆ ಅವನೂ ವಾಕಿಂಗ್ಗೆ ಬರುತ್ತಿದ್ದ. ಅವನ್ನು ಯಾರನ್ನೂ ಅವಲಂಬಿಸಿರಲಿಲ್ಲ, ಯಾವಾಗಲೂ ಬಾಲ ಅಲ್ಲಾಡಿಸುವುದು ರೂಢಿ. ನಮ್ಮ ಮನೆಯ ಚಿಕ್ಕ ನಾಯಿ ತುಂಟಾಟ ಮಾಡಿದ್ರೂ ಎಂದಿಗೂ ತಿರುಗೇಟು ಕೊಟ್ಟವನಲ್ಲ. ಯಾವಾಗ್ಲೂ ನಮ್ಮಿಂದ ದೂರದಲ್ಲೇ ನಡೆದುಕೊಂಡು ಬರುತ್ತಿದ್ದ, ಹಾಗಂತ ಬೇರೆ ಯಾವುದೇ ನಾಯಿಗೂ ನಮ್ಮ ಬಳಿ ಬರಲು ಬಿಡುತ್ತಿರಲಿಲ್ಲ. ನಮ್ಮ ಮನೆ ನಾಯಿಮರಿಗಳಿಗೆ ಪರಚುವ ಅಥವಾ ದೋಸ್ತಿ ಮಾಡಿಕೊಳ್ಳಲು ಬರುವ ನಾಯಿಗಳನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ. ನಮ್ಮ ಪಾಲಿಗೆ ಶೇರು ಗಾರ್ಡಿಯನ್ ಆಗಿದ್ದ. ಅಪಾರ್ಟ್ಮೆಂಟ್ನ ಕೆಲವರು ತೊಂದರೆಕೊಟ್ರೂ, ಆಚೆ ಕಳಿಸಬೇಕೆಂದು ಪ್ರಯತ್ನಿಸಿದ್ರೂ ಶೇರು ಮಾತ್ರ ಯಾರಿಗೂ ಕಡಿದಿಲ್ಲ.

ಒಮ್ಮೆ ತಲೆನೇವರಿಸುತ್ತಿದ್ದಾಗ ಅವನ ಕೂದಲು ತುಂಬಾ ಒರಟಾಗಿದೆ ಎನಿಸಿತ್ತು. ಆದ್ರೆ ನಾನದನ್ನು ನಿರ್ಲಕ್ಷಿಸಿದೆ, ಬರಬರುತ್ತ ಅವನಿಗೆ ಕೂದಲು ಉದುರಲಾರಂಭಿಸಿತು. ವೈದ್ಯರನ್ನು ಸಂಪರ್ಕಿಸಿದಾಗ ಸೋಂಕು ಇರಬೇಕೆಂದು ಅವರು ಅಭಿಪ್ರಾಯಪಟ್ರು. ನಾನು ಹಾಲು ಮತ್ತು ಆಹಾರದಲ್ಲಿ ಔಷಧ ಬೆರೆಸಿ ಅವನಿಗೆ ಕೊಡಲಾರಂಭಿಸಿದೆ. ಕೆಲವೇ ದಿನಗಳಲ್ಲಿ ಶೇರು ಮೈಮೇಲೆ ಕೂದಲು ಬೆಳೆದಿತ್ತು, ಆರೋಗ್ಯಪೂರ್ಣವಾಗಿ ಕಾಣುತ್ತಿದ್ದ. ಒಂದು ದಿನ ಬೆಳಗ್ಗೆ ಅವನ ಕತ್ತಿನ ಮೇಲೆ ಗಾಯವಿರೋದನ್ನು ನಾನು ಗಮನಿಸಿದೆ. ಅದರಲ್ಲಿ ಕೀವು ತುಂಬಿಕೊಂಡಿತ್ತು. ಅಷ್ಟು ನೋವಿದ್ದರೂ ಅವನು ಒಮ್ಮೆಯೂ ಅವನು ಅತ್ತಿರಲಿಲ್ಲ. ಗಾಯದ ಫೋಟೋ ತೆಗೆದುಕೊಂಡು ಮತ್ತೆ ಡಾಕ್ಟರ್ ಬಳಿ ಹೋದೆ. ಗಾಯಕ್ಕೆ ಹಚ್ಚಲು ಮುಲಾಮು ತೆಗೆದುಕೊಂಡು ಬತ್ತೆ. ನೋವಿದ್ದರೂ ಶೇರು ನನಗೆ ಅದನ್ನು ಸ್ಪರ್ಷಿಸಲು ಅಡ್ಡಿಪಡಿಸುತ್ತಿರಲಿಲ್ಲ. ಕೊನೆಗೆ ನಾನು ಆ್ಯಂಬುಲೆನ್ಸ್​ನಲ್ಲಿ ಅವನನ್ನು ಆಸ್ಪತ್ರೆಗೆ ಕಳುಹಿಸಿದೆ. ಅವನಿಗೆ ಆಸ್ಪತ್ರೆಗೆ ಹೋಗಲು ಸುತಾರಾಂ ಇಷ್ಟವಿರಲಿಲ್ಲ, ಹೆದರಿಬಿಟ್ಟಿದ್ದ.

ಭದ್ರಾ ನಿಜಕ್ಕೂ ಅದೃಷ್ಟವಂತೆ, ಎರಡು ಕಟ್ಟಡದಿಂದ ಬಿಸಾಡಿದ್ರೂ ಅಷ್ಟೇನೂ ಗಂಭೀರ ಗಾಯಗಳಾಗಿಲ್ಲ. ಕಾಲು ಮುರಿದಿದ್ದು, ಹಿಂದೆ ಗಾಯವಾಗಿದೆ. ಮೂರು ವಾರಗಳಲ್ಲಿ ಚೇತರಿಸಿಕೊಳ್ತಾಳೆ. ಆದ್ರೆ ಆಕೆಯನ್ನು ಹೊರಕ್ಕೆಸೆದ ಕ್ರೂರಿಗಳು ಯಾರು? ಅವರಿಗೆ ಮನಸ್ಸಾದ್ರೂ ಹೇಗೆ ಬಂತು ಅನ್ನೋದೇ ಪ್ರಶ್ನೆ. ಹೀಗೆ ಗಾಯಗೊಂಡು ಭದ್ರಾ 10 ದಿನಗಳ ಕಾಲ ಅಲ್ಲೇ ನರಳಾಡಿದ್ದಾಳೆ, ಊಟ ತಿಂಡಿಯಿಲ್ಲದೆ ಒದ್ದಾಡಿದ್ದಾಳೆ. ಮನುಷ್ಯರಾದ ನಾವು ಆರೋಗ್ಯದಲ್ಲಿ ಕೊಂಚ ಏರುಪೇರಾದ್ರೂ ಆಸ್ಪತ್ರೆಗೆ ದೌಡಾಯಿಸುತ್ತೇವೆ, ಅಂಥದ್ರಲ್ಲಿ ಈ ನಾಯಿಮರಿ ಅದೆಂಥಹ ನೋವು ಅನುಭವಿಸಿರಬಹುದು? ನಮ್ಮ ಬಗ್ಗೆ ಕಾಳಜಿ ತೆಗೆದುಕೊಳ್ಳಲು ಮನೆಯಲ್ಲಿ ಯಾರಾದರೂ ಇದ್ದೇ ಇರ್ತಾರೆ, ಆದ್ರೆ ಇವುಗಳ ಪಾಡೇನು?

ಇನ್ನೊಂದು ನಾಯಿಗೆ ನಾನು ನಿತ್ಯ ಊಟ ಹಾಕ್ತಿದ್ದೆ. ಇದ್ದಕ್ಕಿದ್ದಂತೆ ಅದು ನನ್ನ ಫ್ಲ್ಯಾಟ್ಗೆ ಬರುವುದನ್ನೇ ನಿಲ್ಲಿಸಿಬಿಟ್ತು. ನಾನೆಷ್ಟು ಹುಡುಕಾಡಿದ್ರೂ ಅದರ ಸುಳಿವು ಸಿಗಲಿಲ್ಲ. ಒಮ್ಮೆ ನಾನು ಕಾರ್ ಹತ್ತುತ್ತಿದ್ದಾಗ ನಾಯಿಯ ಅಳು ಕೇಳಿಸಿತು. ಅದೇ ನಾಯಿ ಹುರುಪಿನಿಂದ ನನ್ನ ಕಾರಿನ ಸುತ್ತ ಸುತ್ತುತ್ತಿತ್ತು. ನಾನದನ್ನು ಕರೆದೆ, ಆದ್ರೆ ಅದು ನೋವಿನಲ್ಲಿತ್ತು. ಬಾಲದಿಂದ ರಕ್ತ ಸೋರುತ್ತಿತ್ತು. ಯಾರೋ ಬಾಲವನ್ನು ಕತ್ತರಿಸಿ ಹಾಕಿದ್ದರು. ಇಷ್ಟು ತಿಂಗಳುಗಳ ನಂತರ ಆ ನಾಯಿ ನನ್ನನ್ನು ಹುಡುಕಿಕೊಂಡು ಬಂದಿದ್ದೇಕೆ? ನನ್ನಿಂದ ಅದಕ್ಕೆ ವೈದ್ಯಕೀಯ ನೆರವು ಬೇಕಿದೆಯೇ? ಅಥವಾ ನನ್ನ ಸಾಂಗತ್ಯ ಅದಕ್ಕೆ ಇಷ್ಟವಾಗಿರಬಹುದು ಅನ್ನೋದು ನನ್ನ ಊಹೆ ಅಷ್ಟೆ.

image


ಒಂದು ದಿನ ರಾತ್ರಿ ನಾನು ಕಚೇರಿಯಿಂದ ಹಿಂತಿರುಗಿ ಬಂದಿದ್ದೆ, ನನ್ನ ಮನೆಯ ಬಾಗಿಲ ಬಳಿ ಹೆಣ್ಣು ನಾಯಿಯೊಂದು ಪುಟ್ಟ ಮರಿಯೊಂದಿಗೆ ಕುಳಿತಿತ್ತು. ಅವುಗಳನ್ನು ನಾನು ಮೊದಲೆಲ್ಲೂ ನೋಡಿರಲಿಲ್ಲ. ನಾಯಿ ಮರಿಗೆ ಅನಾರೋಗ್ಯ ಕಾಡುತ್ತಿತ್ತು. ಬಾಲ ಅಲ್ಲಾಡಿಸಲೂ ಸಾಧ್ಯವಾಗುತ್ತಿರಲಿಲ್ಲ. ಅದಕ್ಕೆ ಹಾಲುಣಿಸಲು ನಾನು ಪ್ರಯತ್ನಪಟ್ಟೆ. ಮರಿಯ ಬಳಿ ಹೋದಾಗ ತಾಯಿ ನನಗೆ ಅಡ್ಡಿಪಡಿಸಲಿಲ್ಲ. ಕೂಡಲೇ ನಾನು ವೈದ್ಯರಿಗೆ ಕರೆ ಮಾಡಿದೆ, ಅವರು ಬೆಳಗ್ಗೆ ಬರುವಂತೆ ಸೂಚಿಸಿದ್ರು. ಆದ್ರೆ ಬೆಳಗ್ಗೆ ಹೋಗಿ ನೋಡಿದ್ರೆ ಆ ನಾಯಿಮರಿ ಉಸಿರಾಡುತ್ತಿರಲಿಲ್ಲ. ತಾಯಿ ತನ್ನ ಮರಿಯನ್ನು ಕಾಯುತ್ತ ಕೂತಿತ್ತು. ಹೆಣ್ಣು ನಾಯಿ ತನ್ನ ಮರಿಯನ್ನು ನನ್ನ ಮನೆಬಾಗಿಲಿಗೆ ಏಕೆ ಕರೆತಂತು? ನಾನೇನು ಅದಕ್ಕೆ ವಿಳಾಸ ಹೇಳಿದ್ದೆನೆ? ಬೇರೆಡೆ ಯಾಕೆ ಹೋಗಲಿಲ್ಲ? ನನ್ನಿಂದೇನಾದ್ರೂ ನೆರವು ಸಿಗಬಹುದೆಂಬ ನಿರೀಕ್ಷೆಯಿತ್ತೆ? ಈ ಎಲ್ಲ ಪ್ರಶ್ನೆಗಳಿಗೆ ಅದು ಉತ್ತರಿಸಲು ಅಸಾಧ್ಯ, ನಾನು ಊಹಿಸಿಕೊಳ್ಳಬೇಕಷ್ಟೆ. ನನ್ನ ನಾಯಿಮರಿಗಳಾದ ಮೋಗು ಮತ್ತು ಛೋಟು ಜೊತೆ ನಾನು ಮಾತನಾಡುತ್ತೇನೆ. ಅವು ಯಾವಾಗ ಖುಷಿಯಾಗಿರ್ತವೆ? ಯಾವಾಗ ಅವಕ್ಕೆ ಹಸಿವಾಗುತ್ತೆ ಎಲ್ಲವೂ ನನಗೆ ಗೊತ್ತು. ಹೊಟ್ಟೆ ಕೆಟ್ಟಿದ್ರೆ ರಾತ್ರಿ ನನ್ನನ್ನೆಬ್ಬಿಸಿ ಬಹಿರ್ದೆಸೆಗೆ ಕರೆದೊಯ್ಯುವಂತೆ ಮೋಗು ಕೇಳ್ತಾನೆ. ನಾನು ಬರುವುದು ತಡವಾಗುತ್ತೆ ಅಂದಾಗಲೆಲ್ಲ ಚಿಂತೆ ಮಾಡದಂತೆ ತಿಳಿಸಿ ಹೋಗ್ತೇನೆ, ಆಗ ಅವು ಶಾಂತವಾಗಿರುತ್ತವೆ.

ನನ್ನ ಅಪಾರ್ಟ್ಮೆಂಟ್ನಲ್ಲಿದ್ದ ಮಹಿಳೆಯೊಬ್ಳು ನಾಯಿಮರಿಗಳನ್ನು ನೋಡಿ ಹೆದರಿಕೊಂಡಿದ್ಲು. ಅವು ತನ್ನ ಸುತ್ತ ಸುತ್ತುತ್ತವೆ, ಎಲ್ಲಾದ್ರೂ ಕಚ್ಚಿಬಿಟ್ರೆ ಏನು ಗತಿ ಅನ್ನೋದು ಅವಳ ಆತಂಕ. ನನಗೆ ನಗು ಬಂತು, ನಾಯಿ ಕಚ್ಚೋದು ಸಾಮಾನ್ಯ ಮೂರನೇ ತರಗತಿಯಲ್ಲಿದ್ದಾಗ ನನಗೂ ನಾಯಿ ಕಡಿದಿತ್ತು. ಹಾಗಂತ ನಾಯಿಗಳ ಬಗ್ಗೆ ನನಗೆ ಪ್ರೀತಿ ಕಡಿಮೆಯಾಗಲಿಲ್ಲ. ಅವುಗಳಿಲ್ಲದೇ ಬದುಕನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಬೀದಿನಾಯಿಗಳ ಜೊತೆಗೂ ನಾನು ಆಟವಾಡಿದ್ದೇನೆ. ನಾನು ಕರೆದಾಗಲೆಲ್ಲ ಅವು ಬಾಲ ಅಲ್ಲಾಡಿಸುತ್ತವೆ. ಲುಧಿಯಾನಾ ಬಳಿ ಪೆಟ್ರೋಲ್ ಬಂಕ್ನಲ್ಲಿ ಸಿಕ್ಕ ನಾಯಿ ನನ್ನೊಂದಿಗೆ ಕೈಮಿಲಾಯಿಸಿತ್ತು. ನಾನದಕ್ಕೆ ಬಿಸ್ಕೆಟ್ ಕೊಟ್ಟೆ. ಸುಮಾರು ವರ್ಷಗಳ ಹಿಂದೆ ನನಗೆ ಕಚ್ಚಿದ್ದ ರಾಣಿ ಕೆಟ್ಟ ನಾಯಿಯೇನಲ್ಲ. ಅದು ಹಸಿದಿತ್ತು, ನನ್ನ ಕೈಯಲ್ಲಿದ್ದ ಬ್ರೆಡ್ ಕಸಿಯಲು ಯತ್ನಿಸಿತ್ತು. ಆ ಸಂದರ್ಭದಲ್ಲಿ ನನಗೆ ಕಡಿದಿತ್ತು. ನಾಯಿಗಳು ಮನುಷ್ಯರಿಗೆ ಕಚ್ಚುವ ಉದ್ದೇಶ ಹೊಂದಿರುತ್ತವೆ ಅಂತಾದ್ರೆ ಶೇರು ಯಾಕೆ ಹಾಗೆ ಮಾಡಲಿಲ್ಲ? ಅವರೆಲ್ಲ ನನ್ನ ಜೊತೆಗೆ ಆರಾಮಾಗಿರುತ್ತಾರೆ. ನನ್ನ ಮೈಮೇಲೆ ಹಾರಿ ಪ್ರೀತಿ ವ್ಯಕ್ತಪಡಿಸುತ್ತವೆ. ಮನುಷ್ಯ-ಹಾಗೂ ಪ್ರಾಣಿಗಳ ಸಂಘರ್ಷವನ್ನು ನಾನು ನೋಡಿಯೇ ಇಲ್ಲ.

ತಾನು ಹುಟ್ಟಿ ಬೆಳೆದ ಜಾಗ ಬಿಟ್ಟು ಹೋಗಲು ಶೇರುಗೆ ಇಷ್ಟವಿರಲಿಲ್ಲ. ಅವನಿಗೆ ಸಹಾಯ ಮಾಡಬೇಕೆಂದು ನಾನು ಬಯಸಿದೆ. ಆದ್ರೆ ಆಸ್ಪತ್ರೆಗೆ ಹೋದಮೇಲೆ ಅವನು ಬದುಕಿದ್ದು ಕೇವಲ ಎರಡು ವಾರ ಮಾತ್ರ. ಇಲ್ಲೇ ಇದ್ದಿದ್ದರೆ ಇನ್ನಷ್ಟು ದಿನ ಬದುಕಿರುತ್ತಿದ್ದನೇನೋ ಎಂದು ನನಗೆ ಪಾಪಪ್ರಜ್ಞೆ ಕಾಡಿತ್ತು. ಅಷ್ಟೇ ಅಲ್ಲ ಆ ನಾಯಿ ಮರಿ ನನ್ನ ಮನೆಯೆದುರು ಸತ್ತಾಗಲೂ ನನಗೆ ಹಾಗೇ ಅನಿಸಿತ್ತು, ಆ ತಾಯಿಯ ಬಳಿ ನಾನು ಕ್ಷಮಾಪಣೆ ಕೇಳಿದ್ದೆ. ಮಗನನ್ನು ಬದುಕಿಸುವಂತೆ ಕೇಳಿಕೊಂಡು ಅದು ಬಂದಿತ್ತು, ಆದ್ರೆ ತಡರಾತ್ರಿ ಆಸ್ಪತ್ರೆಗೆ ಕೊಂಡೊಯ್ಯಲು ನನ್ನಿಂದಾಗಲಿಲ್ಲ. ಅವುಗಳಿಗೂ ಗೌರವಯುತವಾಗಿ ಬದುಕುವ ಹಕ್ಕಿದೆ. ನಾವು ಅವರ ನೋವು ಮತ್ತು ದುಃಖವನ್ನು ಅರ್ಥಮಾಡಿಕೊಳ್ಳಬೇಕು. ನಿಜಕ್ಕೂ ಅವು ಅತ್ಯಂತ ಪ್ರೀತಿಪಾತ್ರ ಜೀವಿಗಳು. ಬೇಷರತ್ತಾದ ಪ್ರೀತಿ ಬಿಟ್ರೆ ಇನ್ನೇನೂ ನಿರೀಕ್ಷಿಸುವುದಿಲ್ಲ. ಮಾನವರಂತೆ ಪ್ರತಿಫಲಾಪೇಕ್ಷೆಯಿಲ್ಲ.

ಕಡಿಯುತ್ತವೆ ಅನ್ನೋ ಕಾರಣಕ್ಕೆ ಎಲ್ಲರೂ ನಾಯಿಗಳನ್ನು ದ್ವೇಷಿಸ್ತಾರೆ. ಅವು ಕಡಿಯುತ್ತವೆ ನಿಜ, ಆದ್ರೆ ಯಾರಾದ್ರೂ ಹೊಡೆದಾಗ, ಬೆದರಿಸಿದಾಗ, ಉತ್ತೇಜಿಸಿದಾಗ ಮಾತ್ರ. ಹಸಿದಾಗ, ಬಾಯಾರಿದಾಗ, ಆಹಾರಕ್ಕಾಗಿ ಹಪಹಪಿಸುತ್ತಿದ್ದ ಸಂದರ್ಭಗಳಲ್ಲಿ ಕಡಿಯುತ್ತವೆ. ಹಳ್ಳಿಗಳಲ್ಲಿ ನಾಯಿಗಳಿಗೆ ಆಹಾರ ಕೊಡುವುದು ಹಳೆಯ ಕಾಲದಿಂದಲೂ ಬಂದ ಸಂಪ್ರದಾಯ. ಮನುಷ್ಯರು ಮತ್ತು ಪ್ರಾಣಿಗಳ ಮಧ್ಯೆ ಸಾವಯವ ಸಂಬಂಧವಿದೆ. ಆದ್ರೆ ನಗರಗಳು ನಾಯಿಗಳನ್ನು ಅನಾಥರನ್ನಾಗಿ ಮಾಡಿವೆ, ಅವುಗಳಿಗೆ ಸುರಕ್ಷಿತ ಜಾಗವೇ ಇಲ್ಲ. ಪ್ರತಿಕೂಲ ವಾತಾವರಣದಲ್ಲಿ, ರಸ್ತೆಗಳಲ್ಲಿ ಅವು ಬದುಕಬೇಕಾಗಿದೆ. ಯಾವುದೇ ಕ್ಷಣದಲ್ಲಾದ್ರೂ ವಾಹನಗಳ ಅಡಿ ಸಿಕ್ಕು ಪ್ರಾಣ ಕಳೆದುಕೊಳ್ಳುವ ಭೀತಿ ಇದ್ದೇ ಇದೆ. ನಾವು ಮನುಷ್ಯರೇ ಅವುಗಳನ್ನು ಆಕ್ರಮಿಸಿಕೊಂಡಿದ್ದೇವೆ, ಅಮಾನವೀಯವಾಗಿ ನಡೆಸಿಕೊಳ್ಳುವುದಲ್ಲದೆ ನಾಯಿಗಳನ್ನೇ ದೂರುತ್ತಿದ್ದೇವೆ. 

ಲೇಖಕರು: ಆಶುತೋಷ್, ಎಎಪಿ ನಾಯಕ 

ಇದನ್ನೂ ಓದಿ...

ಕೈ ಹಿಡಿಯಿತು ಕೈ ರುಚಿಯ ರಹಸ್ಯ- ಶ್ರಮದ ಹಿಂದಿತ್ತು ಕಿಚ್ಚನ ಸಪೋರ್ಟ್​

ವೆಜಿಟೇರಿಯನ್​, ನಾನ್​ವೆಜಿಟೇರಿಯನ್​ಗಳ ಬಗ್ಗೆಯೂ ಲೆಕ್ಕ ಸಿಗುತ್ತದೆ..!