4 ವರ್ಷಗಳಲ್ಲಿ 1 ಬಿಲಿಯನ್ ಕಂಪನಿ- ಇದು ಬೆಂಗಳೂರಿನ ಬಯೋಕಾನ್ ಸ್ಟೋರಿ

ವಿಶಾಂತ್​​​​​

1

ಭಾರತದ ಅತೀ ದೊಡ್ಡ ಜೈವಿಕ ತಂತ್ರಜ್ಞಾನ ಸಂಸ್ಥೆ ಅನ್ನೋ ಹೆಗ್ಗಳಿಕೆ ಬೆಂಗಳೂರು ಮೂಲದ ಬಯೋಕಾನ್‍ಗೆ ಸಲ್ಲುತ್ತದೆ. ಇಂತಹ ಬಯೋಕಾನ್ ಸದ್ಯ ಹೊಸ ಉತ್ಪನ್ನಗಳ ಮೂಲಕ ಯೂರೋಪ್ ಮತ್ತು ಅಮೆರಿಕಾದಲ್ಲಿ ತನ್ನ ಕಾರ್ಯಕ್ಷೇತ್ರ ವಿಸ್ತರಿಸಿಕೊಳ್ಳಲು ಮುಂದಾಗಿದೆ. ಅಮೆರಿಕಾ ಮೂಲದ ಜೆನರಿಕ್ ಔಷಧ ತಯಾರಿಕಾ ಸಂಸ್ಥೆ ಮೈಲಾನ್ ಎನ್‍ವಿ ಜೊತೆ ಕೈಜೋಡಿಸಿದೆ. ಈ ಮೂಲಕ 2019ರ ಹೊತ್ತಿಗೆ 1 ಬಿಲಿಯನ್ ಡಾಲರ್ ಸಂಸ್ಥೆಯಾಗುವ ಗುರಿ ಹೊಂದಿದ್ದಾರೆ ಬಯೋಕಾನ್ ಸಂಸ್ಥಾಪಕಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಕಿರಣ್ ಮಜುಮ್ದಾರ್ ಶಾ.

ಬಯೋಕಾನ್ ಪ್ರಾರಂಭ

ಬಯೋಕಾನ್ ಜನ್ಮವಾಗಿದ್ದು 1978ರಲ್ಲಿ. ಕೇವಲ 10 ಸಾವಿರ ರೂಪಾಯಿ ಬಂಡವಾಳದಲ್ಲಿ ಬಾಡಿಗೆ ಮನೆಯ ಗ್ಯಾರೇಜ್‍ನಲ್ಲಿ ಇಬ್ಬರು ನೌಕರರೊಂದಿಗೆ ಕಿರಣ್ ಮಜುಮ್ದಾರ್ ಶಾ ಬಯೋಕಾನ್ ಶುರು ಮಾಡಿದ್ರು. ಬಿಯರ್ ಕಹಿಯಾಗದಿರಲು ಒಂದು ದ್ರವ ತಯಾರಿಸುವ ಮೂಲಕ ಬಯೋಕಾನ್ ಮೊದಲ ಹೆಜ್ಜೆಯಿಟ್ಟಿತು. ಕ್ರಮೇಣ 1983ರವರೆಗೂ ಸಂಸ್ಥೆ ಜೈವಿಕ ಇಂಧನ, ಜಾನುವಾರು ಆಹಾರ ಹಾಗೂ ಜವಳಿ ಉದ್ಯಮಗಳಿಗೆ ಮಿಶ್ರಿತ ಕಿಣ್ವಗಳನ್ನು ಪೂರೈಸುತ್ತಿತ್ತು. ನಂತರ 1980ರ ದಶಕದಲ್ಲೇ ಐಸಿಐಸಿಐ ಬ್ಯಾಂಕ್‍ನಿಂದ 2.5 ಲಕ್ಷ ಡಾಲರ್‍ನಷ್ಟು ಸಾಲ ಪಡೆದು ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸಗಳಿಗೆ ವಿನಿಯೋಗಿಸಿತು. ಕ್ರಮೇಣ 1990ರ ದಶಕದಲ್ಲಿ ಹೊಸ ಹೊಸ ಜೈವಿಕ ಔಷಧಗಳು ಹಾಗೂ ಇತರೆ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿತು ಬಯೋಕಾನ್ ಸಂಸ್ಥೆ. ಆ ಮೂಲಕ ಕೆಲ ಜೈವಿಕ ಔಷಧಗಳ ಪೇಟೆಂಟ್‍ ಅನ್ನೂ ಪಡೆಯಿತು. ಹೀಗೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ 1998ರಲ್ಲಿ 70 ಕೋಟಿ ರೂಪಾಯಿ ಆದಾಯ ಗಳಿಸಿದ್ದ ಬಯೋಕಾನ್, 2004ರ ಹೊತ್ತಿಗೆ 500 ಕೋಟಿ ರೂಪಾಯಿ ಆದಾಯ ಗಳಿಸಿತ್ತು. ಹೀಗೆ ಕೈಗಾರಿಕಾ ಕಿಣ್ವಗಳನ್ನು ತಯ್ಯಾರಿಸುತ್ತಿದ್ದ ಬಯೋಕಾನ್ ಅಂತಾರಾಷ್ಟ್ರೀಯ ಮಟ್ಟದ ಸ್ವತಂತ್ರ ಜೈವಿಕ ಔಷಧ ತಯಾರಿಕಾ ಕಂಪನಿಯಾಗಿ ಬೆಳೆಯಿತು.

ವಿದೇಶಗಳಲ್ಲಿ ಅದ್ರಲ್ಲೂ ಹೆಚ್ಚಾಗಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ತನ್ನ ಕಂಪನಿಯ ಕಾರ್ಯಚಟುವಟಿಕೆ ವಿಸ್ತರಿಸಿಕೊಳ್ಳಲು ಬಯೋಕಾನ್ ಹಲವಾರು ಅಂತಾರಾಷ್ಟ್ರೀಯ ಔಷಧ ತಯಾರಿಕಾ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ ಹಾಗೂ ಬಂಡವಾಳವನ್ನೂ ಹೂಡಿದೆ. ಜರ್ಮನಿಯ ಆಕ್ಸಿಕಾರ್ಪ್, ಅಬುದಾಭಿಯ ನಿಯೋ ಬಯೋಕಾನ್, ಅಮೆರಿಕಾದ ಅಮಿಲಿನ್, ಐಯಾಟ್ರಿಕಾ, ಮಿಲಾನ್, ಆಪ್ಟಿಮರ್, ವ್ಯಾಕ್ಸಿನೆಕ್ಸ್, ಅಬ್ರಾಕ್ಸಿಸ್ ಕಂಪನಿಗಳೊಂದಿಗೆ ಕೈ ಜೋಡಿಸಿದೆ. ಸದ್ಯ ಬಯೋಕಾನ್‍ನಲ್ಲಿ ಡಯಾಬೆಟಾಲಜಿ, ಮೂತ್ರಪಿಂಡ ಶಾಸ್ತ್ರ (ನೆಫ್ರಾಲಜಿ), ಗ್ರಂಥಿಶಾಸ್ತ್ರ (ಆಂಕಾಲಜಿ) ಮತ್ತು ಕಾರ್ಡಿಯಾಲಜಿ ವಿಭಾಗಗಳಲ್ಲಿ 36 ಜೈವಿಕ ಔಷಧಗಳನ್ನು ತಯಾರಿಸಲಾಗುತ್ತಿದೆ. ಈ ಔಷಧಗಳು ಭಾರತದಲ್ಲಿ ಮಾತ್ರವಲ್ಲ ಬದಲಿಗೆ ದೇಶ, ವಿದೇಶಗಳೊಂದಿಗೆ ಸಹಭಾಗಿತ್ವದೊಂದಿಗೆ ಬೇರೆ ಬೇರೆ ರಾಷ್ಟ್ರಗಳಿಗೂ ರಫ್ತಾಗುತ್ತಿದೆ.

ಇದಕ್ಕೆಲ್ಲಾ ಕಾರಣ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಮ್ದಾರ್ ಶಾ ಅಂತ ಮತ್ತೆ ಹೇಳಬೇಕಿಲ್ಲ. ಕೇವಲ 10 ಸಾವಿರ ರೂಪಾಯಿಯೊಂದಿಗೆ ಪ್ರಾರಂಭವಾದ ಬಯೋಕಾನ್ ಈಗ 1 ಬಿಲಿಯನ್ ಡಾಲರ್ ಸಂಸ್ಥೆಯಾಗುವತ್ತ ಹೆಜ್ಜೆಯಿಟ್ಟಿದೆ. ಹೀಗಾಗಿಯೇ ಅವರನ್ನು ದಿ ಎಕನಾಮಿಸ್ಟ್ ಪತ್ರಿಕೆ ಭಾರತದ ಜೈವಿಕ ತಂತ್ರಜ್ಞಾನದ ರಾಣಿ ಎಂದಿತ್ತು. ದಿ ನ್ಯೂ ಯಾರ್ಕ್ ಟೈಮ್ಸ್ ಪತ್ರಿಕೆ, ‘ಭಾರತದ ಸಂಶೋಧನೆಗಳ ಮಹಾರಾಣಿ’ ಎಂದಿತ್ತು. ಟೈಮ್ಸ್ ಮ್ಯಾಗಝೀನ್‍ನ ವಿಶ್ವದ ಅತ್ಯಂತ ಪ್ರಭಾವೀ 100 ವ್ಯಕ್ತಿಗಳಲ್ಲಿ ಕಿರಣ್ ಮಜುಮ್ದಾರ್ ಕೂಡ ಒಬ್ಬರು. ಫೋರ್ಬ್ಸ್​ ಸಾಲಿನ ವಿಶ್ವದ 100 ಅತ್ಯಂತ ಶಕ್ತಿಶಾಲಿ ಮಹಿಳೆಯರಲ್ಲಿ ಶಾ ಹೆಸರೂ ಇದೆ. ಹಾಗೇ ಎಕನಾಮಿಕ್ ಟೈಮ್ಸ್​​​ನ ವಿಶ್ವದ ಟಾಪ್ 50 ಮಹಿಳಾ ಉದ್ಯಮಗಳ ಸಾಲಿನಲ್ಲೂ ಕಿರಣ್ ಇದ್ದಾರೆ. ಹೀಗೆ ಬೆಂಗಳೂರಿನ ಕಿರಣ್ ಮಜುಮ್ದಾರ್ ಶಾ ಕೇವಲ ಭಾರತದಲ್ಲಷ್ಟೇ ಅಲ್ಲ, ವಿಶ್ವದಾದ್ಯಂತ ಹೆಸರು ಮಾಡಿದ್ದಾರೆ.

ಅಷ್ಟು ಮಾತ್ರವಲ್ಲ ಭಾರತದ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮಶ್ರೀ ಹಾಗೂ ಪದ್ಮಭೂಷಣ ಸೇರಿದಂತೆ ದೇಶ, ವಿದೇಶಗಳ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಕಿರಣ್ ಮಜುಮ್ದಾರ್ ಶಾ ಅವರ ಸಾಧನೆಗೆ ಸಂದಿವೆ. ಅಲ್ಲದೇ ಕಿರಣ್ ಮಜುಮ್ದಾರ್ ಶಾ ಸುಮಾರು 40 ಕೋಟಿ ರೂಪಾಯಿ ವೆಚ್ಚದಲ್ಲಿ ಮಜುಮ್ದಾರ್ ಶಾ ಕ್ಯಾನ್ಸರ್ ಸೆಂಟರ್ ಸ್ಥಾಪಿಸುವ ಮೂಲಕ ಸಮಾಜಮುಖೀ ಕೆಲಸಗಳಿಗೂ ಕೈ ಹಾಕಿದ್ದಾರೆ. ಜೊತೆಗೆ ಬೆಂಗಳೂರಿನ ಸರ್ವತೋಮುಖ ಬೆಳವಣಿಗೆಯತ್ತ ಗಮನ ಹರಿಸಿರುವ ಉದ್ಯಮಿಗಳ ಪೈಕಿ ಶಾ ಪ್ರಮುಖರು.

ಇಂತಹ ಬಯೋಕಾನ್ ಸದ್ಯ ಅಮೆರಿಕಾ ಮೂಲದ ಜೆನರಿಕ್ ಔಷಧ ತಯಾರಿಕಾ ಸಂಸ್ಥೆ ಮೈಲಾನ್ ಎನ್‍ವಿ ಜೊತೆ ಕೈಜೋಡಿಸಿದೆ. ಈ ಒಪ್ಪಂದ ಅಧಿಕೃತವಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆಯಲು ಇನ್ನೂ 18ರಿಂದ 20 ತಿಂಗಳ ಅವಧಿ ಬೇಕು. ಆ ನಂತರ 2019ರ ಹೊತ್ತಿಗೆ 1 ಬಿಲಿಯನ್ ಡಾಲರ್ ಸಂಸ್ಥೆಯಾಗುವ ಗುರಿ ಹೊಂದಿದೆ ಬಯೋಕಾನ್ ಕಂಪನಿ. ಅದರಲ್ಲಿ ಶೇಕಡಾ 25ರಷ್ಟು ಸಂಶೋಧನೆಗಳ ಮೂಲಕ ಉಳಿದ 75ರಷ್ಟು ಇತರೆ ಮೂಲಗಳಿಂದ ಆದಾಯ ಹರಿದುಬರಲಿದೆ. 2014- 15ನೇ ಸಾಲಿನಲ್ಲಿ ಬಯೋಕಾನ್ ಆದಾಯ 500 ಮಿಲಿಯನ್ ಡಾಲರ್‍ಗಿಂತ ಕೊಂಚ ಕಡಿಮೆಯಿತ್ತು. ಬಯೋಕಾನ್ ರಫ್ತು ಮಾಡುವ ಶೇಕಡಾ 70 ಪ್ರತಿಶತಃ ಔಷಧಗಳಲ್ಲಿ, ಅಮೆರಿಕಾ ಮತ್ತು ಯೂರೋಪ್ ದೇಶಗಳಲ್ಲೇ ಶೇಕಡಾ 50ರಷ್ಟು ಮಾರುಕಟ್ಟೆಯಿದೆ. ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಬಯೋಕಾನ್ ಮಲೇಷ್ಯಾದಲ್ಲಿರುವ ತನ್ನ ಘಟಕದಲ್ಲಿ 200 ಮಿಲಿಯನ್ ಡಾಲರ್‍ನಷ್ಟು ಬಂಡವಾಳ ಹೂಡಿದೆ. ಬಯೋಕಾನ್ ಔಷಧಗಳಿಗೆ ಹೆಚ್ಚು ಬೇಡಿಕೆಯಿದ್ದ ಸಿರಿಯಾ ಸೇರಿದಂತೆ ಹಲವು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸದ್ಯ ಪರಿಸ್ಥಿತಿ ಸರಿಯಿಲ್ಲದ ಕಾರಣ ಕೊಂಚ ಮಟ್ಟಿಗೆ ಸಂಸ್ಥೆಯ ಲಾಭಕ್ಕೆ ಕತ್ತರಿ ಬಿದ್ದಿದೆ. ಹೀಗಾಗಿಯೇ ಬಯೋಕಾನ್ ಉತ್ತರ ಆಫ್ರಿಕಾ, ದಕ್ಷಿಣ ಅಮೆರಿಕಾ ಹಾಗೂ ಏಷಿಯಾದ ಕೆಲ ಭಾಗಗಳಲ್ಲಿ ತನ್ನ ಕಾರ್ಯಕ್ಷೇತ್ರ ವಿಸ್ತರಿಸಿಕೊಳ್ಳಲು ಮುಂದಾಗಿದೆ. ಒಟ್ಟಾರೆ ಬೆಂಗಳೂರಿನ ಬಯೋಕಾನ್ ಇನ್ನು ನಾಲ್ಕು ವರ್ಷಗಳಲ್ಲಿ ಒಂದು ಬಿಲಿಯನ್ ಡಾಲರ್ ಸಂಸ್ಥೆಯಾಗಲು ಎಲ್ಲಾ ರೀತಿಯಲ್ಲೂ ಕ್ರಮಗಳನ್ನು ಕೈಗೊಂಡು, ಮುನ್ನುಗ್ಗಿದೆ.

Related Stories