ಲಕ್ಷಾಧಿಪತಿಯಾಗಲು 20 ಹವ್ಯಾಸಗಳು...

ಟೀಮ್​ ವೈ.ಎಸ್​​.ಕನ್ನಡ

ಲಕ್ಷಾಧಿಪತಿಯಾಗಲು 20 ಹವ್ಯಾಸಗಳು...

Thursday November 26, 2015,

5 min Read

ಅಮೆರಿಕದ ಉದ್ಯಮಿ, ಲೇಖಕ ಹಾಗೂ ಹೂಡಿಕೆದಾರ ಜೇಮ್ಸ್ ಆಲ್ಚರ್ ಅವರ ಅನುಭವದ ತುಣುಕು ಇದು. 20 ಸಂಸ್ಥೆಗಳನ್ನು ಕಟ್ಟಿದ ಜೇಮ್ಸ್ ಅದರಲ್ಲಿ 17 ಕಂಪನಿಗಳು ನೆಲಕಚ್ಚಿದ್ರೂ ಧೃತಿಗೆಡಲಿಲ್ಲ. ಅವರ ಧೈರ್ಯಕ್ಕೆ ಕಾರಣ ಏನು ಗೊತ್ತಾ? ಅವರಲ್ಲಿದ್ದ ಆ 20 ಹವ್ಯಾಸಗಳು. ಅವ್ಯಾವುವು ಅನ್ನೋದನ್ನು ಅವರಿಂದ್ಲೇ ಕೇಳೋಣ.

``ನನಗಿನ್ನೂ 20 ವರ್ಷ. ಈಗ 40ರ ಆಸುಪಾಸಿನಲ್ಲಿರುವವರು ಯಾರಾದ್ರೂ ಹೇಳಿ, ನಾನು ಅಪಾರ ಹಣ ಗಳಿಸಬೇಕೆಂದ್ರೆ ಏನು ಮಾಡಬೇಕು?'' ಈ ಪ್ರಶ್ನೆ ತಪ್ಪು, ಒಂಥರಾ ಅಸಹ್ಯವಾದ ಪ್ರಶ್ನೆ. ಇನ್ನೊಂದು ಪ್ರಶ್ನೆ, ನಾನು 40ರ ಆಸುಪಾಸಿನಲ್ಲಿದ್ದೇನೆ, 20ರ ಹರೆಯದವರು ಹೇಳಿ, ಹಗುರತನದ ಭಾವನೆ, ಯಾರ ಹಂಗಿಲ್ಲದೆ ಸಾಕು ಎಂಬ ತೃಪ್ತಿ ಉಂಟಾಗುವುದು ಯಾವಾಗ? ನನಗಿನ್ನೂ 20 ವರ್ಷ ಅಂದ್ಕೊಳ್ಳಿ, ಯಾರಾದ್ರೂ ಹೇಳಬಲ್ಲಿರಾ ಯಶಸ್ಸು ಅಂದ್ರೆ ಏನು ಅನ್ನೋದನ್ನು?

image


ನಾನು ಒಂಟಿ, ಸೂರ್ಯನ ಕಿರಣ ಒಂಟಿಯಾಗಿದ್ರೆ ಅದಕ್ಕೆ ಅಸ್ತಿತ್ವವಿಲ್ಲ, ಜೊತೆಯಾಗಿದ್ರೆ ಮಾತ್ರ ಸೂರ್ಯ ಪ್ರಕಾಶಮಾನವಾಗಿ ಉರಿಯಬಲ್ಲ, ಅದು ಹೇಗೆ ಗೊತ್ತಾ? ಈ ವಿಷಯದ ಮೇಲೆ ನನ್ನ ಸ್ನೇಹಿತರೊಬ್ರು ಚೆನ್ನಾಗಿ ಬರೆದಿದ್ದ. ಅವನ ಬಗ್ಗೆ ನನಗೆ ಗೊತ್ತು. ಆತ ಒಬ್ಬ ಲಕ್ಷಾಧೀಶ. ಅವನ ಉತ್ತರ ಚೆನ್ನಾಗಿದೆ, ಆತ ಹಣ ಹೇಗೆ ಮಾಡಿದ ಅನ್ನೋದು ಮುಖ್ಯವಲ್ಲ. ಹಣವೇ ಸರ್ವಸ್ವವಲ್ಲ. ಅದೊಂಥರಾ ಸೈಡ್ ಎಫೆಕ್ಟ್ ಇದ್ದಂತೆ, ಭೂಮಿಗೆ ಬೇಕಾದ ಶಕ್ತಿಯನ್ನೆಲ್ಲ ಪಡೆದ ಮೇಲೆ ಉಳಿಯುವ ಅಣು ತ್ಯಾಜ್ಯದಂತಹ ಉಪ ಉತ್ಪನ್ನ.

ಮೊದಲು ಚಟ ಅಥವಾ ಹವ್ಯಾಸಗಳತ್ತ ಗಮನಹರಿಸೋಣ. ಪ್ರತಿಯೊಬ್ಬರಿಗೂ ವಿಭಿನ್ನ ಹವ್ಯಾಸಗಳಿರುತ್ತೆ. ಕೈಗಳು ತುಂಡಾಗಿದ್ರೆ, ಅಂಥವರಿಗೆ ಹೊಸ ಕೈಗಳು ಬೇಕೆನಿಸಬಹುದು, ಇನ್ನು ಕೆಲವರಿಗೆ ಕಣ್ಣುಗಳ ಅಗತ್ಯವಿರಬಹುದು. ಇನ್ನೊಂದಷ್ಟು ಮಂದಿಗೆ ಎಲ್ಲವನ್ನೂ ಸರಿಯಾಗಿ ಕೇಳಿಸಿಕೊಳ್ಳುವ ಮನಸ್ಸಿರಬಹುದು. ಇಂತಹ 20 ಹವ್ಯಾಸಗಳು. ಮೊದಲು ಹವ್ಯಾಸ ಅಂದ್ರೇನು ಅನ್ನೋದನ್ನು ಸ್ಪಷ್ಟಪಡಿಸ್ತೇನೆ. ಬೆಳಗಿನ ಜಾವ 3 ಗಂಟೆಗೆ ನಾನು ಕಂಠಪೂರ್ತಿ ಕುಡಿದು ಗಟರ್‍ನಲ್ಲಿ ಬಿದ್ದಿದ್ದೆ. ನನ್ನನ್ಯಾರಾದ್ರೂ ಮೇಲಕ್ಕೆತ್ತಲಿ ಅಂತಾ ಕಾಯ್ತಿದೆ. ಇದು ಕೂಡ ಒಂದು ಹವ್ಯಾಸವೇ. ನನ್ನಷ್ಟಕ್ಕೆ ನಾನೇ ಅಲ್ಲಿಂದ ಎದ್ದು ಶಾಂತಚಿತ್ತನಾಗಿ ತೆರಳುವ ಹವ್ಯಾಸ ನನಗಿಲ್ಲ. ಪ್ರತಿದಿನ ಶೇ.1ರಷ್ಟು ಸುಧಾರಿಸಲು ನಾನು ಬಯಸ್ತೇನೆ, ಆದ್ರೆ ಅದು ಮುಗಿಯದ ಕಥೆ. ಇಬ್ಬರು ಪುಟ್ಟ ಹೆಣ್ಣುಮಕ್ಕಳಿಗಾಗಿ ನಾನೊಬ್ಬ ಒಳ್ಳೆಯ ವ್ಯಕ್ತಿಯಾಗಬೇಕು ಅನ್ನೋದನ್ನು ನೆನಪಿಟ್ಟುಕೊಳ್ಳಬೇಕು.

20 ಹವ್ಯಾಸಗಳು...

  • ನಿಮಗೆ ಬೇಕಾದ, ಪ್ರೀತಿ ಪಾತ್ರರ ಸುತ್ತ ಪ್ರತಿದಿನವೂ ಇರಬೇಕೆಂಬ ಆಸೆ.

ಇದೊಂದು ಕಠಿಣ ಹವ್ಯಾಸ. ಪ್ರತಿದಿನ ಕೊಂಚವಾದ್ರೂ ಸುಧಾರಿಸಿಕೊಳ್ಳಿ. ಬೋನ್ಸಾಯಿ ಗಿಡ ಪ್ರತಿ ದಿನ ಸ್ವಲ್ಪ ಸ್ವಲ್ಪವೇ ಬೆಳವಣಿಗೆ ಕಾಣುತ್ತೆ. ಆದ್ರೆ ಗಿಡವನ್ನು ವರ್ಷಗಟ್ಟಲೆ ಕಷ್ಟಪಟ್ಟು ಬೆಳೆಸುವ ಕಲೆ ಬೋನ್ಸಾಯಿ ಮಾಸ್ಟರ್‍ಗೆ ಮಾತ್ರ ಗೊತ್ತು.

  • ಪ್ರತಿದಿನ ಸಾವನ್ನು ದೂರವಿಡಿ

ನಿಮ್ಮ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುವ ವಿಚಾರದಿಂದ ದೂರವಿರಿ. ಪ್ರತಿದಿನ ಆರೋಗ್ಯ ಕಾಪಾಡಿಕೊಳ್ಳಿ. ಯಾಕಂದ್ರೆ ಆಸ್ಪತ್ರೆಯ ಬೆಡ್‍ನಿಂದ ಮೇಲಕ್ಕೇಳುವಾಗ ನೀವು ಶ್ರೀಮಂತರಾಗಿರಲು ಸಾಧ್ಯವಿಲ್ಲ. ವಯಸ್ಸು ಹೆಚ್ಚಿದಂತೆಲ್ಲ ನಮ್ಮಲ್ಲಿ ಪರಿವರ್ತನೆಯಾಗುತ್ತೆ ಅನ್ನೋ ಭಾವನೆಯಿದೆ. ಆದ್ರೆ ಇದು ಸತ್ಯವಲ್ಲ, ನಾವು ಬದಲಾದ್ರೆ ಮಾತ್ರ ಬದುಕಿನಲ್ಲಿ ಮುಂದೆ ಬರಲು ಸಾಧ್ಯ.

  • ಕಠಿಣ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ

ಇದೊಂದು ಅಭ್ಯಾಸ. ಕೋಪ ಬಂದಾಗ, ಒತ್ತಡದಲ್ಲಿದ್ದಾಗ ಅದ್ಭುತ ಎನಿಸುವ ಒಂದನ್ನು ಕಂಡುಕೊಳ್ಳಿ. ನೀವು ಕೋಪ ಮತ್ತು ಒತ್ತಡದಲ್ಲಿದ್ದೀರಾ ಅನ್ನೋದನ್ನು ಗಮನಿಸುವುದೇ ಒಂದು ಕಠಿಣ ಭಾಗ. ಸಿನಿಮಾ ನೋಡ್ತಾ ಭಯವಾದ್ರೂ, ಇದು ಕೇವಲ ಸಿನಿಮಾ ಅಲ್ವೇ ಅನ್ನೋ ಉದ್ಘಾರಕ್ಕೂ ಇದಕ್ಕೂ ಇರುವ ವ್ಯತ್ಯಾಸವೇ ಅದು.

  • ಪ್ರತಿದಿನ 10 ಐಡಿಯಾಗಳನ್ನು ಬರೆದಿಡಿ

ನಾನು ಲಕ್ಷಾಂತರ ಬಾರಿ ಬರೆದಿದ್ದೇನೆ. "ಲಿಮಿಟ್‍ಲೆಸ್'' ಚಿತ್ರದಲ್ಲಿ ಬ್ರಾಡ್ಲಿ ಕೂಪರ್ ಒಂದು ಮಾತ್ರೆ ಸೇವಿಸಿದ್ರಿಂದ ಸೂಪರ್ ಮ್ಯಾನ್ ಆಗಿ ಬದಲಾಗ್ತಾನೆ. ಪ್ರತಿದಿನ 10 ಐಡಿಯಾಗಳನ್ನು ಬರೆದಿಡುವುದು ಆ ಮಾತ್ರೆಗೆ ಸರಿಸಮನಾದದ್ದು. 6 ತಿಂಗಳು ಇದನ್ನು ಮಾಡಿ ನೋಡಿ, ಫಲಿತಾಂಶ ನಿಮ್ಮ ಮುಂದಿರುತ್ತೆ.

  • ಬೀಜ ನೆಡಿ

ಕೆಲವರಿಗೆ ಜೀವನದಲ್ಲಿ ಒಂದೇ ಗುರಿ, ಒಂದೇ ಉದ್ದೇಶ ಇರುತ್ತೆ. ಹತ್ತಾರು ಬೀಜಗಳನ್ನು ನೆಡುವುದರಲ್ಲೇ ನಿಜವಾದ ಸಂಕೇತವಿದೆ. ನೀವು ನೆಟ್ಟ ಬೀಜಗಳಲ್ಲಿ ಶೇ.1ರಷ್ಟು ಗಿಡಗಳಾಗಿ ಬೆಳೆದರೂ ಅದರಿಂದ ಶೇ.50ರಷ್ಟು ಹೂಗಳನ್ನು ಪಡೆಯಬಹುದು. ಅದು ಉದ್ಯಾನವನವೆಂಬ ಸಂಖ್ಯಾಶಾಸ್ತ್ರ. ಬೀಜಗಳು ಯಾವುದು ಗೊತ್ತಾ? ಕೃತಜ್ಞತಾ ಪತ್ರ ಕಳಿಸಿ, ಆರಂಭದ ಪತ್ರ ಕಳಿಸಿ, ಜನರಿಗೆ ಐಡಿಯಾಗಳನ್ನು ಕೊಡಿ, ವ್ಯಾಯಾಮ ಮಾಡಿ, ಚೆನ್ನಾಗಿ ತಿನ್ನಿ, ನಿಮ್ಮ ಸಂಗಾತಿಗೆ ಆಗಾಗ ಸರ್‍ಪ್ರೈಸ್ ಕೊಡಿ, ಒಂದು ವೆಬ್‍ಸೈಟ್ ಅಭಿವೃದ್ಧಿಪಡಿಸಿ, ಒಂದು ಲೇಖನ ಬರೆಯಿರಿ, ಪುಸ್ತಕ ಓದಿ, ಇಂತಹ ನೂರಾರು ಬೀಜಗಳ ಬಗ್ಗೆ ಯೋಚಿಸಿ, ಪ್ರತಿದಿನ ಒಂದನ್ನಾದ್ರೂ ನೆಡಿ.

  • ನೆಪ ಬೇಡ

ದೂಷಣೆ, ದೂರುವಿಕೆ, ಹಾಗೂ ವಿವರಣೆ ಬರಿದು ಮಾಡಿದಂತ ಭಾವನೆಗಳು. ನನಗೆ ಸಮಯವೇ ಇಲ್ಲ ಅಂತಾ ಎಲ್ರೂ ಹೇಳೋದು ಸಾಮಾನ್ಯ. ಆಕಾಶಯಾನಿಯಾಗಲು ನನಗೆ ಸಮಯವೇ ಸಿಗಲಿಲ್ಲ ಅನ್ನೋ ಮಾತುಗಳೆಲ್ಲ ಕೇವಲ ನೆಪಗಳಷ್ಟೆ.

  • ವಾರೆನ್ ಬಫೆಟ್‍ರ 5/25 ನಿಯಮ

ನೀವು ಜೀವನದಲ್ಲಿ ಮಾಡಬೇಕೆಂದಿರುವ 25 ಕೆಲಸಗಳನ್ನು ಪಟ್ಟಿ ಮಾಡಿಕೊಳ್ಳಿ. ಅದರಲ್ಲಿ ಟಾಪ್ 5ನ್ನು ಮಾಡಿ ಮುಗಿಸಿ. ಉಳಿದ 20 ಕೆಲಸಗಳ ಬಗ್ಗೆ ಪದೇಪದೇ ಯೋಚನೆ ಮಾಡಬೇಡಿ. ಇಲ್ಲವಾದಲ್ಲಿ ಪ್ರಮುಖವಾಗಿ ಮಾಡಬೇಕಾದ 5 ಕಾರ್ಯಗಳ ಬಗ್ಗೆ ನೀವು ಗಮನಕೇಂದ್ರೀಕರಿಸಲು ಸಾಧ್ಯವಿಲ್ಲ.

  • ಅನುಸರಿಸಿ

ಬೇಡವಾಗಿದ್ದನ್ನೇ ಮಾಡುವ ಕೆಟ್ಟ ಹವ್ಯಾಸ ನನಗಿದೆ. ಒಂದು ದಿನ ಕೆಲ ಕುತೂಹಲಕಾರಿ ವ್ಯಕ್ತಿಗಳೊಂದಿಗೆ ಊಟಕ್ಕೆ ಕುಳಿತಿದ್ದೆ. ಆಗ ಅವರನ್ನು ಹೇಗೆ ಅನುಸರಿಸಬೇಕೆಂಬುದರ ಅರಿವು ನನಗಿತ್ತು. ಆದ್ರೆ ಅದನ್ನು ಮಾಡಲು ಇವತ್ತಿಗೂ ನನ್ನಿಂದಾಗಿಲ್ಲ. ಹಾಗಾಗಿ ಇದೊಂದು ಅಭ್ಯಾಸ. ನಾನದನ್ನು ಮಾಡಿಯೇ ತೀರುತ್ತೇನೆ. `ನೈಸ್ ಟು ಮೀಟ್ ಯು' ಅನ್ನೋ ಇಮೇಲ್ ಕೂಡ ಫಾಲೋ ಅಪ್ ಎನಿಸಿಕೊಳ್ಳುತ್ತೆ.

  • ಕೋಣೆಯಲ್ಲಿರುವ ಅತ್ಯಂತ ಚುರುಕಾದ ವ್ಯಕ್ತಿಯ ಪಕ್ಕದಲ್ಲೇ ಇರಿ

ಹೆರಾಲ್ಡ್ ರೇಮಿಸ್, ಸ್ಟೀವ್ ಜಾಬ್ಸ್, ಕ್ರೇಗ್ ಸಿಲ್ವರ್‍ಸ್ಟೀನ್ ಹಾಗೂ ಕನ್ಯೆ ವೆಸ್ಟ್ ಕೂಡ ಇದನ್ನೇ ಮಾಡಿದ್ದಾರೆ. ಕೋಣೆಯಲ್ಲಿರುವ ಅತ್ಯಂತ ಚುರುಕಾದ ವ್ಯಕ್ತಿ ವಿಶೇಷವಾದುದನ್ನು ಏನು ಮಾಡ್ತಾನೆ ಅನ್ನೋದನ್ನು ಸೂಕ್ಷ್ಮವಾಗಿ ಗಮನಿಸಿ. ಯಾವ ಪ್ರಶ್ನೆಯನ್ನೂ ಕೇಳದೆ ಅವನನ್ನು ಅನುಸರಿಸಿ.

  • ನೀವು ಪ್ರೀತಿಸುವ ಕೆಲಸವನ್ನು ಮಕ್ಕಳಂತೆ ಇಷ್ಟಪಟ್ಟು ಮಾಡಿ

ಬರೆಯುವುದು ನನಗಿಷ್ಟ, ಹಾಗಾಗಿ ನಾನು ಪ್ರತಿದಿನ ಬರೆಯುತ್ತೇನೆ. ಹುಡುಗಿಯರ ಜೊತೆ ಬೆರೆಯುವುದು ನನಗಿಷ್ಟ, ನಿತ್ಯ ಅದನ್ನೂ ಮಾಡುತ್ತೇನೆ. ಕೆಲವರಿಗೆ ಆಟೋಟಗಳಲ್ಲಿ ಆಸಕ್ತಿಯಿದೆ, ಆದ್ರೆ ನನಗಿಲ್ಲ.

  • ಪ್ರಶ್ನೆಗಳನ್ನು ಕೇಳಿ

ವಿಶ್ವದ ಖ್ಯಾತ ಸಿನಿಮಾ ನಿರ್ದೇಶಕ ಬ್ರೈನ್ ಗ್ರೇಝರ್, ಕುತೂಹಲಕಾರಿ ಸಂಭಾಷಣೆ ನಡೆಸಬಹುದಿತ್ತು. ಆದ್ರೆ ತಮಗೆ ಬೇಕಾದವರನ್ನೆಲ್ಲ ಅವರು ಕರೆಸಿಕೊಳ್ತಿದ್ರು, ತಾವ್ಯಾರು ಅನ್ನೋದನ್ನು ವಿವರಿಸಿ ಪ್ರಶ್ನೆ ಕೇಳ್ತಾ ಇದ್ರು. ರೋನ್ ಹೊವಾರ್ಡ್ ಅವರನ್ನು ಬ್ರೈನ್ ಭೇಟಿಯಾಗಿದ್ದು ಕೂಡ ಇದೇ ರೀತಿಯಲ್ಲಿ. ಇಬ್ಬರೂ ಜೊತೆಯಾಗಿ ಇಮ್ಯಾಜಿನ್ ಎಂಟರ್‍ಟೈನ್‍ಮೆಂಟ್ ಆರಂಬಿಸಿದ್ರು. ಈಗ ಅತಿ ಜನಪ್ರಿಯ ಟಿವಿ ಶೋ ಇವರದ್ದೇ.

  • ತಪ್ಪುಗಳನ್ನು ಮಾಡಿ

ಕಠಿಣ ಸರ್ವ್‍ಗಳನ್ನು ಮಾಡೋದು ಹೇಗೆ ಎಂಬುದನ್ನು ನಾನು ನನ್ನ ಮಗಳಿಗೆ ಕಲಿಸುತ್ತಿದ್ದೆ. ಸರ್ವ್ ಮಾಡೋದು ಅವಳಿಗೆ ಗೊತ್ತು, ಆದ್ರೆ ಅದು ತುಂಬಾ ಮೃದುವಾಗಿರುತ್ತೆ. ಈಸಿ ಟು ರಿಟರ್ನ್. ಆಕೆ ಕಠಿಣ ಸರ್ವ್ ಮಾಡೋಕೆ ಪ್ರಯತ್ನಿಸಿದ್ಲು. ಸಫಲಳಾಗದೇ ಇದ್ದಿದ್ರಿಂದ ನಿರಾಸೆಯೂ ಆವರಿಸಿತ್ತು. ಆದ್ರೆ ಪರಿಶ್ರಮದ ಫಲವಾಗಿ ಅದರಲ್ಲಿ ಯಶಸ್ವಿಯಾಗಿದ್ದಾಳೆ. ತಪ್ಪುಗಳೇ ಸುಧಾರಣೆಗೆ ಮೂಲವಾಗಿವೆ.

  • ನಿದ್ದೆ ಮಾಡಿ

ಈ ಬಗ್ಗೆ ಭಿನ್ನ ಅಭಿಪ್ರಾಯಗಳಿವೆ. ನಾನು ರಾತ್ರಿ 9 ಗಂಟೆ ಮಲಗುತ್ತೇನೆ. ನೀವು ನಿದ್ದೆಯಿಂದೆದ್ದು 2-5 ತಾಸುಗಳ ವರೆಗೆ ನಿಮ್ಮ ಮೆದುಳು ಚಟುವಟಿಕೆಯಿಂದಿರುತ್ತದೆ. ಆ ಸಮಯದಲ್ಲೇ ಮಹತ್ವದ ಕಾರ್ಯಗಳನ್ನು ಮುಗಿಸಿಕೊಳ್ಳಿ. ಕೇವಲ 3-5 ತಾಸು ಮಲಗುತ್ತೇನೆ ಎನ್ನುವವರಿಂದ ದೂರವೇ ಇದ್ದರೆ ಒಳಿತು.

  • `ಇಲ್ಲ' ಎಂದುಬಿಡಿ

ನಾನು ಸಭೆಗಳಲ್ಲಿ ಭಾಗವಹಿಸಲು ಹೆಚ್ಹೆಚ್ಚು ಪ್ರಯಾಣ ಮಾಡಬೇಕಾಗಿತ್ತು. ಆದ್ರೆ ಅದರಿಂದ ನನಗೆ ನಯಾಪೈಸೆ ಗಳಿಕೆ ಇರಲಿಲ್ಲ. ಹೀಗೆ ವಾರಗಟ್ಟಲೆ ಸಮಯ ವೇಸ್ಟ್ ಆಗಿದ್ದೂ ಇದೆ.

- ಪ್ರತಿನಿತ್ಯ ಕೊಂಚ ಮಾತ್ರ

ನಾನೊಂದು ಕಾದಂಬರಿ ಬರೆಯಬೇಕು ಎಂದುಕೊಂಡಿದ್ದೆ. ದಿನವೂ ಕೆಲ ಪ್ಯಾರಾಗ್ರಾಫ್‍ಗಳಷ್ಟು ಬರೆಯುತ್ತಿದ್ದೆ. ಹೀಗೆ ಮಾಡಿದ್ರೆ ನೀವು ಒಂದು ವರ್ಷಕ್ಕೆ 4 ಕಾದಂಬರಿಗಳನ್ನು ಬರೆಯಬಹುದು. ಅದರಲ್ಲಿ ಮೂರು ಕೆಟ್ಟದಾಗಿರಬಹುದು, 10 ಕೆಟ್ಟದಾಗಿರಬಹುದು, ಅಥವಾ ಮೊದಲು ಬರೆದ 20 ಕೆಟ್ಟದಾಗಿರಬಹುದು. ಆದ್ರೆ 5 ವರ್ಷಗಳಲ್ಲಿ ನೀವು ಯಶಸ್ವಿಯಾಗುತ್ತೀರಾ.

  • ಆತುರ ಬೇಡ

ನಾನು ಬದುಕಿನಲ್ಲಿ ಯಶಸ್ವಿಯಾದ 150 ಜನರನ್ನು ಸಂದರ್ಶಿಸಿದ್ದೇನೆ. ಅವರೆಲ್ಲ ಯಶಸ್ಸಿನ ಮೆಟ್ಟಿಲೇರಲು 10-20 ವರ್ಷ ಸಮಯ ತೆಗೆದುಕೊಂಡಿದ್ದಾರೆ. ಚಿಕ್ಕ ಚಿಕ್ಕ ಯಶಸ್ಸನ್ನೂ ಆಚರಿಸಿ. ದೀರ್ಘಕಾಲದಿಂದ ಹಿಡಿದು ಒಂದೇ ರಾತ್ರಿಯಲ್ಲಿ ಸಿಕ್ಕ ಯಶಸ್ಸಿನ ನಡುವೆ ಹತ್ತಾರು ಇಂತಹ ಸಣ್ಣ ಪುಟ್ಟ ಖುಷಿ ಇದ್ದೇ ಇರುತ್ತೆ. ಸಣ್ಣ ಯಶಸ್ಸನ್ನು ಶ್ಲಾಘಿಸಿದ್ರೆ ಅದು ನಿಮ್ಮ ಮುಂದಿನ ಪ್ರಯತ್ನಕ್ಕೆ ನಾಂದಿಯಾಗುತ್ತದೆ.

  • ಪ್ರೀತಿ

ಪ್ರೀತಿ ಅಂದ್ರೇನು ಅನ್ನೋದನ್ನು ನಾನು ನಿಮಗೆ ಕಲಿಸಬೇಕಾಗಿಲ್ಲ.

ಎ) ನಮಗೆ ಪರಿಚಯಸ್ಥರಲ್ಲದಿದ್ರೂ ನಾಳೆ ಯಾರೋ ಒಬ್ಬರು ಸತ್ತೇ ಹೋಗುತ್ತಾರೆ ಎನಿಸಿದ್ರೆ ನಾವು ಅವರಿಗೆ ಎಲ್ಲಿಲ್ಲದ ಪ್ರೀತಿ ತೋರಿಸುತ್ತೇವೆ.

ಬಿ) ನಮಗೆ ಇಷ್ಟವಿಲ್ಲದವರಾದ್ರೂ ತಾಯಿ ಮಗುವನ್ನು ಪ್ರೀತಿಸುವಂತೆ ಅವರ ಬಗ್ಗೆ ಮಮತೆ ತೋರುತ್ತೇವೆ. ವೈಯಕ್ತಿಕ ಭಾವನೆಗಳೇನೇ ಇದ್ರೂ ಅವರಿಗೆ ಒಳ್ಳೆಯದಾಗಲೆಂದು ಹಾರೈಸುತ್ತೇವೆ.

ಸಿ) ಪ್ರೀತಿ ಪಾತ್ರರಾದವರಾಗಿದ್ದಲ್ಲಿ, ಅವರ ಭವಿಷ್ಯ ಉಜ್ವಲವಾಗಲೆಂದು ಹಾರೈಸುತ್ತೇವೆ.

ಡಿ) ನಾವು ಪ್ರೀತಿಸುವವರಾದರೆ ಅವರು ಹೇಳಿದ್ದನ್ನು ಕೇಳುತ್ತೇವೆ, ಸಹಾಯ ಮಾಡುತ್ತೇವೆ, ಅಚ್ಚರಿಯನ್ನೂ ವ್ಯಕ್ತಪಡಿಸುತ್ತೇವೆ.

ಇಲ್ಲದ ವಸ್ತುವಿಗಾಗಿ ನಾವು ಮನಸ್ಸಿನಲ್ಲಿ ಬೇಡುತ್ತೇವೆ, ಗುರಿ ತಲುಪಲು ಮನಸ್ಸಿನಲ್ಲೇ ಮಧ್ಯಸ್ಥಿಕೆ ವಹಿಸುತ್ತೇವೆ, ಅದೇ ಸಂದರ್ಭದಲ್ಲಿ ಪ್ರೀತಿಯ ಅನುಭವ ನಮಗಾಗುತ್ತದೆ. ಅದೇ ನಿಜವಾದ ಧರ್ಮ.

  • ಈಗಲೇ

ಪ್ರತಿಬಾರಿ ಭವಿಷ್ಯದ ಬಗ್ಗೆ ನನಗೆ ಸಮಸ್ಯೆಯಿತ್ತು, ಆದ್ರೆ ಯಾವುದೂ ನಿಜವಾಗಲಿಲ್ಲ. ನನ್ನ ಭೂತಕಾಲದ ಬಗ್ಗೆ ವಿಷಾಧವಿತ್ತು. ಮೊದಲು ಹಾಗೂ ನಂತರದ ವಿಚಾರಗಳ್ಯಾವುವೂ ನಿಮಗೆ ನೆರವಾಗುವುದಿಲ್ಲ. ಈಗ ಮಾಡಬೇಕಾದುದರ ಬಗೆಗೆ ಮಾತ್ರ ಚಿತ್ತ ಹರಿಸಿ. ಈಗ ಅನ್ನೋದು ನಿಮ್ಮ ಭವಿಷ್ಯವನ್ನು ನಿರ್ಧರಿಸುವ ಅಂಶ.

ನನಗಿರುವ 20 ಹವ್ಯಾಸಗಳು ಇವು. ನಿಜವೋ ಸುಳ್ಳೋ ಗೊತ್ತಿಲ್ಲ, ಪ್ರತಿಬಾರಿ ಖಚಿತವಾದುದನ್ನು ಮಾಡಲು ನನಗೆ ನಾನೇ ಅನುಮತಿ ನೀಡುತ್ತೇನೆ. ಅದೇ ಇನ್ನೊಂದು ಹವ್ಯಾಸ. ಈ ಎಲ್ಲ ಹವ್ಯಾಸಗಳು ನಿಮ್ಮನ್ನು ಲಕ್ಷಾಧಿಪತಿಯನ್ನಾಗಿ ಮಾಡುತ್ತವೆ, ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯುತ್ತವೆ. ನೀವು ಸೂರ್ಯನ ಕಿರಣವಾಗಿ ಉಳಿಯಲಾರಿರಿ, ಸೂರ್ಯನಂತೆ ಪ್ರಜ್ವಲಿಸುತ್ತೀರಿ.

ಲೇಖಕರು: ಜೇಮ್ಸ್​​ ಅಲ್ಚರ್​​

ಅನುವಾದಕರು: ಭಾರತಿ ಭಟ್​​​