"ಕೀಸ್" ಹೋಟೆಲ್ ಗಗನೆತ್ತರಕ್ಕೆ ಬೆಳೆದು ನಿಂತ ಪರಿ

ಟೀಮ್​ ವೈ.ಎಸ್​. ಕನ್ನಡ

0

ಉದ್ಯಮ ಅನ್ನೋದು ಹಲವರ ಕನಸು. ಆದ್ರೆ ಉದ್ಯಮ ಅಂದ್ರೆ ಬರೀ ಕನಸುಗಳ ಬೆನ್ನತ್ತಿ ಹೊರಡುವುದಲ್ಲ. ಉದ್ಯಮಿಯೊಬ್ಬನಿಗೆ ಉದ್ಯಮಶೀಲತೆ ಇರಬೇಕಾದುದು ಅತೀ ಅಗತ್ಯ. ಪ್ರತಿಬಾರಿಯೂ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಉದ್ಯಮಿ ಸಿದ್ಧವಾಗಿರಬೇಕು. ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಗೆದ್ದೇ ಗೆಲ್ಲುತ್ತೇನೆಂಬ ಅಚಲ ಭರವಸೆಯಿರಬೇಕು.

ಉದ್ಯಮ ಕ್ಷೇತ್ರದಲ್ಲಿ ಹೆಸರು ಮಾಡಿರುವ ಹೆಚ್ಚಿನ ಉದ್ಯಮಿಗಳ ಹಿಂದೆಯೂ ಇಂತಹದ್ದೇ ಒಂದು ಯಶೋಗಾಥೆಯಿದೆ. ಸೋಲುಗಳನ್ನೇ ಮೆಟ್ಟಿಲಾಗಿಸಿ ಗೆಲುವನ್ನುಪಡೆದ ಕಥೆಯಿದೆ.

ಹಲವು ಸವಾಲುಗಳಿರುವ ಔದ್ಯಮಿಕ ಕ್ಷೇತ್ರಕ್ಕೆ ವರವಾಗಿ ಪರಿಣಮಿಸಿರುವುದು ಅಂತರ್ಜಾಲ. ವ್ಯವಹಾರ, ಲಾಭ, ನಷ್ಟಗಳ ವಿಚಾರಕ್ಕೆ ಬಂದಾಗ ಅಂತರ್ಜಾಲ ಗಮರ್ನಾಹವಾಗಿ ಕೆಲಸ ಮಾಡುತ್ತಿದೆ. ಅತೀ ಕಡಿಮೆ ಸಮಯದಲ್ಲಿ ಅತೀ ಹೆಚ್ಚಿನ ಜನರನ್ನು ತಲುಪಿ ಉದ್ಯಮದಲ್ಲಿ ಅಭಿವೃದ್ಧಿಯನ್ನು ತರಲು ಈ ಅಂತರ್ಜಾಲದಿಂದ ಸಾಧ್ಯವಾಗಿದೆ.

ಸಂಜಯ್ ಸೇಥಿ ಕೂಡ ಒಬ್ಬ ಸಾಹಸಿ ಉದ್ಯಮಿ. ಬರ್ಗ್ಯೂನ್​ ಸಂಸ್ಥೆಯ ಸಿಇಓ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್. ಬರ್ಗ್ಯೂನ್ ಭಾರತದಲ್ಲಿರುವ ಪ್ರಸಿದ್ಧವಾಗಿರುವ ಕೀಸ್ ಹೊಟೇಲ್​ನ ಮೂಲ ಬ್ರ್ಯಾಂಡ್​. ಕೀಸ್ ಸಂಸ್ಥೆ ಈಗಾಗ್ಲೇ ಭಾರತದಾದ್ಯಂತ 35 ಸ್ಥಿರಾಸ್ಥಿಗಳನ್ನು ಹೊಂದಿದೆ. ಸದ್ಯ ಈ ಕೀಸ್ ಹೊಟೇಲ್ ಸಂಸ್ಥೆ 6 ಸ್ವಂತ ಕಟ್ಟಡಗಳು, 8 ನಿರ್ವಹಣೆಯಲ್ಲಿರುವ ಹಾಗೂ ಕಾರ್ಯಾಚರಿಸುತ್ತಿರುವ 14 ಕಟ್ಟಡಗಳನ್ನು ಹೊಂದಿದೆ. ಈ ಎಲ್ಲಾ ಹೋಟೆಲ್​ಗಳ ಕಟ್ಟಡದಲ್ಲಿ 1300ಕ್ಕೂ ಅಧಿಕ ಕೊಠಡಿಗಳಿವೆ. ಮುಂದಿನ ದಿನಗಳಲ್ಲಿಸುಮಾರು 21 ಕಟ್ಟಡಗಳನ್ನು ಪೂರ್ಣಗೊಳಿಸುವ ಇಚ್ಛೆ ಕೀಸ್ ಸಂಸ್ಥೆಯದ್ದಾಗಿದೆ.

ಪ್ರಸ್ತುತ ಔರಾಂಗಾಬಾದ್, ಬೆಂಗಳೂರು, ಚೆನ್ನೈ, ಲುಧಿಯಾನಾ, ಮುಂಬೈ, ಪುಣೆ, ದೆಹಲಿ, ತಿರುವನಂತಪುರಂನಲ್ಲಿ ಕೀಸ್ ಹೊಟೇಲ್​ನ ಶಾಖೆಗಳು ಕಾರ್ಯಾಚರಿಸುತ್ತಿವೆ. ಅಷ್ಟೇ ಅಲ್ಲ ಮಹಾಬಲೇಶ್ವರ, ಗೋವಾ ಹಾಗೂ ದೆಹಲಿಯಲ್ಲಿ ಐಷಾರಾಮಿ ರೆಸಾಟ್​ರ್ಗಳಿದ್ದು, ಬೆಂಗಳೂರಿನ ವೈಟ್​ ಫೀಲ್ಡ್​ನಲ್ಲೂ ಅಪಾರ್ಟ್​ಮೆಂಟ್​ಗಳಿವೆ.

ಕೀಸ್ ಬ್ರ್ಯಾಂಡ್​ ರೂಪುಗೊಂಡ ಹಿನ್ನೆಲೆ:

ಉದ್ಯಮ ಕ್ಷೇತ್ರಕ್ಕೆ ಏಕಾಏಕಿ ಧುಮುಕುವುದು ಅಪಾಯಕಾರಿ ವಿಚಾರ ಅನ್ನೋ ಸತ್ಯ ಸಂಜಯ್ ಗೆ ಗೊತ್ತಿತ್ತು. ಹೀಗಾಗಿಯೇ ಅವರು ಹೋಟೆಲ್​ ಕ್ಷೇತ್ರದಲ್ಲಿ ಕೆಲ ವರ್ಷಗಳ ಕಾಲ ಕೆಲಸ ಮಾಡಿ ಅನುಭವ ಪಡೆದ ಬಳಿಕವಷ್ಟೇ ಉದ್ಯಮದಲ್ಲಿ ತೊಡಗಿಕೊಳ್ಳುವ ತೀರ್ಮಾನಕ್ಕೆ ಬಂದರು.

ಉದ್ಯಮ ಆರಂಭಿಸುವುದಕ್ಕೂ ಮುನ್ನ ಸಂಜಯ್ ಹಲವು ವರ್ಷಗಳ ಕಾಲ ತಾಜ್ ಗ್ರೂಪ್​ನ ಹೋಟೆಲ್​ಗಳಲ್ಲಿ ಕಾರ್ಯನಿರ್ವಹಿಸಿದ್ದರು. ತಾಜ್​ ಗ್ರೂಪ್​ನ ಹೈದರಾಬಾದ್ ಶಾಖೆಯಲ್ಲಿ ಕ್ಷೇತ್ರೀಯ ವ್ಯವಸ್ಥಾಪಕರಾಗಿ ಕೆಲಸ ಮಾಡಿ ಅನುಭವ ಪಡೆದುಕೊಂಡಿದ್ದರು. ಫಲಕ್ನಮ್​ ಪ್ಯಾಲೇಸ್​ನ ಐಷಾರಾಮಿ ಹೋಟೆಲ್​ನಲ್ಲೂ ಕೆಲಸ ಮಾಡಿದ ಅನುಭವ ಸಂಜಯ್ ಅವರಿಗಿತ್ತು. ಈ ಸಂದರ್ಭದಲ್ಲಿಯೇ ಸಂಜಯ್ ಸ್ವಂತ ಹೊಟೇಲ್ ಉದ್ಯಮವನ್ನು ಆರಂಭಿಸುವ ಕನಸು ಕಂಡಿದ್ದರು. ಸಂಜಯ್ ಕನಸಿಗೆ ನೀರೆರೆದು ಪೋಷಿಸಿದ್ದು ಬರ್ಗ್ಯೂನ್​ ಸಂಸ್ಥೆ.

ಉದ್ಯಮ ಕ್ಷೇತ್ರದಲ್ಲಿ ಹೊಸ ಪಯಣವೊಂದಕ್ಕೆ ಸಂಜಯ್ ಸಿದ್ಧರಾದ್ರು. ಆದ್ರೆ ಉದ್ಯಮ ಕ್ಷೇತ್ರದಲ್ಲಿ ಹಲವು ಸವಾಲುಗಳಿರುತ್ತವೆ ಅನ್ನೋದು ಸಂಜಯ್​ಗೆ ತಿಳಿದಿತ್ತು. ಮುಖ್ಯವಾಗಿ ಉದ್ಯಮಕ್ಕೆ ಅಗತ್ಯವಾದಷ್ಟು ಬಂಡವಾಳ ಹೂಡಿಕೆ ಮಾಡುವುದು ಕಷ್ಟಕರವಾದ ಕೆಲಸವಾಗಿತ್ತು. ಯೋಜನೆ ಚೆನ್ನಾಗಿದ್ದರೂ ಬಂಡವಾಳ ಇಲ್ಲದಿದ್ದರೆ ಯಾವುದೂ ಸಾಧ್ಯವಿಲ್ಲ ಎಂಬುದು ಸಂಜಯ್​ಗೆ ಅರಿವಾಯ್ತು. ಹೀಗಿದ್ದರೂ ಏನಾದರೂ ಸಾಧಿಸಬೇಕೆನ್ನುವ ಛಲ ಮಾತ್ರ ಹೆಚ್ಚುತ್ತಲೇ ಹೋಯಿತು. ಹೀಗಾಗಿಯೇ ಬರ್ಗ್ಯೂನ್​ ಸಂಸ್ಥೆಯ ಸಹಕಾರದೊಂದಿಗೆ ಸಂಜಯ್ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟರು.

ಉದ್ಯಮ ಯಶಸ್ವಿಯಾಗಿ ಸಾಗಬೇಕಾದ್ರೆ ಪರಿಣಿತರ ತಂಡದ ಅಗತ್ಯವಿದೆ. ಹೀಗಾಗಿಯೇ ಸಂಜಯ್ ಮಾಡಿದ ಮೊದಲ ಕೆಲಸವೆಂದರೆ ಹೊಟೇಲ್ ಉದ್ಯಮದಲ್ಲಿ ಕೆಲಸ ಮಾಡಿದ ಅನುಭವವಿರುವ ಒಂದಷ್ಟು ಜನ ಸ್ನೇಹಿತರನ್ನು ತಮ್ಮ ಬಳಗಕ್ಕೆ ಸೇರಿಸಿಕೊಂಡರು. ಹಲವು ಹೊಟೇಲ್ ಉದ್ಯಮದ ಆಳ, ಅಗಲಗಳ ಅರಿವಿರುವ ಹಲವು ಸ್ನೇಹಿತರು ಸಂಜಯ್ ಯೋಜನೆಗೆ ಕೈಜೋಡಿಸಿದ್ರು. ಉತ್ಸಾಹಿ ತಂಡ ಉದ್ಯಮ ಆರಂಭಿಸಲು ಅಗತ್ಯವಾದ ಸೂಕ್ತ ಜಾಗ, ಸೌಕರ್ಯ, ಸೂಕ್ತ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಂಡಿತು. ಎಲ್ಲಾ ವ್ಯವಸ್ಥೆಯೂ ಯೋಜನೆಗೆ ತಕ್ಕಂತೆ ರೂಪುಗೊಂಡ ಕಾರಣಕ್ಕೆ ಔರಾಂಗಾಬಾದ್​ , ತಿರುವನಂತಪುರಂ ನಗರಗಳಲ್ಲೂ ಕೀಸ್ ಹೊಟೇಲ್ ಯಶಸ್ವಿಯಾಗಿ ಆರಂಭಗೊಂಡಿತು. ಈ ಮೂಲಕ ಸಂಜಯ್ ಉದ್ಯಮ ಕ್ಷೇತ್ರದಲ್ಲಿ ಅಂಬೆಗಾಲಿಡೋಕೆ ಶುರುಮಾಡಿದ್ರು.

ಉದ್ಯಮ ಕ್ಷೇತ್ರದಲ್ಲಿ ಇನ್ನಷ್ಟು ಯಶಸ್ವಿಯಾಗಿ ಸಾಗಬೇಕು ಅನ್ನೋ ಉದ್ದೇಶದಿಂದ ಸಂಜಯ್ ಗ್ರಾಹಕರ ಜೊತೆಯೂ ಉತ್ತಮ ಒಡನಾಟವಿಟ್ಟುಕೊಂಡಿದ್ದರು. ಗ್ರಾಹಕರ ಬೇಡಿಕೆಗಳು ಏನೆಲ್ಲಾ ಎಂದು ತಿಳಿಯಬೇಕು ಅನ್ನೋ ಉದ್ದೇಶದಿಂದ ಮೂರು ಮೆಟ್ರೋ ಪಾಲಿಟನ್ ನಗರಗಳಲ್ಲಿ ಹೊಟೇಲ್ ಮ್ಯಾನೇಜರ್, ಅಧಿಕಾರಿಗಳ ಸಭೆ ನೆಡೆಸಿದ್ರು. ಗ್ರಾಹಕರಿಂದ ಲಭ್ಯವಾದ ಪ್ರತಿಕ್ರಿಯೆಗೆ ತಕ್ಕಂತೆ ಕೀಸ್ ಹೊಟೇಲ್​ನ ಶಾಖೆಗಳು ರೂಪುಗೊಂಡವು. ಹೀಗಾಗಿ ಕೀಸ್ ಹೊಟೇಲ್ ಇನ್ನಷ್ಟು ಗ್ರಾಹಕ ಸ್ನೇಹಿಯಾಗಿ ಪರಿಣಮಿಸಿ ಮತ್ತಷ್ಟು ಜನರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು.

ಸ್ವಂತ ನಿರ್ವಹಣೆಯ ಕಟ್ಟಡಗಳನ್ನು ನೋಡಿಕೊಳ್ಳುವುದರ ಜತೆ ಸಂಜಯ್ ಒಪ್ಪಂದಗಳ ಮೇರೆಗೆ ಕೀಸ್ ಹೋಟೆಲ್ ಅನ್ನು ಕೂಡ ಅಭಿವೃದ್ಧಿಗೊಳಿಸಿದ್ರು. 2009ರಲ್ಲಿ ಅಸೆಟ್ ಲೈಟ್ ಅನ್ನೋ ಹೊಸ ಮಾದರಿಯನ್ನು ಸಂಜಯ್ ಹೋಟೆಲ್​ ಉದ್ಯಮ ಕ್ಷೇತಕ್ಕೆ ಪರಿಚಯಿಸಿದ್ರು. 2011ರಲ್ಲಿ ಕೀಸ್ ಹೋಟೆಲ್​ ಗಳ ತೆಕ್ಕೆಗೆ ಕೀಸ್ ರೆಸಾರ್ಟ್ ಕೂಡಾ ಸೇರಿಕೊಂಡಿತು. ಇದರ ಜತೆಯಲ್ಲೇ ಇತ್ತೀಚಿಗೆ ಹೋಟೆಲ್​ ಉದ್ಯಮದಲ್ಲಿ ವಿಭಿನ್ನವೆನಿಸಿಕೊಂಡ ಕೀಸ್ ಕ್ಲಬ್​ ಅನ್ನು ಕೂಡಾ ಸಂಜಯ್ ಆರಂಭಿಸಿದ್ರು. ವ್ಯವಹಾರದ ನಿಮಿತ್ತ ಊರಿಂದೂರಿಗೆ ತೆರಳಬೇಕಾಗಿರುವ ಬರುವ ಬ್ಯುಸಿನೆಸ್​ಗಳು ಮುಖ್ಯ ನಗರಗಳಲ್ಲಿ ಪಂಚತಾರಾ ಸೌಲಭ್ಯವಿರುವ ಈ ಈ ಕೀಸ್ ಕ್ಲಬ್​ಗಳಲ್ಲಿ ಉಳಿದುಕೊಳ್ಳಬಹುದಾಗಿದೆ. ಈ ಕೀಸ್ ಕ್ಲಬ್​ಗಳಲ್ಲಿ 24/7 ನ ಐಷಾರಾಮಿ ಕೊಠಡಿಗಳು, ಸ್ಪೆಷಲ್ ರೆಸ್ಟೋರೆಂಟ್ ಮತ್ತು ಬಾರ್, ಕಾನ್ಫರೆನ್ಸ್ ಹಾಲ್​ಗಳ ವ್ಯವಸ್ಥೆಯಿದೆ.

ದಿನದಿಂದ ದಿನಕ್ಕೆ ಸಂಜಯ್ ಉದ್ಯಮ ಬೆಳೆಯುತ್ತಲೇ ಹೋಯಿತು. ಹೊಟೇಲ್ ಉದ್ಯಮ ಕ್ಷೇತ್ರದಲ್ಲಿ ಕೀಸ್ ಕ್ಲಬ್, ಕೀಸ್ ಹೊಟೇಲ್, ಕೀಸ್ ರೆಸಾರ್ಟ್​​ಗಳು ಜನಜನಿತವಾದವು. ಉತ್ತಮ ಗುಣಮಟ್ಟ, ಐಷಾರಾಮಿ, ಆರಾಮದಾಯಕ ಸೌಕರ್ಯ ಜನಮೆಚ್ಚುಗೆಗೆ ಪಾತ್ರವಾಯ್ತು. ವ್ಯಾವಹಾರಿಕ ಗುಣಮಟ್ಟವೂ ಹೆಚ್ಚಿದ ಕಾರಣ ಕೀಸ್ ಹೊಟೇಲ್​ಗಳಿಗೆ ಗ್ರಾಹಕರ ಸಂಖ್ಯೆ ಹೆಚ್ಚಾಯ್ತು.

ವ್ಯಾವಹಾರಿಕ ವಿಚಾರಗಳು

ಜಾಗತಿಕ ಮಟ್ಟದಲ್ಲಿ ಕೀಸ್ ಹೋಟೆಲ್​ ಉತ್ತಮ ಹೆಸರು ಮಾಡುವಲ್ಲಿ ಸಂಜಯ್ ಸೇಥಿ ಹೆಚ್ಚಿನ ಶ್ರಮ ವಹಿಸಿದ್ರು. ಸಂಜಯ್ ಅವರ ಕೀಸ್ ಹೋಟೆಲ್​ ತಂಡದಲ್ಲಿ 75 ಸದಸ್ಯರಿದ್ದು, ಸೇಲ್ಸ್ ಟೀಮ್​ನಲ್ಲಿ ನುರಿತ 75 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ರೆ ಉದ್ಯಮದಲ್ಲಿಸೋಲು-ಗೆಲುವು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ನಿದರ್ಶನವಾಗಿದ್ದ ಸಂಜಯ್ ಅವರಿಗೂ ಅನಿರೀಕ್ಷಿತ ಆಘಾತ ಎದುರಾಗಿತ್ತು. 2008-09ರಲ್ಲಿ ಜಾಗತಿಕ ಆರ್ಥಿಕ ಏರಿಳಿತದಿಂದ ಸಾಕಷ್ಟು ನಷ್ಟ ಅನುಭವಿಸಬೇಕಾಗಿ ಬಂತು. ಆದ್ರೆ ಸಂಜಯ್ ಅವರಲ್ಲಿದ್ದ ಆತ್ಮವಿಶ್ವಾಸ ಮತ್ತೆ ಅವರನ್ನು ಯಶಸ್ಸಿನ ದಾರಿಯಲ್ಲಿ ಸಾಗುವಂತೆ ಮಾಡಿತು.

ಕೀಸ್ ಹೋಟೆಲ್​ನ ಪ್ರಮುಖ ಗ್ರಾಹಕರೆಂದರೆ ಉದ್ಯಮಿಗಳು, ಪ್ರಮುಖ ಕಾರ್ಪೋರೇಟ್ ಕಂಪೆನಿಗಳು. ಪಾಲುದಾರಿಕೆಯಿಂದಲೂ ಕೀಸ್ ಸಂಸ್ಥೆ ಶೇ. 75 ರಷ್ಟು ಅಧಿಕ ಆದಾಯ ಗಳಿಸುತ್ತಿದೆ. ಕಾರ್ಪೋರೇಟ್ ಸಂಸ್ಥೆಗಳ ಜತೆ ಕೀಸ್ ಹೋಟೆಲ್​ ಉತ್ತಮ ಬಾಂಧವ್ಯವನ್ನು ಕೂಡಾ ಹೊಂದಿದೆ.

ಉತ್ಕೃಷ್ಟ ಗುಣಮಟ್ಟ, ಸೌಕರ್ಯ, ಗ್ರಾಹಕರಿಗೆ ನೀಡಿದ ಅತ್ಯುತ್ತಮ ಸೇವೆಗಾಗಿ 2012ರಲ್ಲಿ ತಿರುವನಂತಪುರದ ಕೀಸ್ ಹೋಟೆಲ್​ಗೆ ಪ್ರಶಸ್ತಿಯೂ ದೊರಕಿದೆ. ಭಾರತದ 10ನೇ ಟ್ರೆಂಡಿಯೆಸ್ಟ್ ಹೋಟೆಲ್ ಅನ್ನೋ ಗರಿಮೆಯೂ ಇದಕ್ಕೆ ಸೇರಿದೆ. ಅಷ್ಟೇ ಅಲ್ಲ, ‘ಸರ್ಟಿಫಿಕೇಟ್ ಆಫ್ ಎಕ್ಸಲೆನ್ಸಿ’ ಪ್ರಶಸ್ತಿಯೂ ಕೀಸ್ ಹೊಟೇಲ್ ಪಾಲಿಗೆ ಲಭ್ಯವಾಗಿದೆ.

ಸಂಜಯ್ ಸೇಥಿಯವರ ಸಂಸ್ಥೆ ಬರ್ಗ್ಯೂನ್​ ಹೋಲ್ಡಿಂಗ್ಸ್​ನಿಂದ ಸುಮಾರು 62 ಮಿಲಿಯನ್ ಡಾಲರ್ ಬಂಡವಾಳ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ 183 ಕೋಟಿ ರೂಪಾಯಿಗಳ ವ್ಯವಹಾರ ನಡೆಸುವ ಗುರಿಯನ್ನು ಇಟ್ಟುಕೊಂಡಿದೆ.

ಭವಿಷ್ಯದ ಯೋಜನೆಗಳು

ಸಂಜಯ್ ಸೇಥಿ ಉದ್ಯಮ ಪಯಣ ಇಲ್ಲಿಗೆ ನಿಂತಿಲ್ಲ. ಕೀಸ್ ಹೋಟೆಲ್​ ಅನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಸಂಜಯ್ ಕೊಚ್ಚಿ, ವೈಝಾಜ್​, ಶಿರಡಿ, ಅಮೃತಸರ, ಬೃಂದಾವನ, ಹರಿದ್ವಾರ ಮೊದಲಾದ ನಗರಗಳಲ್ಲೂ ಹೋಟೆಲ್​ ಶಾಖೆಯನ್ನು ಆರಂಭಿಸುವ ಯೋಜನೆ ಹಾಕಿಕೊಂಡಿದ್ದಾರೆ. ಸಂಜಯ್ ಈವರೆಗೆ ನಡೆಸಿದ ಎಲ್ಲಾ ಶಾಖೆಗಳೂ ಕೂಡಾ ನಿರೀಕ್ಷಿಸಿದ ಮಟ್ಟದಲ್ಲಿ ಮುನ್ನಡೆಯುತ್ತಿವೆ. ಹೀಗಾಗಿ ಮುಂದಿನ ವರ್ಷಗಳಲ್ಲಿ 170 ಕೋಟಿ ರೂಪಾಯಿ ವಹಿವಾಟು ನಡೆಸುವ ಉದ್ದೇಶವನ್ನು ಸಂಜಯ್ ಸೇಥಿ ಹೊಂದಿದ್ದಾರೆ. ಗ್ರಾಹಕರಿಗೆ ಇನ್ನಷ್ಟು ಉತ್ತಮ ಗುಣಮಟ್ಟದ ಸೌಕರ್ಯಗಳನ್ನು ಒದಗಿಸುವ ಆಕಾಂಕ್ಷೆ ಸಂಜಯ್ ಅವರದ್ದು.

ಭಾರತದಲ್ಲಿ ಕೀಸ್ ಹೋಟೆಲ್​ ಅನ್ನು ಮತ್ತಷ್ಟು ಪ್ರಚುರ ಪಡಿಸಲು ಸಂಜಯ್ ಸೇಥಿ ಸಿದ್ಧತೆ ನಡೆಸಿದ್ದಾರೆ. ಈ ನಡುವೆ ವಿಶ್ವದಾದ್ಯಂತ ಕೂಡಾ ಕೀಸ್ ಹೊಟೇಲ್ ಹೆಸರು ಪ್ರಸಿದ್ಧಿಯಾಗ್ತಾ ಇದೆ. ಈಗಾಗ್ಲೇ ಮಾಲ್ಡೀವ್ಸ್​, ಮಿಡಲ್ ಈಸ್ಟ್, ಶ್ರೀಲಂಕಾ, ಬಾಂಗ್ಲಾದೇಶ, ಆಫ್ರಿಕಾ ಮೊದಲಾದ ದೇಶಗಳು ಕೀಸ್ ಹೊಟೇಲ್ ನೀಡುತ್ತಿರುವ ಸೇವೆ, ಸೌಕರ್ಯ, ಗುಣಮಟ್ಟದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ನಮ್ಮ ವಿದೇಶಗಳಿಂದಲೂ ಬೇಡಿಕೆ ಸಿಗುವ ನಿರೀಕ್ಷೆಯಲ್ಲಿವೆ ಅಂತಾರೆ ಸಂಜಯ್.

ಎಲ್ಲಾ ಕಡೆ ಹೆಮ್ಮರವಾಗಿ ಬೆಳೆಯುತ್ತಿರುವ ಕೀಸ್ ಹೊಟೇಲ್ ತಂಡದಲ್ಲಿ ಈಗ 1770 ಉದ್ಯೋಗಿಗಳಿದ್ದಾರೆ. ಯೋಜನೆಗೆ ಅನುಸಾರವಾಗಿ 2016ನೇ ವರ್ಷದಲ್ಲಿ ಈ ಸಂಖ್ಯೆ 4000 ದಾಟಬಹುದೆಂದು ಅಂದಾಜಿಸಲಾಗಿದೆ.

ಉದ್ಯಮ ಕ್ಷೇತ್ರದಲ್ಲಿ ಅಂಬೆಗಾಲಿಟ್ಟು ಮುಂದೆ ಬಂದು ಹಲವು ಏಳು-ಬೀಳುಗಳನ್ನು ಕಂಡ ಕೀಸ್ ಹೋಟೆಲ್​ ಯಶಸ್ವಿಯಾಗಿ ಸಾಗಲಿ ಅಂತ ಹಾರೈಸೋಣ.

ಲೇಖಕರು : ಪ್ರೀತಿ ಚಾಮಿಕುಟ್ಟಿ

ಅನುವಾದಕರು : ವಿನುತಾ