ಅಂದು ಟೆನಿಸ್​​ ಆಟಗಾರ್ತಿ.. ಇವತ್ತು ಯಶಸ್ವಿ ಮಹಿಳಾ ಉದ್ಯಮಿ..!

ಟೀಮ್​​ ವೈ.ಎಸ್​​.ಕನ್ನಡ

ಅಂದು ಟೆನಿಸ್​​ ಆಟಗಾರ್ತಿ.. ಇವತ್ತು ಯಶಸ್ವಿ ಮಹಿಳಾ ಉದ್ಯಮಿ..!

Friday November 27, 2015,

4 min Read

ಆತ್ಮವಿಶ್ವಾಸ ಮತ್ತು ಗುರಿ ಇದ್ದರೆ ಅಸಾಧ್ಯವಾದುದ್ದನ್ನೂ ಸಾಧಿಸಬಹುದು ಎಂಬುದಕ್ಕೆ ನಾವು ಹೇಳ್ತಾ ಇರುವ ಈ ಸ್ಟೋರಿಯೇ ಸಾಕ್ಷಿ. ಹೌದು ನಾವು ಹೇಳಲು ಹೊರಟಿರುವುದು ಭಾರತದ ಮಾಜಿ ನಂ.1 ಟೆನಿಸ್ ಆಟಗಾರ್ತಿ ಶಿಖಾ ಒಬೆರಾಯ್ ಬಗ್ಗೆ. ವಯಸ್ಸು 25 ಆಗೋದೇ ತಡ ನಮ್ಮ ಟೆನಿಸ್ ವೃತ್ತಿ ಜೀವನ ಮುಗಿದುಹೋಯಿತು. ಜೊತೆಗೆ ಗ್ಲಾಮರ್ ಕೂಡಾ ಮಸುಕಾಯಿತು ಅಂತ ಕೊರಗುವವರೇ ಹೆಚ್ಚು. ಇಂಥವರು ಮುಂದಿನ ಜೀವನಕ್ಕೆ ಏನಪ್ಪಾ ಮಾಡೋದು ಅಂತ ಯೋಚನೆ ಮಾಡುತ್ತಿರುತ್ತಾರೆ. ಇಂತಹ ಮನೋಭಾವನೆ ಹೊಂದಿರುವವರಿಗೆ ಶಿಖಾ ಒಬೆರಾಯ್ ಮಾತ್ರ ಅಪವಾದವಾಗಿ ನಿಲ್ಲುತ್ತಾರೆ.

ಶಿಖಾ ಒಬೆರಾಯ್ ಯಾರು..?

ಶಿಖಾ ಹುಟ್ಟಿದ್ದು ಮುಂಬೈನಲ್ಲಿ ಬೆಳೆದದ್ದೆಲ್ಲ ಅಮೆರಿಕಾದಲ್ಲಿ. ಯಾಕಂದ್ರೆ ಶಿಖಾ ಒಬೆರಾಯ್ ಹೆತ್ತವರು ಶಿಖಾ ಸಣ್ಣ ಮಗುವಾಗಿದ್ದಾಗಲೇ ನ್ಯೂಜೆರ್ಸಿಯ ಪ್ರಿನ್ಸ್​​​ಟೌನ್​​ಗೆ ಶಿಫ್ಟ್ ಆಗಿದ್ದರು. ಶಿಖಾಗೆ ಐವರು ಸಹೋದರಿಯರು. ಇವರೆಲ್ಲರೂ ಟೆನಿಸ್ ಪ್ಲೇಯರ್​​ಗಳೇ. ಆದರೆ ಭಾರತದ ಪರ ಆಡಿದ್ದು ಮಾತ್ರ ಶಿಖಾ ಒಬೆರಾಯ್. 1983ರಲ್ಲಿ ಜನಿಸಿದ ಶಿಖಾ ಸಾಧನೆ ಮೆಚ್ಚುವಂಥದ್ದು. ಭಾರತದ ನಂಬರ್ 1 ಟೆನಿಸ್ ಆಟಗಾರ್ತಿ ಹಾಗೂ ವಿಶ್ವದ 122ನೇ ಶ್ರೇಯಾಂಕವನ್ನೂ ಸಂಪಾದಿಸಿದ್ದರು.

image


ಶಿಖಾ ಸಾಧನೆ ಏನು..?

ಆದರೆ ಟೆನಿಸ್ ಕ್ಷೇತ್ರದಿಂದ ದೂರ ಸರಿದ ಮೇಲೆ ಶಿಖಾ ಸುಮ್ಮನೆ ಮನೆಯಲ್ಲಿ ಕೂರಲಿಲ್ಲ. ಜೀವನ ಇಷ್ಟಕ್ಕೆ ಮುಗಿಯಿತು ಅಂದುಕೊಂಡಿಲ್ಲ. ಶಿಖಾ ಟೆನಿಸ್ ಕೋರ್ಟ್​ನಲ್ಲಿ ಎಷ್ಟು ಚತುರೆಯೋ...ಓದುವುದರಲ್ಲೂ ಅಷ್ಟೇ ನಿಪುಣೆಯಾಗಿದ್ದರು. ಪ್ರಿನ್ಸ್​​ಟೌನ್ ವಿಶ್ವವಿದ್ಯಾನಿಲಯದಲ್ಲಿ ಮಾನವ ಶಾಸ್ತ್ರ ಮತ್ತು ದಕ್ಷಿಣ ಏಷ್ಯಾ ಅಧ್ಯಯನ ವಿಷಯದಲ್ಲಿ ಪದವಿ ಪಡೆದುಕೊಂಡರು. ಆಮೇಲೆ ಶಿಖಾ ಹಿಂತಿರುಗಿ ನೋಡಲೇ ಇಲ್ಲ. ಇವರು ಮುಟ್ಟಿದ್ದೆಲ್ಲ ಚಿನ್ನವಾಗಿಹೋಯ್ತು. ಅತ್ಯಂತ ವೇಗವಾಗಿ ಟೆನಿಸ್ ಸರ್ವ್ ಮಾಡೋದ್ರಲ್ಲಿ ವಿಶ್ವದ ಅಗ್ರ 10 ಆಟಗಾರ್ತಿಯರಲ್ಲಿ ಶಿಖಾ ಕೂಡಾ ಒಬ್ಬರಾಗಿದ್ದರು. ಹೀಗೆ ಈಕೆಯಲ್ಲಿ ಬುದ್ಧಿಮತ್ತೆಯೂ ಸರ್ವ್​ನಷ್ಟೇ ನಿಖರವಾಗಿತ್ತು. "ಜೀವನ ಇರೋದು ಒಂದೇ..ಆದರೆ ಬದುಕಲು ಇರೋದು ಹಲವು ದಾರಿ.." ಎಂಬುದನ್ನು ಗಟ್ಟಿಯಾಗಿ ಮನನ ಮಾಡಿಕೊಂಡಿದ್ದ ಶಿಖಾಗೆ ಯಶಸ್ಸೆಂಬುದು ಹುಡುಕಿಕೊಂಡು ಬಂತು. ಶಿಖಾ ಒಬೆರಾಯ್ ಬಾಲ್ಯ ಜೀವನವನ್ನು ಅಮೆರಿಕಾ ಮತ್ತು ಭಾರತದಲ್ಲಿ ಸರಿಸಮನಾಗಿ ಕಳೆದರು.

ನನಗೆ ಐವರು ಹೆಣ್ಣು ಮಕ್ಕಳು. ಮುಂದೇನಪ್ಪಾ ಅಂತ ನಮ್ಮ ತಂದೆ ಇವತ್ತಿನವರೆಗೂ ಯೋಚನೆ ಮಾಡಿದ್ದೇ ಇಲ್ಲ. ಎಲ್ಲಾ ಹೆಣ್ಣು ಮಕ್ಕಳು ನನಗೆ ಅಪಾರ ಗೌರವ ತಂದುಕೊಟ್ಟಿದ್ದಾರೆ. 50 ಗಂಡು ಮಕ್ಕಳು ಇದ್ದರೂ ಇಷ್ಟು ಕೀರ್ತಿ ತಂದುಕೊಡುತ್ತಿರಲಿಲ್ಲ ಎಂದು ನಮ್ಮ ತಂದೆ ಹೇಳುತ್ತಾರೆ. ನಮ್ಮ ತಂದೆ ಎಂದೂ ನಮ್ಮನ್ನು ಕೀಳರಿಮೆಯಿಂದ ನೋಡಲೇ ಇಲ್ಲ. ನಮ್ಮನ್ನೆಲ್ಲರನ್ನೂ ಸರಿಸಮನಾಗಿ ಕಾಣುತ್ತಿದ್ದಾರೆ ಅನ್ನೋದು ಶಿಖಾ ಒಬೆರಾಯ್ ಮಾತು.

ಅಜ್ಜಿ ಎಂದರೆ ಶಿಖಾಗೆ ಪಂಚಪ್ರಾಣ. ಜೀವನದಲ್ಲಿ ಪೂರ್ಣಪ್ರಮಾಣದ ಯಶಸ್ಸು ಸಿಗಬೇಕಾದರೆ ಹೆಣ್ಣು ಮಕ್ಕಳು ಕನಿಷ್ಠ ಪಕ್ಷ ಯಾವುದಾದರೊಂದು ಕ್ರೀಡೆ ಆಥವಾ ಬೇರೆ ವಿಷಯದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಅಂತ ನನ್ನ ಅಜ್ಜಿ ಹೇಳುತ್ತಿದ್ದರು ಎಂದು ಶಿಖಾ ನೆನಪಿಸಿಕೊಳ್ಳುತ್ತಾರೆ. ಅತೀ ಚಳಿ ಇರುವ ಪ್ರಿನ್ಸ್​​​ಟೌನ್​​ನಿಂದ ಬಿರು ಬೇಸಿಗೆಯ ನಾಡು ಫ್ಲೋರಿಡಾವರೆಗೂ ಟೆನಿಸ್ ಆಡೋದಕ್ಕೆ ಹೋಗಬೇಕಿದ್ದರೂ ಶಿಖಾಗೆ ಪೋಷಕರ ಬೆಂಬಲ ಒಂಚೂರು ಕಡಿಮೆಯಾಗಿಲ್ಲ.

image


ನಾನು ನನ್ನ ತಂದೆ ಮತ್ತು ಸಹೋದರಿ ಜೊತೆ ಟೂರ್ನಿಗಳಿಗೆ ಹೋಗುತ್ತಿದ್ದೆ. ನನ್ನ ತಂದೆ ನಮ್ಮನ್ನು ಎಷ್ಟು ಜಾಗ್ರತೆಯಿಂದ ನೋಡಿಕೊಳ್ಳುತ್ತಿದ್ದರೆಂದರೆ..ಯಾವಾಗಲೂ ಅವರು ಕಿಚನ್​​ನಲ್ಲೇ ಇರುತ್ತಿದ್ದರು. ಸರಿಯಾಗಿ ಊಟ ಮಾಡಿದ್ವೋ ಇಲ್ವೋ ಅಂತ ವಿಚಾರಿಸುತ್ತಿದ್ದರು. ನಮಗೆ ಹುಷಾರಿಲ್ಲದೇ ಇದ್ದಾಗ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಹುಡುಗರೊಂದಿಗೆ ಟೆನಿಸ್ ಮ್ಯಾಚ್ ಆಡಿಸುತ್ತಿದ್ದರು. ಆಗ ನಾವು ಅವರನ್ನು ಸೋಲಿಸಲೇಕು ಅಂತ ತಂದೆ ಹೇಳುತ್ತಿದ್ದರು ಎಂದು ಶಿಖಾ ತನ್ನ ಬಾಲ್ಯದ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ.

ಈ ಖುಷಿಯ ಜೊತೆ ಬದುಕಿನ ಕಷ್ಟದ ದಿನಗಳನ್ನೂ ನೆನಪಿಸಿಕೊಳ್ಳುತ್ತಾರೆ ಶಿಖಾ. ನಾನು 12 ವರ್ಷದವರೆಗೆ ಮಾತ್ರ ಅಮ್ಮನ ಜೊತೆಗಿದ್ದೆ. ಅಮೇಲೆ ಅಮ್ಮನ ಜೊತೆ ಇರುವ ಭಾಗ್ಯ ನನಗೆ ಸಿಕ್ಕಿಲ್ಲ ಅಂತ ಬಹಳ ನೋವಿನಿಂದ ಹೇಳ್ತಾರೆ ಶಿಖಾ. ಇವೆಲ್ಲಾ ಭಾವನಾತ್ಮಕ ವಿಚಾರಗಳನ್ನು ಯಾರ ಮುಂದೆಯೂ ತೋರ್ಪಡಿಸದೆ ಟೆನಿಸ್ ಕೋರ್ಟ್​ಗೆ ಇಳಿಯುತ್ತಿದ್ದರು ಶಿಖಾ.

10ನೇ ವಯಸ್ಸಿಗೇ ಅಮೇರಿಕಾದಲ್ಲಿ ನಂ.1 ಪ್ಲೇಯರ್

10ನೇ ವಯಸ್ಸಿಗೇ ಅಮೆರಿಕಾದಲ್ಲಿ ಜ್ಯೂನಿಯರ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ್ದರು ಶಿಖಾ ಒಬೆರಾಯ್. 17ನೇ ವಯಸ್ಸಿಗೆ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಟೆನಿಸ್​​ನಲ್ಲೇ ಪೂರ್ಣಪ್ರಮಾಣದಲ್ಲಿ ತೊಡಗಿಕೊಂಡರು. ಈ ಸಮಯದಲ್ಲಿ ಅದ್ಭುತ ಫಾರ್ಮ್​ನಲ್ಲಿದ್ದ ಶಿಖಾ ಹತ್ತು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು. 2004ರ ಯುಎಸ್ ಓಪನ್ ಟೆನಿಸ್ ಟೂರ್ನಿಯ 2ನೇ ಸುತ್ತು ತಲುಪಿದ ಸಾಧನೆ ಮಾಡಿದರು. ಈ ಸಾಧನೆ ಮಾಡಿದ 2ನೇ ಭಾರತೀಯ ವನಿತೆ ಎಂಬ ಖ್ಯಾತಿಗೆ ಪಾತ್ರರಾದರು. ಆಗ ನಮ್ಮ ಮೀಡಿಯಾಗಳು ಇವರ ಸಾಧನೆಯನ್ನು ಹಾಡಿ-ಕೊಂಡಾಡಿದವು.

ಐದು ವರ್ಷಗಳ ವೃತ್ತಿ ಜೀವನದಲ್ಲಿ ಶಿಖಾ 3 ಐಟಿಎಫ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಇಷ್ಟೇ ಅಲ್ಲ ಸಹೋದರಿ ನೇಹಾ ಜೊತೆ 2 ಡಬ್ಲ್ಯೂಟಿಎ ಟೂರ್ನಿಗಳ ಫೈನಲ್ ತಲುಪಿದ ಸಾಧನೆ ಮಾಡಿದ್ದಾರೆ. ಆದರೆ ಶಿಖಾಗೆ ಇದೇ ಕ್ಷೇತ್ರದಲ್ಲಿ ಭಾರತದ ಪರ ಆಡಲಾಗಲಿಲ್ಲ. ಯಾಕಂದ್ರೆ ಶಿಖಾಗೆ ಭಾರತದ ಪೌರತ್ವ ಇರಲಿಲ್ಲ. ತಮ್ಮ ಅಥ್ಲೀಟ್​​ಗಳನ್ನು ಭಾರತ ಸರ್ಕಾರ ನೋಡುವ ಪರಿ ಇದೇನಾ..? ಎಂದು ಹೇಳಿದ ಶಿಖಾಗೆ ಕಣ್ಣಾಲಿಗಳು ತುಂಬಿಕೊಂಡು ಬಂದವು..!

ಇಷ್ಟೆಲ್ಲಾ ಕಷ್ಟ ಕಾರ್ಪಣ್ಯ ಎದುರಿಸಿದರೂ ಶಿಖಾ ಕುಗ್ಗಲಿಲ್ಲ. ಟೆನಿಸ್ ಅಷ್ಟೇ ಬದುಕಲ್ಲ. ಛಲವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಅಂದುಕೊಂಡು ಮುನ್ನಡೆದರು. ಈ ನೋವಿನಿಂದ ಹೊರಬರಲು ಶಿಖಾಗೆ 2 ವರ್ಷ ಬೇಕಾಯಿತು. ಆದರೂ ಆತ್ಮವಿಶ್ವಾಸ ಮಾತ್ರ ಒಂಚೂರು ಕಮ್ಮಿಯಾಗಿರಲಿಲ್ಲ. ಶಿಖಾ ಸುಮ್ಮನೆ ಮನೆಯಲ್ಲಿ ಕೂರಲಿಲ್ಲ. ಸಮಾಜಕ್ಕೆ ಏನನ್ನಾದರೂ ಮಾಡಬೇಕೆಂಬ ಛಲ ಇವರಲ್ಲಿತ್ತು. ಟೆನಿಸ್ ಕ್ಷೇತ್ರದಿಂದ ಮತ್ತೆ ಶಿಕ್ಷಣ ಕ್ಷೇತ್ರಕ್ಕೆ ಧುಮುಕಿದ ಶಿಖಾ ಪ್ರಿನ್ಸ್​​​ಟೌನ್​​ನಲ್ಲೇ ಓದು ಮುಂದುವರಿಸಿದ್ರು. ಸಾಮಾಜಿಕ ಉದ್ಯಮಶೀಲತೆ ಮತ್ತು ಲಾಭದಾಯಕ ಸಾಮಾಜಿಕ ಉದ್ಯಮದ ಬಗ್ಗೆ ಆಳವಾದ ಅಧ್ಯಯನ ಮಾಡಿದ್ರು.

ಬಹುಮುಖ ಪ್ರತಿಭೆ ಶಿಖಾ..!

ಮತ್ತೆ ತಾಯ್ನಾಡಿಗೆ ಮರಳಿದ ಶಿಖಾ ಒಬೆರಾಯ್ ಸಾಮಾಜಿಕ ಬದಲಾವಣೆ ತರಲು ಪಣತೊಟ್ಟರು. ಇದಕ್ಕಾಗಿ ಮಾಧ್ಯಮದ ಮೊರೆ ಹೋದ್ರು. ನನ್ನ ದೂರ ದೃಷ್ಟಿಯ ಯೋಜನೆಗಳಿಗೆ ಯಾರೂ ಅಡ್ಡಿಯಾಗಿಲ್ಲ. ನನ್ನ ಹೂಡಿಕೆದಾರರು ಹಣದ ಹರಿವನ್ನು ಕಡಿಮೆ ಮಾಡಿಲ್ಲ.

ಶಿಖಾ ಅವರ ಎಲ್ಲಾ ಕನಸುಗಳಿಗೆ ಅಡಿಪಾಯವಾಗಿದ್ದು ಎನ್​ಡಿಟಿವಿ. ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಎನ್​​ಡಿಟಿವಿ ಸೇರಿಕೊಂಡ ಶಿಖಾ, ಹೂಡಿಕೆ ವಿಚಾರವಾಗಿ 13 ವಿಶಿಷ್ಟ ಎಪಿಸೋಡ್​​ಗಳನ್ನು ರೆಡಿ ಮಾಡಿದ್ದಾರೆ. ಇದು ಮುಂದಿನ ವರ್ಷ ಸಿಲ್ವರ್ ಸ್ಕ್ರೀನ್​ನಲ್ಲಿ ಮೋಡಿ ಮಾಡಲಿದ್ದಾರೆ. 2013ರಲ್ಲೇ ಮೀಡಿಯಾ ಮತ್ತು ಲೈಫ್​​ಸ್ಟೈಲ್ ಕಂಪೆನಿ ಸ್ಥಾಪಿಸಿದ್ದಾರೆ. ಸದ್ಯ ಮುಂಬೈನಲ್ಲಿ ನೆಲೆಸಿರುವ ಶಿಖಾ, ಟಿವಿ ಚಾನೆಲ್​​ಗಳಲ್ಲಿ ಕ್ರೀಡೆಗೆ ಸಂಬಂಧಿಸಿದ ಶೋಗಳನ್ನು ನಡೆಸಿಕೊಡುತ್ತಿದ್ದಾರೆ. ಅಂತಾರಾಷ್ಟ್ರೀಯ ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದ ರಿಯಾಲಿಟಿ ಶೋ ಮಾಡುವ ಸಿದ್ಧತೆಯಲ್ಲಿದ್ದಾರೆ. ಮಕ್ಕಳಿಗೆ ಟೆನಿಸ್ ಕೋಚಿಂಗ್ ಕೂಡಾ ಮಾಡ್ತಿದ್ದಾರೆ. ಟಿವಿ ಚಾನ್​ಲ್​​ಗಳಿಗೆ ಫಿಟ್ನೆಸ್ ಪ್ರೋಗ್ರಾಂ ಮಾಡಿಕೊಡುತ್ತಿದ್ದಾರೆ. ಕ್ರೀಡೆ ಮೂಲಕ ಮಹಿಳಾ ಸಬಲೀಕರಣ ಹೇಗೆ ಸಾಧ್ಯ ಎಂಬುದರ ಬಗ್ಗೆ ಶಿಖಾ ಹಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾಷಣ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ಸ್ಟಾರ್ಟ್ಅಪ್ಸ್, ಕಂಪೆನಿಗಳು, ಎನ್​ಜಿಓಗಳು ಭಾರತದ ಮಾರುಕಟ್ಟೆ ಪ್ರವೇಶಿಸಲು ಅವಕಾಶ ಮಾಡಿಕೊಡಿ ಅಂತ ನನ್ನನ್ನು ಸಂಪರ್ಕಿಸುತ್ತಿವೆ. ಹೀಗೆ ಭಾರತದ ಕಂಪೆನಿಗಳೂ ಕೂಡಾ ಅಮೆರಿಕಾ ಮಾರುಕಟ್ಟೆಗೆ ಲಗ್ಗೆ ಇಡಲು ನೆರವು ಮಾಡಿಕೊಡಿ ಅಂತ ನನ್ನನ್ನು ಕೇಳಿಕೊಳ್ಳುತ್ತಿವೆ ಅಂತ ಖುಷಿಯಿಂದ ಹೇಳುತ್ತಾರೆ ಶಿಖಾ. ಶಿಖಾ ಒಬೆರಾಯ್ ಅವರ ಯಶೋಗಾಥೆ ನಿಜವಾಗಿಯೂ ಎಲ್ಲರಿಗೂ ಮಾದರಿಯಾಗುವಂಥದ್ದು.

image


ಹ್ಯಾಟ್ಸ್ಆಫ್ ಟು ಶಿಖಾ..

ನಾನು ಇಷ್ಟು ಎತ್ತರಕ್ಕೆ ಬೆಳೆಯಲು ಪ್ರಿನ್ಸ್​​ಟೌನ್ ಜನರು ಮತ್ತು ವಿದ್ಯಾರ್ಥಿಗಳೇ ಕಾರಣ. ನಾನು ಅವರ ಸಹಕಾರಕ್ಕೆ ಕೃತಜ್ಞಳಾಗಿದ್ದೇನೆ. ಪ್ರಿನ್ಸ್​​ಟೌನ್​​ನಲ್ಲಿ ನಾನು ನಿಜವಾಗಿಯೂ ಚಾಂಪಿಯನ್. ನನ್ನನ್ನು ಪ್ರೋತ್ಸಾಹಿಸಿದ ಎಲ್ಲಾ ಭಾರತೀಯರಿಗೂ ನಾನು ಚಿರಋಣಿ ಎನ್ನುತ್ತಾ ಮಾತು ಮುಗಿಸಿದರು ದಿ ಗ್ರೇಟ್ ಶಿಖಾ ಒಬೆರಾಯ್..! ನಿಮಗೆ ಯುವರ್ ಸ್ಟೋರಿ ಟೀಮ್ ಕಡೆಯಿಂದಲೂ ಹ್ಯಾಟ್ಸ್ಆಫ್..!

ಲೇಖಕರು: ಬಿಂಜಾಲ್​​ ಷಾ

ಅನುವಾದಕರು: ಎಸ್​​.ಡಿ.