ಉದ್ಯಮಿಯಾದ ಶಿಕ್ಷಕ-ಹೀಗೊಂದು ವಿಶಿಷ್ಟ ಸಮಾಜ ಸೇವೆ

ಟೀಮ್​​ ವೈ.ಎಸ್​​. ಕನ್ನಡ

ಉದ್ಯಮಿಯಾದ ಶಿಕ್ಷಕ-ಹೀಗೊಂದು ವಿಶಿಷ್ಟ ಸಮಾಜ ಸೇವೆ

Thursday December 10, 2015,

4 min Read

ಕೈತುಂಬಾ ಸಂಬಳ ಸಿಗುತ್ತಿದ್ದ ಟೀಚರ್ ವೃತ್ತಿಯಿಂದ, ರಾಜಾಸ್ತಾನದ ಸಣ್ಣ ಪಟ್ಟಣದಲ್ಲಿ ಕೋಚಿಂಗ್ ಸೆಂಟರ್ ಪ್ರಾರಂಭಿಸುವವರೆಗೆ; ಕೇವಲ ಇಬ್ಬರು ವಿದ್ಯಾರ್ಥಿಗಳಿಂದ ಬರೊಬ್ಬರಿ 3,500 ವಿದ್ಯಾರ್ಥಿಗಳವರೆಗೆ, ತಾವೇ 50 ಮಂದಿ ನೌಕರರಿಗೆ ಕೆಲಸ ನೀಡುವವರೆಗೂ ಡಾ. ಫರ್ಮಾನ್ ಅಲಿ ಎಲ್ಲವನ್ನೂ ನೋಡಿದ್ದಾರೆ.

ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಹಿಂದಿ ಭಾಷೆಯಲ್ಲಿ ಎಮ್‍ಎ ಪದವಿ ಪಡೆದ ಬಳಿಕ, ಜವಾಹರ್‍ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಪಿಎಚ್‍ಡಿ ಗಳಿಸಿದ ಫರ್ಮಾನ್ ಅಲಿ, ದೆಹಲಿ ವಿಶ್ವವಿದ್ಯಾಲಯದ ಮೋತಿಲಾಲ್ ನೆಹರು ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸಕ್ಕೆ ಸೇರಿದ್ರು. ಜೊತೆಗೆ ರಾಜಸ್ತಾನ್ ವಿಶ್ವವಿದ್ಯಾಲಯದಲ್ಲೂ ಬೋಧಿಸುತ್ತಿದ್ದರು ಫರ್ಮಾನ್. ಈ ಕೆಲಸಗಳಲ್ಲೇ ಒಳ್ಳೆಯ ಸಂಬಳ ಬರುತ್ತಿದ್ದರೂ, ಖುಷಿಯಾಗಿದ್ದರೂ ಫರ್ಮಾನ್ ಅವರಿಗೆ ಸಮಾಜಕ್ಕೆ ವಾಪಸ್ ಏನನ್ನಾದ್ರೂ ನೀಡಬೇಕೆಂಬ ಅಭಿಲಾಷೆಯಿತ್ತು, ಹಾಗೂ ಏನಾದರೂ ಸಾಧಿಸಬೇಕು ಅನ್ನೋ ಛಲ ಅವರಲ್ಲಿ ಮನೆ ಮಾಡಿತ್ತು. ಹೀಗಾಗಿಯೇ ಆಲ್ವಾರ್‍ನ ತಮ್ಮ ಹುಟ್ಟೂರಿಗೆ ತೆರಳಿದ ಡಾ. ಫರ್ಮಾನ್ ಅಲಿ ಕೋಚಿಂಗ್ ಸೆಂಟರ್ ಪ್ರಾರಂಭಿಸಿದ್ರು.

image


ಉದ್ಯಮಿಯಾದ ಶಿಕ್ಷಕ ಫರ್ಮಾನ್

ಆಲ್ವಾರ್‍ನ ಶಿಕ್ಷಣ ವ್ಯವಸ್ಥೆಯಲ್ಲಿರುವ ಸಮಸ್ಯೆಗಳ ಕುರಿತು ಫರ್ಮಾನ್ ಅವರಿಗೆ ಅರಿವಿತ್ತು. ಪ್ರತಿಭಾನ್ವಿತರಾಗಿದ್ದರೂ ಹಾಗೂ ಆಸಕ್ತಿ ಹೊಂದಿದ್ದರೂ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಲ್ಲಿ ದೇಶದ ಇತರೆ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಲು ಇಲ್ಲಿನ ವಿದ್ಯಾರ್ಥಿಗಳಿಗೆ ಅಸಾಧ್ಯವಾಗಿತ್ತು. ಇದರ ಫಲಿತಾಂಶವಾಗಿ ವಿದ್ಯಾರ್ಥಿಗಳು ಓದನ್ನೇ ನಿಲ್ಲಿಸುತ್ತಿದ್ದರು ಅಥವಾ ಆಲ್ವಾರ್ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಣ್ಣ ಪುಟ್ಟ ಕೆಲಸಗಳಿಗಷ್ಟೇ ತೃಪ್ತಿಪಟ್ಟುಕೊಳ್ಳುವಂತಾಗಿತ್ತು. ಹೀಗಾಗಿಯೇ ಫರ್ಮಾನ್ ಅಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಮುಂದಾದ್ರು.

ಹೀಗಾಗಿಯೇ 2009ರಲ್ಲಿ ತಮ್ಮ ಕೆಲಸ ತೊರೆದ ಫರ್ಮಾನ್, ಆಲ್ವಾರ್‍ನಲ್ಲಿ ರಾಜಸ್ತಾನ್ ಇನ್ಸ್​​​ಟಿಟ್ಯೂಟ್ ಪ್ರಾರಂಭಿಸಿದ್ರು. ಈ ಪ್ರಯತ್ನಕ್ಕೆ ಫರ್ಮಾನ್ ಅವರ ಕುಟುಂಬದ ಸದಸ್ಯರೂ ಬೆಂಬಲವಾಗಿ ನಿಂತರು. ಅದರಲ್ಲೂ ಫರ್ಮಾನ್ ತಂದೆ, ಅವರಿಗೆ ಯೋಜನೆಯಲ್ಲಿ ಮುನ್ನಗ್ಗುವಂತೆ ಪ್ರತಿ ಹೆಜ್ಜೆಯಲ್ಲೂ ಪ್ರೋತ್ಸಾಹಿಸಿದರು. ಆಲ್ವಾರ್‍ನ ಬಹುತೇಕ ಜನ ಹೆಚ್ಚು ಶಿಕ್ಷಿತರಲ್ಲ. ಇನ್ನು ಹೆಚ್ಚು ಓದಿಕೊಂಡಿರುವ ಮಂದಿ ನಗರ ಪ್ರದೇಶಗಳಲ್ಲಿದ್ದುಕೊಂಡು, ತಮ್ಮ ವೃತ್ತಿಜೀವನ ಕಟ್ಟಿಕೊಳ್ಳುವುದರಲ್ಲೇ ಬ್ಯುಸಿಯಾಗಿರ್ತಾರೆ. ಹೀಗಾಗಿಯೇ ಫರ್ಮಾನ್ ಯಾವಾಗ ತಮ್ಮ ವೃತ್ತಿಯನ್ನು ತೊರೆದು ಆಲ್ವಾರ್‍ಗೆ ಬಂದ್ರೋ, ಅವರ ಪ್ಲ್ಯಾನ್ ಕೇಳಿ ಎಲ್ಲರೂ ಮುಸಿ ಮುಸಿ ನಕ್ಕಿದ್ದರು.

ಆದ್ರೆ ಆಲ್ವಾರ್‍ನ ಯುವ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಏನನ್ನಾದ್ರೂ ಮಾಡಲೇಬೇಕು ಅಂತ ನಿರ್ಧರಿಸಿದ್ದರು ಫರ್ಮಾನ್. ಪ್ರಾರಂಭದಲ್ಲಿ ಇವರ ಕೇಂದ್ರಕ್ಕೆ ಕೇವಲ ಇಬ್ಬರು ವಿದ್ಯಾರ್ಥಿಗಳಷ್ಟೇ ಸೇರಿದ್ರು. ಆದ್ರೆ ಒಬ್ಬರಿಂದ ಮತ್ತೊಬ್ಬರಿಗೆ ಈ ಶಿಕ್ಷಣ ಕೇಂದ್ರದ ಕುರಿತು ಮಾಹಿತಿ ಹರಡಿದ ಕಾರಣ, ಕ್ರಮೇಣ ಹೊಸ ವಿದ್ಯಾರ್ಥಿಗಳೂ ಬಂದು ಸೇರತೊಡಗಿದ್ರು. ಉತ್ತಮ ಭವಿಷ್ಯದ ಕನಸು ಹೊತ್ತು ದೂರ ದೂರದ ಗ್ರಾಮಗಳಿಂದಲೂ ಯುವಕ, ಯುವತಿಯರು ಬಂದು ಇವರ ಸಂಸ್ಥೆ ಸೇರಿದರು. ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಕೆಲವೇ ದಿನಗಳಲ್ಲಿ ರಾಜಸ್ತಾನ ಇನ್ಸ್​​​ಟಿಟ್ಯೂಟ್ ಆಲ್ವಾರ್‍ನ ವಿದ್ಯಾರ್ಥಿಗಳ ನಡುವೆ ಒಳ್ಳೆಯ ಹೆಸರು ಗಳಿಸಿತು.

ಇವತ್ತು 3,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಿಕ್ಷಣ ಕೇಂದ್ರದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪಡೆಯುತ್ತಿದ್ದಾರೆ. 20 ಮಂದಿ ಶಿಕ್ಷಕರು ಹಾಗೂ 32 ಮಂದಿ ಶಿಕ್ಷಕೇತರ ಸಿಬ್ಬಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ತರಬೇತಿ ಪಡೆದ ಹಲವು ವಿದ್ಯಾರ್ಥಿಗಳು ಅದಾಗಲೇ ರಾಜ್ಯ ಹಾಗೂ ಕೇಂದ್ರ sಸರ್ಕಾರದ ಉನ್ನತ ಹುದ್ದೆಗಳಲ್ಲಿ, ಆಡಳಿತಾತ್ಮಕ, ಶಿಕ್ಷಣ ಸಂಸ್ಥೆಗಳು ಹಾಗೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿ ಕೈಗೆಟುಕುವ ಬೆಲೆಯಲ್ಲೇ ಶಿಕ್ಷಣ ನೀಡಲಾಗುತ್ತಿದ್ದು, ಗ್ರಾಮೀಣ ಪ್ರದೇಶದ ಕುಟುಂಬದವರ ಬಜೆಟ್‍ಗೆ ಅನುಗುಣವಾಗಿಯೇ ಶುಲ್ಕ ವಿಧಿಸಲಾಗುತ್ತದೆ. ‘ರಾಜಸ್ತಾನದ ಹಲವಾರು ಮಂದಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವರಂತೂ ದೇಶಕ್ಕಾಗಿ ತಮ್ಮ ಜೀವವನ್ನೇ ಬಲಿದಾನ ನೀಡಿದ್ದಾರೆ. ಅಂತಹ ಸೈನಿಕರ ತ್ಯಾಗಕ್ಕೆ ಕೃತಜ್ಞತೆ ಸಲ್ಲಿಸಲು ಅವರ ಮಕ್ಕಳಿಗೆ ನಾವಿಲ್ಲಿ ಉಚಿತ ಶಿಕ್ಷಣ ನೀಡುತ್ತೇವೆ. ಜೊತೆಗೆ ತಂದೆಯನ್ನು ಕಳೆದುಕೊಂಡ ಮಕ್ಕಳಿಗೂ ಉಚಿತ ತರಬೇತಿ ನೀಡುತ್ತೇವೆ. ಹಾಗೇ ಮುಂದಿನ ದಿನಗಳಲ್ಲಿ ವಿಕಲಾತೀತ ಮಕ್ಕಳಿಗೂ ಉಚಿತ ಶಿಕ್ಷಣ ನೀಡಲು ಚಿಂತನೆ ನಡೆಸುತ್ತಿದ್ದೇವೆ.’ ಅಂತ ಧನ್ಯತಾಭಾವದಲ್ಲಿ ಹೇಳುತ್ತಾರೆ ಡಾ. ಫರ್ಮಾನ್.

ಸಾಮಾಜಿಕ ಕಾರ್ಯಕರ್ತ

ಆಲ್ವಾರ್‍ನ ಕಲೆ, ಸಾಹಿತ್ಯ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳ ಪ್ರವರ್ತಕರಾಗಿಯೂ ಫರ್ಮಾನ್ ಗುರುತಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ ಆಲ್ವಾರ್‍ನಲ್ಲಿ ಪ್ರತಿವರ್ಷ ಆಯೋಜಿಸಲಾಗುವ ರಾಮ್‍ಲೀಲಾ ಪ್ರದರ್ಶನದಲ್ಲೂ ಫರ್ಮಾನ್ ಭಾಗವಹಿಸುತ್ತಾರೆ. ರಾಮ್‍ಲೀಲಾ ನಾಟಕದ ಆರಂಭಕ್ಕೂ ಮೊದಲು ಪ್ರಾರ್ಥನೆ ಮಾಡುವ ಕಲಾವಿದರಲ್ಲಿ ಫರ್ಮಾನ್ ಕೂಡ ಒಬ್ಬರು. ಹಾಗೇ ಆಗಾಗ್ಗೆ ಆಲ್ವಾರ್ ಸುತ್ತಮುತ್ತಲಿನ ಗ್ರಾಮಗಳಿಗೆ ಭೇಟಿ ನೀಡುವ ಡಾ. ಫರ್ಮಾನ್ ಯುವ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಮಾರ್ಗದರ್ಶನ ನೀಡ್ತಾರೆ.

ಕಳೆದ ಹಲವು ವರ್ಷಗಳಿಂದ ಹೀಗೆ ಆಲ್ವಾರ್ ಸುತ್ತಮುತ್ತಲಿನ ಗ್ರಾಮಸ್ಥರ ಜೊತೆ ಫರ್ಮಾನ್ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಶಿಕ್ಷಣದ ಮಹತ್ವದ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸುವುದರ ಜೊತೆಗೆ ಉತ್ತಮ ಭವಿಷ್ಯ ರೂಪಿಸಲು ಮಕ್ಕಳು ಮತ್ತು ಪೋಷಕರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಶಿಕ್ಷಣ ಕೇವಲ ಉಳ್ಳವರ ಪಾಲಾಗದೇ, ಬಡ-ಬಗ್ಗರಿಗೂ ಸಿಗುವಂತೆ ಮಾಡಲು ಸಣ್ಣ ಶಾಲೆಗಳೊಂದಿಗೆ ಮತ್ತು ಸ್ಥಳೀಯ ಎನ್‍ಜಿಓಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ ಫರ್ಮಾನ್.

ಫರ್ಮಾನ್ ಮತ್ತವರ ಪತ್ನಿ ಆಲ್ವಾರ್ ಜನರ ಅಭಿವೃದ್ಧಿಗಾಗಿ ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ. ಅವರ ಪತ್ನಿ ಆಗಾಗ್ಗೆ ಸುತ್ತಮುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿ, ಅಲ್ಲಿನ ಮಹಿಳೆಯರಿಗೆ ಆರೋಗ್ಯ ಮತ್ತು ನೈರ್ಮಲ್ಯಗಳ ಕುರಿತು ಅರಿವು ಮೂಡಿಸುತ್ತಿದ್ದಾರೆ. ವೈದ್ಯಕೀಯ ಸೌಲಭ್ಯಗಳ ಕುರಿತು ಮಾಹಿತಿಯಿಲ್ಲದ, ವೈದ್ಯಕೀಯ ಸೇವೆ ಪಡೆಯಲು ಅಶಕ್ತರಾದ ಹಾಗೂ ವೈದ್ಯರ ಬಳಿ ತಮ್ಮ ಸಮಸ್ಯೆ ಹೇಳಿಕೊಳ್ಳಲು ಮುಜುಗರ ಪಡುವ ಮಹಿಳೆಯರಿಗೆ ಫರ್ಮಾನ್ ದಂಪತಿಯ ಮನೆ ಬಾಗಿಲು ಯಾವಾಗಲೂ ತೆರೆದಿರುತ್ತದೆ.

image


ಒಂದು ಅರ್ಥಪೂರ್ಣ ಬದುಕು

ಇದುವರೆಗೂ ಆಲ್ವಾರ್ ಮತ್ತು ಅದರ ಜನರಿಗೆ ಮಾಡಿರುವ ಯಾವುದೇ ಸಹಾಯಕ್ಕೆ ಫರ್ಮಾನ್ ಸರ್ಕಾರ ಮಾತ್ರವಲ್ಲ ಯಾವ ಸಂಘಸಂಸ್ಥೆಯಿಂದಲೇ ಧನ ಸಹಾಯ ಪಡೆದಿಲ್ಲ. ರಾಜಸ್ತಾನ್ ಇನ್ಸ್‍ಟಿಟ್ಯೂಟ್‍ನಿಂದ ಬರುವ ಹಣದಿಂದಲೇ ಅವರು ತಮ್ಮ ಸಮಾಜಮುಖೀ ಕೆಲಸ ಮುಂದುವರಿಸಿದ್ದಾರೆ. ಹೀಗೆ ಅತ್ಯಂತ ಬ್ಯುಸಿ ಹಾಗೂ ಅರ್ಥಪೂರ್ಣ ಜೀವನ ಸಾಗಿಸುತ್ತಿದ್ದಾರೆ. ಬೆಳಗ್ಗೆ ಬೇಗನೇ ಮನೆಯಿಂದ ಹೊರಟು, 12 ತಾಸುಗಳ ಕಾಲ ಇನ್ಸ್‍ಟಿಟ್ಯೂಟ್‍ನಲ್ಲಿ ಮಕ್ಕಳಿಗೆ ಪಾಠ ಮಾಡ್ತಾರೆ, ನಂತರ ಉಳಿದ ದಿನವನ್ನು ಸಮೀಪದ ಹಳ್ಳಿಗಳಿಗೆ ತೆರಳಿ, ಮಕ್ಕಳು ಮತ್ತು ಪೋಷಕರಿಗೆ ಶಿಕ್ಷಣದ ಮಹತ್ವ ಸಾರುತ್ತಾ, ಸಮಾಲೋಚನೆ ನಡೆಸುತ್ತಾರೆ. ನಂತರ ಮಧ್ಯರಾತ್ರಿ ಮನೆಗೆ ವಾಪಸ್ ಬರುತ್ತಾರೆ. ಹೀಗೆ ಮುಂಜಾವಿನಿಂದ ಮಧ್ಯರಾತ್ರಿಯವರೆಗೂ ಫರ್ಮಾನ್ ತುಂಬಾ ಬ್ಯುಸಿಯಾಗಿರ್ತಾರೆ. ಅವರ ರಜಾ ದಿನಗಳೂ ಸಹ ಗ್ರಾಮೀಣ ಮಕ್ಕಳೊಂದಿಗೇ ಮುಗಿದುಹೋಗುತ್ತೆ.

‘ಎಲ್ಲಾ ಸಮಸ್ಯೆಗಳಿಗೂ ಶಿಕ್ಷಣವೇ ಪರಿಹಾರ. ಭಾರತವನ್ನು ಉತ್ತಮ ದೇಶವನ್ನಾಗಿ ರೂಪಿಸಬೇಕು ಅಂದ್ರೆ, ನಾವೆಲ್ಲರೂ ಒಂದಾಗಿ ಕೆಲಸ ಮಾಡಬೇಕು. ಪ್ರತಿಯೊಂದು ಹಳ್ಳಿ ಮತ್ತು ಪಟ್ಟಣಗಳಿಗೆ ಶಿಕ್ಷಣದ ಬೆಳಕನ್ನು ಹರಿಸಬೇಕು. ಇದು ಕೇವಲ ಸರ್ಕಾರದ ಕೆಲಸವಲ್ಲ, ಜವಾಬ್ದಾರಿಯುತ ನಾಗರೀಕರಾದ ನಮ್ಮ ಕೆಲಸವೂ ಹೌದು ಅಂತ ನಂಬಿದ್ದೇನೆ.’ ಅಂತಾರೆ ಫರ್ಮಾನ್.

ಶಿಕ್ಷಣ ವ್ಯವಸ್ಥೆ ಇಬ್ಭಾಗವಾಗಿರುವ, ಶ್ರೀಮಂತರಿಗಷ್ಟೇ ಖಾಸಗಿ ಶಿಕ್ಷಣ ಸೀಮಿತವಾಗಿರುವ ಹಾಗೂ ಸಾರ್ವಜನಿಕ, ಸರ್ಕಾರೀ ಶಾಲೆಗಳು ಸೌಲಭ್ಯ ಹಾಗೂ ಉತ್ತಮ ಶಿಕ್ಷಕರಿಂದ ವಂಚಿರವಾಗಿರುವ ನಮ್ಮ ಈ ಸಮಾಜದಲ್ಲಿ, ಫರ್ಮಾನ್‍ರ ದೂರದೃಷ್ಟಿ ಮತ್ತು ಕೆಲಸಗಳು ನಿಜಕ್ಕೂ ಶ್ಲಾಘನೀಯ. ಬಡ ಹಾಗೂ ಶೋಷಿತ ವರ್ಗದ ಬಾಗಿಲಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಹೊತ್ತೊಯ್ಯುವ ಅವರ ಹೋರಾಟ ಬಹುಪಾಲು ಜನರಿಗೆ ಅತ್ಯುತ್ತಮ ಅವಕಾಶ ಕಲ್ಪಿಸಿದೆ. ಇನ್ನೂ ಹೆಚ್ಚಿನ ಉದ್ಯಮಿಗಳು ಇದೇ ಮಾರ್ಗದಲ್ಲಿ ನಡೆಯುತ್ತಾರೆಂಬ ನಂಬಿಕೆ ನಮ್ಮದು.

ಲೇಖಕರು: ಸೌರವ್​​ ರಾಯ್​​

ಅನುವಾದಕರು: ವಿಶಾಂತ್​​​