ಒಂದೇ ವರ್ಷದಲ್ಲಿ ನಷ್ಟದ ಸುಳಿಗೆ ಸಿಲುಕಿದ ಉದ್ಯಮ- 15 ಲಕ್ಷ ರೂಪಾಯಿ ನಷ್ಟದ ಜೊತೆಗೆ ಸಂಸ್ಥೆಗೆ ಬಿತ್ತು ಬೀಗ

ಟೀಮ್​​ ವೈ.ಎಸ್​​. ಕನ್ನಡ

0

ಉದ್ಯಮದಿಂದ ಲಕ್ಷಾಂತರ ರೂಪಾಯಿ ಗಳಿಸಬಹುದೆಂದು ನಾನು ಅಂದುಕೊಂಡಿದ್ದೆ, ಆದ್ರೆ ಆ ಪ್ರಯತ್ನದಲ್ಲಿ ಸಂಪೂರ್ಣ ವಿಫಲನಾಗಿದ್ದೇನೆ. ಫ್ಲಿಪ್‍ಕಾರ್ಟ್, ಝೊಮೇಟೋದಂತಹ ಸಂಸ್ಥೆಗಳ ಯಶಸ್ಸಿನ ಕಹಾನಿಯನ್ನು ನಾನು ಓದಿದ್ದೆ, ಆದ್ರೆ ಎಲ್ಲೂ 2 ವರ್ಷಗಳಲ್ಲಿ ಕಂಪನಿ ನೆಲಕಚ್ಚಿದ ಉದಾಹರಣೆಗಳೇ ಇರಲಿಲ್ಲ. ಆದ್ರೆ ನನ್ನ ಉದ್ಯಮ ಮೊದಲ ವರ್ಷದಲ್ಲೇ ಕೈಕೊಟ್ಟಿತ್ತು. ಒಮ್ಮೊಮ್ಮೆ ನನಗೆ ಮೋಸವಾಗಿದೆ ಎನಿಸುತ್ತೆ, ಅದರ ಬೆನ್ನಲ್ಲೇ ತಪ್ಪು ನನ್ನದೇ ಅನ್ನೋದು ಅರಿವಾಗುತ್ತೆ. ನಾನು ಕಥೆಯ ಒಂದು ಭಾಗದಲ್ಲಿ ಮಾತ್ರ ನಂಬಿಕೆ ಇಟ್ಟಿದ್ದೆ. ಇವತ್ತು ಕಥೆಯ ಇನ್ನೊಂದು ಭಾಗವನ್ನು ಹೇಳ್ತೀನಿ ಕೇಳಿ.

ಅದು 2013ರ ಏಪ್ರಿಲ್, ಉದ್ಯೋಗದಲ್ಲಿ ನನಗ್ಯಾಕೋ ಸಮಾಧಾನವಿರಲಿಲ್ಲ. ಕೆಲಸ ಬಿಟ್ಟು ಬಿಡೋಣ ಎನಿಸುವಷ್ಟರ ಮಟ್ಟಿಗೆ ಆಸಕ್ತಿ ಕಳೆದುಕೊಂಡಿದ್ದೆ. ಆಗಷ್ಟೆ ಅಮೆರಿಕದಿಂದ ಮರಳಿದ್ದ ನಾನು, ಭಾರತದಲ್ಲೇ ಸೆಟಲ್ ಆಗಲು ಅವಕಾಶ ಮಾಡಿಕೊಡುವಂತೆ ಮ್ಯಾನೇಜರ್ ಬಳಿ ಕೇಳಿಕೊಂಡಿದ್ದೆ. ಸ್ವಂತ ಉದ್ಯಮ ಆರಂಭಿಸುವ ಕನಸಿದ್ರೂ ದೈರ್ಯವಿರಲಿಲ್ಲ. ಸ್ನೇಹಿತನ ಜೊತೆ ಈ ವಿಚಾರ ಚರ್ಚಿಸಿದೆ. ಇಬ್ಬರೂ ಸೇರಿ ಉದ್ಯಮ ಆರಂಭಿಸಲು ನಿರ್ಧರಿಸಿದ್ವಿ. ನಾನು ಕೂಡಿಟ್ಟಿದ್ದ ಹಣವನ್ನೆಲ್ಲ ಅದಕ್ಕಾಗೇ ಉಪಯೋಗಿಸಲು ಮುಂದಾದೆ. ಗುರ್‍ಗಾಂವ್‍ನಲ್ಲಿ ಕಚೇರಿ ಆರಂಭಿಸಿದ ನಾವು, 5 ಲಕ್ಷ ರೂಪಾಯಿ ಹೂಡಿಕೆ ಮಾಡಿ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಶುರು ಮಾಡಿದ್ವಿ. ಶಿಕ್ಷಣ ಅನ್ನೋದು ಬಿಲಿಯನ್ ಡಾಲರ್ ಇಂಡಸ್ಟ್ರಿ ಹಾಗಾಗಿ ಶಾಲೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ನಾನು ತೀರ್ಮಾನಿಸಿದ್ದೆ. ಶಾಲೆಗಳಿಗೆ ಬೇಕಾದ ಉತ್ಪನ್ನವೊಂದನ್ನು ತಯಾರಿಸಿ ಭರ್ಜರಿ ಲಾಭ ಗಳಿಸುವ ಲೆಕ್ಕಾಚಾರದಲ್ಲಿದ್ವಿ. ಸಿಬ್ಬಂದಿ ನೇಮಕವಂತೂ ಸಖತ್ ಈಸಿ ಅನ್ನೋ ಭಾವನೆ ನನ್ನಲ್ಲಿತ್ತು. ಹತ್ತಾರು ಜನರನ್ನು ನಾವು ಭೇಟಿಯಾದ್ವಿ, ಆದ್ರೆ ಒಬ್ಬರು ಕೂಡ ನಮ್ಮ ಸಂಸ್ಥೆ ಸೇರಲು ಆಸಕ್ತಿ ತೋರಿಸಲಿಲ್ಲ.

ನಾವಿಬ್ರೂ ಕಾರ್ಪೊರೇಟ್ ವಲಯದಿಂದ ಬಂದವರಾಗಿದ್ರಿಂದ ನೇಮಕಾತಿ ನಿಯಮದ ಕರಡನ್ನು ಸಿದ್ಧಮಾಡಲು ಸುಮಾರು ಸಮಯ ವ್ಯಯಿಸಿದ್ವಿ. ಮೂಲ ವೇತನದ ಜೊತೆಗೆ, ಬೋನಸ್, ಇನ್‍ಸೆಂಟಿವ್ಸ್ ಎಲ್ಲವನ್ನೂ ಆಫರ್ ಮಾಡಿದ್ವಿ. ಬೇರೆ ಕಚೇರಿಗೆ ಶಿಫ್ಟ್ ಆದ ಬೆನ್ನಲ್ಲೇ ಒಬ್ಬನನ್ನು ಕೆಲಸಕ್ಕೆ ನೇಮಕ ಮಾಡಿಕೊಂಡ್ವಿ. ಮತ್ತೋರ್ವನ ತಾಂತ್ರಿಕ ನೈಪುಣ್ಯ ಚೆನ್ನಾಗಿದ್ದಿದ್ರಿಂದ ಆತನನ್ನೂ ಕೆಲಸಕ್ಕೆ ನೇಮಿಸಿಕೊಳ್ಳಲು ನಿರ್ಧಾರ ಮಾಡಿದ್ವಿ. ಆದ್ರೆ ಆತ ಸಿಕ್ಕಾಪಟ್ಟೆ ದುಬಾರಿಯಾಗಿದ್ದ. ಆದ್ರೂ ವರ್ಷಾಂತ್ಯದೊಳಗೆ ಹೇಗಾದ್ರೂ ಮಾಡಿ ಆದಾಯ ಗಳಿಸಬಹುದು ಅನ್ನೋ ಲೆಕ್ಕಾಚಾರದ ಮೇಲೆ ಇನ್‍ಸೆಂಟಿವ್ ಆಫರ್ ಕೂಡ ಕೊಟ್ಟು ಆತನನ್ನೂ ನೇಮಿಸಿಕೊಂಡ್ವಿ. ಉತ್ಪನ್ನವನ್ನು ನಾನು ವಿನ್ಯಾಸಗೊಳಿಸಿದೆ, ಇಬ್ಬರು ಡೆವಲಪರ್‍ಗಳು ಕೋಡಿಂಗ್ ಆರಂಭಿಸಿದ್ರು. ನಮ್ಮ ಉತ್ಪನ್ನ ಒಂದು ಆಕಾರ ಪಡೆಯುತ್ತಿದ್ದಿದ್ರಿಂದ ಉತ್ಸಾಹ ಹೆಚ್ಚಿತ್ತು, ಆದ್ರೆ ನೇಮಕಾತಿಯ ಬಿಸಿ ಕೂಡ ನಮಗೆ ಚೆನ್ನಾಗಿಯೇ ತಟ್ಟಿತ್ತು.

ಇದ್ದಕ್ಕಿದ್ದಂತೆ ಅನಿರೀಕ್ಷಿತ ಸಮಸ್ಯೆಗಳು ಎದುರಾಗಲಾರಂಬಿಸಿದ್ವು. ಜೂನಿಯರ್ ನಮ್ಮ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸದೇ ಇದ್ದಿದ್ರಿಂದ ಆತನನ್ನು ಕೆಲಸದಿಂದ ತೆಗೆದುಹಾಕಬೇಕಾಯ್ತು. ಕೇವಲ ನಾಲ್ವರು ಜೊತೆಯಾಗಿ ನಮ್ಮ ಉತ್ಪನ್ನದ ಮೊದಲ ಅವತರಣಿಕೆಯನ್ನು ಸಿದ್ಧಗೊಳಿಸಿದ್ವಿ. ನಮ್ಮ ಉತ್ಪನ್ನ ಬಿಸಿ ಬಿಸಿ ಕೇಕ್‍ನಂತೆ ಮಾರಾಟವಾಗುತ್ತೆ ಅನ್ನೋ ವಿಶ್ವಾಸ ನಮಗಿತ್ತು. ಸ್ಪರ್ಧಿಗಳನ್ನು ಮೀರಿಸಲು ಬೇಕಾದ ಎಲ್ಲ ಲಕ್ಷಣಗಳನ್ನೂ ನಮ್ಮ ಉತ್ಪನ್ನದಲ್ಲಿ ಅಳವಡಿಸಲಾಗಿತ್ತು. ಆದ್ರೆ ವಿನ್ಯಾಸದ ಬಗ್ಗೆ ನಮಗಷ್ಟು ಸಮಾಧಾನವಿರಲಿಲ್ಲ, ಹಾಗಾಗಿ ಡಿಸೈನರ್‍ಗಾಗಿ ಹುಡುಕಾಟ ನಡೆಸುತ್ತಿದ್ವಿ.

ನಮ್ಮ ಮೊದಲ ಗ್ರಾಹಕಿಗೆ ಉತ್ಪನ್ನ ಹಾಗೂ ಐಡಿಯಾ ಎರಡೂ ಇಷ್ಟವಾಯ್ತು. ಆದ್ರೆ ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಾಗಿದ್ರಿಂದ ಅವರು ಖರೀದಿ ನಿರ್ಧಾರವನ್ನು ತಡೆಹಿಡಿದಿದ್ರು. ಆಕೆಗೆ ಸೇಲ್ಸ್ ಮಟೀರಿಯಲ್‍ಗಳನ್ನು ಕಳಿಸಿದ ನಾವು ಕೆಲ ತಿಂಗಳುಗಳಲ್ಲಿ ಸಾಫ್ಟ್​​​ವೇರ್ ಅಭಿವೃದ್ಧಿಪಡಿಸಲು ನಿರ್ಧಾರ ಮಾಡಿದ್ವಿ. ಕಳೆದ 6 ತಿಂಗಳಲ್ಲಿ ನಾವು ವೆಚ್ಚ ಮಾಡಿದ್ದು ಎಷ್ಟು ಗೊತ್ತಾ?

ಕಂಪನಿ ಸ್ಥಾಪನೆಗೆ : 30,000 ರೂ.

ಕಚೇರಿ ನವೀಕರಣ : 120,000 ರೂ.

ಎಸಿ/ಫ್ರಿಡ್ಜ್/ಇನ್‍ವರ್ಟರ್ : 40,000 ರೂ.

ವೇತನ : 3,60,000 + 1,00,000 + 65,000 ರೂ.

ಪ್ರಯಾಣ, ಆಹಾರ, ಮಾರ್ಕೆಟಿಂಗ್ ಮಟೀರಿಯಲ್ : 1,00,000 ರೂ.

---------------------------------------

ಒಟ್ಟು ವೆಚ್ಚ : 9,56,000 ರೂ.

---------------------------------------

ನಮ್ಮ ಡೆವಲಪ್‍ಮೆಂಟ್ ಕಚೇರಿಯನ್ನು ಚಂಡೀಗಢಕ್ಕೆ ಶಿಫ್ಟ್ ಮಾಡಲು ನಾನು ನಿರ್ಧರಿಸಿದ್ದೆ. ನನ್ನ ಸ್ನೇಹಿತ ಗುರ್‍ಗಾಂವ್‍ನಲ್ಲೇ ಇದ್ದುಕೊಂಡು ಸೇಲ್ಸ್ ವಿಭಾಗ ನೋಡಿಕೊಳ್ಳುವುದು ಎಂದು ಯೋಜನೆ ಹಾಕಿಕೊಳ್ಳಲಾಯ್ತು. ಇದರಿಂದ ನಮಗಾದ ಪ್ರಯೋಜನಗಳು,

1. ಗುರ್‍ಗಾಂವ್‍ನಿಂದ ಚಂಡೀಗಢಕ್ಕೆ, ಚಂಡೀಗಢದಿಂದ ಗುರ್‍ಗಾಂವ್‍ಗೆ ಓಡಾಡುವ ಬದಲು ನಮ್ಮ ಸೀನಿಯರ್ ಡೆವಲಪರ್, ಉತ್ಪನ್ನ ಅಭಿವೃದ್ಧಿ ಬಗ್ಗೆ ಹೆಚ್ಚು ಗಮನಹರಿಸಬಹುದು.

2. ಕಚೇರಿ ಬಾಡಿಗೆ ಹಣವನ್ನು ಉಳಿಸಬಹುದು.

3. ನನ್ನ ಜೀವನ ವೆಚ್ಚದ ಹಣವನ್ನೂ ಉಳಿತಾಯ ಮಾಡಬಹುದು.

ಅಷ್ಟರಲ್ಲಾಗ್ಲೇ ನಮಗೆ ಆಘಾತ ಕಾದಿತ್ತು. ನಮ್ಮ ಡಿಸೈನರ್ ಲ್ಯಾಪ್‍ಟಾಪ್ ಜೊತೆ ಎಸ್ಕೇಪ್ ಆಗಿದ್ದ. ಅವನನ್ನು ಹಿಡಿದು ಲ್ಯಾಪ್‍ಟಾಪನ್ನೇನೋ ವಶಪಡಿಸಿಕೊಂಡೆವು, ಆದ್ರೆ ಇದ್ದ ಒಬ್ಬನೇ ಒಬ್ಬ ಡಿಸೈನರ್‍ನನ್ನು ಕಳೆದುಕೊಳ್ಳಬೇಕಾಯ್ತು. ನಾನು ಅದನ್ನೇ ಸವಾಲಾಗಿ ತೆಗೆದುಕೊಂಡು ವೆಬ್ ಡಿಸೈನಿಂಗ್ ಕಲಿತೆ. ಒಂದು ತಿಂಗಳು ಶ್ರಮಪಟ್ಟು ಹೊಸ ವಿನ್ಯಾಸದೊಂದಿಗೆ ಉತ್ಪನ್ನವನ್ನು ಬಿಡುಗಡೆ ಮಾಡಿದ್ವಿ. ನಾವ್ಯಾರೂ ಮಾರಾಟ ಹಿನ್ನೆಲೆಯುಳ್ಳವರಲ್ಲದ್ದರಿಂದ ಉತ್ಪನ್ನವನ್ನು ಶಾಲೆಗಳಿಗೆ ಮಾರುವ ಪ್ರಯತ್ನ ಸಫಲವಾಗಲೇ ಇಲ್ಲ.

1. ಅಪಾಯಿಂಟ್‍ಮೆಂಟ್ ಪಡೆಯುವುದೇ ಕಷ್ಟವಾಯ್ತು.

2. 10-12 ಶಾಲೆಗಳನ್ನು ಸಂಪರ್ಕಿಸಿದರೂ ಫಲಿತಾಂಶ ಶೂನ್ಯ.

3. ಗೇಟ್ ಕೀಪರ್‍ಗಳನ್ನು ದಾಟಿ ಹೋಗುವುದೇ ಕಷ್ಟವಾಗಿತ್ತು.

4. ನಾವು ಭೇಟಿಯಾದ ಪ್ರಾಂಶುಪಾಲರಲ್ಲಿ ಒಬ್ಬರಿಗೂ ನಿರ್ಧಾರ ತಗೆದುಕೊಳ್ಳುವ ಸಾಮಥ್ರ್ಯವಿರಲಿಲ್ಲ.

5. ಶಾಲೆಗಳಲ್ಲಿ ಮುಖ್ಯಸ್ಥರು ಲಭ್ಯವಿರುತ್ತಿರಲಿಲ್ಲ.

6. ಬಹುತೇಕ ಶಾಲೆಗಳ ಆಡಳಿತಾಧಿಕಾರಿಗಳು ಇಮೇಲ್ ನೋಡುತ್ತಿರಲಿಲ್ಲ/ ಪ್ರತಿಕ್ರಿಯಿಸುತ್ತಿರಲಿಲ್ಲ.

7. 2-3 ತಿಂಗಳು ಕಾದರೂ ಉತ್ಪನ್ನ ಮಾತ್ರ ಮಾರಾಟವಾಗಲಿಲ್ಲ.

ಮಾರಾಟದ ಬಗ್ಗೆ ತರಬೇತಿ ಪಡೆಯಲು ಅಹಮದಾಬಾದ್‍ನ ಒಬ್ಬರು ತಜ್ಞರನ್ನು ನೇಮಿಸಿಕೊಂಡ್ವಿ. ನಮ್ಮ ಉತ್ಪನ್ನ ಕಡಿಮೆ ಬೆಲೆಯ ಜೊತೆಗೆ ಪ್ರತಿಸ್ವರ್ಧಿಗಳ ಉತ್ಪನ್ನಕ್ಕಿಂತ ಹೆಚ್ಚು ಪ್ರಯೋಜನಕಾರಿಯಾಗಿದ್ರೂ ಮಾರಾಟ ಮಾತ್ರ ಆಗ್ತಿರಲಿಲ್ಲ. ಇನ್ನು ಕೆಲವು ವೈಶಿಷ್ಟ್ಯತೆಗಳನ್ನು ಅಳವಡಿಸಿದ್ರೆ ಉತ್ಪನ್ನಗಳನ್ನು ಕೊಂಡುಕೊಳ್ಳುವುದಾಗಿ ದೊಡ್ಡ ವಿದ್ಯಾಸಂಸ್ಥೆಯೊಂದು ಹೇಳಿತ್ತು. ಆದ್ರೆ ಕಡಿಮೆ ಬೆಲೆಯನ್ನು ನಿಗದಿಪಡಿಸಿ ಸಣ್ಣ, ಮತ್ತು ಮಧ್ಯಮ ಗಾತ್ರದ ಶಾಲೆಗಳಿಗೆ ಮಾರಾಟ ಮಾಡಿದ್ರೆ ಆದಾಯ ಸಂಗ್ರಹಿಸಬಹುದು ಅನ್ನೋದು ನನ್ನ ಯೋಜನೆಯಾಗಿತ್ತು. ಆದ್ರೆ ನನ್ನ ಸ್ನೇಹಿತ ಇದನ್ನು ಒಪ್ಪಲಿಲ್ಲ. ಇದೇ ವಿಚಾರಕ್ಕೆ ನಮ್ಮಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಶುರುವಾಯ್ತು. ಅದೇ ಸಮಯಕ್ಕೆ ನಮಗೆ ಹಣಕಾಸಿನ ಕೊರತೆಯೂ ಎದುರಾಯ್ತು, ಮತ್ತಷ್ಟು ಹಣ ಹೊಂದಿಸಿದ ನಾವು, ಬಲವಾದ ಪ್ರತಿಸ್ಪರ್ಧಿಯ ಬಳಿಯಿದ್ದ ಸೇಲ್ಸ್ ತಜ್ಞನನ್ನು ನೇಮಕ ಮಾಡಿಕೊಂಡ್ವಿ. ಆತ ಮಾರಾಟದ ರಹಸ್ಯಗಳನ್ನೆಲ್ಲ ಬಿಚ್ಚಿಡೋದ್ರಿಂದ ನಮಗೆ ಯಶಸ್ಸು ಗ್ಯಾರಂಟಿ ಎಂದುಕೊಂಡ್ವಿ. ಆದ್ರೆ ಒಂದು ತಿಂಗಳು ನಮ್ಮೊಂದಿಗೆ ಕೆಲಸ ಮಾಡಿದ್ರೂ ಆತನಿಂದ ಒಂದೇ ಒಂದು ಉತ್ಪನ್ನವನ್ನೂ ಸೇಲ್ ಮಾಡಲು ಸಾಧ್ಯವಾಗಲಿಲ್ಲ. ಯಾಕಂದ್ರೆ ಆತ ಹಿಂದಿದ್ದ ಸಂಸ್ಥೆಯಲ್ಲೆಲ್ಲ ಬ್ರ್ಯಾಂಡ್ ನೇಮ್ ವರ್ಕೌಟ್ ಆಗ್ತಿತ್ತು. ಹೇಗಾದ್ರೂ ಸಂಸ್ಥೆಯನ್ನು ಉಳಿಸಿಕೊಳ್ಳಲು ನಮಗೆ ಹಣ ಬೇಕಿತ್ತು. ಮುಂಗಡವಾಗಿ ಹಣ ಕೊಡುವ ಶಾಲೆಗಳಿಗಾಗಿ ನನ್ನ ಸ್ನೇಹಿತ ಹುಡುಕಾಟ ನಡೆಸಿದ್ದ. ರಾಜಕಾರಣಿಗಳು ಹಾಗೂ ಪ್ರಭಾವಿಗಳ ಮೊರೆ ಹೋಗಿದ್ದ.

ನಾನು ಉದ್ಯಮದ ಅಸಲಿ ನಿಯಮಗಳನ್ನು ಅರಿಯಲು ಬ್ಲಾಗ್ ಹಾಗೂ ಪುಸ್ತಕಗಳನ್ನು ತಡಕಾಡಲಾರಂಬಿಸಿದ್ದೆ. ಕಡಿಮೆ ಸಂಪನ್ಮೂಲದಿಂದ ಹೆಚ್ಚು ಆದಾಯ ಗಳಿಸುವುದು ನನ್ನ ಲೆಕ್ಕಾಚಾರವಾಗಿತ್ತು. ಆದ್ರೆ ನನ್ನ ಸಹಸಂಸ್ಥಾಪಕ ಮಾತ್ರ ದೊಡ್ಡ ಕಾರ್ಪೊರೇಟ್ ಕಂಪನಿಯ ದೃಷ್ಟಿಕೋನದಲ್ಲೇ ಯೋಚಿಸುತ್ತಿದ್ದ. ಖರ್ಚು ಕಡಿಮೆ ಮಾಡಲು ನಾನು ಕೆಲ ಪ್ರಸ್ತಾಪಗಳನ್ನಿಟ್ಟಿದ್ದೆ.

1. ಹಣದ ಬದಲು ಈಕ್ವಿಟಿ ಕೊಟ್ಟು ಡೆವಲಪರ್‍ನನ್ನು ವಾಪಸ್ ಕರೆಸಿಕೊಳ್ಳುವುದು.

2. ದೊಡ್ಡ ದೊಡ್ಡ ಶಾಲೆಗಳಿಗಾಗಿ ಹುಡುಕಾಡುವುದನ್ನು ಬಿಟ್ಟು, ಸಣ್ಣ ಶಾಲೆಗಳ ಮೇಲೆ ಗಮನ ಕೇಂದ್ರೀಕರಿಸುವುದು.

3. ನಗರದಿಂದ ಹೊರಗಿರುವ ಶಾಲೆಗಳನ್ನೇ ಟಾರ್ಗೆಟ್ ಮಾಡುವುದು.

4. ನಮ್ಮೆಲ್ಲಾ ಸಮಯವನ್ನು ಸೇಲ್ಸ್‍ಗೆ ಮೀಸಲಾಗಿಡುವುದು.

ಆದ್ರೆ ಯಾವುದೂ ನಾವಂದುಕೊಂಡಂತೆ ಆಗಲಿಲ್ಲ. ಕೊನೆಗೆ ಸಹಸಂಸ್ಥಾಪಕ ನನ್ನ ಕಂಪನಿಯನ್ನು ತನ್ನ ವಶಕ್ಕೆ ತೆಗೆದುಕೊಂಡ. ಭವಿಷ್ಯದಲ್ಲಿ ಸಂಸ್ಥೆ ಲಾಭಗಳಿಸಲು ವಿಫಲವಾದ್ರೆ ನನ್ನ ಎಲ್ಲಾ ಹಣವನ್ನು ಮರಳಿಸುವುದಾಗಿ ಮಾತುಕೊಟ್ಟ. ನಾವು ಕಂಪನಿ ಆರಂಭಿಸಿ 11 ತಿಂಗಳಾಗಿತ್ತು, ಖರ್ಚು ದಿನೇ ದಿನೇ ಹೆಚ್ತಾ ಇತ್ತು.

6 ತಿಂಗಳಿಗೆ ಆದ ಖರ್ಚು : 9,56,000 ರೂ.

ವೇತನ : 3,00,000 ರೂ.

ಸೇಲ್ಸ್ ತರಬೇತಿ : 30,000 ರೂ.

ಬಾಡಿಗೆ : 56,000 ರೂ.

ಪ್ರಯಾಣ, ಮಾರ್ಕೆಟಿಂಗ್ ಇತ್ಯಾದಿ : 2,00,000 ರೂ.

------------------------------

ಒಟ್ಟು ಖರ್ಚು : 15,42,000 ರೂ.

------------------------------

ಯಾರೂ ಕೊಂಡುಕೊಳ್ಳಲು ಇಚ್ಛಿಸದಂತಹ ಉತ್ಪನ್ನದ ಮೇಲೆ ನಾವು 1,50,000 ರೂಪಾಯಿಯನ್ನು ವ್ಯರ್ಥ ಮಾಡಿದ್ವಿ. ಇನ್ನು ಕೆಲ ವಾರಗಳ ಹೋರಾಟದ ಬಳಿಕ ನನ್ನ ಸಹ ಸಂಸ್ಥಾಪಕ ಬೇರೆ ಕೆಲಸಕ್ಕೆ ಸೇರಿಕೊಂಡ. ಅಲ್ಲಿಗೆ `ಸ್ಕೂಲ್‍ಜೆನ್ನಿ' ಕಥೆಯೇ ಮುಗಿದಿತ್ತು. ಈ ಪಯಣದಲ್ಲಿ ನಾನು ಕಲಿತ ಪಾಠವನ್ನು ನಿಮ್ಮ ಜೊತೆ ಹಂಚಿಕೊಳ್ಳಲೇಬೇಕು.

1. ಉತ್ಪನ್ನ ತಯಾರಿಸುವ ಮುನ್ನ ಗ್ರಾಹಕರ ಬಗ್ಗೆ ತಿಳಿದುಕೊಳ್ಳಿ : ನಾವು ಕಲ್ಪನೆಯ ಆಧಾರದ ಮೇಲೆ, ಪ್ರತಿಸ್ಪರ್ಧಿಗಳು ಏನ್ಮಾಡ್ತಿದ್ದಾರೆ ಅದನ್ನೇ ಮಾಡಿದೆವು. ಗ್ರಾಹಕರಿಗೆ ಏನು ಬೇಕು ಅನ್ನೋದನ್ನು ಅರ್ಥಮಾಡಿಕೊಳ್ಳಲಿಲ್ಲ.

2. ಎಲ್ಲಿ ಹಣ ಖರ್ಚು ಮಾಡಬೇಕು, ಎಲ್ಲಿ ಮಾಡಬಾರದು ಅನ್ನೋದನ್ನು ಅರಿಯಿರಿ : ಕಚೇರಿಯ ಮೂಲಸೌಕರ್ಯಕ್ಕೆ ಹಾಗೂ ಸಿಬ್ಬಂದಿ ವೇತನಕ್ಕೆ ನಾವು ಅಪಾರ ಹಣವನ್ನು ವ್ಯಯ ಮಾಡಿದ್ದೇವೆ. ಮನೆಯಲ್ಲೇ ಕುಳಿತು ಕೆಲಸ ಮಾಡಿದ್ರೆ ಶೇ.80ರಷ್ಟು ಖರ್ಚನ್ನು ಉಳಿಸಬಹುದಿತ್ತು. ಮಾರಾಟ ಹೆಚ್ಚಿಸುವಂತಹ ಅಂಶಗಳ ಮೇಲೆ ನಾವು ಹೆಚ್ಚು ಹಣ ಹಾಕಬೇಕಿತ್ತು. ಗ್ರಾಹಕರನ್ನು ಗಳಿಸಲು ಮೊದಲು ವೆಬ್‍ಸೈಟ್ ಅಭಿವೃದ್ಧಿಪಡಿಸಬೇಕಿತ್ತು. ಬಳಿಕ ಕಂಟೆಂಟ್ ಮಾರ್ಕೆಟಿಂಗ್ ಹಾಗೂ ಸೇಲ್ಸ್ ಬಗ್ಗೆ ಗಮನಹರಿಸಬೇಕಿತ್ತು.

3. ಕೋಡ್ ಜೊತೆ ನಿಮ್ಮ ಕೈಯನ್ನು ಕೆಸರು ಮಾಡಿಕೊಳ್ಳಿ : ಸಹ ಸಂಸ್ಥಾಪಕರು ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡಿರುವುದು ಅತ್ಯಗತ್ಯ. ನೀವು ತಾಂತ್ರಿಕ ವಿಭಾಗದವರಲ್ಲದಿದ್ರೂ ಕೋಡಿಂಗ್ ಆರಂಬಿಸುವುದು ಉತ್ತಮ.

4. ಸೇಲ್ಸ್ ವಿಭಾಗದ ಬಗ್ಗೆ ಅರಿವಿಲ್ಲದಿದ್ರೂ ಪ್ರಯತ್ನಿಸಿ : ನನ್ನ ಸಹ ಸಂಸ್ಥಾಪಕ ಸಂವಹನದಲ್ಲಿ ಎಕ್ಸ್​​​ಪರ್ಟ್ ಅನ್ನೋ ಕಾರಣಕ್ಕೆ ನಾನು ಮಾರ್ಕೆಟಿಂಗ್‍ನಿಂದ ದೂರವಿದ್ದೆ. ಆದ್ರೆ ನಾವು ಗ್ರಾಹಕರ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸದೇ ಇದ್ದಿದ್ರಿಂದ ಮಾರಾಟದಲ್ಲಿ ಹಿನ್ನಡೆ ಅನುಭವಿಸಬೇಕಾಯ್ತು. ಸಹಸಂಸ್ಥಾಪಕರು ಎಲ್ಲ ಸಮಯದಲ್ಲಿ ಎಲ್ಲಾ ಕೆಲಸವನ್ನೂ ಮಾಡಬೇಕು ಅನ್ನೋದು ನನ್ನ ಸಲಹೆ.

5. ನಿಮ್ಮ ಆಂತರಿಕ ಜ್ಞಾನದಲ್ಲಿ ನಂಬಿಕೆ ಇಡಿ, ನಿರ್ಧಾರ ತೆಗೆದುಕೊಳ್ಳಿ : ನಾವು ಕಾಲಕಾಲಕ್ಕೆ ಕೆಲ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಿಲ್ಲ. ಮುಂದೂಡುತ್ತಲೇ ಬಂದ್ವಿ. ಯಾವಾಗ್ಲೂ ನೂರಕ್ಕೆ ನೂರರಷ್ಟು ಮಾಹಿತಿ ಸಿಗುವುದು ಕಷ್ಟ. ಶೇ. 60-70 ರಷ್ಟು ಮಾಹಿತಿ ಸಿಕ್ಕಿದ್ರೂ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯಬೇಡಿ.

6. ಕಲಿಕೆಯನ್ನು ನಿಲ್ಲಿಸಬೇಡಿ : ನಾವೇ ಎಕ್ಸ್​​​ಪರ್ಟ್‍ಗಳು, ಯಾರಿಂದಲೂ ಏನೂ ಕಲಿಯುವ ಅಗತ್ಯವಿಲ್ಲ ಎಂಬ ಭಾವನೆ ಬಂತು ಅಂದ್ರೆ ಅದೇ ನಮ್ಮ ಸೋಲಿನ ಎಚ್ಚರಿಕೆ ಘಂಟೆ. ಕಲಿಕೆಯನ್ನು ನಿಲ್ಲಿಸಿದ್ರೆ ಅವನತಿಯನ್ನು ಆಹ್ವಾನಿಸಿದಂತೆ.

7. ಹಣ ಅನ್ನೋದು ನಿಮ್ಮ ಉದ್ಯಮದ ಉಪ ಉತ್ಪನ್ನ : ನಾನು ಇದನ್ನು ತಡವಾಗಿ ಕಲಿತೆ. ಈ ಸತ್ಯ ನಿಮಗೆ ಆರಂಭದಲ್ಲೇ ಅರಿವಾಗಬೇಕು. ನೀವು ಹಣದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿದರೆ ಭವಿಷ್ಯದ ಬಗ್ಗೆ ದೂರದೃಷ್ಟಿಯನ್ನೇ ಕಳೆದುಕೊಳ್ಳುತ್ತೀರಾ.

8. ಉದಾರ ಮನಸ್ಸುಳ್ಳವರಾಗಿ : ಉದ್ಯಮ ಪಯಣದಲ್ಲಿ ನಾನು ಕಲಿತ ಪಾಠ ಅಂದ್ರೆ ಯಾವಾಗಲು ಉದಾರ ಮನಸ್ಸುಳ್ಳವರಾಗಿರಬೇಕು, ಸಹನೆಯಿಂದಿರಬೇಕು, ಕೊಡುಗೈ ದಾನಿಗಳಾಗಿರಬೇಕು ಎಂಬುದು.

ಇದು ನನ್ನ ಉದ್ಯಮ ಪಯಣದ ಕಥೆ. ಬಹುತೇಕ ಉದ್ಯಮಿಗಳೆಲ್ಲ ಇದೇ ದಾರಿಯಲ್ಲಿ ಸಾಗುತ್ತಿದ್ದಾರೆ. ಈಗ ನಾನು ಸಹಸಂಸ್ಥಾಪಕನಾಗಿ ಮತ್ತೊಂದು ಉದ್ಯಮ ಸೇರಕೊಂಡಿದ್ದೇನೆ. ಇದು ನನ್ನ ಬದುಕನ್ನು ಬದಲಾಯಿಸಿದೆ.

ಲೇಖಕರು: ಪ್ರದೀಪ್​​ ಗೊಯೆಲ್​​​
ಅನುವಾದಕರು: ಭಾರತಿ ಭಟ್​​​​