ಬಡ ಗ್ರಾಮಸ್ಥರ ಬಾಳಲ್ಲಿ ಭರವಸೆಯ ಕಿರಣ- 5,300 ಕುಟುಂಬಗಳ ಅಂಧಕಾರ ಹೊಡೆದೋಡಿಸಿದ ಮಾನ್ಸಿ

ಟೀಮ್​ ವೈ.ಎಸ್​. ಕನ್ನಡ

1

ಮಾನ್ಸಿ ಪ್ರಕಾಶ್, 20ರ ಹರೆಯದ ಯುವತಿ. ನ್ಯೂಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ಪದವಿ ಪಡೆದಿದ್ದಾರೆ. 2010ರಲ್ಲಿ ಅಜ್ಜ-ಅಜ್ಜಿಯನ್ನು ನೋಡಲು ಮಾನ್ಸಿ ಭಾರತಕ್ಕೆ ಬಂದಿದ್ರು. ಭಾರತದ ಅದೆಷ್ಟೋ ಗ್ರಾಮಗಳಲ್ಲಿ ಜನರು ಹಣ ಉಳಿತಾಯ ಮಾಡಲು ಲೈಟ್ ಆಫ್ ಮಾಡಿ ರಾತ್ರಿಯೆಲ್ಲ ಕತ್ತಲಲ್ಲೇ ಕಾಲ ಕಳೆಯುತ್ತಿರೋದು ಮಾನ್ಸಿ ಅವರ ಗಮನಕ್ಕೆ ಬಂದಿತ್ತು. ಅತ್ಯಂತ ಪ್ರಕಾಶಮಾನವಾದ ಬಲ್ಬ್​​​ಗಳಿಂದಾಗಿ ಕರೆಂಟ್ ಬಿಲ್ ಕೂಡ ಜಾಸ್ತಿ ಬರ್ತಾ ಇತ್ತು. ಬಿಲ್ ಭರಿಸುವ ಶಕ್ತಿ ಬಡ ಹಳ್ಳಿ ಜನರಿಗೆ ಇರಲಿಲ್ಲ. ಕತ್ತಲಲ್ಲಿ ಬದುಕು ಸಾಗಿಸ್ತಾ ಇರೋ ಗ್ರಾಮಸ್ಥರ ಬಾಳಲ್ಲಿ ಬೆಳಕು ಮೂಡಿಸಲೇಬೇಕೆಂದು ಮಾನ್ಸಿ ನಿರ್ಧರಿಸಿದ್ರು. ಹೆಚ್ಚು ವೋಲ್ಟೇಜ್ ಎಳೆಯದೇ, ಒಳ್ಳೆಯ ಬೆಳಕು ನೀಡುವಂತಹ ಬಲ್ಬ್​​​ಗಳನ್ನು ಖರೀದಿಸಿ 10 ಕುಟುಂಬಗಳಿಗೆ ಹಂಚಿದ್ರು. ಮಾನ್ಸಿ ತಮ್ಮ ಸ್ವಂತ ಹಣದಿಂದ್ಲೇ ಗ್ರಾಮಸ್ಥರಿಗೆ ಬಲ್ಬಗಳನ್ನು ವಿತರಿಸಿದ್ದು ವಿಶೇಷ.

ಪ್ರತಿ ದಿನ ಮೂರು ಹೊತ್ತು ಊಟಕ್ಕಿಲ್ಲದೆ ಪರದಾಡುವ ಗ್ರಾಮಸ್ಥರು, ಸಾವಿರಾರು ರೂಪಾಯಿ ವಿದ್ಯುತ್ ಬಿಲ್ ಅನ್ನು ಹೇಗೆ ಭರಿಸ್ತಾರೆ ಅನ್ನೋ ಪ್ರಶ್ನೆ ಮಾನ್ಸಿ ಅವರನ್ನು ಕಾಡ್ತಾ ಇತ್ತು. 60 ವ್ಯಾಟ್‍ನ ಬಲ್ಬ್ 2 ತಿಂಗಳು ಉರಿಯಬಲ್ಲದು ಅಂತಾದ್ರೆ, 11 ವ್ಯಾಟ್‍ನ ಲ್ಯಾಂಪ್‍ಗಳು ಮೂರ್ನಾಲ್ಕು ವರ್ಷ ಬಾಳಿಕೆ ಬರಬಹುದು ಅನ್ನೋ ವಿಶ್ವಾಸ ಅವರಿಗಿತ್ತು. ದೀರ್ಘಾವಧಿಯಲ್ಲಿ ಅದು ಪ್ರಯೋಜನಕಾರಿ ಅನ್ನೋದನ್ನು ಸಾಬೀತುಪಡಿಸಲು ಮಾನ್ಸಿ ಪಣ ತೊಟ್ರು. ಆರಂಭದಲ್ಲಿ ಖರ್ಚು ಹೆಚ್ಚಾದ್ರೂ, ಅದು ಮನೆಯ ವಿದ್ಯುತ್ ಬಿಲ್ ಪಾವತಿಯಲ್ಲಿ ಶೇ. 80ರಷ್ಟನ್ನು ಉಳಿಸಬಲ್ಲದು. ಆ ಕುಟುಂಬದವರು ವಿದ್ಯುತ್ ಬಿಲ್‍ನಲ್ಲಿ ಉಳಿಸಿದ ಹಣವನ್ನು ಶಿಕ್ಷಣ ಅಥವಾ ಆರೋಗ್ಯಕ್ಕಾಗಿ ತೊಡಗಿಸಬಹುದು ಅನ್ನೋದು ಮಾನ್ಸಿ ಅವರ ಲೆಕ್ಕಾಚಾರ. ಇದಕ್ಕಾಗಿಯೇ ಮಾನ್ಸಿ `ಬ್ರೈಟರ್ ಟುಡೇ' ಎಂಬ ಲಾಭ ರಹಿತ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಮಾನ್ಸಿ ಅವರ ಪರಿಶ್ರಮಕ್ಕೆ ಕ್ಲಿಂಟನ್ ಫೌಂಡೇಶನ್ ಕೂಡ ಸಾಥ್ ಕೊಟ್ಟಿದೆ. ಫಿಲಿಪ್ಸ್ ಕಂಪನಿಯ ಶಕ್ತಿ ದಕ್ಷತೆಯುಳ್ಳ ಬಲ್ಬ್​​ಗಳನ್ನು ಮಾನ್ಸಿ ಗ್ರಾಮಸ್ಥರಿಗೆ ವಿತರಿಸಿದ್ದಾರೆ.

ಮಾನ್ಸಿ ಅವರ ಸಾಮಾಜಿಕ ಕಳಕಳಿಯನ್ನು ಗುರುತಿಸಿ ಅವರನ್ನು ಗೌರವಿಸಿರುವ ಗ್ಲಾಮರ್ ಮ್ಯಾಗಝೀನ್, 2,00,000 ಡಾಲರ್ ನಗದನ್ನು ಕೂಡ ನೀಡಿದೆ. ಈ ಹಣವನ್ನು ಮಾನ್ಸಿ ತಮ್ಮ ಪ್ರಾಜೆಕ್ಟ್​​​ಗಾಗಿ ಬಳಸಿಕೊಂಡಿದ್ದಾರೆ. ಮಿತವ್ಯಯದ, ಪರಿಸರ ಸ್ನೇಹಿ ಹಾಗೂ ದೀರ್ಘಕಾಲ ಬೆಳಕು ನೀಡಬಲ್ಲ ಬಲ್ಬ್​​​ಗಳನ್ನು ಚಂಡೀಗಢದ ಬೆಹ್ಲಾನಾ ಗ್ರಾಮದ 5,300 ನಿವಾಸಿಗಳಿಗೆ ಮಾನ್ಸಿ ವಿತರಿಸಿದ್ದಾರೆ. ಈ ಮೂಲಕ ಸಾವಿರಾರು ಮನೆಗಳಲ್ಲಿದ್ದ ಅಂಧಕಾರವನ್ನು ಹೊಡೆದೋಡಿಸಿದ್ದಾರೆ. ಅವರ ಬಾಳಲ್ಲಿ ಹೊಸ ಬೆಳಕು ಮೂಡಿಸಿದ್ದಾರೆ. ಅಷ್ಟೇ ಅಲ್ಲ, ವಿದ್ಯುತ್ ಇಲ್ಲದೆ ಬಡವರ ಬಾಳು ಬೆಳಗಲು, ಸೌರಶಕ್ತಿ ಬಳಕೆಗೂ ಯೋಜನೆ ರೂಪಿಸಿದ್ದಾರೆ. ಗ್ರಾಮಸ್ಥರಿಗೆ ಸೋಲಾರ್ ಸಿಸ್ಟಮ್ ವಿತರಿಸಲು ಮುಂದಾಗಿದ್ದಾರೆ. ಗ್ರಾಮಗಳಲ್ಲಿ ಬಲ್ಬ್ ಅಳವಡಿಸುವ ಸಂದರ್ಭದಲ್ಲಿ ಮಾನ್ಸಿ ಅವರಿಗೆ ಅಲ್ಲಿನ ನೈಜ ಪರಿಸ್ಥಿತಿಯ ದರ್ಶನವಾಗಿತ್ತು. ಶಿಕ್ಷಣ, ವಿದ್ಯುತ್, ರಸ್ತೆ ಹೀಗೆ ಯಾವುದೇ ಮೂಲಸೌಕರ್ಯಗಳಿಲ್ಲದೇ ಹೈರಾಣಾಗಿರುವ ಜನರ ಸ್ಥಿತಿ ನೋಡಿ ಮಾನ್ಸಿ ನೊಂದುಕೊಂಡಿದ್ರು. ಓದುವ ಮನಸ್ಸು, ಆಸೆ ಇದ್ರೂ ಮಕ್ಕಳನ್ನು ಶಾಲೆಗೆ ಕಳಿಸುವ ಸ್ಥಿತಿಯಲ್ಲಿ ಪೋಷಕರು ಇರಲಿಲ್ಲ. ವಿದ್ಯುತ್ ಬಿಲ್‍ನಲ್ಲೇ ಹಣ ಉಳಿತಾಯ ಮಾಡಲಾರಂಭಿಸಿದ ಮೇಲೆ ಹಳ್ಳಿಯ ಮಕ್ಕಳು ಕೂಡ ಶಾಲೆಯ ಮೆಟ್ಟಿಲು ಹತ್ತಬಹುದು ಅನ್ನೋದು ಮಾನ್ಸಿ ಅವರ ಆಶಾವಾದ. ಗ್ರಾಮದಲ್ಲಿ ಭೇಟಿಯಾದ ಬಾಲಕಿಯೊಬ್ಬಳ ಶಿಕ್ಷಣಕ್ಕಾಗಿ, ಅವಳ ಬದುಕನ್ನು ಬದಲಾಯಿಸುವ ಸಲುವಾಗಿಯೇ ಈ ಪ್ರಯತ್ನ ಎನ್ನುತ್ತಾರೆ ಮಾನ್ಸಿ.

ಕೇವಲ ಬೆಹ್ಲಾನಾ ಗ್ರಾಮ ಮಾತ್ರವಲ್ಲ, ಇಂತಹ ಹತ್ತಾರು ಹಳ್ಳಿಗಳ ಜನರ ಬದುಕನ್ನು ಹಸನಾಗಿಸುವ ಕನಸು ಮಾನ್ಸಿ ಅವರದ್ದು. ಇದಕ್ಕಾಗಿ ಮಾನ್ಸಿ ಕಠಿಣ ಪರಿಶ್ರಮ ಪಡ್ತಿದ್ದಾರೆ. `ಬ್ರೈಟ್ ಟುಡೇ' ಮೂಲಕ ಗ್ರಾಮಸ್ಥರ ಬದುಕಲ್ಲಿ ಆಶಾ ಕಿರಣ ಮೂಡಿಸ್ತಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಹಸ ಮಾಡ್ತಾ ಇರೋ ಮಾನ್ಸಿ ಅವರಿಗೆ ಹ್ಯಾಟ್ಸಾಫ್ ಹೇಳಲೇಬೇಕು. ಓದುವ ವಯಸ್ಸಲ್ಲೇ ಭವ್ಯ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿರುವ ಮಾನ್ಸಿ, ನಿಜಕ್ಕೂ ಸಮಾಜಕ್ಕೆ ಮಾದರಿಯಾಗ್ತಾರೆ.

ಅನುವಾದಕರು: ಭಾರತಿ ಭಟ್​​​​

Related Stories

Stories by YourStory Kannada