10 ಕೋಟಿ ಸೊಳ್ಳೆ ಕೊಂದ ರಾಸಾಯನಿಕ ಮುಕ್ತ ಮಿಷನ್ : ಇದು ಮಂಗಳೂರಿನ ಆರ್ವಿನ್ ಅಪೂರ್ವ ಸಾಧನೆ ..!

ಸ್ವಾತಿ ಉಜಿರೆ

10 ಕೋಟಿ ಸೊಳ್ಳೆ ಕೊಂದ ರಾಸಾಯನಿಕ ಮುಕ್ತ ಮಿಷನ್ : ಇದು ಮಂಗಳೂರಿನ ಆರ್ವಿನ್  ಅಪೂರ್ವ ಸಾಧನೆ ..!

Tuesday March 22, 2016,

3 min Read

ಸಂಜೆ¬ಯಾದರೆ ಸಾಕು ಗುಂಯ್‌ಗುಡುವ ಸೊಳ್ಳೆ¬ಗಳು ನೆಮ್ಮದಿಯನ್ನೇ ಕೆಡಿಸಿ ಬಿಡುತ್ತವೆ. ರಾಮೇಶ್ವರಕ್ಕೆ ಹೋದ್ರೂ ಶನೀಶ್ವರನ ಕಾಟ ತಪ್ಪಲಿಲ್ಲ ಅನ್ನೋ ಹಾಗೇ ಜಗತ್ತಿನ ಎಲ್ಲಾ ಭಾಗದಲ್ಲೂ ಸೊಳ್ಳೆಗಳು ಜನರ ನಿದ್ದೆ ಗೆಡಿಸಿವೆ. ಅದ್ರಲ್ಲೂ ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ, ಜೀಕಾದಂತಹ ಅಪಾಯಕಾರಿ ರೋಗಗಳನ್ನ ಹರಡುತ್ತಿರುವ ಸೊಳ್ಳೆ ಮನುಕುಲಕ್ಕೇ ಅಪಾಯಕಾರಿ ಅನ್ನೋದು ಸತ್ಯ . ಇನ್ನು ಸೊಳ್ಳೆಗಳಿಂದ ಪಾರಾಗಲು ಇನ್ನಿಲ್ಲದ ಪ್ರಯತ್ನಗಳನ್ನ ನಡೆಸುವುದು ಸಾಮಾನ್ಯವಾಗಿ ಬಿಟ್ಟಿದೆ. ಇದೆಲ್ಲವುದರ ಜೊತೆಗೆ ಮನುಷ್ಯರಿಗೆ ಸೊಳ್ಳೆಗಳು ಕಚ್ಚುವುದಾದರೂ ಹೇಗೆ ಮತ್ತು ಯಾಕೆ ಅನ್ನೋದು ಕುತೂಹಲಕಾರಿ. ಸೊಳ್ಳೆಗಳಿಗೆ ಮನುಷ್ಯರು ಮತ್ತು ಪ್ರಾಣಿಗಳಿರುವ ಸ್ಥಳ ಗೊತ್ತಾಗಲು ಪ್ರತಿ ಪ್ರಾಣಿಯ ಚರ್ಮದಿಂದ ಸೂಸುವ ಅತ್ಯಂತ ದುರ್ಬಲವಾದ, ಮನುಷ್ಯರ ಮೂಗು ಗ್ರಹಿಸಲಾರದ ವಾಸನೆಯನ್ನು ಸೊಳ್ಳೆಗಳು ಗ್ರಹಿಸುತ್ತವೆ. ಜೊತೆಗೇ ಬಿಸಿರಕ್ತದ ಪ್ರಾಣಿಗಳ ದೇಹದಿಂದ ಹೊರಡುವ ಬಿಸಿ ಅಲೆಗಳನ್ನೂ ಗ್ರಹಿಸುವ ಸಾಮರ್ಥ್ಯವನ್ನು ಪಡೆದಿವೆ. ಇವೆರಡೂ ಶಕ್ತಿಗಳನ್ನು ಸೊಳ್ಳೆಗಳು ಸಮಾನವಾಗಿ ಉಪಯೋಗಿಸಿದರೆ ಮಾತ್ರ ಶೀಘ್ರವಾಗಿ ಸೊಳ್ಳೆಗಳು ನಮ್ಮ ಬಳಿಗೆ ಆಗಮಿಸಬಲ್ಲವು. ಸೊಳ್ಳೆಗಳಿರುವ ಪ್ರದೇಶದಲ್ಲಿ ದೀರ್ಘವಾಗಿ ಉಸಿರಾಡುತ್ತಿರುವುದರಿಂದ ಗಾಳಿಯಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಹೆಚ್ಚುತ್ತದೆ. ಸೊಳ್ಳೆಗಳು ಈ ಇಂಗಾಲದ ಡೈ ಆಕ್ಸೈಡ್ ಅನಿಲವನ್ನು ಹಿಂಬಾಲಿಸುತ್ತಾ ನಿಮ್ಮ ಬಳಿಗೆ ಬರುತ್ತದೆ. ಸೊಳ್ಳೆಗಳು ನೇರವಾಗಿ ಹಾರದೇ ಹಾವಿನ ರೀತಿಯಲ್ಲಿ ಬಳುಕುತ್ತಾ ಹಾರುವುದಕ್ಕೆ ಇದೇ ಕಾರಣ.

ಇದನ್ನು ಓದಿ: ಸಮ್ಮರ್ ಸವಾರಿಗೆ ಗೂಗಲ್ ತಯಾರಿ

image


ಹೀಗೆ ಸೊಳ್ಳೆಕಾಟದಿಂದ ನೆಮ್ಮದಿ ಕಳೆದುಕೊಳ್ಳುವ ನಾವು ಸೊಳ್ಳೆ ಬತ್ತಿ, ಲಿಕ್ವಿಡ್ ಹೊಗೆ ಹೀಗೆ ವಿವಿಧ ಪ್ರಯತ್ನಗಳನ್ನ ನಡೆಸಿದ್ರೂ ಸೊಳ್ಳೆಗಳಿಂದ ಪಾರಾಗುವುದು ಅಷ್ಟು ಸುಲಭವಲ್ಲ. ಜೊತೆಗೆ ಸೊಳ್ಳೆಗಳಿಂದ ಪಾರಾಗುವ ಭರದಲ್ಲಿ ನಾವು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಿದ್ದೇವೆ. ಬದುಕಿಗೇ ಭಂಗ ತರುವ ಸೊಳ್ಳೆಗಳಿಂದ ಪಾರಾಗೋದು ಅನ್ನೋ ಆತಂಕ ಎಲ್ಲರದ್ದು. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಕ್ಕಿರೋ ಭರವಸೆ ಮಂಗಳೂರಿನ ಕೂಳೂರಿನಲ್ಲಿರುವ ಲಿಯೋವಿನ್‌ ಸೊಲ್ಯೂಶನ್ಸ್‌ ಸಂಸ್ಥೆ ಆಡಳಿತ ನಿರ್ದೇಶಕ ಇಗ್ನೇಶಿಯಸ್‌ ಆರ್ವಿನ್‌ ನೊರೊನ್ಹಾ .. ಇವರ 12 ವರ್ಷಗಳ ಸತತ ಸಂಶೋಧನೆಯಿಂದ ರೂಪಿಸಿದ ಮೊಸ್ಸಿಕ್ವಿಟ್‌ ಮೆಶಿನ್‌ ಅಗ್ಗದ ಖರ್ಚಿನಲ್ಲಿ ಸಹಸ್ರಾರು ಸೊಳ್ಳೆಗಳನ್ನು ಹಿಡಿಯುವ ಸಾಮರ್ಥ್ಯ ಹೊಂದಿದೆ. ಇವರು ತಯಾರಿಸಿರುವ ಮೆಶಿನ್ ನೋಡಲು ಚಿಕ್ಕದಾಗಿದ್ರೂ ಮೂರೇ ತಿಂಗಳಲ್ಲಿ ಸುಮಾರು 10 ಕೋಟಿ ಸೊಳ್ಳೆಗಳನ್ನು ಕೊಂದು ಹಾಕಿದೆ.

“ ಆಫ್ರಿಕಾ, ಬ್ರೆಜಿಲ್ ಹಾಗೂ ಮೆಕ್ಸಿಕೋದಂತಹ ದೇಶದಲ್ಲಿ ಅಪಾಯಕಾರಿ ಸೊಳ್ಳೆಗಳು ಹೆಚ್ಚುತ್ತಿವೆ. ಅದ್ರಲ್ಲೂ ಜಿಕಾ ಸೊಳ್ಳೆಗಳು ಭಾರೀ ಆತಂಕ ಹುಟ್ಟಿಸಿವೆ. ಭಾರತಕ್ಕೂ ಇಂತಹ ಮಾರಕ ರೋಗಗಳು ಕಾಲಿಡುವ ದಿನಗಳು ತುಂಬಾ ದೂರವಿಲ್ಲ. ಇನ್ನು ಸೊಳ್ಳೆಗಳನ್ನ ಓಡಿಸಿದ್ರೆ ಮಾತ್ರ ಸಾಲದು, ಅವುಗಳನ್ನ ಕೊಲ್ಲುವ ಪ್ರಯತ್ನ ನಡೆಸಬೇಕು. ಆದ್ರೆ ಇತರೆ ಕೆಮಿಕಲ್ ಯುಕ್ತ ಸಾಧನಗಳು ನಮ್ಮ ಆರೋಗ್ಯವನ್ನ ಕೆಡಿಸುತ್ತವೆ. ಆದ್ರೆ ನಮ್ಮ ಕಂಪನಿಯ ಮೆಶಿನ್ ರಾಸಾಯನಿಕ ಮುಕ್ತವಾಗಿದ್ದು ಆರೋಗ್ಯದ ಮೇಲೆ ಪರಿಣಾಮ ಬೀರೋದಿಲ್ಲ. ಅಲ್ಲದೆ ಸೊಳ್ಳೆಗಳನ್ನ ಕೊಲ್ಲುವುದು ವಿಶೇಷ ” 
- ಇಗ್ನೇಶಿಯಸ್‌ ಆರ್ವಿನ್‌ ನೊರೊನ್ಹಾ , ಲಿಯೋವಿನ್‌ ಸೊಲ್ಯೂಶನ್ಸ್‌ ಸಂಸ್ಥೆ ಆಡಳಿತ ನಿರ್ದೇಶಕ

ದನದ ಹಟ್ಟಿಗಳಲ್ಲಿ ಸೊಳ್ಳೆ ಅಧಿಕ ಪ್ರಮಾಣದಲ್ಲಿರುತ್ತದೆ. ಹಟ್ಟಿಗಳಲ್ಲಿ ಈ ಯಂತ್ರ ಉಪಯೋಗಿಸಿದರೆ ದನಗಳಿಗೆ ಸೊಳ್ಳೆಗಳಿಂದ ಮುಕ್ತಿ ನೀಡಬಹುದು. ಇದರಿಂದ ಹಾಲಿನ ಇಳುವರಿಯೂ ಹೆಚ್ಚಾಗುತ್ತದೆ. ಫ್ಲಾಟ್‌ಗಳಿರುವ ಅಪಾರ್ಟ್‌ಮೆಂಟ್‌ ಕಟ್ಟಡದ ನೆಲಮಾಳಿಗೆಯಲ್ಲಿ ಇದನ್ನು ಬಳಸಿದರೆ ಸೊಳ್ಳೆ ನಿಯಂತ್ರಿಸಲು ಸಾಧ್ಯ ಎಂದು ಆರ್ವಿನ್‌ ಅವರು ಹೇಳುತ್ತಾರೆ. ಇನ್ನು ಮೆಶಿನ್‌ ಸಂಪೂರ್ಣ ವಿದ್ಯುತ್‌ ಚಾಲಿತವಾಗಿದ್ದು, ಗಾತ್ರದಲ್ಲಿ ಕಿರಿದಾಗಿದೆ. ಇದರೊಳಗೆ ಫುಡ್ ಗ್ರೇಡ್ ಪೌಡರ್ ಎಡಿಟೀವ್ ಪುಡಿಯನ್ನು ಯಂತ್ರದ ಹೊರಭಾಗದಲ್ಲಿರುವ ಪ್ಲಾಸ್ಟಿಕ್‌ ಉತ್ಪನ್ನದಲ್ಲಿ ಮಿಶ್ರಣ ಮಾಡಲಾಗುತ್ತದೆ. ಯಂತ್ರದ ಒಳಭಾಗದಲ್ಲಿ ಮೋಟಾರ್‌ ಅಳವಡಿಸಲಾಗಿದ್ದು, ವಿದ್ಯುತ್‌ ನೀಡಿದಾಗ ಮೋಟಾರ್‌ ತಿರುಗುತ್ತದೆ. ಇದು ಹೊರಭಾಗದಿಂದ ಸೊಳ್ಳೆಗಳನ್ನು ಸೆಳೆದುಕೊಂಡು ತಳಭಾಗದಲ್ಲಿ ಅಳವಡಿಸಿರುವ ಪಾತ್ರೆಯಾಕಾರದ ವಸ್ತುವಿನಲ್ಲಿ ಶೇಖರಿಸುತ್ತದೆ. ಇನ್ನು ಇದಕ್ಕೆ ಬಳಸಲಾಗುವ ದ್ರಾವಣವನ್ನ ಸಸ್ಯ ಮೂಲದಿಂದ ತಯಾರಿಸಲಾಗಿದ್ದು ಇದು ನಮ್ಮ ದೇಹ ಸೇರಿದ್ರೂ ಯಾವುದೇ ಅಪಾಯವಿಲ್ಲ.

image


ಇನ್ನು ತಮ್ಮ ಅನ್ವೇಷಣೆ ಬಗ್ಗೆ ಸರ್ಕಾರದ ಗಮನ ಸೆಳೆಯಲು ಆರ್ವಿನ್ ಸಾಕಷ್ಟು ಪ್ರಯತ್ನಗಳನ್ನ ನಡೆಸಿದ್ದಾರೆ. ಅಲ್ಲದೆ ಅವರ ಈ ಸಂಶೋಧನೆ ಇದೀಗ ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ ನ ಗಮನ ಸೆಳೆದಿದೆ. ಒಂದೊಮ್ಮೆ ಸರ್ಕಾರದಿಂದ ಸೂಕ್ತ ಬೆಂಬಲ ಸಿಕ್ಕಿದ್ರೆ ಇಡೀ ದೇಶವನ್ನ ಸೊಳ್ಳೆ ಮುಕ್ತವನ್ನಾಗಿಸಬಹುದು ಅಂತಾರೆ ಆರ್ವಿನ್.

ಇದನ್ನು ಓದಿ

1. ಹೊಸ ಜಮಾನದ ಥ್ರಿಲಿಂಗ್ ಗೇಮ್ಸ್ ಸ್ಮ್ಯಾಶ್ ನಲ್ಲಿ

2. ಖಾದಿ ಬಟ್ಟೆಗಳಿಗೆ ಈಗ ಎಲ್ಲಿಲ್ಲದ ಡಿಮ್ಯಾಂಡ್: ಯಶಸ್ಸಿನತ್ತ ಖಾದಿ ಮಂಡಳಿ

3. ಈ ಕಾರ್​ ತಗೊಂಡ್ರೆ ಡ್ರೈವರ್​ ಬೇಡ್ವೇ ಬೇಡ..!