ಬಡ ಮಕ್ಕಳಿಗಾಗಿ ‘ಪರಿಕ್ರಮ’...

ಟೀಮ್​ ವೈ.ಎಸ್​. ಕನ್ನಡ

ಬಡ ಮಕ್ಕಳಿಗಾಗಿ ‘ಪರಿಕ್ರಮ’...

Monday January 11, 2016,

4 min Read

ಶುಕ್ಲ ಬೋಸ್. ಪರಿಕ್ರಮ ಹ್ಯುಮಾನಿಟಿ ಫೌಂಡೇಷನ್‍ನ ಸಂಸ್ಥಾಪಕಿ. ಇಂಗ್ಲೀಷ್‍ನಲ್ಲಿ ಪರಿಕ್ರಮ (Parikrma) ) ಪದದಲ್ಲಿ ‘A’ ಇಲ್ಲ. ಅದಕ್ಕೆ ಕಾರಣ ಪರಿಕ್ರಮ ಪದ ಮೂಲತಃ ಸಂಸ್ಕೃತದ್ದು. ದೇವನಗಿರಿ ಆವೃತ್ತಿಗೆ ಸೇರಿದ್ದು. ಜಾಧವ್‍ಪುರ ವಿಶ್ವವಿದ್ಯಾಲಯದಲ್ಲಿ ಕಂಪಾರೆಟಿವ್ ಲಿಟರೇಚರ್ ಅರ್ಥಾತ್ ತುಲನಾತ್ಮಕ ಸಾಹಿತ್ಯ ವಿಷಯದಲ್ಲಿ ಎಮ್‍ಎ ಮಾಡಿರುವ ಕಾರಣ ಇಂತಹ ವಿಭಿನ್ನ ಹೆಸರನ್ನು ಹುಡುಕಿ ತನ್ನ ಸಂಸ್ಥೆಗೆ ನಾಮಕರಣ ಮಾಡಿದ್ದಾಗಿ ನಗುತ್ತಾರೆ ಶುಕ್ಲಾ ಬೋಸ್.

ಎಲ್ಲರಿಗೂ ಸಮಾನ ಜೀವನ ಅನ್ನೋದು ಪರಿಕ್ರಮ ಸಂಸ್ಥೆಯ ಧ್ಯೇಯೋದ್ದೇಶ. ಪರಿಕ್ರಮ ಫೌಂಡೇಷನ್‍ನ ಗುರಿ ಒಂದೇ - ಸ್ಲಂನಲ್ಲಿ ವಾಸಿಸುವ ಅತ್ಯಂತ ಬಡ ಕುಟುಂಬದ ಮಗುವಿಗೂ ಶಿಕ್ಷಣವಾಗಲೀ ಅಥವಾ ಯಾವುದೇ ವಿಷಯದಲ್ಲಾಗಲೀ ಅತ್ಯುತ್ತಮ ಅವಕಾಶಗಳನ್ನು ಒದಗಿಸುವುದು. 12 ವರ್ಷಗಳ ಹಿಂದೆ ಬೆಂಗಳೂರಿನ ರಾಜೇಂದ್ರನಗರದ ಮನೆಯೊಂದರ ಮೇಲೆ 165 ಮಕ್ಕಳೊಂದಿಗೆ ಪರಿಕ್ರಮ ಪ್ರಾರಂಭವಾಗಿತ್ತು. ಇವತ್ತು ಜಯನಗರ, ಸಹಕಾರನಗರ, ಕೋರಮಂಗಲ ಹಾಗೂ ನಂದಿನಿ ಲೇಔಟ್‍ಗಳಲ್ಲಿ ನಾಲ್ಕು ಶಾಲೆಗಳಿದ್ದು, ಬರೊಬ್ಬರಿ 1700 ಬಡ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ.

image


ಶುಕ್ಲಾ ಬಾಲ್ಯ

ಶುಕ್ಲಾ ಬೋಸ್‍ಗೆ ಬಾಲ್ಯದಿಂದಲೂ ಬಡ ಮಕ್ಕಳಿಗಾಗಿ ಏನಾದ್ರೂ ಮಾಡಬೇಕು ಅನ್ನೋ ಆಸೆಯಿತ್ತು. ಡಾರ್ಜಿಲಿಂಗ್‍ನಲ್ಲಿ ಸೆಟಲ್ ಆಗಿರುವ ಶುಕ್ಲಾ ಪೋಷಕರು ಪಶ್ಚಿಮ ಬಂಗಾಳ ಮೂಲದವರು. ತಂದೆ ಸರ್ಕಾರದಲ್ಲಿ ಉನ್ನತಾಧಿಕಾರಿಯಾಗಿದ್ದರೆ, ತಾಯಿ ಮನೆಗೆ ನೋಡಿಕೊಳ್ಳುತ್ತಿದ್ದರು.

‘ನನ್ನ ಪೋಷಕರಿಗೆ ನಾನಂದ್ರೆ ತುಂಬಾ ಮುದ್ದು. ಅದರಲ್ಲೂ ನನ್ನಮ್ಮ ಅಂತೂ ನನ್ನನ್ನು ಬಿಟ್ಟು ಇರುತ್ತಲೇ ಇರಲಿಲ್ಲ. ಐದು ಬಾರಿ ಗರ್ಭಪಾತವಾದ ಬಳಿಕ ನಾನು ಹುಟ್ಟಿದ್ದೇ ಅದಕ್ಕೆ ಕಾರಣ. ಒಂದೂವರೆ ವರ್ಷದ ಬಳಿಕ ನನ್ನ ತಮ್ಮ ಜನಿಸಿದ. ಆದ್ರೂ ನಾನೇ ನಮ್ಮನೆಯಲ್ಲಿ ಎಲ್ಲರಿಗೂ ಅಚ್ಚುಮೆಚ್ಚಿನ ಮಗಳಾಗಿದ್ದೆ. ಗಂಡು ಮಗು - ಹೆಣ್ಣು ಮಗು ಅನ್ನೋ ತಾರತಮ್ಯ ನನಗೆ ಒಂದು ದಿನವೂ ಎದುರಾಗಲಿಲ್ಲ. ಅತ್ಯುತ್ತಮ ಶಾಲೆಗಳಲ್ಲಿ ಓದಿದೆ. ಒಟ್ಟಾರೆ ನನ್ನ ಬಾಲ್ಯವಂತೂ ಅತ್ಯದ್ಭುತವಾಗಿತ್ತು’ ಅಂತಾರೆ ಶುಕ್ಲಾ. ಆದ್ರೆ ಅಪ್ಪ ನಿಷ್ಠಾವಂತ ಹಾಗೂ ದಕ್ಷ ಅಧಿಕಾರಿಯಾಗಿದ್ದ ಕಾರಣ ಸರ್ಕಾರ ನೀಡಿದ್ದ ಕಾರಿನಲ್ಲಿ ಶಾಲೆಗೆ ಬಿಡುತ್ತಿರಲಿಲ್ಲವಂತೆ. ಹೀಗಾಗಿ ಪ್ರತಿದಿನ ನಾನು ಶಾಲೆಗೆ 6 ಕಿಲೋಮೀಟರ್ ನಡೆದುಕೊಂಡೇ ಹೋಗಬೇಕಿತ್ತು ಅಂತ ಸ್ಮರಿಸಿಕೊಳ್ತಾರೆ ಶುಕ್ಲಾ.

19ರಲ್ಲೇ ಮದುವೆ, ಭೂತಾನ್‍ಗೆ ವಲಸೆ

ಶಾಲಾ ಶಿಕ್ಷಣ ಮುಗಿದ ಬಳಿಕ ಕಾಲೇಜಿಗಾಗಿ ಶುಕ್ಲಾ ಬೋಸ್ ಕೊಲ್ಕತ್ತಾಗೆ ಬರಬೇಕಾಯ್ತು. ಅಲ್ಲಿ ಬೋರ್ಡಿಂಗ್‍ನಲ್ಲಿ ಇರಬೇಕಾದ ಕಾರಣ ಮೊದಲ ಬಾರಿಗೆ ಮನೆಯಿಂದ ದೂರ ಉಳಿಬೇಕಾಯ್ತು. ಇನ್ನು ಅವರ ಮದುವೆಯಂತೂ ತುಂಬಾ ಬೇಗ ಆಗಿಹೋಯ್ತು. 1976ರಲ್ಲಿ 19ನೇ ವಯಸ್ಸಿನಲ್ಲೇ ಶುಕ್ಲಾ ಸಪ್ತಪದಿ ತುಳಿದರು. ನಂತರ ಅವರ ಪತಿ ಭೂತಾನ್‍ನಲ್ಲಿ ಕೆಲಸ ಮಾಡುತ್ತಿದ್ದ ಕಾರಣ, ಇವರೂ ಅಲ್ಲಿಗೆ ತೆರಳಬೇಕಾಯ್ತು.

ಭೂತಾನ್‍ನಲ್ಲೇ ಮೊದಲ ಬಾರಿಗೆ ಶಿಕ್ಷಕಿಯಾಗಿ ಕೆಲಸ ಮಾಡಲು ಕೈ ಹಾಕಿದ್ರು ಶುಕ್ಲಾ. ಭಾರತೀಯ ಸೇನೆಯಲ್ಲಿದ್ದವರ ಮಕ್ಕಳಿಗಾಗಿ ಒಂದು ಶಾಲೆ ಪ್ರಾರಂಭಿಸಿದ್ರು. ಆದ್ರೆ ಅವರಿಗೆ ಅಲ್ಲಿನ ನೀರಿಗೆ ಹೊಂದಿಕೊಳ್ಳಲಾಗಲಿಲ್ಲ. ಇದ್ರಿಂದಾಗಿ ಕೆಲವೇ ದಿನಗಳಲ್ಲಿ ಶುಕ್ಲಾ ಭಾರತಕ್ಕೆ ವಾಪಸ್ಸಾಗಬೇಕಾಯ್ತು. ನಂತರ ಅವರು ತುಲನಾತ್ಮಕ ಸಾಹಿತ್ಯ ಅರ್ಥಾತ್ ಕಂಪಾರೆಟಿವ್ ಲಿಟರೇಚರ್‍ನಲ್ಲಿ ಎಂಎ ಪದವಿ ಪಡೆದರು. ಕ್ರಮೇಣ ಸೇವಾ ವಲಯದಲ್ಲಿ ಕೆಲಸ ಮಾಡತೊಡಗಿದ್ರು. ಕೆಲಸದ ಜೊತೆಗೇ ಸೇಲ್ಸ್ ಮತ್ತು ಮಾರ್ಕೆಟಿಂಗ್‍ಗಳಲ್ಲಿ ಎಂಬಿಎ ಪದವಿಯನ್ನೂ ಪಡೆದ್ರು ಶುಕ್ಲಾ ಬೋಸ್.

ಕಾರ್ಪೊರೇಟ್ ವೃತ್ತಿ

ಕೊಲ್ಕತ್ತಾದ ಒಬೆರಾಯ್ ಗ್ರ್ಯಾಂಡ್‍ನಲ್ಲಿ ಶುಕ್ಲಾ ತಮ್ಮ ವೃತ್ತಿ ಜೀವನ ಆರಂಭಿಸಿದ್ರು. ಕ್ರಮೇಣ ಏಳಿಗೆಯ ಮೆಟ್ಟಿಲನ್ನು ಹತ್ತುತ್ತಾ ಸಾಗಿದ್ರು. ಅಲ್ಲಿ ಕೆಲಸ ಮಾಡುವವರಿಗೆಂದೇ ಒಂದು ಪತ್ರಿಕೆಯನ್ನೂ ಹೊರತಂದ ಶುಕ್ಲಾ, ಕಡಿಮೆ ಸಮಯದಲ್ಲೇ ಎಲ್ಲರಿಗೂ ಅಚ್ಚುಮೆಚ್ಚಿನವರಾದ್ರು. ಅಲ್ಲದೇ ತಮ್ಮ ಕಾಲೇಜು ದಿನಗಳಲ್ಲಿ ಸುಮಾರು 7 ವರ್ಷಗಳ ಕಾಲ ಶುಕ್ಲಾ ಬೋಸ್ ಮದರ್ ತೆರೆಸಾ ಅವರ ಸಂಸ್ಥೆಗಳಲ್ಲೂ ಗುರುತಿಸಿಕೊಂಡಿದ್ದರು. ನಿರ್ಮಲ್ ಹೃದಯ್ ಹಾಗೂ ಶಿಶು ಭವನ್‍ಗಳಲ್ಲಿ ಅವರು ತುಡಿತಕ್ಕೊಳಗಾದ ಜನ ಹಾಗೂ ಅನಾಥ ಮಕ್ಕಳ ಏಳಿಗೆಗಾಗಿ ಶ್ರಮಿಸಿದ್ರು.

image


ಕಾರ್ಪೊರೇಟ್ ವೃತ್ತಿಗೆ ಗುಡ್‍ಬೈ

ಸುಮಾರು 26 ವರ್ಷಗಳ ಕಾಲ ಕಾರ್ಪೊರೇಟ್ ಜೀವನದ ಬಳಿಕ ಶುಕ್ಲಾ ಬೋಸ್‍ಗೆ ಅದು ಸಾಕು ಎನಿಸಿತು. ‘ನಾನು ನನ್ನ ಕಾರ್ಪೊರೇಟ್ ಕೆರಿಯರ್‍ನ ಉತ್ತುಂಗದಲ್ಲಿದ್ದೆ. ಆದ್ರೆ ನನಗೆ ನನ್ನ ಜೀವನದಲ್ಲಿ ಬದಲಾವಣೆ ಬೇಕಿತ್ತು. ಹೀಗಾಗಿ ಏನಾದ್ರೂ ವಿಭಿನ್ನವಾಗಿ ಮಾಡಬೇಕು ಅಂತನ್ನಿಸಿತು. ಹೀಗಾಗಿಯೇ 2000ರಲ್ಲಿ ನನ್ನ ವೃತ್ತಿಜೀವನಕ್ಕೆ ಗುಡ್‍ಬೈ ಹೇಳಿದೆ. ಅಂತಾರಾಷ್ಟ್ರೀಯ ಮಟ್ಟದ ಎನ್‍ಜಿಒ ಒಂದರ ಭಾರತೀಯ ವಿಭಾಗವನ್ನು ಮುನ್ನಡೆಸತೊಡಗಿದೆ. ಆ ಸ್ವಯಂಸೇವಾ ಸಂಸ್ಥೆ ಹಲವು ದೇಶಗಳಲ್ಲಿ ನಾನಾ ಯೋಜನೆಗಳನ್ನು ನಡೆಸುತ್ತಿತ್ತು. ಆ ಎನ್‍ಜಿಒದ ಭಾರತೀಯ ವಿಭಾಗದ ವ್ಯವಸ್ಥಾಪಕ ನಿರ್ದೇಶಕಿಯಾದ ನಾನು ಶಿಕ್ಷಣವನ್ನು ನನ್ನ ಥೀಮ್‍ಆಗಿ ಆಯ್ಕೆ ಮಾಡಿಕೊಂಡೆ’ ಅಂತಾರೆ ಶುಕ್ಲಾ.

'ಇದ್ರಿಂದ ನಾನು ನನ್ನ ಕಿಟ್ಟಿ ಪಾರ್ಟಿಗಳು ಹಾಗೂ ಕಾಕ್‍ಟೈಲ್ ಪಾರ್ಟಿಗಳಿಂದ ದೂರ ಉಳಿಯಬೇಕಾಯ್ತು. ಆದ್ರೆ ನನಗದು ದೊಡ್ಡದು ಅನ್ನಿಸಲಿಲ್ಲ. ಇನ್ನು ನನ್ನ ಮಗಳು ಹಾಗೂ ಅಳಿಯನಂತೂ ನನ್ನ ನಿರ್ಧಾರದ ಬಗ್ಗೆ ತುಂಬಾ ಥ್ರಿಲ್ ಆಗಿದ್ದರು. ಹೀಗಾಗಿಯೇ ನನ್ನ ಬೆಂಬಲಕ್ಕೂ ನಿಂತರು. ನಾನು ಕೆಲ ದಿನಗಳವರೆಗೆ ಸಣ್ಣ ಕಾರ್‍ಅನ್ನು ಆಶ್ರಯಿಸಿದೆ. ಇದರಿಂದ ಕೆಲವರು ಅಯ್ಯೋ ಅಂದ್ರು. ಆದ್ರೆ ಅದೆಲ್ಲವೂ ಕ್ಷಣಿಕವಷ್ಟೇ ಅನ್ನೋದು ನನಗೆ ತಿಳಿದಿತ್ತು.’ ಅಂತ ಹಿಂದಿನ ದಿನಗಳನ್ನು ನೆನಪಿಸಿಕೊಳ್ತಾರೆ ಶುಕ್ಲಾ.

ತಮ್ಮ ಕೆಲಸದಲ್ಲಿ ಯಶಸ್ಸು ಲಭಿಸಿದ ಬಳಿಕ, ಅವರು ತಾವು ಕೂಡಿಟ್ಟ ಹಣದ ಸಹಾಯದಿಂದ 2003ರಲ್ಲಿ ಪರಿಕ್ರಮ ಪ್ರಾರಂಭಿಸಿದ್ರು. ಆ ಮೂಲಕ ತುಂಬಾ ದೊಡ್ಡ ರಿಸ್ಕ್ ತೆಗೆದುಕೊಂಡಿದ್ದರು. ಆದ್ರೆ ಅವರಿಗೆ ಅವರ ಐಡಿಯಾ ಬಗ್ಗೆ ನಂಬಿಕೆಯಿತ್ತು. ಅವರ ಕನಸು ನನಸಾಗಿಸಲು ಕೆಲ ಸಮಾನ ಮನಸ್ಕರು ಶುಕ್ಲಾ ಜೊತೆ ಕೈಜೋಡಿಸಿದ್ರು. ಇವತ್ತು ಪರಿಕ್ರಮ ಎಷ್ಟು ದೊಡ್ಡ ಯಶಸ್ಸು ಗಳಿಸಿದೆ ಅಂದ್ರೆ, ಅದರ ಕುರಿತ ಪಾಠವನ್ನು ಕಾರ್ನ್‍ವೆಲ್ ವಿಶ್ವವಿದ್ಯಾಲಯ ಹಾಗೂ ಐಐಎಂಬಿ ಪಠ್ಯಗಳಲ್ಲಿ ಸೇರಿಸಲಾಗಿದೆ.

ಶುಕ್ಲಾ ಬೋಸ್ ಅವರ ಹವ್ಯಾಸಗಳು

ಓದುವುದು ಅಂದ್ರೆ ಶುಕ್ಲಾ ಅವರಿಗೆ ತುಂಬಾ ಇಷ್ಟ. ಈಗ ಅವರು ಕ್ಲೆಮೆಂಟೀನ್ ಒಗಿಲ್ವಿ ಸ್ಪೆನ್ಸರ್‍ರ ವಿನ್ಸ್‍ಟನ್ ಚರ್ಚಿಲ್ ಆತ್ಮಚರಿತ್ರೆ ಓದುತ್ತಿದ್ದಾರೆ. ಕ್ಲೆಮಂಟೀನ್, ವಿನ್ಸ್‍ಟನ್ ಚರ್ಚಿಲ್‍ರ ಮಗಳು. ಶುಕ್ಲಾರಿಗೆ ಅಡುಗೆ ಮಾಡೋದಂದ್ರೂ ತುಂಬಾ ಇಷ್ಟ. ಹೀಗಾಗಿಯೇ ಪ್ರತಿದಿನ ಮುಂಜಾನೆ 4.30ಕ್ಕೆ ಏಳ್ತಾರೆ. ಮನೆ ಕೆಲಸಗಳನ್ನು ಮುಗಿಸಿ, ಅಡುಗೆಯನ್ನೂ ಮಾಡಬಹುದು ಅನ್ನೋ ಐಡಿಯಾ ಅವರದು. ಹಾಗಂತ ಟಿವಿ ನೋಡಲ್ಲ ಅಂತೇನಲ್ಲ, ಅವರು ಕೆಲ ಟಿವಿ ಧಾರಾವಾಹಿಗಳನ್ನೂ ನೋಡಲು ಇಷ್ಟಪಡ್ತಾರೆ. ಅವನ್ನು ತಪ್ಪದೇ ನೋಡ್ತಾರೆ ಶುಕ್ಲಾ. ಹಾಗೇ ಅವರಿಗೆ ನಾಯಿಗಳಂದ್ರೆ ಅಚ್ಚುಮೆಚ್ಚು. ಹೀಗಾಗಿಯೇ ನಾಲ್ಕು ಶಾಲೆಗಳಲ್ಲೂ ಒಂದೊಂದು ಹಾಗೂ ಮನೆಯಲ್ಲೊಂದು ಎಂಬಂತೆ 5 ನಾಯಿಗಳನ್ನು ಸಾಕಿದ್ದಾರೆ. ಅವರಿಗೆ ಟ್ರೆಕ್ಕಿಂಗ್ ಮಾಡೋದೂ ಇಷ್ಟ.

ಅವರ ರೋಲ್ ಮಾಡೆಲ್‍ಗಳು

ಶುಕ್ಲಾ ಬೋಸ್ ಮೂವರು ಮಹಾನ್ ಸಾಧಕರನ್ನು ತನ್ನ ರೋಲ್ ಮಾಡೆಲ್ ಅಂದುಕೊಂಡಿದ್ದಾರೆ. ಅದರಲ್ಲೊಬ್ಬರು ಮದರ್ ತೆರೆಸಾ. ಮತ್ತೊಬ್ಬರು ಎರಡನೇ ವಿಶ್ವಯುದ್ಧದ ಸಮಯದಲ್ಲಿ ನಾಜೀಗಳಿಂದ 669 ಮಕ್ಕಳನ್ನು ರಕ್ಷಿಸಿದ ಬ್ರಿಟನ್ ಮೂಲದ ಸರ್ ನಿಕೊಲಸ್ ವಿಂಟನ್. ಮೂರನೆಯವರು ಬೌದ್ಧ ಧರ್ಮಗುರು ದಲಾಯ್ ಲಾಮಾ.

ಶುಕ್ಲಾ ಅವರಿಗೆ ಒಂದೇ ಕನಸು. ಅದೇನಂದ್ರೆ ಮುಂದಿನ 20 ವರ್ಷಗಳಲ್ಲಿ ಪರಿಕ್ರಮ ವಿದ್ಯಾರ್ಥಿಯೇ ಪ್ರಾರಂಭಿಸಿದ ಶಾಲೆಯನ್ನು ನೋಡಬೇಕು ಅನ್ನೋದು. ಆ ಆಸೆ ಈಡೇರಲಿ ಅಂತ ನಾವೂ ಹಾರೈಸೋಣ.

ಲೇಖಕರು: ಶಾಶ್ವತಿ ಮುಖರ್ಜಿ

ಅನುವಾದಕರು: ವಿಶಾಂತ್​​