ಬಹುಮುಖ ಪ್ರತಿಭೆಯ ಸಾಧಕಿ ಸುಚರಿತಾ ಈಶ್ವರ್​..!

ಟೀಮ್​​ ವೈ.ಎಸ್​​.ಕನ್ನಡ

ಬಹುಮುಖ ಪ್ರತಿಭೆಯ ಸಾಧಕಿ ಸುಚರಿತಾ ಈಶ್ವರ್​..!

Friday November 27, 2015,

3 min Read

ಅಡ್ಡಿ ಅಡಚಣೆ ಪ್ರತಿಯೊಂದು ಕ್ಷೇತ್ರದಲ್ಲಿ ಇದ್ದೇ ಇರುತ್ತದೆ. ಆದರೆ ಅದನ್ನು ಭೇದಿಸಿ, ಎದುರಿಸಿ ಮುನ್ನುಗುವ ಕಲೆ, ಛಾತಿಯನ್ನು ಮೈಗೂಡಿಸಿಕೊಳ್ಳಬೇಕು. ಇದು ಸುಚರಿತಾ ಈಶ್ವರ್ ಅವರ ಮಾತು. ಎಲ್ಲವೂ ನಮ್ಮ ಮೇಲೆಯೇ ಅವಲಂಬಿತವಾಗಿರುತ್ತದೆ ಎಂದು ಹೇಳುವ ಸುಚರಿತಾ ಈಶ್ವರ್, ತಮ್ಮ ಇಷ್ಟದಂತೆ ಬದುಕು ನಡೆಸುತ್ತಿರುವ ಸಾಧಕಿ.

ಪ್ರವಾಸ ಅಂದರೆ ಪಂಚಪ್ರಾಣವಾಗಿರುವ ಸುಚರಿತಾ ಆಳ ಸಮುದ್ರದಲ್ಲಿ ಡೈವ್ ಮಾಡುವ ಸಾಹಸಿ.. ಅದು ಅವರಿಗೆ ಸ್ಫೂರ್ತಿ. ಜಾಹೀರಾತು ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಅವರದ್ದು. ನಾಸ್ಕ್ಂನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಅಚ್ಚರಿ ಮೂಡಿಸುವ ರೀತಿಯಲ್ಲಿ ಕೆಲಸ ಮಾಡಿದ ಹೆಗ್ಗಳಿಕೆ ಅವರದ್ದು. ಎರಡು ಸರ್ಕಾರೇತರ ಸಂಸ್ಥೆಗಳನ್ನು ಹುಟ್ಟು ಹಾಕಿ ಅದರ ಉಸ್ತುವಾರಿ ಸದ್ಯ ಅವರ ಹೆಗಲ ಮೇಲಿದೆ.

image


ಸುಚರಿತಾ ಅವರ ಜೀವನ ಸಾಧನೆ, ಕೆಲಸ ಮತ್ತು ವಿ ಕನೆಕ್ಟ್ ಇಂಟರ್ ನ್ಯಾಶನಲ್ - ಇದು ಸುಚರಿತಾ ಅವರ ಬಹು ಮುಖ ಪ್ರತಿಭೆಯ ಅನಾವರಣ.

ಸದ್ಯಕ್ಕೆ ಸುಚರಿತಾ ಅವರು ವಿ ಕನೆಕ್ಟ್ ಇಂಟರ್ ನ್ಯಾಷನಲ್ ಸಂಸ್ಥೆಯ ಭಾರತದ ಮುಖ್ಯಸ್ಥೆ. ಇದರ ಮುಖ್ಯ ಕಚೇರಿ ಇರುವುದು ಅಮೆರಿಕದ ವಾಷಿಂಗ್ಟನ್ ಡಿ. ಸಿ. ಯಲ್ಲಿ. ಮಹಿಳೆಯರು ಮಾಲೀಕತ್ವ ಹೊಂದಿರುವ ಸಂಸ್ಥೆಗಳ ಮೌಲ್ಯ ಮಾಪನ ನಡೆಸುವ ಈ ಸಂಸ್ಥೆ ಈ ಸಂಬಂಧ ದೃಢೀಕರಣ ಮಾಡುತ್ತದೆ. ಜಾಗತಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವತ್ತ ಅವರಿಗೆ ನೆರವು ನೀಡುತ್ತದೆ.

ಮಹಿಳೆಯರೇ ಮಾಲೀಕತ್ವ ಹೊಂದಿರುವ ಸಂಸ್ಥೆಗಳೊಂದಿಗೆ ವಿ ಕನೆಕ್ಟ್ ಇಂಟರ್ ನ್ಯಾಶನಲ್ ವರ್ಕ್ಸ್ ಕೈ ಜೋಡಿಸುತ್ತಿದೆ. ಕನಿಷ್ಠ ಶೇಕಡಾ 51 ಪಾಲನ್ನು ಸಂಸ್ಥೆಯಲ್ಲಿ ಮಹಿಳೆಯರು ಹೊಂದಿರಬೇಕು. ಅಲ್ಲದೆ ಪ್ರಮುಖ ನಿರ್ಧಾರಗಳನ್ನು ಮಹಿಳೆಯರೇ ತೆಗೆದುಕೊಳ್ಳುವಂತಿರಬೇಕು. ಈ ಮಾನದಂಡ ಆಧರಿಸಿ, ವಿ ಕನೆಕ್ಟ್ ಇಂಟರ್ ನ್ಯಾಶನಲ್ ವರ್ಕ್ಸ್ ಪ್ರಮಾಣಪತ್ರ ನೀಡುತ್ತದೆ. ಬಳಿಕ ವಿ ಕನೆಕ್ಟ್ ನ ಕಾರ್ಪೋರೇಟ್ ಸಂಸ್ಥೆಗಳೊಂದಿಗೆ ಸಂಯೋಜಿಸುವ ಕೆಲಸ ನಿರ್ವಹಿಸುತ್ತದೆ. ಪೂರಕ ನೆರವು ನೀಡುತ್ತದೆ. ಪ್ರಸಕ್ತ ಫಾರ್ಚ್ಯೂನ್ ಪಟ್ಟಿಯಲ್ಲಿರುವ 500 ಸಂಸ್ಥೆಗಳ ಪೈಕಿ 65 ಸಂಸ್ಥೆಗಳ ಜೊತೆ ಈ ರೀತಿ ಸಂಪರ್ಕ ಸಾಧಿಸಲಾಗಿದೆ. ಇದರಲ್ಲಿ ಹೆಸರಾಂತ ಬಹು ರಾಷ್ಟ್ರೀಯ ಸಂಸ್ಥೆಗಳು ಕೂಡ ಸೇರಿವೆ. ವಿ ಕನೆಕ್ಟ್ ಡಾಟಾ ಬೇಸ್ ಸಂಸ್ಥೆಯ ಜಾಲದಲ್ಲಿ ಬರುವ ಮಹಿಳಾ ಪ್ರಾಧ್ಯಾನ್ಯ ಸಂಸ್ಥೆಗಳೊಂದಿಗೆ ಸಂಪರ್ಕ ಬಂಧ ಏರ್ಪಡಿಸಲು , ಬಹು ರಾಷ್ಟ್ರೀಯ ಸಂಸ್ಥೆಗಳು ಸದಸ್ಯತ್ವ ಶುಲ್ಕ ಪಾವತಿಸುತ್ತವೆ.

ವೃತಿ ಜೀವನದ ಮಾಹಿತಿ

ಸುಚರಿತಾ ಅವರು ತಮ್ಮ ಬಾಲ್ಯವನ್ನು ಕಳೆದ್ದದ್ದು ಪ್ರಕೃತಿ ರಮಣೀಯ ತಾಣ ಶಿಲ್ಲಾಂಗ್​​ನಲ್ಲಿ. ಬಳಿಕ ಕೊಲ್ಕತ್ತಾ. ಹೀಗೆ ಬೆಳೆದ ಪರಿಸರ ಅವರ ಮೇಲೆ ತುಂಬಾ ಪರಿಣಾಮ ಬೀರಿತ್ತು. ಕೊಲ್ಕತ್ತಾದಲ್ಲಿ ಹುಟ್ಟಿದ ಸುಚರಿತಾ ತಮ್ಮ ಕಾಲೇಜು ಶಿಕ್ಷಣವನ್ನು ಪೂರೈಸಿದ್ದು ಕೂಡ ಅಲ್ಲಿಯೇ. ಅವರ ತಂದೆ ಐಎಎಸ್ ಅಧಿಕಾರಿಯಾಗಿದ್ದರು.

ಇಂಗ್ಲಿಷ್ ಸಾಹಿತ್ಯದಲ್ಲಿ ಹಾನರ್ಸ್ ಪದವಿ ಪಡೆದ ಸುಚರಿತಾ ಸಮೂಹ ಸಂವಹನದಲ್ಲಿ ಕೂಡ ಸ್ನಾತಕೋತ್ತರ ಡಿಪ್ಲೋಮಾ ಹೊಂದಿದ್ದಾರೆ. ಕೊಲ್ಕತ್ತಾ ವಿಶ್ವ ವಿದ್ಯಾನಿಲಯದಿಂದ ಈ ಪದವಿ ಲಭಿಸಿದೆ. ಜಾಹೀರಾತು ಕ್ಷೇತ್ರದಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ ಸುಚರಿತಾ, ಬಳಿಕ ತಮ್ಮ ಮಗಳಿಗಾಗಿ ಹೆಚ್ಚಿನ ಗಮನ ಹರಿಸಲು ಅದಕ್ಕೆ ಗುಡ್ ಬೈ ಹೇಳಿದರು. ಬಳಿಕ ಎನ್ ಜಿ ಒ ಕಡೆ ಅವರು ಆಕರ್ಷಿತರಾದರು. ತಮ್ಮ ಕನಸುಗಳಿಗೆ ಜೀವ ತುಂಬಲು ಅವರು ಶ್ರಮಿಸಿದರು. ಇದರ ಫಲವಾಗಿ ಎರಡು ಸರ್ಕಾರೇತರ ಸಂಘಟನೆಗಳನ್ನು ಅವರು ಹುಟ್ಟು ಹಾಕಿದರು . ಅದುವೇ ಮಾಧ್ಯಮ್ ಮತ್ತು ವಾಯ್ಸ್.

ಆರಂಭದ ಬದುಕು ಹೇಗಿತ್ತು..?

ತಮ್ಮ ಆರಂಭದ ಬದುಕಿನ ಬಗ್ಗೆ ಮಾತನಾಡುತ್ತ ಸುಚರಿತಾ ಎದುರಾದ ಸವಾಲುಗಳನ್ನು ಬಣ್ಣಿಸಿದ್ದಾರೆ. ಒಂದು ಹಂತದಲ್ಲಿ ಸಿಂಗಲ್ ಮದರ್ ಎಂಬ ಪ್ರಶ್ನೆ ತಮ್ಮ ಬದುಕಿನಲ್ಲಿ ಎದುರಾಯಿತು. ಇಬ್ಬರು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಯಿತು. ಇದು 2000ನೇ ಇಸವಿ. ಆ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಭಾರಿ ಬೆಳವಣಿಗೆಯ ಮುನ್ಸೂಚನೆ ನೀಡಿತ್ತು. ಆ ಸಂದರ್ಭದಲ್ಲಿ ಮೂರನೇ ಬಾರಿ ನೌಕರಿ ಬದಲಾಯಿಸಿದೆ. ಕಾರ್ಪೋರೇಟ್ ಕ್ಷೇತ್ರಕ್ಕೆ ಪ್ರವೇಶ ಮಾಡಿದೆ ಎನ್ನುತ್ತಾರೆ ಸುಚರಿತಾ...

image


2006ರಲ್ಲಿ ನಾಸ್ಕಾಂ ಜೊತೆ ಗುರುತಿಸಿಕೊಂಡ ಸುಚರಿತಾ ಎಲ್ಲರೂ ಅಚ್ಚರಿ ಪಡುವ ರೀತಿಯಲ್ಲಿ ಸಾಧನೆ ಮೆರೆದರು. ಐಟಿ ಮತ್ತು ಬಿಪಿಒದ ಮೂರು ಹೊಸ ಯೋಜನೆಗಳ ರೂಪು ರೇಷೆ ನಿರ್ಧರಿಸಿದರು. ನಾಸ್ಕಾಂ ವೈವಿಧ್ಯತೆ, ನಾಸ್ಕಾಂ ಮುತುವರ್ಜಿ ಮತ್ತು ನಾಸ್ಕಾಂ ಸದಸ್ಯತ್ವ ಅಭಿಯಾನ..

ಮಹಿಳೆ ಮತ್ತು ಬದಲಾವಣೆ

ತಮ್ಮ ಕೆಲಸದ ಭಾಗವಾಗಿ ಮಹಿಳಾ ಉದ್ಯಮಿಗಳೊಂದಿಗಿನ ನಿಕಟ ಒಡನಾಟ ಅವರಿಗೆ ಹಲವು ವಿಷಯಗಳ ಮನವರಿಕೆಗೆ ಅವಕಾಶ ಕಲ್ಪಿಸಿತು. ಜಗತ್ತು ಬದಲಾಗುತ್ತಿದೆ ಎಂಬುದು ಅವರ ಅರಿವಿಗೆ ಬಂತು.

ಮಹಿಳೆಯರ ಮನೋ ಸ್ಥಿತಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ತಮ್ಮದೇ ಆದ ವಾಣಿಜ್ಯ ಚಟುವಟಿಕೆ ನಡೆಸಬೇಕೆಂಬ ಹುಮ್ಮಸ್ಸು ಅವರಲ್ಲಿ ಮೂಡಿ ಬಂದಿದೆ. ಐದು ವರ್ಷಗಳ ಹಿಂದೆ ಈ ಮನೋಭಾವ ಇದ್ದಿರಲಿಲ್ಲ ಎನ್ನುತ್ತಾರೆ ಸುಚರಿತಾ..

ಮಗುವಿಗೆ ಜನ್ಮ ನೀಡುವ ಸಲುವಾಗಿ ತಮ್ಮ ನೌಕರಿಗೆ ತಾತ್ಕಾಲಿಕ ಗುಡ್ ಬೈ ಹೇಳಿರುವ ಮಹಿಳೆಯರು ಹೆರಿಗೆಯಾದ ಬಳಿಕ ಈ ಹಿಂದಿನ ಕೆಲಸಕ್ಕೆ ಮರಳಲು ಹಿಂದೇಟು ಹಾಕುತ್ತಾರೆ. ಕಚೇರಿಯಲ್ಲಿ ಅತ್ಯಂತ ಹೆಚ್ಚಿನ ಅವಧಿ ಕಳೆಯಬೇಕಾಗಿರುವುದು ಅವರಿಗೆ ತಲೆ ನೋವಾಗಿ ಪರಿಣಮಿಸುತ್ತದೆ. ಮಗುವಿನ ಆರೈಕೆಗೆ ಕಷ್ಟವಾಗುತ್ತದೆ. ಈ ಸಂದರ್ಭದಲ್ಲಿ ಅವರ ಮನಸ್ಸು ಸ್ವಂತ ಉದ್ದಿಮೆ ಸ್ಥಾಪನೆಯತ್ತ ಹೊರಳುತ್ತದೆ.. ಎನ್ನುತ್ತಾರೆ ಸುಚರಿತಾ.

ಪ್ರೇರಣಾ ಮನೋಭಾವ

ಪ್ರತಿಯೊಬ್ಬರಿಗೂ ಸ್ವಲ್ಪ ಸ್ಫೂರ್ತಿ ತುಂಬುವುದು. ಹೊಸ ಉದ್ದಿಮೆ ಸ್ಥಾಪನೆಗೆ ಪ್ರೇರೇಪಣೆ ನೀಡುವುದು. ಇದು ನನ್ನನ್ನು ಲವಲವಿಕೆಯಿಂದ ಇರಿಸುತ್ತದೆ ಎನ್ನುತ್ತಾರೆ ಸುಚರಿತಾ.. ತಮ್ಮ ಅನುಭವಗಳನ್ನು ಅವರು ಈ ರೀತಿ ಹಂಚಿಕೊಳ್ಳುತ್ತಾರೆ. ಉದಾಹರಣೆಗೆ ಯಾವುದೋ ಒಂದು ಅಸ್ಪಷ್ಟ ಕಲ್ಪನೆಯೊಂದಿಗೆ ಮಹಿಳೆಯೊಬ್ಬಳು ತಮ್ಮನ್ನು ಸಂಪರ್ಕಿಸುತ್ತಾರೆ. ಆರ್ಗಾನಿಕ್ ಬಟ್ಟೆಗೆ ಸಂಬಂಧಿಸಿ ಆ ಮಹಿಳೆ ಕನಸು ಕಂಡಿದ್ದಾರೆ. ಅವರ ಮಾತನ್ನು ನಾನು ಆಲಿಸುತ್ತೇನೆ. ಅವರ ಕನಸು ತಿಳಿಯುತ್ತೇನೆ. ಅಲ್ಲದೆ ಇತರ ಮಹಿಳಾ ಉದ್ಯಮಿಗಳೊಂದಿಗೆ ಈ ಕನಸು ಕಂಡ ಉದ್ಯಮಿಯ ಭೇಟಿ ಮಾಡಿಸುತ್ತೇನೆ. ಇದರಿಂದ ಒಂದು ಸ್ಪಷ್ಟತೆ ದೊರೆಯುತ್ತದೆ. ಆತ್ಮ ವಿಶ್ವಾಸದಿಂದ ಹೊಸ ಉದ್ಯಮ ಆರಂಭಿಸಲು ಸಹಕಾರಿಯಾಗುತ್ತದೆ ಎನ್ನುತ್ತಾರೆ ಸುಚರಿತಾ. ಹೀಗೆ ಸಲಹೆ ಪಡೆದು ಮಕ್ಕಳಿಗಾಗಿ ಆರ್ಗಾನಿಕ್ ಬಟ್ಟೆ ಉದ್ಯಮ ಆರಂಭಿಸಿ. ಆನ್ ಲೈನ್ ಮೂಲಕ ಮಾರಾಟ ಮಾಡುವ ಯಶಸ್ವಿ ಉದ್ಯಮಿಯ ಬಗ್ಗೆ ಸುಚರಿತಾ ಬೆಳಕು ಚೆಲ್ಲಿದ್ದಾರೆ.

ಮಹಿಳೆಯರಿಗೆ ಕಿವಿಮಾತು

ಪ್ರತಿಯೊಬ್ಬ ಮಹಿಳೆ ಕೂಡ ತನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇರಿಸಬೇಕು. ಈ ಗುಣ ಮೈಗೂಡಿಸಿಕೊಂಡ ತಕ್ಷಣ ಅವರಿಗೆ ಬೆಂಬಲ ನೀಡುವ ಸಾವಿರಾರು ಮಂದಿ ಅವರ ಕಣ್ಣೆದುರು ಕಾಣಿಸಿಕೊಳ್ಳುತ್ತಾರೆ. ಇದು ಭವಿಷ್ಯದ ಮಹಿಳಾ ಉದ್ಯಮಿಗಳಿಗೆ ಸುಚರಿತಾ ಕಿವಿಮಾತು. ಗುಡ್​ ಲಕ್​ ಸುಚರಿತಾ..!

ಲೇಖಕರು: ತಾನ್ವಿ ದುಬೇ

ಅನುವಾದಕರು: ಎಸ್​​.ಡಿ