ಟೋಲ್​​ಗೇಟ್​​ಗಳಲ್ಲಿ ನಾನ್​​ಸ್ಟಾಪ್​​ ಡ್ರೈವ್​- ಎಂ ಟೋಲ್​​ನಲ್ಲಿದೆ ಚಿಲ್ಲರೆ ಕಿರಿಕಿರಿಗೆ ಪರಿಹಾರ..!

ಟೀಮ್​​ ವೈ.ಎಸ್​​.

ಟೋಲ್​​ಗೇಟ್​​ಗಳಲ್ಲಿ ನಾನ್​​ಸ್ಟಾಪ್​​ ಡ್ರೈವ್​- ಎಂ ಟೋಲ್​​ನಲ್ಲಿದೆ ಚಿಲ್ಲರೆ ಕಿರಿಕಿರಿಗೆ ಪರಿಹಾರ..!

Monday October 19, 2015,

4 min Read

ಹೀಗೇ ಕಲ್ಪಿಸಿಕೊಳ್ಳಿ, ನೀವು ತುರ್ತಾಗಿ ವಿಮಾನವೊಂದರಲ್ಲಿ ಎಲ್ಲಿಗೋ ಹೋಗಬೇಕಿದೆ. ಆದರೆ ನೀವಿನ್ನು ಏರ್‍ಪೋರ್ಟ್ ಕಡೆಗೆ ಕಾರ್ ಡ್ರೈವ್ ಮಾಡುತ್ತಿದ್ದೀರಿ. ನೀವು ಹೋಗಬೇಕಿರುವ ರಸ್ತೆಯಲ್ಲಿ ಟೋಲ್‍ಗೇಟ್‍ಗಳಿವೆ. ಅಲ್ಲಿ ಉದ್ದವಾದ ಕ್ಯೂ ನಿಮ್ಮ ಕಾರ್ ಮುಂದಿದೆ. ಕೆಲವರು ಟೋಲ್‍ಗೆ ಪಾವತಿಸಬೇಕಿರುವ ಸರಿಯಾದ ಚಿಲ್ಲರೆ ಹೊಂದಿಲ್ಲ ಹಾಗಾಗಿ ಅಲ್ಲಿ ಕ್ಯೂನಲ್ಲಿದ್ದ ಕಾರ್‍ಗಳು ನಿಧಾನವಾಗಿ ಮುಂದೆ ಚಲಿಸುತ್ತಿವೆ. ಪಾರ್ಕಿಂಗ್ ಲಾಟ್‍ನಲ್ಲಿ ನಿಮ್ಮ ಕಾರ್ ನಿಲ್ಲಿಸಲು ಸಮಯ ತೆಗೆದುಕೊಳ್ಳುತ್ತದೆ. ಅಲ್ಲಿಯೂ ಕ್ಯೂ ಇದೆ. ಈ ಸಂದರ್ಭದಲ್ಲಿ ನಿಮ್ಮ ಯೋಚನೆಗೆ ನಿಲುಕುವ ವಿಚಾರ ಈ ಪಾವತಿ ವ್ಯವಸ್ಥೆಯನ್ನು ಸುಲಭವಾಗಿಸುವ ಯಾವುದಾದರೂ ಪರ್ಯಾಯ ವ್ಯವಸ್ಥೆ ಇದ್ದರೆ ಬದುಕು ಎಷ್ಟು ಸರಳವಾಗಿರುತ್ತಿತ್ತು ಅನ್ನುವುದು ಅಲ್ಲವೇ.?

image


ಇಂತಹದ್ದೊಂದು ಅಗತ್ಯ ವ್ಯವಸ್ಥೆ ಖಂಡಿತಾ ಬೇಕು. ಟೋಲ್ ಪ್ಲಾಜಾಗಳಲ್ಲಿ ಹಾಗೂ ಪಾರ್ಕಿಂಗ್ ಲಾಟ್‍ನಲ್ಲಿ ಉದ್ದದ ಕ್ಯೂ ತಪ್ಪಿಸಲು ಇಂತಹದ್ದೊಂದು ಪರ್ಯಾಯ ಯೋಚನೆ ಮಾಡಿದವರು ಹೈದರಾಬಾದ್ ಮೂಲದ ಪಿಯೂಶ್ ಅಗರ್‍ವಾಲ್. ಮೇ 2011ರಲ್ಲಿ ಇಂತಹದ್ದೊಂದು ಪ್ರಯತ್ನಕ್ಕೆ ಮುಂದಾದ ಪಿಯೂಶ್ ಪಾರ್ಕಿಂಗ್ ಕಟ್ಟಡ, ಸ್ಥಳ ಅಥವಾ ಟೋಲ್ ಗೇಟ್‍ಗೆ ಸ್ಥಳ ಒದಗಿಸುವ ಅಥಾರಿಟಿ ಹಾಗೂ ಬಳಕೆದಾರರ ಮಧ್ಯೆ ಹಣರಹಿತ ವ್ಯವಹಾರ ನಡೆಸುವ ಉಪಾಯವನ್ನು ಕಂಡುಹಿಡಿದಿದ್ದಾರೆ. ಅದೇ ಸರಳ ಎಂ ಟೋಲ್ ವ್ಯವಸ್ಥೆ

ಇದು ಹೇಗೆ ಕೆಲಸ ಮಾಡುತ್ತದೆ?

ಎಂ ಟೋಲ್ ಭಾರತೀಯ ಸಾರ್ವಜನಿಕರ ವಾಹನ ಸೇವೆಗಾಗಿ, ವಾಹನ ಚಾಲಕರು ಹಾಗೂ ಮಾಲೀಕರ ತೊಂದರೆ ತಪ್ಪಿಸಲು ಹಾಗೂ ಅಥಾರಿಟಿಗಳ ಸುಗಮ ವ್ಯವಹಾರಕ್ಕಾಗಿ ಕಂಡು ಹಿಡಿದ ವಿಶಿಷ್ಟ ಟೂಲ್. ಎಂ ಟೋಲ್​​​ ತಂತ್ರಜ್ಞಾನದಲ್ಲಿ ಯಾರಾದರೂ ಬೇರೆ ಬೇರೆ ಟೋಲ್‍ಗಳಲ್ಲಿಯೂ ಒಂದೇ ಟ್ಯಾಗ್ ಮೂಲಕ ಸೇವೆ ಪಡೆದುಕೊಳ್ಳಬಹುದು. ಎಂ ಟೋಲ್ ವ್ಯವಸ್ಥೆ ಟೊಲ್ ಅಥಾರಿಟಿ ಹಾಗೂ ವಾಹನ ಸವಾರರ ತೊಂದರೆ ತಾಪತ್ರಯಗಳನ್ನು ತಪ್ಪಿಸಿದೆ. ಇಲ್ಲಿ ಹಣರಹಿತ ವ್ಯವಹಾರದ ಮಾನದಂಡವನ್ನು ಬಳಸಿಕೊಳ್ಳಲಾಗಿದೆ. ವಾಹನ ಸವಾರರು ಟೋಲ್ ಮೂಲಕ ಹಾದು ಹೋದ ನಂತರ ಅವರ ಖಾತೆಯಿಂದ ಹಣ ನೇರವಾಗಿ ಅಥಾರಿಟಿ ಖಾತೆಗೆ ರವಾನಿಸಲ್ಪಡುತ್ತದೆ. ಇಲ್ಲಿನ ಆಟೋಮ್ಯಾಟಿಕ್ ತಂತ್ರಜ್ಞಾನದ ಸಹಕಾರದಿಂದ ವಾಹನ ಮಾಲೀಕರು ಹಾಗೂ ಚಾಲಕರು ಟೋಲ್‍ನಲ್ಲಿ ತಾಸುಕಟ್ಟೆಲೇ ಕಾಯಬೇಕಾದ ಪ್ರಮೇಯ ಇನ್ನಿಲ್ಲ.

ಪಿಯೂಶ್ ಹೇಳುವಂತೆ, ಅದು ಟೋಲ್ ಗೇಟ್‍ಗಳಾಗಿರಲಿ ಅಥವಾ ಮನೆ, ಆಫೀಸ್ ಅಥವಾ ಇನ್ಯಾವುದೇ ಪಾರ್ಕಿಂಗ್ ಗೇಟ್‍ಗಳಾಗಿರಲಿ, ಅಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗದಂತೆ ಅಟೋಮ್ಯಾಟಿಕ್ ಗೇಟ್‍ಗಳನ್ನು ಅಳವಡಿಸಲಾಗುತ್ತಿದೆ. ವಾಹನಗಳ ಗುರುತು ಹಿಡಿಯುವ ಡಿವೈಸ್, ಅದರ ವೆಚ್ಚವನ್ನು ನಮೂದಿಸಿಕೊಳ್ಳುತ್ತದೆ. ಬಳಿಕ ಮಾಲೀಕರ ಖಾತೆಯಿಂದ ನೇರವಾಗಿ ತನ್ನ ಖಾತೆಗೆ ಹಣ ಪಾವತಿಸಿಕೊಳ್ಳುತ್ತದೆ. ಇದರಿಂದ ರಸ್ತೆಯಲ್ಲಿ ವಾಹನ ಚಾಲಕರಿಗೆ ಎದುರಾಗುತ್ತಿದ್ದ ತೊಂದರೆಗಳು ಕಡಿಮೆಯಾಗುತ್ತಿದೆ ಜೊತೆಗೆ ಹಣರಹಿತ ವ್ಯವಹಾರ ನಡೆಸುವ ಕಾರಣ ಮೋಸ ಅಥವಾ ಹಣಕಾಸಿನ ಅವ್ಯವಹಾರಗಳೂ ತಪ್ಪುತ್ತಿದೆ. ಎಂ ಟೋಲ್​​​ ಮುಖ್ಯ ಉಪಯೋಗವೆಂದರೆ ವಾಹನ ಸವಾರರು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸುಗಮವಾಗಿ ರಸ್ತೆಯಲ್ಲಿ ಸಚರಿಸಲು ಅನುಕೂಲವಾಗುತ್ತಿದೆ.

ಇದು ಪ್ರಾರಂಭವಾಗಿದ್ದು ಹೇಗೆ?

ಪಿಯೂಶ್ ದೆಹಲಿಯಲ್ಲಿ ಎಂಜಿನಿಯರಿಂಗ್ ಮುಗಿಸಿ ಅಮೇರಿಕಾದ ಪೆನ್‍ಸ್ಟೇಟ್ ವಿವಿಯಲ್ಲಿ ಕಂಪ್ಯೂಟರ್ ಸೈನ್ಸ್​​​ನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ಮುಗಿಸಿದರು. ಬಳಿಕ ಮೈಕ್ರೋಸಾಫ್ಟ್, ಐಬಿಎಂ ಹಾಗೂ ಅಕ್ಸೆಂಚರ್‍ನಂತಹ ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಕೆಲಸ ಮಾಡಿ, ಸುಮಾರು 14 ವರ್ಷಗಳ ವೃತ್ತಿ ಅನುಭವ ಹೊಂದಿದ್ದಾರೆ. ಅದರಲ್ಲೂ ಪಿಯೂಶ್ ಅಮೇರಿಕಾ ಮೂಲದ ವೀಡಿಯೋ ಮೈನಿಂಗ್ ಅನ್ನುವ ಸಂಸ್ಥೆಯ ಪ್ರಮುಖ ಹಾಗೂ ಮಹತ್ತರ ಜವಬ್ದಾರಿ ಹೊತ್ತಿದ್ದರು. ಈ ವೇಳೆ ಹತ್ತು ಹಲವು ಯೋಜನೆಗಳನ್ನು ಲಾಂಚ್ ಮಾಡುವ ಹಿಂದೆ ಪಿಯೂಶ್ ಅವಿರತ ಪರಿಶ್ರಮವಿತ್ತು. ಸುಮಾರು 10 ಅಂತರಾಷ್ಟ್ರೀಯ ಪ್ರಕಾಶನ ಸಂಸ್ಥೆಗಳಲ್ಲಿ ಬರವಣಿಗೆಯ ಮೂಲಕವೇ ಗುರುತಿಸಿಕೊಂಡಿದ್ದ ಪಿಯೂಶ್ ತಮ್ಮ ಹೆಸರಿನಲ್ಲಿ 2 ಪೇಟೆಂಟ್ ಕೂಡ ಹೊಂದಿದ್ದಾರೆ.

ವೈಯಕ್ತಿಕವಾಗಿ ನೋವು ತರಿಸುವ ಟೋಲ್‍ಗಳಲ್ಲಿ ದೀರ್ಘಕಾಲ ಕ್ಯೂನಲ್ಲಿ ನಿಂತು ಕಾಯುವುದು ಎಂಟೋಲ್ ಜಾರಿಗೆ ಬರಲು ಪ್ರಮುಖ ಕಾರಣ. ಭಾರತದಲ್ಲಿ ರಸ್ತೆಗಳ ಗುಣಮಟ್ಟ ಉತ್ತಮವಾಗುತ್ತಿದ್ದ ಬೆನ್ನಲ್ಲೇ ಈ ಟೋಲ್‍ಗಳಲ್ಲಿ ಕಾಯುವ ಸಮಸ್ಯೆ ಹೆಚ್ಚಾಗಿ ಸವಾರರಿಗೆ ತಲೆನೋವಾಗಿ ಪರಿಣಮಿಸಿತ್ತು. ಪಿಯೂಶ್ ಈ ಪ್ರಯತ್ನಕ್ಕೆ ಮುಂದಾಗುವ ಮುನ್ನ ಅವರಿಗೆ ಈ ಉದ್ಯಮ ಅತ್ಯಂತ ಹೊಸದಾಗಿತ್ತು. ಹಾಗಾಗಿ ಸುಮಾರು 3 ತಿಂಗಳ ಕಾಲ ಇದರ ಬಗ್ಗೆ ಮಾರುಕಟ್ಟೆ ಸಂಶೋಧನೆ ಹಾಗೂ ಅಮೂಲಾಗ್ರ ಅಧ್ಯಯನ ನಡೆಸಿದರು. ಬಳಿಕ ಮಾಹಿತಿ ಕಲೆ ಹಾಕಿ ಅದು ವಾಸ್ತವದ ಸಂಗತಿಯೇ ವಿನಃ ಕಲ್ಪನೆಯಲ್ಲ ಅನ್ನುವುದನ್ನು ಸ್ಪಷ್ಟಪಡಿಸಿಕೊಂಡೇ ಮುಂದಿನ ಹೆಜ್ಜೆ ಮುಂದಿಟ್ಟರು.

ಸ್ಫರ್ಧೆಯ ಮಧ್ಯೆಯೂ ಎಂ ಟೋಲ್ ನೆಲೆನಿಲ್ಲಲು ಕಾರಣ..?

ಈಗಾಗಲೆ ಅನೇಕ ಅಂತರಾಷ್ಟ್ರೀಯ ಟೋಲಿಂಗ್ ಕಂಪೆನಿಗಳು ನೆಲೆ ಸಾಧಿಸಲು ಪರದಾಡುತ್ತಿರುವ ಹಾಗೂ ತೀವ್ರವಾಗಿ ಪೈಪೋಟಿ ನಡೆಸುತ್ತಿರುವ ಸಂದರ್ಭದಲ್ಲಿ ಎಂ ಟೋಲ್‍ಗೆ ತನ್ನ ಹೆಜ್ಜೆ ದೃಢಗೊಳಿಸಲು ಕಾರಣವೇನು? ಅದು ಹೇಗೆ ಕ್ಷಿಪ್ರ ಸಮಯದಲ್ಲಿ ಎಂ ಟೋಲ್ ತನ್ನ ಮಾರುಕಟ್ಟೆಯನ್ನು ವಿಸ್ತಾರಗೊಳಿಸಿತು..? ಅನ್ನುವ ಪ್ರಶ್ನೆಗಳು ಮಾರುಕಟ್ಟೆಯಲ್ಲಿದೆ.

ಅದಕ್ಕೆ ಉತ್ತರಿಸುವ ಪಿಯೂಶ್, ಯಾವುದೇ ಕಂಪೆನಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡು ಹಣರಹಿತ ವ್ಯವಹಾರ ನಡೆಸುವ ಆಲೋಚನೆ ಮಾಡಿರಲಿಲ್ಲ. ಹಿಂದಿನ ಸ್ಮಾರ್ಟ್ ಟೋಲ್ ಟ್ಯಾಗ್ ಒಂದು ನಿರ್ದಿಷ್ಟ ಟೋಲ್‍ಗೆ ಮಾತ್ರ ಅನ್ವಯವಾಗುತ್ತಿತ್ತೇ ವಿನಃ ಬೇರೆ ಟೋಲ್‍ಗಳಲ್ಲಿ ಈ ಟ್ಯಾಗ್ ಬಳಕೆ ಸಾಧ್ಯವಿರಲಿಲ್ಲ. 24 ಗಂಟೆಗಳ ಕಾಲವೂ ಕಾರ್ಯನಿರತವಾಗಿರುವ ದೆಹಲಿ ಹಾಗೂ ಮುಂಬೈನಂತಹ ಟೋಲ್‍ಗಳಲ್ಲಿ ಯಾವ ಅಂತರಾಷ್ಟ್ರೀಯ ಕಂಪೆನಿಗಳು ಸ್ಮಾರ್ಟ್ ಟ್ಯಾಗ್ ಸೇವೆ ಒದಗಿಸಿರಲಿಲ್ಲ. ಈ ನಿರ್ವಾತವನ್ನು ನಾನು ಆಕ್ರಮಿಸಿಕೊಂಡು ಅವರಿಗೆ ಟ್ಯಾಗ್ ಸೇವೆ ಒದಗಿಸಲು ಮುಂದಾದೆ. ಸದ್ಯ ನನ್ನ ಬಳಿ 24 ವಿಭಿನ್ನ ಟೋಲ್‍ಗಳ ಟ್ಯಾಗ್‍ಗಳಿವೆ ಎನ್ನುತ್ತಾರೆ ಪಿಯೂಷ್​​​.

image


ಎಂ ಟೋಲ್​​ ಬೇರೆ ಬೇರೆ ಟೋಲ್ ಗೇಟ್‍ಗಳಲ್ಲೂ ಈ ಟ್ಯಾಗ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಟ್ಯಾಗ್ ದರ ಕಡಿಮೆ ಹಾಗೂ ಸರಳ ವಹಿವಾಟು ಇದರ ಯಶಸ್ಸಿನ ಇನ್ನೊಂದು ಮಾಪನವಾದರೆ, ನಿರಂತರವಾಗಿ ಚಾಲನೆ ಮಾಡದವರಿಗೂ ಟೋಲ್ ಟ್ಯಾಗ್ ನೀಡುವ ಮೂಲಕ ಸಾರ್ವಜನಿಕರ ವಿಶ್ವಾಸ ಗಳಿಸಿಕೊಂಡಿದೆ. ಇದಕ್ಕೆ ಪೈಪೋಟಿ ನೀಡುತ್ತಿರುವ ಬೇರೆ ಬೇರೆ ಕಂಪೆನಿಗಳು ಟೋಲ್ ಗೇಟ್‍ಗಳಲ್ಲಿ ಹಣ ಸಂಗ್ರಹಣೆ ಮಿಷನ್ ಇನ್‍ಸ್ಟಾಲ್ ಮಾಡುತ್ತಿದ್ದಾಗಲೇ ಎಂ ಟೋಲ್ ತನ್ನ ಟ್ಯಾಗಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ಈಗ ಇದನ್ನು ಅಪ್‍ಡೇಟ್ ಮಾಡಿಕೊಂಡು ವೆಬ್ ಅಥವಾ ಸೆಲ್ ಫೋನ್ ರೀಚಾರ್ಜಿಂಗ್‍ನಂತೆ ಟ್ಯಾಗಿಂಗ್ ರೀಚಾರ್ಜಿಂಗ್ ಮಾಡಿಕೊಳ್ಳುತ್ತಿವೆ ಆ ಕಂಪೆನಿಗಳು. ಆದರೆ ಈ ವ್ಯವಸ್ಥೆಯೇ ಅಂತಿಮ ಗುರಿಯಲ್ಲ ಅನ್ನುವುದು ಪಿಯೂಶ್ ಹೇಳಿಕೆ.

ಎಂ-ಟೋಲ್ ತನ್ನ ಮಾರುಕಟ್ಟೆಯನ್ನು ಗುರುತಿಸಿದ್ದು ಹೇಗೆ?

ಎಂ ಟೋಲ್ ತನ್ನ ಟಾರ್ಗೆಟ್ ಗ್ರಾಹಕರನ್ನು ತಲುಪಲು ಹಲವು ಯೋಜನೆಗಳನ್ನು ಹಮ್ಮಿಕೊಂಡಿತ್ತು. ಡಿಜಿಟಲ್ ಮಾರ್ಕೆಟಿಂಗ್, ಬಿಸಿನೆಸ್ ನೆಟ್‍ವರ್ಕಿಂಗ್ ಅಥವಾ ಜಾಲ ವಿಸ್ತರಣೆ, ಸಹಾಯಕ ಪಾರ್ಟ್​ನರ್ ಸಂಸ್ಥೆಗಳ ಮೂಲಕ ಪ್ರಚಾರ, ಇಂತಹ ಯೋಜನೆಗಳಿಂದ ಎಂ ಟೋಲ್ ತನ್ನ ಕಾರ್ಯ ಯೋಜನೆಯನ್ನು ಜಾರಿಗೊಳಿಸಲು ಮುಂದಾಯಿತು. ಮುಖ್ಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವ ಬಹುತೇಕ ಎಲ್ಲಾ ಟೋಲ್‍ಗಳಲ್ಲೂ ಸುಮಾರು 65-80 ಪ್ರತಿಶತ ಆದಾಯ ಬೃಹತ್ ವಾಹನಗಳು ಹಾಗೂ ಸರಕು ಸಾಗಾಣಿಕೆ ವಾಹನಗಳಾದ ಲಾರಿ, ಟ್ರಕ್, ಟ್ಯಾಕ್ಸಿ ಹಾಗೂ ರಾಜ್ಯ ಬಸ್ ನಿಗಮಗಳಿಂದ ಬರುತ್ತಿತ್ತು. ನಾವು ಈ ಸಂಬಂಧಪಟ್ಟ ಎಲ್ಲಾ ಕಂಪೆನಿಗಳ ಮುಖ್ಯ ಅಧಿಕಾರಿಗಳನ್ನು ಭೇಟಿ ಮಾಡಿ ಅವರಿಗೆ ಯೋಜನೆಯನ್ನು ವಿವರಿಸಿ, ಅವರ ಮನವೊಲಿಸಲು ಮುಂದಾದೆವು. ಪರಿಣಾಮವಾಗಿ ಈಗಾಗಲೇ ಅವರಲ್ಲಿ ಬಹುತೇಕ ಅಥಾರಿಟಿಗಳು ನಮ್ಮ ಯೋಜನೆಯನ್ನು ಒಪ್ಪಿ ಸಹಿ ಹಾಕಿವೆ. ಮುಂಬರುವ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಹಾಗೂ ಆಕರ್ಷಣೆ ಕಂಡುಬರಲಿದೆ ಅಂತ ಆತ್ಮಿವಿಶ್ವಾಸದಿಂದ ಪಿಯೂಶ್ ಹೇಳಿದ್ದಾರೆ.

ಈ ಟೋಲ್ ಪ್ಲಾಝಾಗಳಲ್ಲಿ ತಾಂತ್ರಿಕತೆಯನ್ನು ಅಭಿವೃದ್ಧಿಪಡಿಸಬೇಕಿರುವುದು ಅಷ್ಟೇ ಮುಖ್ಯ. ಈಗಿರುವ ಟೋಲಿಂಗ್ ಉಪಕರಣಗಳು ಔಟ್ ಡೇಟೆಡ್ ಆಗುತ್ತಿರುವ ಬೆನ್ನಲ್ಲೇ ಟೋಲಿಂಗ್ ಕಂಪೆನಿಗಳು ತಮ್ಮ ವಿನೂತನ ತಂತ್ರಜ್ಞಾನದ ಯಂತ್ರಗಳನ್ನು ಟೋಲ್ ಗೇಟ್‍ಗಳಲ್ಲಿ ಇಡುತ್ತಿವೆ. ಆದರೆ ಈ ನಿಟ್ಟಿನಲ್ಲಿ ಸಮರ್ಥವಾಗಿ ಕೆಲಸ ಮಾಡಬಲ್ಲ ನುರಿತ ಟೋಲ್ ಪ್ಲಾಝಾ ಆಪರೇಟರ್‍ಗಳ ಅಭಾವವಿರುವುದು ಎಲ್ಲಾ ಸಂಸ್ಥೆಗಳ ಅತಿ ದೊಡ್ಡ ತೊಡಕಾಗಿದೆ.

ಎಂ ಟೋಲ್ ಒಂದು ಪೂರ್ವ ಆದಾಯ ಸಂಸ್ಥೆಯಾಗಿದ್ದು, ಕುಟುಂಬ ಹಾಗೂ ಸ್ನೇಹಿತರಿಂದ ಹೂಡಿಕೆ ಮಾಡಿರುವ ಉದ್ಯಮ. ಈಗಾಗಲೆ ಇದರ ಬಗ್ಗೆ ಬಸ್ ಹಾಗೂ ಟ್ಯಾಕ್ಸಿ ಚಾಲಕರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದರ ಪರಿಹಾರ ಉಪಾಯಗಳು ಸ್ಮಾರ್ಟ್ ಆಗಿದ್ದು ಬೇಗನೆ ಜನತೆಯನ್ನು ರೀಚ್ ಆಗಿದೆ. ಆದರೆ ಕೆಲವು ಮುಖ್ಯ ಸಂಸ್ಥೆ ಹಾಗೂ ಸರ್ಕಾರದ ಮಟ್ಟದಲ್ಲಿ ಇನ್ನೂ ಸಹಭಾಗಿತ್ವದ ಅವಶ್ಯಕತೆಯಿದೆ.

ಪ್ರಾರಂಭಿಕ ಉದ್ಯಮಿಯಾಗಿ ಪಿಯೂಶ್‍ರ ಅನುಭವಗಳು:

ಪಿಯೂಶ್ ಹೇಳುವಂತೆ ಅವರ ಬಳಿ ಹಣವಿರಲಿಲ್ಲ, ಆಫೀಸ್ ಇರಲಿಲ್ಲ ಜೊತೆಗೆ ಸೌಕರ್ಯಗಳೂ ಇರಲಿಲ್ಲ. ಆದರೆ ಒಂದು ಸಮಸ್ಯೆ ಇತ್ತು. ಅದನ್ನು ಪರಿಣಾಮಕಾರಿಯಾಗಿ ಪರಿಹರಿಸಿದ ಬಳಿಕ ಇನ್ನೊಂದು ಸಮಸ್ಯೆಯತ್ತ ಗಮನ ಹರಿಸಲಾಯಿತು. ಮುರ್ಫಿ ನಿಯಮದ ಅನ್ವಯ ಏನಾದರೂ ತಪ್ಪಾಗುತ್ತಿದೆ ಅಂದರೆ ಅದು ತಪ್ಪೇ ಆಗುತ್ತದೆ. ಬಹುತೇಕ ವಿಚಾರಗಳನ್ನು ನೀವು ಆಲೋಚಿಸಿ, ನಿರೀಕ್ಷಿಸಿದಂತೆ ಬಗೆ ಹರಿಸಲು ಸಾಧ್ಯವಿಲ್ಲ. ಆರಂಭಿಕ ಸಂಸ್ಥೆಗಳಲ್ಲಿ ನೀವು ತಪ್ಪು ಮಾಡಿದರೆ ಮಾತ್ರ ಯಶಸ್ಸಿನ ಒಳಗುಟ್ಟು ಅರಿವಾಗುತ್ತದೆ. ಇಲ್ಲಿ ತಪ್ಪುಗಳು ಅದೃಷ್ಟವನ್ನು ನಿರ್ಧರಿಸುವುದಿಲ್ಲ ಆದರೆ ಹೇಗೆ ಮತ್ತೆ ಎದ್ದು ನಿಲ್ಲಬೇಕು ಅನ್ನುವ ಶಕ್ತಿ ಹಾಗೂ ಸಾಮರ್ಥ್ಯ ಹೊಂದಿದವನಿಗೆ ಮಾತ್ರ ತಪ್ಪುಗಳನ್ನು ಸರಿಪಡಿಸುವ ಕಲೆ ಗೊತ್ತಿರುತ್ತದೆ.