ಜನುಮದ ಗೆಳತಿಯರ ಉದ್ಯಮ ಪಯಣ- ಫ್ಯಾಷನ್ ಜಗತ್ತಿನ ಐಕಾನ್ `ದಿ ಕಲರ್ಡ್ ಟ್ರಂಕ್'

ಟೀಮ್​​ ವೈ.ಎಸ್​​.

ಜನುಮದ ಗೆಳತಿಯರ ಉದ್ಯಮ ಪಯಣ- ಫ್ಯಾಷನ್ ಜಗತ್ತಿನ ಐಕಾನ್ `ದಿ ಕಲರ್ಡ್ ಟ್ರಂಕ್'

Thursday November 05, 2015,

2 min Read

ಅವರಿಬ್ಬರೂ ಪ್ರಾಣ ಸ್ನೇಹಿತೆಯರು. ಉದ್ಯಮದಲ್ಲಿ ಪರಸ್ಪರ ಪಾಲುದಾರರು. ಫ್ಯಾಷನ್ ಜಗತ್ತಿನಲ್ಲಿ ಹೊಸ ಹವಾ ಎಬ್ಬಿಸಿದ್ದಾರೆ. `ದಿ ಕಲರ್ಡ್ ಟ್ರಂಕ್' ಮೂಲಕ ಯಶಸ್ಸಿನ ಮೆಟ್ಟಿಲೇರಿದ್ದಾರೆ. ತ್ರಿಶಾಲಾ ಮೆಹ್ತಾ ಮತ್ತು ಯಶ್ನಿ ಕೊಠಾರಿ ಇಬ್ರೂ ಲಂಡನ್ ಕಾಲೇಜ್ ಆಫ್ ಫ್ಯಾಷನ್‍ನಲ್ಲಿ ಓದ್ತಾ ಇದ್ರು. ಇಬ್ಬರೂ ಆಗ ರೂಮ್‍ಮೇಟ್ಸ್. ಹಾಗಾಗಿ ಸಹಜವಾಗಿಯೇ ಗೆಳೆತನ ಬೆಳೆದಿತ್ತು. ಪರಸ್ಪರ ಬೆರೆತು, ಕಲೆತು, ಕಲಿತ ತ್ರಿಶಾಲಾ ಹಾಗೂ ಯಶ್ನಿ, ಎರಡು ದೇಹ ಒಂದೇ ಆತ್ಮ ಎನ್ನುವಂತಿದ್ರು. ಜೊತೆಯಾಗಿ ಅಡುಗೆ ಮಾಡ್ತಾ, ಮನೆಗೆಲಸ ಮಾಡ್ತಾ, ಸ್ಟಡಿ ವಿಚಾರಗಳನ್ನು ಹಂಚಿಕೊಳ್ತಾ ಇಬ್ರೂ ಅಮೂಲ್ಯ ಸಮಯ ಕಳೆದಿದ್ದನ್ನು ಈಗ್ಲೂ ತ್ರಿಶಾಲಾ ನೆನಪಿಸಿಕೊಳ್ತಾರೆ. ಇಬ್ಬರೂ ಜೊತೆಯಾಗಿ ಒಂದು ತಂಡ ಕಟ್ಟೋಣ ಅಂತಾ ಇಬ್ರೂ ಆಗಾಗಾ ಮಾತನಾಡಿಕೊಳ್ತಿದ್ರು.

image


ಮಾಸ್ಟರ್ಸ್ ಮಾಡ್ತಿದ್ದ ತ್ರಿಶಾಲಾ, ಫ್ಯಾಷನ್ ಡಿಸೈನರ್‍ಗಳಿಗೆ ಬಹುಬೇಡಿಕೆ ಇದೆ ಅನ್ನೋದನ್ನು ಅರಿತುಕೊಂಡ್ರು. ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಿದ್ರೂ ಅದು ಎಲ್ಲರನ್ನೂ ತಲುಪುತ್ತಿಲ್ಲ, ಕೆಲವೇ ಕೆಲವು ಗ್ರಾಹಕರಿಗೆ ಸೀಮಿತವಾಗಿದೆ ಅನ್ನೋದನ್ನು ಅರ್ಥಮಾಡಿಕೊಂಡಿದ್ರು. ಬಹುಸಂಖ್ಯೆಯಲ್ಲಿ ಅವರು ಗ್ರಾಹಕರನ್ನು ತಲುಪಬೇಕು ಅಂದ್ರೆ ಡಿಜಿಟಲ್ ವೇದಿಕೆ ಬೇಕೆಂದು ತ್ರಿಶಾಲಾಗೆ ಅನಿಸಿತ್ತು. ಈ ಐಡಿಯಾಕ್ಕೊಂದು ಸ್ಪಷ್ಟ ರೂಪ ಕೊಡಲೇಬೇಕು ಎಂದುಕೊಂಡ ತ್ರಿಶಾಲಾ, ಅದನ್ನು ಯಶ್ನಿ ಜೊತೆ ಹಂಚಿಕೊಂಡ್ರು. ಕಾಫಿ ಹೀರುತ್ತ, ಊಟ ಮಾಡುತ್ತ ಹೀಗೆ ಅವಕಾಶ ಸಿಕ್ಕಾಗಲೆಲ್ಲ ತ್ರಿಶಾಲಾ ಹಾಗೂ ಯಶ್ನಿ ಇದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿದ್ರು. ದೊಡ್ಡ ಮಟ್ಟದಲ್ಲೇ ಉದ್ಯಮವೊಂದನ್ನು ಆರಂಭಿಸುವ ನಿರ್ಧಾರಕ್ಕೆ ಬಂದ್ರು. ಅದ್ವಿತೀಯವಾದ ಫ್ಯಾಷನ್ ಬ್ಯುಸಿನೆಸ್‍ಗೆ ವೇದಿಕೆ ಸಿದ್ಧವಾಯ್ತು. ಸತ್ಯ ಹಾಗೂ ಕೌಶಲ್ಯ ಉದ್ಯಮದ ಆಧಾರ ಸ್ತಂಭ. ಪ್ರತಿಭಾವಂತ ಫ್ಯಾಷನ್ ಡಿಸೈನರ್‍ಗಳೇ ಉದ್ಯಮದ ಯಶಸ್ಸಿಗೆ ಆಧಾರ ಎನ್ನುತ್ತಾರೆ ತ್ರಿಶಾಲಾ.

ಮಾರಾಟದ ವಹಿವಾಟಿಗೂ ಮುನ್ನವೇ ವಿನ್ಯಾಸಗಾರರು ಹಾಗೂ ಗ್ರಾಹಕರು ಪರಸ್ಪರ ಪರಿಚಯಿಸಿಕೊಂಡು, ಸ್ಟೈಲ್ ಬಗ್ಗೆ ಅರಿತುಕೊಳ್ಳುವಂಥ ವಾತಾವರಣ ನಿರ್ಮಾಣವಾಗಬೇಕೆಂಬ ಬಯಕೆ ಈ ಸ್ನೇಹಿತೆಯರದ್ದು. ತ್ರಿಶಾಲಾ ಹಾಗೂ ಯಶ್ನಿ ಜೊತೆಯಾಗಿ ಆರಂಭಿಸಿದ `ದಿ ಕಲರ್ಡ್ ಟ್ರಂಕ್'ನ ಉದ್ದೇಶ ಕೂಡ ಇದೇ ಆಗಿದೆ. ಕೈತುಂಬಾ ಸಂಬಳ ಬರ್ತಿದ್ದ ಒಳ್ಳೆ ಉದ್ಯೋಗವನ್ನು ಬಿಟ್ಟು ಉದ್ದಿಮೆಯತ್ತ ಚಿತ್ತ ಹರಿಸಲು ನಮ್ಮಲ್ಲಿದ್ದ ಆತ್ಮವಿಶ್ವಾಸವೇ ಕಾರಣ ಎನ್ನುತ್ತಾರೆ ಇವರು. ಬಹುತೇಕ ಎಲ್ಲರೂ ಕೆಲಸ ಬಿಡದಂತೆ ತ್ರಿಶಾಲಾ ಹಾಗೂ ಯಶ್ನಿಗೆ ಸಲಹೆ ನೀಡಿದ್ರು. ತ್ರಿಶಾಲಾ ಹಾಗೂ ಯಶ್ನಿ ಕೂಡಿಟ್ಟ ಹಣ ಈ ಉದ್ಯಮಕ್ಕೆ ಆರಂಭಿಕ ಇಂಧನ ಆಗಬಹುದಷ್ಟೆ. ಹಾಗಾಗಿ ಮುಂದೆ ಹಣಕಾಸಿನ ಅಡಚಣೆ ಉಂಟಾಗಬಹುದು ಅನ್ನೋದು ಎಲ್ಲರ ಅಭಿಪ್ರಾಯವಾಗಿತ್ತು.

image


ಇಬ್ಬರು ಮಹಿಳೆಯರಾಗಿ ಸುರಕ್ಷಿತ ವೃತ್ತಿ ಜೀವನದ ಆರಂಭವನ್ನ ತ್ರಿಶಾಲಾ ಹಾಗೂ ಯಶ್ನಿ ಬಯಸಿದ್ರು. ಅಸಾಂಪ್ರದಾಯಿಕವಾದ ನಿರ್ಧಾರವನ್ನು ತೆಗೆದುಕೊಳ್ಳಬಾರದೆಂದೇ ತೀರ್ಮಾನಿಸಿದ್ರು. ಸ್ವ ಉದ್ಯಮ ಆರಂಭಿಸುವ ದಿಟ್ಟ ನಿರ್ಧಾರಕ್ಕೆ ತ್ರಿಶಾಲಾ ಮತ್ತು ಯಶ್ನಿ ಇಬ್ಬರ ಕುಟುಂಬದವರೂ ಸಾಥ್ ಕೊಟ್ಟಿದ್ದಾರೆ. ಮಕ್ಕಳ ಮೇಲೆ ವಿಶ್ವಾಸವಿಟ್ಟು ಹಾರೈಸಿದ್ದಾರೆ. ಅವರ ಬೆಂಬಲ ಹಾಗೂ ಪ್ರೋತ್ಸಾಹ ಸದಾ ಇವರೊಂದಿಗಿದೆ. ದ್ವೇಷಿಸುವವರು ದ್ವೇಷಿಸಲಿ, ಅನುಮಾನಪಡುವವರು ಅನುಮಾನಿಸಲಿ...ಅದಕ್ಕೆಲ್ಲಾ ಅಲ್ಲಾಡದ ಬದ್ಧತೆ ತ್ರಿಶಾಲಾ ಹಾಗೂ ಯಶ್ನಿ ಅವರಲ್ಲಿದೆ.

ಫ್ಯಾಷನ್ ಅನ್ನೋದು ಮಹಿಳೆಯರ ಮೇಲೆ ಕೇಂದ್ರೀಕೃತವಾದ ಉದ್ಯಮ. ಸದ್ಯ ತಮ್ಮನ್ನು ತಾವು ಸಾಬೀತು ಮಾಡುವ ಅವಶ್ಯಕತೆ ಇದೆ ಎನ್ನುತ್ತಾರೆ ಈ ಜೀವದ ಗೆಳತಿಯರು. ಸಾಧಕ-ಬಾಧಕಗಳ ಬಗ್ಗೆ ಮೊದಲೇ ಊಹಿಸುವುದು ಬೇಡ. ಕಾಲವೇ ಎಲ್ಲದಕ್ಕೂ ಉತ್ತರ ನೀಡುತ್ತದೆ ಅನ್ನೋದು ಇವರ ವಿಶ್ವಾಸದ ನುಡಿ. ಭೂಮಿ-ಆಕಾಶವನ್ನು ಒಂದುಮಾಡಿಯಾದ್ರೂ ಸರಿ ಅಂದುಕೊಂಡಿದ್ದನ್ನು ಸಾಧಿಸುತ್ತೇವೆ, ಸಂಘಟಿತ ಪ್ರಯತ್ನದಲ್ಲಿ ಯಶಸ್ಸು ಖಚಿತ ಅಂತಾ ತ್ರಿಶಾಲಾ ಪ್ರತಿಪಾದಿಸಿದ್ದಾರೆ. `ದಿ ಕಲರ್ಡ್ ಟ್ರಂಕ್' ದೇಶದ ವಿನ್ಯಾಸಗಾರರು ಹಾಗೂ ವಿವಿಧ ಬ್ರ್ಯಾಂಡ್‍ಗಳ ಸೇನೆಯಿದ್ದಂತೆ. ಸುಮಾರು ಎಂಟು ಸಾವಿರಕ್ಕೂ ಅಧಿಕ ಸಂದರ್ಶಕರ ಬೆಂಬಲ ಸಂಸ್ಥೆಗಿದೆ. 4 ತಿಂಗಳ ಹಿಂದಷ್ಟೇ ಲಾಂಚ್ ಆದ `ದಿ ಕಲರ್ಡ್ ಟ್ರಂಕ್' ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಜನಪ್ರಿಯತೆ ಗಳಿಸಿದೆ. ಅಕ್ಟೋಬರ್ 22ರಂದು ಸಂಸ್ಥೆಯ ವೆಬ್‍ಸೈಟ್ ಕೂಡ ಬಿಡುಗಡೆಯಾಗಿದೆ. ಸಂಸ್ಥೆಯ ಬೆಳವಣಿಗೆ ದರ ಶೇಕಡಾ 190ರಷ್ಟಿರೋದು ವಿಶೇಷ. ಸುಲಭವಾಗಿ ಡೌನ್‍ಲೋಡ್ ಮಾಡಿಕೊಳ್ಳಬಹುದಾದಂಥ ಹೌಸ್ ಫ್ಯಾಷನ್ ಮ್ಯಾಗಝೀನ್ ಅನ್ನು ಕೂಡ ಹೊರತರುವ ಯೋಚನೆ ತ್ರಿಶಾಲಾ ಹಾಗೂ ಯಶ್ನಿ ಅವರಿಗಿದೆ.

ಸ್ನೇಹದ ಕಡಲಲ್ಲಿ ತೇಲುತ್ತ ಬಂದ ತ್ರಿಶಾಲಾ ಹಾಗೂ ಯಶ್ನಿ ಈಗ ಯಶಸ್ಸಿನ ಅಲೆಯಲ್ಲೂ ತೇಲುತ್ತಿದ್ದಾರೆ. ಅವರ ಪಯಣ ಹೀಗೆ ಜೊತೆಯಾಗಿ ಯಶಸ್ವಿಯಾಗಿ ಸಾಗಲಿ ಅನ್ನೋದೇ ಎಲ್ಲರ ಹಾರೈಕೆ.