ಅಂದು ಕ್ಯಾಶಿಯರ್, ಇಂದು ಜೆಟ್​ ಏರ್​ವೇಸ್​ ಮಾಲೀಕ ..

ಟೀಮ್ ವೈ.ಎಸ್.ಕನ್ನಡ 

1

ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ 16ನೇ ಸ್ಥಾನದಲ್ಲಿರುವ ಇವರ ಕಥೆಯನ್ನು ಒಂದೇ ಮಾತಿನಲ್ಲಿ ಹೇಳಬೇಕಂದ್ರೆ ''ಬೀದಿಯಿಂದ ಆಕಾಶಕ್ಕೆ'' ಎನ್ನಬಹುದು. ಇಡೀ ಕುಟುಂಬವೇ ದಿವಾಳಿಯಾದಾಗ ನರೇಶ್ ಗೋಯಲ್ ಅವರಿಗೆ ಇನ್ನೂ 12 ವರ್ಷ. ತಮ್ಮ ಬಳಿಯಿದ್ದ ಆಸ್ತಿ ಪಾಸ್ತಿ ಎಲ್ಲವನ್ನೂ ಅವರ ಮನೆಯವರು ಹರಾಜು ಹಾಕಬೇಕಾಯ್ತು. ಆಗ ತುತ್ತು ಕೂಳಿಗೂ ಬರವಿತ್ತು, ಏನಾದ್ರೂ ತಿನ್ನೋಣ ಅಂದ್ರೆ ಕೈಯ್ಯಲ್ಲಿ ಕಾಸಿಲ್ಲ, ಶಿಕ್ಷಣ ಮುಂದುವರಿಸಲು ಹಣವಿಲ್ಲ, ಉಳಿದುಕೊಳ್ಳಲು ಸೂರು ಸಹ ಇರಲಿಲ್ಲ.

ನರೇಶ್ ಗೋಯಲ್ ಹುಟ್ಟಿ ಬೆಳೆದಿದ್ದು ಪಂಜಾಬ್​ನ ಸಂಗೂರ್​ನಲ್ಲಿರುವ ಅಕ್ಕಸಾಲಿಗರ ಕುಟುಂಬದಲ್ಲಿ. ಇಡೀ ಕುಟುಂಬ ದಿವಾಳಿಯಾದ್ಮೇಲೆ ನರೇಶ್, ತಮ್ಮ ತಾಯಿಯ ಚಿಕ್ಕಪ್ಪನ ಆಸರೆಯಲ್ಲಿ ಬೆಳೆದ್ರು. ಆಗ ಶಿಕ್ಷಣ ಅವರ ಪಾಲಿಗೆ ಕಬ್ಬಿಣದ ಕಡಲೆ, ಯಾಕಂದ್ರೆ ಮನೆಯಲ್ಲಿ ಕರೆಂಟ್ ಕೂಡ ಇರಲಿಲ್ಲ. ಬೀದಿ ದೀಪದ ಬೆಳಕಿನಲ್ಲೇ ಕುಳಿತು ಓದಬೇಕಿತ್ತು. ನರೇಶ್ ಗೋಯಲ್ ಅವರಿಗೆ ಚಾರ್ಟರ್ಡ್ ಅಕೌಂಟಂಟ್ ಆಗಬೇಕೆಂದು ಆಸೆ. ಆದ್ರೆ ಹಣಕಾಸಿನ ಅಡಚಣೆಯಿಂದ ಅನಿವಾರ್ಯವಾಗಿ ಬಿ.ಕಾಂ ಮಾಡಬೇಕಾಯ್ತು. 1967ರಲ್ಲಿ ಪದವಿ ಮುಗಿಸಿದ ಅವರು ತಮ್ಮ ಚಿಕ್ಕಪ್ಪನ ಟ್ರಾವೆಲ್ ಏಜೆನ್ಸಿಯಲ್ಲಿ ಕ್ಯಾಶಿಯರ್ ಆಗಿ ಕೆಲಸಕ್ಕೆ ಸೇರಿಕೊಂಡ್ರು. ಆಗ ಅವರಿಗೆ ಬರ್ತಾ ಇದ್ದ ಸಂಬಳ ತಿಂಗಳಿಗೆ 300 ರೂಪಾಯಿ.

ನರೇಶ್ ಗೋಯಲ್ ಅವರ ಸಮರ್ಪಣಾ ಮನೋಭಾವ ಮತ್ತು ಪರಿಶ್ರಮಕ್ಕೆ ತಕ್ಕ ಪ್ರತಿಫಲ ಬೇಗನೆ ಸಿಕ್ಕಿತ್ತು. 1969ರಲ್ಲಿ ಅವರು ಇರಾಕಿ ಏರ್​ವೇಸ್​ನ ಪಬ್ಲಿಕ್ ರಿಲೇಶನ್ ಮ್ಯಾನೇಜರ್ ಆಗಿ ನೇಮಕಗೊಂಡ್ರು. 1971-74ರ ಅವಧಿಯಲ್ಲಿ ALIA ಮತ್ತು ರಾಯಲ್ ಜೊರ್ಡಿಯನ್ ಏರ್​ಲೈನ್​ನ ರೀಜನಲ್ ಮ್ಯಾನೇಜರ್ ಆಗಿಯೂ ಕಾರ್ಯನಿರ್ವಹಿಸಿದ್ರು. ಈ ಸಮಯದಲ್ಲಿ ದೇಶ ವಿದೇಶ ಸುತ್ತಿ ಬಂದ ನರೇಶ್ ಗೋಯಲ್ ಟ್ರಾವೆಲ್ ಉದ್ಯಮದ ಬಗ್ಗೆ ಅದ್ಭುತ ತರಬೇತಿ ಪಡೆದ್ರು. 1974ರಲ್ಲಿ ಸ್ವಂತ ಉದ್ಯಮ ಆರಂಭಿಸಬೇಕೆಂದು ನಿರ್ಧರಿಸಿದ ನರೇಶ್ ಗೋಯಲ್, ತಮ್ಮ ತಾಯಿಯ ಬಳಿ ಸ್ವಲ್ಪ ಹಣ ಪಡೆದು ತಮ್ಮದೇ ಟ್ರಾವೆಲ್ ಏಜೆನ್ಸಿಯೊಂದನ್ನು ತೆರೆದ್ರು. ಅದರ ಹೆಸರೇ ಜೆಟ್ಏರ್. ಸೇಲ್ಸ್ ಮತ್ತು ಮಾರ್ಕೆಟಿಂಗ್​ನಲ್ಲಿ ಏರ್ ಫ್ರಾನ್ಸ್, ಆಸ್ಟ್ರಿಯನ್ ಏರ್​ಲೈನ್ಸ್​ , ಕ್ಯಾಥೆ ಪೆಸಿಫಿಕ್​ನಂತಿತ್ತು. 

1991ರಲ್ಲಿ ಭಾರತದ ವಾಯುಯಾನ ಉತ್ತುಂಗದಲ್ಲಿತ್ತು, ಈ ಅವಕಾಶವನ್ನು ನರೇಶ್ ಗೋಯಲ್ ಕಳೆದುಕೊಳ್ಳಲಿಲ್ಲ. ತಮ್ಮ ಟ್ರಾವೆಲ್ ಏಜೆನ್ಸಿಯನ್ನು ಜೆಟ್ ಏರ್​ವೇಸ್​ ಹೆಸರಿನ ವಿಮಾನಯಾನ ಸಂಸ್ಥೆಯನ್ನಾಗಿ ಪರಿವರ್ತಿಸಿದ್ರು. 1993ರಲ್ಲಿ ಕಾರ್ಯಾರಂಭ ಮಾಡಿದ ಜೆಟ್ ಏರ್​ವೇಸ್​ , 2004ರಲ್ಲಿ ಮೊದಲ ಬಾರಿಗೆ ಅಂತರಾಷ್ಟ್ರೀಯ ವಿಮಾನಯಾನವನ್ನು ಸೇರ್ಪಡೆಗೊಳಿಸಿತು. 2007ರಲ್ಲಿ ಏರ್ ಸಹಾರಾವನ್ನು ಸ್ವಾಧೀನಪಡಿಸಿಕೊಂಡ ಜೆಟ್ ಏರ್​ವೇಸ್​, 2010ರ ವೇಳೆಗೆ ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಎನಿಸಿಕೊಂಡಿತ್ತು.

ನರೇಶ್ ಅವರ ಬದುಕು ಸಾಕಷ್ಟು ಏರಿಳಿತಗಳನ್ನು ಕಂಡಿದೆ. ರಾಷ್ಟ್ರವ್ಯಾಪಿ ವಾಯುಯಾನ ಬಿಕ್ಕಟ್ಟು, ವಿಮಾನಯಾನ ಸಂಸ್ಥೆಗಳ ನಡುವಣ ಶುಲ್ಕ ಯುದ್ಧ, ನಿರಂತರವಾಗಿ ಬದಲಾಗುವ ಮಾರುಕಟ್ಟೆಗೆ ತಕ್ಕಂತಹ ಪರಿವರ್ತನೆಗಳನ್ನು ಮಾಡಲು ಅವರು ಸಾಕಷ್ಟು ಶ್ರಮಿಸಿದ್ದಾರೆ. ಸದ್ಯ ಭಾರತದ ವಾಯುಯಾನದಲ್ಲಿ ಶೇ.21ರಷ್ಟು ಪಾಲು ಹೊಂದಿರುವ ಜೆಟ್ ಏರ್​ವೇಸ್​, ದೇಶದ 2ನೇ ಅತಿದೊಡ್ಡ ವಿಮಾನಯಾನ ಸಂಸ್ಥೆ ಎನಿಸಿಕೊಂಡಿದೆ. ಈ ವರ್ಷ ಅತ್ಯಧಿಕ ಲಾಭ ಗಳಿಸಿದ ಸಂಸ್ಥೆ ಅಂದ್ರೆ ಜೆಟ್ ಏರ್​ವೇಸ್. ''ಕಳೆದ 2 ವರ್ಷಗಳಿಂದ ಜೆಟ್ ಏರ್​ವೇಸ್​ ಅನ್ನು ಪಕ್ಕಾ ಉದ್ಯಮವನ್ನಾಗಿ ಮುನ್ನಡೆಸುತ್ತಿದ್ದೇನೆ. ನಮ್ಮ ಕಠಿಣ ಪರಿಶ್ರಮದಿಂದಾಗಿ ವಿಮಾನಗಳ ಕಾರ್ಯಾಚರಣೆಯಲ್ಲೂ ಅಪಾರ ಸುಧಾರಣೆಯಾಗಿದೆ. ಇದರಿಂದ್ಲೇ ದಾಖಲೆಯ ಲಾಭ ಗಳಿಸಲು ಸಾಧ್ಯವಾಯಿತು'' ಎನ್ನುತ್ತಾರೆ ನರೇಶ್ ಗೋಯಲ್.

ಇದನ್ನೂ ಓದಿ..

ಆರೋಗ್ಯದ ಹಿಂದಿದೆ ಮೇಕೆ ಹಾಲಿನ ರಹಸ್ಯ..!

ಭಾರತದಲ್ಲಿ ನೀರಿನ ಸಮಸ್ಯೆ ಯಾರಿಗೆ ಶಾಪ..?