ನಿಮ್ಮ ಪಾಲಿಗೆ ನೀವು ಸತ್ಯವಂತರಾಗಿರಿ – ಯುಪಿಎಸ್​​​ಸಿ ಶ್ರೇಯಾಂಕ ವಿಜೇತೆಯ ಜೀವನಾದರ್ಶ

ಟೀಮ್​​ ವೈ.ಎಸ್​​.

0

ಭಾರತದಲ್ಲಿ ನಾಗರಿಕ ಸೇವಾ ಪರೀಕ್ಷೆ ಪಾಸ್​​​ ಮಾಡುವುದು ಬಹುತೇಕ ಯುವಜನತೆಯ ಕನಸಾಗಿರುತ್ತದೆ. ಲಕ್ಷಾಂತರ ಅಭ್ಯರ್ಥಿಗಳು ಪರೀಕ್ಷೆ ಬರೆದಿರುತ್ತಾರೆ. ಅದಕ್ಕಾಗಿ ವರ್ಷವಿಡೀ ಹಗಲು ರಾತ್ರಿ ಓದುತ್ತಾರೆ. ಅವರಿಗೆ ಯುಪಿಎಸ್​​ಸಿ ಪರೀಕ್ಷೆ ಪಾಸ್ ಮಾಡುವುದೆಂದರೆ, ವಿಶ್ವಕಪ್ ಗೆದ್ದಷ್ಟೇ ಸಂಭ್ರಮ. ಒಂದೇ ಒಂದು ವ್ಯತ್ಯಾಸ ಎಂದರೆ, ಅದು ತಂಡ ಪ್ರಯತ್ನ, ಇದು ವೈಯಕ್ತಿಕ ಸಾಮರ್ಥ್ಯ ಅಷ್ಟೇ.

ಯುಪಿಎಸ್​​ಸಿಯ ಇಂತಹ ಗೋಲ್ಡನ್ ಪಟ್ಟಿಯಲ್ಲಿ ಮಿಂಚಿರೋ ಒಂದು ಹೆಸರು ಸಂಸ್ಕೃತಿ ಜೈನ್, ಅಖಿಲ ಭಾರತ ಮಟ್ಟದಲ್ಲಿ 11 ನೇ ಶ್ರೇಯಾಂಕ. ಯುಪಿಎಸ್​​ಸಿ ಪರೀಕ್ಷೆಯಲ್ಲಿ ಕೊನೆಯ ಚರಣವೇ ಸಂದರ್ಶನ. ಅದರಲ್ಲಿ ಪಾಸ್ ಆದರೆ ಮಾತ್ರ ಶ್ರೇಯಾಂಕ ಕೊಡಲಾಗುತ್ತದೆ. ಉನ್ನತ ಶ್ರೇಯಾಂಕ ಗಳಿಸಿದವರು ಐಎಎಸ್(ಭಾರತೀಯ ಆಡಳಿತ ಸೇವೆ)ಗೆ ನಿಯುಕ್ತಿಗೊಳ್ಳುತ್ತಾರೆ. ಉಳಿದವರು ಐಪಿಎಸ್(ಭಾರತೀಯ ಪೊಲೀಸ್ ಸೇವೆ), ಐಎಫ್ಎಸ್(ಭಾರತೀಯ ವಿದೇಶಾಂಗ ಸೇವೆ), ರೈಲ್ವೇ ಹೀಗೆ ವಿವಿಧ ಹುದ್ದೆಗಳಲ್ಲಿ ನೇಮಕಗೊಳ್ಳುತ್ತಾರೆ.

ಸಂಸ್ಕೃತಿ ಈ ಹಿಂದೆಯೂ ಎರಡು ಬಾರಿ ಪರೀಕ್ಷೆ ಪಾಸ್ ಮಾಡಿದ್ದಳು. ಭಾರತೀಯ ಆಡಳಿತ ಸೇವೆಗೆ ಸೇರಲೇಬೇಕು ಎನ್ನುವ ಉತ್ಕಟ ಆಕಾಂಕ್ಷೆಯೊಂದಿಗೆ ಮೂರನೇ ಬಾರಿ ಪರೀಕ್ಷೆ ತೆಗೆದುಕೊಂಡಿದ್ದಳು. ಈ ಬಾರಿ ಆಕೆಯ ಪ್ರಯತ್ನಕ್ಕೆ ಫಲ ಸಿಕ್ಕಿದೆ.

ಶ್ರೀನಗರದಲ್ಲಿ ಹುಟ್ಟಿದ ಸಂಸ್ಕೃತಿ ದೇಶದ ವಿವಿಧ ಭಾಗಗಳಲ್ಲಿ, ಆರು ವಿವಿಧ ತರಬೇತಿ ಸಂಸ್ಥೆಗಳಲ್ಲಿ ಐಎಎಸ್​​ಗಾಗಿ ತಯಾರಿ ನಡೆಸಿದ್ದರು. ಭಾರತೀಯ ವಾಯುದಳದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಕೃತಿ ಪೋಷಕರು, ಮಗಳ ಆಸೆಗೆ ಬೆನ್ನೆಲುಬಾಗಿ ನಿಂತಿದ್ದರು.

ಗೋವಾದಲ್ಲಿನ ಬಿಐಟಿಎಸ್, ಪಿಳಾನಿಯ ಪದವೀಧರರಾಗಿದ್ದಾರೆ ಸಂಸ್ಕೃತಿ. “ನನ್ನ ಕಾಲೇಜು ದಿನಗಳಲ್ಲೇ ನಾನು ಒಂದೆಡೆ ಸುದೀರ್ಘವಾಗಿ ನೆಲೆಸಿದ್ದು ನನಗೆ ಬಿಐಟಿಎಸ್, ಪಿಲಾನಿಯಲ್ಲಿ ಅವಕಾಶ ಸಿಕ್ಕಿದ್ದಕ್ಕೆ ನಾನು ಕೃತಜ್ಱಳಾಗಿದ್ದೇನೆ. ನಾನು ಒಬ್ಬ ಸಮರ್ಥ ವ್ಯಕ್ತಿಯಾಗಿ ಬೆಳೆಯಲು ಅಲ್ಲಿನ ವಾತಾವರಣವೇ ಕಾರಣ.” ಎನ್ನುತ್ತಾರೆ ಸಂಸ್ಕೃತಿ.

ಪದವಿ ಪಡೆದ ಬಳಿಕ, ಸಂಸದರಿಗೆ ಶಾಸಕಾಂಗ ಸಹಾಯಕರಾಗಿ ಪಿಆರ್​​ಎಸ್ ಶಾಸಕಾಂಗ ಸಂಶೋಧನೆಯನ್ನು ಕೈಗೊಂಡಿದ್ದರು. ಒಂದು ವರ್ಷ ಆ ಕಾಯಕ ನಡೆಸಿದ ಬಳಿಕ, 2012ರಲ್ಲಿ, ಸಂಸೋಧನಾ ಸಹಾಯಕರಾಗಿ ಸೆಂಟರ್ ಫಾರ್ ಪಾಲಿಸಿ ರೀಸರ್ಚ್​ ಸೇರಿಕೊಂಡು. ಎರಡೂ ವೃತ್ತಿಗಳು ದೆಹಲಿಯಲ್ಲೇ ಇದ್ದವು.

ಕಳೆದ ಡಿಸೆಂಬರ್​​ನಲ್ಲಿ ಭಾರತೀಯ ಆದಾಯ ಸೇವೆಗೆ ಸೇರ್ಪಡೆಗೊಂಡ ಅವರು ಸಧ್ಯಕ್ಕೆ ನೇರ ತೆರಿಗೆಯ ರಾಷ್ಟ್ರೀಯ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. “ಇದು ಅದ್ಭುತವಾದ ಸೇವೆ. ಸರಕಾರದ ಎಲ್ಲಾ ಕೆಲಸಗಳಿಗೆ ಈ ಇಲಾಖೆಯು ನಿಧಿಯನ್ನು ಸಂಗ್ರಹಿಸುತ್ತದೆ,” ಎನ್ನುತ್ತಾರೆ ಸಂಸ್ಕೃತಿ.

ಎಲ್ಎಎಂಪಿ ಫೆಲೋಷಿಪ್ ಮಾಡುತ್ತಿದ್ದಾಗಲೇ, ಸಂಸ್ಕೃತಿಯವರು ಮತ್ತೊಮ್ಮೆ ನಾಗರಿಕ ಪರೀಕ್ಷೆ ತೆಗೆದುಕೊಳ್ಳಲು ನಿರ್ಧರಿಸಿದರು. ಫೆಲೋಷಿಪ್ ಮಾಡುತ್ತಿದ್ದಾಗಲೇ, ನೀತಿ ರಚನೆಯಲ್ಲಿ ಆಸಕ್ತಿ ಹೊಂದಿದ್ದರು. ಭಾರತದ ನೀತಿ ರಚನೆಯಲ್ಲಿ ಪಾತ್ರವಹಿಸಲು ನಾಗರಿಕ ಸೇವೆಯೇ ಮುಖ್ಯವಾದ ದಾರಿ, ಅದೇ ವೇದಿಕೆ ಎಂದುಕೊಂಡು, ಪರೀಕ್ಷೆ ಬರೆಯಲು ನಿರ್ಧರಿಸಿದರು.

ಯಾರಾದರೂ ಒಂದಕ್ಕಿಂತ ಹೆಚ್ಚು ಬಾರಿ ನಾಗರಿಕ ಸೇವಾ ಪರೀಕ್ಷೆ ತೆಗೆದುಕೊಂದು ಪ್ರತಿ ಬಾರಿಯೂ ಪಾಸ್ ಮಾಡಿ, ತನಗೆ ಬೇಕಾದ ಶ್ರೇಯಾಂಕ ಲಭಿಸುವವರೆಗೆ ಪ್ರಯತ್ನಪಟ್ಟಿದ್ದರೆ, ಅದು ಸಂಸ್ಕೃತಿ ಮಾತ್ರ. ಅವರ ಪ್ರಕಾರ, ನಾಗರಿಕ ಸೇವಾ ಪರೀಕ್ಷೆಯು ಅತ್ಯಂತ ಕಠಿಣವಾದದ್ದು. ಅದು ಒಬ್ಬರ ಬುದ್ಧಿಶಕ್ತಿ ಮತ್ತು ವ್ಯಕ್ತಿತ್ವದ ಶಕ್ತಿಯನ್ನು ಪರೀಕ್ಷಿಸುತ್ತದೆ. ಈಗಿನ ಯುಪಿಎಸ್​​ಸಿ ಪರೀಕ್ಷಾ ಪದ್ಧತಿಯಲ್ಲಿ ಬೇರೆ ಬೇರೆ ವಿಷಯಗಳಲ್ಲಿ ಪರಿಣತಿ ಹೊಂದಿರಬೇಕಾಗುತ್ತದೆ. ಎಕನಾಮಿಕ್ಸ್, ವಿಜ್ಞಾನ, ಮತ್ತು ತಂತ್ರಜ್ಞಾನ, ಇತಿಹಾಸ, ಭೂಗೋಳ ಶಾಸ್ತ್ರ, ರಾಜ್ಯಶಾಸ್ತ್ರ, ಅಂತಾರಾಷ್ಟ್ರೀಯ ಸಂಬಂಧಗಳು ಎಲ್ಲವನ್ನೂ ತಿಳಿದಿರಬೇಕಾಗುತ್ತದೆ. “ಯಾರಿಗಾದರೂ ವಿಷಯಗಳ ಮೇಲೆ ಹಿಡಿತವಿದ್ದರೆ, ಪ್ರಚಲಿತ ವಿದ್ಯಮಾನಗಳನ್ನು ಸರಿಯಾಗಿ ಅಪ್ಡೇಡ್​​ ಮಾಡಿಕೊಂಡರೆ ಸಾಕು,” ಎನ್ನುತ್ತಾರೆ ಸಂಸ್ಕೃತಿ.

ಪರೀಕ್ಷಾ ಸಿದ್ಧತೆಗೆ ಸಂಸ್ಕೃತಿ ಸರಳ ಸಲಹೆಗಳು

ವಿಷಯಗಳನ್ನು ಸರಿಯಾಗಿ ಗ್ರಹಿಸಿದರೆ, ಎಲ್ಲಾ ರೀತಿಯ ಅಭ್ಯಾಸಕ್ಕೂ ಗಟ್ಟಿಯಾದ ಅಡಿಪಾಯ ಹಾಕುತ್ತದೆ.

“ಹಾಗಂತ, ಈ ಪರೀಕ್ಷೆಯನ್ನು ಸುಲಭದಲ್ಲಿ ಪಾಸ್ ಮಾಡಲಾಗುವುದಿಲ್ಲ.ಸರಿಯಾಗಿ ಎಫರ್ಟ್ ಹಾಕಲೇಬೇಕು. ಆದರೆ, ನನ್ನ ವೈಯುಕ್ತಿಕ ಅಭಿಪ್ರಾಯವೇನೆಂದರೆ, ಈ ಪರೀಕ್ಷೆಗಾಗಿ ಬದುಕಿನಲ್ಲಿ ಎಲ್ಲವನ್ನೂ ಮುಂದೂಡಬಾರದು. ಸಿದ್ಧತೆ ಮತ್ತು ಅದಕ್ಕಾಗಿನ ಶ್ರಮವು ಆಯಾ ವ್ಯಕ್ತಿಯ ಸಾಮರ್ಥ್ಯವನ್ನು ಆಧರಿಸಿರುತ್ತದೆ,” ಎನ್ನುತ್ತಾರೆ ಸಂಸ್ಕೃತಿ.

ಐಚ್ಛಿಕ ವಿಷಯವಾದ ಫಿಲಾಸಫಿಯಲ್ಲಿ ಸಿದ್ಧತೆ ನಡೆಸಲು ಕೋಚಿಂಗ್ ಪಡೆದುಕೊಂಡಿದ್ದರು. ಅಲ್ಲದೆ, ಅಧಿಕ ಶ್ರಮವನ್ನೂ ಹಾಕಿದ್ದರು. ಹೀಗಾಗಿ, ಯಶಸ್ಸಿನ ಶಿಖರ ತಲುಪಲು ಸಾಧ್ಯವಾಯಿತು.

ಪರೀಕ್ಷೆಯ ಅವಧಿ ಒಂದು ವರ್ಷ ಹಿಡಿಯುವುದರಿಂದ, ಅಲ್ಲಿಯವರೆಗೆ ತಾಳ್ಮೆಯಿಂದ ಇರುವುದು ಅತಿ ಮುಖ್ಯ. ಅಲ್ಲದೆ, ಪ್ಲಾನ್-ಬಿಯನ್ನೂ ರೆಡಿಯಾಗಿಟ್ಟುಕೊಳ್ಳಬೇಕು.

ಪರೀಕ್ಷೆ ಪಾಸ್ ಮಾಡಲು ಸಾಧ್ಯವಾಗದೇ ಇದ್ದಾಗ ಜಾರಿಗೆ ತರಬೇಕಾದ ಪರ್ಯಾಯ ಪ್ಲಾನ್ ಬಿ ರೆಡಿಯಾಗಿದ್ದರೆ, ನೀವು ಹೆಚ್ಚು ನೆಮ್ಮದಿಯಿಂದ ಮತ್ತು ಶಾಂತಿಯಿಂದ ಪರೀಕ್ಷೆ ಬರೆಯಬಹುದಾಗಿದೆ.

ಯುಪಿಎಸ್​​ಸಿ ಪರೀಕ್ಷೆಯನ್ನು ಪಾಸ್ ಮಾಡುವುದು ಒಂದೇ ವ್ಯಕ್ತಿಯ ಯಶಸ್ಸು ಅಥವಾ ವೈಫಲ್ಯವನ್ನು ಅಳೆಯುವ ಸಾಧನವಾಗಬಾರದು ಎನ್ನುತ್ತಾರೆ ಸಂಸ್ಕೃತಿ.

ಪರೀಕ್ಷೆಯ ಫಲಿತಾಂಶ ಬಂದ ದಿನ ಸಂಸ್ಕೃತಿಯವರಿಗೆ ಸರ್ಪ್ರೈಸ್ ಆಗಿತ್ತು. “ಯಾವುದೋ ದೊಡ್ಡ ಜವಬ್ದಾರಿಯೊಂದು ನನ್ನ ಹೆಗಲ ಮೇಲೆ ಬಂದು ಇಳಿದಂತಾಗಿತ್ತು. ಮುಂಬರುವ ವರ್ಷಗಳಲ್ಲಿ ನಾನು ಮಾಡಬೇಕಾದ ಕೆಲಸಗಳ ಬಗ್ಗೆ ಲೆಕ್ಕ ಹಾಕತೊಡಗಿದೆ.”

ಈ ವರ್ಷ ಪರೀಕ್ಷೆ ಪಾಸ್ ಮಾಡಿರುವವರ ಪೈಕಿ ಮಹಿಳೆಯರ ಸಂಖ್ಯೆ ಹೆಚ್ಚಾಗಿರುವುದನ್ನು ಕಂಡು ಸಂಸ್ಕೃತಿ ಖುಷಿ ಪಡುತ್ತಾರೆ. ಭಾರತದಲ್ಲಿ ನಿಜವಾಗಿಯೂ ಲಿಂಗ ಅಸಮಾನತೆ ಇದೆ. ಗಂಡು ಹೆಣ್ಣು ಎಂಬ ಭೇದವಿಲ್ಲದೆ, ಎಲ್ಲರೂ ದೇಶಕ್ಕಾಗಿ ದುಡಿಯಬೇಕು. ಲಿಂಗ ಅಸಮಾನತೆ ನಿವಾರಿಸಲು ಹೊಣೆ ಹೊತ್ತುಕೊಳ್ಳಬೇಕು ಎನ್ನುತ್ತಾರೆ ಸಂಸ್ಕೃತಿ.

“ನನಗೆ ಅನ್ನಿಸುತ್ತದೆ, ಲಿಂಗ ತಾರತಮ್ಯಕ್ಕೆ ಗುರಿಯಾಗದ ನಮ್ಮಂತಹ ಮಹಿಳೆಯರು, ನಿಜಕ್ಕೂ ಮುಂದೆ ಬಂದು, ತಾರತಮ್ಯಕ್ಕೆ ಬಲಿಯಾಗುತ್ತಿರುವ ಮಹಿಳೆಯರ ಪರ ಧ್ವನಿ ಎತ್ತಬೇಕು,” ಎನ್ನುತ್ತಾರೆ ಸಂಸ್ಕೃತಿ.

ಶಿಕ್ಷಣ, ಪ್ರಮುಖವಾಗಿ ಮಹಿಳಾ ಶಿಕ್ಷಣದ ಬಗ್ಗೆ ಸಂಸ್ಕೃತಿ ಹೆಚ್ಚು ಕಾಳಜಿ ತೋರುತ್ತಿದ್ದಾರೆ. ಶಿಕ್ಷಣವು ಪ್ರತಿಯೊಬ್ಬನ ಜೀವನವನ್ನು ಬದಲಾಯಿಸಬಹುದು. ನಮ್ಮ ಸಮಾಜದ ಪ್ರತೀ ಸದಸ್ಯನಲ್ಲಿ ಸಾಮಾಜಿಕ ಜಾಗೃತಿಯನ್ನು ಶಿಕ್ಷಣ ಮೂಡಿಸುತ್ತದೆ. ಯೌವ್ವನಾವಸ್ಥೆಯಲ್ಲೇ ಜಾಗೃತಿ ಮೂಡಿಸುವುದರಿಂದ, ಇಡೀ ಸಮಾಜವನ್ನು ಬದಲಾಯಿಸಲು ನೆರವಾಗುತ್ತದೆ ಎನ್ನುತ್ತಾರೆ ಸಂಸ್ಕೃತಿ.

ಮಸೂರಿಯ ಅಕಾಡೆಮಿಯಿಲ್ಲಿ ಶುರುವಾಗುವ ತರಬೇತಿಗಾಗಿ ಅವರು ಎದುರು ನೋಡುತ್ತಿದ್ದಾರೆ. ತಮ್ಮ ಕ್ಷೇತ್ರ ಆರಿಸಿಕೊಳ್ಳಲು ಒಂದೊಂದೇ ಹೆಜ್ಜೆ ಇಡಲು ಅವರು ತಿರ್ಮಾನಿಸಿದ್ದಾರೆ. ದೊಡ್ಡ ದೊಡ್ಡ ಭರವಸೆಗಳನ್ನು ನೀಡುವುದು ಸಧ್ಯಕ್ಕೆ ನನ್ನ ಮಟ್ಟಿಗೆ ದೊಡ್ಡ ಮಾತಾದೀತು. ತರಬೇತಿ ವೇಳೆ ನನ್ನ ಕರ್ತವ್ಯ ಮತ್ತು ಕೆಲಸದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಬಯಸುತ್ತೇನೆ. ನಾನು ಕ್ಷೇತ್ರಕ್ಕೆ ಬರುವ ವೇಳೆಗೆ, ನನ್ನ ವೃತ್ತಿಗೆ ಗಟ್ಟಿಯಾದ ಅಡಿಪಾಯವೊಂದು ಲಭಿಸಲಿದೆ, ಎನ್ನುತ್ತಾರೆ ಸಂಸ್ಕೃತಿ.

ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ದೇಶ ಮತ್ತು ಇಲ್ಲಿನ ಜನರ ಸೇವೆ ಮಾಡುವುದೇ ನನ್ನ ಗುರಿ ಎನ್ನುತ್ತಾರೆ ಸಂಸ್ಕೃತಿ.