ಅರಣ್ಯಕ್ – ಪ್ರಕೃತಿಯ ಸಂರಕ್ಷಕ

ಟೀಮ್​​ ವೈ.ಎಸ್​​.

ಅರಣ್ಯಕ್ – ಪ್ರಕೃತಿಯ ಸಂರಕ್ಷಕ

Tuesday November 03, 2015,

4 min Read

ಅಸ್ಸಾಂನ ರಾಷ್ಟ್ರೀಯ ಉದ್ಯಾನವನದಲ್ಲಿ ಅಳವಡಿಸಲಾಗಿದ್ದ ಕ್ಯಾಮರಾಗಳ ಮೂಲಕ ಇಬ್ಬರು ಬೇಟೆಗಾರರಿಗೆ ಶಿಕ್ಷೆಯಾಗಿದ್ದನ್ನು ನೀವು ಕೇಳಿದ್ದೀರಿ. ರಾಜೀವ್ ಗಾಂಧಿ ಓರಾಂಗ್ ರಾಷ್ಟ್ರೀಯ ಉದ್ಯಾನವನದಲ್ಲಿ ಅಳವಡಿಸಿದ್ದ ಕ್ಯಾಮರಾಗಳು, ಅಕ್ರಮವಾಗಿ ಉದ್ಯಾನವನ ಪ್ರವೇಶಿಸಿ, ರಿನೋಗಳನ್ನು ಬೇಟೆಯಾಡಿದ್ದ ಇಬ್ಬರನ್ನು ಬಂಧಿಸಿ ಶಿಕ್ಷಿಸುವಲ್ಲಿ ನೆರವಾಗಿವೆ. ಬೇಟೆಗಾರರಾದ ಹರೇನ್ ದೈಮಾರಿ ಮತ್ತು ಧರ್ಮೇಶ್ ಬಸುಮತಾರಿಗೆ ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆಯಾಗಿದ್ದು, ತಲಾ 25 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಇದರೊಂದಿಗೆ ಭರವಸೆಯ ಕ್ಷ-ಕಿರಣವೊಂದು ಮೂಡಿದಂತಾಗಿದೆ.

1989ರಲ್ಲಿ ಪ್ರಕೃತಿ ಪ್ರೇಮಿಗಳ ತಂಡವೊಂದು ಅರಣ್ಯಕ್ ಹೆಸರಿನ ಕ್ಲಬ್ ಒಂದನ್ನು ಸ್ಥಾಪಿಸಿತು. ಪ್ರಕೃತಿ ಮತ್ತು ಅದರ ಸಂಪನ್ಮೂಲಗಳನ್ನು ರಕ್ಷಿಸುವುದೇ ಅರಣ್ಯಕ್​​ನ ಧ್ಯೇಯವಾಗಿತ್ತು. ಇವರಿಗೆ ಸಿಕ್ಕ ಮೊದಲ ಪ್ರಾಜೆಕ್ಟೇ, ಅಳಿವಿನಂಚಿನಲ್ಲಿರುವ ಮರಕುಟುಕ ಹಕ್ಕಿಗಳನ್ನು ರಕ್ಷಿಸುವುದು. ಆದರೆ, ಈ ಹಕ್ಕಿಗಳಿಗೆ ಭಾರೀ ಬೇಡಿಕೆ ಇದೆ. ಹುಲ್ಲು ಕತ್ತರಿಸುವ ನೆಪದಲ್ಲಿ ಅರಣ್ಯ ಪ್ರವೇಶಿಸುವ ಬೇಟೆಗಾರರು, ಈ ಹಕ್ಕಿಗಳನ್ನು ಬೇಟೆಯಾಡುತ್ತಾರೆ. ಇದನ್ನೆಲ್ಲಾ ನೋಡಿದ ಅರಣ್ಯಕ್ ಕಾರ್ಯಕರ್ತರು ನೇರವಾಗಿ ರಾಜ್ಯಸರ್ಕಾರಕ್ಕೆ, ಈ ಜೀವಿಗಳನ್ನು ರಕ್ಷಿಸುವಂತೆ ಮನವಿ ಸಲ್ಲಿಸುತ್ತಾರೆ. ಹೀಗೆ ಆರಂಭವಾದ ವನ್ಯಜೀವಿಯ ರಕ್ಷಣಾ ಕಾರ್ಯ, ಈಗ ಯಶಸ್ವಿಯಾಗಿ ನಡೆದಿದೆ. ಅದಾದ ಬಳಿಕ ಅರಣ್ಯಕ್ ಇಂತಹದ್ದೇ ಸಾಹಸ ಕಾರ್ಯಗಳನ್ನು ನಡೆಸುತ್ತಿದೆ.

image


ಅರಣ್ಯಕ್, ಅರಣ್ಯಪ್ರಿಯರ ಕ್ಲಬ್ ಆಗಿದ್ದು, ಪರಿಸರ ವಿರೋಧಿಗಳ ವಿರುದ್ಧ ಹೋರಾಡುತ್ತಿದೆ. ಇದೀಗ ಜಾಗತಿಕವಾಗಿಯೂ ಈ ಕ್ಲಬ್ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿದೆ. ಅರಣ್ಯಕ್ ಸಧ್ಯ, ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಸಂಘಟನೆಯ ಸದಸ್ಯತ್ವವನ್ನೂ ಪಡೆದಿದೆ. ಇಯುಸಿಎನ್ ಜಗತ್ತಿನ ಅತಿದೊಡ್ಡ ವನ್ಯಜೀವಿ ಸಂರಕ್ಷಕ ಸಂಘಟನೆಯಾಗಿದೆ.

ಪ್ರಾದೇಶಿಕವಾಗಿ ಹೇಳುವುದಾದರೆ, ಅರಣ್ಯಕ್ ಈಗಾಗಲೇ ಈಶಾನ್ಯ ಭಾರತದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸುಮಾರು 28 ಪ್ರಾಜೆಕ್ಟ್​​​ಗಳನ್ನು ಕೈಗೆತ್ತಿಕೊಂಡಿದೆ. ಕಾನೂನು ಅನುಷ್ಠಾನಗೊಳಿಸುವ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿರುವ ಅರಣ್ಯಕ್ ಕಾರ್ಯಕರ್ತರು, ವನ್ಯಜೀವಿಗಳ ಸಂಪೂರ್ಣ ವಿವರ ಮತ್ತು ದತ್ತಾಂಶ ಸಂಗ್ರಹಿಸಿದ್ದಾರೆ. ಅಲ್ಲದೆ ಈಶಾನ್ಯ ಹಿಮಾಲಯದಲ್ಲೂ ವನ್ಯಜೀವಿ ಅಪರಾಧಗಳನ್ನು ಪಟ್ಟಿ ಮಾಡುತ್ತಿದೆ. ಜೀವವೈವಿಧ್ಯತೆ ಬಗ್ಗೆ ಸಂಶೋಧನೆ ಮತ್ತು ತರಬೇತಿ ಹಾಗೂ ವೆಟ್​ಲೆಂಡ್ ನಿರ್ಣಯ, ಜಿಐಎಸ್ ಆಧರಿತ ನಿಗಾ ವ್ಯವಸ್ಥೆಯ ಅಳವಡಿಕೆ, ರಿಮೋಟ್ ಸೆನ್ಸಿಂಗ್ ಅಳವಡಿಕೆ ಕೆಲಸಗಳನ್ನು ಮಾಡುತ್ತಿದ್ದಾರೆ. ನೇಪಾಳ, ಭೂತಾನ್ ಮೊದಲಾದ ನೆರೆರಾಷ್ಟ್ರಗಳ ಜೊತೆಗೂ ಸಹಭಾಗಿತ್ವ ಹೊಂದಿರುವ ಅರಣ್ಯಕ್, ಜಿಐಎಸ್ ತಂತ್ರಜಾನದ ಬಳಕೆ ಬಗ್ಗೆ ತರಬೇತಿಯನ್ನೂ ನೀಡಿದೆ. ಅಲ್ಲದೆ ಪರಿಣಾಮವನ್ನೂ ಅಭ್ಯಾಸ ಮಾಡುತ್ತಿದೆ.

ನಾವೀಗ ಹಿಂದಿನ ಕಥೆಗೆ ತೆರಳೋಣ. ಓರಾಂಗ್ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ಮತ್ತು ಅರಣ್ಯ ಸಿಬ್ಬಂದಿ, ಇಬ್ಬರನ್ನು ಅಕ್ರಮವಾಗಿ ಶಸ್ತ್ರಾಸ್ತ್ರಗಳೊಂದಿಗೆ ಅರಣ್ಯ ಪ್ರವೇಶಿಸಿದ್ದು ಮತ್ತು ರಿನೋಗಳ ಹತ್ಯೆ ಸಂಬಂಧ ಬಂಧಿಸಿದ್ದಾರೆ. ಇದೆಲ್ಲವೂ ಅರಣ್ಯಕ್ ಸಹಾಯದೊಂದಿಗೆ ಸಾಧ್ಯವಾಗಿದೆ. ಈ ಪ್ರಕರಣವನ್ನು ಅತ್ಯಂತ ನಿಕಟವಾಗಿ ಗಮನಿಸಿದ ಅರಣ್ಯಕ್ ಬೇಟೆಗಾರರ ಬಂಧನಕ್ಕೆ ನೆರವಾಗಿದೆ. ಹುಲಿ ಮತ್ತು ಇತರ ಪ್ರಾಣಿಗಳ ಮೇಲೆ ನಿಗಾ ಇಡಲು ಈ ತಂಡ 2011ರಲ್ಲಿ ಸುಮಾರು 60 ಕ್ಯಾಮೆರಾ ಟ್ರಾಪ್​​​ಗಳನ್ನು ಅಳವಡಿಸಿತ್ತು. ಇದರಲ್ಲಿ ಮೂವರು ಬೇಟೆಗಾರರ ಚಿತ್ರಗಳೂ ಸೆರೆಯಾಗಿದ್ದವು. ಎರಡು ರೈಫಲ್​​ಗಳೊಂದಿಗೆ ಅರಣ್ಯ ಪ್ರವೇಶಿಸಿದ್ದ ಮೂವರು ಬೇಟೆಗಾರರ ಚಿತ್ರಗಳೇ ಅವರ ಬಂಧನಕ್ಕೆ ಕಾರಣವಾಗಿದ್ದವು.

ಆ ಚಿತ್ರಗಳನ್ನು ಆಧರಿಸಿ, ಮಂಗಳ್ದೋಯ್ ವನ್ಯಜೀವಿ ವಿಭಾಗದ ಡಿಎಫ್ಓ ಸುಶಿಲ್ ದೈಲಾ ಅವರು ಅಕ್ಕಪಕ್ಕದ ಹಳ್ಳಿಗಳಲ್ಲಿ ಪೋಸ್ಟರ್​​ಗಳನ್ನು ಪ್ರಕಟಿಸಿದರು. ಬೇಟೆಗಾರರ ಪತ್ತೆಯಲ್ಲಿ ನೆರವಾದರೆ 25 ಸಾವಿರ ರೂಪಾಯಿಗಳ ಇನಾಮೂ ಘೋಷಿಸಿದ್ದರು. ಬೇರೆ ದಾರಿ ಕಾಣದ, ಬೇಟೆಗಾರರು ಶಸ್ತ್ರಾಸ್ತ್ರ ಸಹಿತ ಶರಣಾದರು.

ಈವರೆಗೆ, ಈ ರಾಜ್ಯದಲ್ಲಿ ಯಾವುದೇ ಬೇಟೆಗಾರರಿಗೆ ಶಿಕ್ಷೆಯಾಗಿರಲಿಲ್ಲ. ಹೀಗಾಗಿ ಈ ಕಾರ್ಯಾಚರಣೆ, ಅಸ್ಸಾಂ ಅರಣ್ಯ ಇಲಾಖೆಗೆ ದೊಡ್ಡ ಯಶಸ್ಸಾಗಿತ್ತು. ಇದಕ್ಕೆಲ್ಲಾ ಕಾರಣವಾಗಿದ್ದ ಅರಣ್ಯಕ್ ಅಳವಡಿಸಿದ್ದ ಕ್ಯಾಮೆರಾ ಟ್ರಾಪ್​​ಗಳು. ಸಾಕಷ್ಟು ಸಾಕ್ಷಿಗಳು ತಮ್ಮ ವಿರುದ್ಧವಾಗಿದ್ದುದರಿಂದ, ಬೇಟೆಗಾರರಿಗೆ ತಪ್ಪಿಸಿಕೊಳ್ಳಲು ಬೇರೆ ದಾರಿಯೇ ಸಿಕ್ಕಿರಲಿಲ್ಲ. “ಕ್ಯಾಮರಾದಲ್ಲಿ ಸೆರೆಸಿಕ್ಕ ಚಿತ್ರಗಳನ್ನು ತಕ್ಷಣವೇ ಅರಣ್ಯಾಧಿಕಾರಿಗಳಿಗೆ ಕಳುಹಿಸಿಕೊಡಲಾಗುತ್ತಿತ್ತು. ಅದನ್ನು ಆಧರಿಸಿ, ಅರಣ್ಯಾಧಿಕಾರಿಗಳು ಪತ್ತೆ ಕಾರ್ಯ ಮಾಡುತ್ತಿದ್ದರು.” ಎನ್ನುತ್ತಾರೆ ಡಾ ಫಿರೋಜ್ ಅಹ್ಮದ್. ಇವರು ಟೈಗರ್ ರೀಸರ್ಚ್ ಮತ್ತು ಸಂರಕ್ಷಣಾ ಸಂಸ್ಥೆಯ ಮುಖ್ಯಸ್ಥರು.

ಕ್ಯಾಮೆರಾ ಟ್ರ್ಯಾಪಿಂಗ್ ಅನ್ನು ನ್ಯೂಯಾರ್ಕ್ ಮೂಲದ ಪಂಥೆರಾ ಮತ್ತು ಬ್ರಿಟನ್​​ನ ಡೇವಿಡ್ ಶೆಫರ್ಡ್ ವೈಲ್ಡ್​​ಲೈಫ್ ಫೌಂಡೇಶನ್​​ನ ಸಹಯೋಗದೊಂದಿಗೆ ಅಳವಡಿಸಲಾಗಿದೆ. ಈ ಕ್ಯಾಮೆರಾ ಟ್ರಾಪ್​​ನಲ್ಲಿ ಅಳವಡಿಸಲಾದ ಉಪಕರಣಗಳು ಪ್ರಾಣಿಗಳು ಮತ್ತು ಮನುಷ್ಯರ ಇರುವಿಕೆಯನ್ನು ಸ್ವಯಂಪ್ರೇರಿತವಾಗಿ ಗುರುತಿಸುತ್ತವೆ. ತಕ್ಷಣವೇ ಚಿತ್ರವನ್ನು ಸೆರೆ ಹಿಡಿಯುತ್ತವೆ. ಇಂತಹ ಕ್ಯಾಮೆರಾಗಳನ್ನು ಮರಗಳಿಗೆ, ಕಂಬಗಳಿಗೆ ಅಳವಡಿಸಲಾಗುತ್ತದೆ. ಅರಣ್ಯದಲ್ಲಿ ಆಯಕಟ್ಟಿನ ಜಾಗದಲ್ಲಿ ಅಂದರೆ, ನೀರಿನ ತಾಣಗಳು, ಪ್ರಾಣಿಗಳು ಸಾಗುವ ಹಅದಿ ಇತ್ಯಾದಿ ಸ್ಥಳಗಳಲ್ಲಿ ಇವುಗಳನ್ನು ಅಳವಡಿಸಲಾಗುತ್ತದೆ. ಈ ಪರಿಕರವನ್ನು ಪಂಥೇರಾ ಅಭಿವೃದ್ಧಿಪಡಿಸಿದ್ದು, ಜಗತ್ತಿನಾದ್ಯಂತ ಎಲ್ಲಾ ಸದಸ್ಯ ಸಂಘಟನೆಗಳಿಗೆ ನೀಡಿದೆ. ಹುಲಿ ಮತ್ತು ಇತರ ಪ್ರಾಣಿಗಳ ಮೇಲೆ ನಿಗಾ ಇಡಲು ಇವುಗಳನ್ನು ಬಳಸಲಾಗುತ್ತಿದೆ.

2012ರಿಂದಲೂ ಅರಣ್ಯಕ್ ಮತ್ತು ಪಂಥೇರಾ ಈಶಾನ್ಯ ಭಾರತದ ಅರಣ್ಯಗಳಲ್ಲಿ ಹುಲಿ ಸಂರಕ್ಷಣೆ ಮತ್ತು ಸಂಶೋಧನಾ ಚಟುವಟಿಕೆಗಳಲ್ಲಿ ಜಂಟಿಯಾಗಿ ತೊಡಗಿಕೊಂಡಿವೆ. ಮಾನಸ್ ನ್ಯಾಷನಲ್ ಪಾರ್ಕ್, ಕಝಿರಂಗಾ ನ್ಯಾಷನಲ್ ಪಾರ್ಕ್, ನಾಮ್ಧಪಾ ನ್ಯಾಷನಲ್ ಪಾರ್ಕ್ ಮತ್ತು ಕರ್ಬಿ ಅಂಗ್ಲಾಂಗ್ ಹಿಲ್ಸಗಳಲ್ಲಿ ಚಟುವಟಿಕೆ ನಡೆಸುತ್ತಿದೆ. ಇದೀಗ ಮಾನಸ್ ಟೈಗರ್ ರಿಸರ್ವ್​ನಲ್ಲಿ ಮುಂದಿನ 5ವರ್ಷಗಳ ಕಾಲ ಈ ಸಂಸ್ಥೆಗಳು ಕೆಲಸ ಮಾಡುವ ಒಪ್ಪಂದಕ್ಕೆ ಸಹಿ ಹಾಕಿವೆ ಎನ್ನುತ್ತಾರೆ ಡಾ ಅಹ್ಮದ್. ಪಂಥೇರಾ ಸಂಸ್ಥೆಯು ಮತ್ತೊಂದು ಹೊಸ ಉತ್ಪನ್ನದ ಪರೀಕ್ಷೆ ನಡೆಸುತ್ತಿದೆ. ಈ ಉಪಕರಣ ಯಶಸ್ವಿಯಾದರೆ, ಕ್ಯಾಮೆರಾಗಳು ಬೇಟೆಗಾರರು ಪತ್ತೆಯಾಗುತ್ತಿದ್ದಂತೆಯೇ, ಚಿತ್ರಗಳನ್ನು ತೆಗೆದು ತಕ್ಷಣವೇ ಕಂಪ್ಯೂಟರ್ ಅಥವಾ ಮೊಬೈಲ್ ಫೋನ್​​ಗಳಿಗೆ ರವಾನಿಸಲಿವೆ. ಕರ್ತವ್ಯ ನಿರತ ಅರಣ್ಯ ಸಿಬ್ಬಂದಿಗೆ ತಕ್ಷಣವೇ ಫೋಟೋಗಳು ಲಭ್ಯವಾಗುವುದರಿಂದ ಅವರನ್ನು ಹಿಡಿಯಲು ನೆರವಾಗಲಿವೆ. ಪ್ರಾಣಿಗಳ ರಕ್ಷಣೆಯೂ ಆಗಲಿದೆ.

ಅಷ್ಟೇ ಅಲ್ಲ, ಅರಣ್ಯಕ್ ಪಡೆಯು ಕಝಿರಂಗಾ ನ್ಯಾಷನಲ್ ಪಾರ್ಕ್​ನಲ್ಲಿ ರಿನೋಗಳನ್ನು ಹತ್ಯೆ ಮಾಡುತ್ತಿರುವ ಬೇಟೆಗಾರರ ಪತ್ತೆಗೆ ಅಸ್ಸಾಂ ಅರಣ್ಯ ಇಲಾಖೆಗೆ ಸಹಾಯ ನೀಡುತ್ತಿದೆ. ಇದಕ್ಕಾಗಿಯೇ ಕೆ9 ಎಂಬ ಶ್ವಾನದಳವನ್ನೂ ಅದು ನಿಯೋಜಿಸಿದೆ. ಸಧ್ಯ ಈ ತಂಡದಲ್ಲಿ ಜೊರ್ಬಾ ಮತ್ತು ಬಬ್ಲಿ ಎಂಬ ಎರಡು ಬೆಲ್ಜಿಯಂ ನಾಯಿಗಳಿವೆ. ಇವು ವನ್ಯಜೀವಿ ಅಪರಾಧಗಳನ್ನು ತಡೆದು, ಬೇಟೆಗಾರರನ್ನು ಮತ್ತು ಕಾಡುಗಳ್ಳರನ್ನು ಹಿಡಿಯಲು ನೆರವಾಗುತ್ತಿವೆ. ಕಝಿರಂಗಾದಲ್ಲಿ ಈ ನಾಯಿಗಳು ಈಗಾಗಲೇ ಹತ್ತು ಬೇಟೆಗಾರರನ್ನು ಮತ್ತು ಅವರ ಮುಖ್ಯಸ್ಥರನ್ನು ಹಿಡಿಯುವಲ್ಲಿ ನೆರವಾಗಿವೆ ಎನ್ನುತ್ತಾರೆ ಡಾ ಅಹ್ಮದ್.

ತಮ್ಮ ನಿತ್ಯ ಜೀವನಕ್ಕಾಗಿ ರಾಷ್ಟ್ರೀಯ ಉದ್ಯಾನವನ್ನೇ ಅವಲಂಬಿಸಿರುವ ಸಮುದಾಯಗಳ ಜೊತೆ ಮಾತನಾಡಿ ಅವರಿಗೆ ಪರ್ಯಾಯ ಜೀವನೋಪಾಯ ಮಾಡಿಕೊಟ್ಟು, ಹುಲಿಸಂರಕ್ಷಣೆಗೆ ಅವರಿಂದಲೂ ಸಹಾಯ ಪಡೆಯಬೇಕು ಎನ್ನುವುದು ತಮ್ಮ ಮುಂದಿನ ಯೋಜನೆ ಎನ್ನುತ್ತಾರೆ ಡಾ ಅಹ್ಮದ್. ಅಲ್ಲದೆ, ಜನಸಾಮಾನ್ಯರಿಗೂ ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸುವ ಯೋಜನೆಯನ್ನೂ ಅವರು ರೂಪಿಸುತ್ತಿದ್ದಾರೆ. ಗಂಗಾ ಡಾಲ್ಫಿನ್​​​ಗಳ ಪುನರ್ವಸತಿ ಕಾರ್ಯಕ್ರಮಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗಿದ್ದು, ಯೂರೋಪಿಯನ್ ಔಟ್​ಡೋರ್ ಕನ್ಸರ್ವೇಷನ್ ಅಸೋಸಿಯೇಷನ್​​ನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು. ಸ್ವಿಟ್ಜರ್​​ಲೆಂಡ್ ಮೂಲದ ಈ ಸಂಸ್ಥೆಯು ಈಗಾಗಲೇ 30000 ಯೂರೋಗಳ ನೆರವನ್ನೂ ಘೋಷಿಸಿದೆ.

ಸ್ಥಾಪನೆ 25ನೇ ವರ್ಷಾಚರಣೆಯಲ್ಲಿರುವ ಅರಣ್ಯಕ್, ಈಗಲೂ ತನ್ನ ಮೂಲ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಶ್ರಮಿಸುತ್ತಿದೆ. ನಾವು ಎಲ್ಲರ ಸುರಕ್ಷಿತ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ ಡಾ ಅಹ್ಮದ್.