ಸಾಧನೆಗೆ ಅಂಧತ್ವ ಅಡ್ಡಿಯಾಗಲೇ ಇಲ್ಲ..!

ಕೃತಿಕಾ

0

ಅಂದುಕೊಂಡಿದ್ದನ್ನು ಸಾಧಿಸೋಕೆ ಗಟ್ಟಿ ಮನಸ್ಸು ಬೇಕು. ಹಾಗೆ ಮನಸ್ಸು ಮಾಡಿದ ವ್ಯಕ್ತಿಯೊಬ್ವ ಇವತ್ತು ಟೀಂ ಇಂಡಿಯಾ ಅಂಧರ ಕ್ರಿಕೆಟ್ ತಂಡದ ನಾಯಕ. ಸಾಧನೆಯೇ ತನ್ನ ಗುರಿ ಅಂದುಕೊಂಡವನಿಗೆ ದೈಹಿಕ ನ್ಯೂನತೆಗಳು ಅಡ್ಡಬರುವುದಿಲ್ಲ. ಏನೇ ಆಗಲಿ ತಾನು ಅಂದುಕೊಂಡಿರುವ ಗುರಿಯನ್ನು ತಲುಪಿಯೇ ತಲುಪುತ್ತಾನೆ. ಇದಕ್ಕೊಂದು ಉತ್ತಮ ಉದಾಹರಣೆ ಭಾರತ ಅಂಧರ ಕ್ರಿಕೆಟ್ ತಂಡದ ನಾಯಕ ಶೇಖರ್ ನಾಯ್ಕ.

ಮೂಲತಃ ಶಿವಮೊಗ್ಗದ ಶೇಖರ್ ನಾಯ್ಕ ಬಡತನದ ನಡುವೆಯೆ ಹುಟ್ಟಿ ಬೆಳೆದವರು. ಕ್ರಿಕೆಟ್ ಲೋಕದಲ್ಲೀಗ ಅಘಾದ ಹೆಸರು ಮಾಡಿದ್ದಾರೆ. ಅಂಧರ ಕ್ರಿಕೆಟ್ ಎಂದರೆ ಇಂದು ಶೇಖರ್ ನಾಯ್ಕ ಎನ್ನುವಷ್ಟರ ಮಟ್ಟಿಗೆ ಅವರು ಖ್ಯಾಇಯ ಉತ್ತುಂಗದಲ್ಲಿದ್ದಾರೆ. ಇದರ ಜೊತೆಗೆ ಡಿಸ್ಕವರಿ ಚಾನೆಲ್​ನ ನಡೆಸುತ್ತಿರುವ 10 ಮಂದಿ ಅಸಾಮಾನ್ಯ ವ್ಯಕ್ತಿಗಳ ಸಾಕ್ಷ್ಯಚಿತ್ರಕ್ಕೆ ಶೇಖರ್ ನಾಯ್ಕ ಆಯ್ಕೆಯಾಗಿದ್ದಾರೆ.

1986 ರಲ್ಲಿ ಶಿವಮೊಗ್ಗದಲ್ಲಿ ಜನಿಸಿದ ಶೇಖರ್ ನಾಯ್ಕ ಒಂಬತ್ತನೇ ವಯಸ್ಸಿನಲ್ಲಿದ್ದಾಗಲೇ ಕಾಲುವೆಯೊಂದಕ್ಕೆ ಬಿದ್ದು ಕಣ್ಣು ಕಳೆದುಕೊಂಡಿದ್ದರು. ತಂದೆ ತಾಯಿಗಳೊಂದಿಗೆ ಹೋಗುತ್ತಿದ್ದಾಗ ಕಾಲು ಜಾರಿ ಕಾಲುವೆಗೆ ಬಿದ್ದಿದ್ದರು. ಈ ವೇಳೆ ಶೇಖರ್ ನಾಯ್ಕ ಅವರ ಎರಡು ಕಣ್ಣುಗಳಿಗೆ ಗಂಭೀರ ಗಾಯವಾಗಿತ್ತು. ಎಷ್ಟೇ ಚಿಕಿತ್ಸೆ ನೀಡಿದರೂ ದೃಷ್ಟಿ ಮಾತ್ರ ಪೂರ್ಣ ಪ್ರಮಾಣದಲ್ಲಿ ಮರಳಿ ಬರಲೇ ಇಲ್ಲ. ಮುಸುಕು ಮುಸುಕಾಗಿ ಸ್ವಲ್ಪವಷ್ಟೇ ಕಾಣಿಸುತ್ತದೆ. ಬಣ್ಣವನ್ನೂ ಗುರುತಿಸುವುದೂ ಕೂಡ ದುಸ್ತರ ಎಂಬಂತಾಗಿತ್ತು. ಕಣ್ಣು ಕಳೆದುಕೊಂಡ ಬೆನ್ನಲ್ಲೇ ಶೇಖರ್ ತಮ್ಮ ತಂದೆಯನ್ನೂ ಕಳೆದುಕೊಂಡರು. ಶಾಲಾ ದಿನಗಳಲ್ಲಿ ಆರಂಭವಾದ ಕ್ರಿಕೆಟ್ ಪ್ರೀತಿ ಶಾಲಾ ದಿನಗಳಲ್ಲಿ ಅವರು ಕ್ರಿಕೆಟ್ ಜೀವನ ಆರಂಭಿಸಿದರು. ನೋಡನೋಡುತ್ತಲೇ ವಲಯ, ರಾಜ್ಯ ಮಟ್ಟದ ಅಂಧರ ಕ್ರಿಕೆಟ್ ನಲ್ಲಿ ಮಿಂಚಿದರು.

ನನಗೆ ಚಿಕ್ಕಂದಿನಿಂದಲೂ ಕ್ರಿಕೆಟ್ ಮೇಲೆ ಒಲವಿತ್ತು. ಕಣ್ಣು ಕಳೆದುಕೊಂಡ ಮೇಲೆ ಕ್ರಿಕೆಟ್ ಆಡಲು ಸಾಧ್ಯವಿಲ್ಲ ಅಂತ ಮೊದಲಿಗೆ ಅನ್ನಿಸಿತ್ತು. ಆದ್ರೆ ಆಡಲೇ ಬೇಕು ಎಂದು ಮನಸ್ಸು ಮಾಡಿದೆ. ಪ್ರತೀ ದಿನವೂ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದೆ. ಮನೆಯವರೂ ನನ್ನ ಬೆಂಬಲಕ್ಕೆ ನಿಂತರು. ಕಣ್ಣಿಲ್ಲಸವನು ಕ್ರಿಕೆಟ್ ಆಡ್ತಾನಂತೆ ಅಂತ ನನ್ನ ಸುತ್ತ ಮುತ್ತಲಿನ ಜನ ಮಾತಾಡಿಕೊಂಡರು. ಆದ್ರೆ ನನ್ನ ಕಿವಿಗೆ ಆ ಮಾತು ಬೀಳಲಏ ಇಲ್ಲ. ಇವತ್ತು ಅದೇ ಜನ ಕಣ್ಣಿಲ್ಲದೆಯೂ ಕ್ರಿಕೆಟ್ ಆಡಬಹುದು ಅನ್ನುತ್ತಿದ್ದಾರೆ. ಜನರ ಮನೋಭಾವ ಬದಲಿಸಿದ ಖುಷಿ ನನಗಿದೆ ಅಂತಾರೆ ಶೇಖರ ನಾಯ್ಕ.

ಸಾಧನೆಯ ದಾರಿ ಶೇಖರ್ ನಾಯ್ಕ ಭಾರತ ಅಂಧರ ಕ್ರಿಕೆಟ್ ತಂಡದ ಆಟಗಾರನಾಗಿ ಆರಂಭಿಸಿ ನಂತರದ ದಿನಗಳಲ್ಲಿ ತಂಡದ ನಾಯಕರಾಗಿ ಜವಾಬ್ದಾರಿ ವಹಿಸಿಕೊಂಡರು. 2003ರಲ್ಲಿ ಅವರು ಆತಿಥೇಯ ಪಾಕಿಸ್ತಾನ ತಂಡದ ವಿರುದ್ಧ 198 ರನ್ ಬಾರಿಸಿದ್ದರು. ಇವರು ಅವರ ವೃತ್ತಿ ಜೀವನದ ಅವಿಸ್ಮರಣೀಯ ಪಂದ್ಯಗಳಲ್ಲಿ ಒಂದು. ಏಕೆಂದರೆ ಅದು ಅವರ ಜೀವನದಲ್ಲಿ ಗಳಿಸಿದ ಗರಿಷ್ಠ ರನ್.

2003ರಲ್ಲಿ ಪಾಕಿಸ್ತಾನ ಅಂಧರ ಕ್ರಿಕೆಟ್ ತಂಡ ಭಾರತ ಪ್ರವಾಸ ಮಾಡಿತ್ತು. ಈ ಪಂದ್ಯದಲ್ಲೂ ಶೇಖರ್ ಅಮೋಘ ಆಟ ಪ್ರದರ್ಶಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. 2006ರಲ್ಲಿ ಅವರು ವಿಶ್ವಕಪ್ ನಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತರು. ಆದರೆ ಫೈನಲ್​​ನಲ್ಲಿ ಭಾರತ ತಂಡ ಪಾಕ್ ವಿರುದ್ಧ ಸೋಲು ಕಂಡು ದೊಡ್ಡ ನಿರಾಶೆ ಅನುಭವಿಸಿತ್ತು. ಆದರೆ ಒಟ್ಟು ಕೂಟದಲ್ಲಿ ಶೇಖರ್ ಸಾಧನೆಗಾಗಿ ಸರಣಿಶ್ರೇಷ್ಠ ಮತ್ತು ಕೂಟದಲ್ಲಿ 3 ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಗಮನ ಸೆಳೆದಿದ್ದರು. 2010ರಲ್ಲಿ ಮತ್ತೆ ರಾಷ್ಟ್ರೀಯ ತಂಡದ ನಾಯಕನಾಗುವ ಅವಕಾಶ ಅವರಿಗೆ ಸಿಕ್ಕಿತು.

ಟಿ20, ಏಕದಿನ ವಿಶ್ವಕಪ್ ಗೆದ್ದ ಭಾರತ ಶೇಖರ್ ನಾಯಕತ್ವದಲ್ಲಿ ಭಾರತ ತಂಡ 2012ರಲ್ಲಿ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು. ಅಲ್ಲದೆ ಕಳೆದ ವರ್ಷ ಭಾರತ ತಂಡ ಶೇಖರ್ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಗೆದ್ದುಕೊಂಡಿತ್ತು.

ನನ್ನ ಜೀವನದ ಅತ್ಯುತ್ತಮ ಕ್ಷಣ ಅಂದರೆ ಮೂರು ವರ್ಷಗಳ ಹಿಂದೆ ವಿಶ್ವ ಕಪ್ ಜಯಿಸಿದ್ದು. ಅದೂ ಪಾಕಿಸ್ತಾನದ ವಿರುದ್ಧ. ಚಿಕ್ಕಂದಿನಿಂದಲೂ ಕ್ರಿಕೆಟ್ ನನಗೆ ಪ್ರಾಣವಾಗಿತ್ತು. ಟಿಂ ಇಂಡಿಯಾಗೆ ಆಯ್ಕೆಯಾಗ್ತೀನಿ ಅಂತ ಕನಸೂ ಕಂಡಿರಲಿಲ್ಲ. ದೇಶದ ಪರ ಆಡಿದ್ದೇ ನನ್ನ ಪಾಲಿಗೆ ಹೆಮ್ಮೆ. ಕಪ್ ಗೆದ್ದು ಪ್ರಧಾನಿ ಮೋದಿ ಬೇಟಿ ಮಾಡಿದ್ದು ಅಪೂರ್ವ ಕ್ಷಣ. ಅವರಿಂದ ಅಭಿನಂದನೀಯ ಮಾತುಗಳನ್ನು ಕೇಳಿದಾದ ಕಣ್ಣಲ್ಲಿ ನೀರು ಬರುವಂತಾಗಿತ್ತು ಅಂತಾರೆ ಶೇಖರ್ ನಾಯ್ಕ

ದೈಹಿಕ ನ್ಯೂನತೆಗಳು ಸಾಧನೆಗೆ ಅಡ್ಡಿಯಾಗುವುದಿಲ್ಲ ಅನ್ನೋದನ್ನ ಸಾಬೀತು ಮಾಡಿ ತೋರಿಸಿರುವ ಶೇಖರ್ ನಾಯ್ಕ ಅದೆಷ್ಟೋ ವಿಕಲ ಚೇತನರ ಪಾಲಿಗೆ ಆಶಾಕಿರಣವಾಗಿದ್ದಾರೆ. ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಅನ್ನೋದೇ ಎಲ್ಲರ ಹಾರೈಕೆ.