ಮನೆಯಿಂದ ಮನೆವರೆಗೆ, ಅಮ್ಮನ ಕೈರುಚಿ- ಇದು ಬಾಬಾ ಫಟ್ಟೂಸ್ ಕಮಾಲ್

ಟೀಮ್​ ವೈ.ಎಸ್​​.

0

ಮನೆಯಲ್ಲಿರುವಾಗ, ಅಮ್ಮ ನನಗೆ ಆ ತಿಂಡಿ ಬೇಡ ಈ ತಿಂಡಿ ಬೇಡ ಅನ್ನೋದು ತುಂಬಾನೆ ಸುಲಭ. ಅದ್ರೆ, ಮನೆಯಿಂದ ಹೊರಗೆ ಬಂದ ನಂತರವೇ ಅಮ್ಮನ ಕೈರುಚಿ ಏನು ಅಂತ ಗೊತ್ತಾಗೋದು. ಓದೋದಕ್ಕೆ, ಕೆಲಸಕ್ಕೆ ಅಂತ ಮನೆಯಿಂದ ಆಚೆ ಬಂದಿರೋ ಅದೆಷ್ಟೋ ಜನ, ಅಮ್ಮ ಮಾಡಿದ ಅಡುಗೆ ರುಚಿಯನ್ನ ಮಿಸ್ ಮಾಡ್ಕೋತಿದ್ದಾರೆ. ಅಷ್ಟೇ ಅಲ್ಲ, ರಸ್ತೆಬದಿ ಆಹಾರ ತಿಂದು ಆರೋಗ್ಯ ಹಾಳು ಮಾಡಿಕೊಳ್ತಿದ್ದಾರೆ. ಅಂಥವರ ಹಸಿವನ್ನು ನೀಗಿಸೋಕೆ 'ಬಾಬಾ ಫಟ್ಟೂಸ್' ಯಾವಾಗಲೂ ಸಿದ್ಧವಾಗಿರುತ್ತೆ. ಅಂದ್ಹಾಗೆ, 'ಬಾಬಾ ಫಟ್ಟೂಸ್' ರುಚಿಕರವಾದ ಊಟ-ತಿಂಡಿ ಸಿಗದೆ ಬೇಸತ್ತ ಮಂದಿಗೆಂದೇ ಶುರುವಾದ ಸಂಸ್ಥೆ.

ನೀವು ಯಾವಾಗ, ಎಲ್ಲಿಂದಲಾದ್ರೂ ಈ ಸಂಸ್ಥೆಗೆ ಕರೆ ಮಾಡಿ ನಿಮ್ಮಿಷ್ಟದ ಊಟ ಆರ್ಡರ್ ಮಾಡಬಹುದು. ಅಮ್ಮ ಮಾಡಿದಷ್ಟೇ ರುಚಿಕರವಾದ ತಿಂಡಿಯನ್ನು ನೀವು ಆರ್ಡರ್ ಮಾಡೋ ಮೂಲಕ ಮನೆಯಿಂದ ಹೊರಗಿದ್ದರೂ ಅಮ್ಮನ ಕೈ ರುಚಿಯನ್ನೇ ಸವಿಯಬಹುದು.

ಈ ಸಂಸ್ಥೆ ಹುಟ್ಟಿಕೊಳ್ಳೋಕು ಒಂದು ಕಾರಣವಿದೆ. 2010ರಲ್ಲಿ ದೆಹಲಿ ಮೂಲದ ದಿವೇಶ್ ವಷ್ರ್ಣೆ ಎಂಬಾತ ಬೆಂಗಳೂರಿಗೆ ಬಂದು ಕೆಲಸಕ್ಕೆ ಸೇರ್ತಾರೆ. ಆದರೆ ದೆಹಲಿಯಲ್ಲಿ ಕುಟುಂಬದೊಂದಿಗಿದ್ದ ದಿವೇಶ್‍ಗೆ ಅಷ್ಟು ಸುಲಭವಾಗಿ ಬೆಂಗಳೂರಿಗೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ಅದಕ್ಕಿಂತ ದೊಡ್ಡ ಸಮಸ್ಯೆಯಾಗಿದ್ದು ಮನೆಯಲ್ಲಿ ಸಿಗುತ್ತಿದ್ದ ರುಚಿಕರ ತಿನಿಸಗಳನ್ನು ಬೆಂಗಳೂರಲ್ಲಿ ಹುಡುಕುವುದು. ಆದ್ರೆ, ಎಲ್ಲಿ ಹುಡುಕಿದ್ರು ದೆಹಲಿಯ ಅಮ್ಮನ ಮನೆಯಷ್ಟು ರುಚಿಕರ ತಿನಿಸು ಸಿಗಲಿಲ್ಲ. ಹೀಗಾಗಿಯೇ ಆರೋಗ್ಯದ ಬಗ್ಗೆ ಯೊಚಿಸದ ದಿವೇಶ್ ರುಚಿಯನ್ನರಸಿ ಬೀದಿಬದಿಯ ತಿಂಡಿ, ಊಟಗಳಿಗೆ ಕಟ್ಟುಬೀಳ್ತಾರೆ. ಈ ಅನಾರೋಗ್ಯಕರ ಆಹಾರದಿಂದಾಗಿ ಕೊನೆಗೆ ಅವರಿಗೆ ಸಿಕ್ಕ ಫಲಿತಾಂಶ ದಢೂತಿ ದೇಹ. ಇದ್ರಿಂದ ತುಂಬಾ ಬೇಸರಗೊಂಡ ದಿವೇಶ್, ಅಲ್ಲಿಂದ ಕೆಲಸದ ವಿಷಯವಾಗಿ ನ್ಯೂಯಾರ್ಕ್‍ಗೆ ಪ್ರಯಾಣ ಬೆಳಸ್ತಾರೆ. ಆದ್ರೆ, ಅಲ್ಲೂ ಕೂಡ ಇದೇ ಪರಿಸ್ಥಿತಿ ಮುಂದುವರೆಯುತ್ತೆ. ಆಹಾರದ ಸಮಸ್ಯೆ ಅವರ ನಿದ್ದೆ ಕೆಡಿಸುತ್ತೆ. ಈ ಸಮಸ್ಯೆಗೆ ತಾವೇ ಏನಾದ್ರು ಮಾಡ್ಬೇಕು ಅನ್ನೋ ನಿರ್ಧಾರಕ್ಕೆ ಬರ್ತಾರೆ. ನಂತ್ರ ದೆಹಲಿಗೆ ಮರಳಿದ ದಿವೇಶ್, ತಡ ಮಾಡದೇ ಬಾಬಾ ಫಟ್ಟೂಸ್ ಅನ್ನು ಪ್ರಾರಂಭಿಸಿಯೇಬಿಡ್ತಾರೆ. ದೆಹಲಿ ಶೈಲಿಯ, ಉತ್ತಮ ಗುಣಮಟ್ಟದ ಆರೊಗ್ಯಕರ ಅಡುಗೆ ಬಯಸುವವರನ್ನು ಗುರುತಿಸಿ ಅವರಿಗೆ ದಿನಕ್ಕೊಂದು ರುಚಿಕರ ಹಾಗೂ ಒಳ್ಳೇ ಗುಣಮಟ್ಟದ ಆಹಾರ ನೀಡೋಕೆ ಶುರುಮಾಡ್ತಾರೆ. ಆರೋಗ್ಯದ ಬಗ್ಗೆ ಕಾಳಜಿಯುಳ್ಳ ಜನ ಇದನ್ನು ಒಪ್ಪಿಕೊಳ್ತಾರೆ. ದಿವೇಶ್ ಇದನ್ನೇ ಒಳ್ಳೆ ಉದ್ಯಮವನ್ನಾಗಿಸಿಕೊಂಡು, ಈಗ ಬಾಬಾ ಫಟ್ಟೂಸ್‍ಅನ್ನು ಬೆಂಗಳೂರಿಗೂ ತಂದಿದ್ದಾರೆ.

ಬೆಂಗಳೂರಲ್ಲಿ ಈಗಾಗಲೇ ಬಾಬಾ ಫಟ್ಟೂಸ್ ಸಾಕಷ್ಟು ಹೆಸರು ಮಾಡಿದೆ. ಬೆಂಗಳೂರು ಶೈಲಿಯ, ರುಚಿಕರ ಹಾಗೂ ಆರೊಗ್ಯಕರ ಅಡುಗೆಗಳು ಅದೆಷ್ಟೋ ಜನರ ಹೊಟ್ಟೆ ತುಂಬಿಸುತ್ತಿವೆ. ಈಗಾಗಲೇ ವೈಟ್‍ಫೀಲ್ಡ್, ದೊಡ್ಡಾನೆಕುಂದಿ, ಮಾರತ್‍ಹಳ್ಳಿ, ಕಾಡುಬಿಸನಹಳ್ಳಿ, ಬೆಳ್ಳಂದೂರು ಅಲ್ಲದೇ ಐಟಿಬಿಟಿ ಏರಿಯಾಗಳಿರೋ ಅದೆಷ್ಟೋ ಜಾಗಗಳಿಗೆ ಬಾಬಾ ಫಟ್ಟೂಸ್ ಫುಡ್ ರುಚಿಕರ ಊಟ ಸರಬರಾಜಾಗ್ತಿದೆ. ಅದಕ್ಕಂತಲೇ ಬೆಂಗಳೂರಿಗೆ 6 ಜನ ಡೆಲಿವರಿ ಬಾಯ್ಸ್​​​ ಅನ್ನೂ ನೇಮಿಸಲಾಗಿದೆ. ದಿನಕ್ಕೊಂದು ಬಗೆ ರುಚಿಕರ ಆಹಾರ ನೀಡಿ, ಗ್ರಾಹಕರ ಹೊಟ್ಟೆ ತುಂಬಿಸುತ್ತಿದೆ ಬಾಬಾ ಫಟ್ಟೂಸ್.

ಆಶ್ಚರ್ಯ ಅಂದ್ರೆ ಈವರೆಗೂ ಬಾಬಾ ಯಾರೂ ಅನ್ನೋದೆ ತಿಳಿದಿಲ್ಲ. ಈ ಆಹಾರ ಕೇಂದ್ರ ಆರಂಭಿಸುವಾಗ ದಿವೇಶ್‍ಗೆ ಹೊಳೆದ ಹೆಸರಿದು. ಉತ್ತರ ಭಾರತದಲ್ಲಿ ಮನೆಮನೆಗೆ ಹೊಗಿ ಬಾಗಿಲು ಬಡಿದು ಊಟ ಕೇಳೋ ವ್ಯಕ್ತಿಯನ್ನು ಬಾಬಾ ಅಂತಾರಂತೆ. ಎಲ್ಲರ ಮನೆಯೂಟ ಮಾಡಿರೋ ಬಾಬಾಗೆ ಹೆಚ್ಚು ರುಚಿಗಳು ತಿಳಿದಿರುತ್ತೆ ಅನ್ನೋ ಕಾರಣಕ್ಕೆ ಬಾಬಾ ಹೆಸರನ್ನೇ ನಾಮಕರಣ ಮಾಡಲಾಗಿದೆಯಂತೆ.

ಈ ಬಾಬಾ ಫಟ್ಟೂಸ್ 21 ಜನರ ತಂಡ. 6 ಜನ ಡೆಲಿವರಿ ಬಾಯ್ಸ್ ಸೇರಿದಂತೆ ಅಡುಗೆ ಮಾಡೋರು, ಆರ್ಡರ್ ತೆಗೆದುಕೊಳ್ಳೊರು ಎಲ್ಲರೂ ಇಲ್ಲಿ ನಿಷ್ಠೆಯಿಂದ ಕೆಲಸ ಮಾಡ್ತಾರೆ. ಪ್ರತಿದಿನ ಸರಿಸುಮಾರು 100 ಆರ್ಡರ್‍ಗಳು ಬರುತ್ತಿವೆ. ಈಗಾಗಲೇ 1400ಕ್ಕೂ ಹೆಚ್ಚು ಬಾಬಾ ಫಟ್ಟೂಸ್ ರುಚಿ ಸವಿದ ಗ್ರಾಹಕರಿದ್ದು, ಹಲವರು ಪದೇ ಪದೇ ಆರ್ಡರ್ ಮಾಡುತ್ತಿದ್ದಾರೆ. ಈಗಿನ್ನೂ ಚಿಗುರೊಡೆದಿರುವ ಈ ವಲಯದಲ್ಲಿ ಉತ್ತಮ ಭವಿಷ್ಯವಿದೆ. ಯುವರ್ ಸ್ಟೋರಿ ನಡೆಸಿದ ಸಮೀಕ್ಷೆಯ ಪ್ರಕಾರ, ಈಗಾಗಲೇ 35 ಕೋಟಿ ಡಾಲರ್ ವೆಚ್ಚದಲ್ಲಿ 380 ಕಂಪನಿಗಳು ಗ್ರಾಹಕರಿಗೆ ಆಹಾರ ಒದಗಿಸುತ್ತಿವೆ. ಅಲ್ಲದೇ ಸದ್ಯ 500 ಕೋಟಿ ಡಾಲರ್‍ನಷ್ಟಿರುವ ಈ ಉದ್ಯಮ ವರ್ಷದಿಂದ ವರ್ಷಕ್ಕೆ ಶೇಕಡಾ 16ರಿಂದ 20ರಷ್ಟು ಬೆಳವಣಿಗೆ ಕಾಣುತ್ತಿದೆ.

ಉತ್ತಮ ಗುಣಮಟ್ಟದ ಆಹಾರ ನೀಡೋದ್ರ ಮೂಲಕ ದಿವೇಶ್ ಸಾಕಷ್ಟು ಹೆಸರೂ ಮಾಡಿದ್ದಾರೆ. ತಮ್ಮ ಕೆಲಸವನ್ನು ಪಕ್ಕಕ್ಕಿಟ್ಟು ಅವರು ಈ ಆಹಾರದ ಯೋಚನೆ ಮಾಡಿದ್ರಿಂದ ಅದೆಷ್ಟೋ ಜನ ಇಂದು ಅಮ್ಮನ ಕೈರುಚಿಯನ್ನು ದೂರದಲ್ಲಿದ್ದೇ ನೆನಪಿಸಿಕೊಳ್ಳುವಂತಾಗಿದೆ. ಮನೆಯಲ್ಲಿ ಅಮ್ಮ ಹೇಳೋ ಹಾಗೇ ಹೊರಗಿನ ತಿಂಡಿ ತಿನ್ನದೆ, ಆರೋಗ್ಯಕರ ಊಟ ತಿನ್ನೋದ್ರಿಂದ ದೂರದಲ್ಲಿರೋ ಅಮ್ಮನಿಗೆ ನೆಮ್ಮದಿ ಸಿಗೋದ್ರ ಜೊತೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ನೀವು ಏನಾದ್ರು ಬೆಂಗಳೂರಲ್ಲೇ ಇದ್ದು, ರುಚಿಕರ ಮತ್ತು ಆರೋಗ್ಯಕರ ತಿನಿಸುಗಳಿಗೆ ಹುಡುಕಾಡ್ತಿದ್ರೆ ದಿವೇಶ್‍ರ ಬಾಬಾ ಫಟ್ಟೂಸ್ ಅನ್ನು ಸಂಪರ್ಕಿಸಬಹುದು.

Related Stories