ಬದುಕಲು ಕಲಿಸುತ್ತಿರುವ ಭಾರತದ ಏಕೈಕ ಮಹಿಳಾ ಕಮಾಂಡೋ ಟ್ರೈನರ್..

ಟೀಮ್ ವೈ.ಎಸ್.ಕನ್ನಡ 

0

47 ವರ್ಷದ ಡಾ.ಸೀಮಾ ರಾವ್ ಭಾರತದ ಮೊದಲ ಹಾಗೂ ಏಕೈಕ ಕಮಾಂಡೋ ತರಬೇತುಗಾರ್ತಿ. ತಮ್ಮ ಬ್ಲಾಕ್ ಬೆಲ್ಟ್​ನಲ್ಲಿ 7 ಪದಕಗಳನ್ನು ಸಂಪಾದಿಸಿರುವ ಸೀಮಾ, ಏಷ್ಯಾದ ಅತಿ ಹಿರಿಯ ಬ್ಲಾಕ್ ಬೆಲ್ಟ್ ಹೋಲ್ಡರ್ ಎಂಬ ಖ್ಯಾತಿಯನ್ನೂ ಪಡೆದಿದ್ದಾರೆ. ಕಳೆದ 20 ವರ್ಷಗಳಿಂದ ಅವರು ಭಾರತೀಯ ಯೋಧರಿಗೆ ಕಠಿಣ ತರಬೇತಿ ನೀಡುತ್ತಿದ್ದಾರೆ.

ಸೀಮಾ ಅವರ ತಂದೆ ರಮಾಕಾಂತ್ ಸಿನರಿ ಪ್ರಾಧ್ಯಾಪಕರಾಗಿದ್ದರು, ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರೂ ಹೌದು. ಸೀಮಾ ರಾವ್ ಅವರ ಪತಿ ಒಬ್ಬ ನಿಷ್ಠಾವಂತ ಸೇನಾಧಿಕಾರಿ. ಭಾರತದ ಸಶಸ್ತ್ರ ಪಡೆಗಳಿಗೆ ಸೀಮಾ, ನಿಕಟ ಹೋರಾಟದ ಟ್ರಿಕ್ಸ್ ಕಲಿಸ್ತಾರೆ. ಅಷ್ಟೇ ಅಲ್ಲ ಶೂಟಿಂಗ್, ಪರ್ವತಾರೋಹಣ, ಅಗ್ನಿಶಾಮಕ ಕರ್ತವ್ಯಗಳು ಎಲ್ಲದರಲ್ಲೂ ಸೀಮಾ ನೈಪುಣ್ಯ ಹೊಂದಿದ್ದಾರೆ. ಇವೆಲ್ಲದರ ಬಗೆಗೂ ಸೈನಿಕರಿಗೆ ತರಬೇತಿ ನೀಡುತ್ತಾರೆ. ''ಪ್ರತಿದಿನವೂ ನನ್ನ ತಂದೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಡೆದ ಘಟನೆಗಳನ್ನು ಹೇಳುತ್ತಿದ್ದರು. ಹಾಗಾಗಿ ದೇಶಭಕ್ತಿ ನನ್ನಲ್ಲಿ ತಂತಾನೇ ಬೆಳೆಯಿತು'' ಎನ್ನುತ್ತಾರೆ ಸೀಮಾ.

ಬ್ರೂಸ್ ಲೀ ಹುಟ್ಟುಹಾಕಿದ ಜನಪ್ರಿಯ ಮಾರ್ಷಲ್ ಆರ್ಟ್ 'Jeet Kune Do' ಅನ್ನು ಬಲ್ಲವರು ಜಗತ್ತಿನಲ್ಲಿ ಕೇವಲ 10 ಮಹಿಳೆಯರು ಮಾತ್ರ, ಅವರಲ್ಲಿ ಸೀಮಾ ರಾವ್ ಕೂಡ ಒಬ್ಬರು. 'ಹಾಥಪಾಯಿ' ಎಂಬ ಸಿನಿಮಾವೊಂದನ್ನು ಕೂಡ ಸೀಮಾ ನಿರ್ಮಾಣ ಮಾಡಿದ್ದಾರೆ. ಮಾರ್ಷಲ್ ಆರ್ಟ್ ಇರುವ ಭಾರತದ ಮೊಟ್ಟಮೊದಲ ಸಿನಿಮಾ ಅದು. 2014ರಲ್ಲಿ ಸೀಮಾ ರಾವ್ ಅವರ 'ಹಾಥಪಾಯಿ' ಚಿತ್ರಕ್ಕೆ ಜೂರಿ ಮೆಚ್ಚುಗೆಯ ಜೊತೆಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಕೂಡ ಲಭಿಸಿತ್ತು.

'ಡಿಫೆನ್ಸ್ ಅಗೇನಸ್ಟ್ ರೇಪ್ & ಈವ್ ಟೀಸಿಂಗ್' ಅಥವಾ DARE ಹೆಸರಿನ ಕಾರ್ಯಕ್ರಮವೊಂದನ್ನು ಸೀಮಾ ಹಮ್ಮಿಕೊಂಡಿದ್ದಾರೆ. ಡೇರ್ ಮೂಲಕ ಸೀಮಾ ಮಹಿಳೆಯರಿಗೆ ಸ್ವಯಂ ರಕ್ಷಣಾ ಕೌಶಲ್ಯವನ್ನು ಕಲಿಸುತ್ತಿದ್ದಾರೆ. ಮುಂಬೈನಲ್ಲಿ ಅದರಲ್ಲೂ ಕಾರ್ಪೊರೇಟ್ ಜಗತ್ತಿನಲ್ಲಿ ಸೀಮಾ ಅವರ ಡೇರ್ ಕಾರ್ಯಕ್ರಮ ಭಾರೀ ಜನಪ್ರಿಯತೆ ಗಳಿಸಿದೆ. DARE ಕಾರ್ಯಕ್ರಮ ಮಹಿಳೆಯರ ಪಾಲಿಗೆ ಅತ್ಯಂತ ಪ್ರಮುಖವಾದದ್ದು, ಇದು ಮಾನಸಿಕ ಮತ್ತು ದೈಹಿಕ ಅಸ್ತ್ರವಿದ್ದಂತೆ. ಪೋಲಿಗಳ ಕಿರುಕುಳ ಮತ್ತು ಇತರ ಲೈಂಗಿಕ ಆಕ್ರಮಣವನ್ನು ಎದುರಿಸಲು, ಕಾಮುಕರ ವಿರುದ್ಧ ಹೋರಾಡಲು ಪ್ರತಿಕೂಲ ಸಂದರ್ಭಗಳಲ್ಲಿ ಇದು ನೆರವಾಗುತ್ತದೆ. DARE ಕಲಿಯಲು ಅತ್ಯಂತ ಸುಲಭ ಜೊತೆಗೆ ಇದರಿಂದ ಮಹಿಳಾ ಸಬಲೀಕರ ಕೂಡ ಸಾಧ್ಯ'' ಅನ್ನೋದು ಸೀಮಾ ರಾವ್ ಅವರ ಅಭಿಪ್ರಾಯ.

ಗಡಿ ಕಾಯುವ ಯೋಧರಲ್ಲಿ ಆತ್ಮವಿಶ್ವಾಸ ಮತ್ತು ಹೋರಾಟದ ಬಲ ತುಂಬುತ್ತಿರುವ ಸೀಮಾ ರಾವ್ ಅವರ ಪ್ರಯತ್ನ ನಿಜಕ್ಕೂ ಅದ್ಭುತ. ಅವರಿಗೆ ಪ್ರತಿಯೊಬ್ಬ ಭಾರತೀಯರೂ ಸಲಾಂ ಹೇಳಲೇಬೇಕು.

ಇದನ್ನೂ ಓದಿ...

ಇವರಿಗೆ ಸರ್ಕಾರ ಕರೆಂಟ್​ ಕೊಡಲ್ಲ- ಇವರೇ ಸರ್ಕಾರಕ್ಕೆ ಕರೆಂಟ್​ ಕೊಡ್ತಾರೆ..!

ಬೀದಿಯಲ್ಲಿ ದಿನಪತ್ರಿಕೆ ಮಾರುತ್ತಿದ್ದ ಶಿವಾಂಗಿ ಈಗ IIT-JEE ಉತ್ತೀರ್ಣೆ.. 

Related Stories

Stories by YourStory Kannada