ದೃಶ್ಯ ಕಥಾನಿರೂಪಣೆಯೇ ಏಕೆ?`ಇಂಡಿ' ಉದ್ಯಮಿಗಳ ಪ್ರಗತಿ...

ಟೀಮ್​​ ವೈ.ಎಸ್​​. ಕನ್ನಡ

0

ಹಸಿವು ಅನ್ನೋ ಪೆಡಂಭೂತ ಯಾರನ್ನೂ ಬಿಟ್ಟಿಲ್ಲ. ವಿಶ್ವವನ್ನೇ ಕಾಡ್ತಾ ಇರೋ ಜಟಿಲ ಸಮಸ್ಯೆ ಅಂದ್ರೆ ಹಸಿವು, ಅದಕ್ಕೆ ಕಾರಣ ಬಡತನ. ಆದ್ರೆ ಈ ಮೂಲಭೂತ ಸಮಸ್ಯೆಯತ್ತ ಗಮನಹರಿಸೋದನ್ನು ಬಿಟ್ಟು, ಸಾಮಾನ್ಯವಾಗಿ ಎಲ್ರೂ ಅಪ್ಪಿಕೊಳ್ಳೋದು ತಂತ್ರಜ್ಞಾನ ಆಧರಿತ ಉದ್ಯಮವನ್ನು. ಸಮಸ್ಯೆಯ ಆಳವನ್ನು ಅರಿತು ಅದಕ್ಕೆ ಪರಿಹಾರ ಹುಡುಕುವವರು ಅಪರೂಪ. ಆದ್ರೆ `ಇಂಡಿ ಎಂಟರ್‍ಪ್ರೆನ್ಯೂರ್ಸ್' ಆ ಕೆಲಸವನ್ನು ಮಾಡ್ತಿದ್ದಾರೆ. ಹೊಸ ತಲೆಮಾರಿನ ಉದ್ಯಮಿಗಳು, ಸ್ಥಳೀಯ ಸಮುದಾಯದ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ತಿದ್ದಾರೆ. ಹೆಚ್ಚು ಉಪಯುಕ್ತವಾದ ಸೇವೆ ಹಾಗೂ ಉತ್ಪನ್ನಗಳ ಮೂಲಕ ಮೌಲ್ಯ ಹೆಚ್ಚಿಸುವ ಉದ್ದೇಶ ಇವರದ್ದು. ಸಮರ್ಥನೀಯ ಪ್ರಕ್ರಿಯೆ ಮೂಲಕ ಇವನ್ನೆಲ್ಲ ವಿನ್ಯಾಸ ಮಾಡುವುದು ವಿಶೇಷ. ಲಾಭಕ್ಕಿಂತ ಹೆಚ್ಚಾಗಿ ವಿಶ್ವದಲ್ಲಿ ಧನಾತ್ಮಕ ಬದಲಾವಣೆ ತರುವುದೇ ಅವರ ಗುರಿ. `ಕ್ರಿಯೇಟಿವ್ ಇಂಟೆಲಿಜೆನ್ಸ್'ನ ಲೇಖಕ ಬ್ರೂಸ್ ನಸ್‍ಬೌಮ್ ಅವರನ್ನೆಲ್ಲ `ಇಂಡಿ ಬಂಡವಾಳಗಾರರು' ಅಂತಾ ಕರೆದಿದ್ದಾರೆ.

ಸಾಮಾಜಿಕ ಉದ್ಯಮಿಗಳನ್ನು `ಇಂಡಿ ಎಂಟರ್‍ಪ್ರೆನ್ಯೂರ್ಸ್' ಅಂತಾನೇ ಕರೆಯಬಹುದು. ಅವರು ಪರಿಹಾರವೇ ಸಿಗದಂತಹ ಸಂಕೀರ್ಣ ಸಾಮಾಜಿಕ ಸಮಸ್ಯೆಯೊಂದನ್ನು ಬಗೆಹರಿಸಲು ಹೊರಟಿದ್ದಾರೆ. ದೀರ್ಘಕಾಲ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸಬೇಕೆಂದ್ರೆ ಲಾಭ ಬರಬೇಕು ಜೊತೆಗೆ ಡೊನೇಷನ್‍ಗಳು ಸಿಗಬೇಕು. ಸಾಮಾಜಿಕ ಉದ್ಯಮವೊಂದರ ಅಸ್ತಿತ್ವದಿಂದ ಧನಾತ್ಮಕ, ಸಾಮಾಜಿಕ ಮತ್ತು ನೈಸರ್ಗಿಕ ಪರಿಣಾಮಗಳು ಉಂಟಾಗಬೇಕೆಂದಲ್ಲಿ ಲಾಭ ಮತ್ತು ಕೊಡುಗೆಗಳ ಪಾತ್ರ ಮಹತ್ವದ್ದು. ಅಂತಹ ಪ್ರತಿಯೊಂದು ಉದ್ಯಮವೂ, ಹೋರಾಟ, ನಿರೀಕ್ಷೆ ಮತ್ತು ಜನರ ಸಾಮಾಜಿಕ-ಆರ್ಥಿಕ ಆಕಾಂಕ್ಷೆಗಳಿಗೆ ಅಡ್ಡಿಪಡಿಸುವ ಅಂಶಗಳ ವಿರುದ್ಧ ಮಾನವನ ಅನನ್ಯ ಹೋರಾಟವನ್ನು ಪ್ರತಿಬಿಂಬಿಸುತ್ತದೆ. ಇಂತಹ ಕಥೆಗಳು ಉತ್ತಮ ಸಾಮಾಜಿಕ ಬ್ರಾಂಡ್‍ಗಳಿಗೆ ಆಧಾರವಿದ್ದಂತೆ.

ದೃಶ್ಯ ಕಥಾನಿರೂಪಣೆ ಮೂಲಕ ಬ್ರ್ಯಾಂಡ್ ದೃಷ್ಟಿಕೋನ ಅರ್ಥಮಾಡಿಸುವಿಕೆ...

ನಿಮ್ಮ ಬ್ರಾಂಡ್‍ನ ದೃಷ್ಟಿಕೋನವನ್ನು ಅರ್ಥಮಾಡಿಸಲು ಕಥಾ ನಿರೂಪಣೆ ಅತ್ಯಂತ ಅಗತ್ಯ. ಇದು ಎಲ್ಲರೂ ಒಪ್ಪಿಕೊಂಡಿರುವ ಪರಿಕಲ್ಪನೆಯೂ ಹೌದು. ಪ್ರಯತ್ನಗಳಿಂದಾದ ಪರಿಣಾಮಗಳ ಧನಾತ್ಮಕ ಚಿತ್ರಣವನ್ನು ನೀಡಿದ್ರೆ ಜನರು ಸಾಮಾಜಿಕ ಉದ್ಯಮದ ಗ್ರಾಹಕರಾಗಿ, ಹೂಡಿಕೆದಾರರಾಗಿ, ಸ್ವಯಂ ಸೇವಕರಾಗಿ ಕೆಲಸ ಮಾಡಲು ಪ್ರೇರಣೆ ಪಡೆಯುತ್ತಾರೆ. ಏನನ್ನಾದ್ರೂ ಸಾಧಿಸಬೇಕೆಂಬ ಹಂಬಲ ಮತ್ತು ಭವಿಷ್ಯದ ಗುರಿಯನ್ನು ಭಾವನಾತ್ಮಕವಾಗಿ, ವಿಮೋಚನೆಯ ಭಾವನೆಯಿಂದ ಮತ್ತು ತೃಪ್ತಿಕರವಾಗಿ ವ್ಯಕ್ತಪಡಿಸಿದಲ್ಲಿ ಅದು, ಪದಗಳ ಮೂಲಕ ಹೇಳುವುದಕ್ಕಿಂತ ಹೆಚ್ಚಾಗಿ ಜನರನ್ನು ಉತ್ತೇಜಿಸಬಲ್ಲದು.

ಭಾವನೆಗಳನ್ನು ದೃಷ್ಯಗಳ ಮೂಲಕ ಹಿಡಿದಿಡುವುದು ಬೇರೆಲ್ಲ ಮಾಧ್ಯಮಗಳಿಗಿಂತ್ಲೂ ಪರಿಣಾಮಕಾರಿ. ನೀವು ಅಂದುಕೊಂಡಂತಹ ಅನುಭವಗಳಿಗಾಗಿ, ದೃಶ್ಯ ನಿರೂಪಣೆ ವೀಕ್ಷಕರನ್ನು ಬೇರೊಂದು ಜಗತ್ತಿಗೇ ಕರೆದೊಯ್ಯುತ್ತದೆ. ದೃಶ್ಯ ಕಥೆಯ ಜೊತೆಗೆ ಹರಿತವಾದ ಶಬ್ಧಗಳ ನಿರೂಪಣೆ ಇದ್ರೆ, ವೀಕ್ಷಕರಿಗೆ ನಿಮ್ಮ ನಿತ್ಯದ ಪರಿಶ್ರಮದ ಅರಿವಾಗೋದ್ರಲ್ಲಿ ಸಂಶಯವಿಲ್ಲ. ನೀವು ಪಟ್ಟ ಕಷ್ಟ ಹಾಗೂ ಒಳ್ಳೆಯತನದ ಗೆಲುವನ್ನು ಕೂಡ ಅವರು ಅರಿತುಕೊಳ್ತಾರೆ. ಅಧ್ಯಯನದ ಪ್ರಕಾರ ಮನುಷ್ಯರು ಕೇಳಿಸಿಕೊಂಡಿದ್ದರಲ್ಲಿ ಶೇಕಡಾ 10ರಷ್ಟನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಆದ್ರೆ ಓದಿದ್ದರಲ್ಲಿ ಶೇಕಡಾ 20ರಷ್ಟನ್ನು ನೆನಪಿನಲ್ಲಿಟ್ಟುಕೊಳ್ತಾರೆ. ಆದ್ರೆ ಅವರು ಕಣ್ಣಾರೆ ನೋಡಿದ್ದರಲ್ಲಿ ಶೇಕಡಾ 80ರಷ್ಟನ್ನು ಅವರು ಮತ್ತೆ ನೆನಪಿಸಿಕೊಳ್ಳಬಲ್ಲರು. ದೃಶ್ಯದ ಮೂಲಕ ಹೇಳಲ್ಪಟ್ಟ ಕಥೆಯಲ್ಲಿ ಗ್ರಹಣ ಶಕ್ತಿ ಮತ್ತು ಅದನ್ನು ಮರುಸ್ಥಾಪಿಸುವ ಸಾಮರ್ಥ್ಯ ಹೆಚ್ಚಾಗಿರುತ್ತದೆ ಅನ್ನೋದು ಅಧ್ಯಯನದಿಂದ ದೃಢಪಟ್ಟಿದೆ.

ಈಗ ಜಾಹೀರಾತಿನ ಮೂಲಕ ಪ್ರಚಾರ ಮಾಡುವುದನ್ನು ಬಿಟ್ಟು ಕಥಾ ನಿರೂಪಣೆಯ ಮೂಲಕ ಪ್ರಚಾರ ಮಾಡುವ ಟ್ರೆಂಡ್ ಮಾರ್ಕೆಟಿಂಗ್ ವಲಯದಲ್ಲಿ ಹೆಚ್ಚಾಗಿದೆ. ಸಾಮಾಜಿಕ ಬ್ರಾಂಡ್‍ಗಳಂತೂ ಸಾಂಪ್ರದಾಯಿಕ ಜಾಹೀರಾತು ಮಾಧ್ಯಮ ಹಾಗೂ ದೃಶ್ಯ ಸಂವಹನ ವಿಧಾನವನ್ನೇ ಹೆಚ್ಚಾಗಿ ಅಳವಡಿಸಿಕೊಂಡಿವೆ. ಸ್ವಗತದಲ್ಲೇ ಎಲ್ಲವನ್ನೂ ತಿಳಿದುಕೊಳ್ಳುವುದು ಜನರಿಗೆ ನಿಜಕ್ಕೂ ಇಷ್ಟವಾಗೋದಿಲ್ಲ. ಅದನ್ನು ನಂಬಬೇಕಂದ್ರೆ ಜನರು ಅದನ್ನು ಕಣ್ಣಾರೆ ನೋಡಲೇಬೇಕು. ಲಾಭ ರಹಿತ ಸಂಸ್ಥೆ `ವಾಟರ್' ತನ್ನ ಯಶಸ್ವಿ ಯೋಜನೆಗಳನ್ನು, ಸಮುದಾಯಗಳ ದೈನಂದಿನ ಜೀವನದಲ್ಲಾದ ಬದಲಾವಣೆಗಳನ್ನು, ದಾನಿಗಳ ಚಟುವಟಿಕೆಗಳನ್ನು ದೃಶ್ಯಗಳ ಮುಖಾಂತರವೇ ತೋರಿಸುತ್ತಿದೆ. ಸಂತೋಷ, ನಿರೀಕ್ಷೆ ಮತ್ತು ಧನಾತ್ಮಕತೆಯನ್ನು ತಮ್ಮ ಫೋಟೋಗ್ರಫಿ ಮೂಲಕವೇ ಖ್ಯಾತ ಛಾಯಾಗ್ರಾಹಕಿ ಎಸ್ತರ್ ಹೆವನ್ಸ್ ವ್ಯಕ್ತಪಡಿಸ್ತಿದ್ದಾರೆ.

ಇನ್ನು ಪಾದರಕ್ಷೆ ತಯಾರಿಕಾ ಕಂಪನಿ `ಟಾಮ್ಸ್ ಶೂಸ್' ಕೂಡ ಅಪಾರ ಅಭಿಮಾನಿ ಬಳಗವನ್ನೇ ಗಳಿಸಿಕೊಂಡಿದೆ. ಸಾಮಾಜಿಕ ಜಾಲತಾಣ ಇನ್‍ಸ್ಟಾಗ್ರಾಮ್‍ನಲ್ಲಿ ಟಾಮ್ಸ್ ಶೂಸ್‍ನ ಅಸಂಖ್ಯಾತ ಅಭಿಮಾನಿಗಳು, ಅದರ 45,000 ಫೋಟೋಗಳನ್ನು ಟ್ಯಾಗ್ ಮಾಡಿದ್ದಾರೆ.

ಸಾಮಾಜಿಕ ಬ್ರಾಂಡ್‍ಗಳಿಗೆ ಸಾಮರ್ಥ್ಯದ ಅರಿವಿದೆಯಾ?

ನಮ್ಮ ನಿರೀಕ್ಷಿತ ಗ್ರಾಹಕರನ್ನು ತಲುಪಲು ಡಿಜಿಟಲ್ ಮೀಡಿಯಾ ಈಗ ಅತ್ಯುತ್ತಮ ಮಾರ್ಗ. ಸಾಂಪ್ರದಾಯಿಕ ಬ್ರಾಂಡ್ ಸಂವಹನಕ್ಕೆ ಪ್ರತಿಕ್ರಿಯಿಸಲು ಗ್ರಾಹಕರ ಆಯ್ಕೆ ಅವಕಾಶವನ್ನು ಕೂಡ ಇದು ಹೆಚ್ಚಿಸುತ್ತದೆ. ದೃಶ್ಯ ಕಥಾ ನಿರೂಪಣೆಯ ಮೂಲಕ ಜನರನ್ನು ಸೆಳೆಯುವ ಸಾಮರ್ಥ್ಯ ಸಾಮಾಜಿಕ ಬ್ರಾಂಡ್‍ಗಳಿಗಿದೆ. ಆದ್ರೆ ಸಾಮಾಜಿಕ ಬ್ರಾಂಡ್‍ಗಳಿಗೆ ತಮ್ಮಲ್ಲಿರುವ ಸಾಮರ್ಥ್ಯದ ಬಗ್ಗೆ ಅರಿವಿದೆಯಾ ಅನ್ನೋದು ಎಲ್ಲರ ಮುಂದಿರುವ ಪ್ರಶ್ನೆ.

ಲೇಖಕರು: ರೋಹನ್​​ ಪೊಟ್ದಾರ್​​
ಅನುವಾದಕರು: ಭಾರತಿ ಭಟ್​​

Related Stories

Stories by YourStory Kannada