ಅಂಗನವಾಡಿಗಳಲ್ಲಿ ಡಿಜಿಟಲ್ ಕ್ರಾಂತಿ...

ಟೀಮ್​​ ವೈ.ಎಸ್​​.

ಅಂಗನವಾಡಿಗಳಲ್ಲಿ ಡಿಜಿಟಲ್ ಕ್ರಾಂತಿ...

Monday November 02, 2015,

2 min Read

ಡಿಜಿಟಲ್ ಇಂಡಿಯಾ ಪ್ರಧಾನಿ ಮೋದಿ ಅವರ ಕನಸು. ಮೋದಿ ದೇಶದ ಆಡಳಿತ ಚುಕ್ಕಾಣಿ ಹಿಡಿದಾಗಿನಿಂದಲೂ ಡಿಜಿಟಲ್ ಇಂಡಿಯಾ ಮಂತ್ರವನ್ನೇ ಪಠಿಸುತ್ತಿದ್ದಾರೆ. ಅದಕ್ಕಾಗಿ ವಿದೇಶೀ ಬಂಡವಾಳಗಾರರನ್ನು ಸೆಳೆಯುವ ಕಸರತ್ತು ಮುಂದುವರಿಸಿದ್ದಾರೆ. ದೇಶದ ಎಲ್ಲ ಇಲಾಖೆಗಳೂ ಡಿಜಿಟಲ್‍ಮಯವಾಗಬೇಕು. ಇದಕ್ಕಾಗಿ ಆಧುನಿಕ ತಂತ್ರಜ್ಞಾನದ ಅಳವಡಿಕೆಯಾಗಬೇಕು ಅನ್ನೋದು ಮೋದಿ ಅವರ ಬಯಕೆ. ಇದರಿಂದ ಭ್ರಷ್ಟಾಚಾರಕ್ಕೂ ಕಡಿವಾಣ ಹಾಕಬಹುದು ಅನ್ನೋ ವಿಶ್ವಾಸ ಅವರದ್ದು. ಈ ನಿಟ್ಟಿನಲ್ಲಿ ಮೋದಿ ಸರ್ಕಾರ ಈಗಾಗಲೇ ಮೊದಲ ಹೆಜ್ಜೆ ಇಟ್ಟಿದೆ. ನಮೋ ಅವರ ಕನಸಿನ ಭಾಗವಾಗಿ ಈಗ ಅಂಗನವಾಡಿಗಳಲ್ಲಿ ಡಿಜಿಟಲ್ ಕ್ರಾಂತಿ ಶುರುವಾಗಿದೆ. ಭಾರತದಾದ್ಯಂತ ಅಂಗನವಾಡಿಗಳಲ್ಲಿ ಮಾಹಿತಿ-ತಂತ್ರಜ್ಞಾನ ಸೇವೆಯನ್ನು ಅಳವಡಿಸಲಾಗ್ತಿದೆ. ಅಂಗನವಾಡಿಗಳಲ್ಲಿನ ಕಾರ್ಯದಕ್ಷತೆಯನ್ನು ಹೆಚ್ಚಿಸುವುದು ಇದರ ಉದ್ದೇಶ. ಇದಕ್ಕಾಗಿಯೇ ಅಂಗನವಾಡಿ ಕಾರ್ಯಕರ್ತರು ಹಾಗೂ ಅಧಿಕಾರಿಗಳಿಗೆ ಟ್ಯಾಬ್ಲೆಟ್ ಹಾಗೂ ಸ್ಮಾರ್ಟ್ ಫೋನ್‍ಗಳನ್ನು ವಿತರಿಸಲಾಗ್ತಿದೆ.

image


ದೇಶದ 162 ಜಿಲ್ಲೆಗಳ 3 ಲಕ್ಷಕ್ಕೂ ಅಧಿಕ ಅಂಗನವಾಡಿಗಳು ಅಪೌಷ್ಠಿಕತೆಯಿಂದ ಬಳಲುತ್ತಿವೆ. ಅವುಗಳನ್ನು ಈಗಾಗಲೇಗ್ಲೇ ಗುರುತಿಸಲಾಗಿದೆ. ಸಾವಿರಾರು ಬಡ ಮಕ್ಕಳು ಪೌಷ್ಠಿಕ ಆಹಾರ ಸಿಗದೇ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಇನ್ನು ಬಹುತೇಕ ಕಡೆಗಳಲ್ಲಿ ಅಂಗನವಾಡಿಗಳಿಗೆ ಪೂರೈಕೆಯಾದ ಆಹಾರ ಕೂಡ ಪುಟಾಣಿಗಳನ್ನು ತಲುಪುತ್ತಿಲ್ಲ. ಸರ್ಕಾರದ ಯೋಜನೆ ಮಧ್ಯವರ್ತಿಗಳ ವಂಚನೆಯಿಂದ ಹಳ್ಳ ಹಿಡಿಯುತ್ತಿದೆ. ಹಾಗಾಗಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಅಂಗನವಾಡಿಗಳನ್ನು ಬಲಪಡಿಸಲು ಯೋಜನೆ ರೂಪಿಸಲಾಗಿದೆ. ವಿಶ್ವ ಬ್ಯಾಂಕ್‍ನ ಸಹಕಾರದೊಂದಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಅಪೌಷ್ಠಿಕತೆಯಿಂದ ಸೊರಗಿರುವ ಅಂಗನವಾಡಿಗಳಿಗೆ ಪೌಷ್ಠಿಕ ಆಹಾರವನ್ನು ಪೂರೈಸಲು ಮುಂದಾಗಿದೆ. ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ಮೂಲಕ ಅಪೌಷ್ಠಿಕತೆಯಿಂದ ಬಳಲುತ್ತಿರುವ ಅಂಗನವಾಡಿಗಳ ಮೇಲೆ ನಿಗಾ ಇಡಲಾಗುತ್ತದೆ. ಮಕ್ಕಳಿಗೆ ಪ್ರತಿದಿನ ಎಷ್ಟು ಪೌಷ್ಠಿಕ ಆಹಾರ ಪೂರೈಕೆಯಾಗುತ್ತೆ ಅನ್ನೋದರ ಮೇಲೆ ಸಚಿವಾಲಯ ನಿಗಾ ವಹಿಸಲಿದೆ. ಮಕ್ಕಳ ಅಪೌಷ್ಠಿಕತೆ ಬಗ್ಗೆ ಪ್ರತಿದಿನ ಮಾಹಿತಿ ನೀಡಲು ಅಂಗನವಾಡಿ ಕಾರ್ಯಕರ್ತರು ಮತ್ತು ವಿವಿಧ ವಲಯಗಳ ಮೇಲ್ವಿಚಾರಕರಿಗೆ ಟ್ಯಾಬ್ಲೆಟ್ ಡಿವೈಸ್ ಮತ್ತು ಸ್ಮಾರ್ಟ್ ಫೋನ್‍ಗಳನ್ನು ವಿತರಿಸಲಾಗ್ತಿದೆ.

ಸಧ್ಯ ಕೈಯಿಂದಲೇ ತಯಾರಿಸಿದ ವರದಿಯನ್ನು ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ಸಲ್ಲಿಸಲಾಗುತ್ತಿದೆ. ಐಟಿ ತಂತ್ರಜ್ಞಾನದ ಮೂಲಕ ಪ್ರತಿದಿನ ನಿಗಾ ಇಡಬಹುದು ಜೊತೆಗೆ ಎಲ್ಲಿ ಸಮಸ್ಯೆಯಿದೆ ಅನ್ನೋದನ್ನ ಅರಿಯಬಹುದು ಅನ್ನೋದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರ ಅಭಿಪ್ರಾಯ. ಸಾಮಾನ್ಯ ಅಪ್ಲಿಕೇಷನ್ ಸಾಫ್ಟ್​​​ವೇರ್ ಮೂಲಕ ಅಂಕಿ ಸಂಖ್ಯೆ ಆಧಾರಿತ ದಾಖಲೆಗಳನ್ನು ಅಪ್‍ಲೋಡ್ ಮಾಡಲಾಗುತ್ತದೆ. ಇದಕ್ಕಾಗಿಯೇ ಸಚಿವಾಲಯ ಸಾಫ್ಟ್​​​ವೇರ್ ಒಂದನ್ನು ಅಭಿವೃದ್ಧಿಪಡಿಸಿದೆ. ಅಂಗನವಾಡಿ ಕಾರ್ಯಕರ್ತರಿಗೆ ಸ್ಮಾರ್ಟ್‍ಫೋನ್ ವಿತರಿಸಲಾಗುತ್ತದೆ. ಮೂರು-ನಾಲ್ಕು ಕೇಂದ್ರಗಳ ಮೇಲ್ವಿಚಾರಣೆ ಮಾಡುವ ಸೂಪರ್‍ವೈಸರ್‍ಗಳಿಗೆ ಟ್ಯಾಬ್ ಕೊಡಲಾಗುತ್ತದೆ. ಅದರ ಮೂಲಕ ಮಕ್ಕಳಿಗೆ ಪೂರೈಸಿದ ಪೌಷ್ಠಿಕ ಆಹಾರದ ವಿವರವನ್ನು ಅಪ್‍ಲೋಡ್ ಮಾಡಬೇಕು. ಅಂಕಿ ಸಂಖ್ಯೆಗಳ ಅಪ್‍ಲೋಡ್ ಕಾರ್ಯ ಅಂಗನವಾಡಿ ಕೇಂದ್ರ ಹಾಗೂ ವಲಯ ಮೇಲ್ವಿಚಾರಕರ ಮಟ್ಟದಲ್ಲಿ ನಡೆಯುತ್ತದೆ. ಒಮ್ಮೆ ಮಾಹಿತಿಯನ್ನು ಅಪ್‍ಲೋಡ್ ಮಾಡಿದಲ್ಲಿ ಅದು ಸರ್ಕಾರದ ವಿವಿಧ ಮಟ್ಟದ ಅಧಿಕಾರಿಗಳನ್ನು ತಲುಪುತ್ತದೆ.

ಮೊದಲ ಹಂತದಲ್ಲಿ 8 ರಾಜ್ಯಗಳ 27 ಜಿಲ್ಲೆಗಳಲ್ಲಿರುವ 10,000 ಅಂಗನವಾಡಿ ಕೇಂದ್ರಗಳಿಗೆ ಟ್ಯಾಬ್ಲೆಟ್ ಹಾಗೂ ಸ್ಮಾರ್ಟ್‍ಫೋನ್‍ಗಳನ್ನು ವಿತರಿಸಲಾಗುತ್ತಿದೆ. ಆಂಧ್ರ ಪ್ರದೇಶ, ಬಿಹಾರ, ಛತ್ತೀಸ್‍ಗಢ, ಜಾರ್ಖಂಡ್, ಮಧ್ಯಪ್ರದೇಶ, ಉತ್ತರಪ್ರದೇಶ ರಾಜಸ್ತಾನ ಮತ್ತು ಮಹಾರಾಷ್ಟ್ರದ ಅಂಗನವಾಡಿಗಳು ಡಿಜಿಟಲ್ ಆಗ್ತಿವೆ. ಈ ಯೋಜನೆ ಯಶಸ್ವಿಯಾದ್ರೆ ಅದನ್ನು 41 ಜಿಲ್ಲೆಗಳ 90,000 ಅಂಗನವಾಡಿ ಕೇಂದ್ರಗಳಿಗೆ ವಿಸ್ತರಿಸಲಾಗುತ್ತದೆ. ಅಷ್ಟೇ ಅಲ್ಲ, ಅಂಗನವಾಡಿ ಕೇಂದ್ರಗಳಿಗೆ 11 ಡಿಜಿಟ್‍ನ ಯೂನಿಕ್ ಐಡೆಂಟಿಫಿಕೇಷನ್ ಕೋಡ್ ಒಂದನ್ನು ನೀಡಲಾಗುತ್ತದೆ. ದೈಹಿಕವಾಗಿ ಉಪಸ್ಥಿತರಿರದೇ ಅಲ್ಲೇನಾಗ್ತಿದೆ ಅನ್ನೋದರ ಮೇಲೆ ನಿಗಾ ಇಡಬಹುದು.

ಬರೀ ಅಪೌಷ್ಠಿಕತೆ ಮಾತ್ರವಲ್ಲ ಅಂಗನವಾಡಿಗಳಲ್ಲಿ ಮಕ್ಕಳು ತಿನ್ನೋ ಅನ್ನಕ್ಕೂ ಕನ್ನ ಹಾಕುವವರ ಸಂಖ್ಯೆ ಹೆಚ್ಚಿದೆ. ಮಕ್ಕಳಿಗಾಗಿ ವಿತರಿಸಿದ ಆಹಾರವನ್ನು ಕದ್ದು ಸಾಗಿಸುವುದು, ಕಲಬೆರಕೆ ಆಹಾರವನ್ನು ಪೂರೈಸುವ ಮೂಲಕ ವಂಚನೆ ಅವ್ಯಾಹತವಾಗಿ ನಡೆಯುತ್ತಿದೆ. ಈ ಡಿಜಿಟಲ್ ಕ್ರಾಂತಿಯಿಂದ ಅಂತಹ ಅಕ್ರಮಗಳಿಗೂ ಬ್ರೇಕ್ ಬೀಳಬಹುದು. ಯಾಕಂದ್ರೆ ಪೂರೈಕೆಯಾದ ಆಹಾರ, ಖರ್ಚಾದ ಆಹಾರ ಇವೆಲ್ಲದರ ವಿವರವನ್ನು ಪ್ರತಿದಿನ ಸಂಬಂಧಪಟ್ಟ ಅಧಿಕಾರಿಗಳಿಗೆ ಅಪ್‍ಡೇಟ್ ಮಾಡುವುದರಿಂದ ಅಕ್ರಮವನ್ನು ತಡೆಯಬಹುದು. ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾದ ಕನಸನ್ನು ಸಾಕಾರಗೊಳಿಸಲು ಅಧಿಕಾರಿಗಳು ಕೂಡ ಟೊಂಕಕಟ್ಟಿ ನಿಂತಿರುವುದು ಸ್ವಾಗತಾರ್ಹ. ಡಿಜಿಟಲ್ ಕ್ರಾಂತಿಯ ಮೂಲಕ ಅಂಗನವಾಡಿ ಅಕ್ರಮಕ್ಕೆ ಕೊಕ್ಕೆ ಬಿದ್ರೆ ಅದೆಷ್ಟೋ ಬಡ ಮಕ್ಕಳು ಬದುಕಿಕೊಳ್ತಾರೆ. ಈ ಯೋಜನೆಯನ್ನು ಅಧಿಕಾರಿಗಳು ಕೂಡ ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರದ ಯೋಜನೆಯನ್ನು ಯಶಸ್ವಿಗೊಳಿಸಬೇಕು.