"ಯಾಹೂ"ನ ಮಾಜಿ ಉದ್ಯೋಗಿಗಳ ಸಾಧನೆ- ಆನ್‍ಲೈನ್ ಶಾಪಿಂಗ್ ಸರಳಗೊಳಿಸಲು `ಶಾಪ್‍ಇನ್‍ಸಿಂಕ್' ಆ್ಯಪ್

ಟೀಮ್​​ ವೈ.ಎಸ್​​. ಕನ್ನಡ

0

ಇ-ಕಾಮರ್ಸ್ ವೇದಿಕೆಗಳಿಂದ ಆನ್‍ಲೈನ್ ಶಾಪಿಂಗ್ ಭರಾಟೆ ಇನ್ನಷ್ಟು ಜೋರಾಗಿದೆ. ಆದ್ರೆ ಆನ್‍ಲೈನ್ ಶಾಪಿಂಗ್‍ನಿಂದ ಖರೀದಿಸುವವರ ಉದ್ವೇಗ ಮತ್ತು ಕೊಳ್ಳುವವರ ಅನುಕಂಪದಂತಹ ಸಮಸ್ಯೆಗಳು ಕೂಡ ಹುಟ್ಟಿಕೊಂಡಿವೆ. ಖರೀದಿ ನಿರ್ಧಾರದ ಬಗ್ಗೆ ಇನ್ನಷ್ಟು ಮಾಹಿತಿ ನೀಡುವುದರಿಂದ ಆನ್‍ಲೈನ್ ಶಾಪಿಂಗ್ ಬಗ್ಗೆ ಸ್ನೇಹಿತರು ಹಾಗೂ ಕುಟುಂಬಗಳ ಮಧ್ಯೆ ಸಹಯೋಗದ ಅನುಭವ ಮೂಡಿಸಬಹುದು. ವಿನೂತನ ಮೊಬೈಲ್ ಆ್ಯಪ್ `ಶಾಪ್‍ಇನ್‍ಸಿಂಕ್' ಮೂಲಕ ಇಬ್ಬರು ಮಾಜಿ ಯಾಹೂ ಉದ್ಯೋಗಿಗಳು, ಇದನ್ನು ಸಾಧಿಸಲು ಹೊರಟಿದ್ದಾರೆ.

`ಶಾಪ್‍ಇನ್‍ಸಿಂಕ್' ಎಂದರೇನು..?

`ಶಾಪ್‍ಇನ್‍ಸಿಂಕ್' ಮೂಲಕ ನೀವು ಸುಲಭವಾಗಿ ಬೆಲೆ ಹೋಲಿಕೆ ಮಾಡಬಹುದು. ಅಷ್ಟೇ ಅಲ್ಲ ಮಾಹಿತಿ ವಿನಿಮಯ ಸಾಮರ್ಥ್ಯವನ್ನೂ ಇದು ಹೊಂದಿದೆ. ಸ್ನೇಹಿತರು ಹಾಗೂ ಕುಟುಂಬದವರ ಜೊತೆ ಉತ್ಪನ್ನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಹಂಚಿಕೊಳ್ಳಬಹುದು. ಪ್ರಮುಖ ಇ-ಕಾಮರ್ಸ್ ವೇದಿಕೆಗಳಾದ `ಫ್ಲಿಫ್​​​ ಕಾರ್ಟ್', `ಸ್ನಾಪ್‍ಡೀಲ್' ಮತ್ತು `ಅಮೇಝಾನ್'ನ ಲಕ್ಷಾಂತರ ಉತ್ಪನ್ನಗಳ ಮೇಲ್ವಿಚಾರಣೆಯನ್ನೂ ಶಾಪ್‍ಇನ್‍ಸಿಂಕ್ ಮಾಡುತ್ತಿದೆ. ಫ್ಯಾಷನ್, ಮಕ್ಕಳಿಗೆ ಬೇಕಾದ ಉತ್ಪನ್ನಗಳು, ಎಲೆಕ್ಟ್ರಿಕಲ್ ಐಟಮ್ಸ್, ಹೋಮ್ ಅಪ್ಲೈಯನ್ಸಸ್ ಸೇರಿದಂತೆ 12 ವಿಭಾಗಗಳ ಬೆಲೆ ಹೋಲಿಕೆ ವ್ಯವಸ್ಥೆ ಕೂಡ ಈ ಆ್ಯಪ್‍ನಲ್ಲಿದೆ.

ಇದುವರೆಗಿನ ಕಥೆ...

2015ರ ಜುಲೈನಲ್ಲಿ ರಾಜ್ ರಾಮಸ್ವಾಮಿ ಮತ್ತು ಆಶಿಶ್ ಪರ್ನಮಿ `ಶಾಪ್‍ಇನ್‍ಸಿಂಕ್' ಆ್ಯಪ್ ಅನ್ನು ಆರಂಭಿಸಿದ್ರು. ಇದರ ಮುಖ್ಯ ಕಚೇರಿ ಸ್ಯಾನ್‍ಫ್ರಾನ್ಸಿಸ್ಕೋದಲ್ಲಿದೆ. ಬೆಂಗಳೂರಲ್ಲೂ ಕಚೇರಿಯನ್ನು ಹೊಂದಿದೆ. `ಶಾಪ್‍ಇನ್‍ಸಿಂಕ್'ನ ಸಿಇಓ ರಾಜ್ ಮೊದಲು `ಯಾಹೂ' ಪ್ರಾಡಕ್ಟ್ ಮ್ಯಾನೇಜ್‍ಮೆಂಟ್ ಹಾಗೂ ರೆವೆನ್ಯೂ ಎಕ್ಸಿಕ್ಯುಟಿವ್ ಆಗಿ ಕೆಲಸ ಮಾಡ್ತಾ ಇದ್ರು. ಅದೇ ಸಂಸ್ಥೆಯಲ್ಲಿ ಆಶಿಶ್ ಪ್ರಾಡಕ್ಟ್ ಮತ್ತು ಎಂಜಿನಿಯರಿಂಗ್ ಲೀಡರ್ ಆಗಿದ್ರು. ತಮ್ಮ ಅನುಭವದ ಆಧಾರದ ಮೇಲೆ ರಾಜ್ ಹಾಗೂ ಆಶಿಶ್ ಮಾರುಕಟ್ಟೆ ಸಂಶೋಧನೆ ನಡೆಸಿದ್ರು. ಭಾರತದಲ್ಲಿ ಆನ್‍ಲೈನ್ ಶಾಪಿಂಗ್ ಒಂದು ಏಕಾಂಗಿ ಅನುಭವ ಅನ್ನೋದನ್ನು ಅರ್ಥಮಾಡಿಕೊಂಡ್ರು. ಬೆಲೆ ಗ್ರಾಹಕರ ನಿರ್ಧಾರಕ ಅಂಶ, ಜೊತೆಗೆ ಸ್ನೇಹಿತರು, ಕುಟುಂಬಸ್ಥರು ಕೂಡ ಖರೀದಿ ಮೇಲೆ ಪ್ರಭಾವ ಬೀರುತ್ತಾರೆ ಎನ್ನುವ ಅಂಶವನ್ನು ಗಮನಿಸಿದ್ರು. ಆದ್ರೆ ಸ್ನೇಹಿತರು ಮತ್ತು ಕುಟುಂಬದವರ ಅಭಿಪ್ರಾಯ ಪಡೆಯಲು ಸರಳ ವಿಧಾನಗಳು ಇರಲಿಲ್ಲ. ಉತ್ಪನ್ನಗಳ ಲಿಂಕ್ ಅಥವಾ ಸ್ಕ್ರೀನ್‍ಶಾಟ್‍ಗಳನ್ನು ತೆಗೆದು ಇಮೇಲ್ ಮಾಡಬೇಕಿತ್ತು, ಅಥವಾ ಫೋನ್ ಮತ್ತು ಚಾಟ್ ಮೂಲಕ ಸಲಹೆ ಕೇಳಬೇಕಿತ್ತು. ಬೇರೆ ಬೇರೆ ಸೈಟ್‍ಗಳಲ್ಲಿನ ಬೆಲೆ ಹೋಲಿಕೆ ಮಾಡಲು ನಂಬಿಕಸ್ಥ ವೇದಿಕೆ ಇರಲಿಲ್ಲ.

ಈ ಎಲ್ಲ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ ಮತ್ತು ಆಶಿಶ್, ನಾಲ್ವರು ಎಂಜಿನಿಯರ್‍ಗಳ ತಂಡದ ಜೊತೆ ಸೇರಿ `ಶಾಪ್‍ಇನ್‍ಸಿಂಕ್' ಆ್ಯಪ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಆನ್‍ಲೈನ್ ಶಾಪಿಂಗ್‍ಗೆ ಇದ್ದ ವಿಘ್ನಗಳನ್ನೆಲ್ಲ ನಿವಾರಿಸುವುದು ಇವರ ಉದ್ದೇಶ. ಭಾರತೀಯ ಗ್ರಾಹಕರ ಅನನ್ಯ ಬೇಡಿಕೆಗಳನ್ನು ಈಡೇರಿಸುವುದೇ ನಮ್ಮ ಗುರಿ ಎನ್ನುತ್ತಾರೆ ರಾಜ್. ವಿಸ್ತಾರವಾದ ವ್ಯಾಪ್ತಿ ಮತ್ತು ಉತ್ತಮ ಮೌಲ್ಯದ ಶೋಧ, ಖರೀದಿಯ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳು. ಬಹುತೇಕ ನಿರ್ಧಾರಗಳು ಸ್ನೇಹಿತರು ಮತ್ತು ಕುಟುಂಬದವರ ಸಲಹೆಯನ್ನು ಆಧರಿಸಿರುತ್ತವೆ. ಈ ಅಂಶಗಳನ್ನು ಜೋಡಿಸಿ, ಸಹಯೋಗದ ಶಾಪಿಂಗ್ ಅನುಭವಕ್ಕೆ ವೇದಿಕೆ ಕಲ್ಪಿಸಿಕೊಡುವಲ್ಲಿ ಸಫಲರಾಗಿದ್ದೇವೆ ಅನ್ನೋದು ರಾಜ್ ಅವರ ಅಭಿಪ್ರಾಯ. ಸದ್ಯ ಈ ಆ್ಯಪ್ ಆ್ಯಂಡ್ರಾಯ್ಡ್‍ನಲ್ಲಿ ಲಭ್ಯವಿದ್ದು, ಐಓಎಸ್ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಮೊಬೈಲ್‍ಗೆ ಆದ್ಯತೆ ನೀಡಿ ರಾಜ್ ಹಾಗೂ ಆಶಿಶ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.

`ಶಾಪ್‍ಇನ್‍ಸಿಂಕ್' ಹೇಗೆ ಕಾರ್ಯನಿರ್ವಹಿಸುತ್ತೆ..?

ಬಳಕೆದಾರರ ಬ್ರೌಸಿಂಗ್ ವಿಧಾನ ಮತ್ತು ಸಂವಹನದ ಆಧಾರದ ಮೇಲೆ ಆ್ಯಪ್ ಅತ್ಯುತ್ತಮ ಡೀಲ್ ಮತ್ತು ಆಫರ್‍ಗಳ ಬಗ್ಗೆ ಶಿಫಾರಸು ಮಾಡುತ್ತದೆ. ಅತಿ ಹೆಚ್ಚು ಚರ್ಚೆಗೀಡಾದ ಉತ್ಪನ್ನದ ಬೆಲೆಯನ್ನು ಗಮನಿಸಲು, ರೇಟಿಂಗ್ ಹಾಗೂ ಇತರ ಮಾಹಿತಿಗಳನ್ನು ಪಡೆಯಲು ಪ್ರತ್ಯೇಕ ವಿಭಾಗ ಕೂಡ ಇದೆ. `ಶಾಪ್‍ಇನ್‍ಸಿಂಕ್' ಆ್ಯಪ್‍ನ ಮೂಲಕ ವೀಕ್ಷಿಸಲ್ಪಡುವ ಉತ್ಪನ್ನಗಳ ಸೈಟ್ ಹಾಗೂ ಬ್ರ್ಯಾಂಡ್‍ಗಳಿಂದ ಅದಕ್ಕೆ ಪ್ರತಿಯಾಗಿ ಶುಲ್ಕ ವಿಧಿಸಲು ಯೋಜನೆ ರೂಪಿಸಲಾಗಿದೆ. ಆ್ಯಪ್ ಅನ್ನು ಇನ್ನಷ್ಟು ಅಭಿವೃದ್ಧಿಪಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಬಳಕೆದಾರರನ್ನು ಸಂಪಾದಿಸಲು ರಾಜ್ ಮತ್ತು ಆಶಿಶ್ ಮುಂದಾಗಿದ್ದಾರೆ.

ವಲಯ ಅವಲೋಕನ ಮತ್ತು ಭವಿಷ್ಯದ ಯೋಜನೆಗಳು...

ಭಾರತದಲ್ಲಿ ಇ-ಕಾಮರ್ಸ್ ಕ್ಷೇತ್ರ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. 2020ರ ವೇಳೆಗೆ ಮಾರಾಟ 100 ಬಿಲಿಯನ್ ಡಾಲರ್‍ಗೆ ತಲುಪಲಿದೆ ಅಂತಾ `ನ್ಯಾಸ್ಕಾಮ್' ಅಂದಾಜಿಸಿದೆ. ಹಾಗಾಗಿ ಗ್ರಾಹಕರಿಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಬೇಕಾದ ಅಸ್ತ್ರಗಳನ್ನು ಪೂರೈಸುವಲ್ಲೂ ಸಂಸ್ಥೆಗಳು ಹಿಂದೆ ಬಿದ್ದಿಲ್ಲ. ಬೆಲೆ ಹೋಲಿಕೆಯ ವೇದಿಕೆ `ಬೈ ಹಟ್ಕೆ' ತನ್ನ ಮೌಲ್ಯವನ್ನು 1 ಮಿಲಿಯನ್ ಡಾಲರ್‍ನಷ್ಟು ಹೆಚ್ಚಿಸಿಕೊಂಡಿದೆ. ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಚಾಟ್ ಮಾಡಲು ಫ್ಲಿಪ್‍ಕಾರ್ಟ್‍ನಲ್ಲಿ ಪಿಂಗ್ ಸೌಲಭ್ಯ ಕಲ್ಪಿಸಲಾಗಿದೆ. `ವೂಡೂ' , `ಟೆಕ್‍ಸ್ಪಾರ್ಕ್ಸ್​​ ' ಕೂಡ ನಿಧಿಯನ್ನು ಹೆಚ್ಚಿಸಿಕೊಂಡಿವೆ. ಸ್ಥಳೀಯ ಮಾರಾಟಗಾರರೊಂದಿಗೆ ಚೌಕಾಸಿ ಮಾಡಲು `ಪ್ರೈಸ್‍ಮೋಜೋ' ಮೊಬೈಲ್ ಆ್ಯಪ್ ಅವಕಾಶ ಮಾಡಿಕೊಟ್ಟಿದೆ.

ಬರೀ ಬೆಲೆ ಹೋಲಿಕೆ ಮಾತ್ರವಲ್ಲದೆ ಸಾಮಾಜಿಕ ಸಂದೇಶ ಅವಕಾಶವನ್ನೂ ನೀಡಿರುವ `ಶಾಪ್‍ಇನ್‍ಸಿಂಕ್' ವಿಭಿನ್ನ ಸೇವೆಯ ಮೂಲಕ ಗುರುತಿಸಿಕೊಂಡಿದೆ. ತಮ್ಮ ತಂಡವನ್ನು ಇನ್ನಷ್ಟು ವಿಸ್ತರಿಸಲು ರಾಜ್ ಮತ್ತು ಆಶಿಶ್ ಮುಂದಾಗಿದ್ದಾರೆ. ನಿರ್ದಿಷ್ಟ ಬಳಕೆದಾರರನ್ನು ಹೊಂದಿದ ಬಳಿಕ ಬಂಡವಾಳ ಸಂಗ್ರಹಿಸುವ ಗುರಿ ಕೂಡ ಇವರ ಮುಂದಿದೆ.

`ಯುವರ್‍ಸ್ಟೋರಿ' ಅಭಿಮತ...

`ಶಾಪ್‍ಇನ್‍ಸಿಂಕ್' ಆ್ಯಪ್ ಅನ್ನು ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ. ಫೋನ್ ಕರೆ ಮಾಡದೇ, ಚಾಟಿಂಗ್ ತಲೆನೋವಿಲ್ಲದೇ ಈ ಆ್ಯಪ್ ಮೂಲಕ ಗ್ರಾಹಕರು ಖುಷಿಖುಷಿಯಾಗಿ ಶಾಪಿಂಗ್ ಮಾಡಬಹುದು. ಇನ್ನಷ್ಟು ವೈಶಿಷ್ಟ್ಯಗಳು ಹಾಗೂ ಗೇಮಿಂಗ್ ಅಂಶಗಳನ್ನು ಅಳವಡಿಸಿದ್ರೆ ಇದು ಗ್ರಾಹಕ ಸ್ನೇಹಿಯಾಗಲಿದೆ. ಈ ಅಂಕಿ-ಅಂಶಗಳ ಆಧಾರದ ಮೇಲೆ ವಿವಿಧ ಉತ್ಪನ್ನ ವಿಭಾಗಗಳ ಲೀಡರ್ ಬೋರ್ಡನ್ನು ಸೃಷ್ಟಿಸಬಹುದು. ಆಯಾ ವಿಭಾಗಗಳ ತಜ್ಞರನ್ನು ಸಂಪರ್ಕಿಸಲು ಸಹ ಗ್ರಾಹಕರಿಗೆ ನೆರವಾಗಲಿದೆ. ನಿರ್ದಿಷ್ಟ ಉದ್ದೇಶ ಅಥವಾ ಈವೆಂಟ್‍ಗಳಿಗೆ ಬೇಕಾದ ಉತ್ಪನ್ನಗಳ ಖರೀದಿಗೂ ಈ ಆ್ಯಪ್ ಶಿಫಾರಸು ಮಾಡಲಿದೆ. ಉದಾಹರಣೆಗೆ, ಮನೆಯ ನವೀಕರಣಕ್ಕೆ ಮುಂದಾಗಿರುವ ಕುಟುಂಬದವರಿಗೆ ಉತ್ಪನ್ನ ಖರೀದಿ ಬಗ್ಗೆ ಸರಿಯಾದ ಐಡಿಯಾ ಇಲ್ಲ ಎಂದಾದಾಗ, `ಡಿಡ್ ಯು ಫಾರ್‍ಗೆಟ್' ಸೆಕ್ಷನ್ ಮೂಲಕ ಅವರು ಸಲಹೆ ಪಡೆಯಬಹುದು. ಅದೇನೇ ಆದ್ರೂ `ಶಾಪ್‍ಇನ್‍ಸಿಂಕ್' ಆ್ಯಪ್ ಹೆಚ್ಹೆಚ್ಚು ಬಳಕೆದಾರರನ್ನು ಹೇಗೆ ಸಂಪಾದಿಸುತ್ತೆ ಅನ್ನೋದು ಕುತೂಹಲ ಮೂಡಿಸಿದೆ.

ಲೇಖಕರು: ಹರ್ಷಿತ್​​ ಮಲ್ಯ
ಅನುವಾದಕರು: ಭಾರತಿ ಭಟ್​​​​

Related Stories