ಈ ಗ್ರಾಮದಲ್ಲಿ ಹೆಣ್ಣುಮಕ್ಕಳೇ ಮನೆ ಒಡತಿಯರು..!

ಟೀಮ್​ ವೈ.ಎಸ್​. ಕನ್ನಡ

1

ನಾವು ಒಂದಲ್ಲ ಒಂದು ಕಟ್ಟುಪಾಡಿಗೆ ಒಗ್ಗಿಕೊಂಡು ಬಿಟ್ಟಿದ್ದೇವೆ. ಗ್ರಾಮೀಣ ಜನರು ನಗರದ ಜನರಿಗಿಂತ ಹಿಂದುಳಿದಿದ್ದಾರೆ ಅನ್ನುವ ಲೆಕ್ಕಾಚಾರ ದೊಡ್ಡದಾಗಿದೆ. ಆದ್ರೆ ಮಹಾರಾಷ್ಟ್ರದ ಆನಂದವಾಡಿ ಗ್ರಾಮ ಎಲ್ಲರ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ. ಅಲ್ಲಿನ ಜನರ ಯೋಚನೆ ಸಾಕಷ್ಟು ಸುದ್ದಿ ಮಾಡುತ್ತಿದೆ.

ನೀಲಂಗ ತಾಲೂಕಿನ ಆನಂದವಾಡಿಯಲ್ಲಿ ಇರುವುದು ಕೇವಲ 635 ಜನರು. ಈ ಗ್ರಾಮದಲ್ಲಿ ಇರುವುದೇ 165 ಮನೆಗಳು. ಆದ್ರೆ ಇಲ್ಲಿನ ಪ್ರತಿಯೊಂದು ಮನೆಗಳಿಗೂ ಹೆಣ್ಣಿನ ಹೆಸರು ಇಡಲಾಗಿದೆ. ಗ್ರಾಮಸ್ಥರಿಂದ ಗ್ರಾಮಸಭೆಯಲ್ಲಿ ಮನೆಗೆ ಹೆಣ್ಣಿನ ಹೆಸರಿಡುವ ಪ್ರಸ್ತಾಪ ಬಂದಮೇಲೆ ಅಲ್ಲಿನ ಸದಸ್ಯರು ಅವಿರೋಧವಾಗಿ ಈ ನಿರ್ಧಾರ ಮಾಡಿದ್ದರು. ಇವತ್ತು ಆ ಗ್ರಾಮದಲ್ಲಿ ಎಲ್ಲಾ ಮನೆಗಳಿಗೂ ಹೆಣ್ಣಿನ ಹೆಸರು ಇಡಲಾಗಿದೆ. ಅಷ್ಟೇ ಅಲ್ಲ ಇನ್ನು ಕೆಲವು ತಮ್ಮ ಹೆಸರಿನಲ್ಲಿದ್ದ ಆಸ್ತಿಪಾಸ್ತಿಯನ್ನು, ಜಮೀನುಗಳನ್ನು ಹೆಂಗಸರ ಹೆಸರಿಗೆ ಬರೆದುಕೊಟ್ಟಿದ್ದಾರೆ. ಪ್ರತಿಯೊಂದು ಮನೆಯ ಮುಂದೆಯೂ ಆ ಮನೆಯ ಮಾಲಕಿಯ ಹೆಸರನ್ನು ಬೋರ್ಡ್​ನಲ್ಲಿ ಬರೆಯಲಾಗಿದೆ. ಅದ್ರಲ್ಲಿ ಟೆಲಿಫೋನ್ ನಂಬರ್ ಅನ್ನು ಕೂಡ ದಾಖಲು ಮಾಡಲಾಗಿದೆ.

“ದೀಪಾವಳಿ ಹಬ್ಬದ ವೇಳೆಯಲ್ಲಿ ನಾವು ಲಕ್ಷ್ಮೀಯನ್ನು ಮನೆಗೆ ತರುತ್ತೇವೆ. ಆದ್ರೆ ನಾವು ನಮ್ಮ ಮನೆಯಲ್ಲೇ ಇರುವ ಲಕ್ಷ್ಮೀಯರನ್ನು ಅಂದರೆ ಹೆಂಡತಿ ಮತ್ತು ಮಕ್ಕಳನ್ನು ಕಾಣಲು ಬಯಸಿದ್ದೆವು. ಹೀಗಾಗಿ ಇಡೀ ಗ್ರಾಮವೇ ಈ ನಿರ್ಧಾರ ಮಾಡಿದೆ. ಮಹಿಳೆಯರು ಮನೆಯ ಎಲ್ಲಾ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಾರೆ. ಅವರು ಯಾರನ್ನೂ ಕೂಡ ಅವಲಂಭಿಸಿ ಇರಬಾರದು. ನಾವು ಈಗ ಮಾಡಿರುವ ನಿರ್ಧಾರ ಎಲ್ಲರ ಯೋಚನೆಗಳನ್ನು ಬದಲಿಸಬಹುದು”
- ನ್ಯಾನೊಬ ಚಾಮೆ, ಗ್ರಾಮಸಭಾ ಸದಸ್ಯ

ಅಂದಹಾಗೇ ಈ ಗ್ರಾಮದಲ್ಲಿ ಕಳೆದ 15 ವರ್ಷಗಳಿಂದ ಒಂದೇ ಒಂದು ಅಪರಾಧಗಳು ನಡೆದಿಲ್ಲ. " ಡಿಸ್ಪ್ಯೂಟ್ ಫ್ರೀ ವಿಲೇಜ್ ಸ್ಕೀಮ್" ಅಡಿಯಲ್ಲಿ ಈ ಗ್ರಾಮಕ್ಕೆ ಭಾರತದ ಶ್ರೇಷ್ಟ ಗ್ರಾಮ ಅನ್ನುವ ಗೌರವ ಕೂಡ ಸಿಕ್ಕಿದೆ. ಇಲ್ಲಿನ ಗ್ರಾಮಸ್ಥರು ಇತರರ ಸುಖವನ್ನು ಕೂಡ ಬಯಸುತ್ತಾರೆ. ತಮ್ಮ ಅಂಗಾಂಗಗಳನ್ನು ದಾನ ಮಾಡಿ ಎಲ್ಲರಿಗೂ ಮಾದರಿ ಆಗಿದ್ದಾರೆ. ತಮ್ಮ ಬದುಕಿನ ಆಯಸ್ಸು ಮುಗಿದ ಮೇಲೆ ಇಲ್ಲಿನ ಗ್ರಾಮಸ್ಥರು ಮೆಡಿಕಲ್ ರಿಸರ್ಚ್​ಗಾಗಿ ದೇಹವನ್ನು ದಾನ ಮಾಡುವ ನಿರ್ಧಾರ ಕೂಡ ಮಾಡಿದ್ದಾರೆ. ಇಲ್ಲಿನ ಗ್ರಾಮಸ್ಥರು ಆರೋಗ್ಯವೇ ಭಾಗ್ಯ ಅನ್ನುವುದನ್ನು ಎಲ್ಲರಿಗೂ ತಿಳಿಹೇಳುತ್ತಿದ್ದಾರೆ.

“ ಗ್ರಾಮದ ಸುಮಾರು 410 ಜನರು ದೇಹ ಮತ್ತು ಅಂಗಾಂಗಗಳ ದಾನ ಮಾಡಿದ್ದಾರೆ. ಇಲ್ಲಿನ ಗ್ರಾಮಸ್ಥರ ಆರೋಗ್ಯದ ಬಗ್ಗೆಯೂ ಕಾಳಜಿವಹಿಸಿಕೊಳ್ಳುತ್ತಿದ್ದಾರೆ. ಧೂಮಾಪಾನ, ತಂಬಾಕು ಮತ್ತು ಕುಡಿತವನ್ನು ಈ ಗ್ರಾಮಸ್ಥರೇ ನಿಷೇಧಿಸಿದ್ದಾರೆ ”
ಭಾಗ್ಯಶ್ರೀ ಚಾಮೆ, ಆನಂದವಾಡಿ ಸರಪಂಚ್

ಒಟ್ಟಿನಲ್ಲಿ ಆನಂದವಾಡಿಯ ಗ್ರಾಮಸ್ಥರು ಎಲ್ಲರಿಗೂ ವಿವಿಧ ರೀತಿಯಲ್ಲಿ ಮಾದರಿ ಆಗಿದ್ದಾರೆ. ಶೈಕ್ಷಣಿಕ ಲೆಕ್ಕಾಚಾರದಲ್ಲಿ ಇಲ್ಲಿನ ಗ್ರಾಮಸ್ಥರು ಒಂದು ಹೆಜ್ಜೆ ಹಿಂದೆ ಇದ್ದರೂ, ಬುದ್ಧಿವಂತಿಕೆ ಮತ್ತು ಸಾಮಾಜಿಕ ಕೆಲಸಗಳ ಮೂಲಕ ಉಳಿದೆಲ್ಲರಿಗಿಂತ ಸಾಕಷ್ಟು ಮುಂದೆ ನಿಲ್ಲುತ್ತಾರೆ.  

ಇದನ್ನು ಓದಿ:

1. ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇದಿದರೆ ಜೋಕೇ..!

2. ಮಹಿಳೆಯರ ಎಚ್ಚರ..! ಸ್ತನ ಕ್ಯಾನ್ಸರ್​ ಮಹಾಮಾರಿಯಾಗುತ್ತಿದೆ..!

3. ವಿಶೇಷ ಚೇತನರ ವಿಶೇಷ ಮದುವೆ- ದಾಂಪತ್ಯ ಜೀವನಕ್ಕೆ ಕಾಲಿಟ್ಟ 104 ಜೋಡಿಗಳು