ಮಹಿಳಾ ಪುರೋಹಿತೆ ಮನೀಶಾ ಶೇಟ್

ಟೀಮ್​​ ವೈ.ಎಸ್​​.

0

ಜೀ ಮರಾಠಿಯಲ್ಲಿ ಪ್ರಸಾರವಾಗುವ ಐಸೆ ಹೇ ಕನ್ಯಾದಾನ್ ವೇದಿಕೆ ಮೂಲಕ ಕಾರ್ತಿಕ್ ಮತ್ತು ಗಾಯಿತ್ರಿ ಇತ್ತೀಚೆಗಷ್ಟೇ ವಿವಾಹವಾದರು. ಇದು ಆಶ್ಚರ್ಯಕರವಾದ ವಿಚಾರ. ಇದು ರೀಲ್ ಅನ್ಸಿದ್ರೂ ಇವರ ವಿವಾಹ ಸಾಂಪ್ರದಾಯಿಕ ರೀತಿಯಲ್ಲೇ ನಡೆಯಿತು.

ಪುಣೆ ಮೂಲದ 46 ವರ್ಷದ ಮನಿಶಾ ಶೇಟ್ ಕಳೆದ 8 ವರ್ಷಗಳಿಂದ ಈ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಮನೀಶಾ ತಮ್ಮ ಜೀವನದಲ್ಲಿ ಇಬ್ಬರನ್ನು ಗುರುಗಳನ್ನಾಗಿ ಆರಿಸಿಕೊಂಡಿದ್ದಾರೆ. ಸಂಪ್ರದಾಯಗಳನ್ನು ಅನುಸರಿಸಲು ಈ ಇಬ್ಬರು ಗುರುಗಳು ಇವರಿಗೆ ಮಾರ್ಗದರ್ಶನ ಮಾಡಿದ್ದಾರೆ.

ಮನೀಶಾ ಅವರು ಅರ್ಥಶಾಸ್ತ್ರದ ಪದವೀಧರೆಯಾಗಿದ್ದು, ಇಂಡೋಲಜಿ( ಇತಿಹಾಸ ಮತ್ತು ಸಂಪ್ರದಾಯಗಳು ಹಾಗೂ ಭಾರತ ಉಪಖಂಡ ಭಾಗದ ಭಾಷೆಗಳು ಮತ್ತು ಸಾಹಿತ್ಯದ ಅಧ್ಯಯನ)ಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಅಲ್ಲದೇ ಮಹಾರಾಷ್ಟ್ರದ ಪುಣೆಯ ಜ್ಞಾನ ಪ್ರಭೋದಿನಿಯಲ್ಲಿ ಸಂಪ್ರದಾಯಗಳ ಕುರಿತು ಸಂಶೋಧನೆಯನ್ನೂ ಮಾಡಿದ್ದಾರೆ. ಶಿಕ್ಷಣ, ಸಂಶೋಧನೆ, ಮಹಿಳೆಯರ ಶಕ್ತಿ ಮುಂತಾದ ವಿಚಾರಗಳ ಕುರಿತು ಭಾರತದ ಒಳ್ಳೆಯ ಭವಿಷ್ಯಕ್ಕಾಗಿ ಬದಲಾವಣೆ ಎಂಬ ದೃಷ್ಟಿಕೋನ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ ಜ್ಞಾನ ಪ್ರಬೋಧಿನಿ ಸಂಸ್ಥೆ.

ಜ್ಞಾನ ಪ್ರಬೋಧಿನಿಯಲ್ಲಿ ಸಂಪ್ರದಾಯಗಳನ್ನು ಅನುಸರಿಸುವುದರ ಪ್ರಾಮುಖ್ಯತೆ, ಸಂಪ್ರದಾಯಗಳ ಹಿಂದಿರುವ ಕಾರಣಗಳ ಬಗ್ಗೆ ತರಬೇತಿ ನೀಡುವ ಕೋರ್ಸ್‌ ಆರಂಭವಾಯಿತು. ಈ ಕೋರ್ಸ್‌ನಿಂದ ಮನೀಶಾ ಪ್ರಭಾವಿತರಾದರು. ಸಂಪ್ರದಾಯಗಳನ್ನು ವಿರೋಧಿಸುವ ನಿರೀಶ್ವರವಾದಿಗಳಿಗೆ ಈ ಕೋರ್ಸ್ ಸಂಪ್ರದಾಯಗಳ ಹಿಂದಿರುವ ವೈಜ್ಞಾನಿಕ ಕಾರಣಗಳನ್ನು ತಿಳಿಸಿಕೊಡುತ್ತದೆ ಎನ್ನುತ್ತಾರೆ ಮನೀಶಾ.

ಮನೀಶಾ ಪೌರೋಹಿತ್ಯ ಕಲಿಯುತ್ತೇನೆ ಎಂದು ಮನೆಯಲ್ಲಿ ತಿಳಿಸಿದಾಗ ಮನೆಯವರಿಗೆಲ್ಲಾ ಸ್ವಲ್ಪ ಆಘಾತವಾಯಿತು. ನನಗೇನೋ ಆಗಿದೆ, ಇಲ್ಲದಿದ್ದರೆ ನಾನು ಇಂತಹ ನಿರ್ಧಾರ ಕೈಗೊಳ್ಳುತ್ತಿರಲಿಲ್ಲ. ಇಂತಹ ಕೋರ್ಸ್‌ಗಳನ್ನು ಮಹಿಳೆಯರು ಮಾಡುತ್ತಿರಲಿಲ್ಲ. ಮಾಡಬಾರದು ಎಂಬುದು ಮನೆಯವರ ಅಭಿಮತವಾಗಿತ್ತು ಎಂದು ತಿಳಿಸುತ್ತಾರೆ ಮನೀಶಾ. ಆದರೆ ಮನೆಯವರ ಮನವೊಲಿಸಿದ ಮನೀಶಾ ಈ ಕೋರ್ಸ್‌ಗೆ ಸೇರಿಕೊಂಡರು.

ಪುರೋಹಿತರಾಗಿ ಮೊದಲ ಅನುಭವ

ಪುಣೆಯ ಕುಟುಂಬವೊಂದರಲ್ಲಿ ಸಾವನ್ನಪ್ಪಿದ್ದ ವ್ಯಕ್ತಿಯ ಅಂತಿಮ ಸಂಸ್ಕಾರ ಮಾಡಿದ್ದು ಮನೀಶಾರ ಮೊದಲ ಅನುಭವ. “ತುಂಬಾ ಜಾಗ್ರತೆಯಿಂದ, ಪ್ರತಿಯೊಂದು ಸರಿಯಾಗಲೇಬೇಕೆಂಬ ತವಕದಿಂದ ಕಾರ್ಯನಿರ್ವಹಿಸಿದ್ದೆ. ನನ್ನನ್ನು ಎಲ್ಲರೂ ಗಮನಿಸುತ್ತಿರುತ್ತಾರೆ ಮತ್ತು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೋ ಇಲ್ಲವೋ ಎಂಬುದನ್ನು ನೋಡುತ್ತಿರುತ್ತಾರೆ ಎಂಬುದು ನನ್ನನ್ನು ಎಚ್ಚರಿಕೆಯಿಂದ ಇರುವ ಹಾಗೆ ಮಾಡಿತ್ತು. ಆದರೆ ಎಲ್ಲವೂ ಸರಿಯಾಗಿ ನಡೆದಿತ್ತು. ಮನಸ್ಸಿಗೆ ತೃಪ್ತಿಯಾಯಿತು ಎಂದು ಆ ಕುಟುಂಬದವರು ಹೇಳಿದ್ದರು” ಎಂದು ಮನೀಶಾ ನೆನಪಿಸಿಕೊಳ್ಳುತ್ತಾರೆ.

ಅಲ್ಲಿಂದ ಮನೀಶಾ ಹಿಂತಿರುಗಿ ನೋಡಿದ್ದೇ ಇಲ್ಲ. ನಾಮಕರಣ, ವಿವಾಹ, ಅಂತಿಮ ಸಂಸ್ಕಾರದಂತಹ ಕಾರ್ಯಗಳಿಗೆ ಮನೀಶಾ ಪೌರೋಹಿತ್ಯ ಮಾಡಿದ್ದಾರೆ.

ಮನೀಶಾರ ಪತಿ ಪ್ರಿಂಟಿಂಗ್ ಉದ್ಯಮ ನೋಡಿಕೊಳ್ಳುತ್ತಿದ್ದು, ಅವರಿಗೆ ಸರಿಯಾದ ಆದಾಯವಿರಲಿಲ್ಲ. ಹೀಗಾಗಿ ಮನೆಯ ಜವಾಬ್ದಾರಿ ತೆಗೆದುಕೊಂಡ ಮನೀಶಾ ಒಂದರ್ಥದಲ್ಲಿ ಮನೆಯ ಯಜಮಾನರೇ ಆದರು. ಮನೀಶಾರಿಗೆ ಇಬ್ಬರು ಮಕ್ಕಳು. 21 ವರ್ಷದ ಮಗಳು ಸ್ನಾತಕೋತ್ತರ ಪದವಿಯನ್ನು ಕಲಿಯುತ್ತಿದ್ದು, 17 ವರ್ಷದ ಮಗ 12ನೇ ತರಗತಿಯಲ್ಲಿ ಓದುತ್ತಿದ್ದಾರೆ.

ಮನೀಶಾರ ವಿಭಿನ್ನ ಅಭ್ಯಾಸ

ಮನೀಶಾ ಸಂಪ್ರದಾಯಗಳನ್ನು ಇಂಗ್ಲೀಷ್‌ನಲ್ಲಿ ನೆರವೇರಿಸುತ್ತಾರೆ. ಜಾಗತೀಕರಣದೊಂದಿಗೆ ಕುಟುಂಬ ಸದಸ್ಯರುಗಳು ಪ್ರಪಂಚದ ಬೇರೆ ಬೇರೆ ಮೂಲೆಯಲ್ಲಿ ವಾಸಿಸುತ್ತಿದ್ದಾರೆ. ಆದರೂ ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಮೂಲನಂಟಿನೊಂದಿಗೆ ಸಂಪರ್ಕ ಹೊಂದಿರಲು ಇಚ್ಛಿಸುತ್ತಾರೆ. ಹೀಗಾಗಿ ಸಂಪ್ರದಾಯಗಳನ್ನು ಇಂಗ್ಲೀಷ್‌ನಲ್ಲಿ ವಿವರಿಸಿ ಸಮಾರಂಭಗಳನ್ನು ನೆರವೇರಿಸುತ್ತೇನೆ ಎನ್ನುತ್ತಾರೆ ಮನೀಶಾ.

ವಿವಾಹದಲ್ಲಿ ಧಾರೆ ಎರೆಯುವಂತಹ ಸಂದರ್ಭದಲ್ಲಿ ಅಮೆರಿಕಾದಲ್ಲಿ ವಾಸಿಸುತ್ತಿರುವ ಹಿಂದೂ ಹುಡುಗನಿಗೆ ಹಾಗೂ ಅಂತರ್‌ ಸಮುದಾಯ ಮತ್ತು ಅಂತರ್ ಸಂಸ್ಕೃತಿಯ ವಿವಾಹಗಳನ್ನು ನೆರವೇರಿಸುವಾಗ ಮನೀಶಾ ಇಂಗ್ಲೀಷ್‌ನಲ್ಲಿ ವಿವರಣೆ ನೀಡುತ್ತಾರೆ. ಇದರಿಂದ ಅವರೆಲ್ಲರಿಗೂ ಸಂತಸವಾಗಿದೆ. ಇಲ್ಲಿಯವರೆಗೆ ಮನೀಶಾ 25 ವಿಭಿನ್ನ ವಿವಾಹಗಳಿಗೆ ಪೌರೋಹಿತ್ಯ ನೆರವೇರಿಸಿದ್ದಾರೆ.

ವೃತ್ತಿಜೀವನದ ಗುರಿ

ಮನೀಶಾ ಯಾವುದೇ ಸ್ಥಳಕ್ಕೆ ಪೂಜೆಗಾಗಿ ತೆರಳಿದರೂ ಅಲ್ಲಿನ ಜನರಿಗೆ ಪೂಜಾಕತೃಗಳಿಗೆ ಶ್ಲೋಕ ಹಾಗೂ ಸಂಪ್ರದಾಯಗಳ ಅರ್ಥವನ್ನು ವಿವರಿಸಲು ಇಚ್ಛಿಸುತ್ತಾರೆ. ಹೀಗಾಗಿ ಮನೆಯ ಎಲ್ಲಾ ಸದಸ್ಯರೂ ಪೂಜೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ ಎನ್ನುತ್ತಾರೆ ಮನೀಶಾ.

ಒಮ್ಮೆ ಪತಿಯೊಂದಿಗೆ ಉತ್ತಮ ಬಾಂಧವ್ಯ ಹೊಂದದಿರುವ ಮಹಿಳೆಯೊಬ್ಬರು, ಮಗಳನ್ನು ವರನಿಗೊಪ್ಪಿಸಲು ಮತ್ತು ಕನ್ಯಾದಾನ ಮಾಡಲು ಪತಿಯೊಂದಿಗೆ ಇರಬೇಕಾದ ಅಗತ್ಯ ಇದೆಯೇ ಎಂದು ಪ್ರಶ್ನಿಸಿದರು. ಈ ಸಂಪ್ರದಾಯದಲ್ಲಿ ತಂದೆಯೇ ಮಗಳನ್ನು ಕನ್ಯಾದಾನ ಮಾಡಬೇಕೆಂಬ ಪುರುಷ ಪ್ರಧಾನ ಸಮಾಜದ ನಿಲುವಿನಿಂದ ಹೊರಬರಲು ಸಾಧ್ಯವೇ ಇಲ್ಲವೇ? ಎಂದು ಪ್ರಶ್ನಿಸಿದ್ದರು. ತಾವೊಬ್ಬರೇ ಕನ್ಯಾದಾನ ಮಾಡಬೇಕು ಎಂಬುದು ಆಕೆಯ ಇಚ್ಛೆಯಾಗಿತ್ತು. ಆಕೆಯ ಇಚ್ಛೆಯಂತೆಯೇ ಕನ್ಯಾದಾನ ಪ್ರಕ್ರಿಯೆಯನ್ನು ಪೂರೈಸಲಾಯಿತು.ಇದರಿಂದ ಆ ಮಹಿಳೆ ತುಂಬಾ ಸಂತೋಷಪಟ್ಟರು. ಆಗ ಆಕೆಯ ಕಣ್ಣಲ್ಲಿ ಇಳಿದ ಆನಂದಭಾಷ್ಪಕ್ಕೆ ಯಾರೂ ಬೆಲೆ ಕಟ್ಟಲು ಸಾಧ್ಯವಿಲ್ಲವೆಂಬುದನ್ನು ಮನೀಶಾ ನೆನಪಿಸಿಕೊಳ್ಳುತ್ತಾರೆ.

ಪುಣೆಯಲ್ಲಿ ಮಾತ್ರವಲ್ಲದೇ ಮಹಾರಾಷ್ಟ್ರದ ಅನೇಕ ಭಾಗಗಳಲ್ಲಿ ಮನೀಶಾ ಪೌರೋಹಿತ್ಯ ನಡೆಸಿದ್ದಾರೆ. ಕೊಲ್ಹಾಪುರ, ನಾಸಿಕ್, ಮುಂಬೈ, ದೆಹಲಿ, ಇಂದೋರ್, ಜೈಪುರ, ಬೆಂಗಳೂರು ಹಾಗೂ ಗುಜರಾತ್‌ನಲ್ಲೂ ಮನೀಶಾ ಪೌರೋಹಿತ್ಯ ಮಾಡಿದ್ದಾರೆ.

ಸ್ತ್ರೀವಾದ ಮತ್ತು ಮಹಿಳಾ ಸ್ವಾತಂತ್ರ್ಯದ ಬಗ್ಗೆ ಎಷ್ಟೇ ವಾದಿಸಿದರೂ ಸಂಪ್ರದಾಯಗಳ ಆಚರಣೆಯಲ್ಲಿ ಮಹಿಳೆಯನ್ನು ಹೊರಗಿಡಲಾಗಿದೆ ಎಂಬ ವಿಚಾರ ಮನೀಶಾರನ್ನು ಕಾಡುತ್ತಿರುತ್ತದೆ. ಇದು ಸರಿಯಲ್ಲ, ಸಂಪ್ರದಾಯಗಳ ಆಚರಣೆಯಲ್ಲಿ ಮಹಿಳೆಗೂ ಸಮಾನ ಅವಕಾಶ ಇರಬೇಕು ಎಂದು ಮನೀಶಾ ವಾದಿಸುತ್ತಾರೆ.

ಸಂಪ್ರದಾಯಗಳ ಆಚರಣೆಯಲ್ಲಿ ಮಹಿಳೆಯರಿಗೆ ಋತುಚಕ್ರ ಅಡ್ಡಬರುತ್ತದೆ. ಮಹಿಳೆಯರಲ್ಲಿ ಇಂದೊಂದು ಸ್ವಾಭಾವಿಕ ಪ್ರಕ್ರಿಯೆ. ಇದರಿಂದ ಮಹಿಳೆಯ ದೇಹದಲ್ಲಿ ಸಾಕಷ್ಟು ವ್ಯತ್ಯಾಸವಾಗುತ್ತದೆ. ಇದನ್ನು ಬಹಳ ಸ್ವಾಭಾವಿಕವಾಗಿಯೇ ತೆಗೆದುಕೊಳ್ಳಬೇಕು. ಈ ಕಾರಣಕ್ಕಾಗಿ ಮಹಿಳೆಯನ್ನು ಸಂಪ್ರದಾಯಗಳ ಆಚರಣೆಯಿಂದ ಹೊರಗಿಡಬೇಕೇಕೆ? ಎಂದು ಮನೀಶಾ ಪ್ರಶ್ನಿಸುತ್ತಾರೆ.

ಇದೇ ಕಾರಣದಿಂದ ತಮ್ಮ ಪೌರೋಹಿತ್ಯ ವೃತ್ತಿಯನ್ನು ಕನಿಷ್ಠ 10 ವರ್ಷಗಳ ಕಾಲ ಮುಂದುವರಿಸಲೇಬೇಕೆಂದು ಮನೀಶಾ ಹಠತೊಟ್ಟಿದ್ದಾರೆ.ಈ ಮೂಲಕ ಸನಾತನ ಸಂಪ್ರದಾಯ, ಸಂಸ್ಕೃತಿಗಳ ಆಚರಣೆಯಲ್ಲಿ ಮಹಿಳೆಯರಿಗೂ ಸ್ಥಾನ ಸಿಗುವಂತೆ ಮಾಡಬೇಕೆಂಬುದು ಮನೀಶಾರ ಗುರಿ.

ಇದಲ್ಲದೇ ಮರಾಠಿಯಲ್ಲಿ ಬರೆಯುತ್ತಿರುವ ಥೀಸಿಸ್ ಮೇಲೂ ಮನೀಶಾ ಕೆಲಸ ಮಾಡುತ್ತಿದ್ದಾರೆ. ಭಾರತದ ಬಹುತೇಕ ಎಲ್ಲಾ ದೇವಾಲಯಗಳಲ್ಲಿ ಕಂಡುಬರುವ ಕೂರ್ಮಾವತಾರದ ಕುರಿತು “ಭಾರತೀಯ ಸಂಸ್ಕೃತಿಯಲ್ಲಿ ಆಮೆಗಳು” ಎಂಬ ಅಧ್ಯಯನ ಮಾಡುತ್ತಿದ್ದಾರೆ.