ಹೆಣ್ಣು ಮಕ್ಕಳ ಕಲ್ಯಾಣ : ಮೋದಿ ಸರ್ಕಾರದ ಸಾಧನೆಯ ಪರಿಚಯ..!

ಟೀಮ್​​ ವೈ.ಎಸ್​. ಕನ್ನಡ

0

ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಗೌರವದ ಸ್ಥಾನ. ಪೂಜ್ಯ ಭಾವನೆ. ನಮ್ಮ ಸಂಸ್ಕೃತಿ, ಸಾಹಿತ್ಯ ಕೂಡ ಮಹಿಳೆಯರನ್ನು ಕೇಂದ್ರೀಕರಿಸಿ ಬೆಳೆದಿದೆ. ಪಸರಿಸಿದೆ. ಪರಿಸ್ಥಿತಿ ಹೀಗಿದ್ದರೂ ವರ್ತಮಾನದಲ್ಲಿ , ದಿನ ನಿತ್ಯದ ಬದುಕಿನಲ್ಲಿ ಹೆಚ್ಚಿನವರಿಗೆ ಮಹಿಳೆಯರು ಎಂದರೆ ನಿಕೃಷ್ಟ ಭಾವನೆ. ಹೆಣ್ಣು ಶಿಶು ಜನಿಸಿದ ಕೂಡಲೇ ಮನೆಗೆ ಭಾರ ಎಂಬ ಧೋರಣೆ. ಇದು ದೇಶದಲ್ಲಿ ಹಲವು ದುಷ್ಪರಿಣಾಮಗಳನ್ನು ಬೀರಿದೆ. ಇದನ್ನು ಮನಗಂಡು ಕೇಂದ್ರ ಸರ್ಕಾರ, ಅದರಲ್ಲೂ ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ಮಹತ್ವಾಂಕ್ಷೆ ಯೋಜನೆಗಳನ್ನು ಜಾರಿಗೊಳಿಸಿದೆ.

ಪ್ರಧಾನಿ ಅವರು ತಮ್ಮ ಬಜೆಟ್ ನಲ್ಲಿ ಮಹಿಳೆಯರ ಕಲ್ಯಾಣಕ್ಕಾಗಿ 200 ಕೋಟಿ ರೂಪಾಯಿ ಮೀಸಲಿಟ್ಟಾಗ ಈ ಅಲ್ಪ ಮೊತ್ತ ಸಾಕಾಗುವುದೇ ಎಂದು ನನ್ನನ್ನು ನಾನು ಪ್ರಶ್ನಿಸಿದ್ದೆ. ಯಾಕೆಂದರೆ ಉಕ್ಕಿನ ಮನುಷ್ಯ ಸರ್ದಾರ್ ವಲಭ ಭಾಯ್ ಪಟೇಲ್ ಅವರ ಪ್ರತಿಮೆ ನಿರ್ಮಾಣಕ್ಕೆ ಕೂಡ ಸರ್ಕಾರ ಇಷ್ಟೇ ಮೊತ್ತವನ್ನು ಮೀಸಲಿರಿಸಿತ್ತು.

ಆದರೆ ಈ ಕುರಿತಂತೆ ಹೆಚ್ಚಿನ ಅಧ್ಯಯನ ಮತ್ತು ವಿಶ್ಲೇಷಣೆ ಆರಂಭಿಸಿದ ಬಳಿಕ ದೇಶದಲ್ಲಿ ಶತ ಶತಮಾನಗಳಿಂದ ಮಹಿಳೆಯರು ಎದುರಿಸುತ್ತಿರುವ ತಾರತಮ್ಯ, ದೌರ್ಜನ್ಯ, ಮೂದಲಿಕೆ ಹಾಗೂ ಅವಹೇಳನ ಈ ಎಲ್ಲವನ್ನೂ ತಡೆಗಟ್ಟುವ ನಿಟ್ಟಿನಲ್ಲಿ ವ್ಯವಸ್ಥಿತ ಪ್ಲಾನ್ ಸಿದ್ಧಪಡಿಸಿರುವುದು ಗಮನಕ್ಕೆ ಬಂತು. ಮಹಿಳೆಯರನ್ನು ಸಶಕ್ತಗೊಳಿಸುವ ಚಿಂತನೆಗೆ ಜೀವ ಬಂದಿತ್ತು.

ಮಹಿಳೆಯರ ಅಭಿವೃದ್ದಿಗೆ ಕೇಂದ್ರ ಸರ್ಕಾರ ಯಾವೆಲ್ಲ ಕ್ರಮ ಕೈಗೊಂಡಿದೆ. ಅದರ ಪರಿಣಾಮಗಳು ಏನು ಎಂಬ ಬಗ್ಗೆ ಒಂದು ಸಂಕ್ಷಿಪ್ತ ಪರಿಚಯ ಇಲ್ಲಿದೆ.

ಬೇಟಿ ಬಚಾವೋ ಬೇಟಿ ಪಢಾವೋ..

ದೇಶದಲ್ಲಿ ಹೆಚ್ಚುತ್ತಿರುವ ಲಿಂಗ ಅಸಮಾನತೆ ಕೇಂದ್ರ ಸರ್ಕಾರದ ಕಳವಳಕ್ಕೆ ಕಾರಣವಾಗಿದೆ. ಮಹಿಳೆಯರ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿರುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವದ ಯೋಜನೆಯೇ ಬೇಟಿ ಬಚಾವೋ ಬೇಟಿ ಪಢಾವೋ. ಮಹಿಳೆಯೊಬ್ಬರು ಕಲಿತರೆ, ಮನೆ ಇಡೀ ಕಲಿತಂತೆ ಎಂಬ ನಾಣ್ಣುಡಿ ಇಲ್ಲಿ ಸ್ಮರಣಾರ್ಹ. ಹೆಣ್ಣು ಮಕ್ಕಳ ಸಂಖ್ಯೆ ಕುಸಿಯುವುದನ್ನು ತಡೆಗಟ್ಟಬೇಕು. ಅವರನ್ನು ಸಶಕ್ತಗೊಳಿಸಬೇಕು. ಅವರು ತಮ್ಮ ಕಾಲ ಮೇಲೆ ನಿಲ್ಲಬೇಕು. ಇದು ಸರ್ಕಾರದ ಕನಸು.

ಹೆಣ್ಣು ಮಕ್ಕಳ ಶಿಕ್ಷಣ, ಹೆಣ್ಣು ಮಕ್ಕಳ ರಕ್ಷಣೆ ಇದೀಗ ರಾಷ್ಟ್ರೀಯ ಆಂದೋಲನದ ಸ್ವರೂಪ ಪಡೆದುಕೊಂಡಿದೆ. ನೂರು ಕೋಟಿ ರೂಪಾಯಿ ಅನುದಾನದಲ್ಲಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ದೇಶದ ನೂರು ಜಿಲ್ಲೆಗಳಲ್ಲಿ ಇದು ಕಾರ್ಯರೂಪಕ್ಕೆ ಬಂದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹುಟ್ಟುವ ಮೊದಲೆ ಲಿಂಗ ಪತ್ತೆ ಪರೀಕ್ಷೆ ಗೆ ತಡೆ, ಕಂದಾಚಾರಗಳಿಗೆ ಪೂರ್ಣ ಗುಡ್ ಬೈ, ಸಶಕ್ತ ಮಹಿಳೆ ದೇಶದ ಶಕ್ತಿ ಹೀಗೆ ಹತ್ತು ಹಲವು ಯೋಜನೆಗಳು ಇದರ ಅಂತರ್ಗತ ಭಾಗವಾಗಿವೆ. ಹೆಣ್ಣು ಮಕ್ಕಳ ವಿರುದ್ಧದ ದೌರ್ಜನ್ಯ ತಡೆಗೆ ಕಠಿಣ ಕಾನೂನು, ಅತ್ಯಾಚಾರ ತಡೆಗೆ ಪೋಸ್ಕೊ ಬಳಕೆ, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯ ಹೀಗೆ ಹಲವು ಕಾರ್ಯಕ್ರಮಗಳ ಅನುಷ್ಠಾನ ಈ ನಿಟ್ಟಿನಲ್ಲಿ ಸಾಗಿದೆ. ಮಹಿಳೆಯರ ವಿರುದ್ಧ ದೌರ್ಜನ್ಯ ತಡೆಗೆ ಕಾರ್ಯಪಡೆ ಕೂಡ ಜಾರಿಗೆ ಬಂದಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಕಾರ್ಯಕ್ರಮ ಕುರಿತಂತೆ ಬಳಕೆದಾರರ ಹಕ್ಕಿನ ಹೋರಾಟಗಾರ್ತಿ ಹಾಗೂ ಕ್ರಿಮಿನಲ್ ವಕೀಲೆ ಕೂಡ ಆಗಿರುವ ಪೂಜಾ ತೆರ್ವಾಡ್ ಈ ರೀತಿ ಹೇಳುತ್ತಾರೆ. ಸ್ಥಳೀಯ ಮಟ್ಟದಲ್ಲಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಸ್ಥಳೀಯರನ್ನು ಅದರಲ್ಲಿ ಉತ್ತರದಾಯಿತ್ವರನ್ನಾಗಿ ಮಾಡಲಾಗುತ್ತಿದೆ. ಇದು ನಿಜವಾಗಿಯೂ ಒಳ್ಳೆಯ ಕಲ್ಪನೆ. ಇದರಿಂದ ಬದಲಾವಣೆ ಗಳನ್ನು ಗುರುತಿಸಬಹುದಾಗಿದೆ ಎನ್ನುತ್ತಾರೆ ಪೂಜಾ.

ಇನ್ನು ಕೆಲವು ಮಹಿಳಾ ಹೋರಾಟಗಾರ್ತಿಯರು ಕೂಡ ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೇವಲ ನಿಧಿ ಬಿಡುಗಡೆ ಮಾಡಿದರೇ ಸಾಲದು. ಸರಿಯಾದ ದಿಕ್ಕಿನಲ್ಲಿ ಯೋಜನೆ ಜಾರಿಯಾಗಬೇಕು. ತಳಮಟ್ಟದಲ್ಲಿ ಅಂದರೆ ಗ್ರಾಮ ಪಂಚಾಯತ್ ಗಳನ್ನು ಇದರ ಅನುಷ್ಠಾನದಲ್ಲಿ ಸೇರಿಸಬೇಕು. ಮಹಿಳೆಯರ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹಲವರು ಅಭಿಪ್ರಾಯಪಡುತ್ತಾರೆ.

ಒಂದು ನಿಲ್ದಾಣ ಯೋಜನೆ

ಒಂದು ಕೇಂದ್ರೀಕೃತ ಯೋಜನೆ ಜಾರಿಗೆ ತರುವುದರ ಮೂಲಕ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ಸಾಧ್ಯ. ಇದು ಕೇಂದ್ರ ಸರ್ಕಾರದ ಚಿಂತನೆ. ಈ ನಿಟ್ಟಿನಲ್ಲಿ ಸಂತ್ರಸ್ತ ಮಹಿಳೆಯರಿಗೆ ಅಗತ್ಯ ನೆರವು ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಯೇ ಒನ್ ಸ್ಟೋಪ್ ಸೆಂಟರ್. ಅದನ್ನು ಸರಳವಾಗಿ ಒಂದು ಕೇಂದ್ರ ಯೋಜನೆ ಎಂದು ಕೂಡ ಹೇಳ ಬಹುದಾಗಿದೆ.

ದೇಶಾದ್ಯಂತ ಜಾಲಗಳನ್ನು ಸಂಯೋಜಿಸಿ ಅಗತ್ಯ ನೆರವು ನೀಡುವುದು ಇದರಲ್ಲಿ ಸೇರಿದೆ. ಇದಕ್ಕಾಗಿ 18. 58 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. 2015ರ ಎಪ್ರಿಲ್ ನಲ್ಲಿ ಇದು ಜಾರಿಗೆ ಬಂದಿದೆ.

ದೌರ್ಜನ್ಯಕೊಳಗಾದ ಮಹಿಳೆಯರಿಗೆ ಎಲ್ಲ ವಿಧದ ಸಹಾಯ, ನೆರವು ನೀಡುವುದು ಈ ಕೇಂದ್ರದ ಮೂಲ ಉದ್ದೇಶ. ಮಾನಸಿಕ ಆಘಾತದಿಂದ ಜರ್ಜರಿತವಾಗಿರುವವರಿಗೆ ಸಾಂತ್ವನ, ಸಮಾಲೋಚನೆ ಸೇವೆ ಕೂಡ ಇದರಲ್ಲಿ ಅಡಗಿದೆ. ಮಹಿಳೆಯರಿಗೆ ಸಾರ್ವತ್ರಿಕ ಸಹಾಯವಾಣಿ ಸೇವೆ ಒದಗಿಸುವುದು ಇದರಲ್ಲಿ ಸೇರಿದೆ. ಈಗಿರುವ 181 ಮತ್ತು 1091ನ್ನು ಕೂಡ ಇದರಲ್ಲಿ ಸೇರಿಸಲು ಚಿಂತಿಸಲಾಗಿದೆ.

ಮಹಿಳೆಯರ ಮಾತು..

ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದನ್ನು ಕೇಂದ್ರ ಸರ್ಕಾರ ಕೊನೆಗೂ ಒಪ್ಪಿಕೊಂಡಿದೆ. ಇದು ಮಹಿಳೆಯರ ರಕ್ಷಣೆ ನಿಟ್ಟಿನಲ್ಲಿ ಉತ್ತಮ ಬೆಳವಣಿಗೆ ಎನ್ನುತ್ತಾರೆ ಪೂಜಾ. ಮುಖ್ಯವಾಗಿ ದೈಹಿಕ ಮತ್ತು ಮಾನಸಿಕ ದೌರ್ಜನ್ಯಕ್ಕೆ ಮಹಿಳೆ ತುತ್ತಾಗುತ್ತಿದ್ದಾಳೆ.. ಹೀಗಂತಾ ಮಾಹಿತಿ ನೀಡುತ್ತಾರೆ ಪೂಜಾ.

ಇದರ ಜೊತೆ ಜೊತೆಗೆ ಇನ್ನೊಂದು ಮುಖದತ್ತ ಕೂಡ ಪೂಜಾ ಬೆಳಕು ಚೆಲ್ಲುತ್ತಾರೆ. ದೂರು ದಾಖಲಿಸುವ ಪ್ರಕ್ರಿಯೆಯಲ್ಲಿ ಮಹಿಳೆ ಅಂದರೆ ದೌರ್ಜನ್ಯಕ್ಕೊಳಗಾದ ಮಹಿಳೆ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಯಾಕೆಂದರೆ ಮನೋಸ್ಥಿತಿ ಬದಲಾಗಿಲ್ಲ. ಆಕೆಯನ್ನೇ ಸಂಶಯದಿಂದ ನೋಡಲಾಗುತ್ತಿದೆ. ವಿಚಾರಣೆ ಹೆಸರಿನಲ್ಲಿ ತೊಂದರೆಗೆ ಸಿಲುಕಿಸುತ್ತಾರೆ. ಮನಸ್ಸು ಇನ್ನಷ್ಟು ಜರ್ಜರಿತವಾಗುತ್ತದೆ ಎನ್ನುತ್ತಾರೆ ಪೂಜಾ.

ಈ ಅಂಶಗಳ ಆಧಾರದಲ್ಲಿ ಪ್ರಕರಣಗಳ ಇತ್ಯರ್ಥಕ್ಕೆ ಸ್ವತಂತ್ರ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಬೇಕು. ಇಲ್ಲವಾದರೆ ನಿರೀಕ್ಷಿತ ನ್ಯಾಯ ಅನುಮಾನ ಎನ್ನುತ್ತಾರೆ ಪೂಜಾ.

ಮಹಿಳಾ ಸಹಾಯವಾಣಿ ಯೋಜನೆ

ಸಂಕಷ್ಟದಲ್ಲಿರುವ ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 24 ಗಂಟೆ ತುರ್ತು ಮತ್ತು ಇತರ ಸೇವೆ ಒದಗಿಸುವ ಸಹಾಯವಾಣಿ ಆರಂಭಿಸಿದೆ. ಇದಕ್ಕಾಗಿ ಫೆಬ್ರವರಿ ತಿಂಗಳಲ್ಲಿ ಸರ್ಕಾರ 68 ಕೋಟಿ ರೂಪಾಯಿಗಳನ್ನು ಮೀಸಲಿರಿಸಿದೆ. ಮನೆ, ಕಚೇರಿ. ಸಾರ್ವಜನಿಕ ಸ್ಥಳ ಹೀಗೆ ಎಲ್ಲಿಯಾದರೂ ಕೂಡ ಮಹಿಳೆಯರ ಮೇಲೆ ದೌರ್ಜನ್ಯ ನಡೆದರೆ ತಕ್ಷಣ ಈ ಸಹಾಯವಾಣಿಯ ಮೊರೆ ಹೋಗಲು ಸಾಧ್ಯವಿದೆ. ಪ್ರಸಕ್ತ ಜಾರಿಯಲ್ಲಿರುವ 1091, 181 ಸಂಖ್ಯೆಯನ್ನು ಈ ಜಾಲಕ್ಕೆ ಸೇರಿಸಲು ಪ್ರಯತ್ನ ನಡೆಯುತ್ತಿದೆ.

ಪರಿಣಿತರ ಮಾತು

ನಾವಿಂದು ಅತ್ಯಾಧುನಿಕ ತಂತ್ರಜ್ಞಾನ ಲೋಕಕ್ಕೆ ಕಾಲಿರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಸಹಾಯವಾಣಿ ಕಲ್ಪನೆ ಹೆಚ್ಚಿನ ನೆರವು ನೀಡುವುದು ಅಸಾಧ್ಯ . ಇದು ಪೂಜಾ ಮಾತು. ಯಾಕೆಂದರೆ ಕಷ್ಟದ ಸಂದರ್ಭದಲ್ಲಿ ಆ ಮಹಿಳೆಗೆ ಸಹಾಯವಾಣಿ ಮೊರೆ ಹೋಗುವುದು ಕೂಡ ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಪೂಜಾ.

ನಾರಿ ಶಕ್ತಿ ಪುರಸ್ಕಾರ

ದೇಶದ ಪ್ರಗತಿಗೆ ಮಹಿಳೆಯರ ಕೊಡುಗೆಯನ್ನು ಗುರುತಿಸಿ ಗೌರವಿಸುವ ನಿಟ್ಟಿನಲ್ಲಿ ಮಹಿಳಾ ಶಕ್ತಿ ಪುರಸ್ಕಾರ ಎಂಬ ಘೋಷಣೆಯನ್ನು ಸರ್ಕಾರ ಮಾಡಿದೆ. ಅಂತಾರಾಷ್ಟ್ರೀಯ ಮಹಿಳಾ ದಿನದಂದು ಇದಕ್ಕೆ ಚಾಲನೆ ನೀಡಲಾಗಿದೆ. ದೇಶದ ಅಭಿವೃದ್ದಿಗೆ ಮಹಿಳೆಯರು ಗಮನಾರ್ಹ ಕೊಡುಗೆ ನೀಡುತ್ತಿದ್ದಾರೆ. ಅವರನ್ನು ಗೌರವಿಸುವುದು ಎಲ್ಲರ ಕರ್ತವ್ಯ ಎಂಬ ಜಾಗೃತಿ ಮೂಡಿಸಲು ಈ ಪ್ರಶಸ್ತಿ ಸ್ಥಾಪಿಸಲಾಗಿದೆ. ಈ ಹಿಂದಿನ ಸ್ರ್ರೀ ಶಕ್ತಿ ಪುರಸ್ಕಾರದ ಬದಲಾಗಿ ನಾರಿ ಶಕ್ತಿ ಪುರಸ್ಕಾರ ಪ್ರಶಸ್ತಿ ಪ್ರಕಟಿಸಲಾಗಿದೆ. 20 ಸಾಧಕ ಮಹಿಳೆಯರನ್ನು ನೂತನ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು.

ಲೇಖಕರು: ಬಿಂಜಾಲ್​ ಶಾ
ಅನುವಾದಕರು: ಎಸ್​​ಡಿ