ನನಸಾಯ್ತು ಉದ್ಯಮದ 'ಹೂ' ಕನಸು : ಕಾಶ್ಮೀರದ ಸಾಹಸಿ ಮಹಿಳೆಯ ಯಶೋಗಾಥೆ  

ಟೀಂ ವೈ.ಎಸ್.ಕನ್ನಡ 

2

ನುಸ್ರತ್ ಜಹಾಂ ಅರಾ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ದದೂರಾ ಗ್ರಾಮದ ನಿವಾಸಿ. 38ರ ಹರೆಯದ ನುಸ್ರತ್ ಕಂಪ್ಯೂಟರ್ ಪದವೀಧರೆ. ಸರ್ಕಾರಿ ಉದ್ಯೋಗದಲ್ಲೂ ಇದ್ರು. ಆದ್ರೆ 2010ರಲ್ಲಿ ಸ್ವಂತ ಉದ್ಯಮ ಆರಂಭಿಸುವ ಕನಸಿನೊಂದಿಗೆ ನುಸ್ರತ್ ಕೆಲಸಕ್ಕೆ ರಾಜೀನಾಮೆ ನೀಡಿದ್ರು. ತಮ್ಮ ಪೂರ್ವಜರ ಮನೆಯ ಹಿಂಭಾಗದಲ್ಲಿ ಹೂದೋಟವವೊಂದನ್ನು ಮಾಡಿದ್ರು. ಹೂಗಳನ್ನು ಬೆಳೆದು ಅವುಗಳನ್ನು ಮಾರಾಟ ಮಾಡಲು ಶುರು ಮಾಡಿದ್ರು. ಈಗ ನುಸ್ರತ್ ಹೂಗಳನ್ನು ಮಾರಾಟ ಮಾಡುವ ಯಶಸ್ವಿ ಕಂಪನಿಯೊಂದರ ಮಾಲೀಕರಾಗಿದ್ದಾರೆ. ಅಷ್ಟೇ ಅಲ್ಲ ಕಾಶ್ಮೀರ ಕಣಿವೆಯಲ್ಲಿ ಹೂವಿನ ಉದ್ಯಮದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಉದ್ಯಮವನ್ನು ಆರಂಭಿಸುವುದು ನಿಜಕ್ಕೂ ಅವರಿಗೆ ಕಷ್ಟವಾಗಿತ್ತು, ಯಾಕಂದ್ರೆ ಹೂಡಿಕೆದಾರರಿರಲಿಲ್ಲ, ಜೊತೆಗೆ ಯಾರ ಬೆಂಬಲವೂ ಇರಲಿಲ್ಲ. ಪುಟ್ಟದೊಂದು ಸ್ವಂತ ಉದ್ಯಮ ಆರಂಭಿಸಲು ನುಸ್ರತ್ ತಾವು ಕೂಡಿಟ್ಟ ಹಣವನ್ನೆಲ್ಲ ಖರ್ಚು ಮಾಡಿದ್ದಾರೆ. ``ಕಾಶ್ಮೀರದಲ್ಲಿ ಮಹಿಳೆಯರು ಪಾರ್ಲರ್ ಮತ್ತು ಬುಟಿಕ್ ಹೊರತಾಗಿ ಬೇರೆ ಏನನ್ನಾದ್ರೂ ಅಂದ್ರೆ ಹೂಗಳನ್ನು ಬೆಳೆಸುವುದು ಅಥವಾ ಕೃಷಿ ಮಾಡಲು ಮುಂದಾದ್ರೆ ಎಲ್ಲರೂ ವಿಚಿತ್ರವಾಗಿ ನೋಡ್ತಾರೆ. ಯಾರೂ ನಮಗೆ ನೆರವು ನೀಡಲು ಸಿದ್ಧರಿರುವುದಿಲ್ಲ, ಸರ್ಕಾರ ಕೂಡ'' ಅನ್ನೋದು ನುಸ್ರತ್ರ ಬೇಸರದ ನುಡಿ.

ಕಾಶ್ಮೀರದಲ್ಲಿ ಬೆಳೆದ ಹೂವುಗಳಿಗೆ ಭಾರೀ ಬೇಡಿಕೆ ಇದೆ ಅನ್ನೋದು ನುಸ್ರತ್​ಗೆ ಬಹುಬೇಗನೆ ಅರ್ಥವಾಯ್ತು. ಹಾಗಾಗಿ ಇಟ್ಟ ಹೆಜ್ಜೆ ಹಿಂದೆಗೆಯಲಿಲ್ಲ, ಹೂವಿನ ಉದ್ಯಮದಲ್ಲೇ ಯಶಸ್ವಿಯಾಗಬೇಕೆಂದು ನಿರ್ಧರಿಸಿದ್ರು. ಬ್ಯಾಂಕ್ ಸಾಲ ಪಡೆಯುವುದರಿಂದ ಹಿಡಿದು ವೆಂಡರ್​ಗಳ ಜೊತೆಗಿನ ಎಲ್ಲ ವ್ಯವಹಾರವನ್ನೂ ನುಸ್ರತ್ ಏಕಾಂಗಿಯಾಗಿ ನಿಭಾಯಿಸಿದ್ದಾರೆ. ಈಗ ಅವರ ಬಳಿ ಹೂವುಗಳ ಮೂರು ಹೂದೋಟಗಳಿವೆ. ಒಂದು ರಿಟೇಲ್ ಮಳಿಗೆ ಸಹ ಇದೆ. 'ಪೆಟಲ್ಸ್ & ಫೆನ್ರ್ಸ್' ಹೆಸರಿನ ನುಸ್ರತ್ ಅವರ ಕಂಪನಿ ವಾರ್ಷಿಕ 2 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದ್ದು, 20 ಮಂದಿಗೆ ಉದ್ಯೋಗವನ್ನೂ ನೀಡಿದೆ.

'ಕಾಶ್ಮೀರ್ ಎಸ್ಸೆನ್ಸ್' ಹೆಸರಿನ ಬ್ರಾಂಡ್ ಒಂದನ್ನು ಕೂಡ ನುಸ್ರತ್ ಮುನ್ನಡೆಸುತ್ತಿದ್ದಾರೆ. ಹಿಮಾಲಯನ್ ಅಗ್ರೋ ಫಾರ್ಮ್ಸ್​ ಕಂಪನಿಯಲ್ಲಿ ಈ ಬ್ರಾಂಡ್​ನ ಪರ್ಸನಲ್ ಕೇರ್ ಮತ್ತು ಹೋಮ್ ಕೇರ್ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಕಾಶ್ಮೀರ್ ಎಸ್ಸೆ ನ್ಸ್​ನಲ್ಲಿ ಸಾಂಪ್ರದಾಯಿಕ ಕಾಶ್ಮೀರಿ ಉತ್ಪನ್ನಗಳಾದ ಕೇಸರಿ, ಬಾದಾಮಿ, ಚೆರ್ರಿ, ವಾಲ್ನಟ್, ಸೇಬು, ಆಲಿವ್, ಎಪ್ರಿಕಾಟ್, ಚಹಾಪುಡಿ ಮುಂತಾದ ಉತ್ಪನ್ನಗಳು ದೊರೆಯುತ್ತವೆ. ಅಷ್ಟೇ ಅಲ್ಲ ಕಣಿವೆಯ ಸ್ಥಳೀಯರಿಗೆ ಅದರಲ್ಲೂ ಮಹಿಳೆಯರಿಗೆ ಇಲ್ಲಿ ಉದ್ಯೋಗಾವಕಾಶ ಕೂಡ ಸಿಕ್ಕಿದೆ.

''ಕೈಗಳಿಂದ್ಲೇ ಮಾಡಿದ ಪರ್ಸನಲ್ ಕೇರ್ ಹಾಗೂ ಹೋಮ್ ಕೇರ್ ಉತ್ಪನ್ನಗಳಾದ ಬಾಡಿ ಬಟರ್, ಸಾಬೂನು, ಜಾಮ್, ಹರ್ಬಲ್ ಚಹಾಕ್ಕೆ ಭಾರೀ ಬೇಡಿಕೆ ಇದೆ. ವಿಶೇಷ ಅಂದ್ರೆ ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳಿಂದ್ಲೇ ಇವೆಲ್ಲವನ್ನೂ ತಯಾರಿಸಲಾಗುತ್ತದೆ. ರೈತರು ಬೆಳೆದ ಉತ್ಪನ್ನಗಳು ಹಾಗೂ ಕಾಡಿನಲ್ಲಿ ದೊರೆಯುವ ವಸ್ತುಗಳನ್ನು ಬಳಸಿಕೊಳ್ಳುತ್ತಿದ್ದೇವೆ. ಈ ಹಣ್ಣುಗಳು, ಹೂಗಳು, ಗಿಡಮೂಲಿಕೆಗಳು ಮತ್ತು ಸಾರಭೂತ ತೈಲಗಳು ಶತಮಾನಗಳಿಂದ ಬಳಸುತ್ತಿರುವ ಅತ್ಯಮೂಲ್ಯ ಉತ್ಪನ್ನಗಳು. ಆಯುರ್ವೇದದ ಹಳೆಯ ತತ್ವ ಮತ್ತು ಸಸ್ಯಶಾಸ್ತ್ರದ ಪ್ರಕಾರವೇ ಎಲ್ಲವನ್ನೂ ತಯಾರಿಸಲಾಗುತ್ತದೆ. ಪ್ರತಿ ಉತ್ಪನ್ನದ ಶೇ.90ರಷ್ಟು ಭಾಗ ಸಸ್ಯಶಾಸ್ತ್ರೀಯ ಉತ್ಪನ್ನವೇ ಇರುತ್ತದೆ'' ಅನ್ನೋದು ನುಸ್ರತ್ರ ಭರವಸೆಯ ನುಡಿ.

ಒಟ್ನಲ್ಲಿ ಸರ್ಕಾರಿ ನೌಕರಿ ಬಿಟ್ಟು ಕಾಶ್ಮೀರ ಕಣಿವೆಯಲ್ಲಿ ಹೂವಿನ ಉದ್ಯಮಕ್ಕೆ ಕಾಲಿಟ್ಟು ಸೈ ಎನಿಸಿಕೊಂಡಿರುವ ನುಸ್ರತ್ ಜಹಾಂ ಅವರ ಸಾಹಸವನ್ನು ಮೆಚ್ಚಲೇಬೇಕು.

ಇದನ್ನೂ ಓದಿ..

ಮೇಕ್​ ಇನ್​ ಇಂಡಿಯಾ ಕಥೆಗೆ ಹೊಸ ಸೇರ್ಪಡೆ- ಚೆನ್ನೈನಲ್ಲಿ ತಲೆ ಎತ್ತಲಿದೆ "ಮೆಡಿಪಾರ್ಕ್​"

ವಾರದ ರಜೆಯಲ್ಲಿ ಸಮಾಜ ಸೇವೆ- ಪರಿಸರ ರಕ್ಷಣೆಗೆ ಗಿಡ ನೆಡುವ ಬಸ್ ಕಂಡಕ್ಟರ್