ಸರ್ಕಾರಿ ಉದ್ಯೋಗಿಯ ಸಮಾಜಿಕ ಕಳಕಳಿ

ಉಷಾ ಹರೀಶ್​​

0

ಕೆಲವರು ಇರೋದೆ ಹೀಗೆ ಆತ್ಮ ತೃಪ್ತಿಗಾಗಿ ಒಂದಲ್ಲ ಒಂದು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ. ತಮ್ಮ ವೈಯಕ್ತಿಕ ಬೆಳವಣಿಗೆಗಿಂತ ಸಾಮಾಜಿಕ ಕೆಲಸ ಮಾಡುವುದರಲ್ಲಿ ತಮ್ಮ ಕಾಳಜಿಯನ್ನು ವ್ಯಕ್ತಪಡಿಸುತ್ತಾರೆ. ತಾವು ಮಾಡುವ ಸಾಮಾಜಿಕ ಕೆಲಸ ಎಷ್ಟರ ಮಟ್ಟಿಗೆ ಅಚ್ಚುಕಟ್ಟಾಗಿ ನಡೆಯುತ್ತದೆ ಎಂಬದರತ್ತ ಇವರ ಮನಸ್ಸು ತುಡಿಯುತ್ತಲೇ ಇರುತ್ತದೆ. ಇಂತವರ ಸಾಲಿಗೆ ಸೇರುವವರೆ ಅರುಣಾ ಗೋಪಿನಾಥ್.

ಅರುಣಾ ಗೋಪಿನಾಥ್ ಮೂಲತ ಭಾರತೀಯ ವಿಜ್ಞಾನ ಸಂಸ್ಥೆ ಉದ್ಯೋಗಿ. ಇವರ ಪತಿ ಗೋಪಿನಾಥ್ ಅವರು ಬೆಂಗಳೂರು ಜಲಮಂಡಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ದಂಪತಿಗಳು ಎಜಿಎಸ್ ಕಲಾಶ್ರೀ ಎಂಬ ಚಾರಿಟೆಬಲ್ ಟ್ರಸ್ಟ್ ಸ್ಥಾಪಿಸಿಕೊಂಡು ಮೂಲಕ ಸಾಕಷ್ಟು ಸಮಾಜ ಮುಖಿ ಕೆಲಸಗಳನ್ನು ಮಾಡಿದ್ದಾರೆ.

ಕಳೆದ 18 ವರ್ಷಗಳಿಂದ ಈ ಎಜಿಎಸ್ ಕಲಾಶ್ರಿ ವತಿಯಿಂದ ಉಚಿತ ಬೇಸಿಗೆ ಶಿಬಿರವನ್ನು ಆಯೋಜಿಸಿಕೊಂಡು ಬಂದಿದ್ದಾರೆ. ಬೇಸಿಗೆ ಶಿಬಿರಕ್ಕೆ ಬರುವ ಮಕ್ಕಳನ್ನು ತಮ್ಮ ಮಕ್ಕಳೆಂದು ತಿಳಿದು ಪ್ರೀತಿಯಿಂದ ಬೇಸಿಗೆ ಶಿಬಿರ ನಡೆಸಿಕೊಂಡು ಬರುತ್ತಿದ್ದಾರೆ. ಇವರ ಮನೆಯ ಟೆರೇಸ್ ಮೇಲೆ ಒಂದು ಪುಟ್ಟ ಸಭಾಂಗಣವನ್ನೇ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಕಟ್ಟಿಸಿದ್ದಾರೆ. ಅಷ್ಟೇ ಅಲ್ಲದೇ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉಚಿತವಾಗಿ ನೀಡುತ್ತಿದ್ದಾರೆ. ಬೇಸಿಗೆ ಶಿಬಿರದಲ್ಲಿ 30 ಬಡ ಮಕ್ಕಳನ್ನು ಆರಿಸಿಕೊಂಡು ಅವರ ಶಾಲಾ ಶುಲ್ಕ ಕಟ್ಟುವುದು, ಶಾಲಾ ಸಮವಸ್ತ್ರ ವಿತರಣೆ, ನೋಟ್ ಪುಸ್ತಕ, ಪಠ್ಯ ಪುಸ್ತಕ ವಿತರಣೆ ಮತ್ತಿತರ ಕೆಲಸ ಮಾಡಲಾಗುತ್ತಿದೆ.

ವೇದ, ಯೋಗಾ, ನ್ಯೂಸ್ ರೀಡಿಂಗ್:

ಅರುಣಾ ಅವರು ನಡೆಸುವ ಬೇಸಿಗೆ ಶಿಬಿರದಲ್ಲಿ ವೇದ ಪಠಣ, ಶ್ಲೋಕಗಳು, ಯೋಗಾಭ್ಯಾಸ, ನ್ಯೂಸ್ ರೀಡಿಂಗ್, ಡ್ರಾಯಿಂಗ್, ಕ್ರಾಫ್ಟ್ ವರ್ಕ್ , ಸಂಗೀತ ನೃತ್ಯ, ಪಾಟ್ ಪೇಂಟಿಂಗ್, ವೇದಿಕ್ ಗಣಿತ ಮತ್ತು ಮಕ್ಕಳ ಮನಶಾಸ್ತ್ರ ಕುರಿತಂತೆ ಪರಿಣಿತರಿಂದ ಉಪನ್ಯಾಸ, ನಡೆಯುತ್ತವೆ. ವಿಶಿಷ್ಟ ಎಂದರೆ ಇವರ ಕೆಲಸಕ್ಕೆ ಸಾಮಾಜಿಕ ಕಳಕಳಿಯುಳ್ಳ ಪರಿಣಿತರು ಕೈಜೋಡಿಸುತ್ತಿದ್ದಾರೆ. ಪ್ರತಿ ವರ್ಷ ಇವರ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ.

ಪ್ರತಿಭಾನ್ವಿತರಿಗೆ ಒಂದು ಉತ್ತಮ ವೇದಿಕೆ

ಈ ಶಿಬಿರದ ಒಂದು ದಿನ 100 ಅಂಧ ಮಕ್ಕಳು, ಬುದ್ಧಿ ಮಾಂದ್ಯ ಮಕ್ಕಳನ್ನು ಕರೆಸಿ ಅವರ ಪ್ರತಿಭೆಗೆ ಒಂದು ಉತ್ತಮ ವೇದಿಕೆ ಕಲ್ಪಿಸಿಕೊಡಲಾಗುತ್ತದೆ. ಆ ಅಂಧ ಮಕ್ಕಳಲ್ಲಿ 5 ಜನರಿಗೆ ಆರ್ಥಿಕ ಸಹಾವನ್ನು ಸಹ ಅರುಣಾ ಗೋಪಿನಾಥ್ ಅವರು ಮಾಡುತ್ತಾ ಬಂದ್ದಿದ್ದಾರೆ. ಈ ಎಲ್ಲಾ ಕೆಲಸಗಳಿಗೂ ಸರಕಾರದಿಂದಾಗಲೀ ಖಾಸಗಿ ಸಂಸ್ಥೆಗಳಿಂದಾಗಲಿ ಯಾವುದೇ ಧನ ಸಹಾಯ ಪಡೆದಿಲ್ಲ. ತಮ್ಮ ಸಂಬಳದಲ್ಲಿ ಸ್ವಲ್ಪ ಹಣವನ್ನು ಈ ಕೆಲಸಗಳಿಗೆ ಮೀಸಲಿಟ್ಟಿದ್ದಾರೆ.

ವಿಚಾರಗೋಷ್ಠಿಗಳು, ಪ್ರತಿಭಾ ಪುರಸ್ಕಾರ

ಇಷ್ಟೇ ಅಲ್ಲದೇ ಪ್ರತಿ ತಿಂಗಳೂ ಇವರ ಎಜಿಎಸ್ ಕಲಾಶ್ರೀ ಯಲ್ಲಿ ವಿಚಾಗೋಷ್ಠಿಗಳು ನಡೆಯುತ್ತಲೇ ಇರುತ್ತವೆ. ಸಮಾಜದ ಮುಖ್ಯ ಗಣ್ಯರನ್ನು ಕರೆಸಿ ಪ್ರಚಲಿತ ವಿಷಯಗಳ ಬಗ್ಗೆ ಉಪನ್ಯಾಸಗಳನ್ನು ನಡೆಸಿಕೊಡುತ್ತಾರೆ. ತಮ್ಮ ಏರಿಯಾದಲ್ಲಿ ಪ್ರತಿ ದಿನ ಹಾಲು ಹಾಕುವ ಮಕ್ಕಳನ್ನು ಸೇರಿಸಿ ಅವರಿಗೂ ಸನ್ಮಾನ ಮಾಡಿದ್ದಾರೆ. ಎಸ್ ಎಸ್ಎಲ್​​ಸಿಯಲ್ಲಿ ಹೆಚ್ಚು ಅಂಕ ಪಡೆದ ಬಡ ಮಕ್ಕಳನ್ನು ಗುರುತಿಸಿ ಅವರಿಗೆ ಧನ ಸಹಾಯವನ್ನು ಕೆಲ ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಈ ಎಲ್ಲಾ ಕೆಲಸಗಳಿಗೂ ಪ್ರತಿ ವರ್ಷ ಇವರು ಮೂರ್ನಾಲ್ಕು ಲಕ್ಷ ರೂಪಾಯಿಗಳನ್ನು ವ್ಯಯ ಮಾಡುತ್ತಿದ್ದಾರೆ.

ಖ್ಯಾತ ಸಾಹಿತಿ ಪಾರ್ವತಿಸುತ ಅವರ ಪುತ್ರಿಯಾದ ಅರುಣಾ ಚಿಕ್ಕ ವಯಸ್ಸಿನಿಂದಲೂ ಸಮಾಜ ಮುಖಿ ಕೆಲಸಗಳ ಬಗ್ಗೆ ಸಾಕಷ್ಟು ಒಲವಿಟ್ಟುಕೊಂಡಿದ್ದರು. ತಮಗೆ ಮಕ್ಕಳಿಲ್ಲ ಎಂಬ ಕೊರಗನ್ನು ಹೀಗೆ ಉಚಿತವಾಗಿ ಬೇಸಿಗೆ ಶಿಬಿರ ಮಾಡಿ ಒಂದು ತಿಂಗಳು ಅವರು ಕೊಡುವ ಸಂತೋಷವನ್ನು ಮುಂದಿನ ವರ್ಷ ಬೇಸಿಗೆ ಬರುವವರೆಗೂ ಅನುಭವಿಸುತ್ತಾರೆ ಈ ದಂಪತಿಗಳು. ಅರುಣಾ ಅವರ ಸಮಾಜಿಕ ಕಳಕಳಿಯಿಂದ ಈಗಾಗಲೇ ನೂರಾರು ಬಡ ಮಕ್ಕಳು ಅನುಕೂಲ ಪಡೆದುಕೊಂಡಿದ್ದಾರೆ. ಇವರ ಸೇವೆಗೆ ಸಾಕಷ್ಟು ಪುರಸ್ಕಾರಗಳು ಸನ್ಮಾನಗಳು ಕೂಡಾ ಸಂದಿವೆ. ಹಾಡುಗಾರ್ತಿಯಾಗಿ, ಉತ್ತಮ ರಂಗೋಲಿ ಕಲಾವಿದೆಯಾಗಿ ಸಾಕಷ್ಟು ಕಡೆ ತಮ್ಮ ಪ್ರತಿಭಾ ಪ್ರದರ್ಶನವನ್ನು ಅರುಣಾ ಗೋಪಿನಾಥ್ ಅವರು ನೀಡಿದ್ದಾರೆ. ಇಂಥಹ ಸಮಾಜ ಮುಖಿ ಅರುಣಾ ಗೋಪಿನಾಥ್ ಅವರ ಕೆಲಸ ಮತ್ತೊಂದಷ್ಟು ವರ್ಷಗಳ ಕಾಲ ನಡೆಯಲಿ. ಇವರ ಪ್ರೋತ್ಸಾಹದಿಂದ ಇನ್ನು ಸಾಕಷ್ಟು ಬಡ ಮಕ್ಕಳು ಬೆಳೆಯಲಿ.